Connect with us

Chikmagalur

ಕೆಂಪೇಗೌಡರ ಕನಸಿನ ಬೆಂಗಳೂರು ನಮ್ಮ ಹೆಮ್ಮೆಯ ಸಂಕೇತ : ತಮ್ಮಯ್ಯ

Published

on

ಚಿಕ್ಕಮಗಳೂರು:  ಇಂದು ಜಾಗತಿಕ ಮಟ್ಟದಲ್ಲಿ ಬೆಳೆದು ನಿಂತಿರುವ ಬೆಂಗಳೂರು ಮಹಾನಗರದ ಸೃಷ್ಟಿಗೆ ಕಾರಣರಾದ ನಾಡಪ್ರಭು ಕೆಂಪೇಗೌಡರ ಜಯಂತಿಯು ಕೇವಲ ಒಬ್ಬ ವ್ಯಕ್ತಿಯ ಸ್ಮರಣೆಯಲ್ಲ. ಅದು ನಮ್ಮ ನಾಡಿನ ಅಸ್ಮಿತೆ, ಸಂಸ್ಕøತಿ ಮತ್ತು ಐತಿಹಾಸಿಕ ಹೆಮ್ಮೆಯ ಸಂಕೇತವಾಗಿದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು.
ಚಿಕ್ಕಮಗಳೂರಿನ ಕುವೆಂಪು ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಸಮಾರಂಭದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಕೆಂಪೇಗೌಡರು ಕೇವಲ ಒಬ್ಬ ಸಾಮಂತ ರಾಜರಾಗಿರಲಿಲ್ಲ. ಅವರು ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯರ ಕಾಲದಲ್ಲಿ ಯಲಹಂಕ ನಾಡನ್ನು ಆಳುತ್ತಿದ್ದಾಗ, ಇಡೀ ರಾಜ್ಯವನ್ನಾಳುವ ಮಹಾರಾಜರಿಗಿಂತಲೂ ಮಿಗಿಲಾದ ವಿಶಾಲವಾದ ದೂರದೃಷ್ಟಿ ಮತ್ತು ಕನಸುಗಳನ್ನು ಹೊಂದಿದ್ದರು. ಧರ್ಮನಿಷ್ಠೆ, ಸಾಮಾಜಿಕ ಸಮಾನತೆ ಮತ್ತು ಆರ್ಥಿಕ ಸುಧಾರಣೆಗಳ ಮೂಲಕ ಜಾತಿ-ಮತ ಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಂಡ ಮಹಾನ್ ನಾಯಕ ಎಂದು ಬಣ್ಣಿಸಿದರು.
1537ರಲ್ಲಿ ಬೆಂಗಳೂರು ಒಂದು ಸಣ್ಣ ಪಟ್ಟಣವಾಗಿ ರೂಪುಗೊಳ್ಳುತ್ತಿದ್ದ ಕಾಲದಲ್ಲೇ ಕೆಂಪೇಗೌಡರು ನಗರದ ನಾಲ್ಕೂ ದಿಕ್ಕುಗಳಲ್ಲಿ ಗಡಿಗೋಪುರಗಳನ್ನು ನಿರ್ಮಿಸುವ ಮೂಲಕ ಭವಿಷ್ಯದ ನಗರದ ವ್ಯಾಪ್ತಿಯನ್ನು ಅಂದಾಜಿಸಿದ್ದರು. ಅಂದಿನ ಅವರ ಪುರಸಭಾ ಮಾದರಿಯ ಆಡಳಿತ ಇಂದು ಜಗತ್ತೇ ಮೆಚ್ಚುವ ಮಹಾನಗರಕ್ಕೆ ಅಡಿಪಾಯವಾಗಿದೆ. ಅಷ್ಟೇ ಅಲ್ಲದೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂದು ಗುರುತಿಸಿಕೊಂಡಿರುವ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ‘ನಾಡಪ್ರಭು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ನಾಮಕರಣ ಮಾಡಿರುವುದೇ ಅವರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ತಿಳಿಸಿದರು.
ಕೆಂಪೇಗೌಡರು ಅಂದಿನ ಕಾಲದಲ್ಲೇ ಪರಿಸರ ಹಾಗೂ ಜಲಸಂರಕ್ಷಣೆಗೆ ಆಪಾರ ಒತ್ತು ನೀಡಿದ್ದರು. ಬೆಂಗಳೂರಿನ ನಿರ್ಮಾಣದ ಸಂದರ್ಭದಲ್ಲಿ ಅವರು ನಿರ್ಮಿಸಿದ ನೂರಾರು ಕೆರೆಗಳು ಮತ್ತು ನೀರಿನ ಮೂಲಗಳು ಅವರ ಪರಿಸರ ಪ್ರೇಮ ಹಾಗೂ ದೂರದೃಷ್ಟಿಗೆ ಸಾಕ್ಷಿಯಾಗಿವೆ. ಕೆಂಪೇಗೌಡರ ಆಡಳಿತದಲ್ಲಿ ಜಾತಿ-ಧರ್ಮದ ಭೇದವಿರಲಿಲ್ಲ. ಅವರು ಎಲ್ಲ ಧರ್ಮಗಳ ದೇವಸ್ಥಾನಗಳನ್ನು ನಿರ್ಮಿಸಿ ಸಮಗ್ರತೆಯನ್ನು ಕಾಪಾಡಿದರು. ಅವರು ಕೇವಲ ಕೋಟೆ-ಕೆರೆಗಳನ್ನು ಕಟ್ಟಲಿಲ್ಲ, ಜನರ ವಿಶ್ವಾಸದ ಮೇಲೆ ನಾಡನ್ನು ಕಟ್ಟಿದರು. ಮಾತನಾಡುವುದಕ್ಕಿಂತ ಹೆಚ್ಚಾಗಿ ಕೆಲಸ ಮಾಡುವುದರಲ್ಲಿ ಅವರು ನಂಬಿಕೆ ಇಟ್ಟಿದ್ದರು ಎಂದು ತಿಳಿಸಿದ ಅವರು, ಇಂತಹ ಮಹಾನ್ ಚೇತನದ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕೇಂದ್ರ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ರಾಜ್ಯ ಅಧ್ಯಕ್ಷ ಎ.ಎನ್.ಮಹೇಶ್ ಮಾತನಾಡಿ, ಇಡೀ ಪ್ರಪಂಚವೇ ಹೆಮ್ಮೆಪಡುವಂತಹ ಮತ್ತು ಎಲ್ಲರ ಕಣ್ಣು ಸೆಳೆಯುವಂತಹ ಸುಂದರ ಬೆಂಗಳೂರು ನಗರವನ್ನು ನಿರ್ಮಿಸಿದ ಕೀರ್ತಿ ನಾಡಪ್ರಭು ಕೆಂಪೇಗೌಡರಿಗೆ ಸಲ್ಲುತ್ತದೆ. ಎಂದು ತಿಳಿಸಿದರು.
ಕೆಂಪೇಗೌಡರು ಕೇವಲ ಒಬ್ಬ ರಾಜ, ಶೂರನಾಗಿರದೆ, ಮಾನವೀಯತೆ ಹಾಗೂ ಸಾಮಾಜಿಕ ಕಳಕಳಿಯುಳ್ಳ ಪರಿಸರ ಪ್ರೇಮಿಯಾಗಿದ್ದರು. ಎಲ್ಲಾ ಸಮಾಜಗಳನ್ನು ಪ್ರೀತಿಯಿಂದ ಕಾಣುವ ಜ್ಯಾತ್ಯತೀತ ಭಾವನೆ ಅವರಲ್ಲಿತ್ತು. ಕೃಷ್ಣದೇವರಾಯನ ವಿಜಯನಗರ ಸಾಮ್ರಾಜ್ಯದ ಯುದ್ಧಗಳಲ್ಲೂ ಕೆಂಪೇಗೌಡರ ತಂದೆ ಕೆಂಪನಂಜೇಗೌಡರು ಶೌರ್ಯ ಪ್ರದರ್ಶಿಸಿದ್ದರು. ಅವರೊಂದಿಗೆ ಬಾಲಕ ಕೆಂಪೇಗೌಡರು ಕೂಡ ಯುದ್ಧಕ್ಕೆ ತೆರಳುತ್ತಿದ್ದರು ಎಂದು ಇತಿಹಾಸವನ್ನು ಸ್ಮರಿಸಿದರು.
ಕೇವಲ 59 ವರ್ಷಗಳ ಜೀವಿತಾವಧಿಯಲ್ಲಿ ಕೆಂಪೇಗೌಡರು ಸುಮಾರು 40 ವರ್ಷಗಳ ಕಾಲ ಯಶಸ್ವಿಯಾಗಿ ಆಡಳಿತ ನಡೆಸಿದರು. ಕ್ರಿ.ಶ. 1534ರ ಮಕರ ಸಂಕ್ರಾಂತಿಯ ಶುಭ ದಿನದಂದು ಬೆಂಗಳೂರು ನಗರ ನಿರ್ಮಾಣಕ್ಕೆ ಅಡಿಪಾಯ ಹಾಕಲಾಯಿತು. ಅಂದಿನ ದಟ್ಟವಾದ ಕಾಡನ್ನು ಕಡಿದು, ಕೇವಲ ಮೂರೇ ವರ್ಷಗಳಲ್ಲಿ ಸುಂದರ ನಗರವನ್ನು ನಿರ್ಮಿಸಿ ಮುಗಿಸಿದರು. ಬೆಂಗಳೂರನ್ನು ನಿರ್ಮಿಸುವಾಗ ಕೆಂಪೇಗೌಡರು ಸಮಾಜದ ಎಲ್ಲಾ ವರ್ಗದವರನ್ನು ಸಮಷ್ಟಿಯಾಗಿ ಒಳಗೊಂಡಿದ್ದರು. ಜನರ ಕಸುಬು ಮತ್ತು ಜಾತಿಗೆ ಅನುಗುಣವಾಗಿ ಚಿಕ್ಕಪೇಟೆ, ಬಳೇಪೇಟೆ, ಕುರುಬರಪೇಟೆ, ಕುಂಬಾರಪೇಟೆ, ಗಾಣಿಗರಪೇಟೆ ಸೇರಿದಂತೆ ಒಟ್ಟು 66 ವಿವಿಧ ಪೇಟೆಗಳನ್ನು ಅವರು ನಿರ್ಮಿಸಿದರು. ಅಲ್ಲದೆ, ಅಂದಿನ ಕಾಲದಲ್ಲಿ ವಾಹನ ಸೌಕರ್ಯಗಳಿಲ್ಲದೆ ಕೇವಲ ನಡಿಗೆಯನ್ನೇ ಆಶ್ರಯಿಸಿ, ತಲೆಯ ಮೇಲೆ ಭಾರವಾದ ಹೊರೆ ಹೊತ್ತು ಸಾಗುತ್ತಿದ್ದ ಜನ ಸಾಮಾನ್ಯರು ವಿಶ್ರಮಿಸಲು ಮತ್ತು ಹೊರೆ ಇಳಿಸಿಕೊಳ್ಳಲು ಅನುಕೂಲವಾಗುವಂತೆ ಆಯಕಟ್ಟಿನ ಸ್ಥಳಗಳಲ್ಲಿ ‘ಹೊರೆಗಟ್ಟೆಗಳನ್ನು’ ನಿರ್ಮಿಸುವ ಮೂಲಕ ತಮ್ಮ ಅಪಾರ ಮಾನವೀಯ ಕಾಳಜಿ ಮೆರೆದಿದ್ದರು ಎಂದರು.
ಕೆಂಪೇಗೌಡರು ಬೆಂಗಳೂರನ್ನು ನಿರ್ಮಿಸುವಾಗ ರಸ್ತೆಗಳ ಇಕ್ಕೆಲಗಳಲ್ಲಿ ಸಾಲು ಮರಗಳನ್ನು ನೆಟ್ಟು ಪರಿಸರ ಪ್ರೇಮ ಮೆರೆದಿದ್ದರು. ದಣಿದು ಬರುವ ಹಾದಿಹೋಕರು ವಿಶ್ರಮಿಸಲು ವ್ಯವಸ್ಥೆ ಮಾಡಿದ್ದರು. ಅಂದು ಅವರು ನಿರ್ಮಿಸಿದ್ದು ಹಸಿರು ಬೆಂಗಳೂರು. ಆದರೆ ಇಂದು ಆ ನಗರವು ಸಂಚಾರ ದಟ್ಟಣೆ ಹಾಗೂ ಕಾಂಕ್ರೀಟ್ ಕಾಡಾಗಿ ಪರಿಣಮಿಸಿರುವುದು ಅತ್ಯಂತ ವಿಷಾದನೀಯ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ ಅವರು,  ಕೆಂಪೇಗೌಡರ ಈ ಹಸಿರು ನಗರದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅವರ ನೆನಪಿನಲ್ಲಿ 15 ಲಕ್ಷ ಸಸಿಗಳನ್ನು ನೆಡುವ ಬೃಹತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿರುವುದು ಶ್ಲಾಘನೀಯ ಎಂದರು.
ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಮಾತನಾಡಿ, ಕೆಂಪೇಗೌಡರು ಅಂದಿನ ಕಾಲದಲ್ಲೇ ತಂತ್ರಜ್ಞಾನ ಹಾಗೂ ಸಮರ್ಥ ಆಡಳಿತದ ಮೂಲಕ ಒಂದು ಸುಂದರ ನಗರದ ಕನಸಿಗೆ ಜೀವ ತುಂಬಿದ್ದರು. ಸುಮಾರು 500 ವರ್ಷಗಳ ಹಿಂದೆ ಅವರು ರೂಪಿಸಿದ ನಗರದ ವಿನ್ಯಾಸ, ರಸ್ತೆಗಳು ಹಾಗೂ ಮೂಲಸೌಕರ್ಯಗಳ ಯೋಜನೆ ಇಂದಿಗೂ ಅತ್ಯಂತ ಪ್ರಸ್ತುತವಾಗಿದೆ ಎಂದರು.
  ‘ಇಂದು ಜಾಗತಿಕ ಮಟ್ಟದಲ್ಲಿ ಬೆಂಗಳೂರು ‘ಸಿಲಿಕಾನ್ ವ್ಯಾಲಿ’ ಹಾಗೂ ಪ್ರಮುಖ ಮಾಹಿತಿ ತಂತ್ರಜ್ಞಾನ ಕೇಂದ್ರವಾಗಿ ಗುರುತಿಸಿಕೊಂಡಿದೆ. ಇದಕ್ಕೆ ಅಂದೇ ಕೆಂಪೇಗೌಡರು ಹಾಕಿಕೊಟ್ಟ ಭದ್ರ ಬುನಾದಿಯೇ ಕಾರಣ. ವ್ಯಾಪಾರ-ವಹಿವಾಟಿಗೆ ಪೂರಕವಾಗಿ ಚಿಕ್ಕಪೇಟೆ ಸೇರಿದಂತೆ 50ಕ್ಕೂ ಹೆಚ್ಚು ವಾಣಿಜ್ಯ ಆಧಾರಿತ ಪೇಟೆಗಳನ್ನು ಅವರು ವ್ಯವಸ್ಥಿತವಾಗಿ ನಿರ್ಮಿಸಿದ್ದರು. ನಗರದಲ್ಲಿ ನೀರಿನ ಕೊರತೆಯಾಗದಂತೆ ನೂರಾರು ಕೆರೆಗಳನ್ನು ನಿರ್ಮಿಸಿ, ಉದ್ಯಾನಗಳು ಹಾಗೂ ಪರಿಸರ ಸಮತೋಲನವನ್ನು ಕಾಪಾಡಿದ್ದರು. ನಗರ ನಿರ್ಮಾಣದ ಅವರ ಈ ಯೋಜನೆ ಇಂದಿನ ಎಲ್ಲಾ ನಗರ ಯೋಜಕರು ಹಾಗೂ ಆಡಳಿತಾಧಿಕಾರಿಗಳಿಗೆ ದೊಡ್ಡ ಪ್ರೇರಣೆಯಾಗಿದೆ ಎಂದರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಮಾತನಾಡಿ, ನಾಡಪ್ರಭು ಕೆಂಪೇಗೌಡ ಜಯಂತಿಯ ಅದ್ದೂರಿ ಆಚರಣೆಗಾಗಿ ಸರ್ಕಾರವು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಪ್ರತಿ ವರ್ಷ ತಲಾ 5 ಲಕ್ಷ ರೂಪಾಯಿ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಹಾಗೂ ಪ್ರತಿಯೊಂದು ಜಿಲ್ಲಾ ಕೇಂದ್ರದಲ್ಲೂ ಕೆಂಪೇಗೌಡರ ಭವ್ಯ ಪ್ರತಿಮೆಯನ್ನು ಸ್ಥಾಪಿಸಬೇಕು ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಸರ್ಕಾರಕ್ಕೆ ಒತ್ತಾಯಿಸಿದರು.
ಕೆಂಪೇಗೌಡರ ಜೀವನ ಮತ್ತು ಸಾಧನೆ ಕುರಿತು ದೀಪ ಹಿರೇಗುತ್ತಿ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ನಗರಸಭೆ ಅಧ್ಯಕ್ಷೆ ಭವ್ಯ ಮಂಜುನಾಥ್, ಉಪಾಧ್ಯಕ್ಷೆ ಲಲಿತಾ ರವಿನಾಯ್ಕ್, ಕೃಷಿ ಉತ್ಪನ್ನ ಸಂಸ್ಕರಣಾ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಎನ್.ಹರೀಶ್,  ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಂಜೇಗೌಡ, ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ,  ಡಿವೈಎಸ್‍ಪಿ ತಿಪ್ಪೇಸ್ವಾಮಿ, ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಟಿ.ಡಿ.ಮಲ್ಲೇಶ್, ಕಾರ್ಯದರ್ಶಿ ಎಂ.ಎಸ್.ಪ್ರದೀಪ್, ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷ ರೀನಾ ಸುಚೇಂದ್ರ, ನಿರ್ದೇಶಕರಾದ ಪೂರ್ಣೇಶ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್ ಸೇರಿದಂತೆ ಮತ್ತಿತರರು ಇದ್ದರು.
Continue Reading

Chikmagalur

​ಕಂಬಳದ ಕೆಸರುಗದ್ದೆಯಂತಾದ ಕೋಳೂರು ರಸ್ತೆ: ಶಾಲಾ ಮಕ್ಕಳ ಹರಸಾಹಸ, ಪಂಚಾಯತ್ ನಿರ್ಲಕ್ಷ್ಯಕ್ಕೆ ಆಕ್ರೋಶ

Published

on

​ಮೂಡಿಗೆರೆ: ಕಂಬಳದ ಕೆಸರುಗದ್ದೆಯನ್ನು ನೋಡಲು ಕರಾವಳಿಗೇ ಹೋಗಬೇಕಾಗಿಲ್ಲ, ಮೂಡಿಗೆರೆ ತಾಲ್ಲೂಕಿನ ಬೆಟ್ಟಿಗೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಳೂರಿಗೆ ಬಂದರೆ ಸಾಕು! ಮಳೆಗಾಲ ಬಂತೆಂದರೆ ಮಲೆನಾಡಿನ ರಸ್ತೆಗಳ ಪಾಡು ಹೀಗೆಯೇ ಎನ್ನುವಂತಾಗಿದ್ದು, ಇಲ್ಲಿನ ದುಸ್ಥಿತಿಯನ್ನು ಅಷ್ಟು ಸುಲಭವಾಗಿ ತಳ್ಳಿಹಾಕಲು ಸಾಧ್ಯವಿಲ್ಲ.

​ಕೆಸರು ಹಳ್ಳ ದಾಟಿಯೇ ಶಾಲೆಗೆ ಬರಬೇಕು ಮಕ್ಕಳು!
​ಕೋಳೂರು ಗ್ರಾಮದ ಈ ರಸ್ತೆಯಲ್ಲಿ ನಿಂತಿರುವ ವಿದ್ಯಾರ್ಥಿಗಳು ಪಕ್ಕದ ಹಳಿಕೆ ಗ್ರಾಮದವರಾಗಿದ್ದು, ಅವರು ಪ್ರತಿನಿತ್ಯ ಇದೇ ಕೆಸರು ಹಳ್ಳವನ್ನು ದಾಟಿಕೊಂಡೇ ಕೋಳೂರಿನ ಶಾಲೆಗೆ ಬರಬೇಕಾದ ಅನಿವಾರ್ಯತೆ ಎದುರಾಗಿದೆ. ಅಲ್ಲಿನ ಚಿತ್ರಣವನ್ನು ನೋಡಿದರೆ ಪುಟ್ಟ ಕಣ್ಮಣಿಗಳ ಕಷ್ಟ ಯಾರಿಗಾದರೂ ಅರ್ಥವಾಗುತ್ತದೆ. ಕೇವಲ ವಿದ್ಯಾರ್ಥಿಗಳಷ್ಟೇ ಅಲ್ಲದೆ, ಕೋಳೂರು ಗ್ರಾಮದ ಪ್ರತಿಯೊಬ್ಬ ನಾಗರಿಕರೂ ಪ್ರತಿನಿತ್ಯ ಇದೇ ಕೆಸರು ರಸ್ತೆಯಲ್ಲೇ ಓಡಾಡಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.


​ತೋಟದ ಮಾಲೀಕರ ತಕರಾರು – ಪಂಚಾಯತ್ ಮೌನ!
​ರಸ್ತೆಯಲ್ಲಿ ನಿಂತಿರುವ ನೀರನ್ನು ಪಕ್ಕದ ತೋಟಕ್ಕೆ ಹರಿಸೋಣವೆಂದರೆ ಅಲ್ಲಿನ ತೋಟದ ಮಾಲೀಕರು ತಕರಾರು ತೆಗೆಯುತ್ತಿದ್ದಾರೆ. ಇದರಿಂದಾಗಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಬೆಟ್ಟಿಗೆರೆ ಗ್ರಾಮ ಪಂಚಾಯತಿಯವರಂತೂ ತಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲದಂತೆ ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

​ಸ್ಥಳೀಯರ ಮನವಿ:
ಗ್ರಾಮ ಪಂಚಾಯತ್ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು. ಈ ವಿಡಿಯೋ ಹಾಗೂ ವರದಿ ಮೂಡಿಗೆರೆಯ ಶಾಸಕರಿಗೆ ತಲುಪುವಂತಾಗಲು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ದಯಮಾಡಿ ಶೇರ್ ಮಾಡಬೇಕಾಗಿ ವಿನಂತಿಸಲಾಗಿದೆ.

Continue Reading

Chikmagalur

ಮೂಡಿಗೆರೆ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಹಿರಿಯ ನಾಯಕರ ಕಡೆಗಣನೆಗೆ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಆಕ್ರೋಶ

Published

on

​ಮೂಡಿಗೆರೆ: ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಭಿನ್ನಮತ ತಾರಕಕ್ಕೇರಿದ್ದು, ದಶಕಗಳಿಂದ ಪಕ್ಷಕ್ಕಾಗಿ ಶ್ರಮಿಸಿದ ಹಿರಿಯ ನಾಯಕರನ್ನು ಕಡೆಗಣಿಸಲಾಗುತ್ತಿದೆ ಎಂದು ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.​ಪಕ್ಷದ ತಳಮಟ್ಟದಿಂದ ದುಡಿದ ಹಿರಿಯ ಮುಖಂಡರನ್ನು ಏಕಾಏಕಿ ಹುದ್ದೆಗಳಿಂದ ಕಿತ್ತೊಗೆಯುತ್ತಿರುವುದು ಕಾರ್ಯಕರ್ತರ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.

ಗ್ಯಾರಂಟಿ ಅಧ್ಯಕ್ಷ ಸ್ಥಾನದಿಂದ ಜಯರಾಮ್ ಗೌಡರ ವಜಾಕ್ಕೆ ತೀವ್ರ ಬೇಸರ ​ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ, “ಮತದಾನದ ಆರಂಭದ ದಿನಗಳಿಂದಲೂ ಕಾಂಗ್ರೆಸ್ ಪಕ್ಷದಲ್ಲೇ ಗುರುತಿಸಿಕೊಂಡಿರುವ ಜಯರಾಮ್ ಗೌಡರು ಹಾಗೂ ಅವರ ತಾಯಿಯ ಕಾಲದಿಂದಲೂ ಪಕ್ಷಕ್ಕಾಗಿ ಪ್ರಾಣ ಪಣಕ್ಕಿಟ್ಟು ದುಡಿದ ಇಂತಹ ಹಿರಿಯ ನಾಯಕರನ್ನು ಗ್ಯಾರಂಟಿ ಯೋಜನೆಯ ಅಧ್ಯಕ್ಷ ಸ್ಥಾನದಿಂದ ಏಕಾಏಕಿ ಯಾವುದೇ ಮುನ್ಸೂಚನೆ ಇಲ್ಲದೆ ಕಿತ್ತೊಗೆದಿರುವುದು ತೀವ್ರ ಬೇಸರ ತಂದಿದೆ,” ಎಂದರು.


​”ಇಂತಹ ಹಿರಿಯ ನಾಯಕರಿಗೆ ಗೌರವಯುತವಾಗಿ ಪಕ್ಷದ ನಿರ್ಧಾರವನ್ನು ತಿಳಿಸಿ, ರಾಜೀನಾಮೆ ನೀಡಲು ಕೋರಿದ್ದರೆ ಅವರೇ ಗೌರವದಿಂದ ನಿರ್ಗಮಿಸುತ್ತಿದ್ದರು. ಆದರೆ, ಬೇಕಾಬಿಟ್ಟಿಯಾಗಿ ಇವರನ್ನು ತೆಗೆದುಹಾಕಿ ಬೇರೆಯವರನ್ನು ನೇಮಕ ಮಾಡಿರುವುದು ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ತೀವ್ರ ನೋವುಂಟು ಮಾಡಿದೆ,” ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

​’ಸೆಟ್ ದೋಸೆ’, ‘ವಯಸ್ಸಾಗಿದೆ’ ಎಂದು ಹೀಯಾಳಿಕೆ: ಸಾರ್ವಜನಿಕ ವಲಯದಲ್ಲಿ ಆಕ್ರೋಶ ಪಕ್ಷದ ಬೆಳವಣಿಗೆಗೆ ರಕ್ತ ಮಾಂಸ ಸವೆಸಿದ ಹಿರಿಯ ನಾಯಕರನ್ನು ‘ಸೆಟ್ ದೋಸೆ’, ‘ವಯಸ್ಸಾಗಿದೆ’, ‘ಅವರಿಂದ ವೋಟ್ ಬರಲ್ಲ’ ಎಂದು ಹೀಯಾಳಿಸುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಹಿರಿಯರಿಗೆ ನೀಡುತ್ತಿರುವ ಇಂತಹ ಅಪಮಾನಗಳು ಪಕ್ಷದ ಸಂಸ್ಕೃತಿಗೆ ತಕ್ಕುದಲ್ಲ ಎಂದು ಸ್ಥಳೀಯ ಮುಖಂಡರು ಅಸಮಾಧಾನ ಹೊರಹಾಕಿದ್ದಾರೆ.​ಶಾಸಕಿ ನಯನ ಮೋಟಮ್ಮ ವಿರುದ್ಧ ಗಂಭೀರ ಆರೋಪ​ಹಾಲಿ ಶಾಸಕಿ ನಯನ ಮೋಟಮ್ಮ ಅವರ ವಿರುದ್ಧವೂ ಗಂಭೀರ ಆರೋಪಗಳು ಕೇಳಿಬಂದಿದ್ದು, ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಹದಗೆಟ್ಟಿದೆ ಎಂಬ ಆತಂಕ ವ್ಯಕ್ತವಾಗಿದೆ.

ಅಧಿಕೃತ ಸಭೆಗಳ ಕೊರತೆ: ನಯನ ಮೋಟಮ್ಮ ಅವರು ಶಾಸಕರಾದ ನಂತರ ಪಕ್ಷದ ಕಚೇರಿಯಲ್ಲಿ ಒಂದೇ ಒಂದು ಅಧಿಕೃತ ಸಭೆ ನಡೆದಿಲ್ಲ. ​ಗುಂಪುಗಾರಿಕೆಗೆ ಉತ್ತೇಜನ: ಅಧಿಕೃತ ಪದಾಧಿಕಾರಿಗಳನ್ನೇ ದೂರ ಇಡುವುದು ಮತ್ತು ಶಾಸಕರೇ ಮತ್ತೊಂದು ಕಡೆ ಪ್ರತ್ಯೇಕ ಸಭೆ ನಡೆಸುವುದು ಪಕ್ಷದಲ್ಲಿ ಅಧೋಗತಿಯನ್ನು ಸೃಷ್ಟಿಸಿದೆ.


​ಮುಂದಿನ ಚುನಾವಣೆಯಲ್ಲಿ ಭಾರಿ ಹಿನ್ನಡೆಯ ಎಚ್ಚರಿಕೆ​ಈ ರೀತಿಯ ಗುಂಪುಗಾರಿಕೆ ಮತ್ತು ಹಿರಿಯ ನಾಯಕರ ಕಡೆಗಣನೆ ಮುಂಬರುವ ದಿನಗಳಲ್ಲಿ ಮೂಡಿಗೆರೆ ಕಾಂಗ್ರೆಸ್‌ಗೆ ಭಾರಿ ಹಿನ್ನಡೆಯನ್ನು ತರಲಿದೆ ಎಂದು ಹಿರಿಯ ಕಾಂಗ್ರೆಸ್ಸಿಗರು ಕಳವಳ ವ್ಯಕ್ತಪಡಿಸಿದ್ದಾರೆ.​”ಶಾಸಕರು ತಕ್ಷಣವೇ ತಮ್ಮ ವರ್ಚಸ್ಸು ಮತ್ತು ಧೋರಣೆಯನ್ನು ಬದಲಾಯಿಸಿಕೊಳ್ಳಬೇಕು. ಇಲ್ಲದಿದ್ದರೆ ಇದು ಪಕ್ಷದ ಭವಿಷ್ಯದ ಬೆಳವಣಿಗೆಗೆ ಮಾರಕವಾಗಲಿದೆ,” ಎಂದು ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ನೇರ ಎಚ್ಚರಿಕೆ ನೀಡಿದ್ದಾರೆ.

Continue Reading

Chikmagalur

ನಾರಾಯಣಮೂರ್ತಿ ದಂಪತಿ ಹೆಸರಲ್ಲಿ ವಂಚನೆ: ಆನ್‌ಲೈನ್ ಟ್ರೇಡಿಂಗ್ ನಂಬಿ ₹14.6 ಲಕ್ಷ ಕಳೆದುಕೊಂಡ ಚಿಕ್ಕಮಗಳೂರು ವ್ಯಕ್ತಿ!

Published

on

ಚಿಕ್ಕಮಗಳೂರು: ಸೈಬರ್ ಕ್ರೈಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತೊಂದು ಆನ್‌ಲೈನ್ ಹೂಡಿಕೆ ವಂಚನೆ ಬೆಳಕಿಗೆ ಬಂದಿದ್ದು, ಪ್ರತಿಷ್ಠಿತ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ಅವರ ಹೆಸರನ್ನು ಬಳಸಿಕೊಂಡು ಸಾರ್ವಜನಿಕರನ್ನು ನಂಬಿಸಿ ಲಕ್ಷಾಂತರ ರೂಪಾಯಿ ದೋಚಲಾಗಿದೆ. ಫೇಸ್‌ಬುಕ್‌ನಲ್ಲಿ ಈ ದಂಪತಿಯು ಟ್ರೇಡಿಂಗ್ ಬಗ್ಗೆ ಭಾಷಣ ಮಾಡುತ್ತಿರುವಂತೆ ಬಿಂಬಿಸಲಾಗಿದ್ದ ನಕಲಿ ಜಾಹೀರಾತು ಲಿಂಕ್ ಅನ್ನು ಕ್ಲಿಕ್ ಮಾಡಿದ ವ್ಯಕ್ತಿಯೊಬ್ಬರು ಬರೋಬ್ಬರಿ ₹14,67,241 ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಲಿಂಕ್ ಕ್ಲಿಕ್ ಮಾಡುತ್ತಿದ್ದಂತೆ ಆಪ್ ಓಪನ್ ಆಗಿದ್ದು, ತದನಂತರ ವರುಣ್ ಖನ್ನಾ ಎಂಬ ಹೆಸರಿನಲ್ಲಿ ಕರೆ ಮಾಡಿದ ವಂಚಕರು, ಬ್ಯಾಂಕ್ ಎಫ್‌ಡಿಗಿಂತಲೂ ಮೂರು ಪಟ್ಟು ಹೆಚ್ಚಿನ ಲಾಭಾಂಶ ನೀಡುವುದಾಗಿ ಆಮಿಷ ಒಡ್ಡಿದ್ದಾರೆ.

ಆರಂಭದಲ್ಲಿ ರಿಜಿಸ್ಟ್ರೇಷನ್ ಶುಲ್ಕವಾಗಿ ₹26,600 ಪಾವತಿಸಿಕೊಂಡ ವಂಚಕರು, ನಂತರ ಹಂತ ಹಂತವಾಗಿ ಹೂಡಿಕೆ ಮಾಡುವಂತೆ ಪ್ರೇರೇಪಿಸಿದ್ದಾರೆ. ಇದನ್ನು ನಿಜವೆಂದು ನಂಬಿದ ಸಂತ್ರಸ್ತರು VIXO ಟ್ರೇಡರ್ಸ್ ಹಾಗೂ QUATINO FX ಕಂಪನಿಗಳ ವಿವಿಧ ಖಾತೆಗಳಿಗೆ ಆರ್‌ಟಿಜಿಎಸ್‌ ಮತ್ತು ಯುಪಿಐ ಮೂಲಕ ಬರೋಬ್ಬರಿ 14.67 ಲಕ್ಷ ರೂಪಾಯಿಗೂ ಹೆಚ್ಚು ಹಣವನ್ನು ವರ್ಗಾವಣೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಹಣವನ್ನು ಯುಕೆಯ ಚಿನ್ನದ ಬಾಂಡ್‌ಗಳಲ್ಲಿ ಹೂಡಿಕೆ ಮಾಡಿದರೆ ಇನ್ನೂ ಹೆಚ್ಚಿನ ಲಾಭ ಬರುತ್ತದೆ ಎಂದು ನಂಬಿಸಿ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಸಂತ್ರಸ್ತರು ಅನುಮಾನಗೊಂಡು ಹೂಡಿಕೆ ಮಾಡಿದ ಹಣವನ್ನು ವಾಪಸ್ ಕೇಳಿದಾಗ, ಕಂಪನಿಯು ನಷ್ಟದಲ್ಲಿದೆ ಎಂದು ಹೇಳಿ ವಂಚನೆ ಎಸಗಿದ್ದಾರೆ. ಇಷ್ಟಾದರೂ ರಾಣಾ ಪ್ರತಾಪ್ ಎಂಬ ವ್ಯಕ್ತಿಯು ಮೊಬೈಲ್‌ನಿಂದ ಕರೆ ಮಾಡಿ ಇನ್ನೂ ಹೆಚ್ಚಿನ ಹಣ ಹಾಕುವಂತೆ ಬೆದರಿಕೆ ಹಾಕುತ್ತಿದ್ದಾನೆ ಎನ್ನಲಾಗಿದೆ. ಸದ್ಯ ಈ ಬಗ್ಗೆ ಸೈಬರ್ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Continue Reading

Trending

error: Content is protected !!