Connect with us

Location

ಮಹಿಷಾ ದಸರಾ ಆಚರಿಸಲು ಬಿಡುವುದಿಲ್ಲ; ಪ್ರತಾಪ್ ಸಿಂಹ

Published

on

ಮಹಿಷಾ ದಸರಾ ಆಚರಿಸಲು ಬಿಡುವುದಿಲ್ಲ; ಪ್ರತಾಪ್ ಸಿಂಹ

ಮೈಸೂರು:ಚಾಮುಂಡಿಬೆಟ್ಟದಲ್ಲಿ ಮಹಿಷಾ ದಸರಾ ಆಚರಿಸಲು ಬಿಡುವುದಿಲ್ಲ. ಸಂಘರ್ಷವಾದರೂ ತಡೆಯುತ್ತೇನೆ ಎಂದು ಸಂಸದ ಪ್ರತಾಪಸಿಂಹ ತಿಳಿಸಿದ್ದಾರೆ.
ಮಹಿಷಾ ದಸರಾ ಆಚರಣೆ ಅಬದ್ಧ ಮತ್ತು ಅನಾಚಾರ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಆಚರಿಸಲು ಅವಕಾಶ ನೀಡಿರಲಿಲ್ಲ. ಈಗಲೂ ಆಚರಿಸಲು ಬಿಡುವುದಿಲ್ಲ ಎಂದು ಶುಕ್ರವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಸಾರ್ವಜನಿಕರು ಚಾಮುಂಡೇಶ್ವರಿ ದೇವಿ ದರ್ಶನ ಪಡೆಯಲು ಬೆಟ್ಟಕ್ಕೆ ಬರುತ್ತಾರೆ. ಆಸಕ್ತರಿಗೆ ಚಾಮುಂಡೇಶ್ವರಿ ಇದ್ದಾಳೆ. ನಾಸಿಕ್ತರಿಗೆ ಬೇರೆಯವರು ಇರಬಹುದು. ಮಹಿಷಾ ದಸರಾ ಹೆಸರಿನಲ್ಲಿ ಬೆಟ್ಟದಲ್ಲಿ ಅನಾಚಾರ ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಮಹಿಷಾ ದಸರಾ ನಿಲ್ಲಿಸುವಂತೆ ಜಿಲ್ಲಾಡಳಿತ ಮತ್ತು ಪೊಲೀಸ್‌‍ ಆಯುಕ್ತರಿಗೆ ನೇರವಾಗಿ ಹೇಳುತ್ತಿದ್ದಾನೆ. ಇದಕ್ಕೆ ಅವಕಾಶ ಮಾಡಿಕೊಡಬಾರದು. ಸಂಘರ್ಷವಾದರೂ ಪರವಾಗಿಲ್ಲ. ತಡೆಯುತ್ತೇವೆ ಎಂದು ಪುನರುಚ್ಚರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಿಷಾ ದಸರಾ ಆಚರಣೆಗೆ ಅವಕಾಶ ನೀಡದಂತೆ ಮನವಿ ಮಾಡುತ್ತೇನೆ. ಮಹಿಷಾ ದಸರಾ ಆಚರಿಸುವವರಿಗೆ ಒಂದು ಕೇಳುತ್ತೇನೆ. ಅವರ ಮನೆಯಲ್ಲಿ ಯಾವುದಾದರೂ ಫೋಟೋ ಇಟ್ಟು ಆಚರಿಸಲಿ. ಮಹಿಷಾನಂತಹ ಮಗು ಹುಟ್ಟಲೆಂದು ಕೇಳಿಕೊಳ್ಳಲಿ. ಹೊರಗೆ ಆಚರಿಸಿ ಹಿಂದೂ ಭಕ್ತರ ಭಾವನೆಗೆ ಧಕ್ಕೆ ತರುವುದು ಬೇಡ ಎಂದು ನುಡಿದರು.
ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರತಾಪಸಿಂಹ, ಹಿಂದೂ ಧರ್ಮದ ಅರಿವಿಲ್ಲದೇ ಬಹಳಷ್ಟು ಜನ ಮಾತಾಡುತ್ತಾರೆ. 700 ವರ್ಷ ಮುಸ್ಲಿಂರನ್ನು, 200 ವರ್ಷಗಳ ಕ್ರೈಸ್ತರನ್ನು ಸಹಿಸಿಕೊಂಡು ಶೇ. 80 ಹಿಂದೂಗಳು ಉಳಿದಿದ್ದಾರೆ. ಇನ್ನೂ ಸೊಳ್ಳೇ, ನೊಣಗಳನ್ನು ನುಂಗಿ ಜೀರ್ಣಿಸಿಕೊಳ್ಳುವ ಶಕ್ತಿಯಿದೆ ಎಂದರು.
ಭಕ್ತರ ಭಾವನೆಗೆ ಧಕ್ಕೆ: ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ಶಾಸಕ ಟಿ.ಎಸ್‌‍.ಶ್ರೀವತ್ಸ ಅವರು, ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆ ಕೊಡುವ ಮಹಿಷಾ ದಸರಾವನ್ನು ತಡೆಯುತ್ತೇವೆ. ಭಕ್ತರ ಭಾವನೆಗಳೊಂದಿಗೆ ಆಟವಾಡುತ್ತಿದ್ದಾರೆ. ಇದನ್ನು ಸಹಿಸಲಾಗದು ಎಂದರು.
ಚಾಮುಂಡೇಶ್ವರಿಯಿಂದ ಮೈಸೂರು ಹೆಸರು ಬಂದಿದೆ. ದಸರಾದಲ್ಲಿ ಚಾಮುಂಡೇಶ್ವರಿಗೆ ಪೂಜೆ ಮಾಡುತ್ತೇವೆ. ಮಹಿಷಾಸುರ ನೋಡಿಕೊಂಡು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಿಲ್ಲ. ದೇಶದ ವಿವಿಧ ರಾಜ್ಯಗಳಿಂದ ಭಕ್ತರು ದೇವಿ ಮೇಲೆ ನಂಬಿಕೆ ಇಟ್ಟಿದ್ದಾರೆ. ಇದನ್ನು ತಡೆಯುವ ದೊಡ್ಡ ಸಂಚು ಇದು ಎಂದು ನುಡಿದರು.

ಬಾಕ್‌್ಸ
ಡಿ.13ರಂದು ಮಹಿಷಾ ದಸರಾ ಆಚರಿಸುವುದಾಗಿ ಹೇಳಿದ್ದಾರೆ. ಅ. 12ರ ರಾತ್ರಿಯೇ ಬೆಟ್ಟದಲ್ಲಿ ಮಲಗಿ ಪ್ರತಿಭಟಿಸುತ್ತೇವೆ. ರಾತ್ರಿಯಲ್ಲ ಅಲ್ಲಿ ಮಲಗುತ್ತೇವೆ. ನಮನ್ನು ದಾಟಿಕೊಂಡು ಹೋಗಿ ಆಚರಿಸಲಿ. ಮಹಿಷಾ ದಸರಾ ಆಚರಣೆಗೆ ಸರ್ಕಾರ ಅವಕಾಶ ಕೊಡಬಾರದು.
-ಟಿ.ಎಸ್‌‍. ಶ್ರೀವತ್ಸ, ಶಾಸಕ

ಹೈಕಮಾಂಡ್‌ ನಿರ್ಧಾರ ಬೆಂಬಲಿಸುತ್ತೇವೆ
ಮೈಸೂರು: ಪಕ್ಷದ ಹಿತದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ನಾಯಕರು ಯಾವುದೇ ನಿರ್ಧಾರ ಕೈಗೊಂಡರು ಬೆಂಬಲಿಸುತ್ತೇವೆ ಎಂದು ಎಂದು ಸಂಸದ ಪ್ರತಾಪಸಿಂಹ ತಿಳಿಸಿದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌‍ ಮೈತ್ರಿ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಹೈಕಮಾಂಡ್‌ ನಿರ್ಧಾರವನ್ನು ಮುಖಂಡರು, ಕಾರ್ಯಕರ್ತರು ಬೆಂಬಲಿಸುತ್ತಾರೆ ಎಂದರು.
ಇವತ್ತಿಗೂ ಬಿ.ಎಸ್‌‍.ಯಡಿಯೂರಪ್ಪ ಅವರು ಪ್ರಶ್ನಾತೀತ ನಾಯಕರು. ತಳಮಟ್ಟದಿಂದ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಎರಡೆರಡು ಬಾರಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಪಕ್ಷದ ಹಿತದೃಷ್ಟಿಯಿಂದ ಅವರು ಹೇಳಿರುವುದಕ್ಕೆ ಬದ್ಧರಾಗಿರುತ್ತೇವೆ ಎಂದರು.
ಕರ್ನಾಟಕದಲ್ಲಿ 2004ರಿಂದ ಸತತವಾಗಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಪಡೆಯುತ್ತಿದೆ. 2004-18, 2009-19, 2014-17, 2019- 25 ಸ್ಥಾನಗಳು ಬಂದಿದೆ. ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದ ಪ್ರಜ್ಞಾವಂತ ಮತದಾರರು ಗ್ಯಾರಂಟಿಗೆ ಮರುಳಾದರು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌‍ಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.

Continue Reading
Click to comment

Leave a Reply

Your email address will not be published. Required fields are marked *

Hassan

ಹಾಸನವನ್ನು ಸ್ವಚ್ಛ ಮತ್ತು ಸುಂದರ ನಗರವಾಗಿಸಲು ಶ್ರಮ : ಶಾಸಕ ಸ್ವರೂಪ್ ಪ್ರಕಾಶ್

Published

on

ಹಾಸನ: ಹಾಸನ ನಗರಸಭೆ ಇದೀಗ ಮಹಾನಗರ ಪಾಲಿಕೆಯಾಗಿ ಉನ್ನತೀಕರಣ ಗೊಂಡಿದ್ದು, ಹೆಚ್ಚಿನ ಅನುದಾನ ತಂದು ನಗರವನ್ನು ಸ್ವಚ್ಛ ಹಾಗೂ ಸುಂದರ ನಗರವನ್ನಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಹೆಚ್.ಪಿ. ಸ್ವರೂಪ್ ಭರವಸೆ ನೀಡಿದರು.

ನಗರದ 80 ಅಡಿ ರಸ್ತೆ ಬಳಿ ಇರುವ ವಿಶ್ವನಾಥ ನಗರದಲ್ಲಿ 50 ಲಕ್ಷ ರೂ. ವೆಚ್ಚದ ಕಾಂಕ್ರೀಟ್ ಚರಂಡಿ ಮತ್ತು ಕವರಿಂಗ್ ಸ್ಲ್ಯಾಬ್ ಅಳವಡಿಸುವ ಕಾಮಗಾರಿಗೆ ಶಾಸಕ ಸ್ವರೂಪ್ ಪ್ರಕಾಶ್ ಗುದ್ದಲಿ ಪೂಜೆ ನೆರವೇರಿಸಿ ನಂತರ ಮಾತನಾಡಿದ ಅವರು, ಹಾಸನದ ಅಭಿವೃದ್ಧಿಗೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು ಸಚಿವರಾಗಿದ್ದಾಗ ಸಾಕಷ್ಟು ಅನುದಾನ ನೀಡಿ ಅಭಿವೃದ್ದಿಗೆ ಸಹಕಾರ ನೀಡಿದ್ದಾರೆ. ಅಲ್ಲದೆ ಇದೀಗ ಮಹಾನಗರ ಪಾಲಿಕೆ ಆಗಿರುವ ಹಿನ್ನೆಯಲ್ಲಿ ರಾಜ್ಯ ಸರಕಾರದಿಂದ ಮೂರು ಕೋಟಿ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಅಲ್ಲದೆ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರ ಸಹಕಾರದಲ್ಲಿ ಕೇಂದ್ರದಿಂದಲೂ ಸುಮಾರು ೩೦ ಕೋಟಿ ಅನುದಾನ ಸಿಗುವ ಭರವಸೆ ಇದೆ ಎಂದರು. ಈಗಾಗಲೇ ಮಹಾನಗರ ಪಾಲಿಕೆಗೆ ಸೇರಿರುವ ಹೆಚ್ಚುವರಿ ೩೫ ಹಳ್ಳಿಗಳಿಲ್ಲಿ ಅನೇಕ ಸಮಸ್ಯೆಗಳಿದ್ದು ತನ್ನ ಗಮನಕ್ಕೆ ಬಂದಿದೆ. ಅವುಗಳ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿ ಸುಮಾರು ೧೦೦-೧೫೦ ಕೋಟಿ ವೆಚ್ಚದಲ್ಲಿ ಮಹಾನಗರ ಪಾಲಿಕೆಗೆ ಒಳಗೊಂಡ ಗ್ರಾಮಗಳನ್ನು ಅಭಿವೃದ್ದಿ ಪಡಿಸಲು ಯೋಜಿಸಲಾಗಿದೆ ಎಂದು ಹೇಳಿದರು.

ಮಹಾನಗರ ಪಾಲಿಕೆ ಮೇಯರ್ ಎಂ. ಚಂದ್ರಗೌಡ ಮಾತನಾಡಿ, ಹಾಸನ ನಗರ ವಾಸಿಗಳ ಕುಡಿಯುವ ನೀರು, ರಸ್ತೆ, ಚರಂಡಿ ಸೇರಿದಂತೆ ಎಲ್ಲಾ ರೀತಿಯ ಸಮಸ್ಯೆಗಳನ್ನೂ ಬಗೆಹರಿಸಲು ನಾವು ಬದ್ಧರಾಗಿದ್ದೇವೆ. ಶಾಸಕರ ಸಹಕಾರದಿಂದ ಹಾಸನಕ್ಕೆ ಹೆಚ್ಚಿನ ಅನುದಾನ ತಂದು ಅಭಿವೃದ್ದಿ ಕೆಲಸಗಳನ್ನು ಮಾಡಲಾಗುವುದು ಎಂದರು.

ವಾರ್ಡ್ ಸದಸ್ಯ ಕ್ರಾಂತಿ ಪ್ರಸಾದ್ ತ್ಯಾಗಿ ಮಾತನಾಡಿ, ವಾರ್ಡ್ ನಂ.೩೦ಕ್ಕೆ ಸುಮಾರು ೧೦ ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ, ಹೆಚ್.ಡಿ. ರೇವಣ್ಣ ಅವರು ಉಸ್ತುವಾರಿ ಸಚಿವರಾಗಿದ್ದಾಗ ೮೦ ಅಡಿ ರಸ್ತೆ ನಿರ್ಮಿಸಿ ಈ ಭಾಗದ ಜನರಿಗೆ ಭಾರಿ ಅನುಕೂಲ ಮಾಡಿಕೊಟ್ಟಿದ್ದಾರೆ. ಅಲ್ಲದೆ ಸ್ವರೂಪ್ ಪ್ರಕಾಶ್ ಅವರು ಶಾಸಕರಾದ ಬಳಿಕ ನಮ್ಮ ಬಡಾವಣೆಗೆ ಸಾಕಷ್ಟು ಅನುದಾನ ನೀಡಿ ಅಭಿವೃದ್ದಿ ಪಡಿಸುವ ಕೆಲಸ ಮಾಡಿದ್ದಾರೆ ಎಂದರು. ಈ ಭಾಗಕ್ಕೆ ಮುಖ್ಯವಾಗಿ ಕುಡಿಯುವ ನೀರು ಹಾಗೂ ಒಳ ಚರಂಡಿ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ, ಅಬಿವೃದ್ಧಿ ಪಥದತ್ತ ಸಾಗುತ್ತಿರುವ ಬಡಾವಣೆಗೆ ಹೆಚ್ಚಿನ ಅನುದಾನ ನೀಡಿ ಇನ್ನಷ್ಟು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಶಾಸಕರು ಹಾಗೂ ಹಾಸನ ಮಹಾನಗರ ಪಾಲಿಕೆಯ ಮೇಯರ್ ಕೆಲಸ ಮಾಡಬೇಕಿದೆ ಎಂದು ಮನವಿ ಮಾಡಿದರು.

ಭೂಮಿ ಪೂಜೆಯಲ್ಲಿ ಹಾಸನ ಮಹಾನಗರ ಪಾಲಿಕೆಯ ಉಪ ಮೇಯರ್ ಹೇಮಲತಾ, ಎಇಇ ಚೆನ್ನೇಗೌಡ, ಎ.ಇ ಆನಂದ್, ನಗರಸಭೆ ಸದಸ್ಯರು ಹಾಗೂ ಬಡಾವಣೆ ನಿವಾಸಿಗಳು ಹಾಜರಿದ್ದರು.

 

Continue Reading

Kodagu

ಹುದಿಕೇರಿಯಲ್ಲಿ 66/11 ಕೆವಿ ವಿದ್ಯುತ್ ಉಪ ಕೇಂದ್ರದ ಭೂಮಿ ಪೂಜೆ

Published

on

ಗೋಣಿಕೊಪ್ಪಲು : ಹುದಿಕೇರಿಯಲ್ಲಿ ನೂತನ ವಿದ್ಯುತ್ ಪ್ರಸರಣ ಉಪ-ಕೇಂದ್ರ ಸ್ಥಾಪಿಸುವ ನಿಟ್ಟಿನಲ್ಲಿ ಶಾಸಕ ಎ.ಎಸ್ ಪೊನ್ನಣ್ಣ ಭೂಮಿ ಪೂಜೆ ನೆರವೇರಿಸಿದರು.

ಈ ಉಪ ಕೇಂದ್ರದಿಂದ 11 ಕೆವಿಯ 12 ಮಾರ್ಗ ಪೊನ್ನಂಪೇಟೆಯಿಂದ ಹುದಿಕೇರಿವರೆಗ ಹೊರಹೋಗಲಿದೆ. ಸುಮಾರು 19.34 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯ ಒಂದು ವರ್ಷದ ಕಾಲಾವಧಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ಚೀಫ್ ಎಲೆಕ್ಟ್ರಿಕ್ ಆಫೀಸರ್ ರೋಷನ್ ಅಪ್ಪಚ್ಚು ತಿಳಿಸಿದರು. ಶಾಸಕರ ಪ್ರಯತ್ನದಿಂದಾಗಿ ಕ್ಷೇತ್ರಾದ್ಯಂತ ಹಲವು ವಿದ್ಯುತ್ ಉಪ-ಕೇಂದ್ರಗಳು ಸ್ಥಾಪನೆಗೊಳ್ಳುತ್ತಿದ್ದು, ಅತಿ ಶೀಘ್ರದಲ್ಲೇ ಇದನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಚೆಸ್ಕಾಂ ಅಧಿಕಾರಿಗಳು, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ವಲಯ ಕಾಂಗ್ರೆಸ್ ಅಧ್ಯಕ್ಷ ಸೂರಜ್, ಪೊನ್ನಂಪೇಟೆ ತಾಲೂಕು ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ಅಣಲಮಾಡ ಲಾಲಾ ಅಪ್ಪಣ್ಣ, ಹುದಿಕೇರಿ ಪಂಚಾಯಿತಿ ಅಧ್ಯಕ್ಷ ಕುಪ್ಪಣಮಾಡ ನವ್ಯ ಕಾವೇರಮ್ಮ, ಹಿರಿಯ ಕಾಂಗ್ರೆಸ್ ಮುಖಂಡರಾದ ಚೇಕ್ಕೇರ ವಾಸು ಕುಟ್ಟಪ್ಪ, ಚೆಕ್ಕೇರ ಸುಧೀರ್, ಮೋಟಯ್ಯ, ಡಿಸಿಸಿ ಸದಸ್ಯರಾದ ಮುಕಟ್ಟೀರ ಸಂದೀಪ್, ಅಜ್ಜಿಕುಟ್ಟಿರ ಗಿರೀಶ್, ನೂರೇರ ಮನೋಹರ್, ಅಣಲಮಾಡ ಹರೀಶ್, ಅಲಿರಾ ರಶೀದ್, ಕುಪ್ಪಣ ಮಾಡ ಕಾವೇರಮ್ಮ,ಕೊಡoಗಡ ವಾಸು, ಕೊಡಂಗಡ ದಮಯಂತಿ ಹಾಗೂ ಪ್ರಮುಖರು ಉಪಸಿತರಿದ್ದರು.

Continue Reading

Kodagu

ಬೆಂಗಳೂರು ಕೊಡವ ಸಮಾಜಕ್ಕೆ ಏಳು ಏಕರೆ ಜಾಗ: ಎಪ್ಪತ್ತು ವರ್ಷಗಳ ಬಳಿಕ ಮರುಕಳಿಸಿದ ಇತಿಹಾಸ

Published

on

ಬರಹ : ತೆನ್ನೀರ ಮೈನಾ, ಕಾಂಗ್ರೆಸ್ ಮುಖಂಡರು

ಬೆಂಗಳೂರು: ಕೊಡವ ಸಮಾಜ, ಕರ್ನಾಟಕದ ರಾಜ್ಯಧಾನಿ ಬೆಂಗಳೂರಿನಲ್ಲಿ ಸ್ಥಾಪಿತವಾಗಿರುವ ಸಂಸ್ಥೆ. ವಿಶ್ವದಲ್ಲಿಯೇ ಅಪರೂಪದ ಸಂಸ್ಕೃತಿ, ಪರಂಪರೆಯನ್ನು ಹೊಂದಿರುವ ಕೊಡವ ಜನಾಂಗದ ಆಚರಣೆಗಳನ್ನು ನಗರೀಕರಣದ ನಡುವೆಯೂ ನಾಶವಾಗದ ಹಾಗೆ ಕಾಪಾಡಿಕೊಂಡು ಬರುತ್ತಿರುವ ಸಂಸ್ಥೆಯಾಗಿದೆ.

1911 ರಲ್ಲಿ ಕೂರ್ಗ್ ಅಸೋಸಿಯೇಷನ್ ಎಂಬ ಹೆಸರಿನಲ್ಲಿ ಕೇವಲ 30 ಸದಸ್ಯರಿಂದ ಸ್ಥಾಪಿತವಾಗಿ ನಂತರ ಬೆಂಗಳೂರು ಕೊಡವ ಸಮಾಜ ಎಂದು ನಾಮಕರಣಗೊಂಡು ಕೊಡವ ಸಾಹಿತ್ಯ, ಸಂಸ್ಕೃತಿ,ಭಾಷೆ,ಉಡುಗೆ ತೊಡುಗೆ ,ಪದ್ದತಿ ಪರಂಪರೆಯ ಬೆಳವಣಿಗೆಗೆ ತನ್ನದೇ ಆದ ಅಪರಿಮಿತ ಕೊಡುಗೆ ನೀಡುವ ಮೂಲಕ ಬೃಹತ್ತಾಗಿ ಬೆಳೆದಿದೆ. ಸ್ಥಾಪಕ ಅಧ್ಯಕ್ಷ ಕುಪ್ಪಂಡ ಮುದ್ದಪ್ಪರವರಿಂದ ಪ್ರಸ್ತುತ ಅಧ್ಯಕ್ಷ ಕರೋಟಿರ ಪೆಮ್ಮಯ್ಯನವರ ವರೆಗೆ ಸೇವೆ ಸಲ್ಲಿಸಿದ ಎಲ್ಲಾ ಅಧ್ಯಕ್ಷರು ಮತ್ತು ಅವರ ಪಧಾಧಿಕಾರಿಗಳ ಪರಿಶ್ರಮದಿಂದ ಉಚ್ಛ್ರಾಯ ಸ್ಥಿತಿಯಲ್ಲಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ.20 ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿದ್ದು ಬೆಂಗಳೂರಿನಲ್ಲಿರುವ ಸುಮಾರು 40 ಸಾವಿರದಷ್ಟಿರುವ ಕೊಡವರಿಗೆ ಬೆಂಗಳೂರು ಕೊಡವ ಸಮಾಜ ಗುರುಮನೆಯಂತಿದೆ.

ಆರಂಭದಲ್ಲಿ ಬೆಂಗಳೂರು ಕೊಡವ ಸಮಾಜಕ್ಕೆ ಸ್ವಂತ ಕಟ್ಟಡವಾಗಲಿ ನಿವೇಶನವಾಗಲಿ ಇರಲಿಲ್ಲ. ಬಸವನಗುಡಿ ಬಳಿಯ ಖಾಸಗಿ ಜಾಗದಲ್ಲಿ ತಮ್ಮ ಕಾರ್ಯಕ್ರಮಗಳನ್ನು( ಪುತ್ತರಿ ನಮ್ಮೆ,ಕೈಲ್ ಪೊಳ್ದ್ ನಮ್ಮೆ,ಊರೊರ್ಮೆ ಮುಂತಾದವು) ನಡೆಸುತ್ತಿದ್ದರು. ಭಾರತದ ಮಹಾನ್ ಸೇನಾ ದಂಡನಾಯಕರಾಗಿ ಸೇವೆ ಸಲ್ಲಿಸಿದ್ದ,ಶಿಸ್ತು ಮತ್ತು ಪ್ರಾಮಾಣಿಕತೆಯನ್ನೇ ಉಸಿರಾಗಿಸಿಕೊಂಡಿದ್ದ ಜನರಲ್ ಕೊಡಂದೇರ.ಎಂ.ಕಾರ್ಯಪ್ಪ ( ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ) ನವರು ಭಾರತೀಯ ಸೈನ್ಯಕ್ಕೆ ಹಾಗೂ ದೇಶಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಸ್ವತಂತ್ರ ಭಾರತದ ಅಂದಿನ ವಿಶಾಲ ಮೈಸೂರು ರಾಜ್ಯದ ಘನತೆವೆತ್ತ ರಾಜ್ಯಪಾಲರಾದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ರವರು ಬೆಂಗಳೂರಿನ ಹೃದಯ ಭಾಗದಲ್ಲಿರುವ ವಸಂತ ನಗರದಲ್ಲಿ ಒಂದು ಏಕರೆ ಜಾಗವನ್ನು ಉಡುಗೊರೆಯಾಗಿ ನೀಡಿದ್ದರು.ಆ ಜಾಗವನ್ನು 1956 ರಲ್ಲಿ ಬೆಂಗಳೂರು ಕೊಡವ ಸಮಾಜಕ್ಕೆ ದಾನವಾಗಿ ನೀಡಿದರು.ನಂತರದಲ್ಲಿ ಬೆಂಗಳೂರು ಕೊಡವ ಸಮಾಜ ಆ ಜಾಗದಲ್ಲಿ ಬೃಹತ್ ಬಹುಮಹಡಿ ಕಟ್ಟಡಗಳನ್ನು ಹಂತ ಹಂತವಾಗಿ ಕಟ್ಟಿ ದೊಡ್ಡ ಸಂಸ್ಥೆಯಾಗಿ ಬೆಳೆಸಿತು.ಸಂಸ್ಕೃತಿಯ ಬೆಳವಣಿಗೆಗಳ ಜೊತೆಗೆ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಮತ್ತಷ್ಟು ಮೇಲ್ಪಂಕ್ತಿಯನ್ನು ಸಂಸ್ಥೆ ತಲುಪಿತು.

ಸುಮಾರು ಎಪ್ಪತ್ತು ವರ್ಷಗಳ ಹಿಂದೆ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪನವರು ಮಾಡಿದ ಕಾರ್ಯ ಇತಿಹಾಸ ನಿರ್ಮಿಸಿದರೆ ಆ ರೀತಿಯ ಇತಿಹಾಸ ಮತ್ತೊಮ್ಮೆ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರ.ಎಸ್.ಪೊನ್ನಣ್ಣ ನವರಿಂದ ಮತ್ತೊಮ್ಮೆ ಮರುಕಳಿಸಿದೆ.ಅದಕ್ಕೆ ಕಾರಣ ಬೆಂಗಳೂರು ಕೊಡವ ಸಮಾಜದ ಹೆಸರಿಗೆ ಬೆಂಗಳೂರು ನಗರ ಜಿಲ್ಲೆಯ ಯಲಹಂಕ ಹೊಸಹಳ್ಳಿ ಯ ಸರ್ವೆ ನಂ 21 ರಲ್ಲಿ ವರ್ಗಾವಣೆಗೊಂಡ ಏಳು ಏಕರೆ ಅತ್ಯಮೂಲ್ಯ ಜಾಗ.

2011 ರಲ್ಲಿ ಬೆಂಗಳೂರು ಕೊಡವ ಸಮಾಜದ ಶತಮಾನೋತ್ಸವ ಕಾರ್ಯಕ್ರಮದ ಸಂಧರ್ಭದಲ್ಲಿ ಅಂದಿನ ಕರ್ನಾಟಕದ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದ ಗೌಡರು ಅಂದಿನ ಕರ್ನಾಟಕ ರಾಜ್ಯ ವಿಧಾನ ಸಭಾ ಅಧ್ಯಕ್ಷರಾದ ಕೆ.ಜಿ.ಬೋಪಯ್ಯ, ಮಡಿಕೇರಿ ಕ್ಷೇತ್ರದ ಶಾಸಕರಾದ ಅಪ್ಪಚ್ಚು ರಂಜನ್ ರವರಿಗೆ ಸಮಾಜದ ಪ್ರಮುಖರು ಏಳು ಏಕರೆ ಜಾಗದ ಪ್ರಸ್ತಾವನೆಯನ್ನು ಸಲ್ಲಿಸುತ್ತಾರೆ. ಸದಾನಂದ ಗೌಡರು ಒಪ್ಪಿಗೆ ಸೂಚಿಸುತ್ತಾರೆ. ನಂತರ ಆಡಳಿತಾತ್ಮಕ ಪ್ರಕ್ರಿಯೆ ಗಳು ನಡೆದು ದಿನಾಂಕ 8-3-2023 ರಂದು ಸರ್ಕಾರ ಸದರಿ ಜಾಗವನ್ನು ಕೃಷಿಯೇತರ ಜಮೀನಿನ ಪ್ರಸ್ತುತ ಮಾರುಕಟ್ಟೆ ದರ ಪಾವತಿಸಲು ಒಪ್ಪಿಗೆ ನೀಡುತ್ತದೆ. ಕೊಡವ ಸಮಾಜದ ಪಾಲಿಗೆ ಇದೊಂದು ನಿಲುಕದ ದ್ರಾಕ್ಷಿ. ಮಾರುಕಟ್ಟೆ ದರ ವೆಂದರೆ 40 ಕೋಟಿಯಿಂದ 50 ಕೋಟಿ ವೆಚ್ಚವಾಗುತ್ತದೆ.ಇದು ಆ ಸಂಸ್ಥೆಗೆ ಅಸಾಧ್ಯವಾದ ಕಾರ್ಯ. ಆದರೂ ಬೆಂಗಳೂರು ಕೊಡವ ಸಮಾಜ ಸುಮ್ಮನಾಗುವುದಿಲ್ಲ. ಭಗೀರಥ ಪ್ರಯತ್ನ ಮುಂದುವರಿಸುತ್ತದೆ.

ಬೆಂಗಳೂರು ಕೊಡವ ಸಮಾಜದ ಪ್ರಸ್ತುತ ಅಧ್ಯಕ್ಷರಾದ ಕರೋಟಿರ ಪೆಮ್ಮಯ್ಯ ನವರ ನೇತೃತ್ವದಲ್ಲಿ ಮತ್ತೊಂದು ಸಾಹಸಕ್ಕೆ ಮುನ್ನುಡಿ ಹಾಕುತ್ತಾರೆ.ಸರ್ಕಾರ ಬದಲಾಗಿ ವಿರಾಜಪೇಟೆ ಕ್ಷೇತ್ರದ ಶಾಸಕರಾಗಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದಲ್ಲಿ ಅಪಾರ ಅನುಭವ ಹೊಂದಿರುವ ಎ.ಎಸ್.ಪೊನ್ನಣ್ಣ ನವರು ಆಯ್ಕೆಯಾಗುತ್ತಾರೆ.

ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ಗಳ ಕಾನೂನು ಸಲಹೆಗಾರರಾಗಿ ಸಂಪುಟ ದರ್ಜೆ ಸ್ಥಾನದೊಂದಿಗೆ ನೇಮಕಗೊಳ್ಳುತ್ತಾರೆ
ಸ್ವತಃ ವಕೀಲರಾದ ಕರೋಟಿರ ಪೆಮ್ಮಯ್ಯ ಮತ್ತು ಅವರ ತಂಡ ಪೊನ್ನಣ್ಣ ನವರಿಗೆ ಮನವಿ ಸಲ್ಲಿಸುತ್ತಾರೆ. ಹಲವು ಸುತ್ತಿನ ಮಾತುಕತೆಗಳು ಅಧಿಕಾರಿಗಳ ಮಟ್ಟದಲ್ಲಿ ನಡೆಯುತ್ತದೆ.ದಿನಾಂಕ 4-3-2024 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಎ.ಎಸ್.ಪೊನ್ನಣ್ಣ ನವರಿಂದ ನಡಾವಳಿ ಪತ್ರ ಸಲ್ಲಿಕೆಯಾಗುತ್ತದೆ. ಮಾನ್ಯ ಮುಖ್ಯಮಂತ್ರಿ ಗಳು ಸಂಪುಟ ಸಭೆಯಲ್ಲಿ ಪ್ರಸ್ತಾವನೆಯನ್ನು ಚರ್ಚೆಗೆ ತರುತ್ತಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಮತ್ತು ಬೆಂಗಳೂರು ಉಸ್ತುವಾರಿ ಸಚಿವರಾದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಪೊನ್ನಣ್ಣ ನವರ ಕೋರಿಕೆಯನ್ನು ಒಪ್ಪುತ್ತಾರೆ. ಕಂದಾಯ ಸಚಿವ ಕೃಷ್ಣ ಬೈರೇಗೌಡರ ಸಹಮತದೊಂದಿಗೆ ಸಚಿವ ಸಂಪುಟವೇ ಪೊನ್ನಣ್ಣನವರ ನಡಾವಳಿಗೆ ಮನ್ನಣೆ ನೀಡುತ್ತದೆ.ವಿಶೇಷ ವಿನಾಯತಿಯಡಿ ಜಮೀನು ನೀಡಲು ( ಮಾರುಕಟ್ಟೆ ದರಕ್ಕಿಂತ ಶೇ 90 ರಷ್ಟು ರಿಯಾಯಿತಿ) ಒಪ್ಪಿಗೆ ನೀಡುತ್ತದೆ.ಭೂ ಮಂಜೂರಾತಿ ನಿಯಮಗಳು 1969 ರ ನಿಯಮ 22-ಎ(1)(i)(2) ರನ್ವಯ ಆದೇಶ ಸಂಖ್ಯೆ ನಂ.ಎಲ್.ಎನ್.ಡಿ (ಎನ್.ಎ)/203/2009-10 ದಿನಾಂಕ 2-6-2025 ರಂದು ಆದೇಶ ಹೊರಡಿಸುತ್ತದೆ. ಕೇವಲ ಒಂದು ಕೋಟಿ 7 ಲಕ್ಷ ರೂ.ಗಳನ್ನು ಪಾವತಿಸಿ ಕೊಡವ ಸಮಾಜ ಜಾಗವನ್ನು ಪಡೆಯುತ್ತದೆ.ದಶಕಗಳ ಕೊಡವ ಸಮಾಜದ ಕನಸು ನನಸಾಗುತ್ತದೆ.

ಈ ಭಾನುವಾರ ಅಂದರೆ ದಿನಾಂಕ 15-6-2025 ರಂದು ಬೆಂಗಳೂರು ಕೊಡವ ಸಮಾಜದವತಿಯಿಂದ ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಸಿದ್ದರಾನಯ್ಯನವರು, ಸನ್ಮಾನ್ಯ ಡಿ.ಸಿ.ಎಂ.ಡಿ.ಕೆ ಶಿವಕುಮಾರ್, ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ, ಪ್ರಮುಖ ರುವಾರಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಸೇರಿದಂತೆ ಸಚಿವ ಸಂಪುಟದ ಸದಸ್ಯರಿಗೆ ಅಭಿನಂದನೆಗಳು ಮತ್ತು ಕೃತಜ್ಞತೆ ಸಮಾರಂಭ ಏರ್ಪಡಿಸಿದ್ದು ಬೆಂಗಳೂರು ಕೊಡವ ಸಮಾಜದ ಪಾಲಿಗೆ ಐತಿಹಾಸಿಕ ಕಾರ್ಯಕ್ರಮವಾಗಿದೆ.

Continue Reading

Trending

error: Content is protected !!