ಕಳೆದ 17 ದಿನಗಳಿಂದ ಉತ್ತರಾಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರಾದ ಸುರಂಗದಲ್ಲಿ ಸಿಲುಕಿಕೊಂಡಿದ್ದ 41 ಕಾರ್ಮಿಕರನ್ನು ಇಂದು (ನ.28) ಸಂಜೆ 8 ಗಂಟೆ ಸುಮಾರಿಗೆ ಯಶಸ್ವಿಯಾಗಿ ರಕ್ಷಿಸಲಾಗಿದೆ; ಸ್ಟ್ರೆಚರ್ ಮೂಲಕ ಒಬ್ಬೊಬ್ಬರನ್ನೇ ಕರೆತರಲಾಗುತ್ತಿದೆ.

ಭಾರತೀಯ ಸೇನೆಯ ಸುರಂಗ ತಜ್ಞರ ತಂಡ, ಅಂತಾರಾಷ್ಟ್ರೀಯ ಸುರಂಗ ತಜ್ಞರು ಹಾಗೂ ರಾಷ್ಟ್ರೀಯ ವಿಪತ್ತು ಕಾರ್ಯನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) ಕಾರ್ಯಾಚರಣೆಯಲ್ಲಿ ಸುರಂಗದಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕರನ್ನು ಯಶ್ವಸಿಯಾಗಿ ರಕ್ಷಿಸಲಾಗಿದೆ. 41 ಕಾರ್ಮಿಕರ ರಕ್ಷಣೆಗೆ ಯಂತ್ರ ಬಳಸದೆ 6 ಮಂದಿ ರ‍್ಯಾಟ್ ಹೋಲ್ ಮೈನರ್‌ಗಳು (ಒಬ್ಬ ವ್ಯಕ್ತಿಗಷ್ಟೇ ಹೋಗಿ ಬರಲು ಸಾಧ್ಯವಾಗುವಂಥ ಕಿರಿದಾದ
ಗುಂಡಿಗಳನ್ನು ಅಗೆಯುವವರು) ಸುರಂಗ ಕೊರೆಯುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಇದರ ಜೊತೆಗೆ ಏಕಕಾಲದಲ್ಲಿ, ಸುರಂಗದ ಮೇಲಿನಿಂದ ಲಂಬ ಕೊರೆಯುವಿಕೆಯನ್ನೂ ಮುಂದುವರಿಸಲಾಗಿತ್ತು.

ಆರೋಗ್ಯದ ಹಿತದೃಷ್ಟಿಯಿಂದ ಸುರಂಗದಿಂದ ಹೊರಬಂದ ಎಲ್ಲ ಕಾರ್ಮಿಕರನ್ನು ಏರ್ ಲಿಫ್ಟ್ ಮಾಡಿ ಚಿನ್ಯಾಲಿಸೌರ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಚಾರ್ಧಾಮ್ ಸರ್ವಋತು ರಸ್ತೆ ಯೋಜನೆಯಡಿ ಉತ್ತರಾಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರಾದಲ್ಲಿ ನಿರ್ಮಿಸುತ್ತಿರುವ ಸುರಂಗದ ಕೆಲಭಾಗಗಳು ಕಳೆದ ಶನಿವಾರ (ನ.12) ಕುಸಿದು, 41 ಕಾರ್ಮಿ ಕರು ಸಿಲುಕಿಕೊಂಡಿದ್ದರು.
ವಾಕಿಟಾಕಿ, ರೇಡಿಯೊ ಮೂಲಕ ಕಾರ್ಮಿಕರೊಂದಿಗೆ ಸಂವಹನ ನಡೆಸಲಾಗುತ್ತಿದ್ದು, ನಿರಂತರವಾಗಿ ವಿದ್ಯುತ್, ಆಮ್ಲಜನಕ, ಆಹಾರ, ನೀರು ಪೂರೈಸಲಾಗುತ್ತಿತ್ತು.
ಕಾರ್ಮಿಕರಿಗೆ ಸಾಕಷ್ಟು ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ತಲುಪಿಸುವ ಉದ್ದೇಶದಿಂದ ಸುರಂಗದಲ್ಲಿ ಕಳೆದ 17 ದಿನಗಳಿಂದ ಅವಶೇಷಗಳ ನಡುವೆ 39 ಮೀಟರ್ (128 ಅಡಿ) ದೂರ ಕೊರೆಯಲಾಗಿತ್ತು.
ಸುರಂಗದಲ್ಲಿ ಸಿಲುಕಿದ ಕಾರ್ಮಿಕರ ರಕ್ಷಣೆಗಾಗಿ ವಾಯುಪಡೆ ಮೂಲಕ ದೆಹಲಿಯಿಂದ ರಂಧ್ರ ಕೊರೆಯುವ ವಿಶೇಷ ಯಂತ್ರವನ್ನು ಗುರುವಾರ (ನ.16) ತರಲಾಗಿತ್ತು. ಈ ಯಂತ್ರದ ಮೂಲಕ ಸುರಂಗದಲ್ಲಿ ರಂಧ್ರ ಕೊರೆಯುವ ಕಾರ್ಯಾಚರಣೆಗೆ ಚಾಲನೆ ನೀಡಲಾಗಿತ್ತು.
ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ವಿಫಲವಾಗಿದ್ದರಿಂದ ಭಾರತೀಯ ವಾಯುಪಡೆಯು ಗುರುವಾರ ಸಿ–130 ಹರ್ಕ್ಯುಲಸ್ ಸಾಗಣೆ ವಿಮಾನಗಳ ಮೂಲಕ ಹೊಸ ಯಂತ್ರವನ್ನು ದೆಹಲಿಯಿಂದ ಉತ್ತರಕಾಶಿಗೆ ಸಾಗಿಸಿತ್ತು.

ಈ ಯಂತ್ರ ಅಮೆರಿಕದಲ್ಲಿ ತಯಾರಾಗಿತ್ತು. ರಕ್ಷಣಾ ಕಾರ್ಯಾಚರಣೆಗೆ ಅಂತಾರಾಷ್ಟ್ರೀಯ ಸುರಂಗ ತಜ್ಞರನ್ನು ಕರೆಸಲಾಗಿತ್ತು. ಅಮೆರಿಕ ಯಂತ್ರವೂ ಕೂಡ ವಿಫಲವಾಗಿತ್ತು. ಅಲ್ಲದೆ ಸುರಂಗ ಕೊರೆಯುವ ಅಗರ್ ಯಂತ್ರದ ಬ್ಲೇಡುಗಳು ಮುರಿದು ಅವಶೇಷಗಳಡಿ ಸಿಲುಕಿಕೊಂಡಿತ್ತು. ಇದಕ್ಕಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯುಂಟಾಗಿರುವ ಅವಶೇಷಗಳನ್ನು ಕೊರೆಯಲು ಹೈದರಾಬಾದ್‌ನಿಂದ ಪ್ಲಾಸ್ಮಾ ಕಟ್ಟರ್ ಯಂತ್ರವನ್ನು ತರಲಾಗಿತ್ತು.
ರ‍್ಯಾಟ್ ಹೋಲ್ ಮೈನರ್‌ಗಳಿಂದ ಕೈಯಿಂದ ಕೊರೆತ
6 ಮಂದಿ ರ‍್ಯಾಟ್ ಹೋಲ್ ಮೈನರ್‌ಗಳ (ಒಬ್ಬ ವ್ಯಕ್ತಿಗಷ್ಟೇ ಹೋಗಿ ಬರಲು ಸಾಧ್ಯವಾಗುವಂಥ ಕಿರಿದಾದ
ಗುಂಡಿಗಳನ್ನು ಅಗೆಯುವವರು) ತಂಡವು ಸೋಮವಾರ ಸ್ಥಳಕ್ಕೆ ಆಗಮಿಸಿತ್ತು. ಈ ತಂಡದ ಪ್ರತಿ ಸದಸ್ಯನು ಒಂದು ಬಾರಿಗೆ ಒಬ್ಬನಂತೆ ಸುರಂಗದ ಅವಶೇಷಗಳ ಒಳಗೆ ತೂರಿಸಲಾಗಿರುವ 800 ಎಂಎಂ ವ್ಯಾಸದ ಪೈಪಿನೊಳಗೆ ಹೋಗಿ, ಸನಿಕೆಯ ಮೂಲಕ ಕೈಯಿಂದಲೇ ಅಗೆದಿದ್ದರು. ಇದು ಅತ್ಯಂತ ನಿಧಾನ ಹಾಗೂ ಕಷ್ಟಕರ ಕೆಲಸವಾಗಿದ್ದರೂ, ಕಾರ್ಮಿಕರನ್ನು ತಲುಪಲು ಬಾಕಿಯುಳಿದ ಕೇವಲ 10-12 ಮೀಟರ್ ದೂರವಿರುವ ಕಾರಣ, ಇದುವೇ ಸದ್ಯಕ್ಕಿರುವ ಉತ್ತಮ ಆಯ್ಕೆ ಎಂದು ತಜ್ಞರು ತಿಳಿಸಿದ್ದರು.
ಈ ಯಂತ್ರದಿಂದ ಸುರಂಗದಲ್ಲಿ ಅಡ್ಡಿಯುಂಟಾಗಿರುವ ಕಲ್ಲುಮಣ್ಣುಗಳನ್ನು ಹೊರತೆಗೆಯಲು ಹಾಗೂ ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿರುವ ಸುರಂಗ ಕೊರೆಯುವ ಆಗರ್ ಯಂತ್ರದ ಬ್ಲೇಡ್‌ಗಳನ್ನು ಹೊರತೆಗೆಯಲು ಪ್ಲಾಸ್ಮಾ ಕಟ್ಟರ್ ಯಂತ್ರ ಸಹಾಯ ಮಾಡಿತ್ತು.

ಸುರಂಗ ಕುಸಿದಿದ್ದು ಹೇಗೆ?
4.5 ಕಿಮೀ-ಸುರಂಗವು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಚಾರ್ ಧಾಮ್ ಯೋಜನೆಯ ಭಾಗವಾಗಿದ್ದು, ಉತ್ತರಾಖಂಡದ ನಾಲ್ಕು ಪ್ರಮುಖ ಹಿಂದೂ ಪುಣ್ಯಕ್ಷೇತ್ರಗಳಾದ ಬದರಿನಾಥ್, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿ ನಡುವೆ ಎಲ್ಲ ಹವಾಮಾನ ಸಂದರ್ಭದಲ್ಲಿ ಸಂಪರ್ಕವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಸಿಲ್ಕ್ಯಾರಾ ಸುರಂಗ ಎಂದೂ ಕರೆಯಲ್ಪಡುವ ಈ ಸುರಂಗವು ಉತ್ತರಕಾಶಿ ಜಿಲ್ಲೆಯ ಸಿಲ್ಯಾರಾ ಮತ್ತು ದಂಡಲ್ಗಾಂವ್ ಅನ್ನು ಸಂಪರ್ಕಿಸುವ ಮಾರ್ಗದಲ್ಲಿದೆ.
ಇದು ದ್ವಿಪಥ ಸುರಂಗ ಮತ್ತು ಚಾರ್ ಧಾಮ್ ಯೋಜನೆಯಡಿಯಲ್ಲಿನ ಅತಿ ಉದ್ದದ ಸುರಂಗ ಮಾರ್ಗವಾಗಿದೆ. ಸಿಲ್ಕ್ಯಾರ ಕಡೆಯಿಂದ ಸುಮಾರು 2.4 ಕಿ.ಮೀ ಮತ್ತು ಇನ್ನೊಂದು ಬದಿಯಿಂದ 1.75 ಕಿ.ಮೀ ಮೂಲಕ ಸುರಂಗವನ್ನು ನಿರ್ಮಿಸಲಾಗುತ್ತಿದೆ. ಸುರಂಗವು ಪೂರ್ಣಗೊಂಡ ನಂತರ, ಒಂದು ಗಂಟೆಯ ಪ್ರಯಾಣದ ಸಮಯವನ್ನು ಕಡಿತಗೊಳಿಸುವ ನಿರೀಕ್ಷೆಯಿದೆ. ಸುರಂಗವನ್ನು ನಿರ್ಮಿಸುವ ಯೋಜನೆಯನ್ನು ಹೈದರಾಬಾದ್ ಮೂಲದ ನವಯುಗ ಇಂಜಿನಿಯರಿಂಗ್ ಕಂಪನಿ ಲಿಮಿಟೆಡ್ ನಡೆಸುತ್ತಿದೆ.
ನವೆಂಬರ್ 12 ರಂದು, ಸಿಲ್ಕ್ಯಾರಾ ಕಡೆಯಿಂದ 205 ಮತ್ತು 260 ಮೀಟರ್ ನಡುವಿನ ಸುರಂಗದ ಒಂದು ಭಾಗ ಕುಸಿದಿದೆ. 260 ಮೀಟರ್‌ಗಳ ಗಡಿಯಿಂದ ದೂರವಿದ್ದ ಕಾರ್ಮಿಕರು ಸುರಂಗದಲ್ಲಿ ಸಿಲುಕಿಕೊಂಡಿದ್ದರು. ಅದೃಷ್ಟವಶಾತ್, ಅವರು ಸಿಲುಕಿದ್ದ ಸುರಂಗದ ಭಾಗವು ವಿದ್ಯುತ್ ಮತ್ತು ನೀರಿನ ಪೂರೈಕೆಯನ್ನು ಹೊಂದಿದೆ. ಯಾವ ಕಾರಣಕ್ಕೆ ಸುರಂಗ ಕುಸಿಯಿತು ಎಂಬ ವಿವರವನ್ನು ಅಧಿಕಾರಿಗಳು ತಿಳಿಸಿಲ್ಲ. ಆದರೆ ಸುರಂಗ ನಿರ್ಮಿಸುವ ಬೆಟ್ಟದ ಪ್ರದೇಶ ಸುರಂಗ ನಿರ್ಮಾಣಕ್ಕೆ ಯೋಗ್ಯವಿಲ್ಲ ಎಂದು ಭೂವಿಜ್ಞಾನಿಗಳು, ಪರಿಸರವಾದಿಗಳು ಹಲವಾರು ವರ್ಷಗಳಿಂದ ಎಚ್ಚರಿಕೆ ನೀಡುತ್ತಲೇ ಬಂದಿದ್ದರು.
