Special
ಅನುದಾನ ಲಭ್ಯತೆ ಅನುಸಾರ ಯಗಚಿ ಎಡದಂಡೆ ನಾಲೆಗಳ ಭೂಸ್ವಾಧೀನ: ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು: “ಅನುದಾನ ಲಭ್ಯತೆ ಅನುಸಾರ ಯಗಚಿ ಎಡದಂಡೆ ನಾಲೆಗಳ ಭೂಸ್ವಾಧೀನ ಪ್ರಕ್ರಿಯೆಯನ್ನು ಹಂತ ಹಂತವಾಗಿ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ವಿಧಾನಸಭೆ ಗಮನ ಸೆಳೆವ ಸೂಚನೆ ವೇಳೆ ಬಿಜೆಪಿ ಶಾಸಕರಾದ ಸಿಮೆಂಟ್ ಮಂಜು ಅವರು ಯಗಚಿ ಜಲಾಶಯದ ಎಡದಂಡೆ ನಾಲೆಗಳ ಲ್ಯಾಟರಲ್, ಮೈನರ್ ಗಳು ಹಾಗೂ ಮೊಸಳೆ ಶಾಖಾ ನಾಲೆಯ ಭೂಸ್ವಾಧೀನ ಕೈಗೊಳ್ಳದಿರುವ ಬಗ್ಗೆ ಪ್ರಸ್ತಾಪ ಮಾಡಿದರು. ಜಲಸಂಪನ್ಮೂಲ ಸಚಿವರೂ ಆಗಿರುವ ಶಿವಕುಮಾರ್ ಅವರು ಇದಕ್ಕೆ ಸೋಮವಾರ ಉತ್ತರ ನೀಡಿದರು.
“ಹಾಸನ ಜಿಲ್ಲೆಯ ಬೇಲೂರು, ಹಾಸನ, ಆಲೂರು ತಾಲ್ಲೂಕುಗಳ 37 ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ಹಿಂಗಾರು ಬೆಳೆಗಳಿಗೆ ನೀರಾವರಿ ಕಲ್ಪಿಸಲು ಯಗಚಿ ಎಡದಂಡೆ ಯೋಜನೆ ಮಾಡಲಾಗಿದೆ. ಯಗಚಿ ಮುಖ್ಯ ನಾಲೆಯ 54ರಿಂದ 84ರ ವ್ಯಾಪ್ತಿಯಲ್ಲಿ 12,427 ಎಕರೆ ಅಚ್ಚುಕಟ್ಟು ಪ್ರದೇಶವಿದ್ದು, 262 ಎಕರೆ 28 ಗುಂಟೆ ಜಮೀನು ಭೂಸ್ವಾಧೀನವಾಗಿದ್ದು, ಭೂಮಾಲೀಕರಿಗೆ ಪರಿಹಾರ ನೀಡಲಾಗಿದೆ. ಯಗಚಿ ಎಡದಂಡೆ ಮುಖ್ಯ ನಾಲೆ ಮತ್ತು ವಿತರಣ ನಾಲೆ ಸಂಖ್ಯೆ 71ರಿಂದ 84ರವರೆಗೆ ಹಾಗೂ ಮೊಸಳೆ ನಾಲೆಗಳಿಗೆ ಸಂಬಂಧಿಸಿದಂತೆ ಒಟ್ಟು 286 ಎಕರೆ 22.5 ಗುಂಟೆ ಜಮೀನುಗಳಿಗೆ ಭೂಪರಿಹಾರ ನೀಡಲು 60 ಕೋಟಿಗಳಷ್ಟು ಅನುದಾನ ಅಗತ್ಯವಿದ್ದು, ಅನುದಾನ ಲಭ್ಯತೆ ಅನುಗುಣವಾಗಿ ಹಂತ ಹಂತವಾಗಿ ಹಣ ಬಿಡುಗಡೆ ಮಾಡಲು ಕ್ರಮವಹಿಸಲಾಗಿದೆ” ಎಂದು ತಿಳಿಸಿದರು.

ಹೊಸದಾಗಿ ಬಂದಿರುವ ಮಂಜು ಅವರ ಧ್ವನಿಗೆ ಬೆಂಬಲ ನೀಡುತ್ತೇನೆ
ಈ ವೇಳೆ ಮಾತನಾಡಿದ ರೇವಣ್ಣ ಅವರು ಮಾತನಾಡಿ ಈ ನಾಲೆಯಲ್ಲಿ ಆರಂಭಿಕ 5 ಕಿ.ಮೀವರೆಗೂ ನಾಲೆ ಆಗಿಲ್ಲ ಆದಷ್ಟು ಬೇಗ ಅನುದಾನ ಕೊಡಿಸಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ಈ ಭೂಸ್ವಾಧೀನ ಪ್ರಕ್ರಿಯೆ ಶುರುವಾಗಿದ್ದು ಯಾವಾಗ? ಸಿಮೆಂಟ್ ಮಂಜು ಅವರ ಮನವಿ ಆದ್ಯತೆ ಮೇರೆಗೆ ಕೈಗೊಳ್ಳುತ್ತೇವೆ. ರೇವಣ್ಣ ಅವರು ಐದಾರು ಬಾರಿ ಶಾಸಕರಾಗಿ, ಮಂತ್ರಿಯಾಗಿದ್ದಾರೆ. ಅವರ ತಂದೆ ನೀರಾವರಿ ಸಚಿವರಾಗಿದ್ದರು, ಪಿಡಬ್ಲ್ಯೂಡಿ ಸಚಿವರಾಗಿದ್ದರು. ಅವರು ಇಡೀ ಜಿಲ್ಲೆ ನಡೆಸಿದ್ದಾರೆ. ಮಂಜು ಅವರು ಹೊಸದಾಗಿ ಬಂದಿದ್ದು, ಅವರ ಧ್ವನಿಗೆ ನಾನು ಬೆಂಬಲ ನೀಡುತ್ತೇನೆ” ಎಂದು ತಿಳಿಸಿದರು.
ನೀರಿನ ಲಭ್ಯತೆ ಪರಿಶೀಲಿಸಿ ಬೆಂಡವಾಡ ಏತ ನೀರಾವರಿ ಯೋಜನೆ
ಬಿಜೆಪಿ ಶಾಸಕರಾದ ದುರ್ಯೋಧನ ಐಹೊಳಿ ಅವರು, ರಾಯಭಾಗ ಕ್ಷೇತ್ರದ ಚಿಕ್ಕೊಡಿ ತಾಲ್ಲೂಕು ವ್ಯಾಪ್ತಿಯ ಹನುಮಾನ ಏತ ನೀರಾವರಿ ಯೋಜನೆ, ಬೆಂಡವಾಡ ಏತ ನೀರಾವರಿ ಯೋಜನೆ ಅಂದಾಜು ವೆಚ್ಚಕ್ಕೆ ಕಾಲಮಿತಿ ಅನುಮತಿ ನೀಡಿರುವ ಬಗ್ಗೆ ಕೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ರಾಯಭಾಗ 14 ಗ್ರಾಮಗಳ 9650 ಹೆಕ್ಟೇರ್ ಜಮೀನುಗಳಿಗೆ ನೀರಾವರಿ ಆಗಬೇಕು ಎಂದು ಕೃಷ್ಣಾ ನದಿಯಿಂದ ಮುಂಗಾರು ಹಂಗಾಮಿನಲ್ಲಿ ಹರಿಯುವ 1.7 ಟಿಎಂಸಿ ನೀರನ್ನು ಬಳಸಿಕೊಳ್ಳಲು ಈ ಯೋಜನೆಯಾಗಿದೆ. ಇದು 796 ಕೋಟಿ ಮೊತ್ತದ ಯೋಜನೆಯಾಗಿದ್ದು, ಇಲ್ಲಿ ಹಂಚಿಕೆಯಾಗಿರುವ ಕೃಷ್ಣಾ ನೀರಿನ ಪ್ರಮಾಣದ ಬಗ್ಗೆ ಲೆಕ್ಕ ಹಾಕುವ ಅಗತ್ಯವಿದೆ. ನಂತರ ನೀರಿನ ಲಭ್ಯತೆ ಇದೆಯೇ ಇಲ್ಲವೋ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು. ಈಗಾಗಲೇ ಅಂದಾಜು ಮೊತ್ತ ಪ್ರಸ್ತಾಪಿಸಲಾಗಿದೆ. ನೀರಿನ ಪ್ರಮಾಣ ಪರಿಶೀಲಿಸಿದ ಬಳಿಕ ಇದನ್ನು ಆದ್ಯತೆ ಮೇರೆಗೆ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು.
ವಾರಾಹಿ ಏತನೀರಾವರಿ ತಾಂತ್ರಿಕ ಸಮಸ್ಯೆ ಖುದ್ದಾಗಿ ಪರಿಶೀಲನೆ
ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ವಾರಾಹಿ ಏತ ನೀರಾವರಿ ಯೋಜನೆ ಬಗ್ಗೆ ಕೇಳಿದಾಗ, “ಈ ವಿಚಾರ ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಚರ್ಚೆ ಮಾಡಿದ್ದಾರೆ. ಇಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ. ಇಲ್ಲಿ ಇದನ್ನು ಕೆಳ ಹಂತದಲ್ಲಿ ಮಾಡಿದರೆ ವಿದ್ಯುತ್ ಗೆ ನೀರು ಕಡಿಮೆಯಾಗುತ್ತದೆ ಎಂಬ ಕಾರಣಕ್ಕೆ ದಾರಿತಪ್ಪಿಸುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ಇದನ್ನು ನಾನೇ ಖುದ್ದಾಗಿ ಪರಿಶೀಲನೆ ಮಾಡಿ ತೀರ್ಮಾನ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಕೆಆರ್ ಎಸ್ ಅಣೆಕಟ್ಟಿನ ಬೃಂದಾವನ ಪ್ರವೇಶಿಸಲು ಹಾಗೂ ಹಳ್ಳಿಗಳ ಸಂಪರ್ಕ ಕಲ್ಪಿಸಲು ಸರ್ಕಾರದ ಅನುದಾನದಲ್ಲಿ ನಿರ್ಮಾಣಗೊಂಡಿರುವ ಸೇತುವೆಯ ಶುಲ್ಕವನ್ನು ಬೃಂದಾವನ ಪ್ರವೇಶದ ಬಳಿ ವಸೂಲಿ ಮಾಡಿ, ಗ್ರಾಮಸ್ಥರಿಗೆ ಉಚಿತವಾಗಿ ಸಂಚಾರ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಶಿವಕುಮಾರ್ ಅವರು, “ಈ ಹಿಂದಿನಿಂದಲೂ ಶುಲ್ಕ ವಸೂಲಾತಿ ಮಾಡಲಾಗುತ್ತಿದೆ. ಇಲ್ಲಿ ಟೆಂಡರ್ ಕರೆದು ಬಿಡ್ ಮಾಡಲಾಗಿದೆ. ಈ ವಿಚಾರದಲ್ಲಿ ರೈತರಿಗೆ ತೊಂದರೆಯಾಗುವುದು ಬೇಡ. ನಾನು ಆ ಜಾಗಕ್ಕೆ ಬಂದು ಪರಿಶೀಲನೆ ಮಾಡುತ್ತೇನೆ. ಗ್ರಾಮಸ್ಥರಿಗೆ ಉಚಿತವಾಗಿ ಸಂಚಾರಕ್ಕೆ ಅವಕಾಶ ನೀಡಬೇಕು ಎಂಬ ನಿಮ್ಮ ಸಲಹೆಗಳನ್ನು ಸ್ವೀಕರಿಸಲಾಗುವುದು” ಎಂದು ಭರವಸೆ ನೀಡಿದರು.
ಚರ್ಚೆಗೆ ಕರೆದರೆ ಧರಣಿ ಮಾಡುತ್ತೀರಿ, ನಾವೇನು ಮಾಡೋಣ
ಬಿಜೆಪಿ ಶಾಸಕ ಮುನಿರತ್ನ ಅವರು ನಗರದಲ್ಲಿ ಕಾರ್ಯನಿರ್ವಹಿಸದ ಬೀದಿ ದೀಪಗಳ ವಿಚಾರವಾಗಿ ಕೇಳಿದಾಗ, ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಶಿವಕುಮಾರ್ ಅವರು ಉತ್ತರಿಸಿದರು.
“ನಿಮ್ಮನ್ನು ಕರೆಸಿ ಮಾತನಾಡಲು ಮುಂದಾದರೆ ನೀವು ಧರಣಿ ಮಾಡುತ್ತೀರಿ. ನಾವೇನು ಮಾಡೋಣ ಹೇಳಿ. ನಾವು ನಿಮ್ಮನ್ನು ಕರೆಸಿದ್ದು ನಿಮ್ಮ ಕ್ಷೇತ್ರದ ಸಮಸ್ಯೆ ಬಗ್ಗೆ ಚರ್ಚೆ ಮಾಡಲು. ಆದರೆ ನಿಮ್ಮ ಕ್ಷೇತ್ರದ ನೋವು ಹೇಳಿಕೊಳ್ಳುವಷ್ಟು ಧೈರ್ಯ ತೋರಲಿಲ್ಲ. ನೀವು ಜನಪ್ರತಿನಿಧಿಯಾಗಿ ಪ್ರಶ್ನೆ ಕೇಳಿದ್ದೀರಿ, ನಿಮ್ಮ ಕ್ಷೇತ್ರದಲ್ಲಿ ಬೀದಿ ದೀಪಗಳ ಬಗ್ಗೆ ಮತ್ತೊಮ್ಮೆ ಪರಿಶೀಲಿಸುತ್ತೇವೆ. ಬೇಕಾದರೆ, ನಿಮ್ಮನ್ನು ಮತ್ತೊಮ್ಮೆ ಚರ್ಚೆಗೆ ಆಹ್ವಾನಿಸುತ್ತೇನೆ. ನೀವು ನಿಮ್ಮ ಕ್ಷೇತ್ರದ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು ಬನ್ನಿ, ಅದನ್ನು ಪರಿಹರಿಸೋಣ” ಎಂದು ಭರವಸೆ ನೀಡಿದರು.
ಬಿಜೆಪಿ ಶಾಸಕರಾದ ಕೃಷ್ಣಪ್ಪ ಅವರು, ಬಿಡಿಎ ವತಿಯಿಂದ ಪೂರ್ಣಪ್ರಜ್ಞಾ ಬಡಾವಣೆ ಮಂಜೂರಾಗಿದ್ದು, ಸಣ್ಣ ಪ್ರಮಾಣದ ಶೆಡ್ ತೆರವುಗೊಳಿಸಿ ಪಾರ್ಕ್ ಮಾಡಲು ಅನುಕೂಲ ಮಾಡಿಕೊಳ್ಳಬೇಕು ಎಂದು ಕೇಳಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ಇತ್ತೀಚೆಗೆ ಬಿಡಿಎ ಎಲ್ಲಾ ಬಡಾವಣೆಗಳು ಮತ್ತು ಸೊಸೈಟಿ ಬಡಾವಣೆಗಳನ್ನು ಪಾಲಿಕೆಗಳಿಗೆ ಹಸ್ತಾಂತರಿಸಲು ಮುಂದಾಗಿದ್ದೇವೆ. ಈ ರೀತಿ ಅನಧಿಕೃತವಾಗಿ ನಿರ್ಮಾಣವನ್ನು ತೆರವುಗೊಳಿಸಲಾಗುವುದು. ಈ ಪ್ರಕರಣವನ್ನು ಆದ್ಯತೆ ಮೇರೆಗೆ ಪರಿಗಣಿಸಿ, ಅಲ್ಲಿ ತೆರವುಗೊಳಿಸಿ ಪಾರ್ಕ್ ಮಾಡಿಸಲಾಗುವುದು” ಎಂದು ಭರವಸೆ ನೀಡಿದರು.
Special
ರಾಜ್ಯದಲ್ಲಿ ಈ ವರ್ಷದ ರಸಗೊಬ್ಬರ ಪೂರೈಕೆ ಹೇಗಿದೆ?ಅಂಕಿ ಅಂಶಗಳು ಹೇಳುವುದೇನು? ತಿಳಿಯಿರಿ
ರೈತರಿಗೆ ಕೃಷಿಯಲ್ಲಿ ಪ್ರಮುಖವಾಗಿ ಬೇಕಾದ ರಸಗೊಬ್ಬರ ಪೂರೈಕೆ ಕರ್ನಾಟಕ ರಾಜ್ಯದಲ್ಲಿ ರೈತರ ಅಗತ್ಯಕ್ಕೆ ತಕ್ಕಂತೆ ಸರ್ಕಾರ ಸಮರ್ಪಕವಾಗಿ ನಿರ್ವಹಿಸಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದು, ಇದು ರೈತರಿಗೆ ನೆಮ್ಮದಿಯ ಉಸಿರು ಬಿಡುವಂತೆ ಮಾಡಿದೆ. ಕೆಲವು ತಿಂಗಳುಗಳಲ್ಲಿ ಸ್ವಲ್ಪ ಕೊರತೆ ಕಂಡುಬಂದಿದ್ದರೂ, ಒಟ್ಟಾರೆ ಹಂಗಾಮಿನ ಅವಧಿಯಲ್ಲಿ ರಸಗೊಬ್ಬರ ಲಭ್ಯತೆಯಲ್ಲಿ ಯಾವುದೇ ಗಂಭೀರ ಸಮಸ್ಯೆ ಉಂಟಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
2025ರ ಮೇ ಹಾಗೂ ಆಗಸ್ಟ್ ತಿಂಗಳಲ್ಲಿ ರಸಗೊಬ್ಬರ ಪೂರೈಕೆಯಲ್ಲಿ ಸ್ವಲ್ಪ ಮಟ್ಟಿನ ಕೊರತೆ ಉಂಟಾಗಿದ್ದರೂ ಕೂಡ, ಸರ್ಕಾರ ಪರ್ಯಾಯ ವ್ಯವಸ್ಥೆಗಳ ಮೂಲಕ ರೈತರಿಗೆ ಅಗತ್ಯವಾದಷ್ಟು ರಸಗೊಬ್ಬರ ಒದಗಿಸಲು ಪ್ರಯತ್ನಿಸಿದೆ.

ರಸಗೊಬ್ಬರದ ಬೇಡಿಕೆ:
2025–26ನೇ ಸಾಲಿನ ಹಿಂಗಾರು ಮತ್ತು ಬೇಸಿಗೆ ಹಂಗಾಮಿಗೆ ರಾಜ್ಯದಲ್ಲಿ ಒಟ್ಟು 18.21 ಲಕ್ಷ ಮೆಟ್ರಿಕ್ ಟನ್ ವಿವಿಧ ಶ್ರೇಣಿಯ ರಸಗೊಬ್ಬರಗಳ ಬೇಡಿಕೆಯಿದೆ ಎಂದು ಅಂದಾಜಿಸಲಾಗಿದೆ. ಅದರಲ್ಲೂ ಅಕ್ಟೋಬರ್ 2025ರಿಂದ ಜನವರಿ 2026ರ ವರೆಗೆ 12.46 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರಗಳ ಅಗತ್ಯವಿದೆ ಎಂದು ಕೃಷಿ ಇಲಾಖೆ ಲೆಕ್ಕ ಹಾಕಿದೆ.
ರಸಗೊಬ್ಬರ ಪೂರೈಕೆಯ ವಿವರ:
ಈ ಅವಧಿಯಲ್ಲಿ ಕೇಂದ್ರ ಸರ್ಕಾರದ ಸಹಕಾರದಿಂದ ರಾಜ್ಯಕ್ಕೆ ನಿರಂತರವಾಗಿ ರಸಗೊಬ್ಬರ ಸರಬರಾಜು ಮಾಡಲಾಗಿದೆ. 2026ರ ಜನವರಿ 27ರವರೆಗೆ ಒಟ್ಟು 21.89 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರಗಳು ರಾಜ್ಯಕ್ಕೆ ಸರಬರಾಜಾಗಿವೆ. ಇದರಲ್ಲಿ 11.71 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರಗಳು ರೈತರಿಗೆ ಮಾರಾಟವಾಗಿದ್ದು, ಉಳಿದ 10.18 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರಗಳು ದಾಸ್ತಾನಿನಲ್ಲಿ ಲಭ್ಯವಿವೆ.
ಮುಂದಿನ ದಿನಗಳಲ್ಲಿ ರೈತರ ಬೇಡಿಕೆ ಹೆಚ್ಚಾದರೂ ಯಾವುದೇ ತೊಂದರೆ ಆಗದಂತೆ ಸರ್ಕಾರ ನಿಗಾ ವಹಿಸಿ ರಸಗೊಬ್ಬರ ಪೂರೈಕೆ ವ್ಯವಸ್ಥೆ ಮಾಡಲಾಗುತ್ತಿದೆ, ರಾಜ್ಯದ ಅವಶ್ಯಕತೆಗೆ ಅನುಗುಣವಾಗಿ ಕೇಂದ್ರ ಸರ್ಕಾರದಿಂದ ಅಗತ್ಯ ಪ್ರಮಾಣದ ರಸಗೊಬ್ಬರ ಸರಬರಾಜು ಮುಂದುವರಿಯಲಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ.
Special
ಸಮುದಾಯ ಭವನ ನಿರ್ಮಾಣಕ್ಕೆ 20 ಲಕ್ಷ ರೂ. ಅನುದಾನ – ನಿಮ್ಮ ಹಳ್ಳಿಗೂ ಅವಕಾಶ!
ಕರ್ನಾಟಕ ಸರ್ಕಾರದ Samudaya Bhavana Grant Scheme ಅಡಿಯಲ್ಲಿ ನಿಮ್ಮ ಹಳ್ಳಿಯಲ್ಲಿ ಸಾರ್ವಜನಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಕರ್ತವ್ಯಗಳು, ಸಾರ್ವಜನಿಕ ಸಭೆಗಳು ಮುಂತಾದ ಕಾರ್ಯಕ್ರಮಗಳಲ್ಲಿ ಬಳಸಲು ಸುಸಜ್ಜಿತ ಸಮುದಾಯ ಭವನ ಕಟ್ಟಲು ₹20,00,000/- ಅನುದಾನ ದೊರೆಯಲಿದೆ.
ಯಾವುದಕ್ಕೆ ಎಷ್ಟು ಅನುದಾನ?
1. ಗ್ರಾಮ ಮಟ್ಟದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ₹20 ಲಕ್ಷ ರೂ. ಅನುದಾನವಿದೆ.
2. ಹೆಚ್ಚಿನ ಮಟ್ಟದಲ್ಲಿ (ಹೋಬಳಿ / ತಾಲ್ಲೂಕು / ಜಿಲ್ಲಾ) ವಿಭಿನ್ನವಾಗಿ ₹75 ಲಕ್ಷ – ₹4 ಕೋಟಿ ತನಕ ದೊರೆಯಬಹುದು.
ಯಾರಿಗೆ ಅನುದಾನ?
1. ಅರ್ಜಿ ಸಲ್ಲಿಸುವವರು ಪರಿಶಿಷ್ಠ ಜಾತಿ (SC) / ಪರಿಶಿಷ್ಠ ಪಂಗಡ (ST) ಕುಟುಂಬ ಅಥವಾ ಸಮುದಾಯದ ಸದಸ್ಯರಾಗಿರಬೇಕು.
2. ಸಮುದಾಯ ಭವನ ನಿರ್ಮಾಣಕ್ಕೆ ಸ್ಥಳ, ಭೂಮಿಯ ದಾಖಲೆಗಳು, ಭವನದ ವಿನ್ಯಾಸ (Blueprint) ಮತ್ತು estimate ಸೇರಿದಂತೆ ಎಲ್ಲಾ ಮೂಲ ದಾಖಲೆಗಳು ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು:
1. ಸಮುದಾಯ ಸದಸ್ಯತೆಯ ಪುರಾವೆ (SC/ST ದಾಖಲೆ)
2. ನೆಲದ ದಾಖಲೆ (Khata / Land Ownership)
3. ಭವನ ಕಟ್ಟಡದ ವಿನ್ಯಾಸ ಮತ್ತು ವೆಚ್ಚದ ಅಂದಾಜು
4. ಸಮುದಾಯ ಸಂಘದ ನಿರ್ಧಾರ ಪತ್ರ.
ಅರ್ಜಿಸಲ್ಲಿಕೆ ಹೇಗೆ?
ಮೊದಲಿಗೆ ಸಂಬಂಧಿತ ತಾಲೂಕು / ಗ್ರಾಮ ಪಂಚಾಯತ್ ಖಚೇರಿಗೆ ಭೇಟಿ ನೀಡಿ, Samudaya Bhavana Grant Scheme ಸಂಬಂಧಿತ ಅರ್ಜಿ ಫಾರ್ಮ್ ಪಡೆದುಕೊಳ್ಳಬೇಕು.ಮೇಲ್ಕಂಡ ಎಲ್ಲಾ ದಾಖಲೆಗಳನ್ನು ಒಟ್ಟಾಗಿ ಸಂಗ್ರಹಿಸಿ,ಅರ್ಜಿ ಸಲ್ಲಿಸಬೇಕು.
ಪ್ರಮಾಣಿತ ಕಚೇರಿ ಮೂಲಕ ಪರಿಶೀಲನೆ ನಂತರ ಅನುದಾನ ಮಂಜೂರು ಆಗುತ್ತದೆ.
ಗ್ರಾಮದ ಅಭಿವೃದ್ಧಿಗೆ, ಸಮುದಾಯ ಚಟುವಟಿಕೆಗಳಿಗೆ ಹಾಗೂ ಭವನ ನಿರ್ಮಾಣಕ್ಕೆ ಇದೊಂದು ದೊಡ್ಡ ಅವಕಾಶವಾಗಿದ್ದು, ಜವಾಬ್ದಾರಿಯುತ ಗ್ರಾಮಸ್ಥರು ಈ ಅವಕಾಶ ತಪ್ಪಿಸಿಕೊಳ್ಳಬೇಡಿ.
Cinema
ಫೆ.1ರಂದು ಚಿತ್ರೋತ್ಸವದಲ್ಲಿ ನೋಡಬಹುದಾದ ಉತ್ತಮ 10 ಸಿನಿಮಾಗಳು
ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ 3ನೇ ದಿನ, ಫೆ.1ರಂದು ನೋಡಬಹುದಾದ ಅತ್ಯುತ್ತಮ 10 ಚಲನಚಿತ್ರಗಳ ಪಟ್ಟಿ ಇಲ್ಲಿದೆ. ಇದರಲ್ಲಿ ಜಾಗತಿಕ ಸಿನಿಮಾಗಳು ಮತ್ತು ಕನ್ನಡದ ಪ್ರಮುಖ ಚಿತ್ರಗಳನ್ನು ಆಯ್ಕೆ ಮಾಡಲಾಗಿದೆ.
1. ಆಶಸ್ ಅಂಡ್ ಡೈಮಂಡ್ಸ್
ಸ್ಕ್ರೀನ್ 1 – ಬೆಳಗ್ಗೆ 11:50
ನಿರ್ದೇಶಕ: ಆಂಡ್ರೆ ವಾಜ್ದಾ (ಪೋಲೆಂಡ್)
ವಿಶೇಷತೆ: ಇದು ವಿಶ್ವದ ಶ್ರೇಷ್ಠ ಚಿತ್ರಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ. ಆಂಡ್ರೆ ವಾಜ್ದಾ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಈ ಚಿತ್ರವನ್ನು ಪ್ರದರ್ಶಿಸಲಾಗುತ್ತಿದೆ.

2. ಕೂರ್ಮಾವತಾರ
ಸ್ಕ್ರೀನ್ ವಿಐಪಿ 2 – ಸಂಜೆ 5:10
ನಿರ್ದೇಶಕ: ಗಿರೀಶ್ ಕಾಸರವಳ್ಳಿ
ವಿಶೇಷತೆ: ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಈ ಚಿತ್ರವು ನೈತಿಕತೆ ಮತ್ತು ಗಾಂಧಿವಾದದ ಸಂಘರ್ಷವನ್ನು ಅದ್ಭುತವಾಗಿ ಚಿತ್ರಿಸುತ್ತದೆ.
3. ಇಟ್ ವಾಸ್ ಜಸ್ಟ್ ಆನ್ ಆಕ್ಸಿಡೆಂಟ್
ಸ್ಕ್ರೀನ್ 5 – ಸಂಜೆ 5:10
ನಿರ್ದೇಶಕ: ಜಾಫರ್ ಪನಾಹಿ (ಇರಾನ್)
ವಿಶೇಷತೆ: ಇರಾನಿನ ಖ್ಯಾತ ನಿರ್ದೇಶಕ ಜಾಫರ್ ಪನಾಹಿ ಅವರ ಚಿತ್ರಗಳು ಮಾನವೀಯ ಸಂಬಂಧಗಳ ಬಗ್ಗೆ ಆಳವಾದ ಒಳನೋಟ ನೀಡುತ್ತವೆ.
4. ಅಮರಶಿಲ್ಪಿ ಜಕಣಾಚಾರಿ
ಸ್ಕ್ರೀನ್ ವಿಐಪಿ 3 – ಸಂಜೆ 7:00
ನಿರ್ದೇಶಕ: ಬಿ.ಎಸ್. ರಂಗ
ವಿಶೇಷತೆ: 1964ರ ಈ ಐತಿಹಾಸಿಕ ಕನ್ನಡ ಚಿತ್ರವನ್ನು ಈಗ ‘ನವಿಕರಿಸಿದ ಶ್ರೇಷ್ಠ ಚಿತ್ರ’ (Restored Classic) ವಿಭಾಗದಲ್ಲಿ ನೋಡಬಹುದು. ಹಳೆಯ ಚಿತ್ರವನ್ನು ಹೊಸ ಮೆರುಗಿನಲ್ಲಿ ನೋಡಲು ಇದು ಸುವರ್ಣಾವಕಾಶ.
5. ಸೌಂಡ್ ಆಫ್ ಫಾಲಿಂಗ್
ಸ್ಕ್ರೀನ್ 5 – ರಾತ್ರಿ 7:30
ನಿರ್ದೇಶಕ: ಮಾಶಾ ಸ್ಕಿಲಿನ್ಸ್ಕಿ (ಜರ್ಮನಿ)
ವಿಶೇಷತೆ: ಇದು ಈ ವರ್ಷದ ‘ಮಹಿಳೆ: ಅವಳ ಇರುವಿಕೆ’ (Woman: As She Is) ವಿಭಾಗದ ಪ್ರಮುಖ ಆಕರ್ಷಣೆಯಾಗಿದೆ.

6. ನಮ್ ಸಾಲಿ
ಸ್ಕ್ರೀನ್ 7 – ಮಧ್ಯಾಹ್ನ 3:30
ನಿರ್ದೇಶಕ: ಅನೀಲ್ ಕುಮಾರ್
ವಿಶೇಷತೆ: ಇದು ‘ಕನ್ನಡ ಸಿನಿಮಾ ಸ್ಪರ್ಧಾತ್ಮಕ’ ವಿಭಾಗದ ಚಿತ್ರವಾಗಿದ್ದು, ಗ್ರಾಮೀಣ ಶಿಕ್ಷಣ ವ್ಯವಸ್ಥೆಯ ಸುತ್ತ ನಡೆಯುವ ಕಥೆಯಾಗಿದೆ.
7. ಅಮ್ರಮ್
ಸ್ಕ್ರೀನ್ 6 – ರಾತ್ರಿ 8:00
ನಿರ್ದೇಶಕ: ಫಾತಿಹ್ ಅಕಿನ್ (ಜರ್ಮನಿ)
ವಿಶೇಷತೆ: ವಿಶ್ವ ಸಿನಿಮಾದ ಪ್ರಮುಖ ಧ್ವನಿಯಾಗಿರುವ ಫಾತಿಹ್ ಅಕಿನ್ ಅವರ ಈ ಹೊಸ ಚಿತ್ರವು ಇತಿಹಾಸ ಮತ್ತು ಕೌಟುಂಬಿಕ ಸಂಬಂಧಗಳ ಕಥೆ ಹೊಂದಿದೆ.
8. ದಿ ಇಯರಿಂಗ್ಸ್ ಆಫ್ ಮೇಡಂ ಡಿ…
ಸ್ಕ್ರೀನ್ 1 – ಮಧ್ಯಾಹ್ನ 2:30
ನಿರ್ದೇಶಕ: ಮ್ಯಾಕ್ಸ್ ಓಫಲ್ಸ್ (ಫ್ರಾನ್ಸ್)
ವಿಶೇಷತೆ: 1953ರ ಈ ಕಪ್ಪು ಬಿಳುಪು ಚಿತ್ರವು ಫ್ರೆಂಚ್ ಚಿತ್ರರಂಗದ ಅದ್ಭುತಗಳಲ್ಲಿ ಒಂದಾಗಿದೆ. ಇದರ ಛಾಯಾಗ್ರಹಣ ಮತ್ತು ಕಥೆ ಅಪ್ರತಿಮವಾಗಿದೆ.

9. ಕ್ಯಾರವಾನ್
ಸ್ಕ್ರೀನ್ 2 – ರಾತ್ರಿ 8:10
ನಿರ್ದೇಶಕ: ಜುಜಾನಾ ಕಿರ್ಚ್‌ನರೋವಾ (ಜೆಕ್ ಗಣರಾಜ್ಯ)
ವಿಶೇಷತೆ: ಕಂಟೆಂಪರರಿ ವರ್ಲ್ಡ್ ಸಿನಿಮಾ ವಿಭಾಗದ ಈ ಚಿತ್ರವು ಯುರೋಪ್‌ನ ಪ್ರಯಾಣದ ಹಿನ್ನೆಲೆಯಲ್ಲಿ ಸಾಗುವ ಅದ್ಭುತ ಡ್ರಾಮಾ.
10. ಮೈ ಫಾದರ್ಸ್ ಶಾಡೋ
ಸ್ಕ್ರೀನ್ 5 – ಮಧ್ಯಾಹ್ನ 12:00
ನಿರ್ದೇಶಕ: ಅಕಿನೋಲಾ ಡೇವಿಸ್ ಜೂನಿಯರ್ (ಯುಕೆ/ ನೈಜೀರಿಯಾ)
ವಿಶೇಷತೆ: ನೈಜೀರಿಯಾದ ಸಂಸ್ಕೃತಿ ಮತ್ತು ಅಸ್ಮಿತೆಯ ಬಗ್ಗೆ ಈ ಚಿತ್ರವು ವಿಭಿನ್ನವಾಗಿ ಚರ್ಚಿಸುತ್ತದೆ.
-
Manglore3 hours agoಜಿ.ಎಲ್. ಟ್ರೋಫಿ-2026: ಜಿ.ಎಲ್. ಹಾಸನ ತಂಡ ಚಾಂಪಿಯನ್
-
Cinema23 hours ago17 ನೇ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದ ಕನ್ನಡ ಚಿತ್ರ ಸ್ಪರ್ಧಾ ವಿಭಾಗದಲ್ಲಿ ಬಡಿಗೇರ್ ದೇವೇಂದ್ರ ನಿರ್ದೇಶನದ “ವನ್ಯಾ” ಚಿತ್ರ ಪ್ರದರ್ಶನ
-
Hassan4 hours agoಮಾಧ್ಯಮ ಸ್ವಾತಂತ್ರ್ಯ ಸದ್ಬಳಕೆಯಾಗಲಿ: ಎಎಸ್ಪಿ ತಮ್ಮಯ್ಯ
-
Hassan3 hours agoಆನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ : ಕೇಂದ್ರ ಸಚಿವರನ್ನು ಭೇಟಿ ಮಾಡಿದ ಸಂಸದ ಶ್ರೇಯಸ್ ಪಟೇಲ್
-
National5 hours ago17ನೇ ಬೆಂಗಳೂರು ಚಿತ್ರೋತ್ಸವದಲ್ಲಿ ತಾಯಿ-ಮಗನ ಸಂಬಂಧದ ʼಅಮ್ಮಂಗೆ ಹೇಳ್ಬೇಡʼ ಚಿತ್ರ ಪ್ರದರ್ಶನ
-
State6 hours agoಸಿಎಂ ಹೌದು ಹುಲಿಯಾ ಆಗಿಲ್ಲ, ಹೌದು ಇಲಿಯಾ ಆಗಿದ್ದಾರೆ: ಆರ್.ಅಶೋಕ್
-
Mandya8 hours agoಎಂ. ಅಂಕೇಗೌಡರ ಪುಸ್ತಕ ಪ್ರೀತಿ ಇಂದಿನ ಯುವ ಪೀಳಿಗೆಗೆ ಮಾದರಿ : ಡಾ.ಮಾನಸ
-
Hassan2 hours agoಅರಸೀಹಳ್ಳಿ ಹರೀಶ್ಗೆ ಪಿಹೆಚ್ಡಿ ಪದವಿ
