Chikmagalur
ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಹಗರಣಗಳ ಸರ್ಕಾರ, ದಲಿತ ವಿರೋಧಿ, ಶೂನ್ಯ ಅಭಿವೃದ್ಧಿ ಸರ್ಕಾರ. ಇದರ ವಿರುದ್ಧ ಜನಾಂದೋಲನ ಮಾಡಬೇಕು – ವಿ. ಸುನೀಲ್‌ಕುಮಾರ್
ಚಿಕ್ಕಮಗಳೂರು: ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಹಗರಣಗಳ ಸರ್ಕಾರ, ದಲಿತ ವಿರೋಧಿ, ಶೂನ್ಯ ಅಭಿವೃದ್ಧಿ ಸರ್ಕಾರ. ಇದರ ವಿರುದ್ಧ ಜನಾಂದೋಲನ ಮಾಡಬೇಕು ಎಂದು ಕಾರ್ಕಳ ಶಾಸಕರಾದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನೀಲ್‌ಕುಮಾರ್ ಅವರು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ನಡೆದ ಪಕ್ಷದ ಜಿಲ್ಲಾ ವಿಶೇಷ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿ ಸಿದ್ದರಾಮಯ್ಯ ಸರ್ಕಾರ ಒಂದು ವರ್ಷದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಜನ ವಿರೋಧಿ ಆಡಳಿತ ನೀಡುತ್ತದೆ ಎಂದು ಯಾರೂ ಕೂಡ ಭಾವಿಸಿರಲಿಲ್ಲ ಎಂದು ಹೇಳಿದರು.
ಒಂದಲ್ಲಾ ಒಂದು ಇಲಾಖೆಯಲ್ಲಿ ಹಗರಣಗಳು ಬೆಳಕಿಗೆ ಬರುತ್ತಲೇ ಇವೆ. ಹಲವು ವರ್ಷಗಳಿಂದ ಜನರಿಗೆ ಮಂಕುಬೂದಿ ಎರಚಿ ಸಿದ್ದರಾಮಯ್ಯ ಅಧಿಕಾರ ನಡೆಸಿದ್ದಾರೆ. ಕಳೆದ ಒಂದು ವರ್ಷಗಳಲ್ಲಿ ಒಂದೇ ಒಂದು ಗುದ್ದಲಿ ಪೂಜೆಯನ್ನು ಮಾಡದೇ ಇರುವಂತಹ ಸರ್ಕಾರ, ಶೂನ್ಯ ಅಭಿವೃದ್ಧಿಯ ಸರ್ಕಾರ. ಮೈಸೂರಿನ ಮುಡಾದಲ್ಲಿ ೧೮೭ ಕೋಟಿ ಹಗರಣ ನಡೆದಿದೆ. ಪರಿಶಿಷ್ಟ ಪಂಗಡದವರ
ಕಲ್ಯಾಣಕ್ಕಾಗಿ ಬಳಸಬೇಕಾದಂತಹ ಹಣವನ್ನು ಇನ್ನೊಂದು ಯಾವುದು ಅಕೌಂಟಿಗೆ ಹಾಕಿ ಅಲ್ಲಿಂದ ಚುನಾವಣೆಗೆ ಬಳಸಿರುವ ಸರ್ಕಾರ ಇದಾಗಿದೆ. ಈ ಹಿಂದೆ ಯಾವತ್ತೂ ಕೂಡ ಈ ರೀತಿಯ ಸರ್ಕಾರ ನಾವುಗಳು ನೋಡಿರಲಿಲ್ಲ ಎಂದರು.
ಓರ್ವ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡ ನಂತರದಲ್ಲಿ ಒಂದು ಹಗರಣ ಬಯಲಿಗೆ ಬಂದಿತು. ದುರಂತವೆಂದರೆ ಡೆತ್ ನೋಟ್‌ನಲ್ಲಿ ಸಚಿವರ ಹೆಸರನ್ನು ಬರೆದಿಡಲಾಗಿತ್ತು. ಆದರೆ, ಆ ಸಚಿವರ ವಿರುದ್ಧ ಈವರೆಗೆ ಯಾವುದೇ ಎಫ್‌ಐಆರ್ ಹಾಕಲಿಲ್ಲ. ವಿಧಾನಸಭೆಯಲ್ಲಿ ಇದರ ಬಗ್ಗೆ ಪ್ರಶ್ನೆ ಮಾಡಿದಾಗ ಉತ್ತರವನ್ನು ಕೊಡಲು ಮುಖ್ಯಮಂತ್ರಿ ಅವರು ತಡವರಿಸಿಕೊಂಡರು, ಸಚಿವರನ್ನ ಸಮರ್ಥನೆ ಮಾಡಲು ಪ್ರಯತ್ನಿಸಿದರು ಎಂದ ಅವರು, ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಬದಲು ಬಿಜೆಪಿ ಆಡಳಿತದಲ್ಲಿ ಹಗರಣ ನಡೆದಿದೆ. ಅದನ್ನು ಪಟ್ಟಿ ಮಾಡುತ್ತೇವೆಂದು ಹೇಳಿ ಪಟ್ಟಿ ಮಾಡಲು ಹೊರಟಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಹಗರಣಗಳು ನಡೆದಿದ್ದರೆ ಈ ಕಳೆದ ಒಂದು ವರ್ಷದಲ್ಲಿ ಏಕೆ ತನಿಖೆ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.
ದಲಿತರ ಭೂಮಿಯನ್ನ ತನ್ನ ಬಾಮೈದನ ಹೆಸರಿನಲ್ಲಿ ಖರೀದಿ ಮಾಡಿ ಹೆಂಡತಿಗೆ ದಾನವಾಗಿ ಕೊಡಿಸಿದ್ದಾರೆ. ಬಿಜೆಪಿ ಕಾಲದಲ್ಲಿ ಮುಡಾದಿಂದ ಸೈಟ್ ಗಳನ್ನ ಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ, ಬಿಜೆಪಿ ಕಾಲದ ಅನುದಾನವನ್ನು ರದ್ದು ಮಾಡಲು ನಿಮಗೆ ಆಗುತ್ತದೆ, ಬಿಜೆಪಿ ಕಾಲದ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರಲು ನಿಮಗೆ ಆಗೋದಿಲ್ಲ, ಬಿಜೆಪಿ ಕಟ್ಟಿರುವಂತ ರಾಮ ಮಂದಿರವನ್ನು ನೋಡಲು ನಿಮ್ಮಿಂದ ಆಗುವುದಿಲ್ಲ, ಬಿಜೆಪಿ ಕೊಟ್ಟ ಸೈಟ್ ಮಾತ್ರ ಬೇಕು. ನಿಮಗೆ ನೈತಿಕತೆ ಇದ್ದಿದ್ದರೆ ಬಿಜೆಪಿ ಕಾಲದಲ್ಲಿ ಕೊಟ್ಟಿರುವಂತಹ ಸೈಟನ್ನು ವಾಪಸ್ ಕೊಡಬೇಕಾಗಿತ್ತು ಎಂದು ಹೇಳಿದರು.
ರಾಜ್ಯ ಸರ್ಕಾರದ ವಿರುದ್ಧ ಜನಾಭಿಪ್ರಾಯವನ್ನು ಮೂಡಿಸುವ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕು. ಸ್ಥಳೀಯ ವಿಷಯಗಳನ್ನು ಕುರಿತು ತೀವ್ರವಾಗಿ ಹೋರಾಟ ನಡೆಸಬೇಕು, ಆ ಮೂಲಕ ಜನರಿಗೆ ನ್ಯಾಯ ಕೊಡಿಸಬೇಕು ಎಂದು ಕರೆ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮಲ್ಲಿರುವ ಭಿನ್ನಾಭಿಪ್ರಾಯದಿಂದ ಹೊರಗೆ ಬರಬೇಕು. ನಾವುಗಳು ವ್ಯಕ್ತಿಗತವಾಗಿ ಕೆಲಸ ಮಾಡುತ್ತಿಲ್ಲ, ಪಕ್ಷದ ಕೆಲಸ ಮಾಡುತ್ತಿದ್ದೇವೆ. ಪಕ್ಷದ ನಿರ್ಣಯಕ್ಕೆ ಬದ್ಧರಾಗಬೇಕು. ವಿರುದ್ಧವಾಗಿ ನಡೆದುಕೊಂಡರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ವಿಧಾನಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್, ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ, ಮಾಜಿ ಸಚಿವ ಡಿ.ಎನ್. ಜೀವರಾಜ್, ಮುಖಂಡರಾದ ಎಚ್.ಸಿ. ಕಲ್ಮರಡಪ್ಪ, ದೀಪಕ್ ದೊಡ್ಡಯ್ಯ, ದಿನೇಶ್ ದೇವವೃಂದ, ರವೀಂದ್ರ ಬೆಳವಾಡಿ, ಪುಣ್ಣಪಾಲ್, ಡಾ. ನರೇಂದ್ರ ಉಪಸ್ಥಿತರಿದ್ದರು. ಸೀತಾರಾಮಭರಣ್ಯ ಪ್ರಾರ್ಥಿಸಿದರು. ಚೈತ್ರಶ್ರೀ ಮಾಲತೇಶ್ ಸ್ವಾಗತಿಸಿದರು
Chikmagalur
ರಾಹುಲ್ ಗಾಂಧಿ ಹೇಳಿಕೆ ದೇಶದ ಸಮಗ್ರತೆ ಮತ್ತು ಐಕ್ಯತೆಗೆ ಧಕ್ಕೆ ಉಂಟಾಗಲಿದೆ: ಬಿಜೆಪಿ
ಚಿಕ್ಕಮಗಳೂರು: ರಾಹುಲ್‌ಗಾಂಧಿ ಹೇಳಿಕೆಯನ್ನು ವಿರೋಧಿಸಿ ನಗರದಲ್ಲಿ ಶನಿವಾರ ಬಿಜೆಪಿ ಯುವಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಬಿಜೆಪಿ ಕಚೇರಿ ಪಾಂಚಜನ್ಯದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ಆಜಾದ್‌ವೃತ್ತಕ್ಕೆ ಆಗಮಿಸಿ, ಕಾಂಗ್ರೆಸ್ ಪಕ್ಷ ಮತ್ತು ರಾಹುಲ್‌ಗಾಂಧಿ ವಿರುದ್ಧ ಘೋಷಣೆ ಕೂಗಿದರು. ದೇಶವನ್ನು ಕೀಳಾಗಿ ಕಾಣುವ ರಾಹುಲ್‌ಗಾಂಧಿಗೆ ಧಿಕ್ಕಾರ, ರಾಷ್ಟ್ರಕಂಟಕ ರಾಹುಲ್‌ಗಾಂಧಿಗೆ ಧಿಕ್ಕಾರವೆಂಬ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಯಿತು.
ಎಐಸಿಸಿ ನೂತನ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಮುಖಂಡ ಹಾಗೂ ಸಂಸದ ರಾಹುಲ್‌ಗಾಂಧಿಯವರು ನಮ್ಮ ಹೋರಾಟ ಭಾರತದ ವಿರುದ್ಧ ಎಂದು ಹೇಳಿಕೆ ನೀಡಿದ್ದು, ಇದು ದುರುದ್ದೇಶಪೂರ್ವಕ ಮತ್ತು ಪ್ರಚೋದನಾತ್ಮಕ ಹೇಳಿಕೆಯಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ರೀತಿಯ ಹೇಳಿಕೆ ದೇಶದ ಸಮಗ್ರತೆ ಮತ್ತು ಐಕ್ಯತೆಗೆ ಧಕ್ಕೆ ಉಂಟಾಗಲಿದೆ. ರಾಹುಲ್‌ಗಾಂಧಿ ನೀಡಿರುವ ಹೇಳಿಕೆ ರಾಷ್ಟ್ರವಿರೋಧಿ ಹಾಗೂ ದೇಶದಲ್ಲಿ ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸುವ ಹೇಳಿಕೆಯಾಗಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಲಾಗಿದೆ.
ಕಾಂಗ್ರೆಸ್ ಕಾರ್ಯಕರ್ತರಿಗೆ ದೇಶವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ, ಪ್ರಚೋದನಾತ್ಮಕ ಹೇಳಿಕೆ ಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೀಡಿಯೋ ತುಣುಕುಗಳನ್ನು ಆಧರಿಸಿ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜಶೆಟ್ಟಿ, ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್‌ಕೋಟ್ಯಾನ್, ಪ್ರಧಾನಕಾರ್ಯದರ್ಶಿ ಶಶಿಆಲ್ದೂರು, ಬಿಜೆಪಿ ಪ್ರಧಾನಕಾರ್ಯದರ್ಶಿ ಡಾ.ನರೇಂದ್ರ, ಮಹಿಳಾ ಮೋರ್ಚಾ ಅಧ್ಯಕ್ಷೆ ಜಸಂತಾ ಅನಿಲ್‌ಕುಮಾರ್, ಮಾಧ್ಯಮ ಪ್ರಮುಖ್ ಅಂಕಿತಾ, ಹಿಂದುಳಿದ ವರ್ಗ ರಾಜ್ಯಕಾರ್ಯದರ್ಶಿ ಬಿ.ರಾಜಪ್ಪ, ಮುಖಂಡರಾದ ನೆಟ್ಟೆಕೆರೆಹಳ್ಳಿ ಜಯಣ್ಣ, ಹಿರೇಮಗಳೂರು ರೇವನಾಥ ಇದ್ದರು.
Chikmagalur
ಕಳಸ ಠಾಣಾಧಿಕಾರಿ ಮೇಲೆ ಪತ್ನಿಯಿಂದಲೇ ದೂರು ದಾಖಲು
ಕಳಸ: ಕಳಸ ಆರಕ್ಷಕ ಠಾಣೆಯ ಪಿಎಸ್‌ಐ ನಿತ್ಯಾನಂದ ಗೌಡ ವಿರುದ್ಧ ಅವರ ಪತ್ನಿಯೇ ದೂರು ದಾಖಲಿಸಿರುವ ಘಟನೆ ನಡೆದಿದೆ. ಕಳಸ ಠಾಣೆಯ ಠಾಣಾಧಿಕಾರಿ ನಿತ್ಯಾನಂದ ಅವರ ಪತ್ನಿ ಅಮಿತಾ ಅವರು ಕಳಸ ಠಾಣೆಯಲ್ಲಿ ಶುಕ್ರವಾರ ತನ್ನ ಪತಿ ವಿರುದ್ಧ ದೂರು ದಾಖಲಿಸಿದ್ದರು.
ಅಮಿತಾ ಅವರು ನೀಡಿದ ದೂರಿನಲ್ಲಿ ತನಗೆ ತನ್ನ ಪತಿ ನಿತ್ಯಾನಂದ ತೀವ್ರ ಹಲ್ಲೆ ನಡೆಸಿದ್ದು ದೌರ್ಜನ್ಯ ನಡೆಸಿದ್ದಾರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರಕರಣ ದಾಖಲಿಸಿದ್ದರು. ಜೊತೆಗೆ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬರುವವರೆಗೂ ತಾನು ಠಾಣೆ ಬಿಟ್ಟು ಹೋಗಲ್ಲ ಎಂದು ಹೈಡ್ರಾಮಾ ನಡೆಸಿದ್ದರು.
ಅಮಿತಾ ತಾಯಿಯಿಂದಲೇ ಸ್ಪಷ್ಟೀಕರಣ : ಅಮಿತಾ ಅವರು ನೀಡಿದ ದೂರಿಗೆ ಸಂಬಂಧಿಸಿದಂತೆ ಅಮಿತಾ ಅವರ ತಾಯಿ ವಿಡಿಯೋ ಮುಖೇನ ಸ್ಪಷ್ಟೀಕರಣ ನೀಡಿದ್ದು ” ನಿತ್ಯಾನಂದ ತುಂಬಾ ಒಳ್ಳೆಯ ವ್ಯಕ್ತಿ ಅವರು ಯಾವ ತಪ್ಪನ್ನೂ ಮಾಡಿಲ್ಲ ಅವರ ಮೇಲೆ ಯಾವುದೇ ಪ್ರಕರಣ ದಾಖಲಿಸಬೇಡಿ ಅಮಿತಾ ಅವರಿಗೆ ತುಂಬಾ ಕೋಪವಿದ್ದು ಅವರು ಬೇರೆಯವರ ಕುಮ್ಮಕ್ಕಿನಿಂದ ಈ ರೀತಿಯಾಗಿ ದೂರು ದಾಖಲಿಸಿದ್ದಾರೆ ಇದರಲ್ಲಿ ನಿತ್ಯಾನಂದ ಅವರ ತಪ್ಪೇನು ಇಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.
ನಿತ್ಯಾನಂದ ಅವರಿಂದಲೂ ಅಮಿತಾ ಮೇಲೆ ಪ್ರತಿದೂರು ದಾಖಲು
ಇತ್ತ ಶುಕ್ರವಾರ ನಿತ್ಯಾನಂದ ಅವರ ಪತ್ನಿ ದೂರು ದಾಖಲಿಸಿದ ಬೆನ್ನಲ್ಲೇ ಶನಿವಾರ ನಿತ್ಯಾನಂದ ಕೂಡ ಅಮಿತಾ ಅವರ ಮೇಲೆ ಪ್ರತಿದುರು ದಾಖಲಿಸಿದ್ದಾರೆ. ನಿತ್ಯಾನಂದ ಅವರ ದೂರಿನ ಸಾರಾಂಶದಲ್ಲಿ ” ನಾನು ಸುಮಾರು 11 ವರ್ಷಗಳ ಹಿಂದೆ ಮದುವೆಯಾಗಿದ್ದು ಒಬ್ಬ ಮಗನಿರುತ್ತಾನೆ. ನನ್ನ ಪತ್ನಿ ಅಮಿತಾ ಹಾಗೂ ಮಗ ಉಡುಪಿಯಲ್ಲಿ ವಾಸವಿದ್ದು, ಸ್ವಂತ ಮನೆಯನ್ನು ಹೊಂದಿರುತ್ತಾರೆ. ನನಗೆ ಹಾಗೂ ನನ್ನ ಪತ್ನಿಯ ನಡುವೆ ಕೌಟುಂಬಿಕವಾಗಿ ಹೊಂದಾಣಿಕೆ ಇಲ್ಲದ ಕಾರಣ ಹೇಗೋ ಮಗನಿಗಾಗಿ ಇಲ್ಲಿಯವರೆಗೆ ಜೀವನ ಮಾಡಿಕೊಂಡು ಬಂದಿರುತ್ತೇನೆ.
ನನ್ನ ಪತ್ನಿಗೆ ವಿವಾಹವೇತರ ಅಕ್ರಮ ಸಂಬಂಧವಿದ್ದು ಹಾಗೂ ನಾನು ಅದನ್ನು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ನನ್ನ ಇಲಾಖೆಯ ಎಲ್ಲಾ ಹಿರಿಯ ಅಧಿಕಾರಿಗಳಿಗೆ ಸುಳ್ಳು ಆರೋಪ ಮಾಡಿ ದೂರು ನೀಡಿರುತ್ತಾಳೆ. ಇದರಿಂದ ಬೇಸತ್ತು ನಾನು 2024 ನೇ ಸಾಲಿನಲ್ಲಿ ಉಡುಪಿಯ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಚೇದನ ಕೋರಿ ಸರ್ಜಿ ಸಲ್ಲಿಸಿದ್ದು, ಅದರಂತೆ ವಿಚಾರಣೆ ನಡೆಯುತ್ತಿರುತ್ತದೆ. ಅದರಂತೆ 17/01/2025 ರಂದು ಉಡುಪಿಯ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆ ಇದ್ದು, ನಾನು ರಜೆಯ ಮೇಲೆ ತೆರಳಿ ನನ್ನ ವಕೀಲರ ಸಮಕ್ಷಮ ನ್ಯಾಯಾಲಯಕ್ಕೆ ಹಾಜರಾಗಿ ದಾಖಲಾತಿಗಳನ್ನು ನೀಡಿ ಬಂದಿರುತ್ತೇನೆ.ಈ ದಿನ ನನ್ನ ಪತ್ನಿಯು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಿರುವುದಿಲ್ಲ. ನಾನು
ವಾಪಾಸು ನ್ಯಾಯಾಲಯದಿಂದ ಹೊರಟು ಬರುತ್ತಿರುವಾಗ ನನಗೆ ನನ್ನ ಪತ್ನಿಯು ಹಲವು ಬಾರಿ ದೂರವಾಣಿ ಕರೆ ಮಡಿ ನಿನ್ನನ್ನು ಇಲಾಖೆಯಿಂದ ತೆಗಿಸುತ್ತೇನೆ. ಹಾಗೂ ನಿನ್ನ ಕಥೆ ಮುಗಿಸುತ್ತೇನೆಂದು ಬೆದರಿಕೆ ಹಾಕಿರುತ್ತಾಳೆ. ಅದರಂತೆ ನಾನು ವಾಪಾಸು ಬಂದು ನನ್ನ ಪೊಲೀಸ್ ವಸತಿ ಗೃಹದಲ್ಲಿರುವಾಗ ರಾತ್ರಿ ಸುಮಾರು 08:30 ಗಂಟೆಗೆ ನನ್ನ ಮನೆಯ ಬಾಗಿಲು ಗೋಡೆ ಹಾಗೂ ಕಿಟಕಿಗೇ ಯಾರೋ ಕಲ್ಲುಗಳಿಂದ ಹೊಡೆಯುತ್ತಿದ್ದ ಶಬ್ಧ ಕೇಳುತ್ತಿದ್ದು, ಆ ಸಮಯ ನಾನು ಕಿಟಕಿಯ ಮರೆಯಿಂದ ಇಣಿಕಿ ಯಾರು ನೀವು ಎಂದು ಕೇಳಿದಾಗ ನನ್ನ ಮನೆಯ ಕಿಟಕಿಯ ಗಾಜಿಗೆ ಕಲ್ಲಿನಲ್ಲಿ ಜೋರಾಗಿ ಹೊಡೆದಿದ್ದು, ಆ ಸಮಯ ಕಿಟಕಿಯ ಗಾಜುಗಳು ಒಡೆದು ಹೋಗಿ, ಮನೆಯ ಒಳಗೆ ಚೆಲ್ಲಾಪಿಲ್ಲಿಯಾಗಿ ಗಾಜಿನ ಚೂರುಗಳು ಮನೆಯ ಒಳಗೆ ಬಿದ್ದಿರುತ್ತವೆ.
ಆ ಸಮಯ ಹೊಡೆದಿರುವುದು ಯಾರೆಂಬುದಾಗಿ ಒಡೆದ ಗಾಜಿನ ಕಿಟಕಿಯಿಂದ ಇಣುಕಿ ನೋಡಿದಾಗ ನನ್ನ ಪತ್ನಿ ಅಮಿತಾ ಹಾಗೂ ಇನ್ನಿಬ್ಬರು ಯಾರೋ ವ್ಯಕ್ತಿಗಳು ಕೈಯಲ್ಲಿ ಕಲ್ಲು ದೊಣ್ಣೆ ಹಿಡಿದುಕೊಂಡು ಇರುವುದು ಕಂಡು ಬಂದಿದ್ದು ನನ್ನನ್ನು ಕಂಡು ಆಕೆಯೊಂದಿಗೆ ಬಂದವರು ಯಾವುದೋ ಕಾರು ಅಥವಾ ಇತರ ಯಾವುದೋ ವಾಹನದಲ್ಲಿ ಹೋದ ರೀತಿ ಶಬ್ದ ಕೇಳಿರುತ್ತದೆ. ಆ ಸಮಯ ನಾನು ಗಾಬರಿಗೊಂಡು ಠಾಣೆಯ ಕರ್ತವ್ಯದಲ್ಲಿದ್ದ ಸಿಬ್ಬಂದಿ ಹಾಗೂ ನನ್ನ ತಂಗಿ ಮೇನಕಾರವರಿಗೆ ದೂರವಾಣಿ ಕರೆ ಮಾಡಿ ಕೂಡಲೇ ಬರಲು ತಿಳಿಸಿರುತ್ತೇನೆ. ಅಷ್ಟರಲ್ಲಿ ನನ್ನ ತಂಗಿ ಮೇನಕಾ, ತಂಗಿಯ ಗಂಡ ಚಂದ್ರಕಾಂತ್ ಕೊಠಾರಿ ಸಿಬ್ಬಂದಿಯವರು ಬಂದಿದ್ದು, ಆ ಸಮಯ ನನ್ನ ಪತ್ನಿಯು ನನ್ನ ಗಂಡ ನನಗೆ ಹೊಡೆದು ಗಾಯಗೊಳಿಸಿದ್ದು, ನನ್ನನ್ನು ಕಾಪಾಡಿ ಎಂದು ಜೋರಾಗಿ ಅಳುತ್ತಾ ಪೊಲೀಸ್ ವಸತಿ ಗೃಹದ ಸುತ್ತಾ ಮುತ್ತಾ ಕಿರುಚಾಡುತ್ತಾ ನನ್ನನ್ನು ಕಾಪಾಡಿ ಎಂದು ಸಾರ್ವಜನಿಕರನ್ನು ಕರೆಸಿಕೊಳ್ಳೂವಂತೆ ಮಾಡಿದ್ದಳು.
ಅಷ್ಟರಲ್ಲೆ ನಾನು ಸಿಬ್ಬಂದಿಗಳ ಸಮಕ್ಷಮ ಬಾಗಿಲು ತೆಗೆದಾಗ ನನ್ನ ಪತ್ನಿಯು ನನ್ನ ಕೊರಳ ಪಟ್ಟಿಗೆ ಕೈಹಾಕಿ ಅಲ್ಲೆ ಇದ್ದ ಕಲ್ಲಿನಿಂದ ಹಲ್ಲೆ ಮಾಡಲು ಮುಂದಾಗಿದ್ದು, ಆ ಸಮಯ ಸಿಬ್ಬಂದಿಗಳು ತಡೆದು ಬುದ್ದಿವಾದ ಹೇಳಿರುತ್ತಾರೆ. ನಂತರ ನನ್ನ ಪತ್ನಿಯನ್ನು ಸಿಬ್ಬಂದಿಗಳು ಸಂತೈಸಿ ಠಾಣೆಗೆ ಕರೆದುಕೊಂಡು ಹೋಗಿದ್ದು, ಈ ಬಗ್ಗೆ ನಾನು ಪೊಲೀಸ್ ಅಧೀಕ್ಷಕರು ಹಾಗೂ ಎಲ್ಲ ಹಿರಿಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ತಿಳಿಸಿರುತ್ತೇನೆ. ನಂತರ ಠಾಣೆಗೆ ನನ್ನ ಪತ್ನಿಯು ಮಹಮ್ಮದ್ ರಫೀಕ್ ನನ್ನು ಠಾಣೆಗೆ ಕರೆಯಿಸಿ ಆತನೊಂದಿಗೆ ಎಲ್ಲವನ್ನು ತಿಳಿಸುತ್ತಿರುವುದು ಕಂಡು ಬಂದಿರುತ್ತದೆ. ಆದ್ದರಿಂದ ನನ್ನ ಪತ್ನಿಯು ನಾನು ಪೊಲೀಸ್ ವಸತಿಗೃಹದಲ್ಲಿ ಒಬ್ಬನೇ ಇರುವುದನ್ನು ಪಾಲೋ ಮಾಡಿಕೊಂಡು ಬಂದು ನನ್ನನ್ನು ಕೊಲ್ಲುವ ಉದ್ದೇಶದಿಂದ ಮಹಮ್ಮದ್ ರಫೀಕ್ ಹಾಗೂ ಇತರರೊಂದಿಗೆ ಬಂದು ಹಲ್ಲೆ ಮಾಡಲು ಪ್ರಯತ್ನಿಸಿ ಕಲ್ಲು ಹಾಗೂ ಮಾರಕ ಆಯುಧಗಳಿಂದ ಮನೆಯ ಕಿಟಕಿಯ ಗಾಜನ್ನು ಒಡೆದು ಹಾಕಿದ ನನ್ನ ಪತ್ನಿ ಅಮಿತಾ ಹಾಗೂ ಆಕೆಗೆ ಸಹಕರಿಸಿದ ಮಹಮ್ಮದ್ ರಫೀಕ್ ಹಾಗೂ ಇತರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಕೋರಿದೆ” ಎಂದು ನಿತ್ಯಾನಂದ ಅವರು ಪ್ರತಿದೂರಿನಲ್ಲಿ ದಾಖಲಿಸಿದ್ದಾರೆ.
Chikmagalur
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಎರಡನೇ ಬಾರಿಗೆ ಟಿ.ರಾಜಶೇಖರ್ ಆಯ್ಕೆ
ಚಿಕ್ಕಮಗಳೂರು-ಇಲ್ಲಿನ ಜಿಲ್ಲಾ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ಎರಡನೇ ಬಾರಿಗೆ ಟಿ.ರಾಜಶೇಕರ್, ಉಪಾಧ್ಯಕ್ಷರಾಗಿ ಟಿ.ಡಿ.ಮಲ್ಲೇಶ್ ಗೌರವ ಕಾರ್ಯದರ್ಶಿಯಾಗಿ ಎಂ.ಎಸ್ ಪ್ರದೀಪ್‌ಕುಮಾರ್ ಆಯ್ಕೆಯಾಗಿದ್ದಾರೆ.
ಇಂದು ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಮೇಲ್ಕಂಡವರನ್ನು ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ವೆಂಕಟೇಶ್ ಘೋಷಿಸಿದರು.
ನಂತರ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಅಧ್ಯಕ್ಷ ಟಿ.ರಾಜಶೇಖರ್ ಸಮಾಜದ ಹಿರಿಯರು ಸ್ಥಾಪಿಸಿದ ಒಕ್ಕಲಿಗರ ಸಂಘದ ಅಭಿವೃದ್ಧಿಗೆ ಇಂದು ಆಯ್ಕೆಯಾದ ನಿರ್ದೇಶಕರು, ಪದಾಧಿಕಾರಿಗಳು ಶ್ರಮಿಸಬೇಕೆಂದು ಕರೆ ನೀಡಿದರು.
ಕಳೆದ ಮೂರು ವರ್ಷದ ಅವಧಿಯಲ್ಲಿ ಸಾಧಿಸಿರುವ ಅಭಿವೃದ್ಧಿ ಕಾರ್ಯಗಳನ್ನು ಮೌಲ್ಯಮಾಪನ ಮಾಡಿ ನಿರ್ದೇಶಕರುಗಳು ನನ್ನ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಿದ್ದಾರೆ, ಜನಾಂಗದ ಮತ್ತು ಹಿರಿಯರ ಗೌರವಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುವುದಾಗಿ ಭರವಸೆ ನೀಡಿದರು.
ಮುಂದಿನ ಮೂರು ವರ್ಷಗಳ ಅವಧಿಗೆ ಮತ್ತೋಮ್ಮೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಈ ಅವಧಿಯಲ್ಲಿ ಸಮಾಜದ ಮತ್ತು ಸಂಘಟನೆಗೆ ಒತ್ತುನೀಡಿ ಕೆಲಸ ಮಾಡಲು ಬದ್ಧವಾಗಿದ್ದೇವೆ, ಆಯ್ಕೆ ಮಾಡಿರುವ ನಿರ್ದೇಶಕರು ಹಾಗೂ ಸದಸ್ಯರಿಗೆ ಧನ್ಯವಾದಗಳನ್ನು ಸಲ್ಲಿಸಿದರು.
ಉಪಾಧ್ಯಕ್ಷ ಟಿ.ಡಿ ಮಲ್ಲೇಶ್ ಮಾತನಾಡಿ ನೂತನ ಪದಾಧಿಕಾರಿಗಳ ಮೇಲೆ ವಿಶ್ವಾಸವಿಟ್ಟು ಸಹಕಾರದಿಂದ ಆಯ್ಕೆ ಮಾಡಿರುವ ೨೫ ನಿರ್ದೇಶಕರುಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಗೌರವ ಕಾರ್ಯದರ್ಶಿ ಎಂ.ಎಸ್ ಪ್ರದೀಪ್ ಕುಮಾರ್ ಮಾತನಾಡಿ ಸಂಘದ ಈ ಸ್ಥಾನಕ್ಕೆ ಅಗೌರವ ತರದೆ ನಿಮ್ಮೆಲ್ಲರ ಸಲಹೆ ಸಹಕಾರ ಪಡೆದು ಸಮುದಾಯದ ಅಭಿವೃದ್ಧಿಗೆ ಅಧ್ಯಕ್ಷರೊಂದಿಗೆ ಸೇರಿ ಶ್ರಮಿಸುವುದಾಗಿ ಭರವಸೆ ನೀಡಿದರು.
ಮಾಜಿ ಗೌರವ ಕಾರ್ಯದರ್ಶಿ ಎಂ.ಸಿ.ಪ್ರಕಾಶ್ ಮಾತನಾಡಿ ಒಕ್ಕಲಿಗರ ಸಂಘ ಹಿಂದಿನವರು ಹಾಕಿದ ಬುನಾದಿಯಾಗಿದ್ದು ಜಿಲ್ಲೆ, ರಾಜ್ಯದಲ್ಲಿಯೇ ಪ್ರತಿಷ್ಠಿತ ಸಂಘಟನೆಯಾಗಿದೆ, ಸಂಘದಲ್ಲಿ ಇದುವರೆಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಸಂಘದಲ್ಲಿದ್ದ ಸದಸ್ಯರು ಹೊರಗಡೆ ಸಂಘದ ಕುರಿತು ಅಪಪ್ರಚಾರ ಮಾಡಬೇಡಿ ಎಂದು ಮನವಿ ಮಾಡಿದರು.
ಜಿಲ್ಲಾ ಒಕ್ಕಲಿಗರ ಸಂಘ ಇತರೆ ಸಮಾಜದ ಸಂಘಟನೆಗಳಿಗೆ ಮಾದರಿಯಾಗಬೇಕು, ಸಂಘದಲ್ಲಿ ಪಾರದರ್ಶಕತೆ ಇರುತ್ತದೆ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಸರ್ವ ಸದಸ್ಯರ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಇದರಲ್ಲಿ ಸಂಶಯ ಅನಗತ್ಯ ಎಂದರು.
ಸೇವಾ ಮನೋಭಾವವನ್ನು ಹೊಂದಿರುವ ಉದ್ದೇಶದಿಂದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು ರಾಜಕೀಯ ಮಾಡಲು ಬಂದಿಲ್ಲ, ಸ್ವಾರ್ಥಕ್ಕೆ ಅವಕಾಶವಿಲ್ಲ, ಒಕ್ಕಲಿಗ ಸಮಾಜದಲ್ಲಿ ಪ್ರಜ್ಞಾವಂತ ಮತದಾರರಿದ್ದು ಸೇವಾ ಮನೋಭಾವ ಹೊಂದಿರುವವರನ್ನು ಆಯ್ಕೆ ಮಾಡುತ್ತಾರೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪಿ.ರಾಜು, ಎಂ.ಅಶೋಕ್, ಎಂ.ಬಿ.ಸತೀಶ್, ಬಿ.ಸಿ.ಲೋಕಪ್ಪಗೌಡ, ಐ.ಸಿ.ಶ್ರೀನಾಥ್, ಮನುಕುಮಾರ್.ಯು.ಪಿ, ಕೆ.ಪಿ.ರಾಜೇಂದ್ರ, ಹೆಚ್.ಎಸ್.ಮೋಹನ್, ವಿ.ಕೆ.ಹರಿಣಾಕ್ಷಿ ನಾಗರಾಜ್, ಕೆ.ಬಿ.ಅನಂತೇಗೌಡ, ಕೆ.ಬಿ.ಸಜಿತ್, ಜೆ.ಪಿ.ಹೊಯ್ಸಳಗೌಡ, ಐ.ವಿ.ಮಂಜುಚೇತನ್, ಕೆ.ಯು ರತೀಶ್‌ಕುಮಾರ್, ಭವ್ಯನಟೇಶ್, ಪವಿತ್ರ, ಸಂತೋಷ್.ಎಂ.ಬಿ, ಕೆ.ಪಿ.ಪೃಥ್ವಿರಾಜ್, ಹೆಚ್.ಕೆ.ನವೀನ್, ಸಿ.ಟಿ.ರೇವತಿ, ಪ್ರಮೋದ್, ಟಿ.ಎಂ.ಉಮಾಶಂಕರ್, ಮಾಜಿ ಅಧ್ಯಕ್ಷರುಗಳಾದ ಸಂದೀಪ್, ಹಲಸೆ ಶಿವಣ್ಣ, ರಾಜೇಗೌಡ.ಕೆ, ಮಾಜಿ ಕಾರ್ಯದರ್ಶಿ ಉಮೇಶ್‌ಚಂದ್ರ, ಲಕ್ಷ್ಮಣ್‌ಗೌಡ ಉಪಸ್ಥಿತರಿದ್ದರು.
-
Kodagu21 hours ago
ಅಖಿಲ ಕೊಡವ ಸಮಾಜದ ಹೇಳಿಕೆಗೆ ನಮ್ಮ ವಿರೋಧವಿದೆ, ಹೋರಾಟ ಮುಂದುವರಿಯಲಿದೆ – ಕನೆಕ್ಟಿಂಗ್ ಕೊಡವಾಸ್ ಸಂಘಟನೆ ಸ್ಪಷ್ಟನೆ
-
Kodagu20 hours ago
ಕಿಡಿಗೇಡಿಗಳನ್ನು ಬಂಧಿಸದೇ ನಡೆಸುವ ಶಾಂತಿ ಮಾತುಕತೆಗೆ ನಮ್ಮ ಬೆಂಬಲವಿಲ್ಲ: ಯುಕೊ ಸ್ಪಷ್ಟನೆ
-
Tech17 hours ago
ಮೊಬೈಲ್ ಬಳಕೆದಾರರಿಗೆ ದೂರ ಸಂಪರ್ಕ ಇಲಾಖೆಯಿಂದ ಗೂಡ್ ನ್ಯೂಸ್ : ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕಾದ ಮಾಹಿತಿ
-
Sports22 hours ago
Champions Trophy 2025ಕ್ಕೆ ಟೀಂ ಇಂಡಿಯಾ ಪ್ರಕಟ: ಗಿಲ್ಗೆ ಉಪನಾಯಕ ಪಟ್ಟ
-
National - International23 hours ago
ಕೊಲ್ಕತ್ತಾ ವೈದ್ಯ ಮೇಲಿನ ಅತ್ಯಾಚಾರ ಪ್ರಕರಣ: 57 ದಿನಗಳಲ್ಲಿ ತೀರ್ಪು ಪ್ರಕಟ; ರಾಯ್ ದೋಷಿ
-
Mysore21 hours ago
ಮೈಸೂರು ವಿವಿ ಗೌರವ ಡಾಕ್ಟರೇಟ್ ತಂದ ಖುಷಿ
-
Mysore20 hours ago
ಮೈಸೂರಿನ ಮಾರುಕಟ್ಟೆಗೆ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು
-
Hassan22 hours ago
ನ್ಯಾಯಾಲಯದ ತಡೆ ಆಜ್ಞೆ ಇದ್ರೂ ವಿಮಾನ ನಿಲ್ದಾಣದ ಸುತ್ತ ಕಾಂಪೌಂಡ್ ನಿರ್ಮಾಣ