Connect with us

State

ಈ ದಿನದಿಂದ ‘ಗ್ಯಾರಂಟಿ’ ಯೋಜನೆಗಳು ರದ್ದು – ಡಿ ಕೆ ಶಿವಕುಮಾರ್ ಕೊಟ್ರು ಶಾಕಿಂಗ್ ಸ್ಟೇಟ್ಮೆಂಟ್ !

Published

on

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಜನರಿಗೆ ಹಾಗೂ ಮಹಿಳಾ ಸಬಲೀಕರಣಕ್ಕಾಗಿ ಪಂಚ ಗ್ಯಾರಂಟಿಗಳನ್ನು ಘೋಷಿಸಿ ಅದರಲ್ಲಿ ಈಗಾಗಲೇ ನಾಲ್ಕು ಗ್ಯಾರಂಟಿಗಳನ್ನು ಜಾರಿ ಮಾಡಿದೆ. ಈ ಎಲ್ಲಾ ಯೋಜನೆಗಳು ಸುಮಾರು 10 ವರ್ಷಗಳ ಕಾಲ ಅಸ್ತಿತ್ವದಲ್ಲಿ ಇರುತ್ತದೆ, ಜನರಿಗೆ ಯಾವುದೇ ಚಿಂತೆ ಬೇಡ ಎಂದು ಕೂಡ ಸರ್ಕಾರ ಹೇಳಿದೆ. ಆದರೆ ಇದೀಗ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು ಗ್ಯಾರಂಟಿ ಯೋಜನೆಗಳು ರದ್ದಾಗುವ ಮಾತನ್ನಾಡಿದ್ದಾರೆ.

ಹೌದು, ಕಾಂಗ್ರೆಸ್ನ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷರು ಹಾಗೂ ರಾಜ್ಯದ ಉಪಮುಖ್ಯಮಂತ್ರಿಗಳು(DCM) ಆದ ಡಿಕೆ ಶಿವಕುಮಾರ್ ಅವರು ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವಾಗ ಬಿಜೆಪಿಯವರು ವಿರೋಧಿಸಿದರು. ಆದರೆ ಇಂದು ಎಲ್ಲ ಬಿಜೆಪಿ(BJP) ಕಾರ್ಯಕರ್ತರು ಕೂಡ ಈ ಗ್ಯಾರಂಟಿಗಳ ಲಾಭವನ್ನು ಪಡೆಯುತ್ತಿದ್ದಾರೆ. ಆದರೆ ಅವರೆಲ್ಲರೂ ರಾಜ್ಯದ ಜನರೆಂದು ನಾವು ನೋಡುತ್ತೇವೆ. ಈ ಯೋಜನೆಗಳು ಇನ್ನು ಮುಂದೆಯೂ ನಿಮಗೆ ಸಿಗಬೇಕೆಂದರೆ ನೀವು ಕಾಂಗ್ರೆಸ್ ಗೆ ವೋಟ್ ಹಾಕಬೇಕು. ಲೋಕಸಭೆಯಲ್ಲಿ ಬಿಜೆಪಿ ಅಥವಾ ಜೆಡಿಎಸ್ ಗೆ ವೋಟ್ ಹಾಕಿ ಅವರನ್ನು ಗೆಲ್ಲಿಸಿದರೆ ನಾವು ಜಾರಿಗೆ ತಂದಿರುವ ಎಲ್ಲಾ ಗ್ಯಾರಂಟಿ ಯೋಜನೆಗಳು ರದ್ದಾಗುತ್ತವೆ. ಅವರು ಗೆದ್ದ ದಿನದಿಂದಲೇ ಇವು ರದ್ದಾಗುತ್ತವೆ. ಹೀಗಾಗಿ ನೀವು ಲೋಕಸಭೆಯಲ್ಲಿ ಕಾಂಗ್ರೆಸ್ ಗೆಲ್ಲಿಸಿಕೊಡಿ’ ಎಂದು ಹೇಳಿದರು.

ಅಲ್ಲದೆ ಗ್ಯಾರಂಟಿ ಲಾಭ ಪಡೆಯುವ ಎಲ್ಲಾ ಜನರಿಗೂ ಹೇಳಿ ಮನವರಿಕೆ ಮಾಡಬೇಕು. ಬಿಜೆಪಿ ಕಾರ್ಯಕರ್ತರು ಹಾಗೂ ಜೆಡಿಎಸ್ ಕಾರ್ಯಕರ್ತರಿಗೂ ತಿಳಿಸಿ, ಅವರ ಪರ ಒಲವಿರುವವರಿಗೂ ತಿಳಿಸಿ ಈ ಗ್ಯಾರಂಟಿ ಲಾಭ ಬೇಕೆಂದರೆ ನೀವು ಕಾಂಗ್ರೆಸ್ ಗೆ ವೋಟು ಮಾಡಲು ಎಂದು ಹೇಳಿದರು.

ಜೊತೆಗೆ ನಮ್ಮ ಸರ್ಕಾರ ಇರುವವರೆಗೂ ಅಥವಾ ನಮ್ಮ ಆಡಳಿತ ನಾವು ಎಲ್ಲಿವರೆಗೂ ಆಡಳಿತ ನಡೆಸುತ್ತೇವೆ ಅಲ್ಲಿಯವರೆಗೂ ನಾವು ಜಾರಿಗೆ ತಂದಿರುವಂತಹ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡುವುದಾಗಲಿ, ಕಡಿಮೆ ಮಾಡುವುದಾಗಲಿ, ಅದನ್ನು ಹಿಂಪಡೆಯುವುದಾಗಲಿ ಮಾಡುವುದಿಲ್ಲ. ನಮ್ಮ ಸರ್ಕಾರ ಇರುವವರೆಗೂ ನಾವು ಎಲ್ಲಿವರೆಗೂ ಭರವಸೆ ಕೊಟ್ಟಿದ್ದೇವೆ ಅಲ್ಲಿಯವರೆಗೂ ಎಲ್ಲಾ ಗ್ಯಾರೆಂಟಿಗಳು ಅಸ್ತಿತ್ವದಲ್ಲಿ ಇರುತ್ತವೆ. ನಿಮಗೆ ಇದರ ಲಾಭ ಸಿಗುತ್ತದೆ ಎಂದು ಹೇಳಿದರು.

State

ಆರ್ಟಿಕಲ್ 371 ಜೆ ಜಾರಿಗೆ ಹತ್ತು ವರ್ಷ; ಸಂಭ್ರಮಾಚರಣೆಗೆ ಸರ್ಕಾರದ ಸಿದ್ದತೆ: ಡಿಸಿಎಂ ಡಿ.ಕೆ.ಶಿವಕುಮಾರ್

Published

on

“ಆರ್ಟಿಕಲ್ 371 ಜೆ ಜಾರಿಯಾಗಿ ಹತ್ತು ವರ್ಷಗಳಾಗುತ್ತಿದ್ದು, ಇದರ ಸಂಭ್ರಮಾಚರಣೆಗೆ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಸಂಭ್ರಮಾಚರಣೆ ನೆನಪಿಗೆ 371 ಹಾಸಿಗೆಗಳನ್ನು ಒಳಗೊಂಡ ಜಯದೇವ ಆಸ್ಪತ್ರೆಯನ್ನು ಮುಂದಿನ ತಿಂಗಳು ಲೋಕಾರ್ಪಣೆ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಕಲಬುರ್ಗಿಯಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು “ಕಲಬುರ್ಗಿಗೆ ಅಂತರರಾಷ್ಟೀಯ ಗುಣಮಟ್ಟದ ಇಎಸ್ ಐ ಆಸ್ಪತ್ರೆಯನ್ನು ಮಲ್ಲಿಕಾರ್ಜುನ ಖರ್ಗೆ ಅವರು ತಂದರು. ಕಲಬುರ್ಗಿ ರಾಜ್ಯದಲ್ಲಿ ಮೂರನೇ ಆರೋಗ್ಯ ಹಬ್ ಆಗಿ ರೂಪುಗೊಳ್ಳುತ್ತಿದೆ. ಇಂದಿರಾಗಾಂಧಿ ತಾಯಿ- ಮಕ್ಕಳ ಆಸ್ಪತ್ರೆ, ಕಿದ್ವಾಯಿ, ಜಯದೇವ ಆಸ್ಪತ್ರೆಗಳು ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿವೆ. ಇದರಿಂದ ಈ ಭಾಗದ ಜನರು ಬೆಂಗಳೂರು, ಹೈದರಾಬಾದ್ ಗೆ ಹೋಗುವುದು ತಪ್ಪಲಿದೆ. ಸಂಭ್ರಮಾಚರಣೆ ಕಾರ್ಯಕ್ರಮದ ಬಗ್ಗೆ ವಿರೋಧ ಪಕ್ಷದ ಇಬ್ಬರು ನಾಯಕರ ಜೊತೆ ಚರ್ಚೆ ನಡೆಸಿ, ದಿನಾಂಕ ಅಂತಿಮಗೊಳಿಸಲಾಗುವುದು” ಎಂದು ತಿಳಿಸಿದರು.

“ಆರ್ಟಿಕಲ್ 371 ಜೆ ಯನ್ನು ಕಲ್ಯಾಣ ಕರ್ನಾಟಕದ ಅಭಿವೃದ್ದಿಗಾಗಿ ಮಲ್ಲಿಖಾರ್ಜುನ ಖರ್ಗೆ ಅವರು ಮುಂದಾಳತ್ವವಹಿಸಿ ಜಾರಿಗೆ ತಂದರು. ಈ ಭಾಗದಲ್ಲಿ ಶೈಕ್ಷಣಿಕ, ಔದ್ಯೋಗಿಕ ಮತ್ತು ಸಾಮಾಜಿಕ ಕ್ರಾಂತಿಗೆ ಮುನ್ನಡಿ ಬರೆದಿದೆ” ಎಂದರು.

ತುಂಗಭದ್ರಾ ಗೇಟ್ ದುರಸ್ತಿ ಮಾಡಿದ ಪ್ರತಿ ಕಾರ್ಮಿಕರಿಗೂ ಗೌರವ ಸಲ್ಲಿಕೆ

“70 ವರ್ಷಗಳ ಹಳೆಯ ತುಂಗಭದ್ರಾ ಅಣೆಕಟ್ಟಿನ 19 ನೇ ಗೇಟಿನ ಚೈನ್ ಲಿಂಕ್ ದುರಾದೃಷ್ಟವಶಾತ್ ತುಂಡಾಯಿತು. ಇದಕ್ಕೆ ಬಿಜೆಪಿ, ದಳದವರು ನಮ್ಮ ಮೇಲೆ ಗದಾಪ್ರಹಾರ ಮಾಡಿದರು. ನಾವು ಹಗಲು, ರಾತ್ರಿ ನಿದ್ದೆ ಮಾಡದೆ ಕಾರ್ಯಪ್ರವೃತ್ತರಾದೆವು. ಕೂಡಲೇ ಎಂಜಿನಿಯರ್ ಗಳು, ತಂತ್ರಜ್ಞರನ್ನು ಕರೆಸಿ ಗೇಟನ್ನು ಮತ್ತೆ ಅಳವಡಿಸಲಾಯಿತು. ಪ್ರತಿಯೊಬ್ಬ ಕೆಲಸಗಾರನೂ ಪಣತೊಟ್ಟು ಕೆಲಸ ಮಾಡಿದ್ದಾರೆ. ಈ ಕೆಲಸಕ್ಕೆ ಶ್ರಮಿಸಿದ ಚಿಕ್ಕ ಕಾರ್ಮಿಕರು, ಎಂಜಿನಿಯರ್ ಗಳು, ತಂತ್ರಜ್ಞರು, ಅಧಿಕಾರಿಗಳನ್ನು ಸನ್ಮಾನ ಮಾಡುವ ಕೆಲಸವನ್ನು ಸರ್ಕಾರ ಮುಂದಿನ ದಿನಗಳಲ್ಲಿ ಮಾಡುತ್ತದೆ” ಎಂದು ತಿಳಿಸಿದರು.

“ಅಣೆಕಟ್ಟನ್ನು ಉಳಿಸಿಕೊಂಡಿದ್ದೇ ದೊಡ್ಡ ಪವಾಡ. ಗೇಟ್ ದುರಸ್ತಿ ಮಾಡಿ ರೈತರ ಪಾಲಿನ ನೀರು ಉಳಿಸಿದಂತಾಯಿತು. ಇಡೀ ದೇಶವೇ ಏನಾಗಬಹುದು ಎಂದು ಕಾತರದಿಂದ ನೋಡುತ್ತಿತ್ತು. ನಾವು ಇದರಲ್ಲಿ ಯಶಸ್ಸು ಕಂಡಿದ್ದೇವೆ. ಅದಕ್ಕೆ ನಾನು ಪದೇ, ಪದೇ ಟೀಕೆಗಳು ಸಾಯುತ್ತವೆ. ಕೆಲಸಗಳು ಉಳಿಯುತ್ತವೆ ಎಂದು ಹೇಳುತ್ತಿರುತ್ತೇನೆ” ಎಂದರು.

“ಗೇಟ್ ದುರಸ್ತಿ ಮಾಡಲು ಒಂದಷ್ಟು ನೀರನ್ನು ನದಿಗೆ ಬಿಡಬೇಕಾದ ಅನಿವಾರ್ಯತೆಯಿತ್ತು. ಈಗ ವರುಣನ ಕೃಪೆಯಿಂದ ಮಳೆ ಬರುತ್ತಿದೆ. ರೈತರ ಪಾಲಿನ ನೀರನ್ನು ಅವರಿಗೆ ಬಿಡಲಾಗುವುದು, ರೈತರನ್ನು ಉಳಿಸಿಕೊಳ್ಳುವ ಕೆಲಸ ನಾವು ಮಾಡುತ್ತೇವೆ” ಎಂದು ಹೇಳಿದರು.

Continue Reading

State

ಬಡತನ, ಜಾತಿ ವ್ಯವಸ್ಥೆ ಹೋಗದೆ ಸಮ ಸಮಾಜದ ನಿರ್ಮಾಣ ಸಾಧ್ಯವಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

Published

on

ಬೆಂಗಳೂರು, ಆಗಸ್ಟ್‌ 20: ಸಮಾಜದಲ್ಲಿ ಬಡತನ ಮತ್ತು ಜಾತಿ ವ್ಯವಸ್ಥೆ ಸಂಪೂರ್ಣವಾಗಿ ತೊಲಗದೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಅವರು ಮಂಗಳವಾರ ಮಂಗಳವಾರ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಅವರ 109 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜದಲ್ಲಿ ಮೇಲು ಕೀಳು ಇರಬಾರದು. ಬಡವ ಬಲ್ಲಿದ ಇರಬಾರದು. ಜಾತಿ ವ್ಯವಸ್ಥೆ ಇರಬಾರದು, ಎಲ್ಲರೂ ಮನುಷ್ಯರಾಗಿ ಸಮಾನವಾಗಿ ಬದುಕಬೇಕು ಎಂಬುವುದೇ ಬಸವಾದಿ ಶರಣರ ಕನಸು. ಇದೇ ತತ್ವದ ಆಧಾರದ ಮೇಲೆ ಅಂಬೇಡ್ಕರ್‌ ಅವರು ಸಂವಿಧಾನ ರಚಿಸಿದರು. ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು ಅವರು ಸಹ ಈ ತತ್ವ ಸಿದ್ದಾಂತಗಳ ಆಧಾರದಲ್ಲಿ ಆಡಳಿತ ನಡೆಸಿ, ರಾಜ್ಯದಲ್ಲಿ ಹಲವಾರು ಕ್ರಾಂತಿಕಾರಿ ಬದಲಾವಣೆಗಳನ್ನು ತಂದರು.

ದೇವರಾಜ ಅರಸು ಅವರು ಅರಸು ಮನೆತನದಲ್ಲಿ ಹುಟ್ಟಿದ್ದರೂ, ಸಮಾಜದ ತಳ ಸಮುದಾಯವಾದ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರ ಬಗ್ಗೆ ಬಹಳ ಕಾಳಜಿ ಹೊಂದಿದ್ದರು.

 

ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು, ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಲು ನಮ್ಮ ಸಂವಿಧಾನ ಒತ್ತು ನೀಡಿದೆ. ಇದೇ ಹಾದಿಯಲ್ಲಿ ಸಂವಿಧಾನಕ್ಕೆ ಬದ್ಧವಾಗಿ ನಾವು ಆಡಳಿತ ನಡೆಸುತ್ತಿದ್ದೇವೆ. ನೆಹರು ಕಾಲದಿಂದ ಇಂದಿನವರೆಗೂ ಅಸಮಾನನತೆಯ ಸಮಾಜವನ್ನು ತೊಡೆದು ಸಮ ಸಮಾಜ ನಿರ್ಮಾಣಕ್ಕಾಗಿ ನಿರಂತರವಾಗಿ ಪ್ರಯತ್ನಗಳನ್ನು ನಡೆಸಲಾಗಿದೆ.

ಸ್ವಾತಂತ್ರ್ಯ ಬಂದು 77 ವರ್ಷಗಳು ಕಳೆದರೂ ಇನ್ನೂ ನಮ್ಮಲ್ಲಿ ಸಾಮಾಜಿಕ ಸಮಾನತೆ ಸಾಧ್ಯವಾಗಿಲ್ಲ. ಸಮಾನವಾಗಿ ಸಂಪತ್ತು ಹಂಚಿಕೆ ನಮಗೆ ಸಾಧ್ಯವಾಗಿಲ್ಲ. ವ್ಯಕ್ತಿಯನ್ನು ಜಾತಿ ಆಧಾರದಲ್ಲಿ ಗುರುತಿಸುವಂತಹ ವ್ಯವಸ್ಥೆ ಇನ್ನೂ ನಮ್ಮಲ್ಲಿ ಇದೆ. ಜನರನ್ನು ಅವರ ಪ್ರತಿಭೆ ಮೇಲೆ, ವ್ಯಕ್ತಿತ್ವದ ಮೇಲೆ ಗುರುತಿಸದೆ ಜಾತಿ ಆಧಾರದಲ್ಲಿ ಗುರುತಿಸಲಾಗುತ್ತಿದೆ. ಆದರೆ ಯಾರೂ ಕೂಡಾ ಜಾತಿ ಆಧಾರದಲ್ಲಿ ಸಮಾಜದಲ್ಲಿ ಪ್ರತಿಭಾವಂತ ಆಗಲು ಸಾಧ್ಯವಿಲ್ಲ. ಸರಿಯಾದ ಅವಕಾಶಗಳು ಸಿಕ್ಕಿದರೆ ಮಾತ್ರ ಪ್ರತಿಭಾವಂತ ಆಗಲು ಸಾಧ್ಯ. ಬಸವಾದಿ ಶರಣಗರು 800 ವರ್ಷಗಳ ಹಿಂದಯೇ ಸಮಾನತೆಗಾಗಿ ಸಾಮಾಜಿಕ ಕ್ರಾಂತಿಯನ್ನು ಮಾಡಿದರು. ಆದರೆ ಸಂಪೂರ್ಣ ಸಮ ಸಮಾಜ ನಿರ್ಮಾಣ ಇನ್ನೂ ಸಾಧ್ಯವಾಗಿಲ್ಲ.
ಪ್ರತಿಯೊಬ್ಬರಿಗೂ ಶಿಕ್ಷಣ ಹಾಗೂ ಆರ್ಥಿಕ ಸ್ವಾತಂತ್ರ್ಯ ಸಿಕ್ಕದರೆ ಮಾತ್ರ ಜಾತಿ ವ್ಯವಸ್ಥೆ ಹೋಗಬಹುದು. ಇದಕ್ಕಾಗಿಯೇ ಅರಸು ಅವರು ದಲಿತರು, ಮಹಿಳೆಯರು, ರೈತರು, ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಒತ್ತು ನೀಡಿದರು. ಮಲ ಹೊರುವ ಪದ್ಧತಿ ಸೇರಿದಂತೆ ಅನೇಕ ಅನಿಷ್ಟ ಪದ್ಧತಿಗಳನ್ನು ನಿರ್ಮೂಲನೆ ಮಾಡಿದರು.

 

ಎಲ್ಲರಿಗೂ ಸಮಾನ ಅವಕಾಶ ಸಿಗಲು ಹಾವನೂರು ಅವರ ಅಧ್ಯಕ್ಷತೆಯಲ್ಲಿ ಹಿಂದುಳಿದ ವರ್ಗದ ಆಯೋಗ ರಚನೆ ಮಾಡಿ, ಎಷ್ಟೇ ವಿರೋಧ ಇದ್ದರೂ ಆಯೋಗದ ಶಿಫಾರಸುಗಳನ್ನು ಜಾರಿ ಮಾಡಿದರು. ಇದರಿಂದ ಹಿಂದುಳಿದ ವರ್ಗದವರಿಗೆ ಶಿಕ್ಷಣದಲ್ಲಿ ಮೀಸಲಾತಿ ಸಾಧ್ಯವಾಯಿತು. ತಳ ಸಮುದಾಯದವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಬಲಗೊಳಿಸಲು ಎಷ್ಟೇ ವಿರೋಧ ಇದ್ದರೂ, ಜಾರಿಗೊಳಿಸಿದರು. ಹಿಂದುಳಿದವರಿಗೆ ಶೇ.38 ರಷ್ಟು ಮೀಸಲಾತಿ ಸಿಕ್ಕಿದ್ದರೆ ಅದಕ್ಕೆ ಅರಸು ಅವರೇ ಕಾರಣ.

ಹಿಂದುಳಿದವರನ್ನು ತುಳಿಯಲು ಈಗಲೂ ನಿರಂತರ ಹುನ್ನಾರಗಳು ನಡೆಯುತ್ತಿವೆ. ನಾನು ಮುಖ್ಯಮಂತ್ರಿ ಆದ ಮೇಲೆ ಬಡವರಿಗಾಗಿ, ಮಹಿಳೆಯರಿಗಾಗಿ, ರೈತರಿಗೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದೇವೆ. ಐದು ಗ್ಯಾರಂಟಿ ಯೋಜನೆಗಳು ಬಡವರು, ಮಹಿಳೆಯರು, ರೈತರು, ಯುವಕರ ಪರವಾಗಿದೆ. ಆದರೆ ಬದಲಾವಣೆ ಬಯಸದ, ಬಡವರ ವಿರೋಧಿ ಪಟ್ಟಭದ್ರರು ಇದನ್ನು ವಿರೋಧಿಸುತ್ತಿದಾರೆ.

ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯವನ್ನು ಕಲ್ಪಿಸುವ ನಿಟ್ಟಿನಲ್ಲಿ ದೇಶದಲ್ಲೇ ಮೊದಲ ಬಾರಿಗೆ ನಾವು ಜಾತಿ ಗಣತಿ ಮಾಡಿದ್ದೇವೆ. ಜಾತಿ ಗಣತಿ ಮಾಡದೆ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿ ಗತಿ ತಿಳಿಯಲು ಹಾಗೂ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಸಾಮಾಜಿಕ ನ್ಯಾಯ ಒದಗಿಸಲು ನಾವು ನಡೆಸುತ್ತಿರುವ ಪ್ರಯತ್ನಗಳಿಂದ ಹತಾಶರಾಗಿ ನನ್ನನ್ನು ರಾಜಕೀಯವಾಗಿ ಮುಗಿಸಲು ಹುನ್ನಾರ ಮಾಡುತ್ತಿದಾರೆ.

ನಾನು 1984ರಲ್ಲಿ ಮೊದಲ ಬಾರಿಗೆ ಮಂತ್ರಿಯಾದ ಬಳಿಕ ಕಳೆದ 40 ವರ್ಷಗಳಲ್ಲಿ ಇಂದಿನವರೆಗೆ ನನ್ನ ಜೀವನದಲ್ಲಿ ಯಾವುದೇ ಕಳಂಕವಿಲ್ಲ. ನಾನು ಯಾವುದೇ ತಪ್ಪು ಮಾಡದಿದ್ದರೂ ಈಗ ಕಪ್ಪು ಮಸಿ ಬಳಿಯಲು ನಿರಂತರ ಪ್ರಯತ್ನ ನಡೆಯುತ್ತಿದೆ. ಅಧಿಕಾರ ಇದ್ದರೂ, ಇಲ್ಲದಿದ್ದರೂ, ಸಾಮಾಜಿಕ ನ್ಯಾಯದ ವಿಷಯದಲ್ಲಿ, ನಂಬಿರುವ ಸಿದ್ಧಾಂತಗಳ ಕುರಿತು ಯಾವತ್ತೂ ರಾಜಿ ಮಾಡುವುದಿಲ್ಲ.

ಅರಸು ಅವರು ಉಳುವವನೇ ಭೂಮಿಯೊಡೆಯ ಎಂದು ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡಿ ಅಸಂಖ್ಯಾತ ಜನರಿಗೆ ಭೂಮಿಯ ಮಾಲಕತ್ವ ನೀಡಿದರು. ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಭೂಮಿಯ ಹಕ್ಕನ್ನು ಖಾತ್ರಿಪಡಿಸಲು 79 ಎ ಮತ್ತು ಬಿ ಗೆ ಮಾಡಿರುವ ತಿದ್ದುಪಡಿಯನ್ನು ಮತ್ತೆ ಸರಿಪಡಿಸಲಾಗುವುದು.

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಅನುದಾನವನ್ನು ಖರ್ಚು ಮಾಡಲು ಎಸ್‌ಸಿಪಿ/ಟಿಎಸ್‌ಪಿ ಕಾಯ್ದೆಗೆ ತಿದ್ದುಪಡಿ ತಂದದ್ದು ನಮ್ಮ ಸರ್ಕಾರ. ಕೇಂದ್ರದಲ್ಲಿ ಈ ರೀತಿಯ ಕಾಯ್ದೆಯನ್ನು ಜಾರಿಗೆ ತರದೇ ಇಲ್ಲಿ ಅನುಷ್ಠಾನದ ಬಗ್ಗೆ ವಿರೋಧ ಪಕ್ಷಗಳು ಟೀಕೆ ಮಾಡುತ್ತಿವೆ. ಈ ರೀತಿ ಟೀಕಿಸಲು ಅವರಿಗೆ ಯಾವುದೇ ನೈತಿಕ ಹಕ್ಕು ಇಲ್ಲ.

 

ದೇವರಾಜ ಅರಸು ಅವರಿಗೆ ಮರಣೋತ್ತರ ಭಾರತ ರತ್ನ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. ಎಲೆಕ್ಟ್ರಾನಿಕ್‌ ಸಿಟಿಗೆ ದೇವರಾಜ ಅರಸು ಎಲೆಕ್ಟ್ರಾನಿಕ್‌ ಸಿಟಿ ಎಂದು ನಾಮಕರಣ ಮಾಡಲಾಗುವುದು.

ಕರ್ನಾಟಕ ಏಕೀಕರಣ 1956 ನವಂಬರ್‌ 1 ರಂದೇ ಆಗಿದ್ದರೂ, 1973 ರಲ್ಲಿ ದೇವರಾಜ ಅರಸು ಅವರು ಕರ್ನಾಟಕ ಎಂದು ನಾಮಕರಣ ಮಾಡಿದರು. ಈ ಹಿನ್ನೆಲೆಯಲ್ಲಿಯೇ ನಾವು ಕರ್ನಾಟಕ ಸಂಭ್ರಮ ವರ್ಷಾಚರಣೆ ನಡೆಸುತ್ತಿದ್ದು, ನವೆಂಬರ್‌ನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಈ ಸಂದರ್ಭದಲ್ಲಿ ಕನ್ನಡ ಭುವನೇಶ್ವರಿ ಪ್ರತಿಮೆಯನ್ನು ವಿಧಾನಸೌಧ ಮುಂಭಾಗದಲ್ಲಿ ನವೆಂಬರ್‌ 1 ರಂದು ಅನಾವರಣಗೊಳಿಸಲಾಗುವುದು.

Continue Reading

State

ಸಿರಿಗೆರೆ ಮಠದ ವಿರುದ್ಧ ಸುಳ್ಳು ಆರೋಪ; , ರಕ್ತದಲ್ಲಿ ಸಹಿ ಸಂಗ್ರಹಿಸಿ ಮಠದ ವಿರೋಧಿಗಳಿಗೆ ತೊಡೆತಟ್ಟಿ ಖಡಕ್ ಎಚ್ಚರಿಕೆ ಕೊಟ್ಟ ಭಕ್ತರು

Published

on

ದಾವಣಗೆರೆ ಆ 20;ಸಿರಿಗೆರೆಯ ತರಳಬಾಳು ಬೃಹನ್ಮಠದ ವಿರುದ್ಧ ಸುಳ್ಳು ಆರೋಪ, ವದಂತಿ ಹಬ್ಬಿಸುವವರು ಹಾಗೂ ಆರೋಪ ಮಾಡುವ ಬಂಡವಾಳಶಾಹಿಗಳ ವಿರುದ್ಧ ತಾಲೂಕಿನ ಹೆಮ್ಮನಬೇತೂರು ಗ್ರಾಮದ ಸದ್ಭಕ್ತರು ತೊಡೆತಟ್ಟಿದ್ದಾರೆ. ಮಾತ್ರವಲ್ಲ, ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರೇ ಪೀಠಾಧಿಪತಿಗಳಾಗಿ ಮುಂದುವರಿಯಬೇಕು ಎಂದು ಒತ್ತಾಯಿಸಿ ರಕ್ತದಲ್ಲಿ ಸಹಿ ಚಳವಳಿ ನಡೆಸುವ ಮೂಲಕ ಮಠದ ವಿರೋಧಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.


ತಾಲೂಕಿನ ಹೆಮ್ಮನಬೇತೂರು ಗ್ರಾಮದ ಮಠದ ಸದ್ಭಕ್ತರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾ ಸ್ವಾಮೀಜಿ ಅವರೇ ಪೀಠದಲ್ಲಿ ಮುಂದುವರಿಯಬೇಕೆಂದು ಒಮ್ಮತದಿಂದ ನಿರ್ಣಯ ತೆಗೆದುಕೊಂಡು ರಕ್ತದಲ್ಲಿ ಸಹಿ ಮಾಡುವ ಮೂಲಕ ಮಠಕ್ಕೆ ಪತ್ರ ಕಳುಹಿಸಿಕೊಟ್ಟಿದ್ದಾರೆ.
ಯಾರ ಒತ್ತಡಕ್ಕೂ ಮಣಿಯದೇ ಸ್ವಯಂಪ್ರೇರಿತರಾಗಿ ನಾವೆಲ್ಲರೂ ಸಭೆ ನಡೆಸಿ ನಿರ್ಧಾರಕ್ಕೆ ಬಂದಿದ್ದೇವೆ. ಶ್ರೀಗಳ ವಿರುದ್ಧ ನಡೆಸುತ್ತಿರುವ ಪಿತೂರಿ ವಿರುದ್ದ ಹೋರಾಟಕ್ಕೆ ಸಿದ್ಧರಿದ್ದೇವೆ. ಸಮಾಜದಲ್ಲಿ ವಿನಾಕಾರಣ ಸುಳ್ಳು ಹೇಳುತ್ತಾ ಮಠದ ಹೆಸರು ಕೆಡಿಸಲು ಯತ್ನಿಸುತ್ತಿರುವವರು ಸುಮ್ಮನಿದ್ದರೆ ಒಳಿತು. ಇಲ್ಲದಿದ್ದರೆ ನಾವೂ ತಿರುಗೇಟು ನೀಡುವ ಕಾಲ ದೂರವಿಲ್ಲ ಎಂದು ಎಚ್ಚರಿಕೆ ನೀಡಿದರು.


ಇಂದು ಹಳ್ಳಿ ಹಳ್ಳಿಗಳಲ್ಲಿ ಎಲ್ಲಾ ಜನಸಾಮಾನ್ಯರು, ಪ್ರಜ್ಞಾವಂತ ಭಕ್ತರು ಪೂಜ್ಯರ ಮುಂದಾಳತ್ವದಲ್ಲಿ ಬಲಿಷ್ಠ ಸಮ ಸಮಾಜದ ಬೇಡಿಕೆಯನ್ನು ಇಟ್ಟು, ಯಾವ ಅಪಪ್ರಚಾರಕ್ಕೆ ಬಗ್ಗದೇ ಪರಮಪೂಜ್ಯರು ಆಶೀರ್ವಾದಪೂರ್ವಕ ಮಾರ್ಗದರ್ಶನ ನೀಡುತ್ತಿದ್ದಾರೆ. ಇಂತಹವರ ವಿರುದ್ಧ ಪಿತೂರಿ ನಡೆಸುವವರ ಬಗ್ಗೆ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ. ಇಷ್ಟು ದಿನ ಇಲ್ಲದ ಗೊಂದಲ, ಸುಳ್ಳು ಆರೋಪ, ಪಿತೂರಿ ಈಗ ಹೆಚ್ಚಾಗಿ ನಡೆಯುತ್ತಿದೆ. ನಾವೆಲ್ಲರೂ ಶ್ರೀಗಳ ಪರ ನಿಲ್ಲುವ ಮೂಲಕ ಸರಿಯಾದ ಉತ್ತರ ನೀಡೋಣ ಎಂದು ಗ್ರಾಮಸ್ಥರು ತಿಳಿಸಿದರು.


ಗ್ರಾಮದ ದೇವಾಲಯದಲ್ಲಿ ಗ್ರಾಮದ ಮುಖಂಡರು, ಭಕ್ತರೆಲ್ಲರೂ ಸೇರಿ ಶ್ರೀ ತರಳಬಾಳು ಬೃಹನ್ಮಠದ ಮೇಲೆ ಸುಳ್ಳು ಸುದ್ದಿ ಪಿತೂರಿ ಆರೋಪ ಮಾಡುವ ಬಂಡವಾಳಶಾಹಿಗಳ ವಿರುದ್ಧ ತೊಡೆ ತಟ್ಟಿ ನಿಲ್ಲೋಣ. ಜಗದ್ಗುರುಗಳವರ ದಿವ್ಯ ನೇತೃತ್ವದಲ್ಲಿ ಸಮಾಜ ಮುಂದುವರೆಯಲೆಂಬ ಆಶಯದೊಂದಿಗೆ ರಕ್ತದಲ್ಲಿ ಸಹಿ ಮಾಡಿ ನಿರ್ಣಯ ಕೈಗೊಂಡಿದ್ದೇವೆ. ಎಲ್ಲರೂ ಸಮ್ಮತಿಸಿ, ಒಮ್ಮತದಿಂದ ತೀರ್ಮಾನಿಸಿದ್ದೇವೆ ಎಂದು ಹೇಳಿದರು.ಸಿರಿಗೆರೆ ಮಠವು ಬೇರೆ ಮಠಗಳಂತೆ ಆಗಬಾರದು. ರಕ್ತದಲ್ಲಿ ಸಹಿ ಮಾಡಿ ಸ್ವಾಮೀಜಿಗಳು ಕೊನೆ ಉಸಿರು ಇರುವವರೆಗೂ ಮುಂದುವರಿಯಬೇಕು. ಹೆಮ್ಮಬೇತೂರು ಗ್ರಾಮ ಮಾತ್ರವಲ್ಲ, ಸುತ್ತಮುತ್ತಲಿನ ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿದ ಆಧುನಿಕ ಭಗೀರಥರು. ಎಷ್ಟೋ ಹಳ್ಳಿಗಳಲ್ಲಿ ಇಂದಿಗೂ ನೀರಾವರಿ ಸೌಲಭ್ಯ ಕಂಡಿದೆ ಅದು ಸಿರಿಗೆರೆ ಶ್ರೀಗಳಿಂದ ಆಗಿರುವ ಕಾರ್ಯದಿಂದ ಮಾತ್ರ. ಹಾಗಾಗಿ

ಶ್ರೀಗಳ ಬದಲಾವಣೆ ಮಾಡಬಾರದು ಎಂಬ ನಿರ್ಣಯ ತೆಗೆದುಕೊಂಡು ಶ್ರೀಗಳ ವಿರುದ್ಧ ಇರುವವರ ಷಡ್ಯಂತ್ರಕ್ಕೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ಗುಡುಗಿದರು.ಪರಮಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಕರಣಧಾರತ್ವದಲ್ಲಿ ಕಾರ್ಯಗತಗೊಂಡಿರುವ 20 ಕ್ಕೂ ಹೆಚ್ಚು ಏತನೀರಾವರಿ ಯೋಜನೆಗಳ ಅಡಿಯಲ್ಲಿ ಸಾವಿರಾರು ಕೆರೆಗಳಿಗೆ ನೀರು ತುಂಬಿಸುವ ಸತ್ಕಾರ್ಯ ಮಾಡಿದ್ದಾರೆ. ಸಮಾಜಮುಖಿ ನಿಸ್ವಾರ್ಥ ಮುಂದಾಳತ್ವ ಎಷ್ಟು ಅವಶ್ಯಕ, ಅದರಲ್ಲೂ ಸರಕಾರ ಕೈಗೊಳ್ಳುವ ಜನಪರ ಯೋಜನೆಗಳು ಪರಿಣಾಮಕಾರಿ ಅನುಷ್ಠಾನದ ವಿಚಾರದಲ್ಲಿ ಪರಮಪೂಜ್ಯರು ಮತ್ತು ಶ್ರೀ ಮಠದ ಕಾರ್ಯವೈಖರಿ ಒಂದು ಜಲ್ವಂತ ಉದಾಹರಣೆ ಎಂದು ಹೇಳಿದರು.ಸಭೆಯಲ್ಲಿ ಎಸ್. ಆರ್. ಪ್ರಕಾಶ್, ನಾಗರಾಜಪ್ಪ, ಎಸ್. ಎನ್. ಕಲ್ಲೇಶಪ್ಪ, ಎನ್. ಎಂ. ಪ್ರಸನ್ನ, ಎಸ್. ಬಸವರಾಜ್, ಬಿ. ಎಸ್. ಸಚಿನ್, ಪಂಪಣ್ಣ, ಸಿ. ಎಸ್. ಪ್ರಕಾಶ, ಹೆಚ್. ಆರ್. ಶಿವಕುಮಾರ, ಇ. ರಮೇಶ, ಕರಿಬಸಣ್ಣ, ಎಸ್. ಎಸ್. ಸೋಮಶೇಖರ್, ಯು. ಆರ್. ಎಸ್. ಶ್ರೀನಿವಾಸ್, ಜಿ ಎಸ್ ರಾಜಶೇಖರ್, ತಿಪ್ಪೇಸ್ವಾಮಿ, ಪರಿಶಿಷ್ಟ ಪಂಗಡ ಸಮಾಜದ ಮುಖಂಡ ಟಿ ಡಿ ರಮೇಶ್, ಬಕ್ಕೇಶ್ ಮತ್ತಿತರರು ಹಾಜರಿದ್ದರು.

Continue Reading

Trending

error: Content is protected !!