Kodagu
ಗೋಣಿಕೊಪ್ಪದಲ್ಲಿ ಈದ್ ಉಲ್ ಫಿತರ್ ಆಚರಣೆ
ಪೊನ್ನಂಪೇಟೆ, ಮಾ. 31: ಸಹೋದರತೆ, ಉದಾರತೆ, ಮಾನವೀಯತೆ ಮತ್ತು ಸಮರ್ಪಣಾ ಮನೋಭಾವದ ಸಂಕೇತವಾಗಿರುವ ಈದ್ ಉಲ್ ಫಿತರ್ ಹಬ್ಬವನ್ನು ಇಂದು ಗೋಣಿಕೊಪ್ಪಲಿನಲ್ಲಿ ಸಡಗರದಿಂದ ಆಚರಿಸಲಾಯಿತು. ಗೋಣಿಕೊಪ್ಪಲು, ಪೊನ್ನಂಪೇಟೆ ಸೇರಿದಂತೆ ಸುತ್ತಮುತ್ತಲಿನ ಎಲ್ಲಾ ಮಸೀದಿಗಳಲ್ಲಿ ಈದುಲ್ ಫಿತರ್ ನ ಅಂಗವಾಗಿ ವಿಶೇಷ ಪ್ರಾರ್ಥನೆ ನಡೆಸಲಾಯಿತು. ಗೋಣಿಕೊಪ್ಪಲು ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಶಾಫಿ ಜುಮ್ಮಾ ಮಸೀದಿಯಲ್ಲಿ ಬೆಳಿಗ್ಗೆ 8:30 ಗಂಟೆಗೆ ನಡೆದ ಈದ್ ನಮಾಜಿನಲ್ಲಿ ಅಸಂಖ್ಯಾತ ವಿಶ್ವಾಸಿಗಳು ಪಾಲ್ಗೊಂಡಿದ್ದರು.

ಮಸೀದಿಯಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಗೆ ನೇತೃತ್ವ ನೀಡಿದ ಗೋಣಿಕೊಪ್ಪಲು ಶಾಫಿ ಜುಮಾ ಮಸೀದಿಯ ಖತೀಬರಾದ ಮೊಹಮ್ಮದ್ ಅಲಿ ಪೈಜ್ಹಿ ಈದ್ ಸಂದೇಶದಲ್ಲಿ ಮಾತನಾಡಿ, ಒಂದು ತಿಂಗಳ ಕಾಲ ಹಗಲಿನಲ್ಲಿ ನಿರಂತರವಾಗಿ ಮಾಡಿದ ಉಪವಾಸವನ್ನು ಅಂತ್ಯಗೊಳಿಸುವ ಹಬ್ಬದ ಪ್ರತೀಕವೇ ಈದ್ ಉಲ್ ಫಿತ್ರ್. ಈ ಹಬ್ಬ ಮುಸ್ಲಿಮರು ಅನುಭವಿಸಿದ ಆಧ್ಯಾತ್ಮಿಕ ಶುದ್ಧೀಕರಣದ ರಂಜಾನ್ ತಿಂಗಳ ಅಂತ್ಯವನ್ನು ಸೂಚಿಸುತ್ತದೆ. ಒಂದು ತಿಂಗಳು ಉಪವಾಸ ಇದ್ದು, ಎಲ್ಲಾ ದುರ್ನಡತೆಗಳಿಂದ ದೇಹ ಹಾಗೂ ಆತ್ಮವನ್ನು ಶುಚಿಗೊಳಿಸಿದ ವ್ಯಕ್ತಿಯು ಆ ಹುರುಪನ್ನು ಮುಂದುವರಿಸಲು ದೃಢ ಸಂಕಲ್ಪ ಕೈಗೊಳ್ಳಬೇಕಿದೆ. ಉಪವಾಸದಿಂದ ದಕ್ಕಿಸಿಕೊಂಡ ಆಧ್ಯಾತ್ಮಿಕ ಚೈತನ್ಯವನ್ನು ಸಂಭ್ರಮಿಸುವ ದಿನದಂದು ಸ್ವೇಚ್ಛೆಯಿಂದ ದೂರ ಉಳಿದು ಸ್ವಯಂ ಶುದ್ಧೀಕರಣದ ಕುರಿತು ಅಗತ್ಯವಾದ ಚಿಂತನೆ ನಡೆಸಬೇಕಿದೆ. ಉಪವಾಸದ ಮೂಲಕ ಆತ್ಮವನ್ನು ಪಳಗಿಸಲು ರಂಜಾನ್ ತಿಂಗಳು ನೀಡಿದ ಪ್ರೇರಣೆಯನ್ನು ಜೀವನಪೂರ್ತಿ ಅಳವಡಿಸಿಕೊಳ್ಳಲು ನಿರ್ಣಯ ಕೈಗೊಳ್ಳಬೇಕಿದೆ. ಹಸಿವಿನಿಂದ ಕಲಿತ ಪಾಠವನ್ನು ಸಮಾಜಸೇವೆಯ ಮೂಲಕ ಸಾಕಾರಗೊಳಿಸಿದರೊಂದಿಗೆ ಭ್ರಾತೃತ್ವ ಮತ್ತು ಸಹಬಾಳ್ವೆಯ ಬದುಕಿಗೆ ಒತ್ತು ನೀಡಬೇಕಿದೆ ಎಂದು ಕರೆ ನೀಡಿದರು.

ಸಾಮೂಹಿಕ ಪ್ರಾರ್ಥನೆಯ ನಂತರ ಪಾಲ್ಗೊಂಡಿದ್ದವರೆಲ್ಲ ಪರಸ್ಪರ ಆಲಿಂಗನ ನಡೆಸಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಗೋಣಿಕೊಪ್ಪಲು ಶಾಫಿ ಜುಮ್ಮಾ ಮಸೀದಿಯ ಆಡಳಿತ ಮಂಡಳಿ ಅಧ್ಯಕ್ಷರಾದ ಎಂ.ಹೆಚ್.ನಾಸರ್ , ಉಪಾಧ್ಯಕ್ಷರಾದ ಎಂ. ಎಂ. ರಶೀದ್, ಪ್ರಧಾನ ಕಾರ್ಯದರ್ಶಿ ಟಿ.ಕೆ. ಅಬ್ದುಲ್ ಸಮ್ಮದ್ ಸೇರಿದಂತೆ ಆಡಳಿತ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Kodagu
ಪೊಲೀಸರಿಗಾಗಿ 60 ಸಾವಿರ ವಸತಿ ಗೃಹ ನಿರ್ಮಿಸಬೇಕಿದೆ – ಗೃಹ ಸಚಿವ ಜಿ.ಪರಮೇಶ್ವರ
ಮಡಿಕೇರಿ : ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಅಭಿವೃದ್ಧಿ ನಿಗಮ ನಿಯಮಿತದಿಂದ ಸುಂಟಿಕೊಪ್ಪದಲ್ಲಿ 3.64 ಕೋಟಿ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಪೊಲೀಸ್ ವಸತಿ ಗೃಹವನ್ನು ಗೃಹ ಸಚಿವರಾದ ಜಿ.ಪರಮೇಶ್ವರ ಅವರು ಭಾನುವಾರ ಉದ್ಘಾಟಿಸಿದರು.
ಸುಂಟಿಕೊಪ್ಪದಲ್ಲಿ ವಸತಿ ಗೃಹ ಉದ್ಘಾಟಿಸಿ ಮಾತನಾಡಿದ ಸಚಿವರು ಪೊಲೀಸರಿಗಾಗಿ ರಾಜ್ಯದಲ್ಲಿ ಸುಮಾರು 40 ಸಾವಿರ ವಸತಿ ಗೃಹ ನಿರ್ಮಿಸಲಾಗಿದ್ದು, ಇನ್ನೂ 60 ಸಾವಿರ ವಸತಿ ಗೃಹ ನಿರ್ಮಿಸಬೇಕಿದೆ ಎಂದು ತಿಳಿಸಿದರು.
ಪೊಲೀಸ್ ಇಲಾಖೆಯಲ್ಲಿ ಅತ್ಯಂತ ಕೆಳಸ್ತರದಲ್ಲಿ ಕೆಲಸ ನಿರ್ವಹಿಸುವ ಕಾನ್ಸ್ಟೇಬಲ್ ಗಳಿಗೆ ವೇತನ ಹೆಚ್ಚಿಸಲಾಗಿದೆ. ಸಣ್ಣ ಸಣ್ಣ ಮನೆಯಲ್ಲಿ ವಾಸ ಮಾಡುವುದನ್ನು ಮನಗಂಡು ಪೊಲೀಸರಿಗೆ ವಸತಿ ಸೌಕರ್ಯ ಒದಗಿಸಲಾಗುತ್ತಿದೆ.
ಅದರಂತೆ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಅಭಿವೃದ್ಧಿ ನಿಗಮದಿಂದ 2030 ರ ವರೆಗೂ ಹಂತ ಹಂತವಾಗಿ ವಸತಿ ಕಲ್ಪಿಸಲಾಗುತ್ತದೆ ಎಂದು ಜಿ.ಪರಮೇಶ್ವರ ಅವರು ವಿವರಿಸಿದರು.

ಹಿಂದೆ 18 ಲಕ್ಷ ರೂ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗುತ್ತಿತ್ತು, ಈಗ 33 ಲಕ್ಷ ರೂ ವೆಚ್ಚ ಆಗಲಿದೆ. ಪೊಲೀಸರು ನೆಮ್ಮದಿಯ ಜೀವನ ಮಾಡಬೇಕು ಎಂಬುದು ಸರ್ಕಾರದ ಆಶಯವಾಗಿದೆ ಎಂದು ನುಡಿದರು.
ಶಾಸಕರಾದ ಡಾ.ಮಂತರ್ ಗೌಡ ಅವರ ಅನೇಕ ಬೇಡಿಕೆ ಈಡೇರಿಸಲಾಗುವುದು. ಪ್ರಥಮ ಆದ್ಯತೆಯಲ್ಲಿ ವಸತಿ ಗೃಹ ನಿರ್ಮಿಸಲಾಗುವುದು. ಪೊಲೀಸ್ ಠಾಣೆ ಆರಂಭಕ್ಕೆ ಕ್ರಮವಹಿಸಲಾಗುವುದು ಎಂದರು.
ಪೊಲೀಸ್ ಇಲಾಖೆ ಜನ ಸ್ನೇಹಿಯಾಗಿ ಕೆಲಸ ನಿರ್ವಹಿಸಬೇಕು ಎಂಬ ಉದ್ದೇಶದಿಂದ ಹಲವು ಕ್ರಮ ಕೈಗೊಳ್ಳಲಾಗಿದೆ. ಜನರ ಜತೆ ಸ್ನೇಹದಿಂದ ಇರಬೇಕು. ಹಾಗೆಯೇ ಅಪರಾಧ ಮಾಡುವವರಿಗೆ ಶಿಕ್ಷೆ ಆಗಬೇಕು ಎಂದರು.

ಇಡೀ ದೇಶದಲ್ಲಿಯೇ ರಕ್ಷಣೆ, ಸುರಕ್ಷತೆಯಲ್ಲಿ ರಾಜ್ಯ ಪೊಲೀಸ್ ಪ್ರಥಮ ಸ್ಥಾನದಲ್ಲಿದೆ. ಹಗಲು, ರಾತ್ರಿ, ಮಳೆ, ಬಿಸಿಲು, ನಿದ್ರೆ ಇಲ್ಲದೆ ಪೊಲೀಸರು ಕರ್ತವ್ಯ ನಿರ್ವಹಿಸುತ್ತಾರೆ. ಆ ನಿಟ್ಟಿನಲ್ಲಿ ಗೌರವಿಸಬೇಕು. ಅದನ್ನು ಬಿಟ್ಟು ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಯಾರು ಮಾಡಬಾರದು ಎಂದರು.
ಪ್ರಸ್ತುತ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 2023 ರಲ್ಲಿ ನೀಡಿದ್ದ 593 ಭರವಸೆಗಳಲ್ಲಿ ಅರ್ಧಕ್ಕೂ ಹೆಚ್ಚು ಭರವಸೆ ಈಡೇರಿಸಿದೆ. ಇನ್ನೂ ಎರಡು ವರ್ಷದಲ್ಲಿ ಎಲ್ಲಾ ಭರವಸೆ ಈಡೇರಿಸಲಾಗುವುದು ಎಂದು ಗೃಹ ಸಚಿವರು ಹೇಳಿದರು.
ಸರ್ಕಾರ 1.36 ಸಾವಿರ ಕೋಟಿ ರೂ ವನ್ನು ಪಂಚ ಗ್ಯಾರಂಟಿಗೆ ಖರ್ಚು ಮಾಡಿದೆ. ಬಡವರು ಇತರರಂತೆ ಮುಖ್ಯವಾಹಿನಿಗೆ ಬರಬೇಕು ಎಂಬ ಉದ್ದೇಶದಿಂದ ಹಲವು ಕಾರ್ಯಕ್ರಮ ಜಾರಿಗೊಳಿಸಲಾಗಿದೆ ಎಂದರು.

ಸರ್ಕಾರ ಜನಪರವಾಗಿದ್ದು, ನುಡಿದಂತೆ ನಡೆಯುತ್ತಿದೆ. ಸರ್ಕಾರ ಸುಭದ್ರವಾಗಿದ್ದು, ಮಾರ್ಚ್ 6 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳ್ಳೆಯ ಬಜೆಟ್ ಮಂಡಿಸಲಿದ್ದಾರೆ ಎಂದು ಜಿ.ಪರಮೇಶ್ವರ ಅವರು ತಿಳಿಸಿದರು.
ಶಾಸಕರಾದ ಡಾ.ಮಂತರ್ ಗೌಡ ಅವರು ಮಾತನಾಡಿ ಖಾಲಿ ಇರುವ ಪೊಲೀಸ್ ಹುದ್ದೆ ಭರ್ತಿ ಮಾಡಬೇಕು. ಪೊಲೀಸ್ ವಸತಿ ಗೃಹ ಮತ್ತಷ್ಟು ಕಟ್ಟಬೇಕು. ಮುಂದಿನ ಬಜೆಟ್ ನಲ್ಲಿ ಇನ್ನೂ ಎರಡು ಪೊಲೀಸ್ ಠಾಣೆ ಆರಂಭಕ್ಕೆ ಅವಕಾಶ ಮಾಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.
ಜಿಲ್ಲೆಯಲ್ಲಿ ಪೊಲೀಸ್ ತರಬೇತಿ ಕೇಂದ್ರಕ್ಕೆ ಜಾಗವಿದ್ದು, ಬಳಸಿ ಕೊಳ್ಳುವಂತಾಗಬೇಕು ಎಂದು ಶಾಸಕರು ಸಲಹೆ ಮಾಡಿದರು.ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಡ್ರಗ್ಸ್ ಪ್ರಕರಣ ಪತ್ತೆಹಚ್ಚುವಲ್ಲಿ ಹದ್ದಿನ ಕಣ್ಣಿಟ್ಟಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಡಾ.ಮಂತರ್ ಗೌಡ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಅರುಣ್ ಮಾಚಯ್ಯ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ತಾಲ್ಲೂಕು ಅಧ್ಯಕ್ಷರಾದ ವಿ.ಪಿ.ಶಶಿಧರ, ಕಾಂತರಾಜು, ಸುಂಟಿಕೊಪ್ಪ ಗ್ರಾ.ಪಂ.ನಿಕಟ ಪೂರ್ವ ಅಧ್ಯಕ್ಷರಾದ ಸುನಿಲ್ ಕುಮಾರ್, ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕರಾದ ಬೋರಲಿಂಗಯ್ಯ, ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್, ಪ್ರಮುಖರಾದ ಲಕ್ಷ್ಮಣ, ಇಬ್ರಾಹಿಂ, ವಿನೋದ್ ಶಿವಪ್ಪ, ಕೆ.ಪಿ.ಚಂದ್ರಕಲಾ, ಲೋಕೇಶ್, ಲತೀಫ್, ಸತೀಶ, ಯಕೂಬ್ ಇತರರು ಹಾಜರಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಸ್ವಾಗತಿಸಿದರು, ಕೊಡಗು ಜಿಲ್ಲಾ ಪೊಲೀಸ್ ಸಾಂಸ್ಕೃತಿಕ ತಂಡದವರು ನಾಡಗೀತೆ ಹಾಡಿದರು.
Kodagu
ರೋಮನ್ ಕ್ಯಾಥೋಲಿಕ್ ಕ್ರಿಕೆಟ್ ಟೂರ್ನಿಯಾ ಉದ್ಘಾಟನಾ ಕಾರ್ಯಕ್ರಮ
ವಿರಾಜಪೇಟೆ : ರೋಮನ್ ಕ್ಯಾಥೋಲಿಕ್ ಕ್ರಿಕೆಟ್ ಟೂರ್ನಿಯಾ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿ ಶುಭ ಕೋರಿದರು.
ವಿರಾಜಪೇಟೆ ನಗರದಲ್ಲಿರುವ ಸಂತ ಅನ್ನಮ್ಮನ ಚರ್ಚ್ ಮೈದಾನದಲ್ಲಿ ಈ ಕ್ರಿಕೆಟ್ ಟೂರ್ನಮೆಂಟ್ ಆಯೋಜನೆಗೊಂಡಿತ್ತು. ಟೂರ್ನಮೆಂಟನ್ನು ಉದ್ಘಾಟಿಸಿ ಮಾತನಾಡಿದ ಸ್ವತಹ ಕ್ರೀಡಾಪಟು ಆಗಿರುವ ಮಾನ್ಯ ಶಾಸಕರು, ಯುವಜನತೆಯನ್ನು ಒಗ್ಗೂಡಿಸುವ ಶಕ್ತಿ ಕ್ರೀಡೆಗಿದೆ.

ಅದರಲ್ಲೂ ವಿಶೇಷವಾಗಿ ವಿಶ್ವ ವ್ಯಪ್ತಿ ಮನ್ನಣೆ ಪಡೆದು ಯುವಜನತೆಯಲ್ಲಿ ಹಾಸು ಹೊಕ್ಕಿರುವ ಕ್ರಿಕೆಟ್ ಪಂದ್ಯಾಟ ಪ್ರತಿಯೊಬ್ಬ ಯುವಕನಿಗೆ ಜೀವಾಳವಾಗಿದೆ.
ಇಂತಹ ಕ್ರೀಡಾಕೂಟಗಳು ಸಮುದಾಯದ ಯುವ ಕ್ರೀಡಾಳುಗಳಿಗೆ ಸ್ಪೂರ್ತಿ ನೀಡಿ ತಮ್ಮ ಮುಂದಿನ ಕ್ರೀಡಾ ಭವಿಷ್ಯಕ್ಕೆ ದಾರಿದೀಪವಾಗಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಸಂತ ಅನ್ನಮ್ಮ ಶಾಲೆಯ ಆವರಣದಲ್ಲಿ ನಡೆಯುತ್ತಿರುವ ಮೂರು ದಿನಗಳ ಕಾಲ ಕರಾಟೆ ಶಿಬಿರದಲ್ಲಿ ವಿವಿಧ ಶಾಲೆಯ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ.

ಈ ಕಾರ್ಯಕ್ರಮಕ್ಕೆ ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿ ಮಕ್ಕಳಿಗೆ ಮಾರ್ಗದರ್ಶನ ನೀಡಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿದ ಪ್ರವೀಣ್, ಸಂತೋಷ್, ಎಜೆ ಬಾಬು,ಜೋಕಿಂ, ಮರ್ವಿನ್ ಲೋಬೊ, ರಾಬಿನ್, ಮೆಲ್ರಾಯ್ ಲೋಬೊ, ಮುಕಟೀರ ಸಂದೀಪ್, ಆಪ್ರು ರವೀಂದ್ರ, ಕಾಳಿಮಾಡ ಪ್ರಶಾಂತ್, ಭವಿನ್, ಅಯೂಬ್, ಕರಾಟೆ ಶಿಬಿರದ ತರಬೇತುದಾರರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.
Kodagu
ಸುಳ್ಯ ಮೂಲದ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಪ್ರಾರಂಭ
ಮೂರ್ನಾಡು : ಸುಳ್ಯ ಮೂಲದ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿಯಮಿತ ಇದರ ನೂತನ ಶಾಖೆಯನ್ನು ಮೂರ್ನಾಡಿನಲ್ಲಿ ಪ್ರಾರಂಭಿಸಲಾಯಿತು. ಈ ಶಾಖೆಯ ಉದ್ಘಾಟನೆಯನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ರವರು ನೆರವೇರಿಸಿದರು.
ಸದ್ರಿ ಬ್ಯಾಂಕಿನ 24ನೇ ಶಾಖೆ ಇದಾಗಿದ್ದು, ಮೂರ್ನಾಡು ಭಾಗದಲ್ಲಿ ಇದು ಮತ್ತಷ್ಟು ಯಶಸ್ಸು ಕಾಣಲಿ ಎಂದು ಉದ್ಘಾಟನೆ ಬಳಿಕ ಮಾನ್ಯ ಶಾಸಕರು ಶುಭ ಕೋರಿದರು.

ಮುಂದುವರೆದು ಮಾತನಾಡುತ್ತಾ, ಗ್ರಾಮೀಣ ಭಾಗದ ಜನರಿಗೆ ಅದರಲ್ಲೂ ವಿಶೇಷವಾಗಿ ರೈತರಿಗೆ ಹಾಗೂ ಸಣ್ಣ ವ್ಯಾಪಾರಸ್ಥರಿಗೆ ಕೋಪರೇಟಿವ್ ಸೊಸೈಟಿ ಗಳು ತುಂಬಾ ಪ್ರಾಮುಖ್ಯತೆ ನೀಡುತ್ತಿವೆ. ಅದೇ ರೀತಿ ಈ ವರ್ಗದ ಜನರಿಗೆ ಕಾರ್ಪೊರೇಟಿವ್ ಸೊಸೈಟಿಯಿಂದ ಹೆಚ್ಚಿನ ಅನುಕೂಲ ಆಗುತ್ತಿದೆ.
ಆದ್ದರಿಂದ ಇಂತಹ ಸೊಸೈಟಿಗಳು ಜನಸಾಮಾನ್ಯರ ಒಳಿತನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ತಮ್ಮ ಸಂಸ್ಥೆಯ ಬೆಳವಣಿಗೆಗು ಪೂರಕವಾದ ಅಂತಹ ನೀತಿಗಳನ್ನು ರೂಪಿಸಿ ಜನಮನ್ನಣೆ ಗಳಿಸುವಂಥದ್ದು ತುಂಬಾ ಮುಖ್ಯ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಶ್ರೀ ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿಯಮಿತವು ಬಹಳ ಶ್ರಮದಿಂದ ಜನಮನ ಗಳಿಸುತ್ತಿದ್ದು ಇದರ ಸದುಪಯೋಗ ಈ ಭಾಗದ ಜನರಿಗೆ ಒದಗುವಂತಾಗಲಿ ಎಂದು ತಮ್ಮ ಹಾರೈಕೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ವೆಂಕಟರಾಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿ ಸುಳ್ಯ ಇದರ ಅಧ್ಯಕ್ಷರು ಶ್ರೀ ಕೆ ಸಿ ಸದಾನಂದ ಮವಜಿ, ಉಪಾಧ್ಯಕ್ಷರು ದಿನೇಶ್ ಮಡಪ್ಪಾಡಿ, ಸದಸ್ಯರು, ಪದಾಧಿಕಾರಿಗಳು, ಕೊಡಗು ಗೌಡ ಸಮಾಜ ಒಕ್ಕೂಟದ ಅಧ್ಯಕ್ಷರು ಶ್ರೀ ಆನಂದ್ ಕರಂದ್ಲಾಜೆ, ಮೂರ್ನಾಡು ವರ್ತಕರ ಸಂಘದ ಅಧ್ಯಕ್ಷರು ಅರುಣ್ ಅಪ್ಪಚ್ಚು, ಪೊನ್ನಂಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಕಾಳಿಮಾಡ ಪ್ರಶಾಂತ್, ಕೊಡಗು ಜಿಲ್ಲೆ ಚೇಂಬರ ಕಾಮರ್ಸ್ ಉಪಾಧ್ಯಕ್ಷರು ನವೀನ್ ಅಂಬೆಕಲ್ಲು, ಮೂರ್ನಾಡು ಗೌಡ ಸಮಾಜದ ಅಧ್ಯಕ್ಷರು ಪಣಾತ್ತಲೆ ಟಿ ಹರೀಶ್, ಕಾಂತೂರು-ಮೂರ್ನಾಡ್ ಪಂಚಾಯಿತಿಅಧ್ಯಕ್ಷರು ಕುಶನ್ ರೈ, ಪಕ್ಷದ ಮುಖಂಡರು ಡಿಸಿಸಿ ಸದಸ್ಯರು ಮುಕಟೀರ ಸಂದೀಪ್, ಆಪ್ರು ರವೀಂದ್ರ, ಹಾಗೂ ಸಿಬ್ಬಂದಿ ವರ್ಗದವರು.,ಪ್ರಮುಖರು ಉಪಸ್ಥಿತರಿದ್ದರು.
-
Mysore3 hours agoಮಲೆ ಮಹದೇಶ್ವರ ಶತನಾಮಾವಳಿ ಲೋಕಾರ್ಪಣೆ: ಶ್ರೀಮಾಯಕಾರ ಗುರುಕುಲದಿಂದ ನಿರ್ಮಾಣ
-
Mandya23 hours agoಬೃಹತ್ ಹಳ್ಳವಿದ್ದ ಕ್ವಾರಿ ಜಾಗದಲ್ಲಿ ನಿವೇಶನ ಮಂಜೂರಾತಿಗೆ ಸಿದ್ದತೆ : ಕ್ರೀಡಾ ತರಬೇತಿಗೆ ಮೀಸಲಿಡುವಂತೆ ಕ್ರೀಡಾಪಟುಗಳ ಒತ್ತಾಯ
-
Chikmagalur22 hours agoಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರು ಪಾಲು
-
Politics21 hours agoಇ-ಸ್ವತ್ತು ತಾಂತ್ರಿಕ ತೊಂದರೆಗೊಳಗಾಗಿರುವರು ಆಯಾಯ ಜಿಲ್ಲೆಯ CEO ಮೂಲಕ ಮೇಲ್ಮನವಿ ಸಲ್ಲಿಸಲು ಅವಕಾಶ: ಪ್ರಿಯಾಂಕ್ ಖರ್ಗೆ
-
Special21 hours agoಮೆಟ್ರಿಕ್ ನಂತರ ₹20,000ದವರೆಗೆ ವಿದ್ಯಾರ್ಥಿವೇತನ: ಸಂಪೂರ್ಣ ಮಾಹಿತಿ!
-
Hassan8 hours agoನಿಗೂಢ ನಾಪತ್ತೆಯ ಪ್ರಕರಣಕ್ಕೆ ಬಹುದೊಡ್ಡ ಮೇಜರ್ ಟ್ವಿಸ್ಟ್ : ಮಹಿಳೆ ಪೊಲೀಸರ ವಶಕ್ಕೆ,
-
Hassan4 hours agoಸಂತ ಸೇವಾಲಾಲ್ ಜಯಂತಿ ಆಚರಣೆ : ಕೆ.ಎಂ.ಶಿವಲಿಂಗೇಗೌಡರವರಿಂದ ಪುಷ್ಪನಮನ
-
Chikmagalur21 hours agoದರ್ಶನ್ ಫೋಟೋ ಹಿಡಿದು ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟ ಸುದೀಪ್…!
