Mandya
ಕೆರೆ ಒತ್ತುವರಿ ತೆರವುಗೊಳಿಸದಿದ್ದರೆ ಶಿಸ್ತು ಕ್ರಮ: ಸಮಯ ನಿಗದಿಗೊಳಿಸಿ ಸೂಚನೆ ನೀಡಿದ ಡಿಸಿ ಡಾ.ಕುಮಾರ
ಮಂಡ್ಯ: ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ಮತ್ತು ಜವಾಬ್ದಾರಿಯನ್ನು ತೆಗೆದುಕೊಂಡು ಕೆರೆ ಒತ್ತುವರಿಯನ್ನು ತೆರವುಗೊಳಿಸಬೇಕು. ತೆರವುಗೊಳಿಸಿದ ಕೆರೆಗಳು ಮತ್ತೆ ಒತ್ತುವರಿ ಮಾಡದಂತೆ ಸಂರಕ್ಷಣೆ ಮಾಡಬೇಕು. ಕೆರೆ ಒತ್ತುವರಿ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಳಾದ ಡಾ.ಕುಮಾರ ಅವರು ಹೇಳಿದರು.
ಮಂಡ್ಯ ಜಿಲ್ಲೆಯಲ್ಲಿ ಕೆರೆಗಳ ಒತ್ತುವರಿ ತೆರವುಗೊಳಿಸುವ ಸಂಬಂಧ ಜಿಲ್ಲಾಧಿಕಾರಿ ಗಳ ಕಚೇರಿಯಲ್ಲಿ ಕರೆಯಲಾಗಿದ್ದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,
ಇದುವರೆಗೆ ಸುಮಾರು 245 ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಲಾಗಿದ್ದು, ಇನ್ನು 203 ಕೆರೆಗಳ ತೆರವು ಬಾಕಿ ಉಳಿದಿದೆ. ಬಾಕಿ ಇರುವ ಕೆರೆ ಒತ್ತುವರಿಗಳನ್ನು ತಕ್ಷಣವೇ ತೆರವುಗೊಳಿಸಿ ವರದಿ ನೀಡುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಿದರು.

ಪ್ರತಿ ತಿಂಗಳು ಕೆರೆ ಒತ್ತುವರಿ ಸಂಬಂಧ ಸಭೆ ನಡೆಸಲಾಗುತ್ತಿದ್ದು ಮಾರ್ಚ್ 30 ರೊಳಗೆ ಬಾಕಿ ಇರುವ ಎಲ್ಲಾ ಕೆರೆಗಳ ಒತ್ತುವರಿ ತೆರವುಗೊಳಿಸಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೖಗೊಳ್ಳಲಾಗುವುದು. ತೆರವುಗೊಳಿಸಿದ ಕೆರೆಗಳ ಸುತ್ತ ಟ್ರಂಚ್‌ಗಳನ್ನು (ಕಂದಕ) ನಿರ್ಮಿಸಿ, ನಾಮಫಲಕಗಳನ್ನು ಅಳವಡಿಸುವ ಮೂಲಕ ಮರು-ಒತ್ತುವರಿಯಾಗದಂತೆ ನೋಡಿಕೊಳ್ಳಬೇಕು ಎಂದರು.
ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಎಚ್.ಎಲ್.ಬಿ.ಸಿ, ಕಾವೇರಿ ನೀರಾವರಿ ನಿಗಮ ನಿಯಮಿತ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ಕೆರೆಯನ್ನು ಸಂರಕ್ಷಿಸಬೇಕು. ನಿಯಮಿತವಾಗಿ ಕೆರೆಗಳ ಪರಿಶೀಲನೆ ನಡೆಸಿ ಒತ್ತುವರಿಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಮಂಡ್ಯ ಉಪ ವಿಭಾಗಧಿಕಾರಿ ಶಿವಮೂರ್ತಿ, ಪಾಂಡವಪುರ ಉಪ ವಿಭಾಗಧಿಕಾರಿ ಶ್ರೀನಿವಾಸ್ ಡಿಡಿಎಲ್ ಆರ್ ವಿರುಪಾಕ್ಷ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
Mandya
ಬೂದನೂರು ಗ್ರಾಮ ಪಂಚಾಯತಿಗೆ ನೇಮಕವಾಗಿರುವ ಆಡಳಿತಾಧಿಕಾರಿಗೆ ಗ್ರಾಮಸ್ಥರಿಂದ ಭವ್ಯ ಸ್ವಾಗತ
ಮಂಡ್ಯ: ತಾಲೂಕಿನ ಬೂದನೂರು ಗ್ರಾಮ ಪಂಚಾಯತಿಗೆ ಆಡಳಿತಾಧಿಕಾರಿಯಾಗಿ ನೇಮಕವಾಗಿರುವ
ಶಿಶು ಅಭಿವೃದ್ಧಿ ಅಧಿಕಾರಿ ಎಂ. ಕೆ. ಕುಮಾರಸ್ವಾಮಿ ಅವರನ್ನು ಗ್ರಾಮಸ್ಥರು ಭವ್ಯವಾಗಿ ಸ್ವಾಗತಿಸಿ ಅಭಿನಂದಿಸಿದರು.
ಹಿಂದಿನ ಗ್ರಾಪಂ ಆಡಳಿತದಿಂದ ಬೇಸತ್ತಿರುವ ಗ್ರಾಮಸ್ಥರು ಹಾಗೂ ಹೋರಾಟಗಾರರು, ಜನಪ್ರತಿನಿಧಿಗಳ ಅಧಿಕಾರಕ್ಕಿಂತ ಅಧಿಕಾರಿಗಳ ಆಡಳಿತವೇ ಮೇಲು ಎಂದು ವಿಷಾದಿಸಿದರು. ಬೂದನೂರು ಗ್ರಾಮ ಪಂಚಾಯತಿ ಕಚೇರಿ ಮುಂದೆ ತೋರಣ ಕಟ್ಟಿ, ರಂಗೋಲಿ ಬಿಡಿಸಿ ಆಡಳಿತಾಧಿಕಾರಿಗೆ ಸ್ವಾಗತ ಕೋರಿದರು.

ಆಡಳಿತಾಧಿಕಾರಿಯಾಗಿ ಶಿಶು ಅಭಿವೃದ್ಧಿ ಅಧಿಕಾರಿ ಎಂ. ಕೆ. ಕುಮಾರಸ್ವಾಮಿ ಅಧಿಕಾರ ಸ್ವೀಕಾರ ಬಳಿಕ ಶಾಲು ಹೊದಿಸಿ, ಮೈಸೂರು ಪೇಟಾ ಹಾಕಿ ಅಭಿನಂದಿಸಿ ನೆರೆದವರಿಗೆ ಸಿಹಿ ವಿತರಿಸಲಾಯಿತು.
ಇನ್ನೂ ಒಂದು ವರ್ಷ ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿ ನೇಮಿಸುವಂತೆ ಸರ್ಕಾರವನ್ನು ಗ್ರಾಮಸ್ಥರು ಒತ್ತಾಯಿಸಿದ್ದು, ಕಳೆದ ಐದು ವರ್ಷಗಳ ಆಡಳಿತದಲ್ಲಿ ಜನಪ್ರತಿನಿಧಿಗಳ ಅಕ್ರಮ, ಜನವಿರೋಧಿ ನೀತಿಯಿಂದಾಗಿ ಬೇಸತ್ತಿರುವುದಾಗಿ ಸ್ವಂತಮನೆ ನಮ್ಮ ಹಕ್ಕು ಹೋರಾಟಗಾರ್ತಿ ಸವಿತಾ ಅಳಲು ತೋಡಿಕೊಂಡರು.
ಬಡ ಜನರ ವಿರುದ್ಧ ಇರುವ ಆಡಳಿತಗಾರ ಜನಪ್ರತಿನಿಧಿಗಳ ಬದಲು ಅಧಿಕಾರಿಗಳ ಆಡಳಿತ ಉತ್ತಮವಾಗಿದೆ. ಚುನಾವಣೆಗಳು ಬೇಸರ ಮೂಡಿಸಿದೆ ಎಂದರು.

ರೈತ ಸಂಘದ ತಾಲೂಕು ಅಧ್ಯಕ್ಷ ಬಿ. ಸಿ.ಪುಟ್ಟಸ್ವಾಮಿ ಮಾತನಾಡಿ, ಜನರ ಪರವಾದ ಕೆಲಸ ಮಾಡಲು ಕಳೆದ ಆಡಳಿತ ಮಂಡಳಿ ವಿಫಲವಾಗಿದೆ. ಪ್ರಶ್ನಿಸಿದವರ ವಿರುದ್ಧ ಕಾನೂನು ಕ್ರಮ ವಹಿಸಲು ಮುಂದಾದ ಆಡಳಿತಗಾರರು ನಿಜವಾದ ಪ್ರಜಾಪ್ರಭುತ್ವ ವಿರೋಧಿಗಳು ಎಂದು ಬಣ್ಣಿಸಿದರು.
ಈ ವೇಳೆ ತಾಪಂ ಯೋಜನಾಧಿಕಾರಿ ವೆಂಕಟರಾವ್, ಪಿಡಿಒ ಸ್ವಾಮಿ, ಸ್ವಂತಮನೆ ನಮ್ಮ ಹಕ್ಕು ಹೋರಾಟ ಸಮಿತಿ ಸಂಚಾಲಕ ಸತೀಶ್, ಮುಖಂಡರಾದ ರಾಜೇಂದ್ರ, ಕುಳ್ಳ, ಜಯಮ್ಮ, ಶಿವರಾಜ್, ಸುನೀಲ್ ಸೇರಿದಂತೆ ಹಲವರಿದ್ದರು.
Mandya
ಕರ್ಣಾಟಕ ಬ್ಯಾಂಕ್ ವತಿಯಿಂದ ಶ್ರೀರಂಗನಾಥ ದೇಗುಲಕ್ಕೆ 10 ಫ್ಯಾನ್ ಗಳ ಕೊಡುಗೆ
ಶ್ರೀರಂಗಪಟ್ಟಣ : ಕರ್ಣಾಟಕ ಬ್ಯಾಂಕ್ ಶಾಖೆ ವತಿಯಿಂದ ಶ್ರೀರಂಗನಾಥ ದೇಗುಲಕ್ಕೆ ಸುಮಾರು 55 ಸಾವಿರ ರೂ.ಬೆಲೆಯುಳ್ಳ 10 ಫ್ಯಾನ್ ಗಳನ್ನು ಕೊಡುಗೆಯಾಗಿ ನೀಡಲಾಯಿತು.

ಎಜಿಎಂ ಶೇಷಾದ್ರಿ ಕೆ.ಎಲ್ ರವರು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಉಮಾ ಅವರಿಗೆ ಹಸ್ತಾಂತರಿಸಿ, ಭಕ್ತರ ಅನುಕೂಲಕ್ಕೆ ಬಳಸಿಕೊಳ್ಳುವಂತೆ ಮನವಿ ಮಾಡಿದರು.

ಇದೇ ವೇಳೆ ಮಾತನಾಡಿದ ಅವರು, ಕರ್ಣಾಟಕ ಬ್ಯಾಂಕ್ ವತಿಯಿಂದ ಹತ್ತು ಹಲವು ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬರುತ್ತಿದ್ದು, ದೇವಾಲಯದ ಆವರಣದಲ್ಲಿ ಸರದಿ ಸಾಲಿನಲ್ಲಿ ನಿಲ್ಲುವ ಭಕ್ತರಿಗೆ ಅನುಕೂಲವಾಗಲೆಂದು ಹತ್ತು ಫ್ಯಾನ್ ಗಳನ್ನು ನೀಡಿದ್ದಾಗಿ ತಿಳಿಸಿದರು.
ಈ ವೇಳೆ ಮದ್ದೂರು ಕ್ಲಷ್ಟರ್ ನ ಸಿ.ಎಂ.ಮುನಿರಾಜು ರೆಡ್ಡಿ, ಶ್ರೀರಂಗಪಟ್ಟಣ ಶಾಖಾ ವ್ಯವಸ್ಥಾಪಕ ವಿ.ನಾರಾಯಣ್ ಸೇರಿದಂತೆ ಬ್ಯಾಂಕ್ ನ ಸಿಬ್ಬಂಧಿ ವರ್ಗ ಉಪಸ್ಥಿತರಿದ್ದರು.
Mandya
ಶ್ರೀ ವೈದ್ಯನಾಥೇಶ್ವರಸ್ವಾಮಿ ಶ್ರೀ ಮದ್ವಿವ್ಯ ಮಹಾ ರಥೋತ್ಸವ
ಮದ್ದೂರು: ತಾಲೂಕಿನ ವೈದ್ಯನಾಥಪುರ ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ವೈದ್ಯನಾಥೇಶ್ವರಸ್ವಾಮಿ ಶ್ರೀ ಮದ್ವಿವ್ಯ ಮಹಾ ರಥೋತ್ಸವ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಭಾನುವಾರ ಸಡಗರ ಸಂಭ್ರಮದಿಂದ ನೆರವೇರಿತು.
ಬೆಳಗ್ಗೆ 10 ರಿಂದ 11 ಗಂಟೆಯೊಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ನಡೆದ ಶ್ರೀ ವೈದ್ಯನಾಥೇಶ್ವರಸ್ವಾಮಿ ಬ್ರಹ್ಮ ರಥೋತ್ಸವಕ್ಕೆ ತಹಸೀಲ್ದಾರ್ ಪರಶುರಾಮ ಸತ್ತಿಗೇರಿ ಚಾಲನೆ ನೀಡಿದರು.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸಹಸ್ರಾರು ಭಕ್ತಾಧಿಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ರಥ ಎಳೆಯುವ ಮೂಲಕ ದೇವರ ಕೃಪೆಗೆ ಒಳಗಾದರು. ರಥೋತ್ಸವದ ಅಂಗವಾಗಿ ರಾಮನಗರ ಜಿಲ್ಲೆ, ಚನ್ನಪಟ್ಟಣದ ತಾಲೂಕು ವಿರೂಪಾಕ್ಷಿಪುರ ಹೋಬಳಿ ಜೆ.ಬ್ಯಾಡರಹಳ್ಳಿ ಶ್ರೀ ವೈದ್ಯನಾಥೇಶ್ವರ ಸಮಿತಿ ಮತ್ತು ಗ್ರಾಮಸ್ಥರಿಂದ ವಿಶೇಷ ಪೂಜೆಯೊಟ್ಟಿಗೆ ರಥೋತ್ಸವಕ್ಕೆ ಆಗಮಿಸಿದ ಸಾವಿರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.
ರಥೋತ್ಸವದ ಅಂಗವಾಗಿ ದೇವಾಲಯಕ್ಕೆ ಆಗಮಿಸುವ ಭಕ್ತಾಧಿಗಳ ಅನುಕೂಲಕ್ಕಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಮದ್ದೂರಿನ ಬಸ್ ನಿಲ್ದಾಣದಿಂದ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ರಾತ್ರಿ 8 ಗಂಟೆಗೆ ಶ್ರೀ ಪ್ರಸನ್ನ ಪಾರ್ವತಾಂಭ ವೈದ್ಯನಾಥೇಶ್ವರ ಸ್ವಾಮಿಯವರ ಬಸವಪ್ಪ ಜತೆಗೆ ಮದ್ದೂರಿನ ಶಕ್ತಿ ದೇವತೆ ಮದ್ದೂರಮ್ಮ, ಆಲೂರಿನ ಶ್ರೀ ಆಲೂರಮ್ಮ, ನಗರಕೆರೆ ಪಟ್ಟಲದಮ್ಮ, ಅಂತರಹಳ್ಳಿ ಸಿದ್ದೇಶ್ವರ, ಹಳೇಬೂದನೂರಿನ ಶ್ರೀ ಅಂಕನಾಥೇಶ್ವರಸ್ವಾಮಿ ವೀರಗಾಸೆ ಕುಣಿತ ಪೂಜಾ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಶನಿವಾರ ಸಂಜೆ 6 ಗಂಟೆಗೆ ವೈದ್ಯನಾಥಪುರ ಗ್ರಾಮಸ್ಥರಿಂದ ಶ್ರೀಹೊಳೆ ಆಂಜನೇಯಸ್ವಾಮಿ ಸನ್ನಿಧಿಯಿಂದ ಮೀಸಲು ನೀರು ತರುವ ಜತೆಗೆ ಹಳೇಬೂದನೂರು ಶ್ರೀ ಅಂಕನಾಥೇಶ್ವರಸ್ವಾಮಿ ರವರ ವೀರಗಾಸೆ ಅದ್ದೂರಿಯಾಗಿ ಜರುಗಿತು.
ಮಜ್ಜಿಗೆ ಪಾನಕ ವಿತರಣೆ: ರಥೋತ್ಸವದ ಅಂಗವಾಗಿ ವಿನಾಯಕರ ಗೆಳೆಯರ ಬಳಗ ಹಾಗೂ ಗ್ರಾಮಸ್ಥರಿಂದ ಭಕ್ತಾಧಿಗಳಿಗೆ ಮಜ್ಜಿಗೆ, ಪಾನಕ ಹಾಗೂ ಹೆಸರು ಬೇಳೆ ವಿತರಣೆ ಮಾಡಲಾಯಿತು. ಗೆಳೆಯರ ಬಳಗದ ವಿ.ಎಸ್.ಪ್ರಭು, ಸುನಿಲ್, ಲೋಕಿ, ಅನಿಲ್, ವಿ.ಎಸ್.ದಯಾನಂದ್, ಕೆಂಚ, ನಂದೀಶ್, ಶಿವು, ಪುರುಷೋತ್ತಮ್, ಭಾಸ್ಕರ್, ಸಿದ್ದಪ್ಪಾಜಿ, ದಿಲೀಪ್ ಸೇರಿದಂತೆ ಇತರರು ಇದ್ದರು.
ರಥೋತ್ಸವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದ್ದು ವಿಶೇಷವಾಗಿತ್ತು.
ರಥೋತ್ಸವದಲ್ಲಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ವೈದ್ಯನಾಥೇಶ್ವರ ಶ್ರೀ ಪ್ರಸನ್ನ ಪಾರ್ವತಾಂಭ ವೈದ್ಯನಾಥೇಶ್ವರ ಟ್ರಸ್ಟ್ನ ಅಧ್ಯಕ್ಷ ವಿ.ಟಿ.ಶಿವರಾಜು, ಮುಖಂಡರಾದ ಮಾದನಾಯಕನಹಳ್ಳಿ ರಾಜಣ್ಣ, ಅಪ್ಪುಪಿ.ಗೌಡ, ವಿ.ಎಲ್.ರಾಜು, ವಿ.ಟಿ.ರಾಜಣ್ಣ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
-
Hassan2 hours agoಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ಎಚ್ಡಿಕೆ ಅಭಿಮಾನಿಗಳಿರುವ ಕ್ಷೇತ್ರ: ನಿಖಿಲ್ ಕುಮಾರಸ್ವಾಮಿ
-
Mysore6 hours agoಹಣ್ಣುಗಳ ಮಹತ್ವ, ಪೌಷ್ಟಿಕಾಂಶದ ಬಗ್ಗೆ ಅರಿವು ಮೂಡಿಸಿದ ರವಿ ಮಹದೇವ್
-
Chamarajanagar8 hours agoಚಿರತೆ ದಾಳಿ: ಹಸು ಬಲಿ ಗ್ರಾಮಸ್ಥರಲ್ಲಿ ಆತಂಕ
-
Mandya1 hour agoಬೂದನೂರು ಗ್ರಾಮ ಪಂಚಾಯತಿಗೆ ನೇಮಕವಾಗಿರುವ ಆಡಳಿತಾಧಿಕಾರಿಗೆ ಗ್ರಾಮಸ್ಥರಿಂದ ಭವ್ಯ ಸ್ವಾಗತ
-
Hassan2 hours agoಸಿಎಂ ಓಲೈಕೆಗಾಗಿ ಸವಲತ್ತುಗಳನ್ನು ಕೊಡುತ್ತಿದ್ದಾರೆ: ಶಾಸಕ ಎ.ಮಂಜು
-
Mandya3 hours agoಕರ್ಣಾಟಕ ಬ್ಯಾಂಕ್ ವತಿಯಿಂದ ಶ್ರೀರಂಗನಾಥ ದೇಗುಲಕ್ಕೆ 10 ಫ್ಯಾನ್ ಗಳ ಕೊಡುಗೆ
-
Manglore4 hours agoಕಾರಿನಲ್ಲಿ ಕಾಲೇಜು ವಿದ್ಯಾರ್ಥಿನಿಯ ಅಪಹರಣಕ್ಕೆ ಯತ್ನ…?- ಆರೋಪ
-
Hassan4 hours agoಹೊಳೆನರಸೀಪುರ ಬಿಜೆಪಿ ಪರಾಜಿತ ಅಭ್ಯರ್ಥಿ ದೇವರಾಜೇಗೌಡರ ಹೇಳಿಕೆ ಖಂಡನೆ : ಜಿಲ್ಲಾ ಬಿಜೆಪಿ ತೀವ್ರ ಆಕ್ಷೇಪ
