Chikmagalur
ಮಾನವ ಕಳ್ಳ ಸಾಗಾಣಿಕೆ ಸಾಮಾಜಿಕ ಪಿಡುಗು: ವಿ ಹನುಮಂತಪ್ಪ
ಚಿಕ್ಕಮಗಳೂರು: ಮಾನವ ಕಳ್ಳ ಸಾಗಾಣಿಕೆ ದೊಡ್ಡ ಸಾಮಾಜಿಕ ಪಿಡುಗಾಗಿ ಪರಿಣಮಿಸಿದ್ದು, ಇದಕ್ಕೆ ಸಣ್ಣ ಮಕ್ಕಳು, ಯುವತಿಯರು, ಹೆಣ್ಣು ಮಕ್ಕಳು ಬಲಿಪಶು ಆಗುತ್ತಿರುವುದು ಅತ್ಯಂತ ಕಳವಳಕಾರಿ ಎಂದು ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ. ಹನುಮಂತಪ್ಪ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಚಿಕ್ಕಮಗಳೂರು ಹಾಗೂ ಪರಿವರ್ತನ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಶಿರಾಳಕೊಪ್ಪ ಇವರ ಸಂಯುಕ್ತಾಶ್ರಯದಲ್ಲಿ ಇಂದು ನಗರದ ತಾಲ್ಲೂಕು ಪಂಚಾಯಿತಿ ಡಾ. ಅಂಬೇಡ್ಕರ್ ಸಭಾಂಗಣದಲ್ಲಿ ಮಾನವ ಕಳ್ಳ ಸಾಗಣಿಕೆಯ ಮಜಲುಗಳ ಅರಿವು ಕುರಿತು ಒಂದು ದಿನದ ಕಾರ್ಯಗಾರದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಹೇಳಿದರು.
ವಿವಿಧ ಆಮಿಷಗಳಿಗೆ ಒಳಗಾಗಿ ಮೋಸದ ಬಲೆಗೆ ತುತ್ತಾಗಿ ಶೋಷಿತರಾಗುವುದನ್ನು ಸಮುದಾಯದ ಪ್ರತಿಯೊಬ್ಬರು ಅರಿತು ಜಾಗೃತರಾಗಬೇಕು ಸಮುದಾಯದ ಪ್ರತಿಯೊಬ್ಬರು ಅರಿತು ಜಾಗೃತರಾದಾಗ ಹಾಗೂ ಎಲ್ಲಾ ಇಲಾಖೆಗಳ ಅಧಿಕಾರಿಗಳು ಒಗ್ಗೂಡಿ ಕೆಲಸ ಮಾಡಿದಾಗ ಮಾತ್ರ ಮಾನವ ಕಳ್ಳ ಸಾಗಾಣಿಕೆ ತಡೆಯಲು ಸಾಧ್ಯವಾಗುತ್ತದೆ. ಅಮಾಯಕ ಹೆಣ್ಣು ಮಕ್ಕಳು ಮಾನವ ಕಳ್ಳ ಸಾಗಾಣಿಕೆದಾರರಿಗೆ ಬಲಿಯಾಗುತ್ತಿರುವ ಘಟನೆಗಳು ಅಲ್ಲಲ್ಲಿ ನಡೆಯುತ್ತಿರುವುದು ಒಂದೆಡೆಯಾದರೆ, ಸಣ್ಣ ಮಕ್ಕಳನ್ನು ಅಪಹರಿಸಿ ಭಿಕ್ಷಾಟನೆಗೆ ಹಚ್ಚುವುದು. ಮಾನವ ದೇಹದ ಅಂಗಾಂಗಳ ಮಾರಾಟದ ಪ್ರಸಂಗಗಳು ಕೇಳಿ ಬರುತ್ತವೆ ಎಂದರು.
ಪ್ರತಿಯೊಬ್ಬ ಪ್ರಜ್ಞಾವಂತ ಸಮುದಾಯ ವಿವಿಧ ಇಲಾಖೆಯ ಅಧಿಕಾರಿಗಳು, ವಿಶೇಷವಾಗಿ ಪಾಲಕರು ಬಹು ಎಚ್ಚರಿಕೆಯಿಂದ ಇದ್ದು, ಮಾನವ ಕಳ್ಳ ಸಾಗಾಣಿಕೆ ತಡೆಗೆ ಸಂಕಲ್ಪ ತೊಡಬೇಕು ಎಂದ ಅವರು ಈ ಕುರಿತು ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ ಎಂದ ಅವರು ಮಾನವ ಕಳ್ಳ ಸಾಗಾಣಿಕೆ ಕಂಡು ಬಂದಲ್ಲಿ ಜನತೆ ತಕ್ಷಣವೇ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹಾಂತೇಶ್ ಭಜಂತ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಮಾನವ ಕಳ್ಳ ಸಾಗಾಣಿಕೆ ಎಂಬುದು ಸಾಮಾನ್ಯ ಮಹಿಳೆಯರಿಗೆ ಸಮಾಜದಲ್ಲಿ ಸಾಮಾನ್ಯಯುತವಾಗಿ ಜೀವನ ನಡೆಸಲು ಸಮಸ್ಯೆಯಾಗುತ್ತಿದೆ. ಮಹಿಳೆಯರನ್ನು ಕಳ್ಳ ಸಾಗಾಣಿಕೆಯಿಂದ ಅವರನ್ನು ಬೇರೆ ಬೇರೆ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳುತ್ತಿದ್ದು, ಕೆಲವು ಮಾರಕ ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಹೆಣ್ಣು ಮಕ್ಕಳ ಲೈಂಗಿಕ ಕ್ರಿಯೆಗೆ ದುರ್ಬಳಕೆ, ಅಂಗಾಂಗಗಳ ಮಾರಾಟ, ಬಾಲ ಕಾರ್ಮಿಕ ಪದ್ದತಿ, ಬಾಲ್ಯ ವಿವಾಹದಂತಹ ಅನಿಷ್ಟ ಪದ್ದತಿಗಳಿಗೆ ಮಾನವ ಕಳ್ಳಸಾಗಾಣಿಕೆ ನಡೆಯುತ್ತದೆ. ಈ ಬಗ್ಗೆ ತನಿಖೆ ಮಾಡಿ, ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ ಎಂದ ಅವರು ಮನುಷ್ಯನೇ ಮನುಷ್ಯರನ್ನು ಕಳ್ಳ ಸಾಗಾಣಿಕೆ ಮಾಡುವುದು ದುರದೃಷ್ಟಕರ, ಬೇರೆ ಬೇರೆ ಉದ್ದೇಶಗಳಿಗೆ ಅವರನ್ನು ಮಾರಾಟ ಮಾಡುತ್ತಿದ್ದಾರೆ. ಅವರನ್ನು ಬಲವಂತವಾಗಿ ದುಡಿಮೆಗಳಲ್ಲಿ ದುಡಿಸಿಕೊಳ್ಳುತ್ತಿದ್ದಾರೆ. ಅಪಾಯದ ಸ್ಥಳಗಳಲ್ಲಿ ಕೆಲಸ ಮಾಡುವಂತೆ ಬಾಲ ಕಾರ್ಮಿಕರಾಗಿ ದುಡಿಸುವಂತದ್ದು, ಭಿಕ್ಷಾಟನೆಗೆ ಮಕ್ಕಳನ್ನು ಅಥವಾ ಹಿರಿಯ ಜೀವಗಳನ್ನು ಬಳಸಿಕೊಳ್ಳುತ್ತಿದ್ದಾರೆ ಇವುಗಳನ್ನು ತಪ್ಪಿಸಿ ಅವರಿಗೆ ನೆರವು ನೀಡಿ, ಉತ್ತಮ ಸೌಲಭ್ಯವನ್ನು ಕಲ್ಪಿಸುವುದರ ಜೊತೆಗೆ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಮೈಸೂರು ಒಡನಾಡಿ ಸೇವಾ ಸಂಸ್ಥೆ ಕಾರ್ಯದರ್ಶಿ ಸ್ಟ್ಯಾನ್ಲಿ ಕೆ.ವಿ. ಪ್ರಾಸ್ತಾವಿಕ ನುಡಿಗಳನ್ನಾಡಿ ಪ್ರಸ್ತುತ ದಿನಗಳಲ್ಲಿ ಸಾರ್ವಜನಿಕರು ಜಾಗೃತರಾಗಬೇಕು. ಇಂದು ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಹಲವಾರು ಕಾರ್ಯಕ್ರಮ ಆಯೋಜಿಸುವುದರ ಜೊತೆಗೆ ಕ್ರಿಯಾಯೋಜನೆಗಳನ್ನು ರೂಪಿಸಿದ್ದು, ತಂಡಗಳನ್ನು ರಚಿಸಿ ಬಾಲಕಾರ್ಮಿಕ ಪದ್ದತಿ, ಭಿಕ್ಷಾಟನೆ ಇವುಗಳನ್ನು ನಿರ್ಮೂಲನೆ ಮಾಡಲು ಪಣತೊಟ್ಟಿದೆ. ಹೆಣ್ಣು ಮಕ್ಕಳನ್ನು ಬೇರೆ ಬೇರೆ ಕೆಲಸಗಳಿಗೆ ಬಳಸಿಕೊಳ್ಳುತ್ತಿರುವುದನ್ನು ನಾವು ಪತ್ತೆ ಮಾಡಿ ಅವರಿಗೆ ನೆರವು ನೀಡಿ, ಉತ್ತಮ ಸೌಲಭ್ಯವನ್ನು ಕಲ್ಪಿಸಿಕೊಟ್ಟಿದೇವೆ ಎಂದು ಹೇಳಿದರು.
ಹೆಚ್ಚುವರಿ ಪೋಲಿಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ. ಮಾತನಾಡಿ ಮಾನವ ಕಳ್ಳ ಸಾಗಾಣಿಕೆಯಲ್ಲಿ ತಂತ್ರಜ್ಞಾನದ ಬಳಕೆ ಉಪಯೋಗ ಮತ್ತು ದುರುಪಯೋಗ ಕುರಿತು ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು. ಈ ಕುರಿತು ಜನರು ಜವಾಬ್ದಾರಿಯುತವಾಗಿ ತಡೆಗಟ್ಟುವಂತಹ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಚಿಕ್ಕಮಗಳೂರು ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿದೇಶಕ ರೇವಣ್ಣ, ಶಿರಾಳಕೊಪ್ಪ ಪರಿವರ್ತನಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ನಿರ್ದೇಶಕ ಮತ್ತು ಬೆಂಗಳೂರು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿಕಟಪೂರ್ವ ಸದಸ್ಯ ಶಂಕರಪ್ಪ ಡಿ., ಮೈಸೂರು ಒಡನಾಡಿ ಸೇವಾ ಸಂಸ್ಥೆ ನಿರ್ದೇಶಕ ಮತ್ತು ಬೆಂಗಳೂರು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿಕಟಪೂರ್ವ ಸದಸ್ಯ ಪರಶುರಾಮ್ ಎಂ.ಎಲ್. ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Chikmagalur
ಹಣಕ್ಕಾಗಿ ಮದುವೆಯಲ್ಲಿ ರಂಪಾಟ ಮಾಡಿದ ಮಂಗಳಮುಖಿಯರು
ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮದುವೆ ಮನೆಯೊಂದಕ್ಕೆ ನುಗ್ಗಿದ ಮಂಗಳಮುಖಿಯರು ಹಣಕ್ಕಾಗಿ ರಂಪಾಟ ನಡೆಸಿ, ಮದುವೆಯ ಸಂಭ್ರಮವನ್ನೇ ಕೆಡಿಸಿರುವ ಘಟನೆ ನಡೆದಿದೆ.
ಕೇವಲ ಹಣಕ್ಕಾಗಿ ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸಿದ ಮಂಗಳಮುಖಿಯರ ನಡೆಗೆ ಮದುವೆಗೆ ಬಂದಿದ್ದ ಅತಿಥಿಗಳು ಹಾಗೂ ವಧು-ವರರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು ನಗರದ ಪ್ರಸಿದ್ಧ ರಂಗಣ್ಣನ ಛತ್ರದಲ್ಲಿ ಇಂದು ವಿಜೃಂಭಣೆಯಿಂದ ಮದುವೆ ಸಮಾರಂಭ ನಡೆಯುತ್ತಿತ್ತು.

ಹಸೆಮಣೆ ಏರಿದ್ದ ವಧು-ವರರಿಗೆ ಅತಿಥಿಗಳು ಶುಭ ಹಾರೈಸುತ್ತಿದ್ದ ವೇಳೆ ಇಬ್ಬರು ಮಂಗಳಮುಖಿಯರು ಮಂಟಪಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸಂಪ್ರದಾಯದಂತೆ ಮದುವೆ ಮನೆಯವರು ಅವರಿಗೆ 500 ರೂಪಾಯಿ ಹಣ ನೀಡಲು ಮುಂದಾಗಿದ್ದಾರೆ. ಆದರೆ, 500 ರೂಪಾಯಿ ಪಡೆಯಲು ನಿರಾಕರಿಸಿದ ಮಂಗಳಮುಖಿಯರು, ಬರೋಬ್ಬರಿ 10,000 ರೂಪಾಯಿ ನೀಡಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಮದುವೆ ಮನೆಯವರು ಅಷ್ಟು ದೊಡ್ಡ ಮೊತ್ತ ನೀಡಲು ನಿರಾಕರಿಸಿದಾಗ, ಮಂಗಳಮುಖಿಯರು ಮಂಟಪದ ಮೇಲೆಯೇ ರಂಪಾಟ ಆರಂಭಿಸಿದ್ದಾರೆ. ವಧು-ವರರ ಮುಂದೆಯೇ ಅಸಭ್ಯವಾಗಿ ವರ್ತಿಸಿ, ಜೋರಾಗಿ ಕಿರುಚಾಡಿದ್ದಾರೆ. ‘ನಿಮಗೆ ಹಣ ಕೊಡೋ ಯೋಗ್ಯತೆ ಇಲ್ವಾ?’ ಎಂದು ಮನೆಯವರನ್ನು ಏಕವಚನದಲ್ಲೇ ನಿಂದಿಸಿದ್ದಾರೆ. ಮಂಗಳಮುಖಿಯರ ಈ ಹಠಾತ್ ವರ್ತನೆಯಿಂದ ಮದುವೆಗೆ ಬಂದಿದ್ದ ಹೆಣ್ಣುಮಕ್ಕಳು ಹಾಗೂ ಹಿರಿಯರು ಮುಜುಗರಕ್ಕೊಳಗಾದರು.

ಮಂಗಳಮುಖಿಯರ ಈ ಅಸಭ್ಯ ವರ್ತನೆಯನ್ನು ಕಂಡು ಅಲ್ಲಿದ್ದ ಕೆಲವರು ಪ್ರಶ್ನೆ ಮಾಡಲು ಮುಂದಾದಾಗ, ಅವರ ವಿರುದ್ಧವೂ ಕಿಡಿಕಾರಿದ್ದಾರೆ. ‘ದಮ್ಮಿದ್ದರೆ ಹೊರಗೆ ಬಾ, ನಿನ್ನನ್ನು ನೋಡಿಕೊಳ್ಳುತ್ತೇವೆ’ ಎಂದು ಸಾರ್ವಜನಿಕವಾಗಿ ಬೆದರಿಕೆ ಹಾಕಿದ್ದಾರೆ. ಅವಾಚ್ಯ ಶಬ್ದಗಳಿಂದ ಬೈಯುತ್ತಾ ಮದುವೆ ಮಂಟಪದಲ್ಲಿ ಗದ್ದಲ ಸೃಷ್ಟಿಸಿದ್ದರಿಂದ, ಮಂಗಳವಾದ್ಯದ ಸದ್ದಿಗಿಂತ ಮಂಗಳಮುಖಿಯರ ಕಿರುಚಾಟವೇ ಹೆಚ್ಚಾಗಿತ್ತು. ಇದರಿಂದಾಗಿ ಸಂಭ್ರಮದಿಂದ ನಡೆಯಬೇಕಿದ್ದ ಮದುವೆ ಕಾರ್ಯಕ್ರಮ ಕೆಲಕಾಲ ಸ್ಥಗಿತಗೊಂಡು ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಮದುವೆ ಅಥವಾ ಶುಭ ಸಮಾರಂಭಗಳಲ್ಲಿ ಮಂಗಳಮುಖಿಯರು ಬಂದು ಹರಸುವುದು ವಾಡಿಕೆ. ಆದರೆ, ಇತ್ತೀಚಿನ ದಿನಗಳಲ್ಲಿ ಹಣಕ್ಕಾಗಿ ಈ ರೀತಿ ದಬ್ಬಾಳಿಕೆ ನಡೆಸುವುದು ಮತ್ತು ಸಾರ್ವಜನಿಕವಾಗಿ ಅವಮಾನ ಮಾಡುವುದು ಹೆಚ್ಚಾಗುತ್ತಿದೆ. ಚಿಕ್ಕಮಗಳೂರಿನ ಈ ಘಟನೆಯ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರು ಇಂತಹ ಕಿರುಕುಳದ ವಿರುದ್ಧ ಪೊಲೀಸ್ ಕ್ರಮಕ್ಕೆ ಒತ್ತಾಯಿಸಿದ.
Chikmagalur
ಮುಳ್ಳಯ್ಯನಗಿರಿ ದೇವಸ್ಥಾನದ ಕಾಮಗಾರಿ: ಸೀತಾಳಯ್ಯನ ಗಿರಿಯಿಂದ ಮುಳ್ಳಯ್ಯನಗಿರಿಗೆ ತೆರಳುವ ಮಾರ್ಗದಲ್ಲಿ ತಾತ್ಕಾಲಿಕ ನಿರ್ಬಂಧ
ಚಿಕ್ಕಮಗಳೂರು: ಮುಳ್ಳಯ್ಯನಗಿರಿ ದೇವಸ್ಥಾನದ ಕಾಮಗಾರಿ ನಡೆಯುತ್ತಿರುವುದರಿಂದ, ಸೀತಾಳಯ್ಯನ ಗಿರಿಯಿಂದ ಮುಳ್ಳಯ್ಯನಗಿರಿಗೆ ತೆರಳುವ ಮಾರ್ಗದಲ್ಲಿ ಪ್ರವಾಸಿ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ದೇವಸ್ಥಾನದ ನಿರ್ಮಾಣಕ್ಕೆ ಅಗತ್ಯವಿರುವ ಸಾಮಗ್ರಿಗಳನ್ನು ಭಾರಿ ವಾಹನಗಳ ಮೂಲಕ ಸಾಗಿಸುತ್ತಿರುವುದರಿಂದ ಮತ್ತು ಈ ರಸ್ತೆ ಕಿರಿದಾಗಿರುವುದರಿಂದ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಫೆ.7 ರಿಂದ ಮಾರ್ಚ್ 5, 2026ರ ವರೆಗೆ ಪ್ರವಾಸಿ ಜೀಪ್‌ಗಳು ಹಾಗೂ ಸಾರ್ವಜನಿಕ ವಾಹನಗಳ ಓಡಾಟವನ್ನು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ನಿಷೇಧಿಸಿದೆ. ಆದ್ದರಿಂದ, ಪ್ರವಾಸಿಗರು ಸೀತಾಳಯ್ಯನ ಗಿರಿಯಿಂದ ಮುಳ್ಳಯ್ಯನಗಿರಿಗೆ ನಡೆದುಕೊಂಡು ಹೋಗುವ ಮೂಲಕ ಸಹಕರಿಸಬೇಕೆಂದು ಜಿಲ್ಲಾಧಿಕಾರಿಗಳ ಆದೇಶದಂತೆ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
Chikmagalur
ಜಿಲ್ಲಾ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಿ.ಟಿ.ರವಿ
ಚಿಕ್ಕಮಗಳೂರು: ನಗರದ ಅರಳಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿನ ಅವ್ಯವಸ್ಥೆ ಹಾಗೂ ಔಷಧಿಗಳ ತೀವ್ರ ಕೊರತೆಯ ಕುರಿತು ಕೇಳಿಬಂದ ದೂರುಗಳ ಹಿನ್ನೆಲೆಯಲ್ಲಿ, ಎಂಎಲ್‌ಸಿ ಡಾ.ಸಿ.ಟಿ. ರವಿ ಅವರು ಇಂದು ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆಸ್ಪತ್ರೆಯ ದುಸ್ಥಿತಿ ಕಂಡು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಸಿ.ಟಿ. ರವಿ ಅವರಿಗೆ ರೋಗಿಗಳು ಮತ್ತು ಅವರ ಸಂಬಂಧಿಕರು ತಮ್ಮ ಸಂಕಷ್ಟಗಳನ್ನು ಬಿಚ್ಚಿಟ್ಟರು. “ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ಸಿಗುತ್ತದೆ ಎಂದು ಬಂದರೆ, ಇಲ್ಲಿನ ವೈದ್ಯರು ಔಷಧಿಗಳನ್ನು ಹೊರಗಿನಿಂದ ತರಲು ಚೀಟಿ ಬರೆದುಕೊಡುತ್ತಿದ್ದಾರೆ. ಬಡವರು ಹಣಕ್ಕೆ ಎಲ್ಲಿ ಹೋಗಬೇಕು?” ಎಂದು ರೋಗಿಗಳ ಸಂಬಂಧಿಕರು ಕಣ್ಣೀರಿಟ್ಟರು. ಆಸ್ಪತ್ರೆಯ ಅವ್ಯವಸ್ಥೆ ಕಂಡು ಸಿ.ಟಿ. ರವಿ ಅವರು ಜಿಲ್ಲಾ ಸರ್ಜನ್ ಹಾಗೂ ವೈದ್ಯರ ವಿರುದ್ಧ ಸ್ಥಳದಲ್ಲೇ ಗರಂ ಆದರು.

ಆಸ್ಪತ್ರೆಯ ಸಿಬ್ಬಂದಿ ಹಾಗೂ ಜಿಲ್ಲಾ ಸರ್ಜನ್ ಅವರನ್ನು ತರಾಟೆಗೆ ತೆಗೆದುಕೊಂಡ ಸಿ.ಟಿ. ರವಿ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಡವರ ಬದುಕು ದುಸ್ತರ
“ಸರ್ಕಾರಿ ಆಸ್ಪತ್ರೆಗೆ ಬರುವವರು ಅಸಹಾಯಕರು ಮತ್ತು ಬಡವರು. ಇಲ್ಲಿಯೇ ಔಷಧಿ ಇಲ್ಲದಿದ್ದರೆ ಅವರು ಎಲ್ಲಿಂದ ಹಣ ತರಬೇಕು? ರಾಜ್ಯದಾದ್ಯಂತ ಪ್ರತಿ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ಕಾಡುತ್ತಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆದ್ಯತೆ ಯಾವುದು?: “ನಿಮಗೆ ಸಚಿವ ಸಂಪುಟದ ಸ್ಥಾನಮಾನ ನೀಡುವುದು ಮೊದಲ ಆದ್ಯತೆಯೋ ಅಥವಾ ಜೀವ ಉಳಿಸಿಕೊಳ್ಳಲು ಬರುವ ಬಡವರಿಗೆ ಚಿಕಿತ್ಸೆ ನೀಡುವುದು ಆದ್ಯತೆಯೋ?” ಎಂದು ಸರ್ಕಾರವನ್ನು ನೇರವಾಗಿ ಪ್ರಶ್ನಿಸಿದರು.
ಡಯಾಲಿಸಿಸ್ ಸಮಸ್ಯೆ: ಡಯಾಲಿಸಿಸ್ ಘಟಕದ ಟೆಂಡರ್ ಪಡೆದ ಖಾಸಗಿ ಕಂಪನಿಗೆ ಕಳೆದ 10 ತಿಂಗಳಿನಿಂದ ಸರ್ಕಾರ ಒಂದು ರೂಪಾಯಿ ಹಣವನ್ನೂ ನೀಡಿಲ್ಲ. ಇದರಿಂದಾಗಿ ರೋಗಿಗಳಿಗೆ ಚಿಕಿತ್ಸೆ ಸಿಗದಂತಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ತುರ್ತು ಕ್ರಮಕ್ಕೆ ಆಗ್ರಹ: ಔಷಧಿಗಳ ಸರಬರಾಜು ಸಂಬಂಧ ಸರ್ಕಾರ ಯಾವುದೇ ಗಂಭೀರ ಕ್ರಮ ಕೈಗೊಂಡಿಲ್ಲ. ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಬಡ ರೋಗಿಗಳಿಗೆ ಅಗತ್ಯವಿರುವ ಔಷಧಿ ಹಾಗೂ ಸೌಲಭ್ಯಗಳನ್ನು ಒದಗಿಸಬೇಕು, ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದು ಅವರು ಎಚ್ಚರಿಸಿದರು.
-
Mandya21 hours agoನದಿಯ ಪಾವಿತ್ರ್ಯತೆ ಮತ್ತು ಪರಿಸರ ರಕ್ಷಣೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಿ : ಅಸ್ಥಿ ವಿಸರ್ಜನೆಯ ಜೊತೆಗೆ ಬಟ್ಟೆ ಮತ್ತು ಪೂಜಾ ಸಾಮಗ್ರಿ ಬಿಡುವುದು ಸಂಪೂರ್ಣ ನಿಷೇಧ – ಡಿಸಿ
-
Special14 hours agoಉಚಿತ PSI ಕೋಚಿಂಗ್: ಪರೀಕ್ಷೆ ಇಲ್ಲದೆ ಆಯ್ಕೆ!!
-
Kodagu1 hour agoಮಡಿಕೇರಿ ಪೊಲೀಸ್ ಕಾನ್ಸ್ಟೇಬಲ್ ಸಂದೀಪ್ ನಿಧನ
-
State15 hours agoಲೈಂಗಿಕ ದೌರ್ಜನ್ಯ ಕೇಸ್: ಮಂಡ್ಯ ರಮೇಶ್, ಸಾಧು ಕೋಕಿಲ ವಿರುದ್ದದ ಪ್ರಕರಣವನ್ನು ರದ್ದುಗೊಳಿಸಿದ ಹೈಕೋರ್ಟ್
-
Hassan16 hours agoಗೋಮಾತೆ ಎಂದಿಗೂ ಕೈ ಬಿಡುವುದಿಲ್ಲ: ಸದಾಶಿವ ಶಿವಾಚಾರ್ಯ ಸ್ವಾಮೀಜಿ
-
Mysore23 hours agoಪ್ರಧಾನಿ ವಿರುದ್ದ ಸಿಎಂ ಹೇಳಿಕೆ ರಾಜಕೀಯ ಪ್ರೇರಿತ: ಡಾ. ಹೇಮಾ ನಂದೀಶ್
-
Mysore14 hours agoಫೆ. 13ಕ್ಕೆ ನಂಜನಗೂಡು, ತಾಂಡವಪುರದಲ್ಲಿ ರೈತ ಸ್ನೇಹ ಮುಖಾಮುಖಿ ಚರ್ಚೆ : ಕಾರ್ಯಕ್ರಮ ವಿಶೇಷತೆ ಕುರಿತು ವಿದ್ಯಾಸಾಗರ್ ಸುದ್ದಿಗೋಷ್ಠಿ
-
Chamarajanagar20 hours agoಮಲೆ ಮಹದೇಶ್ವರ ಬೆಟ್ಟದ ಮಹಾಶಿವರಾತ್ರಿ ಜಾತ್ರೆಗೆ ದ್ವಿಚಕ್ರ, ತ್ರಿಚಕ್ರ ವಾಹನ ನಿಷೇಧ: ಡಿಸಿ ಆದೇಶ
