Connect with us

Kodagu

ಸುಸ್ಥಿರ ಅಭಿವೃದ್ಧಿಗೆ ಮತ್ತಷ್ಟು ಒತ್ತು ನೀಡಬೇಕಿದೆ : ಡಾ.ಮಂತರ್ ಗೌಡ

Published

on

ಮಡಿಕೇರಿ : ಆದರ್ಶ ಆಡಳಿತಗಾರ, ನಾಡಪ್ರಭು ಕೆಂಪೇಗೌಡರು ಬೆಂಗಳೂರನ್ನು ಮಾದರಿ ನಗರವನ್ನಾಗಿ ನಿರ್ಮಿಸಿದ್ದರು, ಆದರೆ ಇಂದು ಬೆಂಗಳೂರು ಮಿತಿಮೀರಿ ಬೆಳೆದಿದ್ದು, ಸುಸ್ಥಿರ ಅಭಿವೃದ್ಧಿಗೆ ಮತ್ತಷ್ಟು ಒತ್ತು ನೀಡಬೇಕಿದೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಶನಿವಾರ ನಡೆದ ಕೆಂಪೇಗೌಡರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಕೆಂಪೇಗೌಡರು ಅಂದಿನ ಆಡಳಿತ ಅವಧಿಯಲ್ಲಿ ಬೆಂಗಳೂರು ಪ್ರಾಂತ್ಯದಲ್ಲಿ ನೂರಾರು ಕೆರೆ-ಕಟ್ಟೆಗಳನ್ನು ನಿರ್ಮಿಸಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಂಡಿದ್ದರು, ಆದರೆ ಇಂದು ಬೆಂಗಳೂರು ಹೆಚ್ಚಿನ ವೇಗದ ಬೆಳವಣಿಗೆಯಿಂದ ಸುಸ್ಥಿರ ಅಭಿವೃದ್ಧಿ ಆಗುತ್ತಿದೆಯೇ ಎಂಬ ಬಗ್ಗೆ ಯೋಚಿಸಬೇಕಿದೆ ಎಂದು ಶಾಸಕರು ನುಡಿದರು.

ಎಲ್ ನಿನೋ ಪರಿಣಾಮದಿಂದ ಮಳೆಯಾಗುತ್ತಿಲ್ಲ, ಎಲ್ಲೋ ಸಮುದ್ರ ಪ್ರದೇಶದಲ್ಲಿ ಎಲ್ ನಿನೋ ಆಗಿರುವುದಕ್ಕೆ ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಸಾಕಷ್ಟು ಪ್ರಮಾಣದಲ್ಲಿ ಮಳೆ ಕಡಿಮೆಯಾಗಿದೆ, ಆದ್ದರಿಂದ ಕೆಂಪೇಗೌಡರ ದೂರದೃಷ್ಟಿ ಯಂತೆ ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಸಲಹೆ ಮಾಡಿದರು.


ರಾಜ್ಯದ ಮಲೆನಾಡು ಭಾಗದಲ್ಲಿ, ಅದರಲ್ಲೂ ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾದಲ್ಲಿ ಇಡೀ ನಾಡಿಗೆ ಹಾಗೂ ದಕ್ಷಿಣ ಭಾರತಕ್ಕೆ ಸುಭಿಕ್ಷೆ ತರಲಿದೆ. ಆದ್ದರಿಂದ ಬೆಂಗಳೂರಿನ ಅಭಿವೃದ್ಧಿಯಲ್ಲಿ ಶೇ.೧ ರಷ್ಟು ಪಾಲನ್ನು ಕೊಡಗು ಜಿಲ್ಲೆಗೆ ನೀಡುವಂತಾಗಬೇಕು. ಆ ನಿಟ್ಟಿನಲ್ಲಿ ಬೆಂಗಳೂರು ನಗರ ಅಭಿವೃದ್ಧಿ ಸಚಿವರ ಜತೆ ಚರ್ಚಿಸಲಾಗಿದೆ ಎಂದು ಶಾಸಕರು ವಿವರಿಸಿದರು.

ಕೆಂಪೇಗೌಡರ ಜಯಂತಿಯನ್ನು ಒಕ್ಕಲಿಗರ ಸಂಘದಿಂದ ತಾಲ್ಲೂಕು ಮಟ್ಟದಲ್ಲಿಯೂ ಆಯೋಜಿಸುವಂತೆ ಶಾಸಕರು ಸಲಹೆ ಮಾಡಿದರು.
“ಜಿಲ್ಲಾ ಕೇಂದ್ರ ಮಡಿಕೇರಿ ಹಾಗೂ ತಾಲ್ಲೂಕು ಕೇಂದ್ರ ಕುಶಾಲನಗರದಲ್ಲಿ ಒಕ್ಕಲಿಗರ ಸಂಘಕ್ಕೆ ಜಾಗ ಒದಗಿಸುವುದು ಮತ್ತು ಭವನ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು, ಜತೆಗೆ ಸೋಮವಾರಪೇಟೆಯ ಒಕ್ಕಲಿಗರ ಸಂಘಕ್ಕೆ ೫೦ ಲಕ್ಷ ರೂ ಅನುದಾನ, ಹಾಗೆಯೇ ಕುವೆಂಪು ಶಾಲೆ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡಲಾಗುವುದು, ಜತೆಗೆ ಕೊಡಗು ಗೌಡ ವಿದ್ಯಾ ಸಂಘಕ್ಕೆ ೨೫ ಲಕ್ಷ ರೂ ಬಿಡುಗಡೆ ಮಾಡಿಸಲಾಗುವುದು, ಹಾಗೆಯೇ ಗುಡ್ಡೆಮನೆ ಅಪ್ಪಯ್ಯ ಗೌಡರ ಪ್ರತಿಮೆ ಬಳಿ ಉದ್ಯಾನವನ ಅಭಿವೃದ್ಧಿಗೆ ಅನುದಾನ ನೀಡಲಾಗುವುದು ಎಂದು ಡಾ.ಮಂತರ್ ಗೌಡ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.”


ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಎಸ್.ಎಂ.ಚಂಗಪ್ಪ ಅವರು ಮಾತನಾಡಿ ಆದರ್ಶ ಆಡಳಿತಗಾರ ಕೆಂಪೇಗೌಡರಂತೆ ಪ್ರತಿಯೊಬ್ಬರಲ್ಲಿಯೂ ದೂರದೃಷ್ಟಿ ಇರಬೇಕು. ಈಗ ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ೩೨ ಶಾಸಕರು, ಹಲವರು ಎಂ.ಪಿಗಳು ಇದ್ದು ಅವರು ಬೆಂಗಳೂರು ಅಭಿವೃದ್ದಿಗೆ ಶ್ರಮಿಸಲಿದ್ದಾರೆ. ಸದ್ಯ ಶ್ರೀರಂಗಪಟ್ಟಣ-ಗುಡ್ಡೆ ಹೊಸೂರು ರಾಷ್ಟ್ರೀಯ ಮಾರ್ಗದಲ್ಲಿ ಹೆದ್ದಾರಿ ಕೆಲಸ ನಡೆಯುತ್ತಿದ್ದು, ಗುಡ್ಡೆ ಹೊಸೂರಿನಿಂದ ಮಡಿಕೇರಿ ವರೆಗೆ ವಾಹನ ದಟ್ಟನೆ ಹೆಚ್ಚಾಗಿ ಸಮಸ್ಯೆಗಳು ಸೃಷ್ಟಿಯಾಗುವ ಸಾಧ್ಯತೆ ಇದ್ದು, ಈ ಬಗ್ಗೆ ಯೋಚಿಸಬೇಕಿದೆ ಎಂದರು.

ಕೊಡಗು ಜಿಲ್ಲಾ ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಆನಂದ್ ಕರಂದ್ಲಾಜೆ ಅವರು ಮಾತನಾಡಿ ಕೆಂಪೇಗೌಡರು ತಮ್ಮ ಆಡಳಿತ ಅವಧಿಯಲ್ಲಿ ನಾಡನ್ನು ಕಟ್ಟಲು ಶ್ರಮಿಸಿದ್ದಾರೆ. ಇವರ ಪ್ರತಿಮೆಯನ್ನು ಮಡಿಕೇರಿ ಅಥವಾ ಕುಶಾಲನಗರದಲ್ಲಿ ನಿರ್ಮಿಸುವಂತಾಗಬೇಕು ಎಂದು ಕೋರಿದರು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಹರಪಳ್ಳಿ ರವೀಂದ್ರ ಅವರು ಮಾತನಾಡಿ ನಾಡಪ್ರಭು ಕೆಂಪೇಗೌಡರು ಬೆಂಗಳೂರು ಅಭಿವೃದ್ಧಿಗೆ ತಮ್ಮದೇ ಕೊಡಗೆ ನೀಡಿದ್ದು, ೬೩ ಪೇಟೆಗಳು, ೩೦೦ ಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸಿದ್ದರು ಎಂದು ತಿಳಿಸಿದರು.

ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಅವರು ಮಾತನಾಡಿ ಕೆಂಪೇಗೌಡರು ೫೦೦ ವರ್ಷಗಳ ಹಿಂದೆ ಬೆಂಗಳೂರು ನಗರವನ್ನು ದೂರದೃಷ್ಟಿಯ ಕಲ್ಪನೆ ಇಟ್ಟುಕೊಂಡು ಅಭಿವೃದ್ಧಿಗೆ ಚಾಲನೆ ನೀಡಿದ್ದರು ಎಂದರು.

ನಿವೃತ್ತ ಪ್ರಾಂಶುಪಾಲರಾದ ಸಿ.ಬಿ.ರಾಮಚಂದ್ರ ಮಾತನಾಡಿ ಕೆಂಪೇಗೌಡರ ಶಿಸ್ತು, ಸಮಯ ಪ್ರಜ್ಞೆ ಮತ್ತು ದೂರದೃಷ್ಟಿಯಿಂದ ಬೆಂಗಳೂರು ನಗರ ವಿಶ್ವ ಮಟ್ಟದಲ್ಲಿ ಅಭಿವೃದ್ಧಿ ಕಂಡಿದೆ ಎಂದರು.

ಕೊಡಗು ಗೌಡ ಸಮಾಜದ ಮಡಿಕೇರಿ ತಾಲ್ಲೂಕು ಅಧ್ಯಕ್ಷರಾದ ಡಿ.ಎಸ್.ಆನಂದ ಅವರು ಮಾತನಾಡಿ ಕೆಂಪೇಗೌಡರಂತೆ ಮುಂದಾಲೋಚನೆ ಇರಬೇಕು. ಕೆರೆಕಟ್ಟೆಗಳನ್ನು ಉಳಿಸಬೇಕು, ಗಿಡ ಮರಗಳನ್ನು ಬೆಳೆಸಬೇಕು ಎಂದು ಸಲಹೆ ಮಾಡಿದರು.

ಮಡಿಕೇರಿ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾದ ವಿ.ಜಿ.ಮೋಹನ್ ಅವರು ಮಾತನಾಡಿ ಆದರ್ಶ ಆಡಳಿತಗಾರ ಕೆಂಪೇಗೌಡರು ಕನ್ನಡ ಭಾಷೆ ಬೆಳವಣಿಗೆಗೆ ಶ್ರಮಿಸಿದ್ದಾರೆ ಎಂದರು.

ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷರಾದ ಅಂಬೆಕಲ್ಲು ನವೀನ್ ಅವರು ಮಾತನಾಡಿದರು.

ನಾಡಪ್ರಭು ಕೆಂಪೇಗೌಡರ ಜೀವನ ಚರಿತ್ರೆ ಕುರಿತು ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ಶಾಸಕರು ವಿತರಿಸಿದರು.

ಸರ್ವೋದಯ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷರಾದ ಅಂಬೆಕಲ್ಲು ಕುಶಾಲಪ್ಪ, ಪ್ರಮುಖರಾದ ಶಾಂತಳ್ಳಿ ಲೋಕೇಶ್, ಸೂರ್ತಲೆ ಸೋಮಣ್ಣ, ಗಣಿ ಪ್ರಸಾದ್, ವಿ.ಪಿ.ಸುರೇಶ್, ಅನಿಲ್ ಎಚ್.ಟಿ, ಶಿರಸ್ತೆದಾರರಾದ ದೇವರಾಜು ಇತರರು ಇದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಕುಮಾರ ಸ್ವಾಗತಿಸಿದರು, ಬ್ಲಾಸಂ ಶಾಲೆಯ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು, ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.

Continue Reading

Kodagu

ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ

Published

on

ಮಡಿಕೇರಿ : ಕರ್ನಾಟಕ ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮಕ್ಕಳ ದಿನಾಚರಣೆ-2026ರ ಪ್ರಯುಕ್ತ ಮಕ್ಕಳು ತಮ್ಮ ಪ್ರಾಣದ ಹಂಗನ್ನು ತೊರೆದು ಹಾಗೂ ಸಮಯ ಪ್ರಜ್ಞೆಯಿಂದ ಇತರರ ಪ್ರಾಣದ ರಕ್ಷಣೆಗಾಗಿ ಧೈರ್ಯ-ಸಾಹಸ ಪ್ರದರ್ಶಿಸಿದ 6 ರಿಂದ 18 ವರ್ಷದೊಳಗಿನ ಬಾಲಕರಿಗೆ ಹೊಯ್ಸಳ ಮತ್ತು ಬಾಲಕಿಯರಿಗೆ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ. ಪ್ರಕರಣವು ದಿನಾಂಕ:01-08-2025 ರಿಂದ 31-07-2026 ರೊಳಗೆ ನಡೆದಿರಬೇಕು ಪ್ರಶಸ್ತಿಗೆ ಆಯ್ಕೆಯಾದ ಮಕ್ಕಳಿಗೆ ತಲಾ ರೂ. 10 ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ.

ಇದೇ ಸಂದರ್ಭದಲ್ಲಿ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷಗಳ ಕಾಲ ಅತ್ಯುತ್ತಮ ಸೇವೆಸಲ್ಲಿಸಿರುವ ವ್ಯಕ್ತಿಗಳಿಗೆ ತಲಾ ರೂ.25 ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಹಾಗೂ ಸಂಸ್ಥೆಗಳಿಗೆ ತಲಾ ರೂ.1 ಲಕ್ಷ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಗುತ್ತದೆ.


ಮಕ್ಕಳ ದಿನಾಚರಣೆ-2026 ನೇ ಸಾಲಿನ ಪ್ರಶಸ್ತಿಗಾಗಿ ನಿಗಧಿ ಪಡಿಸಿರುವ ಅರ್ಜಿ ನಮೂನೆಗಳನ್ನು ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚೈನ್‍ಗೇಟ್ ಹತ್ತಿರ, ಮೈಸೂರು ರಸ್ತೆ ಮಡಿಕೇರಿ ಇವರಿಂದ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ:20-08-2026ರೊಳಗೆ ಉಪ ನಿರ್ದೇಶಕರ ಕಚೇರಿಗೆ ಸಲ್ಲಿಸಲು ಕೋರಲಾಗಿದೆ.

ದಿನಾಂಕದ ನಂತರ ಸಲ್ಲಿಸಿದ ಅರ್ಜಿಯನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 08272-228010, 9482194105 ಸಂಪರ್ಕಿಸಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಪ್ರಸನ್ನ ಕುಮಾರ ಅವರು ತಿಳಿಸಿದ್ದಾರೆ.

Continue Reading

Kodagu

ವಿಶ್ವ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಗೆ ಕೊಡಗಿನ 9 ವಿದ್ಯಾರ್ಥಿಗಳು ಆಯ್ಕೆ

Published

on

ಮಡಿಕೇರಿ : ಇದೇ ಜು.29 ರಿಂದ 31 ರ ವರೆಗೆ ನೇಪಾಳದ ಕಾಟ್ಮಂಡ್ ನಲ್ಲಿ ನಡೆಯುವ ವಿಶ್ವ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಗೆ ಭಾರತ ತಂಡಕ್ಕೆ ಕರ್ನಾಟಕ ರಾಜ್ಯದಿಂದ 21 ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಮಿಕ್ಸ್ ಬಾಕ್ಸಿಂಗ್ ಅಸೋಸಿಯೇಷನ್ ನ ಪ್ರಧಾನ ಕಾರ್ಯದರ್ಶಿ ಎನ್.ಸಿ.ಸುದರ್ಶನ್ ತಿಳಿಸಿದ್ದಾರೆ.


ಕೊಡಗು ಜಿಲ್ಲೆಯಿಂದ ಮಿಥಶ್ ಜೆ., ರೀತನ್ ಡಿ.ಎಸ್,, ಅಜಯ್ ಎನ್.ಎಸ್., ಶ್ರಿಯಾನ್ ಗೌಡ, ಯಾಸಿನ್, ಹಫೀಸ್, ಕೌಶಿಕ್ ಕುಮಾರ್ ಯು.ಸಿ., ಮನ್ಸಿತ್ ಮೋಹನ್ ಹಾಗೂ ಸ್ವಾತಿಕ್ ಬಿ.ಎಸ್ ಆಯ್ಕೆಯಾಗಿದ್ದಾರೆ ಎಂದು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

Continue Reading

Kodagu

ಹಾರಂಗಿ ಜಲಾಶಯದ ನೀರು ಕುಡಿಯಲು ಮಾತ್ರ: ರೈತರಿಗೆ ಬೆಳೆ ಬೆಳೆಯದಂತೆ ಮನವಿ

Published

on

ಕುಶಾಲನಗರ: ಮುಂಗಾರು ಮಳೆಯ ಕೊರತೆಯಿಂದ ಹಾರಂಗಿ ಜಲಾಶಯಕ್ಕೆ ನೀರಿನ ಒಳಹರಿವು ಗಣನೀಯವಾಗಿ ಕಡಿಮೆಯಾಗಿದೆ. 2026-27ನೇ ಸಾಲಿನ ಜೂನ್ 1 ರಿಂದ ಜುಲೈ 21 ರವರೆಗೆ ಜಲಾಶಯದಲ್ಲಿ ಕೇವಲ 5.848 ಟಿಎಂಸಿ ನೀರು ಮಾತ್ರ ಲಭ್ಯವಿದೆ ಎಂದು ಕಾವೇರಿ ನೀರಾವರಿ ನಿಗಮ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ನೀರನ್ನು ಮೀಸಲಿಡಲು ಸರ್ಕಾರ ನಿರ್ಧರಿಸಿದೆ. ಜುಲೈ 2 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳು “ಜಲಾಶಯ ನಂಬಿಕೊಂಡು ಯಾವ ರೈತರೂ ಬೆಳೆ ಹಾಕಬೇಡಿ” ಎಂದು ಸೂಚಿಸಿದ್ದಾರೆ.

ಈಗಾಗಲೇ ಫೆಬ್ರವರಿ 26 ಮತ್ತು ಜೂನ್ 5 ರ ಸರ್ಕಾರದ ಆದೇಶದಂತೆ ಜಲಾಶಯದ ನೀರನ್ನು ಕುಡಿಯಲು ಮಾತ್ರ ಬಳಸಲಾಗುತ್ತಿದೆ. ಜಿಲ್ಲಾಡಳಿತ ಮತ್ತು ಸ್ಥಳೀಯ ಅಧಿಕಾರಿಗಳು ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಿದ್ದಾರೆ.

ಈ ಹಿನ್ನೆಲೆಯಲ್ಲಿ ಹಾರಂಗಿ ಜಲಾಶಯದ ನೀರನ್ನು ಅವಲಂಬಿಸಿ ಯಾವುದೇ ಬೆಳೆ ಬೆಳೆಯದಂತೆ ರೈತರು ಹಾಗೂ ಅಚ್ಚುಕಟ್ಟುದಾರರು ಸಹಕರಿಸಬೇಕು ಎಂದು ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್ ಮನವಿ ಮಾಡಿದ್ದಾರೆ.

Continue Reading

Trending

error: Content is protected !!