Kodagu
ಗ್ಯಾರಂಟಿ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಧರ್ಮಜ ಉತ್ತಪ್ಪ ಸಲಹೆ
ಮಡಿಕೇರಿ : ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವ ಸರ್ಕಾರಕ್ಕೆ ಮೂರು ವರ್ಷ ಪೂರ್ಣಗೊಂಡಿದ್ದು, ಪಂಚ ಗ್ಯಾರಂಟಿ ಯೋಜನೆಗಳು ಸೇರಿದಂತೆ ಭೂ ಗ್ಯಾರಂಟಿ ಯೋಜನೆಯನ್ನು ಸಹ ಜಾರಿಗೊಳಿಸಿದ್ದು, ಸರ್ಕಾರದ ಗ್ಯಾರಂಟಿ ಯೋಜನೆ ತಲುಪಿಸುವಲ್ಲಿ ಇನ್ನಷ್ಟು ಪ್ರಯತ್ನ ಮಾಡಬೇಕು ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ಅವರು ಸೂಚಿಸಿದ್ದಾರೆ.
ನಗರದ ಜಿ.ಪಂ.ಕೆಡಿಪಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಮೇಲ್ವಿಚಾರಣೆ ಸಂಬಂಧ ನಡೆದ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರ ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿದಿ ಹಾಗೆಯೇ ಭೂ ಒಡೆತನ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಪ್ರಗತಿಯತ್ತ ಸಾಗುತ್ತಿದೆ. ಜೊತೆಗೆ ಬಡ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡುತ್ತಿದ್ದು, ಆ ನಿಟ್ಟಿನಲ್ಲಿ ಸರ್ಕಾರದ ಕಾರ್ಯಕ್ರಮಗಳು ತಲುಪುವಂತಾಗಲು ಅಧಿಕಾರಿಗಳ ಕರ್ತವ್ಯ ಮಹತ್ತರ ಎಂದು ಧರ್ಮಜ ಉತ್ತಪ್ಪ ಅವರು ನುಡಿದರು.

ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗಿದೆ. ಜೊತೆಗೆ ಕೆಎಸ್‍ಆರ್‍ಟಿಸಿ ಬಲಪಡಿಸುವಲ್ಲಿಯೂ ಸಹ ಇದೊಂದು ಅತ್ಯುತ್ತಮ ಯೋಜನೆಯಾಗಿದೆ ಎಂದು ಧರ್ಮಜ ಉತ್ತಪ್ಪ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಗೃಹಲಕ್ಷ್ಮಿ ಯೋಜನೆಯಡಿ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವಲ್ಲಿ ಬೃಹತ್ ಆರ್ಥಿಕ ಕ್ರಾಂತಿ ಎಂದರೆ ತಪ್ಪಾಗಲಾರದು. ಗೃಹಲಕ್ಷ್ಮಿ ಯೋಜನೆಯಡಿ ನೀಡಲಾಗುವ 2 ಸಾವಿರ ರೂ. ಕುಟುಂಬದ ನಿರ್ವಹಣೆಗೆ ಸಹಕಾರಿಯಾಗಿದೆ ಎಂದು ಹೇಳಿದರು.
ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಮೂಲಕ ಸರ್ಕಾರ ಬಡ ಕುಟುಂಬದ ಜನರಿಗೆ ಅನುಕೂಲ ಮಾಡಿದೆ ಎಂದರು.
ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಆಹಾರ ಭದ್ರತೆಯನ್ನು ಖಾತರಿ ಪಡಿಸುವ ಅನ್ನಭಾಗ್ಯ ಯೋಜನೆಯು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಯೋಜನೆಯನ್ನು ಸಮರ್ಪಕವಾಗಿ ತಲುಪಿಸಬೇಕು ಎಂದರು.
ಯುವನಿಧಿ ಯೋಜನೆಯಡಿ ಪದವಿ ಹಾಗೂ ಡಿಪ್ಲೋಮಾ ಪೂರ್ಣಗೊಂಡ ಉದ್ಯೋಗ ಹುಡುಕಾಟದಲ್ಲಿರುವ ಯುವ ಸಮೂಹಕ್ಕೆ ಆರ್ಥಿಕ ಸ್ಥೈರ್ಯ ತುಂಬಲು ಈ ಯೋಜನೆ ಸಹಕಾರಿಯಾಗಿದ್ದು, ಎಲ್ಲಾ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ತಲುಪಿಸಿ, ಸರ್ಕಾರಕ್ಕೆ ಒಳ್ಳೆಯ ಹೆಸರು ತರುವಂತಾಗಬೇಕು ಎಂದು ಧರ್ಮಜ ಉತ್ತಪ್ಪ ಅವರು ಹೇಳಿದರು.
ಕಂದಾಯ ಇಲಾಖೆಯಲ್ಲಿ ಸಂಪೂರ್ಣ ಡಿಜಿಟಲೀಕರಣ ಮಾಡುವತ್ತ ಹೆಜ್ಜೆ ಇಡಲಾಗಿದ್ದು, ಆ ದಿಸೆಯಲ್ಲಿ ಭೂ ದಾಖಲೆಗಳಿಗೆ ಡಿಜಿಟಲ್ ಸ್ಪರ್ಶ ನೀಡುವಲ್ಲಿ ಕ್ರಾಂತಿಕಾರಕ ಹೆಜ್ಜೆ ಸರ್ಕಾರ ಇಟ್ಟಿದೆ. ಆಸ್ತಿ ಮತ್ತು ಆರ್‍ಟಿಸಿ ಆಧಾರ್ ಜೋಡಣೆ ಮೂಲಕ ನಕಲಿ ದಾಖಲೆ ಸೃಷ್ಟಿಗೆ ಕಡಿವಾಣ ಹಾಕಲಾಗಿದೆ. ಲ್ಯಾಂಡ್ ಬೀಟ್, ಇ-ಪೌತಿ ಖಾತೆ ಸೇರಿದಂತೆ ಕಂದಾಯ ಇಲಾಖೆಯಲ್ಲಿ ಹೊಸ ಬದಲಾವಣೆಗೆ ಕಂದಾಯ ಸಚಿವರು ಮುಂದಾಗಿದ್ದು, ಈ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿ ಮಾಹಿತಿ ನೀಡುವಂತಾಗಬೇಕು ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷರು ವಿವರಿಸಿದರು.
ಅಧಿಕಾರಕ್ಕೆ ಬಂದ ಮೂರು ವರ್ಷದಲ್ಲಿ ಜನ ಸಾಮಾನ್ಯರು, ಕೃಷಿಕರು, ಮಹಿಳೆಯರು, ಯುವಕರು ಮತ್ತು ಶ್ರಮಿಕರ ವರ್ಗದ ಕಲ್ಯಾಣಕ್ಕಾಗಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಅವುಗಳನ್ನು ತಲುಪಿಸುವಂತಾಗಬೇಕು ಎಂದು ಅವರು ನುಡಿದರು.
ಕೆಎಸ್‍ಆರ್‍ಟಿಸಿ ಘಟಕ ವ್ಯವಸ್ಥಾಪಕರು ಮಾಹಿತಿ ನೀಡಿ ಶಕ್ತಿ ಯೋಜನೆಯು ದಿನಾಂಕ 11/06/2023ರಂದು ಪ್ರಾರಂಭವಾಗಿರುತ್ತದೆ. ಒಟ್ಟು 1,66,47,567 ವಯಸ್ಕ ಮಹಿಳಾ ಪ್ರಯಾಣಿಕರು ಮತ್ತು 4,02,999 ಹೆಣ್ಣು ಮಕ್ಕಳು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿನಿಯರು ಸಂಸ್ಥೆಯ ವಾಹನದಲ್ಲಿ ಪ್ರಯಾಣಿಸಿ, ಯೋಜನೆಯ ಪ್ರಯೋಜನೆಯನ್ನು ಪಡೆದು ಕೊಂಡಿದ್ದಾರೆ. ಸರಾಸರಿ 16,348 ಪ್ರಯಾಣಿಕರು ಒಂದು ದಿನಕ್ಕೆ ಸಂಸ್ಥೆಯ ವಾಹನದಲ್ಲಿ ಪ್ರಯಾಣಿಸಿರುತ್ತಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಏಪ್ರಿಲ್ 2026 ಮಾಹೆಯವರೆಗೆ ಶೇ.32.65 ರಷ್ಟು ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ ಎಂದರು.
ಆಹಾರ ಇಲಾಖೆ ಉಪ ನಿರ್ದೇಶಕರಾದ ಭೀಮರಾಯ ಅವರು ಮಾಹಿತಿ ನೀಡಿದಿ ಜಿಲ್ಲೆಯಲ್ಲಿ 8,670 ಎಎವೈ (ಅಂತ್ಯೋದಯ) ಹಾಗೂ 97,284 ಬಿಪಿಎಲ್ (ಆದ್ಯತಾ) ಪಡಿತರ ಚೀಟಿಗಳು ಇವೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಎಎವೈ ಪ್ರತೀ ಪಡಿತರ ಚೀಟಿದಾರರಿಗೆ 35 ಕೆ.ಜಿ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತಿದೆ ಹಾಗೂ ಬಿಪಿಎಲ್ (ಅದ್ಯತಾ) ಪಡಿತರ ಚೀಟಿ ದಾರರ ಪ್ರತೀ ಸದಸ್ಯರಿಗೆ 10 ಕೆ.ಜಿ ಅಕ್ಕಿಯಂತೆ ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಒಟ್ಟು 1,05,954 ಪಡಿತರ ಚೀಟಿ ಕುಟುಂಬಗಳು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಗೃಹಲಕ್ಷ್ಮಿ ಯೋಜನೆಯಡಿ 1,17,905 ಫಲಾನುಭವಿಗಳಿಗೆ ಪ್ರತಿ ತಿಂಗಳು ತಲಾ 2,000 ರೂ.ನಂತೆ ಫೆಬ್ರವರಿವರೆಗೆ ಹಣ ಪಾವತಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಪ್ರಸನ್ನ ಕುಮಾರ್ ಅವರು ಮಾಹಿತಿ ನೀಡಿದರು.
ಗೃಹಜ್ಯೋತಿ ಯೋಜನೆಯಡಿ ಶೇ.99.1 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಸೆಸ್ಕ್ ಇಲಾಖೆ ಎಂಜಿನಿಯರ್ ಅವರು ಮಾಹಿತಿ ನೀಡಿದರು.
ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಮಂಜುನಾಥ್ ಅವರು ಮಾಹಿತಿ ನೀಡಿ 2026 ರ ಏಪ್ರಿಲ್ ಮಾಸಾಂತ್ಯಕ್ಕೆ 1850 ಪದವೀದರ ಫಲಾನುಭವಿಗಳಿಗೆ ಡಿಬಿಟಿ ಮೂಲಕ ಹಣ ಹಾಗೆಯೇ 30 ಡಿಪ್ಲೋಮಾ ಫಲಾನುಭವಿಗಳಿಗೆ ಸಹಾಯಧನ ಕಲ್ಪಿಸಲಾಗಿದೆ ಎಂದರು.
ಮಳೆಗಾಲದ ಸಂದರ್ಭದಲ್ಲಿ ತೋಟಗಳಲ್ಲಿ ಕೆಲಸ ನಿರ್ವಹಿಸುವವರ ಸುರಕ್ಷತೆಯನ್ನು ಕಾಪಾಡುವತ್ತ ಗಮನಹರಿಸಬೇಕು. ವಿದ್ಯುತ್ ಮಾರ್ಗದಲ್ಲಿ ಮರಗಿಡಗಳನ್ನು ಕಡಿಯುವುದು, ಕುಡಿಯುವ ನೀರು ಪೂರೈಕೆ, ಮತ್ತಿತರ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು ಎಂದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾದ ಕೆ.ಸಿ.ಭೀಮಯ್ಯ, ಪಿ.ಆರ್.ಪಂಕಜ, ನಾಸೀರ್, ಸದಸ್ಯರಾದ ಬಿ.ಡಿ.ಅಣ್ಣಯ್ಯ, ಕೆ.ಎಂ.ಬಶೀರ್, ಕೆ.ಎಂ.ಉಸ್ತಪ, ಪಿ.ಎಲ್.ಸುರೇಶ್, ಕೆ.ಜಿ.ಪೀಟರ್, ಕಾಂತರಾಜು, ಮಂದ್ರೀರ ಮೋಹನ್ ದಾಸ್, ಜಾನ್ಸನ್ ಪಿ.ವಿ., ಕಾಳಿಮಾಡ ಪ್ರಶಾಂತ್ ಇತರರು ತಮ್ಮ ವ್ಯಾಪ್ತಿಗೆ ಸಂಬಂಧಿಸಿಂತೆ ಹಲವು ಕುಂದುಕೊರತೆ ಬಗ್ಗೆ ಬೆಳಕು ಚೆಲ್ಲಿದರು. ಜಿ.ಪಂ.ಮುಖ್ಯ ಯೋಜನಾಧಿಕಾರಿ ಅಬ್ದುಲ್ ನಬೀ ಇದ್ದರು.
Kodagu
ಪಾಳುಬಿದ್ದ ಶ್ರೀ ಮಲೆಯಚ್ಚ ಅಯ್ಯಪ್ಪ ದೇವಸ್ಥಾನ ಜೀರ್ಣೋದ್ದಾರಕ್ಕೆ ಚಾಲನೆ
ಪೊನ್ನಂಪೇಟೆ : ದಕ್ಷಿಣ ಕೊಡಗಿನ ಕುತ್ತ್ ನಾಡಿನ ಕುಟ್ಟಂದಿ ಗ್ರಾಮದ ಕೊಡಕೇರಿಯಲ್ಲಿರುವ ಮಲೆಯಚ್ಚ (ಮಚ್ಚಂಗಾಡ್ ದೇವ) ಎಂದೇ ಪ್ರಸಿದ್ಧಿ ಪಡೆದ ಸುಮಾರು 700 ವರ್ಷಗಳ ಪುರಾತನ ಶ್ರೀ ಅಯ್ಯಪ್ಪ ದೇವಸ್ಥಾನವು ಕಾಲದ ಹೊಡೆತಕ್ಕೆ ಸಿಲುಕಿ ಕಳೆದ 500 ವರ್ಷಗಳಿಂದ ಪೂಜೆ-ಪುನಸ್ಕಾರಗಳಿಲ್ಲದೆ ಪಾಳುಬಿದ್ದಿದ್ದು, ಇದೀಗ ದೇವಸ್ಥಾನದ ಜೀರ್ಣೋದ್ದಾರ ಕಾರ್ಯಕ್ಕೆ ಅಧಿಕೃತ ಚಾಲನೆ ನೀಡಲಾಗಿದೆ.
ಒಂದು ಕಾಲದಲ್ಲಿ ಭಕ್ತರ ಆರಾಧನೆ, ಪೂಜೆ ಹಾಗೂ ಮಂಗಳಘೋಷಗಳಿಂದ ಕಂಗೊಳಿಸುತ್ತಿದ್ದ ಈ ಪವಿತ್ರ ಕ್ಷೇತ್ರ ಇಂದು ನಿಶ್ಯಬ್ದವಾಗಿ ಉಳಿದಿದೆ. ದೇವಸ್ಥಾನವು ಕೇವಲ ಕಲ್ಲು-ಮಣ್ಣಿನ ಕಟ್ಟಡವಾಗಿರದೇ, ಪೂರ್ವಜರ ನಂಬಿಕೆ, ಧಾರ್ಮಿಕ ಸಂಪ್ರದಾಯ, ಶ್ರದ್ಧೆ ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿ ಗುರುತಿಸಿಕೊಂಡಿದೆ. ಹಲವು ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಈ ಐತಿಹಾಸಿಕ ಕ್ಷೇತ್ರವನ್ನು ಪುನಃ ಭಕ್ತರ ಆರಾಧನಾ ಕೇಂದ್ರವನ್ನಾಗಿ ರೂಪಿಸುವ ಉದ್ದೇಶದಿಂದ ಕೊಡಕೇರಿ–ಕುಟ್ಟಂದಿ ಗ್ರಾಮ ಸಮಿತಿ ಹಾಗೂ ಧಾರ್ಮಿಕ ಮುಖಂಡರು ಜೀರ್ಣೋದ್ದಾರ ಕಾರ್ಯಕ್ಕೆ ಮುಂದಾಗಿದ್ದಾರೆ.
ದೇವಸ್ಥಾನದ ಪುನರ್ ನಿರ್ಮಾಣವನ್ನು ಶಾಸ್ತ್ರೋಕ್ತವಾಗಿ ಕೈಗೊಳ್ಳಲಾಗುತ್ತಿದ್ದು, ಗರ್ಭಗುಡಿ, ಪ್ರಾಕಾರ, ರಾಜಗೋಪುರ ಹಾಗೂ ಸುತ್ತಮುತ್ತಲಿನ ಆವರಣವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಈ ಕಾಮಗಾರಿಗೆ ಅಂದಾಜು ರೂ.45 ಲಕ್ಷ ವೆಚ್ಚವಾಗಲಿದೆ ಎಂದು ಜೀರ್ಣೋದ್ದಾರ ಸಮಿತಿ ಮಾಹಿತಿ ನೀಡಿದೆ.

ಇದು ಒಂದು ಗ್ರಾಮ ಅಥವಾ ಒಂದು ಸಂಘಟನೆಯಿಂದ ಮಾತ್ರ ಪೂರ್ಣಗೊಳ್ಳುವ ಕಾರ್ಯವಲ್ಲ. ಸನಾತನ ಧರ್ಮ, ಹಿಂದೂ ಸಂಸ್ಕೃತಿ ಹಾಗೂ ಪೂರ್ವಜರ ಪರಂಪರೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಮಹತ್ತರ ಉದ್ದೇಶ ಹೊಂದಿರುವ ಈ ಕಾರ್ಯಕ್ಕೆ ಪ್ರತಿಯೊಬ್ಬ ಭಕ್ತನ ಸಹಕಾರ ಅಗತ್ಯವಾಗಿದೆ ಎಂದು ಸಮಿತಿ ಮನವಿ ಮಾಡಿದೆ.
“ದೇವಾಲಯ ನಿರ್ಮಾಣವು ಸಾವಿರ ಯಜ್ಞಗಳ ಫಲ” ಎಂಬ ಶಾಸ್ತ್ರ ವಚನದಂತೆ, ಭಕ್ತರು ತಮ್ಮ ಶಕ್ತಾನುಸಾರ ದೇಣಿಗೆ ಹಾಗೂ ಸಹಾಯ ನೀಡಿ ಈ ಪುರಾತನ ದೇವಸ್ಥಾನವನ್ನು ಮತ್ತೆ ಜೀವಂತ ಆರಾಧನಾ ಕೇಂದ್ರವನ್ನಾಗಿ ರೂಪಿಸಲು ಕೈಜೋಡಿಸಬೇಕು ಎಂದು ಕೋರಲಾಗಿದೆ.
ಮಲೆಯಚ್ಚ ದೇವಸ್ಥಾನ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಚೇರಂಡ ರವಿ ಬಿದ್ದಪ್ಪ ನೇತೃತ್ವದಲ್ಲಿ ಉಪಾಧ್ಯಕ್ಷ ಕರ್ತಮಾಡ ತರುಣ್, ಕಾರ್ಯದರ್ಶಿ ಕಳ್ಳಿಚಂಡ ಸಂಪತ್ ನಾಚಪ್ಪ, ಖಜಾಂಚಿ ಚೇರಂಡ ನಾಚಪ್ಪ ಸೇರಿದಂತೆ ಚೇರಂಡ ಕೀರ್ತಿ ತಿಮ್ಮಯ್ಯ, ಚೇರಂಡ ದರ್ಶನ್ ದೇವಯ್ಯ, ಕರ್ತಮಾಡ ಪ್ರೇಮ, ಕರ್ತಮಾಡ ಪುನೀತ್, ಚೇರಂಡ ಮೋಟಯ್ಯ, ಕರ್ತಮಾಡ ನಿಕಿಲ್, ಚೇರಂಡ ರೋಷನ್, ಚೇರಂಡ ಕಿರಣ್ ಹಾಗೂ ಚೇರಂಡ ನಿಕಿಲ್ ಸೇರಿದಂತೆ ಸದಸ್ಯರು ಗ್ರಾಮಸ್ಥರೊಂದಿಗೆ ಸೇರಿ ಕಾರ್ಯನಿರ್ವಹಿಸುತ್ತಿದ್ದಾರೆ.
ದೇಣಿಗೆ ನೀಡಲು ಆಸಕ್ತರು ಮೊಬೈಲ್ ಸಂಖ್ಯೆ 9449181937, 9964029762, 9480605103 ಅನ್ನು ಸಂಪರ್ಕಿಸಬಹುದಾಗಿದೆ. ಬ್ಯಾಂಕ್ ಖಾತೆ: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ವೀರಾಜಪೇಟೆ ಶಾಖೆ, ಖಾತೆ ಸಂಖ್ಯೆ: 000822010001823, IFSC: UBIN0900087.
Kodagu
ಅಂಗಡಿಯಲ್ಲಿ ಕಳ್ಳತನ: ಇಬ್ಬರು ಅಪರಿಚಿತರಿಂದ ಕೃತ್ಯ
ಸಿದ್ದಾಪುರ: ಪಟ್ಟಣದ ಮಡಿಕೇರಿ ರಸ್ತೆಯಲ್ಲಿರುವ ಪಿ.ಆರ್. ಟ್ರೇಡರ್ಸ್ ಎಂಬ ಫ್ಲೈವುಡ್ ಮಾರಾಟದ ಅಂಗಡಿಯಲ್ಲಿ ₹ 50 ಸಾವಿರ ನಗದು ಕಳ್ಳತನವಾಗಿರುವ ಘಟನೆ ನಡೆದಿದ್ದು, ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಗಡಿಯ ವ್ಯವಸ್ಥಾಪಕರಾದ ನೆಲ್ಯಹುದಿಕೇರಿ ಗ್ರಾಮದ ಎಂ.ಜಿ. ಕಾಲೋನಿ ನಿವಾಸಿ ಅಜೀಜ್ ಪಿ.ಸಿ. (58) ನೀಡಿದ ದೂರಿನಂತೆ, ಅವರು ಕಳೆದ ಸುಮಾರು 13 ವರ್ಷಗಳಿಂದ ಪಿ.ಆರ್. ಟ್ರೇಡರ್ಸ್ನಲ್ಲಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮೇ 25 ರಂದು ಬೆಳಿಗ್ಗೆ ಸುಮಾರು 11 ಗಂಟೆ ವೇಳೆಗೆ ಇಬ್ಬರು ಅಪರಿಚಿತರು ಅಂಗಡಿಗೆ ಬಂದು ಮರದ ಬೀಡಿಂಗ್ ಮತ್ತು ಪ್ಲೈವುಡ್ ಬೇಕೆಂದು ಕೇಳಿದ್ದಾರೆ. ತಾವು ಮಡಿಕೇರಿ ರಸ್ತೆಯ ಪೆಟ್ರೋಲ್ ಬಂಕ್ ಸಮೀಪದ ಕೆಲಸಕ್ಕಾಗಿ ಸಾಮಗ್ರಿ ಬೇಕಾಗಿದೆ ಎಂದು ತಿಳಿಸಿದ್ದಾರೆ. ಬಳಿಕ ಅವರು ಎಸ್.ಎಚ್. ಫೆವಿಕೋಲ್ ಡಬ್ಬವನ್ನು ಖರೀದಿಸಿ ₹500 ನೀಡಿದ್ದು, ಅದರ ಉಳಿದ ₹310 ಹಣವನ್ನು ವ್ಯವಸ್ಥಾಪಕರು ವಾಪಸ್ ನೀಡಿದ್ದಾರೆ.

ನಂತರ ಅವರು ಕೇಳಿದ ಮರದ ಬೀಡಿಂಗ್ ತೆಗೆಯಲು ವ್ಯವಸ್ಥಾಪಕರು ಹೋದ ವೇಳೆ, ಆರೋಪಿಗಳು ಅವರ ಗಮನವನ್ನು ಬೇರೆಡೆ ಸೆಳೆದು ಗಲ್ಲದ ಪೆಟ್ಟಿಗೆಯ ಕೀ ಕದ್ದು, ಅದರಲ್ಲಿದ್ದ ₹50 ಸಾವಿರ ನಗದು ಹಣವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಘಟನೆ ಕುರಿತು ಅಜೀಜ್ ಪಿ.ಸಿ. ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಈ ಪ್ರಕರಣವನ್ನು ಸಿದ್ದಾಪುರ ಪೊಲೀಸ್ ಠಾಣೆಯ ಎಎಸ್ಐ ಮಂಜುನಾಥ್ ಎಚ್.ಕೆ. ದಾಖಲಿಸಿಕೊಂಡಿದ್ದಾರೆ.
Kodagu
ಶಿಕ್ಷಣದೊಂದಿಗೆ ಕ್ರೀಡೆಯಲ್ಲೂ ಕೀರ್ತಿ ಗಳಿಸಿ : ಬಿ.ಎಸ್.ಅಂಕಿತಾ ಕರೆ
ಮಡಿಕೇರಿ : ವಿದ್ಯಾರ್ಥಿಗಳು ಶಿಕ್ಷಣದಂತೆ ಕ್ರೀಡೆಗೂ ಮಹತ್ವ ನೀಡಿ ಕ್ರೀಡಾ ಕ್ಷೇತ್ರದಲ್ಲಿ ಕೀರ್ತಿ ಗಳಿಸಬೇಕು ಎಂದು ಭಾರತೀಯ ಮಹಿಳಾ ಹಾಕಿ ತಂಡದ ತರಬೇತುದಾರರಾದ ಅಂಕಿತಾ ಬಿ.ಎಸ್ ಕರೆ ನೀಡಿದ್ದಾರೆ.
ನಗರದ ಕೊಡಗು ವಿಶ್ವ ವಿದ್ಯಾನಿಲಯದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಸಭಾಂಗಣದಲ್ಲಿ ನಡೆದ “ಕ್ರೀಡೆ ಮತ್ತು ಪ್ರತಿಭೋತ್ಸವ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆಯಬೇಕು, ಶಿಕ್ಷಣದೊಂದಿಗೆ ಕ್ರೀಡೆಯಲ್ಲೂ ತೊಡಗಿಸಿಕೊಂಡು ಕ್ರೀಡಾ ಪ್ರತಿಭೆಯನ್ನು ಅನಾವರಣಗೊಳಿಸಬೇಕು. ಶಾಲಾ ಕಾಲೇಜುಗಳಲ್ಲಿ ನಡೆಯುವ ಕ್ರೀಡಾಕೂಟಗಳು ವಿದ್ಯಾರ್ಥಿಗಳಲ್ಲಿ ಸ್ಫೂರ್ತಿಯನ್ನು ತುಂಬುತ್ತವೆ. ಕ್ರೀಡೆಯಲ್ಲಿ ಪಾಲ್ಗೊಂಡು ಸಾಧನೆ ಮಾಡುವ ಮೂಲಕ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲೂ ವಿದ್ಯಾರ್ಥಿಗಳು ಕೀರ್ತಿ ಗಳಿಸಬೇಕು ಎಂದರು.

ಶೈಕ್ಷಣಿಕವಾಗಿ ಓದಿಗೆ ಕೊನೆ ಎಂಬುವುದೇ ಇಲ್ಲ, ಕ್ರೀಡೆಯಲ್ಲಿ ತೊಡಗಿಸಿಕೊಂಡೇ ಹೆಚ್ಚು ಹೆಚ್ಚು ಓದಬಹುದು. ಕ್ರೀಡಾಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಗೌರವ ದೊರೆತಾಗ ಕಾಲೇಜು ದಿನಗಳಲ್ಲಿ ತೋರಿದ ಕ್ರೀಡಾ ಪ್ರತಿಭೆಯ ನೆಪಾಗುವುದು ಸಹಜ. ಕ್ರೀಡಾಪಟುಗಳಿಗೆ ಕ್ರೀಡಾಕೂಟಗಳು ಹಬ್ಬವಿದ್ದಂತೆ, ಕ್ರೀಡೆಗಳಿಂದಲೂ ಸುಂದರ ಜೀವನವನ್ನು ರೂಪಿಸಿಕೊಳ್ಳಬಹುದು ಎಂದು ಅಂಕಿತಾ ಬಿ.ಎಸ್ ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ನ ಪ್ರಾಂಶುಪಾಲ ಮೇಜರ್ ಪ್ರೊ.ರಾಘವ ಬಿ. ಅವರು ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತ್ತಿರಬೇಕು ಮತ್ತು ಮಾದರಿಯಾಗಿರಬೇಕು ಎಂದು ಕಿವಿಮಾತು ಹೇಳಿದರು.
ಶೈಕ್ಷಣಿಕ ಜೀವನದಲ್ಲಿ ಪರಿಶ್ರಮದಿಂದ ಮಾತ್ರ ಗುರಿ ಮತ್ತು ಕನಸನ್ನು ಸಾಧಿಸಲು ಸಾಧ್ಯ. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಾಧನೆ ಹಾಗೂ ಪ್ರತಿಭೆಯ ಮೂಲಕವೇ ನಕ್ಷತ್ರದಂತೆ ಹೊಳೆಯಬೇಕು. ಆತ್ಮವಿಶ್ವಾಸವನ್ನು ಬೆಳೆಸಿಕೊಂಡು ಜೀವನದಲ್ಲಿ ಸಾರ್ಥಕತೆಯನ್ನು ಕಂಡುಕೊಳ್ಳಬೇಕು. ವಿದ್ಯಾರ್ಥಿ ಜೀವನದ ಉತ್ತಮ ಸಾಧನೆ ತಂದೆ, ತಾಯಿ, ಬಂಧು ಬಳಗದಲ್ಲಿ ಖುಷಿಯನ್ನು ತಂದು ಕೊಡುತ್ತದೆ, ಇದನ್ನು ಸಮಾಜ ಸದಾ ನೆನಪಿಸಿಕೊಳ್ಳುತ್ತದೆ.
ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬುವ ಮೂಲಕವೇ ನಾಯಕತ್ವದ ಗುಣವನ್ನು ಬೆಳೆಸುವ ಕಾರ್ಯವನ್ನು ಫೀ.ಮಾ.ಕಾರ್ಯಪ್ಪ ಕಾಲೇಜು ಮಾಡುತ್ತಿದೆ. ಇಲ್ಲಿರುವ ಬೋಧಕ ಹಾಗೂ ಬೋಧಕೇತರ ಎಲ್ಲಾ ಸಿಬ್ಬಂದಿಗಳು ಒಗ್ಗಟ್ಟನಿಂದ ಕಾರ್ಯ ನಿರ್ವಹಿಸಿ ಕಾಲೇಜ್ ನ ಕೀರ್ತಿ ಹೆಚ್ಚುವಂತೆ ಮಾಡಿದ್ದಾರೆ. ಹಳೆಯ ವಿದ್ಯಾರ್ಥಿಗಳ ಸಂಘ ಸೇರಿದಂತೆ ದಾನಿಗಳ ಸಹಕಾರವೂ ಕಾಲೇಜ್ ಗೆ ದೊರೆಯುತ್ತಿದೆ. ಪ್ರತಿಯೊಬ್ಬ ವ್ಯಕ್ತಿ ಸಮಾಜದಲ್ಲಿ ಅಳಿಲು ಸೇವೆಯನ್ನಾದರೂ ಮಾಡುವ ಮೂಲಕ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಮೇಜರ್ ಪ್ರೊ.ರಾಘವ ಬಿ. ಅವರು ಕರೆ ನೀಡಿದರು.
ಕಾಲೇಜ್ ಗೆ ಸೇರಿದ ಆಸ್ತಿಯನ್ನು ಮುಂದಿನ ವಿದ್ಯಾರ್ಥಿಗಳಿಗಾಗಿ ಸಂರಕ್ಷಿಸಬೇಕು, ಪರಿಸರ ಕಾಳಜಿ ತೋರಬೇಕು. ಕಾಲೇಜ್ ನಲ್ಲಿ ಲಭ್ಯವಿರುವ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ನ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಸೋಲು ಪಾಠವನ್ನು ಕಲಿಸುತ್ತದೆ, ಗೆಲುವಿನ ಮೆಟ್ಟಿಲಾಗುತ್ತದೆ. ಗೆದ್ದವರಿಗೆ ಅಹಂಕಾರ ಬಂದರೆ ಅದು ಅಪಾಯಕಾರಿ ಎಂದು ಅಭಿಪ್ರಾಯಪಟ್ಟರು.
ಗುರಿ ಇದ್ದರೆ ಮಾತ್ರ ಸಾಧನೆ ಸಾಧ್ಯ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದೊಂದು ರೀತಿಯ ಪ್ರತಿಭೆ ಇರುತ್ತದೆ. ಇದರ ಅನಾವರಣಕ್ಕೆ ಕಾಲೇಜು ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಿದೆ. ಕಾಲೇಜ್ ನ ಕ್ರೀಡೋತ್ಸವಗಳು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಸಾಧನೆಗೆ ಮೊದಲ ಹೆಜ್ಜೆಯಾಗಿದೆ ಹಾಗೂ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿಯನ್ನು ತುಂಬುತ್ತದೆ. ಗುರಿ, ಕನಸು ಮತ್ತು ಶಿಸ್ತು ಇದ್ದಾಗ ಮಾತ್ರ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಲಭಿಸಲು ಸಾಧ್ಯ ಎಂದರು.
ಫೀ.ಮಾ.ಕಾರ್ಯಪ್ಪ ಕಾಲೇಜ್ ನ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲಿ ಕೊರತೆ ಆಗಬಾರದು ಎನ್ನುವ ಉದ್ದೇಶದಿಂದ ಪ್ರಾಂಶುಪಾಲರು ಪರಿಶ್ರಮ ವಹಿಸಿ ಅಗತ್ಯ ಸೌಲಭ್ಯಗಳನ್ನು ಮತ್ತು ಕಾರ್ಯಕ್ರಮಗಳನ್ನು ಒದಗಿಸುತ್ತಿದ್ದಾರೆ. ವಿದ್ಯಾರ್ಥಿಗಳು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬೊಳ್ಳಜಿರ ಬಿ.ಅಯ್ಯಪ್ಪ ಕರೆ ನೀಡಿದರು.
ಕೊಡಗು ವಿಶ್ವ ವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ವಿಶೇಷ ಅಧಿಕಾರಿ ಮೇಚಿರ ರವಿಶಂಕರ್ ನಾಣಯ್ಯ, ಸಹಪಠ್ಯ ಚಟುವಟಿಕೆ ವಿಭಾಗದ ಸಂಚಾಲಕಿ ಡಾ.ಹೆಚ್.ಕೆ.ರೇಣು ವಿದ್ಯಾರ್ಥಿ ಸಂಘದ ಸಲಹೆಗಾರ ಪ್ರೊ.ಶ್ರೀಧರ ಹೆಗಡೆ, ಕ್ರೀಡಾ ವಿಭಾಗದ ಸಂಯೋಜಕ ಡಾ.ತಳವಾರ ಬಿ.ಹೆಚ್, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಸಾಂಸ್ಕೃತಿಕ ಕಾರ್ಯದರ್ಶಿಗಳು, ಎನ್‌ಎಸ್‌ಎಸ್ ನಾಯಕರು, ಬೋಧಕ, ಬೋಧಕೇತರ ಸಿಬ್ಬಂದಿಗಳು ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ಸನ್ಮಾನ
ಭಾರತೀಯ ಮಹಿಳಾ ಹಾಕಿ ತಂಡದ ತರಬೇತುದಾರರಾದ ಅಂಕಿತಾ ಬಿ.ಎಸ್, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ನ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಹಾಗೂ ಸಮಾಜ ಸೇವಕ ಪ್ರಸನ್ನ ಭಟ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
* ವಾರ್ಷಿಕೋತ್ಸವ*
ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿದ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನ ವಿತರಿಸಿದರು. ವಿವಿಧ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಗೆದ್ದವರಿಗೆ ಮೇ ೨೬ ರಂದು ನಡೆಯುವ ಕಾಲೇಜು ವಾರ್ಷಿಕೋತ್ಸವದಲ್ಲಿ ಬಹುಮಾನ ವಿತರಿಸಲಾಗುವುದು. ಕೊಡಗು ವಿವಿ ಕುಲಪತಿ ಪ್ರೊ.ಅಶೋಕ್ ಸಂಗಪ್ಪ ಆಲೂರು ಅವರ ಅಧ್ಯಕ್ಷತೆಯಲ್ಲಿ ನಡೆಯುವ ವಾರ್ಷಿಕೋತ್ಸವವನ್ನು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರು ಉದ್ಘಾಟಿಸಲಿದ್ದಾರೆ.
-
State18 hours agoಗೃಹಲಕ್ಷ್ಮೀ ಯೋಜನೆಯಲ್ಲಿ ಬದಲಾವಣೆ
-
Kodagu23 hours agoದಿ ಮೈಸೂರು ಕಾಫಿ ಸಂಸ್ಕರಣ ಮಾರಾಟ ಮತ್ತು ಉಗ್ರಾಣ ಸಹಕಾರ ಸಂಘದ ಸಭೆ
-
Hassan21 hours agoಜಿಲ್ಲಾಧಿಕಾರಿಯ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಪದಾಧಿಕಾರಿಗಳಿಂದ ತಹಸೀಲ್ದಾರ್ಗೆ ಮನವಿ
-
Hassan2 hours ago2025-26ರ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ : ಫುಟ್ಬಾಲ್ನಲ್ಲಿ ಹಾಸನ ಜಿಲ್ಲೆಗೆ ರನ್ನರ್-ಅಪ್ ಗೌರವ
-
Chamarajanagar20 hours agoಮಾಸಾಶನ ಪಡೆಯುತ್ತಿರುವ ಸಾಹಿತಿ, ಕಲಾವಿದರು ಜೀವಿತ ಪ್ರಮಾಣ ಪತ್ರ ಸಲ್ಲಿಸಲು ಮನವಿ
-
Mysore7 hours agoಮೈಸೂರಿನಲ್ಲಿ ಸಿಡಿಲು ಬಡಿದು ಮಡಿಕೇರಿಯ ಹೊಸೊಕ್ಲು ರೋಷನ್ ಬಾಲಕೃಷ್ಣ (43) ನಿಧನ .
-
Hassan24 minutes ago“ರಾಜ್ಯದ ಸಾಲ ₹10 ಲಕ್ಷ ಕೋಟಿ ತಲುಪಲಿದೆ”: ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ
-
Kodagu21 hours agoಬೇಡು ಹಬ್ಬ : ಮದ್ಯ ಮಾರಾಟ ನಿಷೇಧ
