Connect with us

Mandya

ಮಳವಳ್ಳಿ ವಸತಿ ಶಾಲೆಯ ದುರ್ಘಟನೆ : ಎಚ್‌ಡಿಕೆ ಕಳವಳ

Published

on

ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲ್ಲೂಕಿನಲ್ಲಿ ಟಿ.ಕಾಗೇಪುರ ಗ್ರಾಮದ ಖಾಸಗಿ ವಸತಿ ಶಾಲೆ ಕಲುಷಿತ ಆಹಾರ ಸೇವನೆಯಿಂದ ಓರ್ವ ವಿದ್ಯಾರ್ಥಿ ಸಾವನ್ನಪ್ಪಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಮಂಡ್ಯ ಸಂಸ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಅಸ್ವಸ್ಥ ಮಕ್ಕಳ ಆರೋಗ್ಯದ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ಸಂಬಂಧ ಮಳವಳ್ಳಿ ತಹಶೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಂದ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಸಚಿವರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳ ಆರೋಗ್ಯ ಪರಿಸ್ಥಿತಿಯನ್ನು ವಿಚಾರಿಸಿಕೊಂಡಿದ್ದಾರೆ.

ಬೇಸಿಗೆಯಲ್ಲಿ ಕುಡಿಯುವ ನೀರು ಹಾಗೂ ಆಹಾರದ ಬಗ್ಗೆ ಜಾಗ್ರತೆಯಿಂದ ಇರಬೇಕು. ಮಕ್ಕಳಿಗೆ ನೀಡಲಾಗುವ ಆಹಾರದ ಬಗ್ಗೆ ಕಟ್ಟೆಚ್ಚರ ವಹಿಸಬೇಕು ಎಂದು ಸ್ಪಷ್ಟ ನೀಡಿರುವ ಸಚಿವರು, ಮೃತಪಟ್ಟಿರುವ ವಿದ್ಯಾರ್ಥಿ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಅಥವಾ ಖಾಸಗಿ ವಸತಿ ಶಾಲೆಗಳಲ್ಲಿ ಆಹಾರದ ಬಗ್ಗೆ ಅಧಿಕಾರಿಗಳು, ಸಂಬಂಧಪಟ್ಟ ಸಿಬ್ಬಂದಿ ಎಚ್ಚರಿಕೆ ವಹಿಸಬೇಕು. ಈ ಬಗ್ಗೆ ಕಠಿಣ ನಿಗಾ ಇಡಬೇಕು ಎಂದು ತಹಶೀಲ್ದಾರ್ ಅವರಿಗೆ ಸಚಿವರು ಸೂಚನೆ ನೀಡಿದ್ದಾರೆ.

ಘಟನೆ ಬಗ್ಗೆ ನನಗೆ ಮಾಹಿತಿ ಬಂದಾಗ ನನಗೆ ತೀವ್ರ ಆಘಾತ ಉಂಟಾಯಿತು. ಈ ವಸತಿ ಶಾಲೆಯಲ್ಲಿ ಬಹುತೇಕ ಹೊರರಾಜ್ಯಗಳ ಮಕ್ಕಳೇ ಇದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲಾ ಮಕ್ಕಳಿಗೆ ಸೂಕ್ತ ಚಿಕಿತ್ಸೆ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಕೇಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

Mandya

ನನ್ನನ್ನು ನಂಬಿದವರೂ ಇದ್ದಾರೆ, ಟೀಕಿಸುವವರು ಇದ್ದಾರೆ: ಎಚ್‌ಡಿಕೆ

Published

on

ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಮಂತ್ರಿ ಸ್ಥಾನ ನೀಡಿ ನನಗೆ ಜವಾಬ್ದಾರಿ ಕೊಟ್ಟಿದ್ದಾರೆ. ನನ್ನ ಮೇಲೆ ನಂಬಿಕೆ ಇಟ್ಟ ವರ್ಗವೊಂದಾದರೆ ಟೀಕೆ ಮಾಡುವ ವರ್ಗವೂ ಇದೆ. ಆ ಟೀಕೆಗಳಿಗೆ ಸೊಪ್ಪು ಹಾಕದೇ ನಾಡಿನ ಜನತೆಯ ನೀರಿಕ್ಷೆಗೆ ಕೆಲಸ ಮಾಡುತ್ತೇನೆ. ರಾಜ್ಯಕ್ಕೆ ಆಗಬೇಕಾದ ಕೆಲಸಗಳಿಗೆ ನಾನು ತಕ್ಕ ನ್ಯಾಯ ಒದಗಿಸುತ್ತೇನೆ ಎಂದು ಕೇಂದ್ರದ ಉಕ್ಕು ಹಾಗೂ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಮಂಡ್ಯ ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿದೆಯೋ ಇಲ್ಲವೋ ಎಂಬುದು ಜನರಿಗೆ ಗೊತ್ತಿದೆ. ಗೃಹಲಕ್ಷ್ಮಿ ಹಣ ಕೊಡುತ್ತಿದ್ದಾರೋ ಇಲ್ಲವೋ ಎಂಬುದು ಗೊತ್ತಿಲ್ಲ. ಸರ್ಕಾರ ಬಂದ ನಂತರ ರಾಜ್ಯದಲ್ಲಿ ರೈತರ ಆತ್ಮಹತ್ಯೆ ನಡೆದಿದೆ. ಅದರ ಬಗ್ಗೆ ಯಾರು ಗಮನ ಹರಿಸುತ್ತಿಲ್ಲ. ೨೮೦೦ ರೈತರ ಆತ್ಮಹತ್ಯೆಯಾಗಿದೆ. ರಾಜ್ಯ ಸರ್ಕಾರ ಗ್ಯಾರಂಟಿ ಕೊಟ್ಟು ರೈತರ ಪರಿಸ್ಥಿತಿ ಎಲ್ಲಿಗೆ ತಂದಿಟ್ಟಿದೆ ಎಂದು ಕಿಡಿಕಾರಿದರು.

ಸಹಕಾರಿ ಬ್ಯಾಂಕುಗಳಲ್ಲಿ32 ಲಕ್ಷ ಕುಟುಂಬಕ್ಕೆ 22 ಕೋಟಿ ಸಾಲ ಕೊಡುತ್ತೇವೆ ಎಂದಿದ್ದ ಸರ್ಕಾರ ಈವರೆಗೂ ಕೊಟ್ಟಿಲ್ಲ, ಹೊಸದಾಗಿ ಸಾಲ ಕೊಟ್ಟಿಲ್ಲ. ಹೀಗಾದರೇ ರೈತರ ಪರಿಸ್ಥಿತಿ ಏನಾಗಬೇಕು ನನ್ನ ಚಿಂತನೆಯಾಗಿದೆ. ಗೃಹಲಕ್ಷ್ಮಿ ಹಣ ಒಟ್ಟಿಗೆ ಚುನಾವಣೆ ಬಂದಾಗ ಕೊಡುತ್ತಾರೆ. ಒಟ್ಟಿಗೆ ಕೊಟ್ಟಾಗ ಮಾತ್ರ ಜನ ಈ ಸರ್ಕಾರವನ್ನು ನೆನಪು ಇಟ್ಟಿಕೊಳ್ತಾರೆ ಲೂಟಿ ಮಾಡೋದೆ ಅಭಿವೃದ್ಧಿ ಅಂತ ಸರ್ಕಾರ ತಿಳಿದುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಭಿವೃದ್ಧಿ ವಿಚಾರದ ಬಗ್ಗೆ ಗೃಹ ಸಚಿವ ಪರಮೇಶ್ವರ್ ಲಘುವಾಗಿ ಮಾತನಾಡಿರುವ ಬಗ್ಗೆ ಪ್ರತಿಕ್ರಿಯಿಸಿ, ಸರ್ಕಾರಕ್ಕೆ ಅಭಿವೃದ್ಧಿ ಅಂದರೆ ಏನು ಅಂತ ಗೊತ್ತಿಲ್ಲ. ಇವರಿಗೆ ನಾಡಿನ ಜನತೆಯ ತೆರಿಗೆ ಹಣ ಮಾತ್ರ ಗೊತ್ತು. ಲೂಟಿ ಮಾಡೋದೆ ಅಭಿವೃದ್ಧಿ ಅಂತ ತಿಳಿದುಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದ್ವೇಷ ಭಾಷಣ ವಿಧೇಯಕ ಮಂಡನೆ ವಿಚಾರವನ್ನ ರಾಜ್ಯ ಸರ್ಕಾರ ಕೈಬಿಟ್ಟು ವೋಟ್ ಚೋರಿ ಪ್ರತಿಭಟನೆ ವೇಳೆ ಪ್ರಧಾನ ಮಂತ್ರಿಗಳ ಸಾವಿನ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಕೂಗಿರುವ ಘೋಷಣೆ ಬಗ್ಗೆ ಮೊದಲು ಅದರ ಮೇಲೆ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.

ಇಂದು ಮಳವಳ್ಳಿಯಲ್ಲಿ ಸುತ್ತೂರು ಶ್ರೀಗಳ ಕಾರ್ಯಕ್ರಮ ಇದೆ. ರಾಷ್ಟ್ರಪತಿ ಗಳು ಬರುತ್ತಿರುವುದರಿಂದ ನಾನು ಭಾಗಿಯಾಗುವ ದಿನವೇ ನನ್ನ ಹುಟ್ಟುಹಬ್ಬ ಬಿದ್ದಿದೆ. ಮಂಡ್ಯದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಹುಟ್ಟಿದ ದಿನ ಶುಭಕೋರಿದ್ದಾರೆ. ರಸ್ತೆಯುದ್ದಕ್ಕೂ ಅದ್ದೂರಿಯಾಗಿ ಸ್ವಾಗತಿಸಿ ಶುಭಕೋರಿದ್ದು, ನಾನು ಅವರಿಗೆ ಚಿರ ಋಣಿಯಾಗಿರುತ್ತೇನೆ. ನಾಡಿಗೆ ಒಳ್ಳೆಯದಾಗಬೇಕು ಅನ್ನೋದು ನನ್ನ ಕರ್ತವ್ಯ ಎಂದು ತಿಳಿಸಿದರು.

ಗೋಲ್ಡ್ ಚೈನ್’ ಉಡುಗೊರೆ ನೀಡಿದ ಕಾರ್ಯಕರ್ತ ಮಂಡ್ಯ ಸಂಸದರೂ ಆಗಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬನ್ನು ಜಿಲ್ಲೆಯ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ಜಿಲ್ಲೆಯ ಹಲವೆಡೆ ಅದ್ಧೂರಿಯಾಗಿ ಆಚರಿಸಿದರು.

ಮಂಡ್ಯ ನಗರದ ವಿ.ಸಿ.ಫಾರಂ ಗೇಟ್‌ನಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ನೂರಾರು ಮುಖಂಡರು ಕಾರ್ಯಕರ್ತರು ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಅಭಿನಂದಿಸಿ, ಅವರ ಕೈಯಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ನೆರವೇರಿಸಿದರು.

ಹೆಚ್‌ಡಿಕರೆ ವಿ.ಸಿ.ಫಾರಂ ಗೇಟ್‌ಗೆ ಆಗಮಿಸುತ್ತಿದ್ದಂತೆಯೇ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಬೃಹತ್ ಹಾರ ಹಾಕಿ, ಮಂಗಳವಾದ್ಯ, ಜಾನಪದ ಕಲಾತಂಡಗಳೊಂದಿಗೆ ಸ್ವಾಗತ ನೀಡಲಾಯಿತು. ಬಳಿಕ ಹುಟ್ಟುಹಬ್ಬದ ಅಂಗವಾಗಿ ಮುಖಂಡರು, ಬೆಂಬಲಿಗರು, ಕಾರ್ಯಕರ್ತರೊಂದಿಗೆ ಕೇಕ್ ಕತ್ತರಿಸಿದ ಹೆಚ್ಡಿಕೆಗೆ ನೂರಾರು ಮುಖಂಡರು ಮುಖಂಡರು, ಬೆಂಬಲಿಗರು, ಕಾರ್ಯಕರ್ತರಿಂದ ಅಭಿನಂದಿಸಿದರು.

ಗುತ್ತಿಗೆದಾರ ಪುರದಕೊಪ್ಪಲು ಶಂಕರೇಗೌಡ ಎಂಬುವವರು ಸ್ವತಃ ತಂದಿದ್ದ ಚಿನ್ನದ ಸರವನ್ನ ಹೆಚ್ಡಿಕೆ ಕೊರಳಿಗೆ ತೊಡಿಸಿದರು. ಜೆಡಿಎಸ್ ನಾಯಕರು ಆಗಿರುವ ಗುತ್ತಿಗೆದಾರ ಶಂಕರೇಗೌಡ, ಮಂಡ್ಯದ ವಿ.ಸಿ.ಫಾರಂ ಗೇಟ್ ಬಳಿ ನಡೆದ ಹೆಚ್ಡಿಕೆ ಕನಿಷ್ಟ 30 ಗ್ರಾಂನ ಚಿನ್ನದ ಸರವನ್ನು ತೊಡಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕ ಕೆ.ಸುರೇಶ್‌ಗೌಡ, ವಿಧಾನಪರಿಷತ್ ಸದಸ್ಯ ಕೆ.ವಿವೇಕಾನಂದ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ, ಮನ್‌ಮುಲ್ ನಿರ್ದೇಶಕ ಶಿವಕುಮಾರ್, ಜಿ.ಪಂ. ಮಾಜಿ ಸದಸ್ಯ ಅಶೋಕ್ ಸೇರಿದಂತೆ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ನೂರಾರು ಮುಖಂಡರು ಭಾಗವಹಿಸಿದ್ದರು.

ಇದಕ್ಕೂ ಮುನ್ನ ಮದ್ದೂರಿನ ಟಿ.ಬಿ.ವೃತ್ತದಲ್ಲಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ನೇತೃತ್ವದಲ್ಲಿ, ಮಂಡ್ಯ ನಗರದ ಜೆಸಿ ವೃತ್ತದಲ್ಲಿ ಮನ್‌ಮುಲ್ ನಿರ್ದೇಶಕ ಬಿ.ಆರ್.ರಾಮಚಂದ್ರ ನೇತೃತ್ವದಲ್ಲಿ, ಶ್ರೀರಂಗಪಟ್ಟಣದ ಬಸ್‌ನಿಲ್ದಾಣದ ಬಳಿ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಮುಖಂಡತ್ವದಲ್ಲಿ ಹಾಗೂ ಮಳವಳ್ಳಿಯಲ್ಲಿ ಮಾಜಿ ಶಾಸಕ ಡಾ.ಕೆ.ಅನ್ನದಾನಿ ನೇತೃತ್ವದಲ್ಲಿ ಹೆಚ್ಡಿಕೆ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ, ಅಭಿನಂದಿಸುವ ಮೂಲಕ ಆಚರಿಸಲಾಯಿತು.

Continue Reading

Mandya

ಮಳವಳ್ಳಿಗೆ  ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮನ: ಸ್ವಾಗತ ಕೋರಿದ ಗರ್ವನರ್‌, ಕೇಂದ್ರ ಸಚಿವ ಎಚ್‌ಡಿಕೆ, ಎನ್.ಚಲುವರಾಯಸ್ವಾಮಿ

Published

on

ಮಂಡ್ಯ : ಭಾರತದ ಘನತ್ತೆವೆತ್ತ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ಮಳವಳ್ಳಿಯಲ್ಲಿ ನಡೆಯಲಿರುವ ಸುತ್ತೂರಿನ ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವ ಯೋಗಿಗಳರವರ 1066ನೇ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಂದು ಮಳವಳ್ಳಿಯಲ್ಲಿ ನಿರ್ಮಿಸಿರುವ ಹೆಲಿಪ್ಯಾಡ್ ಗೆ ಆಗಮಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸರ್ಕಾರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವರಾದ ಚೆಲುವರಾಯಸ್ವಾಮಿ ಅವರು ಹೂ ಗುಚ್ಛ ನೀಡುವ ಮೂಲಕ‌ ಘನತೆವೆತ್ತ ರಾಷ್ಟ್ರಪತಿಗಳನ್ನು ಸ್ವಾಗತಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಉಪಸ್ಥಿತರಿದ್ದರು.

Continue Reading

Mandya

ಡಿ.19 ರಿಂದ 21 ರವರೆಗೆ ಕರ್ನಾಟಕ ರಾಜ್ಯ ಮಟ್ಟದ ಕಿವುಡರ ಟಿ-20 ಕ್ರಿಕೆಟ್ ಪಂದ್ಯಾವಳಿ : ಕೃಷ್ಣೇಗೌಡ

Published

on

ಮಂಡ್ಯ: ಜಿಲ್ಲಾ ಕಿವುಡರ ಸಂಘದಿಂದ ಅಂತರಾಷ್ಟ್ರೀಯ ಲಯನ್ಸ್ ಜಿಲ್ಲೆ 317 ಜಿ, ಪ್ರಾಂತ್ಯ 1 ಹಾಗೂ ಕ್ಷೀರಸಾಗರ ಮಿತ್ರ ಕೂಟ ಸಂಯುಕ್ತಾಶ್ರಯದಲ್ಲಿ ಡಿ.19 ರಿಂದ 21ವರೆಗೆ 11 ನೇ ಕರ್ನಾಟಕ ರಾಜ್ಯ ಮಟ್ಟದ ಕಿವುಡರ ಟಿ-20 ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಕ್ಷೀರಸಾಗರ ಮಿತ್ರ ಕೂಟದ ಕೃಷ್ಣೇಗೌಡ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರಿಕೆಟ್ ಪಂದ್ಯಾವಳಿಯು ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣ, ಪಿಇಟಿ ಕ್ರೀಡಾಂಗಣ ಮತ್ತು ಮಂಡ್ಯ ವಿವಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಹೇಳಿದರು.

ಡಿ.19ರಂದು ನಡೆಯುವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ವಹಿಸುವರು. ಅಂತರಾಷ್ಟ್ರೀಯ ಲಯನ್ಸ್ ಜಿಲ್ಲಾ ರಾಜ್ಯಪಾಲ ಲಯನ್ ಜಿ.ಎ.ರಮೇಶ್ ಉದ್ಘಾಟಿಸುವರು.

ಎಸ್.ಬಿ.ಎಜುಕೇಷನ್ ಟ್ರಸ್ಟ್ ನ ಡಾ.ಮೀರಾಶಿವಲಿಂಗಯ್ಯ ಕ್ರೀಡಾಪಟುಗಳಿಗೆ ಶುಭ ಹಾರೈಸಲಿದ್ದು, ಲಯನ್ಸ್ ಸಂಸ್ಥೆಯ ಪ್ರಾಂತೀಯ ಅಧ್ಯಕ್ಷ ಡಾ.ಶಂಕರ, ಮಂಡ್ಯ ಲಯನ್ಸ್ನ ಅಧ್ಯಕ್ಷ ಡಿ.ನಿಂಗೇಗೌಡ, ಮೈಷುಗರ್ ಸಿಟಿ ಲಯನ್ಸ್ ಸಂಸ್ಥಾಪಕ ಅಧ್ಯಕ್ಷ ಲಯನ್ಸ್ ಕೆ.ಎಸ್.ಪ್ರೇಮಾನಂದ ಸಾಗರ್, ಮಧುರ ಲಯನ್ಸ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಆನಂದ, ಸೆಂಟಿನಿಯಲ್ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಮೀನಾ ಆನಂದ ಸೇರಿದಂತೆ ಇತರರು ಉಪಸ್ಥಿತರಿರಲಿದ್ದಾರೆ ಎಂದರು.

ಶಾಸಕ ಪಿ.ರವಿಕುಮಾರ್ ಗೌಡ ಅಧ್ಯಕ್ಷತೆಯಲ್ಲಿ ಡಿ.21ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಲಯನ್ಸ್ ಜಿಲ್ಲೆ317ಜಿ ಯ ಜಿಲ್ಲಾ ರಾಜ್ಯಪಾಲ ಕೆ.ಎಲ್.ರಾಜಶೇಖರ ಬಹುಮಾನ ವಿತರಿಸುವರು.

ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಎಂ.ವಿನಯ್‌ಕುಮಾರ್ ಸಮಾರೋಪ ನುಡಿಗಳನ್ನಾಡುವರು. ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ, ಶಾಸಕ ಎಚ್.ಟಿ.ಮಂಜು, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಲಯನ್ಸ್ ಸಂಸ್ಥೆಯ ಜಯಕುಮಾರ್, ಸಿದ್ದೇಗೌಡ ಅತಿಥಿಗಳಾಗಿ ಭಾಗವಹಿಸುವರು. ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲಾ ಪಟುಗಳಿಗೂ ನೆನಪಿನ ಕಾಣಿಕೆ ವಿತರಣೆ ಮಾಡಲಾಗುವುದು ಎಂದು ಇದೇ ವೇಳೆ ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಲಯನ್ಸ್ ಪ್ರಾಂತೀಯ ಅಧ್ಯಕ್ಷ ಡಾ.ಶಂಕರ, ಕ್ಷೀರಸಾಗರ ಮಿತ್ರ ಕೂಟದ ನಾಗೇಶ್, ಮಂಡ್ಯ ಜಿಲ್ಲಾ ಕಿವುಡರ ಸಂಘದ ಅಧ್ಯಕ್ಷ ಆರ್.ಯೋಗೇಶ್, ಉಪಾಧ್ಯಕ್ಷ ಬಿ.ವೆಂಕಟೇಶ್ ಪ್ರಸಾದ್, ಕಾರ್ಯದರ್ಶಿ ಎಸ್.ಎಂ.ನಂದೀಶ್, ಕ್ರೀಡಾ ಕಾರ್ಯದರ್ಶಿ ವೈ.ಎಂ.ಮಹೇಶ್ ಇದ್ದರು.

Continue Reading

Trending

error: Content is protected !!