Connect with us

Mandya

ನನ್ನ ಸ್ಪರ್ಧೆ ಅನಿವಾರ್ಯವಾಗಿತ್ತು, ಎಲ್ಲವೂ ದೈವ ಸಂಕಲ್ಪ – ಮಾಜಿ ಮುಖ್ಯಮಂತ್ರಿ ಹೆಚ್ಡಿಕೆ

Published

on

ಪಾಂಡವಪುರ: ನಾನು ನಿಮ್ಮ ಮನೆಯ ಮಗ ನಾನು. ನನ್ನ ಸ್ಪರ್ದೆ ಅನಿವಾರ್ಯ ಜೊತೆಗೆ ದೈವ ಸಂಕಲ್ಪ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಮಂಡ್ಯ ಲೋಕಸಭಾ ಎನ್ ಡಿಎ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಪಾಂಡವಪುರದಲ್ಲಿ ಶನಿವಾರ ರಾತ್ರಿ‌ ನಡೆದ ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಬೃಹತ್ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ನಿಮ್ಮೆಲ್ಲರ ಆಶೀರ್ವಾದ ಪಡೆಯೋಕೆ ಈ ಐತಿಹಾಸಿಕ ಸಭೆಗೆ ಬಂದಿದ್ದೇನೆ.
ಈ ಚುನಾವಣೆಯಲ್ಲಿ ನಿಲ್ಲಬೇಕು ಅಂತಾ ಅಂದುಕೊಂಡಿರಲಿಲ್ಲ.
ನನ್ನ , ನಿಖಿಲ್ ಮತ್ತು ದೇವೇಗೌಡರ ತೀರ್ಮಾನ ಇದ್ದದ್ದು ಸಿ.ಎಸ್.ಪುಟ್ಟರಾಜು ಅಭ್ಯರ್ಥಿ ಆಗಬೇಕು ಅನ್ನೋದು.
ಅಂಬೇಡ್ಕರ್ ಭವನದಲ್ಲಿ ನಡೆದ ಸಭೆಯಲ್ಲಿ ಪುಟ್ಟರಾಜು ಹೆಸರು ಘೋಷಣೆ ಮಾಡಲು ಬಂದಿದ್ದೆ.
ಅಂದಿನ ಸಭೆಯಲ್ಲಿ ಕೆಲವು ಗೊಂದಲ ಬಂತು.
ಕೆಟ್ಟ ಸಂದೇಶ ಹೋಗಬಾರದು ಅಂತಾ ಸಭೆ ಮೊಟಕುಗೊಳಿಸಿದೆ.
ಇವತ್ತು ನಾನಲ್ಲ, ಪುಟ್ಟರಾಜಣ್ಣ ಅಭ್ಯರ್ಥಿಯಾಗಬೇಕಿತ್ತು.
ಆದ್ರೆ ನಾನು ಅಭ್ಯರ್ಥಿ ಆಗಿರೋದು ದೈವ ಇಚ್ಛೆ. ನನಗೆ ತುಮಕೂರು, ಚಿಕ್ಕಬಳ್ಳಾಪುರದಲ್ಲಿ ನಿಲ್ಲಲು ಒತ್ತಡ ಇತ್ತು.
ನಿಖಿಲ್ ಸ್ಪರ್ಧೆಗೂ ಒತ್ತಡ ಇತ್ತು.
ನಿಖಿಲ್ ಕೂಡ ಪುಟ್ಟರಾಜಣ್ಣ ಸ್ಪರ್ಧೆ ಮಾಡಲಿ ಅಂದಿದ್ರು. ಕಳೆದ ಚುನಾವಣೆಯಲ್ಲಿ ಕೆಲವು ಕಾರಣ ನಿಖಿಲ್ ಸೋಲಾಯ್ತು.
ದೇವೇಗೌಡರು ನಿಮ್ಮ ಪರ ಧನಿಯಾಗಿ ಜೀವನ ಮುಡಿಪಾಗಿ ಇಟ್ಟಿದ್ದಾರೆ.
ನಿಖಿಲ್ ಮತಗಳಿಂದ ಸೋತಿರಬಹುದು, ನೈತಿಕವಾಗಿ ಸೋತಿರಲಿಲ್ಲ. ಕುರುಕ್ಷೇತ್ರದ ಯುದ್ಧದಲ್ಲಿ ಅಭಿಮನ್ಯು ಚಕ್ರವ್ಯೂಹದಲ್ಲಿ ಸಿಲುಕಿ ಹತನಾದಂತೆ ನಿಖಿಲ್ ನ ಮಾಡಿದ್ರು.
ಕುತಂತ್ರದಿಂದ ನಿಖಿಲ್ ಸೋಲಾಯ್ತು ವಿನಃ ಮಂಡ್ಯ ಜನ ಸೋಲಿಸಿಲ್ಲ.

ನೀವು ನನ್ನನ್ನ ಎಳೆದು ಚುನಾವಣೆಗೆ ನಿಲ್ಲಿಸಿದ್ದೀರಿ. ಈ ಚುನಾವಣೆಯಲ್ಲೂ ಅಂದಿನ ಕುತಂತ್ರ ನಡೆಯುತ್ತಿದೆ.
ಕಾಂಗ್ರೆಸ್‌ ಅಭ್ಯರ್ಥಿಯಂತೆ ನಾವು ಹಣಕ್ಕೆ ಸಮನಲ್ಲ. ಹಣದಲ್ಲಿ ಚುನಾವಣೆ ಗೆಲ್ಲೋಕೆ ಎದುರಾಳಿ ನಿಂತಿದ್ದಾರೆ. ಮಂಡ್ಯ ಜನ ಹಣಕ್ಕೆ ಯಾವತ್ತೂ ಮಾರು ಹೋಗಿಲ್ಲ.
ಅದನ್ನ ಎದುರಿಸಲು ನನ್ನನ್ನ ದೈವ ಇಚ್ಛೆಯಂತೆ ಅಭ್ಯರ್ಥಿ ಆಗಿದ್ದೇನೆ.
ನನ್ನ ಬಗ್ಗೆ ಕಾಂಗ್ರೆಸ್‌ನವರು ಅವಹೇಳನ ಮಾಡಿ ಮಾತಾಡಿದ್ದಾರೆ.
ಅವರ ರೀತಿ ನಾನು ಮಾತಾಡಲ್ಲ.
ಹೆಚ್ಡಿಕೆ ಏನು ಕಿತ್ತು ಗುಡ್ಡೆ ಹಾಕಿದ್ದಾನೆ ಅಂತಾ ಏಕವಚನದಲ್ಲಿ ಪ್ರಶ್ನಿಸಿದ್ದಾರೆ.
ನನಗೆ ಅವರ ಸರ್ಟಿಫಿಕೇಟ್ ಬೇಕಿಲ್ಲ.

ಈ ಜಿಲ್ಲೆಯ ಜನ ನನ್ನ ಕೆಲಸವನ್ನ ನಿಮ್ಮ ಹೃದಯದಲ್ಲಿ ಸ್ಮರಿಸಿಕೊಂಡರೆ ಸಾಕು.
ಅದಕ್ಕಿಂತ ದೊಡ್ಡ ಉಪಕಾರ ಇನ್ನೊಂದು ಬೇಕಿಲ್ಲ.
ದೇವೇಗೌಡರ ಕಾವೇರಿ ಹೋರಾಟಕ್ಕೆ ಆರ್ಥಿಕ ನೆರವು ಕೊಟ್ಟಿದ್ದು ನಾನು.
ಸಕ್ಕರೆನಾಡು, ಹಸಿರುನಾಡಲ್ಲಿ 200ಕ್ಕೂ ಹೆಚ್ಚು ರೈತರ ಆತ್ಮಹತ್ಯೆ ಆಗಿತ್ತು. ಆಗ ಈ ಮಹಾನುಭಾವರು ಯಾರು ಹೋಗಿ ಭೇಟಿ ಮಾಡಲಿಲ್ಲ.
ನಾನು ಆ ರೈತ ಕುಟುಂಬಗಳಿಗೆ ಭೇಟಿ ಕೊಟ್ಟು, ಸಣ್ಣ ಸಹಾಯ ಮಾಡಿದ್ದೆ. ಅಂದೇ ಭರವಸೆ ಕೊಟ್ಟಿದ್ದೆ ರೈತರ ಸಾಲಮನ್ನಾ ಮಾಡುವುದಾಗಿ.
ಅದರಂತೆ ಅಧಿಕಾರಕ್ಕೆ ಬಂದಾಗ ರೈತರ ಸಾಲಮನ್ನಾ ಮಾಡಿದೆ.
ಹಿಂದಿನ ಚುನಾವಣೆಯಲ್ಲಿ ಕನಕಪುರದ ಸ್ನೇಹಿತ ಪೆನ್ನು, ಪೇಪರ್ ಕೊಡಿ ಅಂದ್ರು. ನಮ್ಮ ನೀರು ನಮ್ಮ ಹಕ್ಕು ಹೋರಾಟ ಮಾಡಿದ್ರು.
ಈಗ ನಮ್ಮ ನೀರು, ತಮಿಳುನಾಡಿನ ಹಕ್ಕು ಅಂತಾರೆ. ಈ ಜಿಲ್ಲೆಯ ಉಸ್ತುವಾರಿ ಸಚಿವ ನನ್ನ ಬಗ್ಗೆ ಮಾತಾಡ್ತಾರೆ.

ಆತನನ್ನ ಮೊದಲು ಮಂತ್ರಿ ಮಾಡಿಸಿದ್ದು ಪುಟ್ಟರಾಜು.
ಇವತ್ತು ರೈತರು ಭತ್ತ, ಬೆಳೆ ಬೆಳೆಯಬೇಡಿ ಅಂತಾರೆ.
75 ವರ್ಷದಲ್ಲಿ ಒಬ್ಬ ಕೃಷಿ ಮಂತ್ರಿ ಈ ರೀತಿ ಹೇಳಿದ್ದು ಇದೇ ಮೊದಲು.
ಇವತ್ತು ಕಬ್ಬು ಬೆಳೆ ಒಣಗಿ, ಬೆಂಕಿಯಲ್ಲಿ ಬೇಯುತ್ತಿದೆ.
ಮಂಡ್ಯ ಜಿಲ್ಲೆಯ ಈ ಪರಿಸ್ಥಿತಿಗೆ ದರಿದ್ರ ಕಾಂಗ್ರೆಸ್‌ ಸರ್ಕಾರ ಕಾರಣ.
ಈ ಜಿಲ್ಲೆಯ ಜನ ಪುಣ್ಯ ಕೋಟಿ ಕಥೆ ಕೇಳಿ ಬಂದ ಜನ.
ಪ್ರೀತಿಯಿಂದ ಕಂಡರೆ ಪ್ರೀತಿಸುತ್ತೀರಿ.
ತಾಯಂದಿರಲ್ಲಿ ಕೈ ಮುಗಿದು ಮನವಿ ಮಾಡ್ತೀನಿ 2 ಸಾವಿರಕ್ಕೆ ಮರುಳಾಗಬೇಡಿ.
ಜಾತಿ ಗಣತಿಯಲ್ಲಿ ಹಲವು ಸಮುದಾಯಗಳಿಗೆ ದೋಖಾ ಮಾಡಲು ಹೋಗ್ತಿದ್ದಾರೆ ಸಿದ್ದರಾಮಯ್ಯ. ದೇಶದ ಆರ್ಥಿಕತೆ ಖಾಲಿ ಚೊಂಬು ಮಾಡಿದ್ದು ಮೋದಿಯಲ್ಲ. ರಾಜ್ಯದ ಖಜಾನೆಯನ್ನ ಖಾಲಿ ಚೊಂಬು ಮಾಡಿದ್ದು ಕಾಂಗ್ರೆಸ್‌.

ಎಐಸಿಸಿ ನೂತನ ಗ್ಯಾರಂಟಿಗಳ ಬಗ್ಗೆಯೂ ವ್ಯಂಗ್ಯ.

ಹಿಂದೆ ಒಂದು ಟಿಸಿಗೆ 25 ಇತ್ತು ಇವತ್ತು ಲಕ್ಷ ಕೊಡ ಬೇಕು.


ಮಹಿಳೆಯರಿಗೆ ಕೊಡುತ್ತಿರುವ 2 ಸಾವಿರ ನಿಮ್ಮದೇ ದುಡ್ಡು.
ಸಾಲದ ಮೇಲೆ ಸಾಲ ಮಾಡಿ ಹಣ ಕೊಡ್ತಿದ್ದಾರೆ. ಈ ಸಾಲವನ್ನ ಮುಂದೆ ತೀರಿಸಬೇಕಾಗುತ್ತೆ.
ಮಹಿಳೆಯರಿಗೆ 2 ಸಾವಿರ ಕೊಡ್ತೀವಿ ಅಂತಾರೆ. ಸಂಜೆ ಆಯ್ತು ಅಂದ್ರೆ ಯಜಮಾನರ ಜೇಬಿಗೆ ಕತ್ತರಿ ಹಾಕ್ತಾರೆ. ಇದು ಪಿಕ್ ಪಾಕೆಟ್ ಸರ್ಕಾರ. ಇವತ್ತು ಅಭಿವೃದ್ಧಿ ಸಂಪೂರ್ಣ ನಿಂತೋಗಿದೆ.
750 ತೆಗೆದುಕೊಳ್ಳುವುದಕ್ಕೆ ರೈತರೇನು ಭಿಕ್ಷುಕರ?
ರಾಜ್ಯದಲ್ಲಿ ಸಾರಾಯಿ, ಲಾಟರಿ ನಿಷೇಧ ಮಾಡಿದ್ದು ಈ ಕುಮಾರಸ್ವಾಮಿ. ಇವತ್ತು ಮಂಡ್ಯ ಜಿಲ್ಲೆಯಲ್ಲಿ ಬೆಟ್ಟಿಂಗ್, ಪ್ಲೇವಿನ್ ಆಟ ರಾಜಾರೋಷವಾಗಿ ನಡೆಯುತ್ತಿದೆ.
ನೀವೇ ಬೆಳೆಸಿದ ಮಕ್ಕಳು ನಾವು.
ಅಧಿಕಾರ ಇರಲಿ, ಇಲ್ಲದಿರಲಿ ನಿಮ್ಮ ಬಿಟ್ಟು ಹೋಗಲಿಲ್ಲ.

ಸದಾ ನಿಮ್ಮ ಜೊತೆ ಇರುವವರು ನಾವು. ಖಾಲಿ ಚೊಂಬು ತುಂಬಿಸಿ ಅಂತಾ ಕೇಂದ್ರದ ಮುಂದೆ ಅರ್ಜಿ ಹಾಕಿಕೊಂಡು ನಿಂತಿದ್ದಾರೆ.
ಮಹಿಳೆಯರಿಗೆ ಒಂದು ಲಕ್ಷ ಕೊಡ್ತೀವಿ ಅಂತಾರೆ. ಹಣವೇ ಇಲ್ಲವಲ್ಲ, ಎಲ್ಲಿಂದ ತರ್ತಾರೆ.
ಕೇಂದ್ರದಲ್ಲಿ ಯಾವ ಕಾರಣಕ್ಕೂ ಕಾಂಗ್ರೆಸ್‌ ಅಧಿಕಾರಕ್ಕೆ ಬರಲ್ಲ.
ಕಾಂಗ್ರೆಸ್‌ನ ಗ್ಯಾರಂಟಿಗಳನ್ನ ನಂಬಬೇಡಿ.

ನಿಮ್ಮ ಮನೆಯ ಮಕ್ಕಳು, ಯಜಮಾನರೇ ನಿಮ್ಮ ಶಾಶ್ವತ ಗ್ಯಾರಂಟಿ. ಮೇಕೆದಾಟು, ಕಾವೇರಿ ವಿಚಾರವಾಗಿ ಈಗಾಗಲೇ ದೇವೇಗೌಡರು ಮೋದಿ ಜೊತೆ ಮಾತಾಡಿದ್ದಾರೆ. ಇದಕ್ಕೆ ಐದು ವರ್ಷದೊಳಗೆ ಶಾಶ್ವತ ಪರಿಹಾರ ದೇವೇಗೌಡರು ಕೊಡಿಸ್ತಾರೆ.
ಕುಮಾರಸ್ವಾಮಿಯ ಹೊರಗಿನವರು, ಈ ಕಾಂಗ್ರೆಸ್‌ ಅಭ್ಯರ್ಥಿ ಒಳಗಿನವರಂತೆ. ಈ ಕಾಂಗ್ರೆಸ್‌ ಅಭ್ಯರ್ಥಿ ಎಲ್ಲಿದ್ದ ರೈತರು ಅತ್ಮಹತ್ಯೆ ಮಾಡಿಕೊಂಡಾಗ.
ಎಷ್ಟು ದಿನ ಮಂಡ್ಯಕ್ಕೆ ಬಂದು ಹೋಗಿದ್ದಾರೆ. ನಿತ್ಯವೂ ಹಣದ ಸಮಾರಾಧನೆ ನಡೀತ್ತಿದೆ.
ನಾವು ನಮ್ಮ ಮನೆಗೆ ಶ್ರೀಮಂತರನ್ನ ಎಂದೂ ಬಿಟ್ಟುಕೊಂಡಿಲ್ಲ.
ಬೆಳಿಗ್ಗೆ ಆದ ತಕ್ಷಣ ನಾನು ಮುಖ ನೋಡೋದು ಬಡವರನ್ನ.
ಹಣದ ಮದದಿಂದ ಈ ಕುಮಾರಸ್ವಾಮಿ ಮುಗಿಸಲು ಪ್ರಯತ್ನ ಮಾಡ್ತಿದ್ದಾರೆ. ಈ ಮಂಡ್ಯ ಜನ ಹಣಕ್ಕೆ ಯಾವತ್ತೂ ಬೆಲೆ ಕೊಟ್ಟಿಲ್ಲ. ನನ್ನ ಆಸ್ತಿ ರೈತರು ಮತ್ತು ನೀವು. ನಾನು ಹೆಸರಿಗೆ ಮಾತ್ರ ಅಭ್ಯರ್ಥಿ. ಇವತ್ತು ಪುಟ್ಟರಾಜಣ್ಣನ ನೇತೃತ್ವದಲ್ಲೇ ಈ ಚುನಾವಣೆ ನಡೆಯಲಿದೆ. ನನ್ನ ಸೋಲು ಗೆಲುವು ಈ ಜಿಲ್ಲೆಯ ಪುಣ್ಯಾತ್ಮ ತಂದೆ ತಾಯಿಯಂದಿರ ಕೈಲಿದೆ. ಸಿದ್ದರಾಮಯ್ಯ, ಶಿವಕುಮಾರ್ ನಂತಹ ಹತ್ತು ಜನ ಬಂದ್ರು ಅದು ಸಾಧ್ಯವಿಲ್ಲ. ನನಗೆ ಮೂರನೇ ಬಾರಿ ಶಸ್ತ್ರ ಚಿಕಿತ್ಸೆ ಆಗಿದೆ. ನಾನು ಇವತ್ತು ಉಳಿದಿರೋದು ನಿಮ್ಮೆಲ್ಲರ ಹಾರೈಕೆಯಿಂದ. ನನ್ನ ಶಸ್ತ್ರ ಚಿಕಿತ್ಸೆ ಬಗ್ಗೆ ಹಳೇ ಸ್ನೇಹಿತ ಮಾತಾಡ್ತಾನೆ.
25 ಲಕ್ಷ ವೆಚ್ಚ ಮಾಡಿ, ಹೊಸ ಟೆಕ್ನಾಲಜಿಯಡಿ ಶಸ್ತ್ರ ಚಿಕಿತ್ಸೆ ಮಾಡಿಸಿದ್ದೇನೆ.

ನನ್ನ ಸ್ವಾರ್ಥ, ಗೆಲುವಿಗಾಗಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲಿಲ್ಲ.
ಸ್ವತಂತ್ರವಾಗಿ ಜೆಡಿಎಸ್‌ನ ಅಧಿಕಾರಕ್ಕೆ ತರಲು ಪ್ರಯತ್ನ ಮಾಡಿದೆ. ದೇವೇಗೌಡರ ಬಗ್ಗೆ ಮೋದಿಗೆ ಗೌರವ ಇದೆ.
ಅಂತಹ ಗೌರವ ಕೊಡುವ ವ್ಯಕ್ತಿಯ ಕೈಬಲಪಡಿಸಲು ಮೈತ್ರಿ.
ಕಾಂಗ್ರೆಸ್‌ನವರನ್ನ ನಂಬಿದಕ್ಕೆ ನನ್ನನ್ನ ಹೆಂಗೆ ನಡೆಸಿಕೊಂಡರು.
ನನಗಲ್ಲ ಅವರು ಮಾಡಿದ ಅವಮಾನ, ಇಡೀ ನಾಡಿನ ಜನರಿಗೆ ಮಾಡಿದ ಅವಮಾನ. ಇಂತಹ ಸಭೆ ಆಯೋಜಿಸಿದ ಪುಟ್ಟಣ್ಣಂಗೆ ಹ್ಯಾಟ್ಸ್ ಆಫ್ ಹೇಳ್ತೀನಿ. ನಿಮ್ಮ ಬದುಕನ್ನ ಒಳ್ಳೆಯ ರೀತಿ ತೆಗೆದುಕೊಂಡು ಹೋಗಲಿಕ್ಕೆ ಇಲ್ಲಿಂದಲೇ ಒಂದು ಸಂದೇಶ ಕೊಡಿ. ನಿಮ್ಮ ದುಡಿಮೆ, ಶ್ರಮದಿಂದ 5 ಲಕ್ಷಕ್ಕೂ ಹೆಚ್ಚು ಮತಗಳಿಂದ ಆಶೀರ್ವಾದ ಮಾಡಿ.
ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿ ಫೋಟೋ ನೋಡಿ ಯಾರೂ ಓಟ್ ಮಾಡಬೇಡಿ ದಯವಿಟ್ಟು.
ನಾವು, ದೇವೇಗೌಡರು ಮುಸ್ಲಿಮರ ಬಗ್ಗೆ ಗೌರವ ಇಟ್ಟುಕೊಂಡಿದ್ದೇವೆ.
ಮುಸ್ಲಿಮರನ್ನ ನಾವು ಯಾವತ್ತೂ ಅಗೌರವದಿಂದ ನೋಡಲ್ಲ, ನಡೆಸಿಕೊಳ್ಳಲ್ಲ ಎಂದರು.

ಮಾಜಿ ಶಾಸಕ ಸಿಎಸ್ ಪುಟ್ಟರಾಜು ಸೇರಿದಂತೆ ಶಾಸಕ ಮಂಜು, ಜಿಲ್ಲೆಯ ಮಾಜಿ ಶಾಸಕರು, ಜೆಡಿಎಸ್ ಹಾಗೂ ಬಿಜೆಪಿ ಮುಖಂಡರುಗಳು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Mandya

ಮತ ಎಣಿಕೆ ನಿಖರವಾಗಿರಲಿ: ಜಿಲ್ಲಾಧಿಕಾರಿ ಡಾ.ಕುಮಾರ

Published

on

ಮಂಡ್ಯ: ಮಂಡ್ಯ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆಯು ಜೂನ್ 4 ರಂದು ನಡೆಯಲಿದ್ದು, ಮತ ಎಣಿಕೆಯ ಕೆಲಸ ನಿಖರವಾಗಿರಲಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮತ ಎಣಿಕೆ ತರಬೇತಿ ಕುರಿತಂತೆ ಸಭೆ ನಡೆಸಿ ಮಾತನಾಡಿದ ಅವರು,‌ ಜಿಲ್ಲೆಯ‌ 08 ವಿಧಾನಸಭಾ ಕ್ಷೇತ್ರದ ಇ.ವಿ.ಎಂ ಯಂತ್ರಗಳನ್ನು 16 ಕೊಠಡಿಗಳು/ ಸ್ಟ್ರಾಂಗ್ ರೂಂ ನಲ್ಲಿ ಇಡಲಾಗಿದೆ.

ಜೂನ್ 04 ರಂದು 16 ಸ್ಟ್ರಾಂಗ್ ರೂಂ. ಗಳನ್ನು ತೆರೆದು ಎಣಿಕೆ ಪ್ರಾರಂಭಿಸಲಾಗುವುದು ಎಂದರು.

ಇ.ವಿ‌.ಎಂ ಗಳು ಬೆಳಿಗ್ಗೆ 8 ಗಂಟೆಗೆ ಎಣಿಕೆ ಟೇಬಲ್ ಗಳಿಗೆ ತಲುಪಿಸಲಾಗುವುದು. ಮತ ಎಣಿಕೆಯ ಸಿಬ್ಬಂದಿಗಳು ಎಣಿಕೆಯ ಸಂದರ್ಭದಲ್ಲಿ ಚುನಾವಣಾ ಆಯೋಗ ನೀಡಿರುವ ನಿರ್ದೇಶನಗಳನ್ನು ಪಾಲಿಸಬೇಕು ಯಾವುದೇ ಲೋಪವಾಗದಂತೆ ನೋಡಿಕೊಳ್ಳಿ ಎಂದರು.

ಸಹಾಯಕ ಚುನವಣಾಧಿಕಾರಿಗಳು ಪ್ರತಿ ಸುತ್ತಿನ ಎಣಿಕೆಯನ್ನು ಚುನಾವಣಾ ಆಯೋಗ ತಿಳಿಸುವ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಬೇಕಿರುತ್ತದೆ. ಇಲ್ಲಿ ತಿದ್ದುಪಡಿಗೆ ಅವಕಾಶ ನೀಡದಂತೆ ಕಾರ್ಯನಿರ್ವಹಿಸಿ ಎಂದರು.

ಪ್ರತಿ ವಿಧಾನಸಭಾ ಕ್ಷೇತ್ರವಾರು ಇ.ವಿ.ಎಂ.ಗಳನ್ನು ಮತ ಎಣಿಕೆ ಕೊಠಡಿಗೆ ತಲುಪಿಸಲು ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು. ಸಹಾಯಕ ಚುನಾವಣಾ ಅಧಿಕಾರಿಗಳು ಅವರನ್ನು ಗುರುತಿಸಲು ನಿಗದಿ ಪಡಿಸಿದ ಬಣ್ಣದ ಟೀ ಶಟ್೯ ಸಹ ನೀಡಲಾಗುವುದು. ನಿಯೋಜಿಸಲಾಗುವ ಸಿಬ್ಬಂದಿಗಳು ತಿಳಿಸಲಾಗುವ ಸಮಯಕ್ಕೆ ಎಣಿಕೆ ಕೇಂದ್ರ ಹಾಗೂ ಸ್ಥಳದಲ್ಲಿ ಹಾಜರಾಗಿ ಶಿಸ್ತು ಬದ್ಧವಾಗಿ ಕಾರ್ಯನಿರ್ವಹಿಸಬೇಕು. ಈ ಕುರಿತಂತೆ ಸಹಾಯಕ ಚುನಾವಣಾಧಿಕಾರಿಗಳು ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ನಿರ್ದೇಶನ ನೀಡಿ ಸಮನ್ವಯದಿಂದ ಕಾರ್ಯನಿರ್ವಹಿಸಿ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Continue Reading

Mandya

ಬಸವಣ್ಣನವರ ಪಾರ್ಲಿಮೆಂಟ್ ಸ್ಥಾಪನೆಯಾಗಲಿ :ಬಸವತತ್ವ – ಸಂವಿಧಾನ ರಕ್ಷಣೆಯಾಗಬೇಕು – ರಂಜಾನ್ ದರ್ಗ

Published

on

ಮಂಡ್ಯ: ಸರ್ವರನ್ನೂ ಒಳಗೊಂಡ ಸಮಸಮಾಜದ ಪರಿಕಲ್ಪನೆಯ ಬಸವ ತತ್ವದ ಆಧಾರದಲ್ಲೇ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚಿಸಿದ್ದಾರೆಂದು ಸಾಮಾಜಿಕ ಚಿಂತಕ ರಂಜಾನ್‌ದರ್ಗಾ ಪ್ರತಿಪಾದಿಸಿದರು.

ನಗರದ ಗಾಂಧಿಭವನದಲ್ಲಿ ಬಸವ ಜಯಂತಿ ಆಚರಣೆ ಅಂಗವಾಗಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ವತಿಯಿಂದ ಭಾನುವಾರ ಏರ್ಪಡಿಸಿದ್ದ `ಬಸವ ತತ್ವ ರಕ್ಷಣೆಯಲ್ಲಿ ಸಂವಿಧಾನ ಕುರಿತ ವಿಚಾರ ಚಿಂತನೆ ಮತ್ತು ಬಸವಶ್ರೀ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಸವಣ್ಣನವರ ಇವ ನಮ್ಮವ ಇವ ನಮ್ಮವ ಎಂಬ ಎಲ್ಲರನ್ನೂ ನಮ್ಮವರೆಂದು ಕಾಣುವ ಸೂತ್ರವನ್ನು ಸಂವಿಧಾನದ ಪೀಠಿಕೆಯಲ್ಲೇ ಕಾಣಿಸಲಾಗಿದೆ ಎಂದರು.

ಜಗತ್ತಿನಲ್ಲಿಯೇ ಎಲ್ಲೂ ಕಾಣದಿರುವಂತಹ ಶರಣ ಸಂಕುಲ ನಮ್ಮ ಕನ್ನಡದ ನೆಲದಲ್ಲಿ ಒಂದುಗೂಡಿತ್ತು. ೧೧ನೇ ಶತಮಾನದಲ್ಲಿಯೇ ಎಲ್ಲ ಕಾಯಕವರ್ಗಗಳ ೭೦೦ಕ್ಕೂ ಹೆಚ್ಚಿನ ಪ್ರತಿನಿಧಿಗಳಿಂದ ಅನುಭವ ಮಂಟಪ ರೂಪುಗೊಂಡಿತ್ತು. ಅದೇ ಮಾದರಿಯಲ್ಲಿಯೇ ಇಂದಿನ ಪಾರ್ಲಿಮೆಂಟ್ ಕೂಡ ಇದೆ. ಆದರೆ ಬಸವ ತತ್ವವನ್ನು ಕಡೆಗಣಿಸಲಾಗುತ್ತಿದೆ. ಹಾಗಾಗಿ ಬಸವಣ್ಣನ ಪಾರ್ಲಿಮೆಂಟ್ ಸ್ಥಾಪನೆಯಾಗಬೇಕು, ಬಸವ ತತ್ವ ಮತ್ತು ಅಂಬೇಡ್ಕರ್‌ರ ಸಂವಿಧಾನ ರಕ್ಷಣೆಯಾಗಬೇಕೆಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್ ಮಾತನಾಡಿ, ಕಸುಬಿನ ಆಧಾರದಲ್ಲಿ ಜಾತಿ ಮಾಡಲಾಗಿದೆ. ಆದರೆ ಇಂದು ಅದೇ ಜಾತಿಗಳನ್ನು ರಾಜಕೀಯ ಲಾಭಕ್ಕೆ ಬಳಸಲಾಗುತ್ತಿದೆ. ಪರಿಣಾಮ ಜಾತಿ ಮತ, ಧರ್ಮಾಚರಣೆಗಳು ಗಟ್ಟಿಯಾಗಿ ಬೇರೂರುತ್ತಿವೆ. ಇಂದಿನ ಆಧುನಿಕ ದಿನಮಾನಗಳಲ್ಲೂ ಜಾತಿ ಎಂಬುದು ಎಷ್ಟು ಗಟ್ಟಿಯಾಗಿದೆ ಎಂಬುದಕ್ಕೆ ಇತ್ತೀಚೆಗೆ ಮಂಡ್ಯದAತಹ ನೆಲದಲ್ಲಿ ನಡೆದಿರುವ ಮರ್ಯಾದಾ ಹತ್ಯೆಗಳೇ ಸಾಕ್ಷಿ ಎಂದರು.

ಇಂತಹ ಕಾಲಘಟ್ಟದಲ್ಲಿ ಸಮಾಜವನ್ನು ಸರಿದಾರಿಗೆ ತರಬೇಕಾದ ಮಠ ಮಾನ್ಯಗಳೂ ಕೂಡ ರಾಜಕಾರಣಕ್ಕೆ ಇಳಿದುಬಿಟ್ಟಿವೆ. ಹಾಗಾಗಿ ಇಲ್ಲಿ ಧನಿಕನಿಗೊಂದು ನ್ಯಾಯ ಬಡವನಿಗೊಂದು ನ್ಯಾಯ ಎಂಬಂತಾಗಿದೆ. ಹಾಗಾಗಿ ನಾವು ಮತ್ತೆ ಹಿಂದಕ್ಕೆ ಹೋಗಿದ್ದೇವಾ? ಅಥವಾ ಮುಂದಕ್ಕೆ ಕಾಲಿರಿಸಿದ್ದೇವಾ ಎಂಬ ಸಂಶಯ ಕಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಹಣ ಬಲ ಮತ್ತು ಜಾತಿ ಬಲದ ಮೇಲೆ ರಾಜಕೀಯ ನಿಂತಿದೆ. ಹಾಗಾಗಿ ಸಾಮಾಜಿಕ ನ್ಯಾಯ ಎಂಬುದು ಮರೀಚಿಕೆಯಾಗುತ್ತಿದೆ ಎಂದು ವಿಷಾಧಿಸಿದರು.

ಪ್ರಾಸ್ತಾವಿಕ ನುಡಿಯಾಡಿದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ಇಂದಿನ ಆಧುನಿಕ ಯುಗದಲ್ಲೂ ಜಾತೀಯತೆ, ಕೋಮುವಾದ, ಮಹಿಳಾ ಶೋಷಣೆ ಮುಂದುವರೆದಿದೆ. ಶೋಷಿತರು ಮತ್ತು ತಬ್ಬಲಿ ಸಮಾಜಗಳು ಉಳಿವಿನ ಹೋರಾಟ ನಡೆಸುತ್ತಿವೆ. ಈ ವ್ಯವಸ್ಥೆಯ ಸುಧಾರಣೆಗೆ ಬಸವ ತತ್ವವೊಂದೇ ಪರಿಹಾರ ಮಾರ್ಗ ಎಂದ ಅವರು, ಬಸವ ತತ್ವದ ಆಶಯದಲ್ಲೇ ರೂಪುಗೊಂಡಿರುವ ಸಂವಿಧಾನ ಸಂರಕ್ಷಣೆಯ ಮೂಲಕ ಆಧುನಿಕ ಅನುಭವ ಮಂಟಪವನ್ನು ಜೀರ್ಣೋದ್ಧಾರ ಮಾಡಬೇಕಿದೆ ಎಂದು ತಿಳಿಸಿದರು.

ಬಳಿಕ ಜಿಲ್ಲೆಯ ವಿವಿಧ ಕಾಯಕ ವರ್ಗಗಳ ೧೨ ಮಂದಿ ಸಾಧಕರಿಗೆ ಬಸವಶ್ರೀ ಪ್ರಶಸ್ತಿ ಹಾಗೂ ಕಾಯಕಯೋಗಿ ಪ್ರತಿಷ್ಠಾನದ ವತಿಯಿಂದ ಸಾಮಾಜಿಕ ಚಿಂತಕ ರಂಜಾನ್‌ದರ್ಗಾ ಅವರಿಗೆ ಕಾಯಕಯೋಗಿ ಪುರಸ್ಕಾರ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಮತ್ತು ಮೈಶುಗರ್ ಅಧ್ಯಕ್ಷರಾದ ಸಿ.ಡಿ.ಗಂಗಾಧರ್, ಕಾಯಕಯೋಗಿ ಪ್ರತಿಷ್ಠಾನದ ಎಂ.ಶಿವಕುಮಾರ್, ಬಾಬುನಾಯಕ್, ಸುರೇಶ್‌ಬಾಬು ಮತ್ತಿತರರು ಪಾಲ್ಗೊಂಡಿದ್ದರು.

ಅನುಭವ ಮಂಟಪದ ಮಾದರಿಯಲ್ಲಿ ಸಮಾಜದ ವಿವಿಧ ವರ್ಗಗಳ ಸಾಧಕರನ್ನು ಗುರುತಿಸಿ ಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಿದ್ದು ವಿಶೇಷವಾಗಿತ್ತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಂ.ವಿ.ಧರಣೇಂದ್ರಯ್ಯ, ಕವಿ ಕೆ.ಪಿ.ಮೃತ್ಯುಂಜಯ, ದಸಂಸ ರಾಜ್ಯ ಸಂಚಾಲಕ ಸೋಮನಹಳ್ಳಿ ಅಂದಾನಿ, ಲಿಂಗಾಯಿತ ಮಹಾಸಭಾದ ಜಿಲ್ಲಾಧ್ಯಕ್ಷ ಎಂ.ಬೆಟ್ಟಹಳ್ಳಿ ಮಂಜುನಾಥ್, ಶ್ರೀರಂಗಪಟ್ಟಣ ತಾಲೂಕು ಪ್ರಜ್ಞಾವಂತರ ವೇದಿಕೆ ಅಧ್ಯಕ್ಷ ಸಿ.ಎಸ್. ವೆಂಕಟೇಶ್, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ನಾಗಮಂಗಲ ಸಾವಿತ್ರಮ್ಮ, ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಂ.ಟಿ. ಶ್ರೀನಿವಾಸ್, ಬಾಬು ಜಗಜೀವನರಾಂ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಎನ್.ಆರ್. ಚಂದ್ರಶೇಖರ್, ಕುಂಬಾರ ಸಮಾಜದ ಹಿರಿಯ ಮುಖಂಡ ಅರಕೆರೆ ದಾಸಪ್ಪ, ಮಡಿವಾಳ ಸಮುದಾಯದ ಮಹಿಳಾ ಮುಖಂಡರಾದ ಅಕ್ಕಿಹೆಬ್ಬಾಳು ಮಣಿಯಮ್ಮ, ಗೊಲ್ಲ ಸಮುದಾಯದ ಹಿರಿಯ ಮುಖಂಡ ಗಿರಿಯಪ್ಪ ಗೊಲ್ಲರದೊಡ್ಡಿ ಅವರಿಗೆ ಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

Continue Reading

Mandya

ಚೆಸ್ ಪಂದ್ಯಾವಳಿಯಲ್ಲಿ‌ ಜಿಲ್ಲೆಯ 06 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

Published

on

ಮಂಡ್ಯ: ನಗರದ ರಾಯಲ್ ಚೆಸ್ ಅಕಾಡೆಮಿಯ ಆರು ವಿದ್ಯಾರ್ಥಿಗಳು ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ ಎಂದು ಅಕಾಡೆಮಿಯ ತರಬೇತುದಾರ ಎಂ.ಎಸ್.ಚೇತನ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ 14ರಂದು ಮಂಡ್ಯದ ಗಾಂಧಿ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ವಿವಿಧ ವಿಭಾಗಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿ ಈ ಆರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು ಉಳಿದವರು ಕೂಡ ಬಹುಮಾನ ಗಳಿಸಿದ್ದಾರೆ ಎಂದರು .

19 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಆಶಿತ್ ರಂಜನ್ ಗೌಡ, 17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಎಸ್ ಸುಮುಕ್, 13 ವರ್ಷದೊಳಗಿನ ವಿಭಾಗದಲ್ಲಿ ಎಂ.ಹೆಚ್.ಯದ್ವಿತಿ, 11 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಸಿ.ಚಿರಾಗ್, 9 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ನಿಹಾರಿಕ, 7ನೇ ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಹೇಮಂತ್ ಆಯ್ಕೆಯಾಗಿದ್ದು ಇತರ ವಿದ್ಯಾರ್ಥಿಗಳು ಸಹ ಬಹುಮಾನಗಳನ್ನು ಗಳಿಸಿದ್ದಾರೆ ಎಂದರು.

ಗೋಷ್ಠಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳು ಬಹುಮಾನಗಳದಿಗೆ ಉಪಸ್ಥಿತರಿದ್ದರು.

Continue Reading

Trending

error: Content is protected !!