Connect with us

Mandya

ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರ ಪತನ: ಎಚ್‌ಡಿಕೆ ಭವಿಷ್ಯ

Published

on

ಮಂಡ್ಯ: ನಾನು ಜೋತಿಷ್ಯಗಾರನಲ್ಲ, ಆದರೆ ಈ ಚುನಾವಣೆ ನಂತರ ಮುಂದಿನ ಡಿಸೆಂಬರ್‌ನೊಳಗೆ ಕಾಂಗ್ರೆಸ್‌ ಸರ್ಕಾರ ಬೀಳಲಿದೆ. ನಾವು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಷ್ಟ ಪಡಬೇಕಿಲ್ಲ. ಅವರೇ ಅವರ ಸರ್ಕಾರ ಬೀಳಿಸಿಕೊಳ್ಳುತ್ತಾರೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಹಾಗೂ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಎಚ್‌.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದರು.

ನಗರದ ಸುರಭಿ ಹೋಟೆಲ್ ಬ್ಯಾಂಕ್ವೆಟ್ ಹಾಲ್‌ನಲ್ಲಿ ಬುಧವಾರ ನಡೆದ ಜೆಡಿಎಸ್ ಮತ್ತು ಬಿಜೆಪಿ ಮುಖಂಡರ ಸಮನ್ವಯ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಹಳೇ ಸ್ನೇಹಿತರು ಮೈತ್ರಿ ಹೆಸರಿನಲ್ಲಿ ಬೆನ್ನಿಗೆ ಚೂರಿ ಹಾಕಿದರು. ಆದರೆ ಬಿಜೆಪಿ–ಜೆಡಿಎಸ್ ಮೈತ್ರಿ ನ್ಯಾಚುರಲ್ ಅಲಯನ್ಸ್ ಆಗಿದ್ದು, ರಾಜ್ಯ ಅಭಿವೃದ್ಧಿಗಾಗಿ ಈ ಮೈತ್ರಿ ನಿರ್ಧಾರವಾಗಿದೆ. ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಹಾಲು ಜೇನು ಇದ್ದಂತೆ. ಹಿಂದೆ ಬಿಜೆಪಿ ಜೊತೆ ಸರ್ಕಾರ ಮಾಡಿದ ದಿನದಿಂದ ಜೆಡಿಎಸ್ ಮುಗಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಬಿಜೆಪಿಯೊಂದಿಗಿನ 20 ತಿಂಗಳ ಆಡಳಿತ ಇಂದಿಗೂ ಜನ ನೆನೆಯುತ್ತಾರೆ. ಆದರೆ, ಅಧಿಕಾರ ಹಸ್ತಾಂತರ ಮಾಡಿಲ್ಲ ಎಂಬ ಆರೋಪ ನನ್ನ ಮೇಲೆ ಮಾಡುತ್ತಾರೆ. ನಾನು ಮಾಡದೆ ಇರುವ ತಪ್ಪನ್ನು ನನ್ನ ತಲೆ ಮೇಲೆ ಹೊತ್ತಿದ್ದೇನೆ. 17 ವರ್ಷ ವನವಾಸ ಅನುಭವಿಸಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬರಲಿಕ್ಕೆ ಕಾರಣ ಅವರ ಶಕ್ತಿ ಅಲ್ಲ. ಜೆಡಿಎಸ್ ಬಿಜೆಪಿ ಹೊಂದಾಣಿಕೆ ಆಗದೆ, ನಮ್ಮಲ್ಲಿದ್ದ ಪೈಪೋಟಿ ಅವರಿಗೆ ಲಾಭವಾಗಿದೆ. ಕಾಂಗ್ರೆಸ್ ಸರ್ಕಾರ ಆಕಸ್ಮಿಕ ಸರ್ಕಾರ. ನರೇಂದ್ರ ಮೋದಿ ಪ್ರಧಾನಿಯಾದರೆ ದೇಶ ಬಿಡುತ್ತೇನೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿರಲಿಲ್ಲ. ರಾಜ್ಯಸಭೆಗೆ ರಾಜೀನಾಮೆ ಕೊಡುತ್ತೇನೆ ಎಂದಿದ್ದರು. ಆದರೆ, ಆ ಬಳಿಕ ಮೋದಿ ಅವರನ್ನು ಭೇಟಿಯಾದ ದೇವೇಗೌಡರಿಗೆ ಗೌರವ ಕೊಟ್ಟರು. ಚುನಾವಣೆ ಸಮಯದ ಹೇಳಿಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ ಎಂದಿದ್ದರು. ಮೋದಿ ಅವರು ದೇವೇಗೌಡರನ್ನು ತಂದೆ ಸಮಾನರಾಗಿ ನಡೆಸಿಕೊಳ್ಳುತ್ತಾರೆ. ಆದ,ರೆ ಸಿದ್ದರಾಮಯ್ಯ ದೇವೇಗೌಡರನ್ನು ಹೀಯಾಳಿಸುತ್ತಾರೆ. ಇದೇ ಸಿದ್ದರಾಮಯ್ಯಗೂ ಮೋದಿಗೂ ಇರುವ ವ್ಯತ್ಯಾಸ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಎಷ್ಟೇ ಶ್ರಮ ವಹಿಸಿದರೂ ಜೆಡಿಎಸ್ ಮುಗಿಸಲು ಆಗಲ್ಲ. ರಾಜ್ಯಕ್ಕೆ ಸುಭದ್ರ ಸರ್ಕಾರದ ಅವಶ್ಯಕತೆ ಇದೆ. ದೇಶಕ್ಕೆ ನರೇಂದ್ರ ಮೋದಿ ಆಡಳಿತ ಅನಿವಾರ್ಯವಾಗಿದ್ದು, ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ. ಮಂಡ್ಯದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಒಗ್ಗಟ್ಟಾದರೆ ಐತಿಹಾಸಿಕ ಗೆಲುವು ಸಿಗಲಿದೆ, ನಾನು ಜೋತಿಷ್ಯಕಾರನಲ್ಲ. ಆದರೆ ಈ ಚುನಾವಣೆ ನಂತರ ಮುಂದಿನ ಡಿಸೆಂಬರ್‌ಳಗೆ ಸರ್ಕಾರ ಬೀಳಲಿದೆ. ನಾವು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಷ್ಟ ಪಡಬೇಕಿಲ್ಲ. ಅವರೇ ಅವರ ಸರ್ಕಾರವನ್ನು ಬೀಳಿಸಿಕೊಳ್ಳುತ್ತಾರೆ ಎಂದು ಸರ್ಕಾರ ಬೀಳಿಸುವ ಮುನ್ಸೂಚನೆ ನೀಡಿದರು.

ಮೇಕೆದಾಟುಗಾಗಿ ಪಾದಯಾತ್ರೆ ಮಾಡಿದಿರಿ. ಆದರೆ ಇವತ್ತು ಏನಾಗಿದೆ? ಮೇಕೆದಾಟು ಕಟ್ಟಲು ಅನುಮತಿ ಕೇಳುತ್ತಿದ್ದಾರೆ. ಮತ್ತೆ ಅವತ್ತು ಪಾದಯಾತ್ರೆ ಯಾಕೆ ಮಾಡಿದಿರಿ? ನಿಮ್ಮ ಅಂಗ ಪಕ್ಷ ಡಿಎಂಕೆ ಪ್ರಣಾಳಿಕೆಯಲ್ಲಿ ಮೇಕೆದಾಟು ಕಟ್ಟಲು ಅವಕಾಶ ಕೊಡಲ್ಲ ಎಂದಿದ್ದಾರೆ. ಪೇಪರ್ ಪೆನ್ನು ಕೊಟ್ಟರೆ ನಾಳೆ ಬೆಳಿಗ್ಗೆ ಮೇಕೆದಾಟು ಮಾಡುತ್ತೇನೆ ಎಂದರಲ್ಲ. ಅದರಂತೆ ಮೇಕೆದಾಟು ಯೋಜನೆ ಮಾಡಿ. ಮೇಕೆದಾಟು ಹೆಸರೇಳಿ ರಾಜಕಾರಣ ಮಾಡುವ ದರಿದ್ರ ದೇವೇಗೌಡರಿಗೆ ಬಂದಿಲ್ಲ. ಪಾದಯಾತ್ರೆಯಿಂದ ನೀರು ತರಲು ಆಗಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಟೀಕಿಸಿದರು.

ಮೇಕೆದಾಟು ಯೋಜನೆ ಜಾರಿಗೆ ಪ್ರಾಧಿಕಾರದಲ್ಲಿ ಸರಿಯಾದ ವಾದ ಮಂಡನೆ ಆಗಬೇಕು. ಬಿರಿಯಾನಿ ತಿಂದು ಪಾದಯಾತ್ರೆ ಮಾಡಿದರೆ ಆಗಲ್ಲ. ನಾವು ಹೆಚ್ಚಿನ ಸೀಟು ಪಡೆಯಲು ಅಮಿತ್ ಶಾ ಭೇಟಿ ಮಾಡಲಿಲ್ಲ. ಬದಲಾಗಿ ಮೇಕೆದಾಟು ವಿಚಾರದಲ್ಲಿ ಯಾವ ರೀತಿ ಮುಂದುವರಿಯಬೇಕು ಎಂದು ಚರ್ಚೆ ಮಾಡಲು ಹೋಗಿದ್ದೆವು. ಸುಳ್ಳು ಪ್ರಧಾನಿ ನರೇಂದ್ರ ಮೋದಿ ಅವರದ್ದಲ್ಲ ನಿಮ್ಮ ಕಾಂಗ್ರೆಸ್‌ನದ್ದು. ದೇಶದ ಒಕ್ಕೂಟದ ವ್ಯವಸ್ಥೆಯಲ್ಲಿ ಅದರದ್ದೇ ಆದ ಕಾನೂನು ಇದೆ. ನಮ್ಮ ತೆರಿಗೆ ನಮ್ಮ ಹಕ್ಕು ಎಂದರೆ ಆಗಲ್, ಮಂಡ್ಯ ಮೇಲೆ ಕೆಟ್ಟ ದೃಷ್ಟಿ ಬೇಡ ಎಂದು ಹಳೇ ಸ್ನೇಹಿತ ಹೇಳಿದ್ದಾನೆ. ನಮ್ಮ ದೃಷ್ಟಿ ಇದ್ದಾಗ ಮಳೆ ಬೆಳೆ ಚೆನ್ನಾಗಿ ಆಗುತ್ತಿತ್ತು. ನಿಮ್ಮ ದೃಷ್ಟಿ ಬಿದ್ದ ಮೇಲೆ ಬರಗಾಲ ಬಂದಿದೆ. ಭತ್ತ ನಾಟಿ ಮಾಡಬೇಡಿ ಎಂದು ಹೇಳಿದ ಏಕೈಕ ಸಚಿವ ನನ್ನ ಹಳೇ ಸ್ನೇಹಿತ ಎಂದು ಪರೋಕ್ಷವಾಗಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ವ್ಯಂಗ್ಯವಾಡಿದರು.

ಕಾಂಗ್ರೆಸ್ ಅಭ್ಯರ್ಥಿಗೆ ದುಡ್ಡಿಗೆ ಸಮಸ್ಯೆ ಇಲ್ಲ. ಈಗಾಗಲೇ ಅವರು ದುಡ್ಡು ಹಂಚಿರಬಹುದು. ಮಂಡ್ಯ ಜನ ದುಡ್ಡಿಗೆ ಬೆಲೆ ಕೊಡಲ್ಲ. ಮಂಡ್ಯದ ಈ ಚುನಾವಣೆ ಧರ್ಮ ಯುದ್ಧವಾಗಿದೆ. ಕಳೆದ 10 ತಿಂಗಳ ಕಾಂಗ್ರೆಸ್ ಅಧಿಕಾರ ನೋಡಿದ್ದೀರಾ? ಎಂದ ಅವರು, ಚುನಾವಣೆ ನಡೆಸಲು ವ್ಹೀಲ್‌ಚೇರ್‌ನಲ್ಲಿ ಬರುತ್ತೀರಾ ಎಂದು ಕಾಂಗ್ರೆಸ್ ನಾಯಕರು ನನ್ನನ್ನು ಟೀಕಿಸಿದ್ದಾರೆ. ಆದರೆ, ನನಗೆ ಆ ದುರ್ಗತಿ ಬಂದಿಲ್ಲ. ನಾಟಕ ಆಡಿಕೊಂಡು ನಾನು ಬರಲ್ಲ. ಯಾರಿಗೂ ಅಪನಂಬಿಕೆ ಬೇಡ. ನಿಮಗೆ ಗೌರವ ತರುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಬಿಜೆಪಿ ಜೆಡಿಎಸ್ ಶಾಸಕರ ಹೊಂದಾಣಿಕೆ ಹೊಸದಲ್ಲ. ವಾಸ್ತವಿಕವಾಗಿ ರಾಜ್ಯದ ಅಭಿವೃದ್ಧಿಗೆ,ನರೇಂದ್ರಮೋದಿ ನಾಯಕತ್ವದ ಹಿನ್ನೆಲೆಯಲ್ಲಿ ಒಡಂಬಡಿಕೆ ಆಗಿದೆ. ಜೆಡಿಎಸ್-ಬಿಜೆಪಿ ಒಡಂಬಡಿಕೆ ಹಾಲು ಜೇನು ಎಂಬುದರಲ್ಲಿ ನಿಜವಿದೆ. ಆದರೂ ಪರ್ಯಾಯವಾಗಿ ೨೦೦೬ ರಲ್ಲಿ ಬಿಜೆಪಿ ಜೆಡಿಎಸ್ ಸಮ್ಮಿಶ್ರ ಸರ್ಕಾರ ಆಡಳಿತ ಜನತೆ ನೆನಪಿಸಿಕೊಳ್ಳುತ್ತಾರೆ. ಕುಮಾರಸ್ವಾಮಿ ಅಧಿಕಾರ ಹಸ್ತಾಂತರ ಮಾಡಲಿಲ್ಲ ಎನ್ನುತ್ತಾರೆ ಚಾಮುಂಡೇಶ್ವರಿ, ನಿಮಿಷಾಂಬದಲ್ಲಿ ಪೂಜೆ ಮಾಡಿಸಿ ಹೇಳುತ್ತಿದ್ದೇನೆ.ಅಂದು ನಾನು ಮಾಡದ ತಪ್ಪಿಗೆ ತಲೆ ಕೊಡಬೇಕಾಯಿತು ಎಂದರು.

ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿದರು. ಮಾಜಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಸುರೇಶ್ ಗೌಡ, ಡಾ.ಕೆ ಅನ್ನದಾನಿ, ಜಿ.ಬಿ.ಶಿವಕುಮಾರ್, ಸಿ.ಎಸ್.ಪುಟ್ಟರಾಜು, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಶಾಸಕರಾದ ಎಚ್.ಟಿ.ಮಂಜು, ಸಾ.ರಾ.ಮಹೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಇಂದ್ರೇಶ್, ಮುಖಂಡರಾದ ಮಾಜಿ ಅಧ್ಯಕ್ಷ ಸಿ.ಪಿ.ಉಮೇಶ್, ಅಶೋಕ್ ಜಯರಾಂ, ಶಿವಪ್ಪ, ರಾಮದಾಸ್, ಕೆ.ಟಿ.ಶ್ರೀಕಂಠೇಗೌಡ, ಕೆ.ಎಸ್.ನಂಜುಂಡೇಗೌಡ, ನಾಗೇಂದ್ರ, ಲಕ್ಷ್ಮಿ ಅಶ್ವಿನ್‌ಗೌಡ, ಸಿದ್ದರಾಮಯ್ಯ, ಬಿ.ಆರ್.ರಾಮಚಂದ್ರ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್

Continue Reading
Click to comment

Leave a Reply

Your email address will not be published. Required fields are marked *

Mandya

ಮಳವಳ್ಳಿ ವಸತಿ ಶಾಲೆಯ ದುರ್ಘಟನೆ : ಎಚ್‌ಡಿಕೆ ಕಳವಳ

Published

on

ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲ್ಲೂಕಿನಲ್ಲಿ ಟಿ.ಕಾಗೇಪುರ ಗ್ರಾಮದ ಖಾಸಗಿ ವಸತಿ ಶಾಲೆ ಕಲುಷಿತ ಆಹಾರ ಸೇವನೆಯಿಂದ ಓರ್ವ ವಿದ್ಯಾರ್ಥಿ ಸಾವನ್ನಪ್ಪಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಮಂಡ್ಯ ಸಂಸ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಅಸ್ವಸ್ಥ ಮಕ್ಕಳ ಆರೋಗ್ಯದ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ಸಂಬಂಧ ಮಳವಳ್ಳಿ ತಹಶೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಂದ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಸಚಿವರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳ ಆರೋಗ್ಯ ಪರಿಸ್ಥಿತಿಯನ್ನು ವಿಚಾರಿಸಿಕೊಂಡಿದ್ದಾರೆ.

ಬೇಸಿಗೆಯಲ್ಲಿ ಕುಡಿಯುವ ನೀರು ಹಾಗೂ ಆಹಾರದ ಬಗ್ಗೆ ಜಾಗ್ರತೆಯಿಂದ ಇರಬೇಕು. ಮಕ್ಕಳಿಗೆ ನೀಡಲಾಗುವ ಆಹಾರದ ಬಗ್ಗೆ ಕಟ್ಟೆಚ್ಚರ ವಹಿಸಬೇಕು ಎಂದು ಸ್ಪಷ್ಟ ನೀಡಿರುವ ಸಚಿವರು, ಮೃತಪಟ್ಟಿರುವ ವಿದ್ಯಾರ್ಥಿ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಅಥವಾ ಖಾಸಗಿ ವಸತಿ ಶಾಲೆಗಳಲ್ಲಿ ಆಹಾರದ ಬಗ್ಗೆ ಅಧಿಕಾರಿಗಳು, ಸಂಬಂಧಪಟ್ಟ ಸಿಬ್ಬಂದಿ ಎಚ್ಚರಿಕೆ ವಹಿಸಬೇಕು. ಈ ಬಗ್ಗೆ ಕಠಿಣ ನಿಗಾ ಇಡಬೇಕು ಎಂದು ತಹಶೀಲ್ದಾರ್ ಅವರಿಗೆ ಸಚಿವರು ಸೂಚನೆ ನೀಡಿದ್ದಾರೆ.

ಘಟನೆ ಬಗ್ಗೆ ನನಗೆ ಮಾಹಿತಿ ಬಂದಾಗ ನನಗೆ ತೀವ್ರ ಆಘಾತ ಉಂಟಾಯಿತು. ಈ ವಸತಿ ಶಾಲೆಯಲ್ಲಿ ಬಹುತೇಕ ಹೊರರಾಜ್ಯಗಳ ಮಕ್ಕಳೇ ಇದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲಾ ಮಕ್ಕಳಿಗೆ ಸೂಕ್ತ ಚಿಕಿತ್ಸೆ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಕೇಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

Mandya

ವೈರಮುಡಿ ಉತ್ಸವದಲ್ಲಿ ಲೋಪವಾಗದಂತೆ ಎಚ್ಚರ ವಹಿಸಬೇಕು : ಎನ್.ಚಲುವರಾಯಸ್ವಾಮಿ

Published

on

ಮಂಡ್ಯ : ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗುವ ಮೇಲುಕೋಟೆ ವೈರಮುಡಿ ಉತ್ಸವದಲ್ಲಿ ಯಾವುದೇ ಲೋಪವಾದಂತೆ ಎಚ್ಚರಿಕೆ ವಹಿಸಬೇಕು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಅವರು ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವೈರಮುಡಿ ಉತ್ಸವದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಏಪ್ರಿಲ್ 2 ರಿಂದ 14 ರವರೆಗೆ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿದೆ. ಏಪ್ರಿಲ್ 7 ರಂದು ನಡೆಯಲಿರುವ ವೈರಮುಡಿ ಉತ್ಸವದಲ್ಲಿ ಲಕ್ಷಾಂತರ ಭಕ್ತಾಧಿಗಳು ಭಾಗವಹಿಸಲಿದ್ದಾರೆ ಎಂದರು.

ಬೇಸಿಗೆ ಬಿಸಿಲಿನ ತಾಪ ಹೆಚ್ಚಿದ್ದು, ಭಕ್ತಾಧಿಗಳಿಗೆ ಮುಖ್ಯವಾಗಿ ಕುಡಿಯುವ ನೀರು ಸೇರಿದಂತೆ ಎಲ್ಲಾ ಮೂಲಭೂತ ವ್ಯವಸ್ಥೆಗಳಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳು ಈಗಿನಿಂದಲೇ ಕಾರ್ಯಪ್ರವೃತ್ತರಾಗಬೇಕು ಎಂದರು.

ಕುಡಿಯುವ ನೀರು, ದಸೋಹ ಭವನದಲ್ಲಿ ಆಹಾರ ವಿತರಣೆ ಹಾಗೂ ಪ್ರಸಾದ ವಿತರಣೆ ಭಾಗಗಳಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳನ್ನು ನಿಯೋಜಿಸಿ ಪರೀಕ್ಷೆಗೆ ಒಳಪಡಿಸಿದ ನಂತರವೇ ವಿತರಣೆಯಾಗಬೇಕು.

ಮೇಲುಕೋಟೆಗೆ ವಿವಿಧ ಭಾಗಗಳಿಂದ ಸಂಪರ್ಕಿಸುವ ರಸ್ತೆಗಳ ದುರಸ್ತಿ ಕೆಲಸಗಳು ವೇಗವಾಗಿ ನಡೆಸಿ ಪೂರ್ಣಗೊಳಿಸಬೇಕು. ವಾಹನ ನಿಲುಗಡೆ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಬೇಕು ಎಂದರು.

ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣಯ್ಯ ಮಾತನಾಡಿ, ಕುಡಿಯುವ ನೀರಿನ ಟ್ಯಾಂಕರ್ ದೇವಸ್ಥಾನದ ಸುತ್ತಲೂ ,ಕಲ್ಯಾಣಿ, ಪಾರ್ಕಿಂಗ್ ಸ್ಥಳ ಸೇರಿದಂತೆ ಜನಸಂದಣಿ ಇರುವ ಸ್ಥಳಗಳಲ್ಲಿ ಟ್ಯಾಂಕರ್ ವ್ಯವಸ್ಥೆಯಾಗಬೇಕು ಭಕ್ತಾಧಿಗಳಿಗೆ‌ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂದರು.

ವೈರಮುಡಿ ಉತ್ಸವದಲ್ಲಿ ಭಾಗವಹಿಸುವ ಭಕ್ತಾಧಿಗಳಿಗೆ ದಸೋಹ ಭವನ ಪ್ರಾರಂಭವಾಗಿರುವ ಬಗ್ಗೆ ಮಾಹಿತಿ‌ ನೀಡಲು ದೇವಸ್ಥಾನದ ಸುತ್ತಲೂ ಸೂಚನಾ ಪಲಕಗಳನ್ನು ಅಳವಡಿಸಿ, ದಸೋಹ ಭವನದಲ್ಲಿ ಜನಸಂದಣಿಯಾಗದಂತೆ ಬ್ಯಾರಿಕೇಡಿಂಗ್ ಆಗಬೇಕು‌. ದಸೋಹಕ್ಕೆ ಬೇಕಿರುವ ಆಹಾರ ಸಾಮಗ್ರಿಗಳ ದಾಸ್ತಾನು ಆಗಬೇಕು.

ದೇವಸ್ಥಾನ ಸುತ್ತ ಹೆಚ್ಚಿನ ಟ್ರನ್ಸ್ ಪರ್ಮರ್ ಬೇಕಿದ್ದಲ್ಲಿ ವ್ಯವಸ್ಥೆ ಮಾಡಿಕೊಳ್ಳಿ, ಅಗತ್ಯವಿರುವ ಕಡೆ ಹೆಚ್ಚಿನ ವಿದ್ಯುತ್ ‌ದೀಪಗಳ ವ್ಯವಸ್ಥೆಯಾಗಬೇಕು‌. ಕಲ್ಯಾಣಿಗಳ ಸ್ವಚ್ಛತೆಯನ್ನು ಕೈಗೊಳ್ಳಿ ಎಂದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಈ ಬಾರಿ 19 ಲಕ್ಷ ರೂ ವೆಚ್ಚದಲ್ಲಿ ಶಾಶ್ವತವಾಗಿ ಸಿ.ಸಿ.ಟಿ ವಿ ಅಳವಡಿಸಲಾಗುವುದು. ಇದನ್ನು ವೀಕ್ಷಿಸಲು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿಯಲ್ಲಿ ಅಗತ್ಯ ವ್ಯವಸ್ಥೆ ಮಾಡಲಾಗುವುದು.

ಕಲ್ಯಾಣಿಗಳ ಬಳಿ ನುರಿತ ಈಜುಗಾರರನ್ನು ನೇಮಿಸಬೇಕು. ಕಲ್ಯಾಣಿ ಯ ಹತ್ತಿರ ವಿದ್ಯುತ್ ದೀಪಗಳು ಹಾಗೂ ಹೆಣ್ಣು ಮಕ್ಕಳಿಗೆ ಬಟ್ಟೆ ಬದಲಾಯಿಸಲು ಶೆಡ್ ಗಳ ನಿರ್ಮಾಣವಾಗಬೇಕು ಎಂದರು.

ಸಭೆಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ರವಿಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ.ಸಿ ಶಿವಾನಂದಮೂರ್ತಿ, ಪಾಂಡವಪುರ ‌ಉಪವಿಭಾಗಾಧಿಕಾರಿ ಶ್ರೀನಿವಾಸ್ ಸೇರಿದಂತೆ ‌ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Continue Reading

Mandya

ಹೆಚ್ಐವಿ ಸೋಂಕಿತರನ್ನು ತಾರತಮ್ಯ ಮಾಡುವುದು ಅಪರಾಧ: ಶ್ರೀವಿನಾಯಕ್

Published

on

ಶ್ರೀರಂಗಪಟ್ಟಣ : ಹೆಚ್ಐವಿ ಸೋಂಕಿತರನ್ನು ಯಾವುದೇ ಕ್ಷೇತ್ರದಲ್ಲಿ ತಾರತಮ್ಯ ಮಾಡುವುದು ಅಪರಾಧವಾಗಿದ್ದು, ಕಾಯ್ದೆ ಉಲ್ಲಂಘಿಸಿದಲ್ಲಿ 6 ತಿಂಗಳು ಜೈಲು ಹಾಗೂ 2 ಲಕ್ಷದವರೆಗೆ ದಂಡ ವಿಧಿಸಬಹುದಾಗಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕದ ಜಿಲ್ಲಾ ಮೇಲ್ವಿಚಾರಕ ಶ್ರೀವಿನಾಯಕ್ ಹೇಳಿದರು.

ಅವರು ಪಟ್ಟಣದ ಕೋರುನ್ ಇಂಡಿಯಾ ಗಾರ್ಮೆಂಟ್ಸ್ ನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ ಮಂಡೆ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಶ್ರೀರಂಗಪಟ್ಟಣದ ವತಿಯಿಂದ ಗಾರ್ಮೆಂಟ್ ನ ಆಡಳಿತ ವಿಭಾಗದ ಅಧಿಕಾರಿಗಳಿಗಾಗಿ ಹೆಚ್ಐವಿ ಏಡ್ಸ್ ನಿಯಂತ್ರಣ ಕಾಯ್ದೆ 2017 ಕುರಿತು ಏರ್ಪಡಿಸಿದ ತರಬೇತಿ ಕಾರ್ಯಗಾರ ಉದ್ದೇಶಿಸಿ ಮಾತನಾಡಿದರು.

ಹೆಚ್ಐವಿ ಏಡ್ಸ್ ರೋಗ ಲಕ್ಷಣ,ಚಿಕಿತ್ಸೆ ಕುರಿತು ಮಾಹಿತಿ ನೀಡಿದ ಅವರು ಹೆಚ್ಐವಿ ಸೋಂಕು ಹರಡುವುದು ಶೇಕಡ 90ರಷ್ಟು ಅಸುರಕ್ಷಿತ ಲೈಂಗಿಕ ಸಂಪರ್ಕದಿಂದಲೇ ಬರುತ್ತದೆ ಸಂಸ್ಕರಿಸದ ಸೂಜಿ,ಸಿರಿಂಜಗಳು, ಸೋಂಕಿತ ರಕ್ತವನ್ನು ಪಡೆಯುವುದರಿಂದ ಹಾಗೂ ಸೋಂಕಿತ ತಾಯಿಯಿಂದ ಮಗುವಿಗೆ ಹರಡುವ ಪ್ರಮಾಣ ಶೇ10 ರಷ್ಟಿದ್ದು ಹಾಗಾಗಿ ಹೆಚ್ಐವಿ ಏಡ್ಸ್ ನಿಯಂತ್ರಿಸಲು ಯುವಜನತೆ ಮದುವೆಯಾಗುವ ತನಕ ಬ್ರಹ್ಮಚರ್ಯ ಪಾಲಿಸುವಂತೆ ತಿಳಿಸಿದರು.

ನಂತರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ್ ಮಾತನಾಡಿ, ಜಿಲ್ಲೆಯಲ್ಲಿ ಹೆಚ್ಐವಿ ನಿಯಂತ್ರಣ ಸಲುವಾಗಿ ಎಲ್ಲಾ ಸಮುದಾಯಗಳಿಗೆ ಹಾಗೂ ಯುವ ಪೀಳಿಗೆಗೆ ಮಾಹಿತಿ ನೀಡುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಇಂದಿನ ಯುವ ಜನಾಂಗ ಏಡ್ಸ್ ನಂತಹ ಖಾಯಿಲೆಗೆ ತುತ್ತಾಗುತ್ತಿರುವುದು ಕಳವಳಕಾರಿ ಸಂಗತಿ ಯುವಕರು ತಮ್ಮ ಜೀವನ ಹಾಳು ಮಾಡಿಕೊಳ್ಳದೆ ದೇಹ ಮತ್ತು ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಏಡ್ಸ್ ಗೆ ಚಿಕಿತ್ಸೆ ಸಾಧ್ಯ ಆದರೆ ಸಂಪೂರ್ಣ ಗುಣ ಮುಖರಾಗಲು ಅಸಾಧ್ಯ. ಈ ಕಾರಣದಿಂದ ರೋಗಕ್ಕೆ ತುತ್ತಾಗದಂತೆ ಎಚ್ಚರ ವಹಿಸಬೇಕು. ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಬೇಕೆಂದರು.

ನಂತರ ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಮೋಹನ್ ಮಾತನಾಡಿ, ಏಡ್ಸ್ ರೋಗ ನಿಯಂತ್ರಿಸಲು ಸಾಧ್ಯವಿದ್ದು ಪ್ರತಿಯೊಬ್ಬರಿಗೂ ಇದರ ಬಗ್ಗೆ ತಿಳುವಳಿಕೆ ಅಗತ್ಯವಾಗಿದೆ ಎಂದರು.

ಕಾರ್ಯಗಾರದಲ್ಲಿ ಹೆಚ್.ಆರ್ ಮ್ಯಾನೇಜರ್ ಸುಭಾಷ್ ಬಿ,ಶೃತಿ, ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮೇಘನಾ, ಎಂ&ಇ ರಘು ಪ್ರಸಾದ್, ಆರೋಗ್ಯ ನಿರೀಕ್ಷಣಾಧಿಕಾರಿ ಚಂದನ್ ಎಂ ಸಿ, ಶುಶ್ರೂಷಕಿ ರೇಖಾ ಹಾಗೂ ಆಡಳಿತ ವಿಭಾಗದ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.

Continue Reading

Trending

error: Content is protected !!