Cinema
ಸಿನಿಮಾ ವಿಶ್ಲೇಷಣೆ ಮೂಲಕ ಸಿನಿಮಾ ಕಟ್ಟುವ ಬಗೆ ಕಲಿಸಿದ ಗುರು ಸತೀಶ್ ಬಹಾದುರ್: ಗಿರೀಶ್ ಕಾಸರವಳ್ಳಿ
ಬೆಂಗಳೂರು ಚಿತ್ರೋತ್ಸವ ವೇದಿಕೆ: ‘ಸಿನಿಮಾ ಶಿಕ್ಷಕರಾಗಿದ್ದ ಸತೀಶ್ ಬಹಾದುರ್ ಅವರು ಸಿನಿಮಾ ವಿಶ್ಲೇಷಿಸುವ ಮೂಲಕ ಸಿನಿಮಾ ಕಟ್ಟುವ ಕ್ರಮನ್ನು ಕಲಿಸಿಕೊಟ್ಟರು. ದಾರಿ ಅರ್ಥ ಮಾಡಿಕೊಳ್ಳದೆ ಇದ್ದರೆ ಗುರಿ ಸಾಧಿಸಲು ಆಗುವುದಿಲ್ಲ ಎಂದು ತಿಳಿಸಿಕೊಟ್ಟರು. ಸಿನಿಮಾ ಎಂದರೆ ಕತೆ ಮಾತ್ರವೇ ಅಲ್ಲ, ರಿದಂ, ಸಮತೋಲನ ಎಲ್ಲವೂ ಹೌದು. ಅವೆಲ್ಲವನ್ನೂ ಅರ್ಥ ಮಾಡಿಕೊಂಡರೆ ಸಿನಿಮಾ ಕಟ್ಟುವ ಕ್ರಮವನ್ನು ಕಲಿಯಬಹುದು ಎಂಬುದನ್ನು ಅರ್ಥಮಾಡಿಸಿದರು’ ಎಂದು ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹೇಳಿದರು.
ಸಿನಿಮಾ ಶಿಕ್ಷಕ ಮತ್ತು ಸಿನಿಮಾ ವಿಮರ್ಶಕ ಸತೀಶ್ ಬಹಾದುರ್ ಶತಮಾನೋತ್ಸವ ವರ್ಷದ ಹಿನ್ನೆಲೆಯಲ್ಲಿ ನಡೆದ ಗೋಷ್ಠಿಯಲ್ಲಿ ಸತೀಶ್ ಬಹಾದುರ್ ಅವರ ಪ್ರಾಮುಖ್ಯತೆಯ ಕುರಿತು ಅವರು ಮಾತನಾಡಿದರು.
‘ಸತೀಶ್ ಬಹಾದುರ್ ಅವರು ಸಿನಿಮಾ ವಿಶ್ಲೇಷಣೆಯ ಶಿಕ್ಷಕರಾಗಿದ್ದರು. ಸಿನಿಮಾ ಅನ್ನುವುದು ಅನುಭವ ಮತ್ತು ಪ್ರದರ್ಶಕ ಕಲೆಯೂ ಹೌದು. ಸಿನಿಮಾ ಪ್ರೇಕ್ಷಕನಿಗೆ ಅನುಭವ ಕಟ್ಟಿಕೊಡಬಲ್ಲ ಸಿನಿಮಾ ಹೇಗೆ ರೂಪಿಸಬೇಕು ಅನ್ನುವುದನ್ನು ಅವರು ವಿದ್ಯಾರ್ಥಿಗಳಿಗೆ ಕಲಿಸಿಕೊಟ್ಟರು. ಅವರನ್ನು ಫಾದರ್ ಆಫ್ ಫಿಲ್ಮ್ ಅಪ್ರಿಸಿಯೇಷನ್ ಅಂತ ಕರೆಯುತ್ತಾರೆ. ಆದರೆ ಅದು ಸರಿಯಲ್ಲ, ಅವರು ಫಾದರ್ ಆಫ್ ಫಿಲ್ಮ್ ಅನಾಲಿಸಿಸ್’ ಎಂದು ಅವರು ಹೇಳಿದರು. ಸುದೀರ್ಘವಾಗಿ ಮಾತನಾಡಿದ ಅವರು ಭಾರತೀಯ ಚಿತ್ರರಂಗದಲ್ಲಿ ಸತೀಶ್ ಬಹಾದುರ್ ಅವರ ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟರು.
ಸಿನಿಮಾ ವಿಮರ್ಶಕ, ಬೆಂಗಳೂರು ಚಿತ್ರೋತ್ಸವದ ಮಾಜಿ ಕಲಾ ನಿರ್ದೇಶಕರಾದ ಎನ್. ವಿದ್ಯಾಶಂಕರ್ ಅವರು ಮಾತನಾಡಿ, ‘ಸಿನಿಮಾ ಅನುಭವವನ್ನು ದಾಖಲಿಸುವುದು ಮುಖ್ಯ. ಸಿನಿಮಾವನ್ನು ಓದುವ ಕ್ರಮವನ್ನು, ಅನುಭವ ಅರ್ಥ ಮಾಡಿಕೊಳ್ಳುವ ವಿಧಾನವನ್ನು, ಸಿನಿಮಾವನ್ನು ನೋಡುವ, ಅರಿಯುವ ಅಭ್ಯಾಸ ಬೆಳೆಸುವ ವಿಚಾರದಲ್ಲಿ ಸತೀಶ್ ಬಹಾದುರ್ ಒಂದು ಅಪ್ರತಿಮ ದಾರಿಯನ್ನು ಹಾಕಿಕೊಟ್ಟರು. ಕ್ಲಾಸಿಕಲ್ ಸಿನಿಮಾವನ್ನು ನಮ್ಮದಾಗಿಸುವ ಬಗೆಯನ್ನು ದಶಕಗಳ ಕಾಲ ಕಲಿಸಿಕೊಟ್ಟರು. ನಿಮ್ಮ ಕೆಲಸವನ್ನು ಅರ್ಥ ಮಾಡಿಕೊಳ್ಳುವುದನ್ನು ಕಲಿಯಿರಿ. ಆಗ ಬೇರೆಯದನ್ನೂ ಅರ್ಥ ಮಾಡಿಕೊಳ್ಳುವ ಶಕ್ತಿ ಒದಗುತ್ತದೆ’ ಎಂದು ಅವರು ಹೇಳಿಕೊಟ್ಟರು.
ಹಿರಿಯ ಛಾಯಾಗ್ರಾಹಕರಾದ ಜಿ ಎಸ್ ಭಾಸ್ಕರ್ ಅವರು, ತಮ್ಮ ಮತ್ತು ಸತೀಶ್ ಬಹಾದುರ್ ಅವರ ನಡುವಿನ ಒಡನಾಟ ನೆನಪಿಸಿಕೊಂಡರು. ಆಪ್ತವಾಗಿ ಕಾರ್ಯಕ್ರಮ ನಿರ್ವಹಿಸಿದರು.
Cinema
‘ಟಾಕ್ಸಿಕ್’ ತಬಾಹಿ ಹಾಡು ವೈರಲ್: ಯಶ್ ಅವರ ಹಳೆಯ ರೊಮ್ಯಾಂಟಿಕ್ ದೃಶ್ಯದ ಹೇಳಿಕೆ ಮತ್ತೆ ಚರ್ಚೆಯಲ್ಲಿ
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಚಿತ್ರದ ‘ತಬಾಹಿ’ ಹಾಡು ಬಿಡುಗಡೆಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದೆ. ಹಾಡಿನಲ್ಲಿರುವ ರೊಮ್ಯಾಂಟಿಕ್ ಹಾಗೂ ಬೋಲ್ಡ್ ದೃಶ್ಯಗಳು ಸಿನಿಪ್ರಿಯರ ಗಮನ ಸೆಳೆದಿದ್ದು, ಯಶ್ ಮತ್ತು ಕಿಯಾರಾ ಅಡ್ವಾಣಿ ಅವರ ಜೋಡಿ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.
ಈ ಬೆಳವಣಿಗೆಯ ನಡುವೆ, ಯಶ್ ಅವರು ಈ ಹಿಂದೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನೀಡಿದ್ದ ಹೇಳಿಕೆ ಮತ್ತೆ ವೈರಲ್ ಆಗಿದೆ. ಆ ಸಂದರ್ಭದಲ್ಲಿ ಮಾತನಾಡಿದ್ದ ಅವರು, ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸುವುದು ತಮ್ಮ ಪಾಲಿಗೆ ಅತ್ಯಂತ ಸವಾಲಿನ ಕೆಲಸ ಎಂದು ಹೇಳಿದ್ದರು.

“ಜನರು ನೀವು ರೊಮ್ಯಾಂಟಿಕ್ ದೃಶ್ಯಗಳನ್ನು ಚೆನ್ನಾಗಿ ಮಾಡುತ್ತೀರಿ ಎಂದು ಹೇಳಿದಾಗ ನನಗೆ ಅಚ್ಚರಿಯಾಗುತ್ತದೆ. ಅಂತಹ ದೃಶ್ಯಗಳನ್ನು ಮಾಡುವಾಗ ನಾನು ತುಂಬಾ ನರ್ವಸ್ ಆಗುತ್ತಿದ್ದೆ. ನಾನು ರೊಮ್ಯಾಂಟಿಕ್ ಸೀನ್ ಮಾಡುತ್ತಿದ್ದಾಗ ರಾಧಿಕಾ ಸೇರಿದಂತೆ ಸೆಟ್‌ನಲ್ಲಿದ್ದವರು ನನ್ನನ್ನು ನೋಡಿ ನಗುತ್ತಿದ್ದರು,” ಎಂದು ಯಶ್ ಹೇಳಿದ್ದರು.
ಇದೇ ವೇಳೆ, ತಮ್ಮ ವೈಯಕ್ತಿಕ ನಿಲುವಿನ ಬಗ್ಗೆ ಮಾತನಾಡಿದ್ದ ಅವರು, “ನನ್ನ ಪೋಷಕರೊಂದಿಗೆ ಕುಳಿತು ನೋಡಲು ಮುಜುಗರವಾಗುವ ದೃಶ್ಯಗಳಲ್ಲಿ ನಾನು ನಟಿಸುವುದಿಲ್ಲ. ಏಕೆಂದರೆ ಅಂತಹ ದೃಶ್ಯಗಳು ಸಾಮಾನ್ಯ ಪ್ರೇಕ್ಷಕರಿಗೂ ಅಸಹಜ ಭಾವನೆ ಉಂಟುಮಾಡಬಹುದು,” ಎಂದು ತಿಳಿಸಿದ್ದರು.

ಆದರೆ, ಟಾಕ್ಸಿಕ್ ಚಿತ್ರದ ‘ತಬಾಹಿ’ ಹಾಡಿನಲ್ಲಿನ ಆಪ್ತ ದೃಶ್ಯಗಳ ಹಿನ್ನೆಲೆಯಲ್ಲಿ, ಯಶ್ ಅವರ ಈ ಹಿಂದಿನ ಹೇಳಿಕೆ ಮತ್ತೆ ಚರ್ಚೆಗೆ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಅವರ ಹಳೆಯ ಮತ್ತು ಇಂದಿನ ಪಾತ್ರದ ಆಯ್ಕೆಯನ್ನು ಹೋಲಿಕೆ ಮಾಡುತ್ತಿದ್ದು, ಇನ್ನೂ ಕೆಲವರು ಚಿತ್ರದ ಕಥೆ ಮತ್ತು ಪಾತ್ರದ ಅಗತ್ಯಕ್ಕೆ ಅನುಗುಣವಾಗಿ ನಟರು ವಿಭಿನ್ನ ರೀತಿಯ ದೃಶ್ಯಗಳಲ್ಲಿ ಅಭಿನಯಿಸುವುದು ಸಹಜ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಆದಾಗ್ಯೂ, ಈ ವಿಚಾರದ ಕುರಿತು ಯಶ್ ಅವರು ಯಾವುದೇ ಹೊಸ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
Cinema
ಟಿವಿ TRP ಪ್ರಕಟಣೆ ತಾತ್ಕಾಲಿಕ ಸ್ಥಗಿತ: ವಾಹಿನಿಗಳು, ಜಾಹೀರಾತು ಕ್ಷೇತ್ರಕ್ಕೆ ಹೊಸ ಸವಾಲು
ಬೆಂಗಳೂರು: ಭಾರತೀಯ ಟೆಲಿವಿಷನ್ ಉದ್ಯಮಕ್ಕೆ ಮಹತ್ವದ ಬೆಳವಣಿಗೆಯೊಂದರಲ್ಲಿ, ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (BARC) ತನ್ನ ಪರವಾನಗಿ (ಲೈಸೆನ್ಸ್) ನವೀಕರಣ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಎಲ್ಲಾ ಟಿವಿ ಚಾನೆಲ್‌ಗಳ ಟೆಲಿವಿಷನ್ ರೇಟಿಂಗ್ ಪಾಯಿಂಟ್ (TRP) ಪ್ರಕಟಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯ (MIB) ಜಾರಿಗೆ ತಂದಿರುವ ಹೊಸ Television Ratings Policy-2026 ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಮನರಂಜನೆ, ಸುದ್ದಿ, ಕ್ರೀಡೆ, ಸಿನಿಮಾ, ಪ್ರಾದೇಶಿಕ ಹಾಗೂ ಇನ್‌ಫೊಟೇನ್ಮೆಂಟ್ ಸೇರಿದಂತೆ ಎಲ್ಲ ವಿಭಾಗಗಳ ವಾಹಿನಿಗಳ ವಾರದ ವೀಕ್ಷಕರ ಅಂಕಿ-ಅಂಶಗಳು ಸದ್ಯ ಲಭ್ಯವಾಗುವುದಿಲ್ಲ.

TRP ಎನ್ನುವುದು ಟಿವಿ ಕಾರ್ಯಕ್ರಮಗಳು ಮತ್ತು ವಾಹಿನಿಗಳ ವೀಕ್ಷಕರ ಸಂಖ್ಯೆಯನ್ನು ಅಳೆಯುವ ಅಧಿಕೃತ ಮಾನದಂಡವಾಗಿದೆ. ಇದೇ ಅಂಕಿ-ಅಂಶಗಳ ಆಧಾರದ ಮೇಲೆ ಜಾಹೀರಾತು ದರ ನಿಗದಿ, ಸ್ಪಾನ್ಸರ್‌ಶಿಪ್ ಒಪ್ಪಂದಗಳು, ಹೊಸ ಕಾರ್ಯಕ್ರಮಗಳ ಯೋಜನೆ ಹಾಗೂ ವಾಹಿನಿಗಳ ಸ್ಪರ್ಧಾತ್ಮಕ ಸ್ಥಾನಮಾನ ನಿರ್ಧಾರವಾಗುತ್ತದೆ.
TRP ಪ್ರಕಟಣೆ ಸ್ಥಗಿತಗೊಂಡಿರುವುದರಿಂದ ಜಾಹೀರಾತುದಾರರು, ಪ್ರಸಾರ ಸಂಸ್ಥೆಗಳು, ಮೀಡಿಯಾ ಏಜೆನ್ಸಿಗಳು ಹಾಗೂ ಹೂಡಿಕೆದಾರರು ನಿರ್ಧಾರ ಕೈಗೊಳ್ಳುವಲ್ಲಿ ಅನಿಶ್ಚಿತತೆಯನ್ನು ಎದುರಿಸುವ ಸಾಧ್ಯತೆ ಇದೆ. ವಾರದ TRP ಆಧರಿಸಿ ಜಾಹೀರಾತು ಬಜೆಟ್ ಹಂಚಿಕೆ ಮಾಡುವ ಬ್ರ್ಯಾಂಡ್‌ಗಳು ಈಗ ಪರ್ಯಾಯ ಡೇಟಾ ಹಾಗೂ ಡಿಜಿಟಲ್ ವೀಕ್ಷಕರ ಅಂಕಿ-ಅಂಶಗಳನ್ನು ಹೆಚ್ಚಾಗಿ ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ವಾಹಿನಿಗಳಿಗೂ ಈ ಬೆಳವಣಿಗೆ ಸವಾಲಾಗಿ ಪರಿಣಮಿಸಿದೆ. ಹೊಸ ಧಾರಾವಾಹಿಗಳು, ರಿಯಾಲಿಟಿ ಶೋಗಳು ಹಾಗೂ ಕಾರ್ಯಕ್ರಮಗಳ ಸಮಯ ಬದಲಾವಣೆಯಂತಹ ನಿರ್ಧಾರಗಳನ್ನು ಸಾಮಾನ್ಯವಾಗಿ TRP ಆಧರಿಸಿ ಕೈಗೊಳ್ಳಲಾಗುತ್ತಿತ್ತು. ಇದೀಗ ಸಾಮಾಜಿಕ ಜಾಲತಾಣಗಳ ಪ್ರತಿಕ್ರಿಯೆ, ಡಿಜಿಟಲ್ ವೀಕ್ಷಣೆ ಹಾಗೂ ಆಂತರಿಕ ವಿಶ್ಲೇಷಣೆಗಳನ್ನೇ ಹೆಚ್ಚು ಅವಲಂಬಿಸಬೇಕಾಗಿದೆ.
ಭಾರತೀಯ ಟಿವಿ ಉದ್ಯಮದಲ್ಲಿ TRP ಪ್ರಕಟಣೆ ಈ ಹಿಂದೆ 2015ರಲ್ಲಿ BARC ವ್ಯವಸ್ಥೆ ಜಾರಿಗೆ ಬಂದ ವೇಳೆ, 2019ರಲ್ಲಿ TRAI ಹೊಸ ಟ್ಯಾರಿಫ್ ಆದೇಶದ ನಂತರ ಹಾಗೂ 2020ರಲ್ಲಿ TRP ಹಗರಣದ ಹಿನ್ನೆಲೆಯಲ್ಲಿ ಕೆಲವು ವಿಭಾಗಗಳಿಗೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಆದರೆ ಈ ಬಾರಿ ಸರ್ಕಾರದ ಹೊಸ ನಿಯಮಾವಳಿಯಡಿ ಪರವಾನಗಿ ನವೀಕರಣ ಕಡ್ಡಾಯವಾಗಿರುವುದರಿಂದ ಪ್ರಕಟಣೆ ನಿಲ್ಲಿಸಲಾಗಿದೆ.

BARCಗೆ ಹೊಸ ಪರವಾನಗಿ ಯಾವಾಗ ಸಿಗಲಿದೆ ಎಂಬ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಹೀಗಾಗಿ TRP ವರದಿಗಳು ಯಾವಾಗ ಮರುಪ್ರಾರಂಭವಾಗಲಿವೆ ಎಂಬ ಪ್ರಶ್ನೆಗೆ ಸದ್ಯ ಸ್ಪಷ್ಟ ಉತ್ತರ ಇಲ್ಲ.
Cinema
ಆಪ್ತನ ಅಗಲಿಕೆಗೆ ಕಂಗಾಲಾದ ನಟಿ ಕೃಷಿ ತಾಪಂಡ: ಗೆಳೆಯ ವೈಶಾಕ್ ನೆನೆದು ಭಾವುಕ ಪೋಸ್ಟ್!
ಬೆಂಗಳೂರು : ಇತ್ತೀಚೆಗೆ ನಟಿ ಕೃಷಿ ತಾಪಂಡ ಅವರು ವಾಸವಿದ್ದ ಫ್ಲ್ಯಾಟ್‌ನಲ್ಲೇ ಅವರ ಆಪ್ತ ಗೆಳೆಯ ವೈಶಾಕ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಈ ಬಗ್ಗೆ ನಟಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ.
“ಇಂತಹದ್ದೊಂದು ಬರಹವನ್ನು ಬರೆಯಬೇಕಾಗಿ ಬರುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ನನಗೆ ಈ ಸಮಯದಲ್ಲಿ ಯಾವುದೇ ಸಾರ್ವಜನಿಕ ಹೇಳಿಕೆ ನೀಡುವ ಮಾನಸಿಕ ಶಕ್ತಿ ಇಲ್ಲದಿದ್ದರೂ, ಸುತ್ತಲೂ ಕೇಳಿಬರುತ್ತಿರುವ ನಿರಂತರ ಊಹಾಪೋಹಗಳು ಮತ್ತು ಪ್ರಶ್ನೆಗಳಿಂದಾಗಿ ಈ ಸ್ಪಷ್ಟನೆ ನೀಡುತ್ತಿದ್ದೇನೆ. ನನಗೆ ಅತ್ಯಂತ ಆಪ್ತರಾಗಿದ್ದ, ನನ್ನನ್ನು ರಕ್ಷಿಸುತ್ತಿದ್ದ ವ್ಯಕ್ತಿಯನ್ನು ಕಳೆದುಕೊಂಡ ನೋವಿನಲ್ಲಿ ನಾನಿದ್ದೇನೆ. ಈ ನಷ್ಟದಿಂದ ಹೊರಬರಲು ನನಗೆ ಸಾಧ್ಯವಾಗುತ್ತಿಲ್ಲ” ಎಂದು ಪೋಸ್ಟ್ ಮಾಡಿದ್ದಾರೆ.
“ಅವರ ಕುಟುಂಬ ಮತ್ತು ಆಪ್ತರು ಈ ದೊಡ್ಡ ನಷ್ಟವನ್ನು ಅರಗಿಸಿಕೊಳ್ಳಲು ಹೆಣಗಾಡುತ್ತಿರುವಾಗ, ನಿರಂತರವಾಗಿ ಕಥೆಗಳನ್ನು ಸೃಷ್ಟಿಸಲಾಗುತ್ತಿದೆ. ಕೆಲವು ಮಾಧ್ಯಮಗಳು ಗೌರವಯುತವಾಗಿ ನಡೆದುಕೊಂಡರೆ, ಇನ್ನು ಕೆಲವು ಕೇವಲ ರಿಯಾಕ್ಷನ್‌ಗಾಗಿ ಒತ್ತಾಯಿಸುತ್ತಿವೆ. ನೀವು ಹೇಗಿದ್ದೀರಾ ಎಂದು ಕೇಳುವ ಬದಲು ನಿಮ್ಮ ರಿಯಾಕ್ಷನ್ ಏನು ಎಂದು ಕೇಳುತ್ತಿದ್ದಾರೆ” ಎಂದಿದ್ದಾರೆ.
“ಇಲ್ಲಿ ಒಂದು ಕುಟುಂಬ ತನ್ನ ಮಗನನ್ನು ಕಳೆದುಕೊಂಡಿದೆ. ಸ್ನೇಹಿತರು ತಮ್ಮ ಆಪ್ತನನ್ನು ಕಳೆದುಕೊಂಡಿದ್ದಾರೆ. ಪ್ರತಿಯೊಂದು ಅನಗತ್ಯ ಪ್ರಶ್ನೆ, ಊಹೆ ಮತ್ತು ವದಂತಿಗಳು ಇಲ್ಲಿ ಉಳಿದು ನೋವು ಅನುಭವಿಸುತ್ತಿರುವವರ ಮೇಲೆ ತೀವ್ರ ಪರಿಣಾಮ ಬೀರುತ್ತವೆ. ನಮಗೆ ಶಾಂತಿಯಿಂದ ದುಃಖಿಸಲು ಬಿಡಿ” ಎಂದು ಮನವಿ ಮಾಡಿಕೊಂಡಿದ್ದಾರೆ.
“ಸದ್ಯಕ್ಕೆ ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ಉತ್ತರಿಸುವ ಶಕ್ತಿ ನನಗಿಲ್ಲ. ಆದರೆ ನಿಮ್ಮ ಪ್ರೀತಿ ಮತ್ತು ಕಾಳಜಿಗೆ ನಾನು ಚಿರಋಣಿ. ಯಾರಿಗಾದರೂ ಬದುಕಲು ಕಾರಣ ನೀಡಲು ಸಾಧ್ಯವಾಗದಿದ್ದರೆ, ಕನಿಷ್ಠ ಅವರು ಭರವಸೆ ಕಳೆದುಕೊಳ್ಳುವಂತೆ ಮಾಡಬೇಡಿ. ದಯವಿಟ್ಟು ಎಲ್ಲರೂ ದಯೆ ಮತ್ತು ಕರುಣೆಯನ್ನು ಆಯ್ಕೆ ಮಾಡಿಕೊಳ್ಳಿ. ದಯವಿಟ್ಟು ಇದನ್ನು ಇಷ್ಟಕ್ಕೇ ನಿಲ್ಲಿಸಿ” ಎಂದು ಕೇಳಿಕೊಂಡಿದ್ದಾರೆ.
-
Mysore18 hours agoಹುಣಸೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹ*ತ್ಯೆ; ಸಾವಿನ ಕಾರಣ ನಿಗೂಢ
-
Kodagu14 hours agoಹಾರಂಗಿ ಜಲಾಶಯದ ನೀರು ಕುಡಿಯಲು ಮಾತ್ರ: ರೈತರಿಗೆ ಬೆಳೆ ಬೆಳೆಯದಂತೆ ಮನವಿ
-
Politics13 hours agoಪರಪ್ಪನ ಅಗ್ರಹಾರಕ್ಕೆ ವಿಜಯಲಕ್ಷ್ಮಿ, ರಕ್ಷಿತಾ ಭೇಟಿ: ದರ್ಶನ್ ಆರೋಗ್ಯ ವಿಚಾರಣೆ
-
Kodagu21 hours agoಅಧ್ಯಕ್ಷರಾಗಿ ವಾಂಚಿರ ವಿಠಲ್ ನಾಣಯ್ಯ ಆಯ್ಕೆ
-
Politics14 hours agoರಾಜ್ಯ ಸಚಿವ ಸಂಪುಟ ವಿಸ್ತರಣೆ ನಾಳೆ: 18 ಮಂದಿಗೆ ಸಚಿವ ಸ್ಥಾನ ಸಾಧ್ಯತೆ
-
Politics15 hours agoಆರ್ಎಸ್ಎಸ್ ಹೇಳಿಕೆ ಪ್ರಕರಣ: ನ್ಯಾಯಾಲಯದಿಂದ ಪ್ರಿಯಾಂಕ್ ಖರ್ಗೆಗೆ ಮರು ಸಮನ್ಸ್
-
Politics12 hours agoಹೆದ್ದಾರಿ ಅಪಘಾತ ಸಂತ್ರಸ್ತರಿಗೆ 7 ದಿನ ಉಚಿತ ಚಿಕಿತ್ಸೆ: ಸಚಿವ ಯು.ಟಿ. ಖಾದರ್ ಘೋಷಣೆ
-
Kodagu16 hours agoಕೂಡಿಗೆ ವ್ಯಾಪ್ತಿಯಲ್ಲಿ 1 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಡಾ. ಮಂತರ್ ಗೌಡ ಚಾಲನೆ
