Connect with us

Hassan

ಚನ್ನರಾಯಪಟ್ಟಣದ ರಾಮೋತ್ಸವ ಮೆರವಣಿಗೆಯಲ್ಲಿ ಬಾಗಿಯಾದ ಗಿಲ್ಲಿ ನಟ

Published

on

ವರದಿ: ದಯಾನಂದ ಶೆಟ್ಟಿಹಳ್ಳಿ

ಚನ್ನರಾಯಪಟ್ಟ:  ನಗರದಲ್ಲಿ ಇಂದು ನಡೆದ ರಾಮೋತ್ಸವ ಮೆರವಣಿಗೆಯಲ್ಲಿ ಬಿಗ್‌ಬಾಸ್‌-12 ವಿನ್ನರ್‌ ಗಿಲ್ಲಿ ನಟ ಬಾಗಿಯಾಗಿದ್ದು, ಗಿಲ್ಲಿ ಕಂಡ ಅಭಿಮಾನಿಗಳ ಹರ್ಷೋದ್ಘಾರಗೊಂಡಿದ್ದಾರೆ.

ಚನ್ನರಾಯಪಟ್ಟಣದ ಬಾಗೂರು ರಸ್ತೆಯಿಂದ ಪ್ರಾರಂಭವಾಗಿ ನಗರದ ಆಂಜನೇಯ ದೇವಾಲಯದವರೆಗೆ ನಡೆಯಲಿರೋ ರಾಮೋತ್ಸವ  ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಸೇರಿ ಸಾವಿರಾರು ಜನ ಭಾಗಿಯಾಗಿದ್ದರು. ಈ ಮೆರವಣಿಗೆಗೆ ಆಗಮಿಸಿದ ಗಿಲ್ಲಿ ನಟನನ್ನು ನೋಡಲು ಜನಸಾಗರ ಹರಿದು ಬಂದಿತ್ತು.

ಈ ವೇಳೆ ಗಿಲ್ಲಿ ಕಾರಿನಿಂದ ಕೆಳಗೆ ಇಳಿಯಲಾಗದೆ ಕಾರಿನಲ್ಲೇ‌ ಕುಳಿತಿದ್ದು, ಅಭಿಮಾನಿಗಳನ್ನ ನಿಯಂತ್ರಿಸಲು ಪೊಲೀಸರ ಹರಸಾಹಸ ಮಾಡಿದ್ದಾರೆ. ಬಳಿಕ ಪೊಲೀಸರ ರಕ್ಷಣೆಯಿಂದ ಗಿಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ.

 

ಮೆರವಣಿಗೆಯುದ್ಧಕ್ಕೂ ಅಭಿಮಾನಿಗಳು ಗಿಲ್ಲಿ ಗಿಲ್ಲಿ ಎಂದು ಕೂಗಿದ್ದಾರೆ. ಬಳಿಕ ಇದೇ ಸಂದರ್ಭದಲ್ಲಿ ಗಿಲ್ಲಿ ಅಭಿಮಾನಿಗಳತ್ತ ಕೈ ಬೀಸಿದ್ದಾರೆ.

 

 

 

Continue Reading

Hassan

ಕೆರೆಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರುಪಾಲು

Published

on

ಹಾಸನ: ಕೆರೆಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರುಪಾಲಾದ ಘಟನೆ ಹಾಸನ ಹೊರವಲಯದ ಉದ್ದೂರು ಗ್ರಾಮದಲ್ಲಿ ನಡೆದಿದೆ.

ಮೃತಪಟ್ಟ ವಿದ್ಯಾರ್ಥಿಯನ್ನು ಪ್ರಜ್ವಲ್ (18) ಎಂದು ಗುರುತಿಸಲಾಗಿದೆ. ಈತ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ. ಇಂದು (ಫೆ.7) ಮಧ್ಯಾಹ್ನ ನಾಲ್ವರು ಸ್ನೇಹಿತರ ಜೊತೆ ಉದ್ದೂರು ಕೆರೆಗೆ ಈಜಲು ತೆರಳಿದ್ದ. ಐವರಲ್ಲಿ ಇಬ್ಬರು ಸ್ನೇಹಿತರು ಈಜಲು ನೀರಿಗೆ ಇಳಿದಿದ್ದರು. ಕೆರೆಯ ಆಳವಾದ ಪ್ರದೇಶಕ್ಕೆ ಈಜುತ್ತಾ ಹೋಗಿದ್ದ ಪ್ರಜ್ವಲ್ ವಾಪಾಸ್ ಬರಲು ಆಗದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಅಗ್ನಿಶಾಮಕದಳದ ಸಿಬ್ಬಂದಿ ಕೆರೆಯಿಂದ ಮೃತದೇಹವನ್ನು ಹೊರಗೆ ತೆಗೆದಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಪೆನ್ಷನ್‌ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Continue Reading

Hassan

ಸ್ಥಳೀಯ ಸಂಸ್ಥೆ ಚುನಾವಣೆ: ಜೆಡಿಎಸ್–ಬಿಜೆಪಿ ಮೈತ್ರಿಗೆ ಹಾಸನದಲ್ಲಿ ಅಸಮಾಧಾನ: ಪ್ರೀತಂಗೌಡ ಪರೋಕ್ಷ ವಿರೋಧ

Published

on

ಹಾಸನ: ರಾಜ್ಯದಲ್ಲಿ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಜೊತೆಗಿನ ಬಿಜೆಪಿ ಮೈತ್ರಿ ಮುಂದುವರಿಸುವ ವಿಚಾರಕ್ಕೆ ಸಂಬಂಧಿಸಿ ಹಾಸನ ಜಿಲ್ಲೆಯಲ್ಲಿ ಪಕ್ಷದೊಳಗಿನ ಅಸಮಾಧಾನ ಬಹಿರಂಗವಾಗಿದೆ. ಮಾಜಿ ಶಾಸಕ ಪ್ರೀತಂ ಜೆ. ಗೌಡ ಅವರು ಜೆಡಿಎಸ್–ಬಿಜೆಪಿ ಮೈತ್ರಿಗೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ನಡೆದ  ಹಾಸನ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಮುಖಂಡರ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಯಾವ ರೀತಿಯಲ್ಲಿ ಎದುರಿಸಬೇಕು ಎಂಬ ಕುರಿತು ಚರ್ಚೆ ನಡೆಸಲಾಗಿದ್ದು, ಕಾರ್ಯಕರ್ತರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ ಎಂದರು.


ಜಿಲ್ಲೆಯಲ್ಲಿ ಬಿಜೆಪಿ ಪ್ರಬಲ ರಾಜಕೀಯ ಪಕ್ಷವಾಗಿ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಸಭೆಗಳನ್ನು ನಡೆಸುವ ಮೂಲಕ ಪಕ್ಷ ಸಂಘಟನೆಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಪ್ರೀತಂಗೌಡ, ಜಿಲ್ಲೆಯ ಬಿಜೆಪಿ ನಾಯಕರಲ್ಲಿ ಸ್ಪಷ್ಟತೆ ಇದ್ದರೂ, ರಾಷ್ಟ್ರೀಯ ನಾಯಕರ ತೀರ್ಮಾನದಂತೆ ಮೈತ್ರಿಯಲ್ಲಿ ಯಾವುದೇ ಒಡಕು ಬಾರದಂತೆ ನಡೆದುಕೊಳ್ಳಬೇಕಾಗಿದೆ ಎಂದು ಹೇಳಿದರು.


ಆದರೆ ಜಿಲ್ಲೆಯಲ್ಲಿ ಬಿಜೆಪಿ ಸ್ವಂತ ಶಕ್ತಿಯ ಮೇಲೆ ಚುನಾವಣೆಯನ್ನು ಎದುರಿಸಬೇಕು ಎಂಬುದು ಬಹುತೇಕ ಕಾರ್ಯಕರ್ತರ ಅಭಿಪ್ರಾಯವಾಗಿದೆ. ಮೈತ್ರಿಯಿಂದ ಪಕ್ಷದ ಕಾರ್ಯಕರ್ತರು ಅವಕಾಶಗಳಿಂದ ವಂಚಿತರಾಗುವ ಆತಂಕವಿದ್ದು, ಇದು ವಿರೋಧ ಪಕ್ಷಗಳಿಗೆ ಲಾಭವಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ಜಿಲ್ಲೆಯ ಮೂರು–ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಬಲಿಷ್ಠವಾಗಿದ್ದು, ಸ್ವಂತ ಶಕ್ತಿಯ ಮೇಲೆ ಚುನಾವಣೆಯನ್ನು ಎದುರಿಸಿದರೆ ಅಧಿಕಾರ ಹಿಡಿಯಲು ಅನುಕೂಲವಾಗುತ್ತದೆ ಎಂಬ ಅಭಿಪ್ರಾಯ ಕಾರ್ಯಕರ್ತರಲ್ಲಿ ವ್ಯಕ್ತವಾಗಿದೆ. ಈ ವಿಚಾರವನ್ನು ರಾಷ್ಟ್ರೀಯ ನಾಯಕರ ಗಮನಕ್ಕೆ ತರಲಾಗುವುದು ಎಂದರು.


ಜೆಡಿಎಸ್ ಪಕ್ಷದಲ್ಲಿ ಗೊಂದಲ ಇರಬಹುದಾದರೂ, ಮೈತ್ರಿ ಧರ್ಮದ ಹಿತದೃಷ್ಟಿಯಿಂದ ರಾಷ್ಟ್ರೀಯ ನಾಯಕರ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ ಎಂದು ತಿಳಿಸಿದ ಅವರು, ತಾವು ಕಾರ್ಯಕರ್ತನಾಗಿ ಪ್ರತ್ಯೇಕವಾಗಿ ಚುನಾವಣೆಯನ್ನು ಎದುರಿಸಬೇಕು ಎಂಬ ಅಭಿಪ್ರಾಯ ಹೊಂದಿದ್ದರೂ, ಅಗತ್ಯವಿರುವ ಸ್ಥಳಗಳಲ್ಲಿ ಹೊಂದಾಣಿಕೆ ಸಾಧ್ಯವಿದೆ ಎಂದರು.

ಜೆಡಿಎಸ್–ಬಿಜೆಪಿ ಹೊಂದಾಣಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗುವ ಸಾಧ್ಯತೆ ಇದ್ದು, ಕಾರ್ಯಕರ್ತರನ್ನು ಬಲಿ ಕೊಡಬಾರದು ಎಂಬುದು ಪಕ್ಷದೊಳಗಿನ ಪ್ರಮುಖ ಅಭಿಪ್ರಾಯವಾಗಿದೆ. ಕಾರ್ಯಕರ್ತರ ಧ್ವನಿಗೆ ಮನ್ನಣೆ ನೀಡದಿದ್ದರೆ ಪಕ್ಷದ ಶಕ್ತಿ ಕುಂದುತ್ತದೆ ಎಂದು ಎಚ್ಚರಿಸಿದರು.

ವಕೀಲ ದೇವರಾಜೇಗೌಡ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಕಾರ್ಯಕರ್ತರೇ ಸೂಕ್ತ ಉತ್ತರ ನೀಡುತ್ತಾರೆ ಎಂದು ಹೇಳಿದರು.

 

ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅವರು ಎರಡು ವರ್ಷ ಪೂರೈಸಿದ್ದು, ಮುಂದಿನ ಮೂರು ವರ್ಷಗಳ ಕಾಲವೂ ಅವರೇ ಮುಂದುವರೆಯಲಿದ್ದಾರೆ. ಮುಂಬರುವ ಸ್ಥಳೀಯ ಸಂಸ್ಥೆ ಹಾಗೂ 2028ರ ವಿಧಾನಸಭೆ ಚುನಾವಣೆಯನ್ನು ವಿಜಯೇಂದ್ರ ಅವರ ನೇತೃತ್ವದಲ್ಲೇ ಎದುರಿಸಲಾಗುವುದು. ಈ ಕುರಿತು ಯಾವುದೇ ಗೊಂದಲವಿಲ್ಲ ಎಂದು ಪ್ರೀತಂಗೌಡ ಸ್ಪಷ್ಟಪಡಿಸಿದರು.


ರಾಜ್ಯದಲ್ಲಿ ಈ ತಿಂಗಳ ಅಂತ್ಯದೊಳಗೆ ಎಸ್‌ಐಆರ್ ಜಾರಿಯಾಗುವ ಸಾಧ್ಯತೆ ಇದೆ ಎಂದ ಅವರು, ಅಲ್ಪಸಂಖ್ಯಾತರ ಸಾಲ ಮನ್ನಾ ವಿಚಾರದಲ್ಲಿ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವುದನ್ನು ಬಿಟ್ಟು ಅಲ್ಪಸಂಖ್ಯಾತರ ಓಲೈಕೆಯಲ್ಲೇ ತೊಡಗಿದೆ ಎಂದು ಆರೋಪಿಸಿದರು.

Continue Reading

Hassan

ಶೀಘ್ರವೇ ಸ್ಮಶಾನ ಭೂಮಿಲ್ಲಿರೋ ಮನೆಗಳ‌ ಸಮಸ್ಯೆಗೆ ಪರಿಹಾರ: ಕೆ.ಎಸ್. ಲತಾಕುಮಾರಿ

Published

on

ಬೇಲೂರು: ತಾಲೂಕಿನ ಇಬ್ಬೀಡು ಗ್ರಾಮದಲ್ಲಿ ದಶಕಗಳಿಂದ ಇದ್ದ ಸ್ಮಶಾನ ಭೂಮಿಲ್ಲಿರೋ ಮನೆಗಳ‌ ತಾತ್ಕಾಲಿಕ ಸಮಸ್ಯೆಗೆ ಶೀಘ್ರ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಸೂಚಿಸಿದರು.

ಇಂದು  ಬೇಲೂರು ತಾಲೂಕಿನ  ಪ್ರವಾಸ ಕೈಗೊಂಡಿದ್ದ ಜಿಲ್ಲಾಧಿಕಾರಿಯವರು ಇಬ್ಬೀಡು ಗ್ರಾಮಕ್ಕೆ ಭೇಟಿ ನೀಡಿ ಸ್ಥಳಪರಿಶೀಲನೆ ನಡೆಸಿದರು. ಸ.ನಂ.11ರಲ್ಲಿ 2 ಎಕರೆ 12 ಗುಂಟೆ ಜಾಗದಲ್ಲಿ ಸ್ಮಶಾನ ಎಂದು ನಮೂದಾಗಿದೆ. ಈ ಜಾಗದಲ್ಲಿ ಮೂವತ್ತು, ನಲ್ವತ್ತು ವರ್ಷಗಳಿಂದ ಗ್ರಾಮಸ್ಥರು ಹತ್ತಾರು ಮನೆಗಳನ್ನ ಕಟ್ಟಿಕೊಂಡಿದ್ದು, ಗ್ರಾಮ ಪಂಚಾಯಿತಿ, ಕೆನರಾ ಬ್ಯಾಂಕ್ ಕಟ್ಟಡ ಇನ್ನಿತರ ರೀತಿ ಗ್ರಾಮ ಅಭಿವೃದ್ಧಿಗೊಂಡಿದೆ. ಆದ್ದರಿಂದ ದಶಕಗಳಿಂದ ಈ ಸಮಸ್ಯೆ ಜ್ವಲಂತವಾಗಿದ್ದು ಬದಲಿ ಸ್ಮಶಾನಕ್ಕೆ ಜಾಗ ಮೀಸಲಿಡಬೇಕು ಎಂದು ತಿಳಿಸಿದ್ದಾರೆ.

ಈ ಜಾಗದಲ್ಲಿ ವಾಸಿಸುತ್ತಿರೋ ಮನೆಗಳಿಗೆ ಸಕ್ರಮಕ್ಕೆ ಕ್ರಮವಹಿಸಿ ಕಂದಾಯ ಗ್ರಾಮ ಮಾಡುವಂತೆ ಪ್ರಸ್ತಾವನೆಯನ್ನ ಒಂದು ವಾರದೊಳಗೆ ಸಲ್ಲಿಸಬೇಕೆಂದು ತಹಶೀಲ್ದಾರ್ ಶ್ರೀಧರ್ ರವರಿಗೆ ಸೂಚಿಸಿದರು. ಅಲ್ಲದೆ ಸ್ಮಶಾನ ಜಾಗದಲ್ಲಿ ಮನೆ ಕಟ್ಟೋದಕ್ಕೆ ಅವಕಾಶ ಕೊಟ್ಟ ಅಧಿಕಾರಿಗಳ ವಿರುದ್ಧವೂ ಕ್ರಮ ವಹಿಸುವಂತೆ ಖಡಕ್ ಎಚ್ಚರಿಕೆ ನೀಡಿದರು.

ಈ ಸಂದರ್ಭ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸತೀಶ್ ಕುಮಾರ್, ಪಿಡಿಓ ರವಿಕುಮಾರ್, ಗ್ರಾಮಸ್ಥರಾದ ಐ.ಎಲ್. ರಮೇಶ್, ಕೃಷ್ಣೇಗೌಡ, ಸುರೇಶ್, ಶರತ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Continue Reading

Trending

error: Content is protected !!