Connect with us

Hassan

ಆಲೂರಿನಲ್ಲಿ ಕೆಂಪೇಗೌಡ ಜಯಂತಿ ಆಚರಣೆ

Published

on

ವರದಿ: ಸತೀಶ್ ಚಿಕ್ಕಕಣಗಾಲು

ಆಲೂರು: ತಾಲೂಕು ಆಡಳಿತದ ವತಿಯಿಂದ ಪಟ್ಟಣದ ಮಿನಿ ವಿಧಾನಸೌಧ ಸಭಾಂಗಣದಲ್ಲಿ 517ನೇ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೇಗೌಡ, ಕೆಂಪೇಗೌಡರು ಸುಸಜ್ಜಿತ ನಗರದ ನಿರ್ಮಾಣಕ್ಕೆ ಶಾಶ್ವತ ಭದ್ರ ಬುನಾದಿ ಹಾಕಿದ ದೂರದೃಷ್ಟಿಯ ನಾಯಕ ಎಂದು ಸ್ಮರಿಸಿದರು.

ಪಟ್ಟಣದ ಮಿನಿ ವಿದಾನಸೌಧ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಏರ್ಪಡಿಲಾಗಿದ್ದ 517ನೇ ಕೆಂಪೇಗೌಡ ಜಯಂತಿ ಆಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿಸ್ತುಬದ್ಧ ಆಡಳಿತ, ಯೋಜನಾಬದ್ಧ ಅಭಿವೃದ್ಧಿ ಹಾಗೂ ಜನಪರ ಚಿಂತನೆಯ ಮೂಲಕ ಕೆಂಪೇಗೌಡರು ನಗರಾಭಿವೃದ್ಧಿ, ಕೃಷಿ, ನೀರಾವರಿ, ಕೆರೆಗಳ ಅಭಿವೃದ್ಧಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿದರು. ಅವರ ಆಡಳಿತದ ದೃಷ್ಟಿಕೋನ ಇಂದಿಗೂ ಮಾದರಿಯಾಗಿದೆ ಎಂದು ಹೇಳಿದರು.

ತಾಲೂಕು ವಕ್ಕಲಿಗರ ಸಂಘದ ಉಪಾಧ್ಯಕ್ಷ ಕೆ.ಎಸ್. ಮಂಜೇಗೌಡ ಮಾತನಾಡಿ, 500 ವರ್ಷಗಳ ಹಿಂದೆಯೇ ಸುಸಜ್ಜಿತ ನಗರ ನಿರ್ಮಿಸಿದ ಕೆಂಪೇಗೌಡರ ದೂರದೃಷ್ಟಿ ಮತ್ತು ಆಡಳಿತ ಸಾಮರ್ಥ್ಯ ಅನನ್ಯವಾಗಿದೆ. ಬೆಂಗಳೂರನ್ನು ನಗರವಾಗಿ ಅಭಿವೃದ್ಧಿಪಡಿಸುವಲ್ಲಿ ಅವರ ಬುದ್ಧಿವಂತಿಕೆ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ತಿಳಿಸಿದರು.

ಮುಖ್ಯ ಭಾಷಣಕಾರರಾದ ಸಾಹಿತಿ ಹಾಗೂ ಶಿಕ್ಷಕ ಕೊಟ್ರೇಶ್ ಎಸ್. ಉಪ್ಪಾರ್ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಜಾತ್ಯತೀತ ಮನೋಭಾವದ ಮೂಲಕ ಮಾದರಿ ನಗರ ನಿರ್ಮಾಣಕ್ಕೆ ಕಾರಣರಾದ ಮಹಾನ್ ವ್ಯಕ್ತಿ. ಕಸುಬಿಗೆ ತಕ್ಕಂತೆ ಪೇಟೆಗಳು, ಪಂಥಗಳಿಗೆ ತಕ್ಕಂತೆ ದೇವಾಲಯಗಳು ಹಾಗೂ ಜನರ ಅಗತ್ಯಕ್ಕೆ ತಕ್ಕಂತೆ ಕೆರೆ-ಕುಂಟೆಗಳನ್ನು ನಿರ್ಮಿಸಿ ಜನಪರ ಆಡಳಿತದ ಮಾದರಿ ನಿರ್ಮಿಸಿದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪ ತಹಸೀಲ್ದಾರ್ ರಮೇಶ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್, ತಾಲೂಕು ವಕ್ಕಲಿಗರ ಸಂಘದ ಖಜಾಂಚಿ ಶಾಂತಕೃಷ್ಣ, ತಾಲೂಕು ನೌಕರರ ಸಂಘದ ಅಧ್ಯಕ್ಷ ವರದರಾಜು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Continue Reading

Hassan

ಮಣ್ಣಲ್ಲಿ ಮಣ್ಣಾದ ಚೆನ್ನಮ್ಮ; ಸರ್ಕಾರಿ ಗೌರವದೊಂದಿಗೆ ಅಂತಿಮ ವಿದಾಯ

Published

on

ಹಾಸನ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಚೆನ್ನಮ್ಮ ಅವರು ಸೋಮವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಪಂಚಭೂತಗಳಲ್ಲಿ ಲೀನರಾದರು.

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿ ಸಮೀಪದ ಮಾವಿನಕೆರೆ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಸಾವಿರಾರು ಜನರ ಕಂಬನಿಯ ನಡುವೆ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿತು.

ರಾಜಕೀಯದಿಂದ ಸದಾ ದೂರವಿದ್ದರೂ ದೇವೇಗೌಡ ಕುಟುಂಬದ ಬೆನ್ನೆಲುಬಾಗಿ ಗುರುತಿಸಿಕೊಂಡಿದ್ದ ಚೆನ್ನಮ್ಮ ಅವರ ಅಗಲಿಕೆ ರಾಜ್ಯದ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಶೋಕದ ಛಾಯೆ ಮೂಡಿಸಿತು. ಅಂತಿಮ ದರ್ಶನಕ್ಕಾಗಿ ವಿವಿಧ ಪಕ್ಷಗಳ ನಾಯಕರು, ಸ್ವಾಮೀಜಿಗಳು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಆಗಮಿಸಿ ಗೌರವ ನಮನ ಸಲ್ಲಿಸಿದರು.

ಸರ್ಕಾರಿ ಗೌರವದೊಂದಿಗೆ ಅಂತಿಮ ನಮನ:

ಗಣ್ಯರು ಪುಷ್ಪನಮನ ಸಲ್ಲಿಸಿದ ಬಳಿಕ ಪೊಲೀಸ್ ಪಡೆ ಮೂರು ಸುತ್ತು ಕುಶಾಲತೋಪು ಸಿಡಿಸಿ ಸರ್ಕಾರಿ ಗೌರವ ವಂದನೆ ಸಲ್ಲಿಸಿತು. ರಾಷ್ಟ್ರಗೀತೆ ಮೊಳಗಿದ ಬಳಿಕ ಎರಡು ನಿಮಿಷ ಮೌನಾಚರಣೆ ನಡೆಸಲಾಯಿತು. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರಧ್ವಜವನ್ನು ದೇವೇಗೌಡರ ಕುಟುಂಬಕ್ಕೆ ಹಸ್ತಾಂತರಿಸಿದರು.

ಈ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಕಾಲಿಗೆ ನಮಸ್ಕರಿಸಿ ಗೌರವ ಸಲ್ಲಿಸಿದ ದೃಶ್ಯ ಗಮನ ಸೆಳೆಯಿತು.

ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಸಂಸ್ಕಾರ:

ಸರ್ಕಾರಿ ಗೌರವಗಳ ಬಳಿಕ ಕುಟುಂಬ ಸದಸ್ಯರು ಹಾಗೂ ಅರ್ಚಕರ ಸಮ್ಮುಖದಲ್ಲಿ ಅಂತಿಮ ಪೂಜಾ ವಿಧಿವಿಧಾನಗಳು ನೆರವೇರಿದವು. ವೇದಘೋಷ, ಸ್ತೋತ್ರ ಪಠಣಗಳ ನಡುವೆ ಪಾರ್ಥಿವ ಶರೀರವನ್ನು ಪಲ್ಲಕ್ಕಿಯಲ್ಲಿ ಮೂರು ಸುತ್ತು ಮೆರವಣಿಗೆ ನಡೆಸಲಾಯಿತು.

ಬಳಿಕ ಹಿರಿಯ ಪುತ್ರ ಎಚ್.ಡಿ. ರಮೇಶ್ ಅವರು ಸಂಪ್ರದಾಯದಂತೆ ಅಂತ್ಯಕ್ರಿಯೆಯ ವಿಧಿವಿಧಾನ ನೆರವೇರಿಸಿದರು. ಗಂಗಾಜಲ ಸಿಂಪಡಿಸಿ ಸ್ಥಳವನ್ನು ಶುದ್ಧೀಕರಿಸಿದ ನಂತರ ಪಾರ್ಥಿವ ಶರೀರವನ್ನು ಸಮಾಧಿಗೆ ಇಳಿಸಿ ಅಂತಿಮ ಸಂಸ್ಕಾರ ನಡೆಸಲಾಯಿತು.

ರಾಜಕೀಯ, ಧಾರ್ಮಿಕ ಗಣ್ಯರ ಉಪಸ್ಥಿತಿ:

ಚೆನ್ನಮ್ಮ ಅವರಿಗೆ ಅಂತಿಮ ನಮನ ಸಲ್ಲಿಸಲು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಎಚ್.ಡಿ. ಕುಮಾರಸ್ವಾಮಿ, ವಿ. ಸೋಮಣ್ಣ ಹಾಗೂ ಶಿವರಾಜ್ ಸಿಂಗ್ ಚೌಹಾಣ್, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಕೆ.ಜೆ. ಜಾರ್ಜ್, ಕೆ.ಹೆಚ್. ಮುನಿಯಪ್ಪ ಸೇರಿದಂತೆ ಹಲವು ಸಚಿವರು, ಸಂಸದರು, ಶಾಸಕರು ಹಾಗೂ ವಿವಿಧ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.

ಅದೇ ರೀತಿ ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ನಂಜಾವಧೂತ ಶ್ರೀ, ರಂಭಾಪುರಿ ಶ್ರೀ ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳು ಭಾಗವಹಿಸಿ ಅಂತಿಮ ನಮನ ಸಲ್ಲಿಸಿದರು.

Continue Reading

Hassan

ಬೂತ್ ಮಟ್ಟದಲ್ಲಿ ಬಿಜೆಪಿ ಸಂಘಟನೆಗೆ ಒತ್ತು ನೀಡಿ: ಬಿ.ವೈ. ವಿಜಯೇಂದ್ರ ಕರೆ

Published

on

ಅರಸೀಕೆರೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಪಕ್ಷವನ್ನು ತಳಮಟ್ಟದಿಂದ ಬಲಪಡಿಸಲು ಪ್ರತಿ ಹಳ್ಳಿ ಹಾಗೂ ಬೂತ್ ಮಟ್ಟದ ಕಾರ್ಯಕರ್ತರನ್ನು ನೇರವಾಗಿ ಭೇಟಿ ಮಾಡಿ ಸಮಾಲೋಚನೆ ನಡೆಸುವಂತೆ ಕರೆ ನೀಡಿದರು.

ಶಿವಮೊಗ್ಗಕ್ಕೆ ತೆರಳುವ ವೇಳೆ ಅರಸೀಕೆರೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಂಬರುವ ಚುನಾವಣೆಗಳಲ್ಲಿ ಯುವ ನಾಯಕತ್ವಕ್ಕೆ ಹೆಚ್ಚಿನ ಆದ್ಯತೆ ಸಿಗಲಿದ್ದು, ದೇಶದ ಭವಿಷ್ಯ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ ಎಂದರು.

ಪಕ್ಷದ ಮುಖಂಡರು ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿ, ಬೂತ್ ಮಟ್ಟದಲ್ಲಿ ಸಂಘಟನೆಗೆ ಒತ್ತು ನೀಡಬೇಕು. ಕಾರ್ಯಕರ್ತರೇ ಪಕ್ಷದ ಬೆನ್ನೆಲುಬಾಗಿರುವುದರಿಂದ ಜನಸಾಮಾನ್ಯರ ಧ್ವನಿಯಾಗಿ ಪಕ್ಷದ ಬೇರುಗಳನ್ನು ಗಟ್ಟಿಗೊಳಿಸುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಅರಸೀಕೆರೆ ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ ಯಾದಪುರ್, ಬಿಜೆಪಿ ಮುಖಂಡರಾದ ಚೇತನ್ ಜೈನ್, ಶ್ರೀಧರ್, ಪುರುಷೋತ್ತಮ್, ರಂಗನಾಥ್, ರವಿಕುಮಾರ್, ರಾಜೇಶ್ ಸೇರಿದಂತೆ ಹಲವು ಯುವ ಮುಖಂಡರು ಉಪಸ್ಥಿತರಿದ್ದರು.

Continue Reading

Hassan

“ಪ್ರಧಾನಿಯಾಗುವ ಮಟ್ಟಕ್ಕೆ ಬೆಳೆಸಿದ್ದು ರಂಗನಾಥನ ಆಶೀರ್ವಾದ, ಶಕ್ತಿ ತುಂಬಿದ್ದು ಚೆನ್ನಮ್ಮ”: ಎಚ್‌ಡಿಡಿ

Published

on

ಹಾಸನ: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ತಮ್ಮ ಪತ್ನಿ ಚೆನ್ನಮ್ಮ ಅವರ ಅಂತ್ಯಕ್ರಿಯೆಯ ವೇಳೆ ಭಾವುಕರಾಗಿ ಕಣ್ಣೀರಿಟ್ಟರು. ಹರದನಹಳ್ಳಿಯ ಮಾವಿನಕೆರೆ ಸಮೀಪದ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿತು.

ಅಂತಿಮ ವಿಧಿವಿಧಾನಗಳ ಸಂದರ್ಭದಲ್ಲಿ ಮಾತನಾಡಿದ ದೇವೇಗೌಡರು, “ನನ್ನ ಪತ್ನಿ ಅನ್ನಪೂರ್ಣೆ. ಅವರನ್ನು ರಂಗನಾಥಸ್ವಾಮಿಯ ಪಾದಕ್ಕೆ ಕಳುಹಿಸುತ್ತಿದ್ದೇನೆ. ನನ್ನ ರಾಜಕೀಯ ಜೀವನದ ಪ್ರತಿಯೊಂದು ಹಂತದಲ್ಲೂ ಅವರು ನನಗೆ ಅಪಾರ ಬೆಂಬಲ ನೀಡಿದರು. ಅವರ ಸಹಕಾರ ಮತ್ತು ತ್ಯಾಗವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ,” ಎಂದು ಭಾವುಕರಾದರು.

ಕುಟುಂಬದವರ ನಿರ್ಧಾರದಂತೆ ಚೆನ್ನಮ್ಮ ಅವರ ಸಮಾಧಿಯನ್ನು ರಂಗನಾಥಸ್ವಾಮಿಯ ಸಾನಿಧ್ಯದಲ್ಲೇ ನಿರ್ಮಿಸಲಾಗಿದೆ ಎಂದು ಅವರು ತಿಳಿಸಿದರು. ಈ ಹಿಂದೆ ಬೇರೆ ಸ್ಥಳದಲ್ಲಿ ಸಮಾಧಿ ಮಾಡುವ ಆಲೋಚನೆ ಇದ್ದರೂ, ಮಕ್ಕಳು ಮತ್ತು ಕುಟುಂಬದವರ ಅಭಿಪ್ರಾಯದಂತೆ ಈ ಸ್ಥಳವನ್ನು ಆಯ್ಕೆ ಮಾಡಲಾಗಿದೆ ಎಂದರು.

“ನಾನು ದೇಶದ ಪ್ರಧಾನಿಯಾಗುವ ಮಟ್ಟಕ್ಕೆ ಬೆಳೆಯಲು ರಂಗನಾಥಸ್ವಾಮಿಯ ಆಶೀರ್ವಾದ ಹಾಗೂ ನನ್ನ ಪತ್ನಿಯ ಬೆಂಬಲವೇ ಪ್ರಮುಖ ಕಾರಣ. ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಅವರು ನನಗೆ ಶಕ್ತಿ ತುಂಬಿದರು. ಇಂದು ಅವರನ್ನು ಅಗಲುತ್ತಿರುವುದು ತುಂಬಾ ನೋವುಂಟು ಮಾಡಿದೆ,” ಎಂದು ದೇವೇಗೌಡರು ಗದ್ಗದಿತರಾಗಿ ಹೇಳಿದರು.

ಮಳೆಯ ಆತಂಕ ವ್ಯಕ್ತವಾಗಿದ್ದರೂ ಯಾವುದೇ ಅಡಚಣೆ ಇಲ್ಲದೆ ಅಂತ್ಯಕ್ರಿಯೆ ನೆರವೇರಿತು. ಈ ವೇಳೆ ಕುಟುಂಬಸ್ಥರು, ರಾಜಕೀಯ ಮುಖಂಡರು, ಅಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಅಂತಿಮ ನಮನ ಸಲ್ಲಿಸಿದರು.

Continue Reading

Trending

error: Content is protected !!