Connect with us

Uncategorized

ನಿಮ್ಮ ಚೇಲಾಗಳಿಗೆ ಹೆದರಲ್ಲ’: ಕುಮಾರಸ್ವಾಮಿಗೆ ಪ್ರದೀಪ್ ಈಶ್ವರ್ ಖಡಕ್ ಎಚ್ಚರಿಕೆ

Published

on

ಚಿಕ್ಕಬಳ್ಳಾಪುರ, ಜೂನ್ 27: ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಉಂಟಾದ ಗದ್ದಲದ ಬಳಿಕ ಶಾಸಕ ಪ್ರದೀಪ್ ಈಶ್ವರ್ ಅವರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕಾರ್ಯಕ್ರಮಕ್ಕೆ ಆಹ್ವಾನಿಸಿ ಸಾರ್ವಜನಿಕವಾಗಿ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದ ಅವರು, ಶೋಷಿತ ಸಮುದಾಯದ ಜನಪ್ರತಿನಿಧಿಗಳನ್ನು ಗುರಿಯಾಗಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಪ್ರದೀಪ್ ಈಶ್ವರ್, “ನಾನು ಜಿಲ್ಲೆಯ ಶೋಷಿತ ಸಮುದಾಯದ ಶಾಸಕ. ಕಾರ್ಯಕ್ರಮಕ್ಕೆ ಕರೆದು ಅವಮಾನ ಮಾಡುವುದು ಸರಿಯೇ? ಜಿಲ್ಲೆಯ ಶೋಷಿತರು ಹಾಗೂ ಅಲ್ಪಸಂಖ್ಯಾತರು ಬದುಕಬಾರದೇ?” ಎಂದು ಪ್ರಶ್ನಿಸಿದರು. ಒಕ್ಕಲಿಗರು ಸೇರಿದಂತೆ ಯಾವುದೇ ಸಮುದಾಯದ ಜಯಂತಿಯಲ್ಲಿ ತಾವು ಯಾರನ್ನೂ ಅವಮಾನಿಸಿಲ್ಲ ಎಂದು ಹೇಳಿದ ಅವರು, ಕುಮಾರಸ್ವಾಮಿ ಅವರ ಬೆಂಬಲಿಗರ ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಇದಕ್ಕೂ ಮುನ್ನ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ದುಬಾರಿ ವಾಚ್ ಧರಿಸುತ್ತಿದ್ದರು ಎಂದು ತಾವು ಹಿಂದೆ ಹೇಳಿದ್ದೇನೆ. ಅದರ ಫೋಟೋ ಹಾಗೂ ವಿಡಿಯೊಗಳನ್ನು ಬಿಡುಗಡೆ ಮಾಡಿದ್ದೇನೆ ಎಂದರು.

ತಮ್ಮ ಸಿಎ (CA) ಸೈಟ್ ವಿಚಾರವನ್ನು ಉಲ್ಲೇಖಿಸಿದ ಪ್ರದೀಪ್ ಈಶ್ವರ್, ತಾವು ಒಂದು ಎಕರೆ ಸಿಎ ಸೈಟ್ ಪಡೆದಿರುವ ಬಗ್ಗೆ ಈಗಾಗಲೇ ಸ್ಪಷ್ಟನೆ ನೀಡಿದ್ದೇನೆ. ಅದೇ ರೀತಿ ಕುಮಾರಸ್ವಾಮಿ ಅವರು 32 ಎಕರೆ ಜಮೀನು ಹೇಗೆ ಖರೀದಿಸಿದರು ಎಂಬುದನ್ನು ರಾಜ್ಯದ ಜನರಿಗೆ ತಿಳಿಸಬೇಕು ಎಂದು ಆಗ್ರಹಿಸಿದರು.

ಶಿಡ್ಲಘಟ್ಟ ಶಾಸಕ ಬಿ.ಎನ್. ರವಿಕುಮಾರ್ ಅವರ ಸವಾಲಿಗೆ ಪ್ರತಿಕ್ರಿಯಿಸಿದ ಅವರು, ತಮ್ಮ ಸಿಎ ಸೈಟ್‌ಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಾರ್ವಜನಿಕರ ಮುಂದೆ ಇಡಲು ಸಿದ್ಧನಿದ್ದೇನೆ. ಆದರೆ ಕುಮಾರಸ್ವಾಮಿ ಅವರೂ 32 ಎಕರೆ ಜಮೀನಿನ ದಾಖಲೆಗಳನ್ನು ಬಹಿರಂಗಪಡಿಸಬೇಕು ಎಂದು ಸವಾಲು ಹಾಕಿದರು.

Continue Reading

Uncategorized

ರಾಷ್ಟ್ರೀಯ ಸೇವಾ ಯೋಜನೆ ಘಟಕದ ಉದ್ಘಾಟನೆ

Published

on

ವಿರಾಜಪೇಟೆ : ವಿರಾಜಪೇಟೆಯ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಉದ್ಘಾಟನ ಸಮಾರಂಭವು ಕಾಲೇಜಿನಲ್ಲಿ ನಡೆಯಿತು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಕ್ಯಾಪ್ಟನ್ ಬಾಚುರ ಸಿ. ಸೊಮ್ಮಣ್ಣ ದೀಪ ಬೆಳಗಿಸುವುದ ಮೂಲಕ ಉದ್ಘಾಟಿಸಿದರು.

ನಂತರ ಅವರು ವಿದ್ಯಾರ್ಥಿಗಳು ಸಮಾಜ ಸೇವೆಯ ಮನೋಭಾವವನ್ನು ಬೆಳೆಸುತ್ತದೆ. ನಾಯಕತ್ವದ ಗುಣಗಳನ್ನು ವೃದ್ಧಿಸುತ್ತದೆ. ಶಿಸ್ತು, ಸಮಯಪಾಲನೆ ಮತ್ತು ಜವಾಬ್ದಾರಿಯನ್ನು ಕಲಿಸುತ್ತದೆ. ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಸಂಯಮ, ಸಮಯ ಪರಿಪಾಲನೆಯನ್ನು ರೂಢಿಸಿಕೊಂಡು ಸಮಾಜಕ್ಕೆ ಉತ್ತಮ ಪ್ರಜೆಗಳಾಗಬೇಕು, ಸಾಮಾಜಿಕ ಜಾಲತಾಣ, ಕಾನೂನುಬಾಹಿರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಬಲಿಯಾಗದೆ ಉತ್ತಮ ಜೀವನವನ್ನು ನಡೆಸಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನ ಹೇಳಿದರು .


ದೇಶ ನಮಗೆ ಎಲ್ಲವನ್ನೂ ನೀಡಿದೆ. ಆದ್ದರಿಂದ ದೇಶಕ್ಕೆ ಸೇವೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ದೇಶ ಸೇವೆ ಎಂದರೆ ಕೇವಲ ಸೈನ್ಯಕ್ಕೆ ಸೇರುವುದು ಮಾತ್ರವಲ್ಲ; ಕಾನೂನು ಪಾಲಿಸುವುದು,ಸಮಾಜದ ಒಳಿತಿಗಾಗಿ ದುಡಿಯುವುದು, ಹಾಗೂ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುವುದೂ ದೇಶ ಸೇವೆಯೇ. ಯುವಜನರು ದೇಶಪ್ರೇಮ, ಶಿಸ್ತು ಮತ್ತು ಸೇವಾ ಮನೋಭಾವ ವನ್ನು ಮೈಗೂಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ನುಡಿದರು.

ಸಮಾರೋಪ ಸಮಾರಂಭದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಂ.ಕೆ ಪದ್ಮ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಮಹತ್ವವನ್ನು ನೀಡಬೇಕು. ಸಮಾಜದ ಹಿತಕ್ಕಾಗಿ ನಿಸ್ವಾರ್ಥವಾಗಿ ಸೇವೆ ಮಾಡುವ ಕಾರ್ಯ ಮಾಡಬೇಕು. ಸಮಾಜದ ಹಿತವನ್ನು ಸ್ವಹಿತಕ್ಕಿಂತ ಮೇಲುಗೈಯಲ್ಲಿ ಇಡುವ ಮನೋಭಾವವನ್ನು ಬೆಳೆಸುತ್ತದೆಂದು ಹೇಳಿದರು.


ಕುಮಾರಿ ವೀಕ್ಷಿತಾ ಮತ್ತು ತಂಡ ಪ್ರಾರ್ಥಿಸಿದರು. ಉದ್ಘಾಟನಾ ಸಮಾರಂಭದಲ್ಲಿ ನೆರದಿದ್ದ ಸರ್ವರನ್ನು ಆಂಗ್ಲ ಉಪನ್ಯಾಸಕಿ ಎಂ.ಪಿ. ಡೈನ ಸೋಮಯ್ಯ ಸ್ವಾಗತಿಸಿ, ರಾಷ್ಟೀಯ ಸೇವಾ ಯೋಜನ ಘಟಕದ ಕಾರ್ಯಕ್ರಮಾಧಿಕಾರಿ ಅನುಪಮ ತಿಮ್ಮಯ್ಯ ಸರ್ವರನ್ನು ವಂದಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿಗಳಾದ ಕುಮಾರಿ ವೀಣಾ ಮತ್ತು ಕುಮಾರಿ ರಕ್ಷಿತಾ ನೆರವೇರಿಸಿದರು.
ಸ್ವಯಂ ಸೇವಕರಿಂದ ರಾಷ್ಟ್ರೀಯ ಸೇವಾ ಯೋಜನೆಯ ಗೀತೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಗುರಿ ಮತ್ತು ಉದ್ದೇಶಗಳನ್ನು ತಿಳಿಸಿಕೊಟ್ಟರು.

ಉದ್ಘಾಟನಾ ಸಮಾರಂಭದಲ್ಲಿ ಅನುಪಮ ಕಿಶೋರ್ ವಕೀಲರು, ವಿರಾಜಪೇಟೆ , ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕಿ ಕೆ. ಪಿ. ಗಾಯತ್ರಿ, ಕೆ. ಪಿ ಬೋಪಣ್ ಶ್ರೀಮತಿ ಪಮಿತಾ, ಉಪನ್ಯಾಸಕ ವೃಂದದವರು, ಸ್ವಯಂಸೇವಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Continue Reading

Uncategorized

ಸಿದ್ದಾಪುರದಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನ ಆಚರಣೆ

Published

on

 ಸಿದ್ದಾಪುರ: ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಾಣಿಕೆ ವಿರುದ್ಧದ ಅಂತರಾಷ್ಟ್ರೀಯ ದಿನದ ಅಂಗವಾಗಿ ಸಿದ್ದಾಪುರದಲ್ಲಿ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಸಿದ್ದಾಪುರ ಪೊಲೀಸ್ ಠಾಣೆ, ಇಕ್ರಾ ಪಬ್ಲಿಕ್ ಶಾಲೆ ಹಾಗೂ ಸಂತ ಅನ್ನಮ್ಮ ಶಾಲೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ “ನಶಾ ಮುಕ್ತ ಭಾರತ” ಘೋಷವಾಕ್ಯದಡಿ ಸಾರ್ವಜನಿಕರಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲಾಯಿತು.

ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ನಡೆದ ಜಾಗೃತಿ ಅಭಿಯಾನದಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಪೊಲೀಸ್ ಸಿಬ್ಬಂದಿ ಭಾಗವಹಿಸಿ, ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ಆರೋಗ್ಯ, ಸಾಮಾಜಿಕ ಮತ್ತು ಕಾನೂನು ಸಂಬಂಧಿತ ಸಮಸ್ಯೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗುವ ಮೂಲಕ ಮಾದಕ ವಸ್ತುಗಳ ವಿರುದ್ಧ ಹೋರಾಡುವ ಸಂದೇಶ ಸಾರಿದರು.

ಈ ಸಂದರ್ಭದಲ್ಲಿ ಯುವಜನರು ಮಾದಕ ವಸ್ತುಗಳ ವ್ಯಸನದಿಂದ ದೂರವಿದ್ದು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಪೊಲೀಸ್ ಅಧಿಕಾರಿಗಳು ಕರೆ ನೀಡಿದರು. ಸಮಾಜದ ಪ್ರತಿಯೊಬ್ಬರೂ ಮಾದಕ ವಸ್ತುಗಳ ದುರುಪಯೋಗ ತಡೆಗಟ್ಟಲು ಕೈಜೋಡಿಸುವ ಅಗತ್ಯವಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು, ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು

Continue Reading

Uncategorized

ಇ-ಸ್ವತ್ತು ವಿತರಣೆಗೆ ಅಗತ್ಯವಿರುವ ದಾಖಲಾತಿಗಳ ಕುರಿತು ಮಾಹಿತಿ ಫಲಕ ಅಳವಡಿಸಲು ಸೂಚನೆ : ಜಿ.ಪಂ. ಸಿಇಓ

Published

on

ಮಂಡ್ಯ,: ಜಿ.ಪಂ. ಸಿಇಓ ನಂದಿನಿ ಕೆ.ಆರ್. ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಕೇಸ್ವಾನ್ ಸಭಾಂಗಣದಲ್ಲಿ ಬುಧವಾರ ವಿಡಿಯೋ ಸಂವಾದದ ಮೂಲಕ ಗ್ರಾಮ ಪಂಚಾಯತ್‌ಗಳ ವಿವಿಧ ಯೋಜನೆಗಳು ಹಾಗೂ ಆಡಳಿತಾತ್ಮಕ ವಿಷಯಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ಸಭೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳು, ತೆರಿಗೆ ವಸೂಲಾತಿ, ಇ-ಸ್ವತ್ತು ಸೇವೆ, ಸಿಬ್ಬಂದಿ ನಿರ್ವಹಣೆ, ಆಡಿಟ್ ಪ್ಯಾರಾಗಳ ತೀರುವಳಿ ಸೇರಿದಂತೆ ಗ್ರಾಮ ಪಂಚಾಯತ್‌ಗಳ ಪ್ರಮುಖ ಕಾರ್ಯಕ್ರಮಗಳ ಪ್ರಗತಿಯನ್ನು ಪರಿಶೀಲಿಸಲಾಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಇಓ ನಂದಿನಿ ಕೆ.ಆರ್. ಅವರು, ಇ-ಸ್ವತ್ತು ವಿತರಣೆಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಇನ್ನಷ್ಟು ಅರಿವು ಮೂಡಿಸುವ ಅಗತ್ಯವಿದ್ದು, ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳ ಕುರಿತು ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಮಾಹಿತಿ ಫಲಕಗಳನ್ನು ಅಳವಡಿಸಬೇಕು. ಜೊತೆಗೆ, ಗ್ರಾಮಸಭೆ, ವಾರ್ಡ್ ಸಭೆ ಹಾಗೂ ಇತರೆ ಸಾರ್ವಜನಿಕ ಕಾರ್ಯಕ್ರಮಗಳ ಮೂಲಕ ಐಇಸಿ ಚಟುವಟಿಕೆಗಳನ್ನು ಹಮ್ಮಿಕೊಂಡು ಜನರಿಗೆ ಮಾಹಿತಿ ನೀಡಬೇಕು. ಈ ಸಂಬಂಧ ಕೈಗೊಂಡಿರುವ ಜಾಗೃತಿ ಕಾರ್ಯಕ್ರಮಗಳ ಛಾಯಾಚಿತ್ರ ಸಹಿತ ವರದಿಯನ್ನು ಕಡ್ಡಾಯವಾಗಿ ಸಲ್ಲಿಸುವಂತೆ ನಿರ್ದೇಶನ ನೀಡಿದರು.

ಕರ್ತವ್ಯ ಆಪ್‌ ಮೂಲಕ ಹಾಜರಾತಿ ಕಡ್ಡಾಯ: ಸರ್ಕಾರದ ಡಿಜಿಟಲ್ ಆಡಳಿತ ವ್ಯವಸ್ಥೆಯ ಭಾಗವಾಗಿ ಜಾರಿಗೊಂಡಿರುವ ಕರ್ತವ್ಯ ಆ್ಯಪ್‌ನಲ್ಲಿ ಎಲ್ಲಾ ಸಿಬ್ಬಂದಿಗಳು ಕಡ್ಡಾಯವಾಗಿ ನೋಂದಣಿ ಮಾಡಿಕೊಂಡು ಪ್ರತಿದಿನ ಹಾಜರಾತಿಯನ್ನು ದಾಖಲಿಸಬೇಕು. ಹಾಜರಾತಿ ನಿರ್ವಹಣೆಯಲ್ಲಿ ಯಾವುದೇ ನಿರ್ಲಕ್ಷ್ಯ ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ನಿಯಮನುಸಾರ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಗ್ರಾಮ ಪಂಚಾಯತ್‌ಗಳ ಆರ್ಥಿಕ ಸ್ಥಿರತೆಗಾಗಿ ತೆರಿಗೆ ವಸೂಲಾತಿ ಅತ್ಯಂತ ಮಹತ್ವದ್ದಾಗಿದ್ದು, ಬಾಕಿ ತೆರಿಗೆ ವಸೂಲಿಗೆ ವಿಶೇಷ ಅಭಿಯಾನ ನಡೆಸಬೇಕು. ವಸೂಲಾತಿ ಪ್ರಮಾಣವನ್ನು ಹೆಚ್ಚಿಸಲು ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕು ಎಂದು ತಿಳಿಸಿದರು.

ಗ್ರಾಮ ಪಂಚಾಯತ್‌ಗಳಿಗೆ ಸಂಬಂಧಿಸಿದ ಆಡಿಟ್ ಪ್ಯಾರಾಗಳನ್ನು ತ್ವರಿತವಾಗಿ ತೀರುವಳಿಗೊಳಿಸಿ ಬಾಕಿ ಪ್ರಕರಣಗಳನ್ನು ತೀರುವಳಿ ಮಾಡಬೇಕು. ಆಡಿಟ್ ಆಕ್ಷೇಪಣೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿ, ಅನುಪಾಲನಾ ವರದಿಗಳನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಮ ಪಂಚಾಯತ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗವಿಕಲ ಸಿಬ್ಬಂದಿಗಳ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಪ್ರತಿ ತಾಲೂಕು ಹಾಗೂ ಗ್ರಾಮ ಪಂಚಾಯತ್ ಮಟ್ಟದಲ್ಲಿ ಹೆಲ್ಪ್ ಡೆಸ್ಕ್ ವ್ಯವಸ್ಥೆ ಕಲ್ಪಿಸಿ, ಅವರ ಕುಂದುಕೊರತೆಗಳನ್ನು ಆದ್ಯತೆಯ ಮೇರೆಗೆ ಪರಿಹರಿಸಲು ಕ್ರಮವಹಿಸಬೇಕು ಎಂದು ಸೂಚಿಸಿದರು.

ಇದೇ ವೇಳೆ, ಗ್ರಾಮ ಪಂಚಾಯತ್‌ಗಳಿಂದ ಪಾವತಿಸಬೇಕಾಗಿರುವ ಗ್ರಂಥಾಲಯ ಕರ, ಭಿಕ್ಷುಕರ ಕರ ಸೇರಿದಂತೆ ವಿವಿಧ ಉಪಕರಗಳ ಬಾಕಿ ಪಾವತಿಗಳನ್ನು ಆದ್ಯತೆಯ ಮೇರೆಗೆ ಪಾವತಿಸಬೇಕು. ಹಣಕಾಸು ಶಿಸ್ತು ಕಾಪಾಡಿಕೊಂಡು ಸರ್ಕಾರದ ಮಾರ್ಗಸೂಚಿಗಳಂತೆ ಕಾರ್ಯನಿರ್ವಹಿಸುವಂತೆ ತಿಳಿಸಿದರು.

ಸಭೆಯಲ್ಲಿ ಉಪಕಾರ್ಯದರ್ಶಿ (ಅಭಿವೃದ್ಧಿ) ಲಕ್ಷ್ಮಿ, ಉಪಕಾರ್ಯದರ್ಶಿ(ಆಡಳಿತ) ಶಿವಲಿಂಗಯ್ಯ, ಯೋಜನಾ ನಿರ್ದೇಶಕರಾದ ಸುಂದರ್ ರಾಜ್, ಮುಖ್ಯ ಯೋಜನಾಧಿಕಾರಿ ಧನುಷ್, ಮುಖ್ಯ ಲೆಕ್ಕಧಿಕಾರಿ ಶ್ರೀನಿವಾಸ್ ನಾಯಕ್, ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿ ತಮ್ಮ ವ್ಯಾಪ್ತಿಯ ಪ್ರಗತಿ ಮಾಹಿತಿ ನೀಡಿದರು.

Continue Reading

Trending

error: Content is protected !!