Connect with us

Politics

ಮೈಸೂರು ದಸರಾದಲ್ಲಿ ಕಂಬಳ ಖಚಿತ; ಈಗಾಗಲೇ 182 ಕೋಣಗಳ ನೋಂದಣಿ: ಶಾಸಕ ಅಶೋಕ್ ರೈ

Published

on

ಬೆಂಗಳೂರು: ಮೈಸೂರು ದಸರಾ ಮಹೋತ್ಸವದಲ್ಲಿ ಈ ಬಾರಿ ಕಂಬಳ ಸ್ಪರ್ಧೆ ನಡೆಯುವುದು ಖಚಿತವಾಗಿದ್ದು, ಈಗಾಗಲೇ 182 ಕೋಣಗಳ ನೋಂದಣಿಯಾಗಿದೆ ಎಂದು ಶಾಸಕ ಅಶೋಕ್‌ ಕುಮಾರ್‌ ರೈ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದೆ ಕಂಬಳದಲ್ಲಿ ಕೋಣಗಳನ್ನು ಓಡಿಸಿದ್ದ ಅನುಭವಿಗಳನ್ನೇ ಸಮಿತಿಗೆ ಸೇರಿಸಲಾಗಿದ್ದು, ಅವರ ಅಭಿಪ್ರಾಯದ ಮೇರೆಗೆ ದಸರಾದಲ್ಲಿ ಕಂಬಳ ಆಯೋಜಿಸಲು ಒಪ್ಪಿಗೆ ನೀಡಲಾಗಿದೆ . ಈಗಾಗಲೇ 182 ಕೋಣಗಳು ನೋಂದಣಿಯಾಗಿದ್ದು, ಅವುಗಳಲ್ಲಿ 175 ಕೋಣಗಳನ್ನು ಸ್ಪರ್ಧೆಗೆ ಆಯ್ಕೆ ಮಾಡಲಾಗುತ್ತದೆ ಎಂದು ಹೇಳಿದರು.

“ಬೆಂಗಳೂರು ಕಂಬಳಕ್ಕೂ ಆರಂಭದಲ್ಲಿ ವಿರೋಧ ವ್ಯಕ್ತವಾಗಿತ್ತು. ಆದರೆ ಬಳಿಕ ನಿರೀಕ್ಷೆಗೂ ಮೀರಿ 175 ಕೋಣಗಳು ಭಾಗವಹಿಸಿದ್ದವು. ಮೈಸೂರಿನಲ್ಲೂ ಉತ್ತಮ ಸ್ಪಂದನೆ ಸಿಕ್ಕಿದೆ,” ಎಂದು ಅವರು ತಿಳಿಸಿದರು.

ಕಂಬಳಕ್ಕೆ ಅನುದಾನ ನೀಡುವ ವಿಚಾರವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅಶೋಕ್ ರೈ, “23 ಕಂಬಳಗಳಿಗೆ ಕಾಂಗ್ರೆಸ್ ಸರ್ಕಾರ ಈಗಾಗಲೇ ₹1.15 ಕೋಟಿ ಅನುದಾನ ನೀಡಿದೆ. ಕಂಬಳವನ್ನು ಮುಖ್ಯವಾಹಿನಿಗೆ ತಂದು ಸೂಕ್ತ ಪ್ರಾತಿನಿಧ್ಯ ಕಲ್ಪಿಸುವುದು ನಮ್ಮ ಉದ್ದೇಶ. ಬಿಜೆಪಿ ಸರ್ಕಾರ ಐದು ವರ್ಷಗಳಲ್ಲಿ ಕೇವಲ ಎರಡು ವರ್ಷ ಮಾತ್ರ ಅನುದಾನ ನೀಡಿತ್ತು,” ಎಂದು ಆರೋಪಿಸಿದರು.

ಮೈಸೂರು ಅರಮನೆಗೆ ಕೋಣಗಳ ನಂಟಿಲ್ಲ ಎಂಬ ವಿರೋಧದ ಕುರಿತು ಪ್ರತಿಕ್ರಿಯಿಸಿದ ಅವರು, “ಇತಿಹಾಸದಲ್ಲಿ ಮೈಸೂರು ಅರಮನೆಗೂ ಕೋಣಗಳಿಗೂ ಸಂಬಂಧವಿದೆ. ಈ ವಿಚಾರದಲ್ಲಿ ರಾಜಕೀಯ ಮಾಡಬಾರದು. ಮುಖ್ಯಮಂತ್ರಿಗಳ ಸೂಚನೆ ಬಂದ ಬಳಿಕ ಸಿದ್ಧತೆ ಆರಂಭವಾಗಲಿದೆ. ಮೈಸೂರು ದಸರಾ ಕಂಬಳಕ್ಕೆ 25 ರಿಂದ 30 ಲಕ್ಷ ಜನರು ಸೇರುವ ನಿರೀಕ್ಷೆಯಿದೆ,” ಎಂದು ಹೇಳಿದರು.

Continue Reading

Politics

ಮನೆ ಮನೆಗೆ ಶಾಶ್ವತ ನಿವಾಸ ಪ್ರಮಾಣಪತ್ರ: ರಾಜ್ಯ ಸರ್ಕಾರದ ಮಹತ್ವದ ಹೆಜ್ಜೆ

Published

on

ಬೆಂಗಳೂರು: ರಾಜ್ಯ ಸರ್ಕಾರವು ಶಾಶ್ವತ ನಿವಾಸ ಪ್ರಮಾಣಪತ್ರ (Permanent Resident Certificate – PRC) ವಿತರಣೆ ಸೇವೆಗೆ ಚಾಲನೆ ನೀಡಿದ್ದು, ಸಾರ್ವಜನಿಕರಿಗೆ ಮನೆಮನೆಗೆ ಪ್ರಮಾಣಪತ್ರ ತಲುಪಿಸುವ ವ್ಯವಸ್ಥೆಯನ್ನು ಆರಂಭಿಸಿದೆ. ವಿಧಾನಸೌಧದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ. ಪರಮೇಶ್ವರ್ ಯೋಜನೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪರಮೇಶ್ವರ್, ಶಾಶ್ವತ ನಿವಾಸ ಪ್ರಮಾಣಪತ್ರವನ್ನು 11 ಮಾನದಂಡಗಳ ಆಧಾರದ ಮೇಲೆ ನೀಡಲಾಗುವುದು ಎಂದು ತಿಳಿಸಿದರು. ಕರ್ನಾಟಕದಲ್ಲಿ ಜನಿಸಿರುವವರು, ಕನಿಷ್ಠ 10 ವರ್ಷಗಳಿಂದ ರಾಜ್ಯದಲ್ಲಿ ವಾಸಿಸಿರುವವರು, ರಾಜ್ಯದಲ್ಲಿ 10 ವರ್ಷಗಳ ಕಾಲ ವ್ಯಾಸಂಗ ಮಾಡಿದವರು, ಕರ್ನಾಟಕದ ನಿವಾಸಿಯನ್ನು ವಿವಾಹವಾದವರು, ರಾಜ್ಯದಲ್ಲಿ ಮನೆ ಅಥವಾ ಸ್ಥಿರಾಸ್ತಿ ಹೊಂದಿರುವವರು, ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವವರು ಸೇರಿದಂತೆ ವಿವಿಧ ಅರ್ಹತಾ ಮಾನದಂಡಗಳನ್ನು ಪರಿಗಣಿಸಿ ಪಿಆರ್‌ಸಿ ನೀಡಲಾಗುವುದು ಎಂದರು.

ಪ್ರಮಾಣಪತ್ರಗಳನ್ನು ಮನೆಮನೆಗೆ ತಲುಪಿಸುವುದರ ಜೊತೆಗೆ ವೆಬ್‌ಸೈಟ್ ಮೂಲಕ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶವೂ ಕಲ್ಪಿಸಲಾಗಿದೆ. ವಾಟ್ಸ್ಆಪ್, ಹೋಬಳಿ ಮಟ್ಟದ ಸಹಾಯ ಕೇಂದ್ರಗಳು, ನಾಡಕಚೇರಿ, ಗ್ರಾಮ ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರಗಳ ಮೂಲಕವೂ ಪ್ರಮಾಣಪತ್ರ ಪಡೆಯಲು ಅವಕಾಶ ನೀಡಲಾಗಿದೆ.

ಪ್ರಮಾಣಪತ್ರ ವಿತರಣೆಯಲ್ಲಿ ಯಾವುದೇ ತೊಂದರೆ ಉಂಟಾದರೆ ತಹಶೀಲ್ದಾರ್, ಉಪತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಬಹುದಾಗಿದೆ. ಅಗತ್ಯವಿದ್ದರೆ ಜಿಲ್ಲಾಧಿಕಾರಿಗಳಿಂದ ಮರುಪರಿಶೀಲನೆ ನಡೆಸುವ ವ್ಯವಸ್ಥೆಯನ್ನೂ ಸರ್ಕಾರ ರೂಪಿಸಿದೆ.

ಇದೇ ವೇಳೆ, ರಾಜ್ಯದಾದ್ಯಂತ ಸುಮಾರು 4.85 ಕೋಟಿ ಜಾತಿ ಪ್ರಮಾಣಪತ್ರಗಳನ್ನು ಉಚಿತವಾಗಿ ಮನೆಮನೆಗೆ ವಿತರಿಸುವ ಅಭಿಯಾನಕ್ಕೂ ಚಾಲನೆ ನೀಡಲಾಗಿದೆ. ಅಟಲ್ ಜನಸ್ನೇಹಿ ಕೇಂದ್ರಗಳ ಮೂಲಕ ಪ್ರಮಾಣಪತ್ರಗಳನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿದ್ದು, ಸ್ಥಳೀಯ ಅಧಿಕಾರಿಗಳು ಮನೆಮನೆಗೆ ತಲುಪಿಸುವ ಕಾರ್ಯವನ್ನು ಕೈಗೊಳ್ಳಲಿದ್ದಾರೆ.

ಈ ಯೋಜನೆಯಿಂದ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅನಗತ್ಯವಾಗಿ ಅಲೆದಾಡುವ ಅವಶ್ಯಕತೆ ಕಡಿಮೆಯಾಗಲಿದ್ದು, ವಿವಿಧ ಸರ್ಕಾರಿ ಸೇವೆಗಳನ್ನು ಸುಲಭವಾಗಿ ಪಡೆಯಲು ಅನುಕೂಲವಾಗಲಿದೆ ಎಂದು ಸರ್ಕಾರ ತಿಳಿಸಿದೆ.

Continue Reading

Politics

ಚೆನ್ನಮ್ಮ ದೇವೇಗೌಡ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರ ಸಂತಾಪ

Published

on

ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವa ಅವರ ಪತ್ನಿ ಚೆನ್ನಮ್ಮ ದೇವೇಗೌಡ  ಅವರ ನಿಧನಕ್ಕೆ  ದೇಶದ ಪ್ರಧಾನಿ, ರಾಜ್ಯದ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಹಾಗೂ ವಿವಿಧ ಪಕ್ಷಗಳ ನಾಯಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸಂತಾಪ
ಚೆನ್ನಮ್ಮ ದೇವೇಗೌಡ ಅವರ ನಿಧನದ ಸುದ್ದಿ ತೀವ್ರ ಆಘಾತ ಮತ್ತು ನೋವುಂಟು ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಸಮಾಜ ಸೇವೆಯ ಮೇಲಿದ್ದ ಅವರ ಅಪಾರ ಕಾಳಜಿ ಹಾಗೂ ವಿನಮ್ರ ಸ್ವಭಾವ ಎಲ್ಲರ ಗೌರವಕ್ಕೆ ಪಾತ್ರವಾಗಿತ್ತು. ಈ ದುಃಖದ ಸಮಯದಲ್ಲಿ ದೇವೇಗೌಡರ ಕುಟುಂಬದ ನೋವಿನಲ್ಲಿ ತಾವೂ ಭಾಗಿಯಾಗಿದ್ದು, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಂತಾಪ
ಚೆನ್ನಮ್ಮ ಅವರು ಅಪಾರ ದೈವಭಕ್ತೆಯಾಗಿ, ತುಂಬು ಕುಟುಂಬವನ್ನು ಸಾಕಿ ಸಲಹಿದ ಮಹಾನ್ ತಾಯಿಯಾಗಿದ್ದರು. ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ ಸೇರಿದಂತೆ ಕುಟುಂಬದ ಏಳ್ಗೆಯ ಹಿಂದೆ ಅವರ ಪರಿಶ್ರಮ ಅಡಗಿತ್ತು. ರಾಜಕೀಯದ ಏಳು-ಬೀಳುಗಳಲ್ಲಿ ದೇವೇಗೌಡರಿಗೆ ಬೆನ್ನೆಲುಬಾಗಿ ನಿಂತ ಅವರು, ಯಾವುದೇ ಪ್ರಚಾರ ಬಯಸದೆ ಮೌನವಾಗಿ ಕುಟುಂಬವನ್ನು ಮುನ್ನಡೆಸಿದ ನಿಜವಾದ ಶಕ್ತಿಯಾಗಿದ್ದರು ಎಂದು ಶಿವಕುಮಾರ್ ಸ್ಮರಿಸಿದರು.

ಮಾಜಿ ಸಿಎಂ  ಸಿದ್ದರಾಮಯ್ಯ ಸಂತಾಪ
ಜನತಾ ಪರಿವಾರದಲ್ಲಿದ್ದ ಕಾರಣ ದೇವೇಗೌಡರ ಕುಟುಂಬದೊಂದಿಗೆ ನಿಕಟ ಒಡನಾಟವಿದ್ದುದನ್ನು ಸ್ಮರಿಸಿದ ಸಿದ್ದರಾಮಯ್ಯ, ಚೆನ್ನಮ್ಮ ಅವರು ಕಷ್ಟ-ನೋವುಗಳನ್ನು ಧೈರ್ಯದಿಂದ ಎದುರಿಸಿದ ಗಟ್ಟಿಗಿತ್ತಿ ಎಂದು ಬಣ್ಣಿಸಿದರು. ದೇವೇಗೌಡರ ರಾಜಕೀಯ ಜೀವನದ ಏಳು-ಬೀಳುಗಳ ನಡುವೆ ದೊಡ್ಡ ಕುಟುಂಬವನ್ನು ಸಮರ್ಥವಾಗಿ ಮುನ್ನಡೆಸಿದ ಆದರ್ಶ ಗೃಹಿಣಿಯಾಗಿದ್ದರು. ದೇವೇಗೌಡರಿಗೆ ಈ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ದೊರೆಯಲಿ ಎಂದು ಸಂತಾಪ ಸೂಚಿಸಿದರು.

ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಸಂತಾಪ
ಚೆನ್ನಮ್ಮ ಅವರು ಸರಳತೆ ಮತ್ತು ತಾಳ್ಮೆಯ ಸಾಕಾರಮೂರ್ತಿಯಾಗಿದ್ದರು. ದೇವೇಗೌಡರ ಸುದೀರ್ಘ ಸಾರ್ವಜನಿಕ ಜೀವನಕ್ಕೆ ಭದ್ರ ಬುನಾದಿಯಾಗಿ ನಿಂತು ಇಡೀ ಕುಟುಂಬವನ್ನು ಮಮತೆಯಿಂದ ಮುನ್ನಡೆಸಿದ ಆದರ್ಶ ಮಾತೃಶಕ್ತಿಯಾಗಿದ್ದರು ಎಂದು ಪ್ರಲ್ಹಾದ ಜೋಶಿ ಸ್ಮರಿಸಿದರು.

ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಸಂತಾಪ
ಚೆನ್ನಮ್ಮ ಅವರ ಸರಳತೆ, ಸಹನೆ ಹಾಗೂ ಕುಟುಂಬಕ್ಕೆ ನೀಡಿದ ಅಚಲ ಬೆಂಬಲ ಸದಾ ಸ್ಮರಣೀಯ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದರು.

ವಿಪಕ್ಷ ನಾಯಕ ಆರ್‌.ಅಶೋಕ್‌ ಸಂತಾಪ
ಒಬ್ಬ ಕುಟುಂಬದ ಮಾತೃಮೂರ್ತಿಯ ಅಗಲಿಕೆ ತುಂಬಲಾರದ ನಷ್ಟವಾಗಿದೆ. ದೇವೇಗೌಡರು, ಕುಮಾರಸ್ವಾಮಿ ಹಾಗೂ ಕುಟುಂಬದ ಎಲ್ಲ ಸದಸ್ಯರಿಗೆ ತಮ್ಮ ಸಂತಾಪಗಳನ್ನು ಸಲ್ಲಿಸುತ್ತೇನೆ ಎಂದು ಆರ್. ಅಶೋಕ್ ಹೇಳಿದರು.

ಎಂಎಲ್‌ಸಿ ಸಿ.ಟಿ.ರವಿ ಸಂತಾಪ
ದೇವೇಗೌಡರ ರಾಜಕೀಯ ಏಳು-ಬೀಳುಗಳಲ್ಲಿ ಚೆನ್ನಮ್ಮ ಅವರು ಸದಾ ಬೆನ್ನೆಲುಬಾಗಿ ನಿಂತಿದ್ದರು. ಮನೆಗೆ ಬಂದ ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದರು. ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಿದರು.

ಇದರ ಜೊತೆಗೆ ಮಾಜಿ ಮುಖ್ಯಮಂತ್ರಿ  ಬಿ.ಎಸ್‌.ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ, ಸಚಿವ ಈಶ್ವರ್‌ ಖಂಡ್ರೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಮಾಜಿ ಸಚಿವ ಜಮೀರ್‌ ಅಹಮದ್‌ ಖಾನ್‌ ಸೇರಿದಂತೆ ಅನೇಕ ರಾಜಕೀಯ ಮುಖಂಡರು ಚೆನ್ನಮ್ಮ ದೇವೇಗೌಡ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿ, ದೇವೇಗೌಡರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡುವಂತೆ ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.

Continue Reading

Politics

ಕುಟುಂಬದ ಆಧಾರಸ್ತಂಭ ಕಳೆದುಕೊಂಡೆವು: ನಿಖಿಲ್ ಕುಮಾರಸ್ವಾಮಿ ಭಾವುಕ ನುಡಿ

Published

on

ಬೆಂಗಳೂರು: “ನಮ್ಮ ಹೆಮ್ಮೆಯ ಅಜ್ಜಿ, ಮಾಜಿ ಪ್ರಧಾನಮಂತ್ರಿಗಳಾದ ಶ್ರೀ ಹೆಚ್.ಡಿ. ದೇವೇಗೌಡ ಸಾಹೇಬರ ಧರ್ಮಪತ್ನಿ ಚೆನ್ನಮ್ಮನವರು ಇಂದು ನಮ್ಮನ್ನು ಅಗಲಿದ್ದಾರೆ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರ ಅಗಲಿಕೆ ಇಡೀ ಕುಟುಂಬಕ್ಕೆ ಮತ್ತು ನನಗೆ ತುಂಬಲಾರದ ನಷ್ಟ ತಂದಿದೆ” ಎಂದು  ಮೊಮ್ಮಗ  ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದು ಹೇಳಿದ್ದಾರೆ.

 

ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು,  ನಮ್ಮ ಹೆಮ್ಮೆಯ ಅಜ್ಜಿ, ಮಾಜಿ ಪ್ರಧಾನಮಂತ್ರಿಗಳಾದ ಶ್ರೀ ಹೆಚ್.ಡಿ. ದೇವೇಗೌಡ ಸಾಹೇಬರ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮನವರು ಇಂದು ನಮ್ಮನ್ನು ಅಗಲಿದ್ದಾರೆ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ. ಅವರ ಅಗಲಿಕೆ ಇಡೀ ಕುಟುಂಬಕ್ಕೆ ಮತ್ತು ನನಗೆ ತುಂಬಲಾರದ ನಷ್ಟ ತಂದಿದೆ ಎಂದು ಸಂತಾಪ ಸೂಚಿಸಿದ್ದಾರೆ.

ಅಜ್ಜಿ ಕೇವಲ ನಮಗೆ ಅಜ್ಜಿಯಾಗಿರಲಿಲ್ಲ; ಇಡೀ ಕುಟುಂಬವನ್ನು ಒಟ್ಟಾಗಿ ಹಿಡಿದಿಟ್ಟಿದ್ದ ಗಟ್ಟಿ ನೆಲೆ ಅವರು. ನಮ್ಮ ಮನೆಯ ದೊಡ್ಡ ಆಧಾರಸ್ತಂಭ. ಮನೆಗೆ ಬಂದ ಯಾರೊಬ್ಬರನ್ನೂ ಅವರು ಹಸಿದ ಹೊಟ್ಟೆಯಲ್ಲಿ ಕಳುಹಿಸುತ್ತಿರಲಿಲ್ಲ; ಬಂದವರೆಲ್ಲರಿಗೂ ಪ್ರೀತಿಯಿಂದ ಉಣಬಡಿಸುತ್ತಿದ್ದ ಅವರ ಆ ಕೈಗಳು ಸಾಕ್ಷಾತ್ ಅನ್ನಪೂರ್ಣೇಶ್ವರಿಯ ಸ್ವರೂಪವಾಗಿತ್ತು. ಅವರ ಆತಿಥ್ಯ, ಸರಳತೆ ಮತ್ತು ಮಮತೆಯ ಮಾತುಗಳು ನನ್ನ ಜೀವನದ ದೊಡ್ಡ ಸ್ಪೂರ್ತಿ. ಅವರು ಕಲಿಸಿದ ಬದುಕಿನ ಪಾಠಗಳು, ತೋರಿದ ಪ್ರೀತಿ ನನ್ನಲ್ಲಿ ಶಾಶ್ವತವಾಗಿ ಜೀವಂತವಾಗಿರುತ್ತದೆ ಎಂದು ಭಾವುಕವಾಗಿ ಪೋಸ್ಟ್‌ ಮಾಡಿದ್ದಾರೆ.

ನಮ್ಮ ಇಡೀ ಕುಟುಂಬದ ದಾರಿದೀಪವಾಗಿದ್ದ ಅಜ್ಜಿಯ ಆತ್ಮಕ್ಕೆ ಆ ತಾಯಿ ಚಾಮುಂಡೇಶ್ವರಿ ಸದ್ಗತಿ ಕರುಣಿಸಲಿ. ಅವರ ಅಗಲಿಕೆಯ ಈ ತೀವ್ರ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರು ನಮ್ಮ ಇಡೀ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

Continue Reading

Trending

error: Content is protected !!