ವಿಶೇಷ ವರದಿ: ಪ್ರೀತಮ್ ಹೆಬ್ಬಾರ್
ರಾಹುಲ್ ವಿರುದ್ಧ ಆಡಿದ ಒಂದೇ ಒಂದು ಮಾತಿಗೆ ಸಿದ್ದರಾಮಯ್ಯನವರ ಆಪ್ತರಾದ ಕೆ.ಎನ್. ರಾಜಣ್ಣನವರನ್ನು ಕಿತ್ತೆಸೆಯಲಾಗಿದೆ. ಈ ಬಗ್ಗೆ ಸಾರ್ವಜನಿಕರು ಹೇಳುವಂತೆ ಕಾಂಗ್ರೆಸ್ ಅಂದರೆ ಹೀಗೆ, ಹೈ ಕಮಾಂಡ್ ಗೆ ತಗ್ಗಿ ಬಗ್ಗಿ ನಡೆದಿಲ್ಲ ಅಂದರೆ ಹೈಕಮಾಂಡ್ ನಿಂದ ಹಿಟ್ಲರ್ ಧೋರಣೆ ಆಗುತ್ತೆ ಅನ್ನೊದು ಮತ್ತೊಮ್ಮೆ ಜಗಜ್ಜಾಹಿರವಾಗಿದೆ ಎಂಬುವುದು ಸಾರ್ವಜನಿಕರ ಆರೋಪವಾಗಿದೆ. ಹಿಂದೊಮ್ಮೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಕೂಡ ತನ್ನ ಅಧಿಕಾರ ಕಳೆದುಕೊಳ್ಳುವ ಭೀತಿಯಿಂದ ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಹರಸಾಹಸ ಪಟ್ಟಿದ್ದರು ಎಂಬುವುದು ಇನ್ನೂ ಕೂಡ ಇತಿಹಾಸ ಪುಟದಲ್ಲಿ ಅಚ್ಚಳಿಯದೆ ಉಳಿದಿದೆ.
ರಾಗಾ ಪ್ರತಾಪಕ್ಕೆ ರಾಜಣ್ಣ ಕಿಕ್ ಔಟ್!
ಸೋನಿಯಾ ಗಾಂಧಿ ಕುಟುಂಬದ ಹಿಡಿತ ಕಾಂಗ್ರೆಸ್ ಮೇಲೆ ಎಷ್ಟಿದೆ ಅಂದರೆ ರಾಜಣ್ಣ ಈ ಹಿಂದೆ ಹಲವು ಎಡವಟ್ಟು ಹೇಳಿಕೆಯನ್ನು ನೀಡಿದ್ದರೂ ಕೂಡ ಅವರ ಮೇಲೆ ಯಾವುದೇ ಕ್ರಮವನ್ನು ಕೈಗೊಳ್ಳದಿದ್ದ ಹೈಕಮಾಂಡ್ ರಾಹುಲ್ ಗಾಂಧಿ ಮಾತಿಗೆ ಅಪಸ್ವರ ಎತ್ತಿದ ಕೂಡಲೇ ರಾಜಣ್ಣರವರನ್ನು ಕಿಕ್ ಔಟ್ ಮಾಡಿ ಆದೇಶ ಹೊರಡಿಸಿದ್ದು ವಿಪರ್ಯಾಸವೇ ಸರಿ.
ಕೆ.ಎನ್. ರಾಜಣ್ಣ ರಾಜಕೀಯ ಹಿನ್ನೆಲೆ ನೋಡೋದಾದರೆ ಅವರು ರಾಜಕೀಯದಲ್ಲಿ ಸಾಕಷ್ಟು ಅನುಭವವನ್ನು ಹೊಂದಿದ್ದಾರೆ. ಕೆ.ಎನ್. ರಾಜಣ್ಣ ಸಹಕಾರಿ ಕ್ಷೇತ್ರದಿಂದ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ಭಾರತದ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟದ ನಿರ್ದೇಶಕರಾಗಿ ಮತ್ತು ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್‌ನ ಅಧ್ಯಕ್ಷರಾಗಿಯು ಕೆ.ಎನ್. ರಾಜಣ್ಣ ಸೇವೆ ಸಲ್ಲಿಸಿದ್ದಾರೆ. 1972ರಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಅವರು 1998 ರಿಂದ 2004 ರವರೆಗೆ ವಿಧಾನ ಪರಿಷತ್ ಸದಸ್ಯರಾಗಿದ್ದರು. 2004ರಲ್ಲಿ ಬೆಳ್ಳಾವಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಮಧುಗಿರಿಯಲ್ಲಿ ನಡೆದ ಉಪಚುನಾವಣೆಯಲ್ಲೂ ಕೂಡ ರಾಜಣ್ಣ ಜಯಭೇರಿ ಬಾರಿಸಿದ್ದರು.

ನಂತರ 2013 ರಲ್ಲಿ ಮಧುಗಿರಿ ಕ್ಷೇತ್ರದಿಂದ ಸ್ಪರ್ಧಿಸಿ ಭರ್ಜರಿಯಾಗಿ ಗೆಲುವು ಸಾಧಿಸಿದ್ದರು 2023ರ ಚುನಾವಣೆಯಲ್ಲೂ ಕೂಡ ಮತ್ತೆ ಮಧುಗಿರಿಯಿಂದಲೇ ಸ್ಪರ್ಧಿಸಿ ಕರ್ನಾಟಕ ಸರ್ಕಾರದಲ್ಲಿ ಸಹಕಾರ ಸಚಿವರಾಗಿದ್ದರು.
ರಾಜಣ್ಣಗೆ ಮುಳುವಾದ ಅವರ ನಾಲಿಗೆ!
ರಾಜಣ್ಣ ಸಚಿವರಾದಾಗಿನಿಂದಲೂ ಅವರಿಗೆ ಅವರ ನಾಲಿಗೆಯೇ ಮುಳುವಾಗಿದೆ. ಸದಾ ಒಂದಲ್ಲ ಒಂದು ಯಡವಟ್ಟು ಹೇಳಿಕೆಯಿಂದ ಸಾಕಷ್ಟು ಬಾರಿ ಪಕ್ಷಕ್ಕೆ ಡ್ಯಾಮೇಜ್ ಆಗುವಂತಹ ಹೇಳಿಕೆ ನೀಡಿದ್ದರು. ಆದರೆ ಸಿದ್ದರಾಮಯ್ಯ ಅವರು ತನ್ನ ಆಪ್ತನನ್ನು ಹಲವು ಬಾರಿ ರಕ್ಷಿಸಿದ್ದರು. ಇದೀಗ ನೇರ ಹೈ ಕಮಾಂಡ್ ಗೆ ಟಕ್ಕರ್ ಕೊಡಲು ಹೋಗಿ ತಮ್ಮ ಸ್ಥಾನಕ್ಕೆ ತಾವೇ ಕೊಡಲಿ ಏಟು ಕೊಟ್ಟಹಾಗೆ ಆಗಿದೆ.
ಇತ್ತೀಚೆಗಷ್ಟೇ ರಾಜ್ಯಾದ್ಯಂತ ಸಾಕಷ್ಟು ಚರ್ಚೆಗೆ ಒಳಗಾಗಿದ್ದ ಹನಿ ಟ್ರ್ಯಾಪ್‌ಗೆ ಸಂಬಂಧಿಸಿದಂತೆ ರಾಜಣ್ಣ ನೀಡಿದ್ದ ಹೇಳಿಕೆ ತೀವ್ರ ಕೋಲಾಹಲಕ್ಕೆ ಕಾರಣವಾಗಿತ್ತು. ಸದನದಲ್ಲಿ ಕೂಡ ಈ ವಿಚಾರ ಚರ್ಚೆಯಾಗಿತ್ತು. ರಾಜಣ್ಣ ಅವರು ತಾವೂ ಸೇರಿ 48 ರಾಜಕಾರಣಿಗಳು ಹನಿ ಟ್ರ್ಯಾಪ್‌ಗೆ ಒಳಗಾಗಿದ್ದೇವೆ ಎಂದಿದ್ದರು. ಇದು ಎಲ್ಲೋ ಒಂದು ಕಡೆ ಪಕ್ಷಕ್ಕೆ ಮತ್ತು ಇವರ ವೈಯಕ್ತಿಕ ವರ್ಚಸ್ಸಿಗೂ ಸ್ವಲ್ಪ ಹಿನ್ನೆಡೆಯಾಗಿತ್ತು.
ಕಾಂಗ್ರೆಸ್ ಪಕ್ಷದಲ್ಲಿದ್ದ ಎಸ್ ಸಿ ಹಾಗೂ ಎಸ್ ಟಿ ಶಾಸಕರೊಂದಿಗೆ ಪ್ರತ್ಯೇಕವಾಗಿ ರಾಜಣ್ಣ ಸಭೆಯನ್ನು ಕೂಡ ನಡೆಸಿದ್ದರು ಇದೂ ಕೂಡ ಕೆಲವು ಕಾಂಗ್ರೆಸ್ ಮುಖಂಡರನ್ನು ಕೆರಳಿಸುವಂತೆ ಮಾಡಿತ್ತು.
ಮುಖ್ಯಮಂತ್ರಿ ಬದಲಾವಣೆ ಹಾಗೂ ಕಳೆದ ಕೆಲವು ತಿಂಗಳಿನಿಂದ ಸೆಪ್ಟೆಂಬರ್ ತಿಂಗಳಿನಲ್ಲಿ ರಾಜಕೀಯದಲ್ಲಿ ಬಹುದೊಡ್ಡ ಕ್ರಾಂತಿ ನಡೆಯಲಿದೆ ಎಂದೆಲ್ಲಾ ರಾಜಣ್ಣ ನೀಡಿದ್ದ ಹೇಳಿಕೆ ‘ಕೈ’ಗೆ ಹಿನ್ನೆಡೆಯಾಗಿತ್ತು.

ಇದೆಲ್ಲದರ ನಡುವೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ವಿರುದ್ಧ ಆಕ್ಷೇಪಾರ್ಹ ಪದ ಬಳಕೆಯ ವಿರುದ್ಧ ಸ್ವತಃ ಡಿಕೆ ಶಿವಕುಮಾರ್ ಡಿಕೆ ಸುರೇಶ್ ಆದಿಯಾಗಿ ಸಾಕಷ್ಟು ಜನ ರಾಜಣ್ಣ ವಿರುದ್ಧವೇ ತಿರುಗಿ ಬಿದ್ದಿದ್ದರು.
ರಾಜಣ್ಣ ಜನರನ್ನು ತಮ್ಮ ಮಾತಲ್ಲೇ ತಿವಿದಿದ್ದಲ್ಲದೆ ಅಯೋಧ್ಯೆಯ ಶ್ರೀರಾಮನ ಬಗ್ಗೆಯೂ ಅಯೋಧ್ಯೆ ಟೆಂಟ್ ನಲ್ಲಿ 2 ಬೊಂಬೆಗಳನ್ನು ಇಟ್ಟು ಶ್ರೀರಾಮ ಎನ್ನುತ್ತಿದ್ದರು ಎಂದು ವಿವಾದಾತ್ಮಕ ಹೇಳಿಕೆ ನೀಡಿ ರಾಮ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದರು.
ಡಿಕೆ ವಿರುದ್ಧ ಮುಸುಕಿನ ಗುದ್ದಾಟ, ಸುರ್ಜೆವಾಲಗೂ ಡೋಂಟ್ ಕೇರ್ ಕೆ.ಎನ್. ರಾಜಣ್ಣ ಅವರು ಹೆಚ್ಚುವರಿ ಡಿಸಿಎಂ ಹುದ್ದೆ ವಿಚಾರವಾಗಿ ಸಾಕಷ್ಟು ಬಾರಿ ಹೇಳಿಕೆ ನೀಡಿದ್ದರು ಇದು ಕೆಲವು ಗೊಂದಲವನ್ನು ಉಂಟುಮಾಡಿತ್ತಲ್ಲದೆ ಡಿಕೆಶಿ ಕೂಡ ಇದರ ವಿರುದ್ಧ ಅಸಮಾಧಾನಗೊಂಡು ಹೈ ಕಮಾಂಡ್ ಗೂ ದೂರು ನೀಡಿದ್ದರು.
ಇದರ ಜೊತೆಗೆ ಡಿ.ಕೆ. ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ಸಮರ ಸಾರಿದ್ಧ ರಾಜಣ್ಣ ಕೆಪಿಸಿಸಿ ಅಧ್ಯಕ್ಷರು ಬದಲಾವಣೆ ಆಗಲೇಬೇಕು ಎಂದು ಪಟ್ಟು ಹಿಡಿದರು. ಹಾಗೂ ರಾಜ್ಯ ಕಾಂಗ್ರೆಸ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸಭೆಗೂ ಗೈರಾಗಿ ಅವರಿಗೆ ಶಾಸಕರ ಜೊತೆಗೆ ಸಭೆ ನಡೆಸಲು ಯಾವುದೇ ಅಧಿಕಾರ ಇಲ್ಲ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು.
5 ವರ್ಷ ‘ಸಿದ್ದು’ ಸಿಎಂ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ರಾಜಣ್ಣ ಹೋದಲೆಲ್ಲಾ ಸಿಎಂ ಬದಲಾವಣೆ ಇಲ್ಲ ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಆಗಿ ಮುಂದುವರಿಯುತ್ತಾರೆ ಎಂಬ ಹೇಳಿಕೆ ಕಾಂಗ್ರೆಸ್ ನಲ್ಲೇ ಭಿನ್ನಮತಕ್ಕೆ ಕಾರಣವಾಗಿತ್ತು.
ರಾಹುಲ್ ಗೆ ಟಾಂಗ್ ರಾಜಣ್ಣಗೆ ಗೇಟ್ ಪಾಸ್
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚೆಗಷ್ಟೇ ಬಿಜೆಪಿ ವಿರುದ್ಧ ಮತಗಳ್ಳತನದ ವಿರುದ್ಧ ಬಹು ದೊಡ್ಡ ಆರೋಪ ಮಾಡಿದ್ದರು ಹಾಗೂ ಅದನ್ನು ದೊಡ್ಡ ಮಟ್ಟದಲ್ಲೇ ಸುದ್ದಿ ಮಾಡುವ ಯೋಜನೆ ಕೂಡ ಇತ್ತು ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ ಮತ ಪಟ್ಟಿ ಪರಿಷ್ಕರಣೆ ಆಗಿದ್ದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಎಂದು ರಾಜಣ್ಣ ಹೇಳುವ ಮೂಲಕ ರಾಹುಲ್ ಗಾಂಧಿಯ ಹೇಳಿಕೆಯ ವಿರುದ್ಧವಾಗಿ ತಮ್ಮ ಹೇಳಿಕೆಯನ್ನು ನೀಡಿದ ಪರಿಣಾಮ ತಮ್ಮ ಸಚಿವ ಸ್ಥಾನವನ್ನೇ ಕಳೆದುಕೊಳ್ಳುವಂತಾಯಿತು.
‘ಕೈ’ ಬಿಡದ ಕುಟುಂಬ ರಾಜಕಾರಣ
ಕಾಂಗ್ರೆಸ್ ಪಕ್ಷಕ್ಕೆ ಸಾಕಷ್ಟು ವರ್ಷಗಳ ಇತಿಹಾಸವಿದೆ ಇಂದಿರಾ ಗಾಂಧಿ ಅವರಿಂದ ಹಿಡಿದು ಇದೂವರೆಗೂ ಅವರ ಕುಟುಂಬದವರೆ ಹೇಳಿದಂತೆ ಪಕ್ಷ ನಡೆದುಕೊಳ್ಳುತ್ತಿರುವುದು ವಿಪರ್ಯಾಸವೇ ಸರಿ. ರಾಜಣ್ಣ ಮಂತ್ರಿಯಾದಗಿನಿಂದ ಹಿಡಿದು ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ಮಾತನಾಡುವವರೆಗೂ ಸಾಕಷ್ಟು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆದರೆ ಅದಕೆಲ್ಲ ಕಾರಣ ಕೇಳಿ ನೋಟಿಸ್ ನೀಡದ ಕಾಂಗ್ರೆಸ್ ಹೈಕಮಾಂಡ್ ರಾಹುಲ್ ಗಾಂಧಿ ಹೇಳಿಕೆಯ ವಿರುದ್ಧ ರಾಜಣ್ಣ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಮಂತ್ರಿ ಪದವಿಗೆ ರಾಜೀನಾಮೆ ನೀಡೂವುದಕ್ಕೂ ಸಮಯ ನೀಡದೆ ಏಕಾಏಕಿಯಾಗಿ ಮಂತ್ರಿ ಪದವಿಯಿಂದ ಅನರ್ಹಗೊಳಿಸಿ ರಾಹುಲ್ ಗಾಂಧಿ ತಮ್ಮ ಹಿಟ್ಲರ್ ಧೋರಣೆಯನ್ನು ಪ್ರಯೋಗಿಸಿದ್ದು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಃಪಥನಕ್ಕೂ ಮುನ್ನಡಿಯಾಗಬಹುದು.