Connect with us

State

ಗನ್ ತೋರಿಸಿ ಸದಾಶಿವ ನಗರದಲ್ಲಿ ವಿಧವೆಯರಿಂದ ನಿವೇಶನ ಕಬ್ಜ ಮಾಡಿದ ಡಿಸಿಎಂ ಡಿಕೆಶಿ – ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

Published

on

ಗನ್ ತೋರಿಸಿ ಸದಾಶಿವ ನಗರದಲ್ಲಿ ವಿಧವೆಯರಿಂದ ನಿವೇಶನ ಕಬ್ಜ ಮಾಡಿದ ಡಿಸಿಎಂ ಡಿಕೆಶಿ!?

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ನೇರ ಆರೋಪ

ಚನ್ನಪಟ್ಟಣ ಮೈಸೂರು ಚಲೋ ಸಭೆಯಲ್ಲಿ ಡಿಕೆಶಿ ವಿರುದ್ಧ HDK ಕೆಂಡ

||ಗನ್ ಇಟ್ಟು ಸದಾಶಿವನಗರದಲ್ಲಿ ವಿಧವಾ ತಾಯಂದಿರ ನಿವೇಶನಗಳನ್ನು ರಿಜಿಸ್ಟರ್ ಮಾಡಿಸಿಕೊಂಡರು ಎಂದು ಆರೋಪ||

*

ರಾಮನಗರ/ಚನ್ನಪಟ್ಟಣ: ಮೈಸೂರು ಚಲೋ ಪಾದಯಾತ್ರೆಯ ಮೂರನೇ ದಿನ ಚನ್ನಪಟ್ಟಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.

ಕಂಡ ಕಂಡವರ ಆಸ್ತಿಗಳನ್ನು ಸರಣಿಯಾಗಿ ಕಬ್ಜಾ ಮಾಡುತ್ತಿರುವ ವ್ಯಕ್ತಿಯೊಬ್ಬ ನನ್ನ ಆಸ್ತಿ, ನನ್ನ ತಂದೆಯವರ ಆಸ್ತಿಯ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಅವರು ಮಾಡುತ್ತಿರುವ ಅನಾಚಾರ, ಅಕ್ರಮಗಳ ಬಗ್ಗೆ ನೊಣವಿನಕೆರೆ ಅಜ್ಜಯ್ಯನ ಮುಂದೆ ಬಂದು ಪ್ರಮಾಣ ಮಾಡಲಿ ಎಂದು ಮತ್ತೆ ಸವಾಲು ಹಾಕಿದರು.

ಸದಾಶಿವನಗರದಲ್ಲಿ ಐವರು ವಿಧವಾ ತಾಯಂದಿರ ಬಳಿ ನಿವೇಶನಗಳ ಸೇಲ್ ಅಗ್ರಿಮೆಂಟ್ ಮಾಡಿಕೊಳ್ಳುತ್ತಾರೆ. ಆ ನಿವೇಶನಕ್ಕೆ ಸಂಪೂರ್ಣವಾಗಿ ಹಣ ಕೊಟ್ಟಿಲ್ಲ. ಕಾಂಗ್ರೆಸ್ ನಾಯಕ ಅಲ್ಲಂ ವೀರಭದ್ರಪ್ಪ ಅವರು ಒಂದು ನಿವೇಶನ ಖರೀದಿ ಮಾಡುವುದಾಗಿ ಅಡ್ವಾನ್ಸ್ ಕೊಡುತ್ತಾರೆ. ಆದರೆ, ಅವರು ಪೂರ್ಣ ಮೊತ್ತ ಕೊಡುವುದಿಲ್ಲ. ಆಮೇಲೆ ಈ ವ್ಯಕ್ತಿ ಮಧ್ಯಪ್ರವೇಶ ಮಾಡುತ್ತಾರೆ. ಈ ವ್ಯಕ್ತಿ ಮಂತ್ರಿಯಾದ ಮೇಲೆ ರಾತ್ರೋರಾತ್ರಿ ಅವರನ್ನು ಕರೆಸಿ ಹೆದರಿಸಿ, ಬೆದರಿಸಿ ಸೇಲ್ ಅಗ್ರಿಮೆಂಟಿಗೆ ರುಜು ಹಾಕಿಸಿಕೊಂಡಿದ್ದಾರೆ. ಇಂಥ ವ್ಯಕ್ತಿ ದೇವೇಗೌಡರ ಬಗ್ಗೆ ಮಾತನಾಡುತ್ತಾರೆ. ಅವರ ಹಾಗೆ ನಾವು ಮಾಡಿಲ್ಲ ಎಂದು ಕೇಂದ್ರ ಸಚಿವರು ಗುಡುಗಿದರು.

ಗನ್ ಇಟ್ಟು ವಿಧವಾ ತಾಯಂದಿರ ನಿವೇಶನಗಳನ್ನು ರಿಜಿಸ್ಟರ್ ಮಾಡಿಸಿಕೊಂಡವರು ನೀವು, ಅನ್ಯಾಯವಾಗಿ ಕಂಡೋರ ಆಸ್ತಿಯನ್ನು ಕಬ್ಜ ಮಾಡಿದವರು ನೀವು.. ಇಂಥ ಕೆಟ್ಟ ಹಿನ್ನೆಯ ನೀವು ನನ್ನ ಬಗ್ಗೆ ಮಾತನಾಡುತ್ತಿದ್ದೀರಿ. ಬನ್ನಿ ಪ್ರಮಾಣ ಮಾಡೋಣ. ಅಜ್ಜಯನ ಮುಂದೆ ಆಗಲಿ, ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿ ಅಮ್ಮನ ಮುಂದೆ ಆಗಲಿ ಪ್ರಮಾಣ ಮಾಡೋಣ. ನೀವೇ ವಿಧಾನಸೌಧಕ್ಕೆ ಬನ್ನಿ ಎಂದು ಕರೆದಿದ್ದಿರಲ್ಲ.. ಅಲ್ಲಿಗೂ ಬರಲು ನಾನು ತಯಾರಿದ್ದೇನೆ. ಬನ್ನಿ ಚರ್ಚೆ ಮಾಡೋಣ ಎಂದು ಕುಮಾರಸ್ವಾಮಿ ಅವರು ಡಿಕೆ ಶಿವಕುಮಾರ್ ಗೆ ಸವಾಲು ಹಾಕಿದರು.

ಈಗ ಚನ್ನಪಟ್ಟಣಕ್ಕೆ ಬಂದು ಏನೋ ಉದ್ದಾರ ಮಾಡುತ್ತೇವೆ ಎಂದು ಅಣ್ಣ ತಮ್ಮ ಬಂದಿದ್ದಾರೆ. ನೂರಾರು ವರ್ಷ ಬಾಳಿ ಬದುಕಿರುವ ಮನೆಗಳಿಗೆ ಈಗ ಬಂದು ಹಕ್ಕುಪತ್ರ ಕೊಡುತ್ತಾರಂತೆ. ಹಾಗಾದರೆ, ರಾಜ್ಯದಲ್ಲಿ ನಿಮ್ಮ ಸರಕಾರ ಬಂದು ಒಂದೂವರೆ ವರ್ಷ ಆಯಿತಲ್ಲವೇ..ಇಷ್ಟು ದಿನ ಏನು ಮಾಡ್ತಿದ್ರಪ್ಪ? ಎಂದು ಸಚಿವರು ತೀಕ್ಷ್ಣವಾಗಿ ಪ್ರಶ್ನಿಸಿದರು.

ಚನ್ನಪಟ್ಟಣವನ್ನು ಉದ್ಧಾರ ಮಾಡಿರೋದು ಇಲ್ಲಿನ ಜನರಿಗೆ ಬಹಳ ಚೆನ್ನಾಗಿ ಗೊತ್ತಿದೆ. ಇಲ್ಲಿನ ಮತ್ತಿಕೆರೆ ಬಳಿ ಕಲ್ಲು ಗೋಡೋನ್ ಇದೆ. ಅಲ್ಲಿ ಹೋಗಿ ನೋಡಿ, ಎಷ್ಟು ಕಲ್ಲುಗಳನ್ನು ತಂದು ಇಲ್ಲಿ ಗುಡ್ಡೆ ಹಾಕ್ತಿದ್ದೀರಿ? ಎಲ್ಲೆಲ್ಲಿಗೆ ಕಳಿಸುತ್ತಿದ್ದೀರಿ? ನನಗೆ ಗೊತ್ತಿಲ್ಲದ ವಿಷಯವೇ? ಎಂದ ಕೇಂದ್ರ ಸಚಿವರು ಬಹಿರಂಗ ಸಭೆಯಲ್ಲಿ ಆ ಕಲ್ಲು ಗೋದಾಮುಗಳ ಪೋಟೊಗಳನ್ನು ತೋರಿಸಿ,
ಇದಕ್ಕೆ ಉತ್ತರ ಕೊಡಪ್ಪಾ..? ಎಂದು ಕೇಳಿದರು ಕುಮಾರಸ್ವಾಮಿ ಅವರು.

ಕನಕಪುರದ ಎಷ್ಟು ದಲಿತ ಕುಟುಂಬಗಳ ಹಾಳು ಮಾಡಿದ್ದೀರಿ ನೀವು. ಆ ಜನ ಕಣ್ಣಲ್ಲಿ ನೀರು ಹಾಕಿದ್ದನ್ನು ನಾನು ನೋಡಿದ್ದೇನೆ. ಕುಮಾರಸ್ವಾಮಿ ರೈತನ ಮಗ ಅಲ್ಲ ಎಂದಿದ್ದಾರೆ ಅವರು. ಫ್ಯಾಂಟ್ ತೆಗೆದು ಪಂಚೆ ಹಾಕಿದ್ರೆ ರೈತ ಅಲ್ಲ ಎಂದು ಹೇಳಿದ್ದಾರೆ. ಬನ್ನಿ, ಬಿಡದಿಗೆ ಬಂದು ನೋಡಿ. 20 ಟನ್ ಕೊಬ್ಬರಿ ಬೆಳೆದಿದ್ದೇನೆ. ತೆಂಗು, ಬಾಳೆ, ಅಡಕೆಯಲ್ಲಿ 50 ಲಕ್ಷ ರೂಪಾಯಿ ರೈತನಾಗಿ ಸಂಪಾದನೆ ಮಾಡಿದ್ದೇನೆ. ನಿಮ್ಮಿಂದ ಇದು ಸಾಧ್ಯವೇ? ಎಂದು ಸಚಿವರು ಟಾಂಗ್ ಕೊಟ್ಟರು.

ಚನ್ನಪಟ್ಟಣಕ್ಕೆ ಕುಮಾರಸ್ವಾಮಿ ಮತ್ತು ದೇವೇಗೌಡರು ಮಾಡಿದ್ದಾರೆ ಎಂದು ಕೇಳುತ್ತಿದ್ದಾರೆ. ದೇವೇಗೌಡರ ಕಾಲದಲ್ಲಿ ಇಗ್ಗಲೂರು ಜಲಾಶಯ ಕಟ್ಟಲು ಹೋದರು. ಕೆಲವರು ಆಗಲ್ಲ ಎಂದು ಹೇಳಿದರು. ಆದರೆ, ದೇವೇಗೌಡರು ಪಟ್ಟು ಹಿಡಿದು ಆ ಯೋಜನೆಯನ್ನು ಕಾರ್ಯಗತ ಮಾಡಿದರು. ಇವತ್ತು ಈ ನೆಲಕ್ಕೆ ಆ ಜಲಾಶಯ ಜೀವನಾಡಿ ಆಗಿದೆ ಎಂದು ಕುಮಾರಸ್ವಾಮಿ ಅವರು ಡಿಕೆಶಿಗೆ ತಿರುಗೇಟು ಕೊಟ್ಟರು.

ಚನ್ನಪಟ್ಟಣದಲ್ಲಿ ಕೆರೆಗಳನ್ನು ತುಂಬಿಸುವ ಕೆಲಸ ಕಾಂಗ್ರೆಸ್ ಸರ್ಕಾರದಿಂದ ಆಗಿಲ್ಲ. ನಾನು, ಯಡಿಯೂರಪ್ಪ, ಬೊಮ್ಮಾಯಿ ಸಿಎಂ ಆಗಿದ್ದಾಗ ಕೆರೆಗಳನ್ನು ತುಂಬಿಸಲಾಯಿತು. ಯೋಗೇಶ್ವರ್ ಕೂಡ ಮಂತ್ರಿಯಾಗಿ ಕೆಲಸ ಮಾಡಿದರು. ಕಾಂಗ್ರೆಸ್ ನವರು ಏನೂ ಮಾಡಿಲ್ಲ ಎಂದು ಅವರು ಕಿಡಿಕಾರಿದರು.

ರಾಜ್ಯದಲ್ಲಿ ನಿಮ್ಮ ಆಡಳಿತ, ನಿರ್ವಹಣೆ ಕೆಟ್ಟದಾಗಿದೆ. ಗ್ಯಾರಂಟಿ ಎಂದು ಕೊಟ್ಟಿದ್ದೀರಿ. ಯಾರಿಗೆ ಲಾಭವಾಗಿದೆ ಅದರಿಂದ, ಒಂದು ಕೈಯ್ಯಲ್ಲಿ ಕೊಟ್ಟು ಹತ್ತು ಕೈಗಳಲ್ಲಿ ಕಿತ್ತುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಾಗಿದೆ‌? ರೈತ ಟಿಸಿ ದರ ಎಷ್ಟಾಗಿದೆ? ಸರಣಿ ಹಗರಣಗಳ ರೀತಿಯಲ್ಲಿ ಸರಣಿ ಬೆಲೆ ಏರಿಕೆ ಮಾಡಿದ್ದೀರಿ. ರೈತರಿಗೆ ಆದಾಯ ಇಲ್ಲ. ರೈತರಿಗೆ ಏನು ಕೊಟ್ಟಿದ್ದೀರಿ? ಬರೀ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದೀರಿ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ದಲಿತರ ಬಗ್ಗೆ ಇವರು ಚರ್ಚೆ ಮಾಡ್ತಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣ ದರೋಡೆ ಮಾಡಿದ್ದಾರೆ. ಹಣ ದೋಚಿರೋ ಸಿದ್ದರಾಮಯ್ಯ, ಡಿಕೆಶಿ ಇಲ್ಲಿ ಬಂದು ದಲಿತರ ಬಗ್ಗೆ ಚರ್ಚೆ ಮಾಡ್ತೀರಾ? ಹೆಚ್ಡಿಕೆ ವಾಗ್ದಾಳಿ ನಡೆಸಿದರು.

ಗಿಫ್ಟ್ ಕೂಪನ್ ಹಂಚಿ 136 ಸೀಟು ಗೆದ್ದರು!!

ನಾವು 136 ಸೀಟು ಗೆದ್ದು ಅಧಿಕಾರಕ್ಕೆ ಬಂದಿದೇವೆ ಎಂದು ಕಾಂಗ್ರೆಸ್ ನಾಯಕರು ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕೂಪನ್ ಹಂಚಿ ರಾಜಕಾರಣ ಮಾಡಿದೆ. ಲುಲು ಮಾಲ್ ಕೂಪನ್ ಕೊಟ್ಟವ್ರೆ. ಮೂರು ಸಾವಿರ, ಐದು ಸಾವಿರ ಕೂಪನ್ ಕೊಟ್ಟಿದ್ದರು. ಅದನ್ನು ತೆಗೆದುಕೊಂಡು ಹೋಗಿ ಲುಲು ಮಾಲ್ ನಲ್ಲಿ ಕೊಟ್ಟರೆ ಅದರಲ್ಲಿ ದುಡ್ಡೇ ಇಲ್ಲ. ಜನರಿಗೆ ಕಾಂಗ್ರೆಸ್ ನವರು ಮೋಸ ಮಾಡಿದ್ದು ಹೀಗೆ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

Continue Reading

State

ಶ್ರಾವಣ ಮಾಸದಲ್ಲಿ ನಾನ್​ವೆಜ್​ ತಿನ್ನಬಾರದು ಅನ್ನಲು ಈ ಕಾರಣವೂ ಇದೆ !

Published

on

ಶ್ರಾವಣ ಮಾಸ 2024: ನಾನ್ವೆಜ್ ಆಹಾರ ಕೆಲವರಿಗೆ ತುಂಬಾ ಇಷ್ಟ. ಎರಡು ದಿವಸ ನಾನ್ವೆಜ್ ಆಹಾರ ಬಿಟ್ಟಿರಲು ಹರಾಸಾಹಸ ಪಡಬೇಕು ಅಂದ್ರೆ ತಪ್ಪಾಗಲಾರದು. ಹಾಗಿರುವಾಗ ಶ್ರಾವಣ ಮಾಸದಲ್ಲಿ ನೀವು ನಾನ್ ವೆಜ್ ಮುಟ್ಟಬಾರದು ಅನ್ನೋದಕ್ಕೆ ನಿಮಗೆ ಸರಿಯಾದ ಕಾರಣ ಬೇಕೇ ಬೇಕು. ಬನ್ನಿ ಆ ಕಾರಣ ಏನೆಂದು ಇಲ್ಲಿ ನೋಡೋಣ.

ಹೌದು, ಶ್ರಾವಣ ತಿಂಗಳಲ್ಲಿ ಹೆಚ್ಚಿನ ಜನರು ಮಾಂಸಾಹಾರದಿಂದ ದೂರವಿರುತ್ತಾರೆ. ಮನೆಯ ಹಿರಿಯರು ತಮ್ಮ ಮನೆ ಮಂದಿಗೆಲ್ಲ ಈ ಒಂದು ತಿಂಗಳು ನಾನ್ ವೆಜ್ ತಿನ್ನಬೇಡಿ ಎಂದು ಸಲಹೆ ನೀಡುತ್ತಾರೆ. ಆದರೆ, ಈ ಸಂಪ್ರದಾಯದ ಹಿಂದೆ ಧಾರ್ಮಿಕ ಮಾತ್ರವಲ್ಲ ವೈಜ್ಞಾನಿಕ ಕಾರಣಗಳಿವೆಯಂತೆ.

ಮುಖ್ಯವಾಗಿ ಹಿಂದೂ ಸಂಪ್ರದಾಯದಲ್ಲಿ ಶ್ರಾವಣ ಮಾಸಕ್ಕೆ ವಿಶೇಷವಾದ ಸ್ಥಾನವಿದೆ. ಈ ಮಾಸವು ಶಿವನಿಗೆ ಸಮರ್ಪಿತವಾಗಿದೆ. ಆಗಸ್ಟ್ 5 ರಿಂದ ಶ್ರಾವಣ ಆರಂಭವಾಗಲಿದ್ದು, ಈ ಮಾಸದಲ್ಲಿ ಶಿವ ಭಕ್ತರು ಅನುಸರಿಸಬೇಕಾದ ಕೆಲವು ನಿಯಮಗಳು ಮತ್ತು ನಿಬಂಧನೆಗಳಿವೆ. ಈ ನಿಯಮಗಳನ್ನು ಭಕ್ತಿಯಿಂದ ಅನುಸರಿಸಿದರೆ ಶಿವನ ಕೃಪೆಗೆ ಪಾತ್ರರಾಗಬಹುದು ಎಂಬ ನಂಬಿಕೆ ಇದೆ.

ಶ್ರಾವಣ ತಿಂಗಳಲ್ಲಿ ಕೆಲವರು ತಮ್ಮ ಮನೆದೇವರ ಹೆಸರಿನಲ್ಲಿ ವರ್ಷಕ್ಕೆ ಒಂದು ತಿಂಗಳು ಶ್ರಾವಣ ಮಾಸದಲ್ಲಿ ಈ ಸಂಪೂರ್ಣ ಸಸ್ಯಾಹಾರ ಅನುಸರಿಸುತ್ತಾರೆ. ಆದರೆ ಇದನ್ನು ಹೊರತು ವೈಜ್ಞಾನಿಕ ಕಾರಣವನ್ನು ಕಂಡುಕೊಂಡಿದ್ದರು ನಮ್ಮ ಹಿರಿಯರು.

ಸಾಮಾನ್ಯವಾಗಿ ಶ್ರಾವಣ ಮಾಸ ಎಂದರೆ ಮಳೆಗಾಲ ಸಮಯ. ಅಂದರೆ ಬಿಸಿಲಿನ ಅಭಾವ ಇರುತ್ತದೆ, ಹೆಚ್ಚು ಬೆಳಕಿರುವುದಿಲ್ಲ. ಹೀಗಾಗಿ ನಮ್ಮ ದೇಹದ ಜೀರ್ಣಕ್ರಿಯೆ ಕೂಡಾ ಹೆಚ್ಚು ಚುರುಕಾಗಿ ಇರುವುದಿಲ್ಲ. ಇದರಿಂದಾಗಿ ಮಾಂಸ ಆಹಾರ ಕಠಿಣ ಪದಾರ್ಥವನ್ನು ದೇಹ ಸರಿಯಾಗಿ ಜೀರ್ಣಿಸುವುದು ಕಷ್ಟ. ಆದ್ದರಿಂದ ಶ್ರಾವಣ ಮಾಸದಲ್ಲಿ ಸಸ್ಯಾಹಾರವನ್ನು ಸೇವಿಸುವುದು ಉತ್ತಮ ಎನ್ನುವ ಲೆಕ್ಕಾಚಾರವಿದೆ.

ಇನ್ನು ಮಳೆಗಾಲದಲ್ಲಿ ನೀರು ಹೆಚ್ಚು ಕಲುಷಿತವಾಗಿರುವ ನೀರಿನಲ್ಲೇ ವಾಸಿಸುವ ಮೀನುಗಳಿಗೆ ನೀರಿನಿಂದ ಬರುವ ನಾನಾ ಖಾಯಿಲೆಗಳು ಬಂದಿರಬಹುದು. ಅದರಿಂದ ರಕ್ಷಣೆಗೆ ಸಸ್ಯಾಹಾರವೇ ಸೂಕ್ತ. ಅದಲ್ಲದೆ ಮಳೆಗಾಲ ಜಲಚರಗಳಿಗೆ ಸಂತಾನೋತ್ಪತ್ತಿಯ ಸಂದರ್ಭ ಕೂಡಾ. ಈ ಸಂದರ್ಭದಲ್ಲಿ ಮನುಷ್ಯರು ತಿನ್ನಲು ಮೀನು ಹಿಡಿದರೆ ಆಗ ಸಂತಾನೋತ್ಪತ್ತಿ ಕ್ರಿಯೆಗೆ ಅಡ್ಡಿ ಪಡಿಸಿದಂತಾಗುತ್ತದೆ. ಅಷ್ಟೇ ಅಲ್ಲ, ಮೀನುಗಳ ಸಂಖ್ಯೆ ಕಡಿಮೆಯಾಗಿ ಅದರಿಂದ ಸೃಷ್ಟಿಯ ಲಯ ತಪ್ಪುತ್ತದೆ. ಆದ್ದರಿಂದ ಈ ಸಂದರ್ಭದಲ್ಲಿ ಮೀನುಗಳನ್ನೂ ಸೇರಿದಂತೆ ಬಹುತೇಕ ಮಾಂಸಾಹಾರವನ್ನು ತಿನ್ನುವುದಿಲ್ಲ.

ಒಟ್ಟಾರೆಯಾಗಿ ಹಿಂದಿನ ಕಾಲದಿಂದಲೇ ಮುಂದುವರೆದಿರುವ ಈ ಧರ್ಮ ಆಚರಣೆ ಮತ್ತು ಮನುಷ್ಯನ ದೇಹ ಮತ್ತು ಆರೋಗ್ಯಕ್ಕೂ, ಪ್ರಾಣಿಗಳು ಮತ್ತು ಪ್ರಕೃತಿಯ ಒಳಿತಿಗೂ ಉತ್ತಮವಾದ ದೃಷ್ಟಿಯನ್ನು ಇಟ್ಟುಕೊಂಡೇ ಮಾಡಲಾಗಿದೆ ಎನ್ನಲಾಗಿದೆ.

 

Continue Reading

State

ಮೀನುಗಾರಿಕೆಗೆ ತೆರಳಿದ್ದ ಬೋಟ್ ಬೆಂಕಿಗಾಹುತಿ

Published

on

ಮಂಗಳೂರು: ಮಂಗಳೂರು ಧಕ್ಕೆಯಿಂದ ಆಳ ಸಮುದ್ರ ಮೀನುಗಾರಿಕೆ ತೆರಳಿದ್ದ ಬೋಟ್ ವೊಂದು ಸೋಮವಾರ ಬೆಳಗಿನ ಜಾವ ಸಮುದ್ರ ಮಧ್ಯೆ ಬೆಂಕಿಗಾಹುತಿಯಾದ ಘಟನೆ ವರದಿಯಾಗಿದೆ.

ಹುಸೈನ್ ಎಂಬವರ ಮಾಲಕತ್ವದ ಸಫವಿ ಹೆಸರಿನ ಬೋಟ್ ಬೆಂಕಿಗಾಹುತಿಯಾಗಿದೆ. ಇಂದು ಬೆಳಗಿನ ಜಾವ 3ರಿಂದ 4 ಗಂಟೆಯ ಅವಧಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಈ ವೇಳೆ ಬೋಟ್ ನಲ್ಲಿದ್ದ 10 ಮೀನುಗಾರರನ್ನು ಇನ್ನೊಂದು ಬೋಟ್ ನಲ್ಲಿದ್ದವರು ರಕ್ಷಿಸಿದ್ದಾರೆ. ಅವರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ.

‘‘ರವಿವಾರ ಬೆಳಗ್ಗೆ 10 ಮಂದಿ ಮೀನುಗಾರರೊಂದಿಗೆ ನಮ್ಮ ಬೋಟ್ ಮೀನುಗಾರಿಕೆಗೆ ತೆರಳಿದ್ದು, ಸೋಮವಾರ ಬೆಳಗ್ಗಿನ ಹೊತ್ತು ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಧಕ್ಕೆಯಿಂದ ಸುಮಾರು 88 ನಾಟಿಕಲ್ ದೂರದಲ್ಲಿ ಬೋಟ್ ಮುಳುಗಿದೆ. ಜತೆಯಲ್ಲಿದ್ದ ಬೋಟ್ ನವರು ಅವಘಡ ಗಮನಿಸಿ ಮೀನುಗಾರರನ್ನು ರಕ್ಷಿಸಿದ್ದಾರೆ’’ ಎಂದು ಬೋಟ್ ಮಾಲಕರು ಮಾಹಿತಿ ನೀಡಿದ್ದಾರೆ.

Continue Reading

State

ಕಾಂಗ್ರೆಸ್ ನಾಯಕರಿಗೆ ಹೆಚ್.ಡಿ.ಕುಮಾರಸ್ವಾಮಿ ಸವಾಲು

Published

on

ಬೆಂಗಳೂರು: ಇನ್ನೂ ಹತ್ತು ವರ್ಷ ನಮ್ಮದೇ ಅಧಿಕಾರ, ಸರಕಾರ ಎಂದು ಕಾಂಗ್ರೆಸ್ ನಾಯಕರು ಬೀಗುತ್ತಿದ್ದಾರೆ. ಹತ್ತು ವರ್ಷದ ಮಾತಿರಲಿ, ಹತ್ತು ತಿಂಗಳು ಅಧಿಕಾರದಲ್ಲಿ ಇರಲಿ ನೋಡೋಣ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಮಾರ್ಮಿಕವಾಗಿ ಹೇಳಿದರು.

ಬೆಂಗಳೂರಿನಿಂದ ಮೈಸೂರುವರೆಗೆ ಜೆಡಿಎಸ್ ಬಿಜೆಪಿ ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಅವರು ಮಾತನಾಡಿದರು.

ನಿಮ್ಮ ಸರ್ಕಾರವನ್ನು ಯಾರೂ ಅಸ್ಥಿರ ಮಾಡಿಕೊಳ್ಳುತ್ತಿಲ್ಲ. ನೀವೇ ಜನರು ಕೊಟ್ಟ ಅವಕಾಶವನ್ನು ಹಾಳು ಮಾಡಿಕೊಳ್ಳುತ್ತಿದ್ದೀರಿ. ಹಗರಣಗಳ ಮೇಲೆ ಹಗರಣಗಳನ್ನು ನಡೆಸಿ ಅಕ್ರಮ ಎಸಗಿದ್ದೀರಿ. ಈಗ ನೋಡಿದರೆ ಜೆಡಿಎಸ್ ಬಿಜೆಪಿ ಪಕ್ಷಗಳನ್ನು ಪ್ರಶ್ನೆ ಮಾಡುತ್ತೇವೆ ಎಂದು ಹೊರಟಿದ್ದೀರಿ ಎಂದು ಅವರು ವಾಗ್ದಾಳಿ ನಡೆಸಿದರು.

ಇದು ಅತ್ಯಂತ ಭ್ರಷ್ಟ, ಕೆಟ್ಟ ಸರಕಾರ

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಂತರ ಅಧಿಕಾರಕ್ಕೆ ಬಂದು ಜನಪರ ಕೆಲಸ ಮಾಡುವುದು ಬಿಟ್ಟು ಕಾನೂನು ಬಾಹಿರ ಚಟುವಟಿಕೆಗಳು, ಭ್ರಷ್ಟಾಚಾರದಲ್ಲಿ ನಿರತರಾಗಿದ್ದೀರಿ. ಹಿಂದೆಂದೂ ಕಂಡಿರದಂತಹ ಭ್ರಷ್ಟ ಸರಕಾರವನ್ನು ಕಾಣುತ್ತಿದ್ದೇವೆ ಎಂದು ಕೇಂದ್ರ ಸಚಿವರು ದೂರಿದರು.

ಈ ಕೆಟ್ಟ ಕಾಂಗ್ರೆಸ್ ಜನ ವಿರೋಧಿ ಸರಕಾರ ವಿರುದ್ಧ ನಾವು ಜಂಟಿ ಹೋರಾಟ ಹಮ್ಮಿಕೊಂಡಿದ್ದೇವೆ. ಜನರಿಗೆ ಇವರ ಆಕ್ರಗಳನ್ನು ಮನವರಿಕೆ ಮಾಡಿಕೊಡುತ್ತೇವೆ. ಆದಿಶಕ್ತಿ ತಾಯಿ ಕೆಂಪಮ್ಮ ದೇವಿಗೆ ಪೂಜೆ ಸಲ್ಲಿಸಿ ಯಡಿಯೂರಪ್ಪನವರ ಇನ್ನಿತರೆ ಮಾರ್ಗದರ್ಶಕರ ನೇತೃತ್ವದಲ್ಲಿ ಮೈಸೂರು ಪಾದಯಾತ್ರೆ ಮಾಡುತ್ತಿದ್ದೇವೆ. ನಾಡಿನ ಜನತೆಯ ಅಭಿಪ್ರಾಯ ಏನಿದೆ ಅದರ ಪರವಾಗಿ ನಾವು ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ಅವರು ಕಿಡಿಕಾರಿದರು.

ಡಿಕೆಶಿಯದ್ದು ನಾವು ಬಿಚ್ಚಿಡುತ್ತೇವೆ

ನಮ್ಮ ಪಾದಯಾತ್ರೆ ತಡೆಯಲು ಕಾಂಗ್ರೆಸ್ ನಾಯಕರು ಬಿಡದಿಯಲ್ಲಿ ಪ್ರಶ್ನೆ ಮಾಡಿದ್ದಾರೆ. ಅದಾದ ಮೇಲೆ ಮುಂದೆಯೂ ಪ್ರಶ್ನೆ ಮಾಡುತ್ತಾರಂತೆ. ಮಾಡಲಿ.. ಅವರಿಗೆ ತಕ್ಕ ಉತ್ತರ ಕೊಡುತ್ತೇವೆ. ಅವರು ಕೇಳಿರುವ ಪ್ರಶ್ನೆಗಳಿಗೆ ಬಿಡದಿ, ರಾಮನಗರದಲ್ಲಿ ಉತ್ತರ ಕೊಡುತ್ತೇನೆ ಎಂದು ಕೇಂದ್ರ ಸಚಿವರು ಸವಾಲು ಹಾಕಿದರು.

ದೇವೆಗೌಡರು ರಾಮನಗರಕ್ಕೆ ಬಂದ ನಂತರ ಎಷ್ಟು ಆಸ್ತಿ ಮಾಡಿದ್ದಾರೆ ಈ ರಾಜ್ಯದ ಉಪ ಮುಖ್ಯಮಂತ್ರಿ ಕೇಳಿದ್ದಾರೆ. ಅದಕ್ಕೂ ನಾವು ಉತ್ತರ ಕೊಡುತ್ತೇವೆ. ನಾವೂ ಕೂಡ ಅವರದ್ದು ಎಷ್ಟಿದೆ ಆಸ್ತಿ ಎನ್ನುವುದನ್ನು ಬಿಡುಗಡೆ ಮಾಡುತ್ತೇವೆ ಎಂದು ಕೇಂದ್ರ ಸಚಿವರು ಈ ಎಚ್ಚರಿಕೆ ನೀಡಿದರು.

ಅವರೇ ಹೇಳಿಕೊಂಡಿದ್ದಾರೆ.. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರ ಆಸ್ತಿ, ಅಕ್ರಮಗಳ ದಾಖಲೆ ಪತ್ರಗಳನ್ನ ನಾನೇ ಕೇಂದ್ರ ಸರಕಾರಕ್ಕೆ ಕೊಟ್ಟಿದೇನೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ನಮ್ಮನ್ನು ಬಂಧಿಸಲು ದೆಹಲಿಯಿಂದ ಬರುತ್ತಾರೆ. ಬಂಧನಕ್ಕೂ ನಾವು ಸಿದ್ದವಿದ್ದೇವೆ ಅಂತ ಹೇಳಿಕೊಂಡಿದ್ದಾರೆ ಎಂದು ಕೇಂದ್ರ ಸಚಿವರು ಲೇವಡಿ ಮಾಡಿದರು.

ಹಿಂದುಳಿದ ವರ್ಗಗಳ ನಾಯಕರು ಎರಡನೇ ಬಾರಿ ಮುಖ್ಯಮಂತ್ರಿ ಆಗಿರುವುದಕ್ಕೆ ಕೆಲವರಿಗೆ ಹೊಟ್ಟೆ ಉರಿಯಿಂದ ಎನ್ನುತ್ತಾರೆ ಇವರು. ಒಳ್ಳೆಯ ಕೆಲಸ ಮಾಡಿದರೆ ಯಾರಿಗೆ ಹೊಟ್ಟೆ ಉರಿ ಬರುತ್ತದೆ? ಸುಖಾಸುಮ್ಮನೆ ಜನರ ಗಮನ ಬೇರೆಡೆಗೆ ಸೆಳೆಯಲು ನಾನು ಹಿಂದುಳಿದವನು, ಅದಕ್ಕೆ ಹೊಟ್ಟೆ ಉರಿ ಎಂದು ನಾಟಕ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವರು ಆರೋಪಿಸಿದರು.

ನನ್ನ ಪ್ರಶ್ನೆಗೆ ಪರಮೇಶ್ವರ್ ಉತ್ತರ ಕೊಡಲಿ

ಸಚಿವ ಡಾ.ಪರಮೇಶ್ವರ ಅವರು ಹಲವಾರು ಪ್ರಶ್ನೆಗಳನ್ನು ಹಾಕಿದ್ದಾರೆ. ಆದರೆ, ಅವರು ನನ್ನ ಒಂದು ಪ್ರಶ್ನೆಗೆ ಉತ್ತರ ಕೊಡಲಿ. ಯಾದಗಿರಿಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿಮ್ಮ ಸಮಾಜದ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಏಕೆ ಅವರು ಜೀವ ಕಳೆದುಕೊಂಡರು? ಬದುಕು ಕೊನೆ ಮಾಡಿಕೊಂಡ ಆ ಪೊಲೀಸ್ ಅಧಿಕಾರಿಯ ಪತ್ನಿ ಹೇಳ್ತಾರೆ, ಪೋಸ್ಟಿಂಗ್ ಗೆ 25 ಲಕ್ಷ ರೂಪಾಯಿ ಲಂಚ ಹಣ ಕೊಡಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ತಾಯಿ ಯಾರ ವಿರುದ್ಧ ಆರೋಪ ಮಾಡಿದ್ದಾರೆ? ಅದರ ಬಗ್ಗೆ ಪರಮೇಶ್ವರ ಅವರು ಉತ್ತರ ಕೊಡಲಿ ಎಂದು ಕುಮಾರಸ್ವಾಮಿ ಅವರು ಸವಾಲು ಹಾಕಿದರು.

ಸಾಮಾಜಿಕ ನ್ಯಾಯ ಎಂದು ಹೇಳಿಕೊಂಡು ರಾಜಕೀಯ ಲಾಭ ಪಡೆಯುವ ನೀವು, ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಕೊಡುವ ಗೌರವ ಇದೇನಾ? 2012ರಲ್ಲಿ ನಿಮ್ಮ ಆಡಳಿತದ ಅವಧಿಯಲ್ಲಿ ಓರ್ವ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ನಿಮ್ಮದೇ ಸಮಾಜದ ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗಲೂ ಅದು ಮುಂದುವರಿದೆ. ಇಂಥ ಸಾವುಗಳನ್ನು ತಡೆಯುವ ಶಕ್ತಿ ನಿಮಗೆ ಇಲ್ಲವೇ? ಎಂದು ಮುಖ್ಯಮಂತ್ರಿ ಅವರನ್ನು ಕೇಂದ್ರ ಸಚಿವರು ತರಾಟೆಗೆ ತೆಗೆದುಕೊಂಡರು.

ಸಿಎಂ ಮೇಲೆ ತೀವ್ರ ವಾಗ್ದಾಳಿ

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಂವಿಧಾನದ ಹಕ್ಕಿದೆ. ಅದನ್ನು ಎತ್ತಿ ಹಿಡಿಯುವ ಕೆಲಸವನ್ನು ನಾವ್ಯಾಡುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಾವು ಈ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದ್ದೇವೆ. ಮೂಡಾ ಹಗರಣದಲ್ಲಿ ನಿಮ್ಮ ಹೆಸರು ಬಂದಿದೆ. ನಿವು ನಿವೇಶನ ಪಡೆದಿರುವುದಕ್ಕೆ ನಮಗೆ ಅಭ್ಯಂತರ ಇಲ್ಲ. ಆದರೆ,ಸರ್ಕಾರದ ಜಮೀನು ನಿಮ್ಮ ಬಾಮೈದನ ಹೆಸರಿಗೆ ಖರೀದಿಸಿ, ಆ ನಂತರ ಸಹೋದರಿಗೆ ಕೊಡುತ್ತೀರಿ..! ಇದು ಹೇಗೆ ರವಾನೆಯಾಗಿದೆ ಎನ್ನುವುದು ನಿಮಗೆ ಗೊತ್ತಿಲ್ಲವೇ ಸಿದ್ದರಾಮಯ್ಯನವರೇ..? ಎಂದು ಕೇಂದ್ರ ಸಚಿವರು ರಾಜ್ಯದ ಮುಖ್ಯಮಂತ್ರಿಗಳನ್ನು ತೀಕ್ಷ್ಣವಾಗಿ ಪ್ರಶ್ನಿಸಿದರು.

ಹಣ ಕೊಳ್ಳೆ ಹೊಡೆಯೋದು ಸಾಮಾಜಿಕ ನ್ಯಾಯವೇ?

ವಾಲ್ಮೀಕಿ ಅಭಿವೃದ್ಧಿ ನಿಗಮ, ಅಂಬೇಡ್ಕರ್ ಎಂದು ಮಾತು ಮಾತಿಗೂ ಹೇಳುತ್ತೀರಿ. ದಲಿತರ ಉದ್ಧಾರ ಎಂದು ಭಾಷಣ ಬಿಗಿಯುತ್ತೀರಿ. ಆದರೆ, ಅಂಬೇಡ್ಕರ್ ಹೆಸರಿನಲ್ಲಿ ಹಣ ಲೂಟಿ ಮಾಡಿದ್ದೀರಿ. ಬಾಬಾ ಸಾಹೇಬ್ ಅವರಿಗೆ ಗೌರವ ಕೊಡೋದು ಎಂದರೆ, ಯಾರಿಗಾಗಿ ಅವರು ತಮ್ಮ ಬದುಕು ಮುಡಿಪಿಟ್ಟು ಹೋರಾಟ ನಡೆಸಿದರೋ ಆ ಜನಗಳ ಹಣ ಕೊಳ್ಳೆ ಹೊಡೆಯೋದಾ? ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ನಾನು, ಯಡಿಯೂರಪ್ಪನವರು ಸೇರಿ ವಾಲ್ಮೀಕಿ ನಿಗಮ ಸ್ಥಾಪನೆ ಮಾಡಿದೆವು. ದುರ್ಬಲರಿಗೆ ಶಕ್ತಿ ಬರಲಿ ಎನ್ನುವ ಒಳ್ಳೆಯ ಉದ್ದೇಶದಿಂದ ಈ ಕೆಲಸ ಮಾಡಿದೆವು. ಈ ನಿಗಮದಲ್ಲಿ 89 ಕೋಟಿ ರೂ. ಅಕ್ರಮ ಆಗಿದೆ ಎಂದು ನೀವೇ ಹೇಳಿದ್ದೀರಿ. ಹಗರಣ ನಡೆದಿದೆ ಎಂದು ಒಪ್ಪಿಕೊಂಡಿದ್ದೀರಿ. ನಿಮ್ಮ ನಿಜವಾದ ಬಣ್ಣ ಬಯಲಾಗತ್ತದೆ ಎಂದು ಹೆದರಿ ಕದ್ದು ಓಡಿದವರು ನೀವು. ಈಗ ನೋಡಿದರೆ ಮೂಡ ಹಗರಣ ಮುಚ್ಚಿಹಾಕಲು ಮುಂದಾಗಿದ್ದೀರಿ ಎಂದು ಕುಮಾರಸ್ವಾಮಿ ಅವರು ಟೀಕಾಪ್ರಹಾರ ನಡೆಸಿದರು.

ನನ್ನ ಬಣ್ಣ ಪರ್ಮನೆಂಟ್ ಪರಮೇಶ್ವರ್ ಅವರೇ

ಪರಮೇಶ್ವರ್ ಅವರು ಹೇಳುತ್ತಾರೆ, ನಾವು ಬಣ್ಣ ಬದಲಾಯಿಸಿದೇವೆ ಎಂದು. ನನ್ನ ಬಣ್ಣ ಬದಲಾಗಲು ಸಾಧ್ಯವೇ ಇಲ್ಲ ಪರಮೇಶ್ವರ್ ರವರೇ.. ಇದು ಪರ್ಮನೆಂಟ್ ಬಣ್ಣ.. ಎಂದು ತಮ್ಮ ಬಣ್ಣದ ಬಗ್ಗೆ ಮಾತನಾಡಿದ ಸಚಿವರಿಗೆ ಟಾಂಗ್ ಕೊಟ್ಟರು ಕೇಂದ್ರ ಸಚಿವರು.

ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರನ್ನು ಏಕವಚನದಲ್ಲಿ ಮಾತನಾಡುತ್ತಿರಿ ನೀವು. ನಾನು,ಸಿದ್ದರಾಮಯ್ಯ ನವರ ಪರವಾಗಿದ್ದೇನೆ ಎನ್ನುತ್ತೀರಿ. ನಿಮ್ಮ ನಾಟಕ ಬಯಲಾಗತ್ತದೆ, ಕಾದು ನೋಡಿ ಪರಮೇಶ್ವರ್ ಅವರೇ.. ಎಂದು ಕುಮಾರಸ್ವಾಮಿ ಅವರು ತರಾಟೆಗೆ ತೆಗೆದುಕೊಂಡರು.

ಸಿಡಿ ಶಿವು ಅವರು, ಕಾಂಗ್ರೆಸ್ ಎದುರಿಸಲು ಬಿಜೆಪಿ ಜತೆಗೆ ಜೆಡಿಎಸ್ ಸೇರಿಕೊಂಡಿದೆ ಎಂದು ಹೇಳಿದ್ದಾರೆ. ನಿಮ್ಮನ್ನು ಬುಡ ಸಮೇತ ಕಿತ್ತೊಗೆಯಲು ನಾವು ಜೊತೆಯಾಗೆ ಇರುತ್ತೇವೆ ಎಂದು ಅವರಿಗೆ ಹೇಳಲು ಬಯಸುತ್ತೇನೆ ಎಂದು ಕುಮಾರಸ್ವಾಮಿ ಅವರು ಡಿಕೆಶಿಗೆ ತಿರುಗೇಟು ಕೊಟ್ಟರು.

ಪಾದಯಾತ್ರೆಗೆ ಚಾಲನೆ

ಸಭೆಯ ನಂತರ ನಗಾರಿ ಭಾರಿಸುವ ಮೂಲಕ, ಕಹಳೆ ಮೊಳಗಿಸಿದ ನಂತರ ಎಲ್ಲಾ ನಾಯಕರು ಪಾದಯಾತ್ರೆಗೆ ಚಾಲನೆ ನೀಡಿದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ, ಜೆಡಿಎಲ್ಪಿ ನಾಯಕ ಸುರೇಶ್ ಬಾಬು ಸೇರಿದಂತೆ ಎರಡೂ ಪಕ್ಷಗಳ ಸಂಸದರು, ನಾಯಕರು, ಕಾರ್ಯಕರ್ತರು ಹಾಗೂ ಅಸಂಖ್ಯಾತ ಜನರು ಪಾಲ್ಗೊಂಡಿದ್ದರು.

Continue Reading

Trending

error: Content is protected !!