Hassan
ಕೆಂಪೇಗೌಡರು ಒಕ್ಕಲಿಗ ಸಮಾಜಕ್ಕೆ ಮಾತ್ರ ಸೀಮಿತವಲ್ಲ : ಶ್ರೇಯಸ್ ಎಂ. ಪಟೇಲ್
ಹಾಸನ : ನಾಡಪ್ರಭು ಕೆಂಪೇಗೌಡ ಅವರು ಒಕ್ಕಲಿಗ ಸಮಾಜಕ್ಕೆ ಮಾತ್ರ ಸೀಮಿತವಲ್ಲ ಎಲ್ಲಾ ಸಮುದಾಯಗಳಿಗೂ ವಿಶೇಷವಾದ ಕೊಡುಗೆ ನೀಡಿದ ಮಹಾನ್ ಪುರುಷ ಎಂದು ಸಂಸದರಾದ ಶ್ರೇಯಸ್ ಎಂ ಪಟೇಲ್ ಅವರು ತಿಳಿಸಿದ್ದಾರೆ.
ಹಾಸನಾಂಬ ಕಲಾಕ್ಷೇತ್ರದಲ್ಲಿ ಇಂದು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶ ಮತ್ತು ರಾಜ್ಯಗಳು ಬೆಂಗಳೂರು ರಾಜಧಾನಿ ಮೇಲೆ ಅವಲಂಬಿತವಾಗಿವೆ ಹಾಗೂ ಬೆಂಗಳೂರು ರಾಜಧಾನಿಯನ್ನು ಇಡೀ ದೇಶ ತಿರುಗಿ ನೋಡುವಂತಹ ಕೆಲಸ ಮಾಡಿರೋದು ಕೆಂಪೇಗೌಡರು ಎಂದರು.

ಸಮಾಜದಲ್ಲಿ ಎಲ್ಲರೂ ಒಂದಾಗಿ ಕೆಂಪೇಗೌಡ ಅವರ ಆದಿಯಲ್ಲಿ ನಡೆಯುವುದು ಸಮಾಜದ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾ ಗಿದೆ ಎಂದು ತಿಳಿಸಿದರು.
ಕೆಂಪೇಗೌಡ ಅವರ ದೂರ ದೃಷ್ಟಿಯಿಂದ ನಿರ್ಮಾಣವಾದ ಬೆಂಗಳೂರಿನಲ್ಲಿ ಅತ್ಯಂತ ಸುಭಿಕ್ಷವಾಗಿ ಜನರು ನೆಲೆಸಿದ್ದಾರೆ. ನಾಡ ಪ್ರಭು ಕೆಂಪೇಗೌಡ ಅವರು ನಮ್ಮ ಸಮಾಜದ ಹೆಮ್ಮೆ ನಾಯಕ ಎಂದರು.

ಶಾಸಕರಾದ ಹೆಚ್.ಪಿ ಸ್ವರೂಪ್ ಪ್ರಕಾಶ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕೆಂಪೇಗೌಡ ಅವರ ಮಾರ್ಗದರ್ಶನಗಳನ್ನು ಅನುಸರಿಸುವ ಮೂಲಕ ಸರ್ಕಾರಿ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಿ ಬಡವರಿಗೆ ಸಹಾಯ ಮಾಡಬೇಕು ಎಂದರು.
ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಮಾತನಾಡಿ ನಾಡ ಪ್ರಭು ಕೆಂಪೇಗೌಡ ಅವರ ಜಯಂತಿಯನ್ನು ಅತ್ಯಂತ ಸಡಗರ, ಸಂತೋಷ, ಸಂಭ್ರಮದಿಂದ ಅದ್ದೂರಿ ಯಾಗಿ ಆಚರಿಸುತ್ತಿದ್ದೇವೆ. ಕೆಂಪೇಗೌಡ ಅವರ ಆಡಳಿತ ಪ್ರತಿಯೊಬ್ಬ ಪ್ರಜೆ ಮನಸ್ಸಿನಲ್ಲಿ ನೆಲೆಸಿದೆ.ಸಮಾಜಕ್ಕೆ ಅವರು ನೀಡಿರುವ ಕೊಡುಗೆಗಳನ್ನು ಮೆಲುಕು ಹಾಕುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ ಎಂದರು.

ಕೆರೆ ಕಟ್ಟೆಗಳು, ಕಲ್ಯಾಣಿಗಳ ನಿರ್ಮಾಣ ಹಾಗೂ ಸಾಲು ಮರಗಳನ್ನು ಬೆಳೆಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ದೂರದೃಷ್ಟಿಯಿಂದ ಹಾಗೂ ಸಾಮಾಜಿಕ ಕಳಕಳಿಯಿಂದ ಜಾತ್ಯಾತೀತವಾಗಿ ಪ್ರತಿ ಕುಲಕಸುಬುಗಳಿಗೆ ಆದ್ಯತೆ ನೀಡಿ ಪೇಟೆಗಳನ್ನು ನಿರ್ಮಾಣ ಮಾಡಿಸಿದರು ಎಂದು ತಿಳಿಸಿದರು
ಹಾಸನ ಮತ್ತು ಕೊಡಗು ಜಿಲ್ಲೆ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿಗಳಾದ ಪರಮಪೂಜ್ಯ ಶ್ರೀ ಶಂಭು ನಾಥ ಸ್ವಾಮೀಜಿಯವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ರತಿ ಸಮುದಾಯದ ಜನರು ಕೆಂಪೇಗೌಡ ಅವರ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದರು.

ಹದಿನಾರನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿ ಆಡಳಿತ ನಡೆಸಿದ ಕೆಂಪೇಗೌಡರು, ಕೇವಲ ಒಬ್ಬ ಪಾಳೇಗಾರರಾ ಗಿರದೆ, ಅದ್ಭುತ ದೂರದೃಷ್ಟಿ ಹೊಂದಿದ ಮಹಾನ್ ಶಿಲ್ಪಿಯಾಗಿದ್ದರು ಎಂದರು.
ಮಣ್ಣಿನ ಕೋಟೆಯನ್ನು ನಿರ್ಮಿಸುವ ಮೂಲಕ ಸುಂದರವಾದ ಬೆಂಗಳೂರು ನಗರಕ್ಕೆ ಭದ್ರವಾದ ಅಡಿಪಾಯ ಹಾಕಿದ ನಾಡಪ್ರಭು ಕೆಂಪೇಗೌಡ ಅವರು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶುಭಂ ಶುಕ್ಲಾ ಅವರು ಮಾತನಾಡಿ ಕೆಂಪೇಗೌಡ ಅವರ ದೂರ ದೃಷ್ಟಿ ಮತ್ತು ಧೈರ್ಯದಿಂದ ಬೆಂಗಳೂರು ನಗರ ನಿರ್ಮಿಸಲು ಸಾಧ್ಯವಾಯಿತು ಎಂದು ತಿಳಿಸಿದರು.
ಬೇರೆ ರಾಜ್ಯ ಬೇರೆ ಜಿಲ್ಲೆಗಳಿಂದ ಜನರು ಬಂದು ನಮ್ಮ ನಾಡಿನ ಗೌರವವಾದ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಳ್ಳುತ್ತಾರೆ ಎಂದು ಹೇಳಿದರು.
ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತ ಅವರು ಮಾತನಾಡಿ ಜಗತ್ತಿನಲ್ಲಿ ಬೆಂಗಳೂರು ಒಂದು ಪ್ರಮುಖ ನಗರವಾಗಿದ್ದು, ಬೆಂಗಳೂರು ನಗರವನ್ನು ನಿರ್ಮಿಸಿದ ಕೆಂಪೇಗೌಡ ಅವರ ಜಯಂತಿ ಮಾಡುತ್ತಿರುವುದು ನಮ್ಮೆಲ್ಲರ ಹೆಮ್ಮೆ ಎಂದರು.

ಜನರಿಗೆ ಒಳ್ಳೆಯ ಕೆಲಸ ಮಾಡಬೇಕು ಎಂಬುದು ಅವರ ಜೀವನದ ಆಶಯವಾಗಿತ್ತು ಹಾಗೆಯೇ ನಾವು ಕೂಡ ಅವರ ಮಾರ್ಗದರ್ಶನದಂತೆ ನಡೆಯೋಣ ಎಂದರು.
ಜನಪ್ರಿಯ ಮತ್ತು ದೂರದೃಷ್ಟಿ ಇರುವ ನಾಯಕರು ಹಾಗೂ ಬೆಂಗಳೂರಿನಲ್ಲಿ ಕೆರೆ, ಮಾರುಕಟ್ಟೆ, ಉದ್ಯಾನವನ, ರಸ್ತೆಗಳನ್ನು ನಿರ್ಮಿಸಿವಲ್ಲಿ ಇವರ ಪಾತ್ರ ಅಪಾರವಾದು ದು ಎಂದು ಹೇಳಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪಟೇಲ್ ಶಿವಪ್ಪನವರು ಮಾತನಾಡಿ ಭಾರತ ದೇಶ ಹಾಗೂ ಕರ್ನಾಟಕ ರಾಜ್ಯದಲ್ಲಿ ಬಹಳ ಜನ ರಾಜರು,ನಾಡಪ್ರಭುಗಳು ಇದ್ದರು ಆದರೆ ಕೆಂಪೇಗೌಡ ಅವರು ಕಟ್ಟಿರುವ ಬೆಂಗಳೂರು ನಗರವು ದೇಶ ವಿಖ್ಯಾತಿ ಪಡೆದು ಪ್ರಸಿದ್ಧತೆ ಹೊಂದಿದೆ ಎಂದರು.
ನಾಡಪ್ರಭು ಕೆಂಪೇಗೌಡ ಅವರು ರೈತರಿಗೆ ಮತ್ತು ವ್ಯಾಪಾರಿಕರಿಗೆ ಹೆಚ್ಚಾಗಿ ಸಹಕಾರ ನೀಡುತ್ತಿದ್ದರು ಹಾಗೂ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು ಎಂದು ತಿಳಿಸಿದರು.

ಇಂದು ಇಡೀ ವಿಶ್ವವೇ ಬೆರಗುಗಾಣುವ ರೀತಿಯಲ್ಲಿ ಮಹಾನಗರವಾಗಿ ಬೆಂಗಳೂರು ಬೆಳೆದಿದೆ ಎಂದರೆ, ಅದಕ್ಕೆ ಅಡಿಪಾಯ ಹಾಕಿದವರು ನಮ್ಮ ಕೆಂಪೇಗೌಡರು ಎಂದರು.
ಮೈಸೂರು ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರತತ್ವ ಅಧ್ಯಯನ ವಿಭಾಗದ ನಿವೃತ್ತ ಉಪನ್ಯಾಸಕರಾದ ಡಾ. ಎನ್.ಎಸ್ ರಂಗರಾಜು ಅವರು ಕಾರ್ಯಕ್ರಮ ಕುರಿತು ಮಾತನಾಡಿ ಇತಿಹಾಸ ಪುರುಷರಾಗಿದ್ದ ನಾಡ ಪ್ರಭು ಕೆಂಪೇಗೌಡ ಅವರು ವಿಜಯನಗರ ಸಾಮ್ರಾಜ್ಯದ ಪ್ರಭಾವದಿಂದ ಪ್ರೇರಿತರಾಗಿ ಒಂದು ಸುಂದರ ಮತ್ತು ವ್ಯವಸ್ಥಿತ ನಗರವನ್ನು ಕಟ್ಟಲು ಕನಸು ಕಂಡರು. ಅವರು ಕೇವಲ ಒಂದು ನಗರವನ್ನು ನಿರ್ಮಿಸಲಿಲ್ಲ, ಬದಲಿಗೆ ವ್ಯಾಪಾರ, ಕಲೆ ಮತ್ತು ಧಾರ್ಮಿಕ ಕೇಂದ್ರಗಳನ್ನು ಒಳಗೊಂಡ ಮಹಾನಗರಕ್ಕೆ ಅಡಿಪಾಯ ಹಾಕಿದರು.
ಜಾತಿ, ಧರ್ಮಗಳ ಎಲ್ಲೆಯನ್ನು ಮೀರಿ, ಸರ್ವರಿಗೂ ಸಮಾನವಾದ ಆಡಳಿತವನ್ನು ನೀಡಿದವರು ಅವರ ಈ ಪರೋಪಕಾರಿ ಗುಣ ಮತ್ತು ಅಭಿವೃದ್ಧಿಯ ದೂರದೃಷ್ಟಿಯೇ ಇಂದು ಬೆಂಗಳೂರು ಜಾಗತಿಕ ಮಟ್ಟದಲ್ಲಿ ಬೆಳೆಯಲು ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಕರಗ ನಡೆಸುವ ಮೂಲಕ ಜನಪದ ಕಲೆಗೂ ಸಹ ಪ್ರೋತ್ಸಾಹಿಸುತ್ತಿ ದ್ದರು ಎಂದು ತಿಳಿಸಿದರು.
ಕೆಂಪೇಗೌಡರು ಕೃಷಿ ಚಟುವಟಿಕೆಗಳಿಗೆ ಹೆಚ್ಚು ಹೊತ್ತು ನೀಡುತ್ತಿದ್ದರು ಮತ್ತು ರೈತರ ಪರವಾಗಿ ಕೆಲಸ ಮಾಡುತ್ತಿದ್ದರು ಹಾಗೂ ಕೆಂಪೇಗೌಡರಲ್ಲಿದ್ದಂತಹ ಮುಂದಾಲೋಚನೆ ಮತ್ತು ಬುದ್ಧಿವಂತಿಕೆ ಪ್ರತಿಯೊಬ್ಬ ಸಮಾಜದ ನಾಗರಿಕರಲ್ಲೂ ಇರಬೇಕು ಎಂದರು.
ಜಾತಿ, ಧರ್ಮಗಳ ಎಲ್ಲೆಯನ್ನು ಮೀರಿ, ಸರ್ವರಿಗೂ ಸಮಾನವಾದ ಆಡಳಿತವನ್ನು ನೀಡಿದವರು ಅವರ ಈ ಪರೋಪಕಾರಿ ಗುಣ ಮತ್ತು ಅಭಿವೃದ್ಧಿಯ ದೂರದೃಷ್ಟಿಯೇ ಇಂದು ಬೆಂಗಳೂರು ಜಾಗತಿಕ ಮಟ್ಟದಲ್ಲಿ ಬೆಳೆಯಲು ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಜಿಲ್ಲಾಧ್ಯಕ್ಷರಾದ ಬಿ. ಪಿ ಕೃಷ್ಣೆ ಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಹೆಚ್. ಎಲ್ ಮಲ್ಲೇಶ್ ಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಹೆಚ್. ಪಿ ತಾರಾನಾಥ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Hassan
ಗೃಹಜ್ಯೋತಿ ಫಲಾನುಭವಿಗಳ ಮನೆ-ಮನೆ ಪರಿಶೀಲನೆ: ಅರ್ಹರಿಗೆ ಮಾತ್ರ ಸೌಲಭ್ಯ ಕಲ್ಪಿಸಲು ವಿದ್ಯುತ್ ಇಲಾಖೆ ಕಾರ್ಯಾಚರಣೆ
ಅರಸೀಕೆರೆ: ರಾಜ್ಯ ಸರ್ಕಾರದ ನಿರ್ದೇಶನದಂತೆ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಅರ್ಹತೆ ಪರಿಶೀಲನೆ ಕಾರ್ಯಕ್ಕೆ ಅರಸೀಕೆರೆಯಲ್ಲಿ ವೇಗ ದೊರೆತಿದೆ. ಕರ್ನಾಟಕ ವಿದ್ಯುತ್ ಸರಬರಾಜು ಇಲಾಖೆಯ ಸಿಬ್ಬಂದಿ ಮನೆ-ಮನೆಗೆ ತೆರಳಿ ಫಲಾನುಭವಿಗಳ ಮಾಹಿತಿ ಸಂಗ್ರಹಿಸಿ, ಪರಿಶೀಲನಾ ಅರ್ಜಿಗಳನ್ನು ಭರ್ತಿ ಮಾಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಗೃಹಜ್ಯೋತಿ ಯೋಜನೆಯ ಸೌಲಭ್ಯವು ನಿಜವಾದ ಅರ್ಹ ಕುಟುಂಬಗಳಿಗೆ ಮಾತ್ರ ತಲುಪಬೇಕು ಹಾಗೂ ಯೋಜನೆಯ ದುರುಪಯೋಗವನ್ನು ತಡೆಯಬೇಕು ಎಂಬ ಉದ್ದೇಶದಿಂದ ಸರ್ಕಾರ ಈ ವಿಶೇಷ ಪರಿಶೀಲನಾ ಅಭಿಯಾನಕ್ಕೆ ಚಾಲನೆ ನೀಡಿದೆ. ಇದಕ್ಕಾಗಿ ಫಲಾನುಭವಿಗಳ ವಿಳಾಸ, ವಿದ್ಯುತ್ ಸಂಪರ್ಕದ ವಿವರ, ಕುಟುಂಬದ ಮಾಹಿತಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ದಾಖಲಿಸಲಾಗುತ್ತಿದೆ.

ಪರಿಶೀಲನೆ ವೇಳೆ ಫಲಾನುಭವಿಗಳು ತಮ್ಮ ವಿದ್ಯುತ್ ಬಿಲ್, ಆಧಾರ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಿಬ್ಬಂದಿಗೆ ಒದಗಿಸುವಂತೆ ಸೂಚಿಸಲಾಗಿದೆ. ಮಾಹಿತಿಯಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಅದನ್ನು ತಕ್ಷಣವೇ ಸರಿಪಡಿಸಿ, ಅರ್ಹರಿಗೆ ಯೋಜನೆಯ ಲಾಭ ನಿರಂತರವಾಗಿ ದೊರೆಯುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.
ವಿದ್ಯುತ್ ಇಲಾಖೆಯ ಸಿಬ್ಬಂದಿ ಅಧಿಕೃತ ಗುರುತಿನ ಚೀಟಿಯೊಂದಿಗೆ ಮನೆಗಳಿಗೆ ಭೇಟಿ ನೀಡುತ್ತಿದ್ದು, ಸಾರ್ವಜನಿಕರು ಯಾವುದೇ ಅನುಮಾನ ಅಥವಾ ಗೊಂದಲಕ್ಕೆ ಒಳಗಾಗದೆ ಸಿಬ್ಬಂದಿಗೆ ಅಗತ್ಯ ಸಹಕಾರ ನೀಡುವಂತೆ ಮನವಿ ಮಾಡಲಾಗಿದೆ.

ನಗರದ ವಿವಿಧ ವಾರ್ಡ್‌ಗಳಲ್ಲಿ ಪರಿಶೀಲನಾ ಕಾರ್ಯ ನಡೆಯುತ್ತಿದ್ದು, ಹೆಚ್ಚಿನ ನಿವಾಸಿಗಳು ಇಲಾಖೆಯ ಸಿಬ್ಬಂದಿಗೆ ಅಗತ್ಯ ಮಾಹಿತಿ ನೀಡಿ ಸಹಕರಿಸುತ್ತಿದ್ದಾರೆ. ಸರ್ಕಾರದ ಮಹತ್ವಾಕಾಂಕ್ಷಿ ಗೃಹಜ್ಯೋತಿ ಯೋಜನೆ ಪಾರದರ್ಶಕವಾಗಿ ಜಾರಿಯಾಗಲು ಈ ಪರಿಶೀಲನಾ ಪ್ರಕ್ರಿಯೆ ನೆರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯೋಜನೆಯ ಅರ್ಹ ಫಲಾನುಭವಿಗಳ ಮಾಹಿತಿ ನವೀಕರಣದೊಂದಿಗೆ ಅನರ್ಹರು ಸೌಲಭ್ಯ ಪಡೆಯುವುದನ್ನು ತಡೆಯುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ಪರಿಶೀಲನಾ ಕಾರ್ಯ ಪೂರ್ಣಗೊಂಡ ಬಳಿಕ ಸರ್ಕಾರದ ಮಾರ್ಗಸೂಚಿಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಸ್ಪಷ್ಟಪಡಿಸಿದೆ.
Hassan
ತಾಯಿ ಅಂತ್ಯಕ್ರಿಯೆ ವೇಳೆ ಡಿಕೆಶಿ ಹೆಸರೇಳದ ಬಗ್ಗೆ ಎಚ್‌ಡಿಕೆ ಸ್ಪಷ್ಟನೆ
ಹಾಸನ : ತಮ್ಮ ತಾಯಿ ಚೆನ್ನಮ್ಮರ ಅಂತ್ಯಕ್ರಿಯೆ ವೇಳೆ ಸರ್ಕಾರಿ ಗೌರವ ಸಲ್ಲಿಸಿದ್ದಕ್ಕೆ ನಿನ್ನೆಯೇ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಧನ್ಯವಾದ ಹೇಳಿದ್ದಾರೆ. ಆದರೆ, ಮಾತನಾಡುವಾಗ ಕೇಂದ್ರ ಸಚಿವರ ಹೆಸರುಗಳನ್ನು ಉಲ್ಲೇಖಿಸಿದ್ದು, ಸಿಎಂ ಡಿ.ಕೆ.ಶಿವಕುಮಾರ್ ಹೆಸರು ಮಾತ್ರ ಹೇಳದಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಬೇರೆ ಬೇರೆ ರೀತಿಯ ಆರೋಪ ಪ್ರತ್ಯಾರೋಪಗಳು ಶುರುವಾಗಿದೆ. ಇದರ ಬೆನ್ನಲ್ಲೇ ಇದೀಗ ಸ್ವತಃ ಕುಮಾರಸ್ವಾಮಿಯೇ ತಾಯಿ ಸಮಾಧಿ ಬಳಿ ಸ್ಪಷ್ಟನೆ ನೀಡಿದ್ದಾರೆ. ಮುಖ್ಯಮಂತ್ರಿ ಎಂದು ಹೇಳಿದ್ದು ಡಿ.ಕೆ.ಶಿವಕುಮಾರ್ ಅವರ ಕುರಿತೇ ಹೇಳಿದ್ದು ಎಂದಿದ್ದಾರೆ. ಈ ಮೂಲಕ ಅಂತೆ ಕಂತೆಗಳಿಗೆ ತೆರೆ ಎಳೆದಿದ್ದಾರೆ.
ಅಂತಿಮ ದರ್ಶನದ ವೇಳೆ ನಾನು ಮೈಕ್ ಹಿಡಿದು ಮಾತನಾಡಿದೆ. ನಾನು ಮಾತಾಡಬೇಕು ಅನ್ನೊ ಉದ್ದೇಶ ಇರಲಿಲ್ಲ. ಮೈಕ್ ಹಿಡಿದ ವೇಳೆ ನನ್ನ ತಾಯಿಯೇ ನನ್ನನ್ನು ಮಾತನಾಡಿಸಿದಂತಾಗಿದೆ. ಆ ವೇಳೆ ನಾನು ಕೇಂದ್ರ ಸರ್ಕಾರದ ಮಂತ್ರಿಯ ಹೆಸರನ್ನ ಹೇಳಿದೆ. ಆದರೆ ರಾಜ್ಯದ ಮುಖ್ಯಮಂತ್ರಿ ಹೆಸರನ್ನ ಹೇಳಲಿಲ್ಲ ಅನ್ನೋ ಮಾತು ಕೇಳಿ ಬಂದಿದೆ. ಡಿಕೆಶಿ ಹೆಸರು ಹೇಳದೆ ಇರೋದು ಉದ್ದೇಶಪೂರ್ವಕವಾಗಿ ಅಲ್ಲ. ಮುಖ್ಯಮಂತ್ರಿ ಎಂದು ಹೇಳಿದ್ದು ಡಿ.ಕೆ.ಶಿವಕುಮಾರ್ ಅವರ ಕುರಿತೇ ಹೇಳಿದ್ದು ಎಂದು ಸ್ಪಷ್ಟನೆ ನೀಡಿದ್ದಾರೆ.

ಅಂತಹ ಮಟ್ಟಕ್ಕೆ ನಾನು ಹೋಗೋದಿಲ್ಲ
ಸಿಎಂ ಡಿ.ಕೆ. ಶಿವಕುಮಾರ್ ಹೆಸರು ಹೇಳಲಿಲ್ಲ ಎಂದು ಒಂದೆರಡು ಜನ ಹೇಳಿದರು. ಆದರೆ ನಾನು ನನ್ನ ಇಚ್ಛೆಯಂತೆ ಬಂದ ಪದ ಅಲ್ಲ. ನಾನು ಸಣ್ಣತನ ತೋರಿದೆ ಎಂದು ಯಾರೂ ಕೂಡ ಭಾವಿಸಬೇಡಿ. ಡಿ.ಕೆ. ಶಿವಕುಮಾರ್ ಹೆಸರು ಹೇಳದೆ ಇರೋದು ಉದ್ದೇಶಪೂರ್ವಕವಾಗಿ ಅಲ್ಲ. ಮುಖ್ಯಮಂತ್ರಿ ಎಂದು ಹೇಳಿದ್ದು ಡಿಕೆಶಿ ಅವರ ಕುರಿತೇ ಹೇಳಿದ್ದು. ಅಂತಹ ಮಟ್ಟಕ್ಕೆ ನಾನು ಹೋಗೋದೂ ಇಲ್ಲ. ನಮ್ಮ ಕುಟುಂಬದಲ್ಲೂ ಕೂಡ ಭಿನ್ನಾಭಿಪ್ರಾಯ ಬರುತ್ತವೆ. ಆದರೆ ಎಲ್ಲವನ್ನೂ ಮರೆತು ಒಂದು ಧ್ವನಿಯಾಗಿ ಬದುಕುತ್ತಿದ್ದೇವೆ. ಜೇನಿನಗೂಡು ನಾವೆಲ್ಲ ಎನ್ನುವಂತೆ ನಾವು ಬದುಕುತ್ತಿದ್ದೇವೆ. ಪ್ರತಿ ಕುಟುಂಬವೂ ಹೀಗೆ ಬದುಕಲಿ ಅನ್ನೋದು ನನ್ನ ಸಂದೇಶ ಎಂದಿದ್ದಾರೆ.
Hassan
ಚೆನ್ನಮ್ಮ ಸಮಾಧಿಗೆ ದೇವೇಗೌಡ, ಕುಮಾರಸ್ವಾಮಿ ಭೇಟಿ: ಭಾವುಕರಾದ ಮಾಜಿ ಪ್ರಧಾನಿ, ನಿತ್ಯ ಪೂಜೆಗೆ ನಿರ್ಧಾರ
ಹೊಳೆನರಸೀಪುರ : ಜು.21: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪತ್ನಿ ಚನ್ನಮ್ಮ ಅವರ ಸಮಾಧಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಕುಟುಂಬ ಸದಸ್ಯರು ಹಾಗೂ ಬಂಧುಗಳು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಸಮಾಧಿ ಸ್ಥಳದಲ್ಲಿ ನಿತ್ಯ ಪೂಜೆ, ಸಹಸ್ರನಾಮ ಪಠಣ ಹಾಗೂ ನಂದಾದೀಪ ಬೆಳಗುವ ವ್ಯವಸ್ಥೆ ಮಾಡುವ ನಿರ್ಧಾರ ಕೈಗೊಳ್ಳಲಾಯಿತು. ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಸಮೀಪದ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿರುವ ಚನ್ನಮ್ಮ ಅವರ ಸಮಾಧಿಗೆ ಎಚ್.ಡಿ. ದೇವೇಗೌಡ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಪುತ್ರಿ ಅನಸೂಯಾ ಸೇರಿದಂತೆ ಕುಟುಂಬ ಸದಸ್ಯರು ಆಗಮಿಸಿ ನಮನ ಸಲ್ಲಿಸಿದರು.

ಚನ್ನಮ್ಮ ಅವರು ಬದುಕಿದ್ದಾಗ ಪ್ರತಿದಿನ ಪಠಿಸುತ್ತಿದ್ದ ಲಲಿತ ಸಹಸ್ರನಾಮ, ವಿಷ್ಣು ಸಹಸ್ರನಾಮ ಹಾಗೂ ಶಿವನಿಗೆ ಪ್ರಿಯವಾದ ರುದ್ರ ಚಮಕ ಶ್ಲೋಕಗಳನ್ನು ಸಮಾಧಿ ಎದುರು ಅರ್ಚಕರು ಪಠಿಸಿದರು. ಮೂವರು ಅರ್ಚಕರು ಶ್ಲೋಕಗಳ ಉದ್ಘೋಷಣೆ ಮೂಲಕ ಪೂಜೆ ನೆರವೇರಿಸಿದರೆ, ಪುತ್ರಿ ಅನಸೂಯಾ ಸಮಾಧಿ ಎದುರು ನೆಲದ ಮೇಲೆ ಕುಳಿತು ಶ್ಲೋಕ ಪಠಣದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಪುತ್ರಿ ಅನಸೂಯಾ ನಂದಾದೀಪ ಹಚ್ಚಿದರು.

ಜುಲೈ 30ರಂದು ನಡೆಯಲಿರುವ ಆರಾಧನಾ ಮಹೋತ್ಸವದವರೆಗೆ ದೀಪ ಆರದಂತೆ ವ್ಯವಸ್ಥೆ ಮಾಡುವಂತೆ ಕುಟುಂಬ ಸದಸ್ಯರು ಸೂಚನೆ ನೀಡಿದರು. ಮುಂದೆಯೂ ಪ್ರತಿನಿತ್ಯ ಸಮಾಧಿ ಸ್ಥಳದಲ್ಲಿ ಲಲಿತ ಸಹಸ್ರನಾಮ, ವಿಷ್ಣು ಸಹಸ್ರನಾಮ ಪಠಿಸಿ ಪೂಜೆ ನಡೆಸಲು ತೀರ್ಮಾನಿಸಲಾಯಿತು. ಪತ್ನಿಯನ್ನು ಕಳೆದುಕೊಂಡ ಬಳಿಕ ಮೊದಲ ಬಾರಿಗೆ ಸಮಾಧಿಗೆ ಆಗಮಿಸಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಭಾವುಕರಾಗಿ ಕಣ್ಣೀರಿಟ್ಟರು. ಭೂಮಿ ತಾಯಿಯ ಮಡಿಲಿನಲ್ಲಿ ಚಿರನಿದ್ರೆಗೆ ಜಾರಿರುವ ತಮ್ಮ ಬಾಳ ಸಂಗಾತಿಯನ್ನು ನೆನೆದು ಕೆಲಕಾಲ ಮೌನವಾಗಿ ನಿಂತ ಅವರು, ಸಮಾಧಿಗೆ ಪ್ರದಕ್ಷಿಣೆ ಹಾಕಿ ನಮನ ಸಲ್ಲಿಸಿದರು. ಜುಲೈ 30ರಂದು ನಡೆಯಲಿರುವ ಚನ್ನಮ್ಮ ಅವರ ಆರಾಧನಾ ಮಹೋತ್ಸವದ ಅಂಗವಾಗಿ ಸಮಾಧಿ ಸ್ಥಳದಲ್ಲಿ ಪ್ರತಿದಿನ ವಿಶೇಷ ಪೂಜೆ, ಸಹಸ್ರನಾಮ ಪಠಣ ಹಾಗೂ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ.
-
Mysore9 hours agoಹುಣಸೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹ*ತ್ಯೆ; ಸಾವಿನ ಕಾರಣ ನಿಗೂಢ
-
Mysore15 hours agoನಂಜನಗೂಡಿನಲ್ಲಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ: ಕಾಮುಕನಿಗೆ ಗ್ರಾಮಸ್ಥರಿಂದ ಧರ್ಮದೇಟು, ಪೊಲೀಸರ ವಶಕ್ಕೆ
-
Kodagu12 hours agoಅಧ್ಯಕ್ಷರಾಗಿ ವಾಂಚಿರ ವಿಠಲ್ ನಾಣಯ್ಯ ಆಯ್ಕೆ
-
Politics4 hours agoಪರಪ್ಪನ ಅಗ್ರಹಾರಕ್ಕೆ ವಿಜಯಲಕ್ಷ್ಮಿ, ರಕ್ಷಿತಾ ಭೇಟಿ: ದರ್ಶನ್ ಆರೋಗ್ಯ ವಿಚಾರಣೆ
-
Politics5 hours agoರಾಜ್ಯ ಸಚಿವ ಸಂಪುಟ ವಿಸ್ತರಣೆ ನಾಳೆ: 18 ಮಂದಿಗೆ ಸಚಿವ ಸ್ಥಾನ ಸಾಧ್ಯತೆ
-
Kodagu5 hours agoಹಾರಂಗಿ ಜಲಾಶಯದ ನೀರು ಕುಡಿಯಲು ಮಾತ್ರ: ರೈತರಿಗೆ ಬೆಳೆ ಬೆಳೆಯದಂತೆ ಮನವಿ
-
Kodagu7 hours agoಕೂಡಿಗೆ ವ್ಯಾಪ್ತಿಯಲ್ಲಿ 1 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಡಾ. ಮಂತರ್ ಗೌಡ ಚಾಲನೆ
-
Manglore3 hours agoಮನೆ ಕಾಮಗಾರಿಗೆ ಬಂದು 6.37 ಲಕ್ಷ ಮೌಲ್ಯದ ಚಿನ್ನಾಭರಣ ಕಳವು- ಕೃತ್ಯ ಎಸಗಿದ 24 ಗಂಟೆಯೊಳಗೆ ಆರೋಪಿ ಅಂದರ್
