Connect with us

Kodagu

ಚಾಲಕನ ನಿಯಂತ್ರಣ ತಪ್ಪಿದ ಕಾರು ಮನೆ ಅಂಗಳಕ್ಕೆ

Published

on

ಗೋಣಿಕೊಪ್ಪ: ಕೊಡಗಿಗೆ ಪ್ರವಾಸಕ್ಕೆ ಬಂದ ಪ್ರವಾಸಿಗರ ಕಾರು ಚಾಲಕನ ನಿಯಂತ್ರಣ ತಪ್ಪಿ ಮನೆಯ ಅಂಗಳಕ್ಕೆ ಉರುಳಿ ಬಿದ್ದ ಘಟನೆ ಶನಿವಾರ ಪೊನ್ನಂಪೇಟೆ ತಾಲೂಕಿನ ಹುದಿಕೇರಿಯಲ್ಲಿ ನಡೆದಿದೆ.

ಬೆಂಗಳೂರಿನಿಂದ ಹುದಿಕೇರಿ ಮಾರ್ಗವಾಗಿ ಸಂಚರಿಸಿ ಇರ್ಪುಫಾಲ್ಸ್ ಸೌಂದರ್ಯವನ್ನು ಸವಿದು ಕೇರಳದ ವೈನಾಡಿಗೆ ಪ್ರವಾಸ ಯಾತ್ರೆ ರೂಪಿಸಿಕೊಂಡು ಕಾರಿನಲ್ಲಿ ಸಂಚರಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಹುದಿಕೇರಿಯ ಗ್ರಾಮದ ಸೆವೆನ್ತ್ಮೈಲ್ನಲ್ಲಿ ಮಲ್ಲಂಡ ಯತೀಶ್ ಅವರ ಮನೆಯ ಅಂಗಳಕ್ಕೆ ಕಾರು ಮಗುಚಿಕೊಂಡಿದೆ.

ಕಾರಿನಲ್ಲಿ ಮೂರು ಯುವಕರು ಮತ್ತು ಮಹಿಳೆ ಸರಿ ನಾಲ್ಕು ಜನ ಪ್ರಯಾಣಿಸುತ್ತಿದ್ದರು. ಸಣ್ಣಪುಟ್ಟ ಗಾಯಗಳಿಂದ ಪ್ರವಾಸಿಗರು ಪಾರಾಗಿದ್ದಾರೆ. ಮಲ್ಲಂಡ ಯತೀಶ್ ಅವರ ಮನೆಯ ಗೋಡೆ ಕಾರು ಅಪ್ಪಳಿಸಿದ ರಭಸಕ್ಕೆ ಬಿರುಕು ಬಿಟ್ಟಿದೆ.

ಸ್ಥಳೀಯ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಂಡಿದ್ದಾರೆ.

ಹುದಿಕೇರಿ ಸೆವೆನ್ತ್ ಮೈಲ್ನಲ್ಲಿ ಮಲ್ಲಂಡ ಯತೀಶ್ ಅವರ ಮನೆ ಇದ್ದು, ರಸ್ತೆ ತಿರುವು ಇರುವುದರಿಂದ ವಾಹನಗಳು ನಿಯಂತ್ರಣ ಕಳೆದುಕೊಂಡು ಮನೆಯಂಗಳಕ್ಕೆ ನುಗ್ಗುವ ಅಪಾಯಕಾರಿ ಸದಾ ಎದುರಾಗುತ್ತಿರುತ್ತದೆ. ಹೀಗಾಗಿ, ಈ ಭಾಗದಲ್ಲಿ ಬ್ಯಾರಿಕೆಟ್ ಅಳವಡಿಸಲು ಹಲವು ಬಾರಿ ಪಂಚಾಯಿತಿಗೆ ಮನವಿ ಮಾಡಿದರು ಸ್ಪಂದಿಸಲಿಲ್ಲ ಎಂದು ಗ್ರಾಮಸ್ಥರು ಘಟನೆ ನಡೆಯಲು ಕಾರಣವಾದ ಬಗೆ ಆರೋಪಿಸಿದ್ದಾರೆ.

Continue Reading

Kodagu

ಕುಟ್ಟ ಪಟ್ಟಣದ ಉದ್ಯಮಿ ಕೇರಳದಲ್ಲಿ ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹ*ತ್ಯೆ: ಪತ್ನಿ, ಮಕ್ಕಳು ಪಾರು

Published

on

ಪೊನ್ನಂಪೇಟೆ: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕುಟ್ಟ ಗ್ರಾಮದ ಉದ್ಯಮಿಯೊಬ್ಬರು, ಕೇರಳದ ವಯನಾಡಿನಲ್ಲಿ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳಲು ಬೆಂಕಿ ಹಚ್ಚಿಕೊಂಡಿದ್ದು, ಇವರ ಪೈಕಿ ಉದ್ಯಮಿ ಸಾವನ್ನಪ್ಪಿದ್ದರೆ, ಪತ್ನಿ ಹಾಗೂ ಮಕ್ಕಳು ಪಾರಾಗಿದ್ದಾರೆ.

ಈ ದುರಂತದಲ್ಲಿ ಕುಟ್ಟ ಗ್ರಾಮದ ನಿವಾಸಿ, ಉದ್ಯಮಿ ಸಜೀರ್ ಮೃತಪಟ್ಟಿದ್ದಾರೆ. ಇವರ ಪತ್ನಿಗೆ ಗಂಭೀರ ಗಾಯವಾಗಿದ್ದು, ಕಲ್ಲಿಕೋಟೆ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದ ಇಬ್ಬರು ಮಕ್ಕಳನ್ನು ಸ್ಥಳೀಯ ನಿವಾಸಿಗಳು ರಕ್ಷಿಸಿದ್ದಾರೆ. ಮಾನಂದವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?
ಉದ್ಯಮಿ ಸಜೀರ್, ಕುಟ್ಟ ಗ್ರಾಮದಲ್ಲಿ ಹಲವು ವ್ಯಾಪಾರ ಮಳಿಗೆ ಹೊಂದಿದ್ದರು. ಬಾಪು ಎಂಬಾತ ಸಜೀರ್ಗೆ 20 ಲಕ್ಷ ರೂ. ನೀಡಬೇಕಿತ್ತು. ಸಾಲ ಪಡೆದಿದ್ದ ಬಾಪುನ ಮನೆ ಎದುರೇ ಸಜೀರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಕಾರಿನಲ್ಲೇ ಕುಳಿತು ಉದ್ಯಮಿ ಸಜೀರ್ ವಿಡಿಯೋ ರೆಕಾರ್ಡ್ ಮಾಡಿದ್ದು, ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಬಾಪು ಕಾರಣ ಎಂದು ಹೇಳಿದ್ದಾರೆ.

Continue Reading

Kodagu

ಕುಂದಚೇರಿ ಗ್ರಾ.ಪಂ. ನೂತನ ಕಟ್ಟಡ ಉದ್ಘಾಟಿಸಿದ ಶಾಸಕ ಎ.ಎಸ್.ಪೊನ್ನಣ್ಣ

Published

on

ಮಡಿಕೇರಿ: ಗ್ರಾ.ಪಂ. ಪ್ರತಿನಿಧಿಗಳು ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಬೇಕು ಮತ್ತು ರಾಜಕೀಯ ರಹಿತವಾಗಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಒದಗಿಸಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಕರೆ ನೀಡಿದ್ದಾರೆ.

ಕುಂದಚೇರಿ ಗ್ರಾ.ಪಂ. ಚೆಟ್ಟಿಮಾನಿ ವತಿಯಿಂದ ನೂತನವಾಗಿ ನಿರ್ಮಾಣಗೊಂಡಿರುವ ಡಿಜಿಟಲ್ ಗ್ರಂಥಾಲಯ, ಅರಿವು ಕೇಂದ್ರ, ಅಂಚೆ ಕಚೇರಿ ಮತ್ತು ಸಂಜೀವಿನಿ ಒಕ್ಕೂಟದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು ಗ್ರಾ.ಪಂ ಪ್ರತಿನಿಧಿಗಳು ಅತ್ಯಂತ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದರು.


ಕ್ಷೇತ್ರದಾದ್ಯಂತ ನೂತನ ಕಟ್ಟಡಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ, ಎಲ್ಲಾ ಗ್ರಾ.ಪಂ ವ್ಯಾಪ್ತಿಯಲ್ಲು ಸರಕಾರಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಒದಗಿಸಲಾಗುತ್ತಿದೆ. ಇದನ್ನು ಪಂಚಾಯಿತಿ ಪ್ರತಿನಿಧಿಗಳು ಸದುಪಯೋಗಪಡಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು. ತಾವು ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಗುರಿ ಹೊಂದಿದ್ದು, ಸರ್ವರೂ ಕೈಜೋಡಿಸಬೇಕೆಂದು ಎ.ಎಸ್.ಪೊನ್ನಣ್ಣ ಮನವಿ ಮಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕುಂದಚೇರಿ ಗ್ರಾ.ಪಂ. ಯ ಹಿರಿಯ ಸದಸ್ಯ ಹ್ಯಾರಿಸ್ ಅವರು 1982 ರಲ್ಲಿ ಪಂಚಾಯಿತಿಯ ಹಳೆಯ ಕಟ್ಟಡ ನಿರ್ಮಾಣಗೊಂಡಿತು, ಅಂದಿನಿಂದ ಇಂದಿನವರೆಗೆ ನೂತನ ಕಟ್ಟಡದ ನಿರ್ಮಾಣಕ್ಕೆ ಸಹಕರಿಸಿದ ಸರ್ವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.


ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುತ್ತಿರುವ ಹಾಲಿ ಶಾಸಕ ಎ.ಎಸ್.ಪೊನ್ನಣ್ಣ, ಮಾಜಿ ಶಾಸಕರು, ಗ್ರಾ.ಪಂ ನ ಉಪಾಧ್ಯಕ್ಷರು, ಆಡಳಿತ ಮಂಡಳಿ, ಸರ್ವ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು, ಮಾಜಿ ಪ್ರತಿನಿಧಿಗಳು, ಈಗಿನ ಮತ್ತು ಹಿಂದಿನ ಜಿಲ್ಲಾಧಿಕಾರಿಗಳು, ದಾನಿಗಳು, ಜಿ.ಪಂ., ತಾ.ಪಂ., 1994ರಿಂದ ರಚನೆಗೊಂಡ ಆರು ಆಡಳಿತ ಮಂಡಳಿ ಸೇರಿದಂತೆ ಸರ್ವರ ಆಸಕ್ತಿಯಿಂದ ನೂತನ ಕಟ್ಟಡ ನಿರ್ಮಾಣಗೊಂಡು ಇಂದು ಉದ್ಘಾಟನೆಗೊಂಡಿದೆ ಎಂದರು.

ಕುಂದಚೇರಿ ಗ್ರಾ.ಪಂ ಅಧ್ಯಕ್ಷ ಪಿ.ಬಿ.ದಿನೇಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸನ್ಮಾನ

ಶಾಸಕ ಎ.ಎಸ್.ಪೊನ್ನಣ್ಣ, ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ತಾಲೂಕು ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ನೆರವಂಡ ಉಮೇಶ್, ತಾಲ್ಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಮಂದ್ರೀರ ಮೋಹನ್ ದಾಸ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಶೇಖರ್, ಗ್ರಾ.ಪಂ ಅಧ್ಯಕ್ಷ ಪಿ.ಬಿ.ದಿನೇಶ್, ಉಪಾಧ್ಯಕ್ಷೆ ಬೇಬಿ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಎಂ.ಎಸ್.ಗಂಗಮ್ಮ, ತಾಲೂಕು ಎ.ಡಿ ಹೇಮಂತ್ ಹಾಗೂ ಗುತ್ತಿಗೆದಾರ ಇಸ್ಮಾಯಿಲ್ ಕಾನಾವು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪಂಚಾಯಿತಿ ಸದಸ್ಯರಾದ ವಿಶ್ವ ಪ್ರವೀಣ್ ಕುಮಾರ್, ಬಸಪ್ಪ, ಸವಿತ, ನಮಿತ, ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ ಪುಷ್ಪಾ, ನೇತ್ರಾವತಿ, ರೂಪ, ಲಕ್ಷ್ಮಿ, ಹೇಮಲತ, ಅನುಜ, ನಯನ ಮತ್ತಿತರರು ಉಪಸ್ಥಿತರಿದ್ದರು. ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಹರೀಶ್ ಸ್ವಾಗತಿಸಿ ನಿರೂಪಿಸಿ, ವಂದಿಸಿದರು. ಚೆಟ್ಟಿಮಾನಿ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ನಾಡಗೀತೆಯನ್ನು ಹಾಡಿದರು.

Continue Reading

Kodagu

ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಿಗೆ ಕೃಷಿ ರತ್ನ ಪ್ರಶಸ್ತಿ

Published

on

ಕುಶಾಲನಗರ: ಕೃಷಿ ಆವಿಷ್ಕಾರಗಳಿಗೆ ನೀಡಿದ ಕೊಡುಗೆಗಳನ್ನು ಗುರುತಿಸಿ, ನವದೆಹಲಿಯ ಇಂಡಿಯನ್ ಇಂಡಿಜೆನಸ್ ಸೊಸೈಟಿ ಫಾರ್ ಸೈನ್ಸಸ್ ಮತ್ತು ಸೋಶಿಯಲ್ ಸೈನ್ಸಸ್‌ನಿಂದ “ಕೃಷಿ ರತ್ನ ಪ್ರಶಸ್ತಿ-2026″ಯನ್ನು ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಪ್ರೊ. ಅಶೋಕ ಸಂಗಪ್ಪ ಆಲೂರ ಅವರು ಸ್ವೀಕರಿಸಿದರು.

ಇಂಡಿಯನ್ ಇಂಡಿಜಿನಸ್ ಸೊಸೈಟಿ ಫಾರ್ ಸೈನ್ಸಸ್ ಅಂಡ್ ಸೋಶಿಯಲ್ ಸೈನ್ಸಸ್, SS ಜಸ್ವಾಲ್ ಕಾಲೇಜ್ ನಾಗ್ಪುರದ ಅಡಿಯಲ್ಲಿ, ವಿಶ್ವವಿದ್ಯಾಲಯ ನಾಗ್ಪುರದಿಂದ ಆಯೋಜಿಸಲಾಗಿದ್ದ “ಫ್ರಾಂಟಿಯರ್ಸ್ ಎಕ್ಸ್‌ಪ್ಲೋರಿಂಗ್: ಇಂಟರ್‌ಡಿಸಿಪ್ಲಿನರಿ ಅಡ್ವಾನ್ಸ್‌ ಇನ್‌ ಬಯೋಲಾಜಿಕಲ್‌ ಮತ್ತು ಮೆಟೀರಿಯಲ್‌ ಸೈನ್ಸಸ್‌” ಅಂತರಾಷ್ಟ್ರೀಯ ಸಮ್ಮೇಳನದ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಇಂಡಿಯನ್ ಇಂಡಿಜೆನಸ್ ಸೊಸೈಟಿ ಫಾರ್ ಸೈನ್ಸಸ್ ಅಂಡ್ ಸೋಶಿಯಲ್ ಸೈನ್ಸಸ್‌‌ನ ಅಧ್ಯಕ್ಷರಾದ ಡಾ. ದಯಾನಂದ ಗೋಗಲೆ ಮತ್ತು ಪದಾಧಿಕಾರಿಗಳು, ಉಜಬಿಕಿಸ್ತಾನದ ಇನ್‌ಸ್ಟಿಟ್ಯೂಟ್ ಆಫ್ ಜೆನಿಟಿಕ್ಸ್ ಅಂಡ್ ಪ್ಲಾಂಟ್ ಎಕ್ಸ್‌‌ಪಿರಿಮೆಂಟಲ್ ಬಯಾಲಾಜಿಯ ಮುಖ್ಯಸ್ಥೆ ಡಾ‌.ಡಿಲ್ಫುಜ಼ಾ ಜಬ್ಬಾರ್ವ, ಎಸ್‌ಬಿಎಸ್‌ಎಸ್ ನ ಅಧ್ಯಕ್ಷರಾದ ಪ್ರೊ. ಪ್ರಮೋದ್ ರಾಮ್ ಟೆಕೆ, ಇತರೆ ವಿಜ್ಞಾನಿಗಳು ಮತ್ತು ಅತಿಥಿ ಗಣ್ಯರು ಉಪಸ್ಥಿತರಿದ್ದರು.

Continue Reading

Trending

error: Content is protected !!