National
ಹಾಸನ ಮೆಗಾ ಡೇರಿ ವಿಸ್ತರಣೆಗೆ ಕೇಂದ್ರದ ನೆರವು: NDDB ಮೂಲಕ 150 ಕೋಟಿ ರೂ. ಸಾಲ ಸೌಲಭ್ಯ ಕೊಡಿಸಲು ಕೇಂದ್ರ ಸಮ್ಮತಿ
ನವದೆಹಲಿ/ಹಾಸನ: ಹಾಸನ ಮೆಗಾ ಡೇರಿ ವಿಸ್ತರಣಾ ಯೋಜನೆಗೆ ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿ (NDDB) ಮೂಲಕ ₹150 ಕೋಟಿ ಸಾಲ ಸೌಲಭ್ಯ ಕೊಡಿಸಲು ಕೇಂದ್ರ ಸರಕಾರ ಸಮ್ಮತಿಸಿದೆ.
ಈ ಬಗ್ಗೆ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಮಾಜಿ ಮಂತ್ರಿ, ಹಾಸನ ಹಾಲು ಒಕ್ಕೂಟದ ಅಧ್ಯಕ್ಷರಾದ ಹೆಚ್.ಡಿ. ರೇವಣ್ಣ ಅವರೊಂದಿಗೆ ಕೇಂದ್ರದ ಮೀನುಗಾರಿಕೆ, ಹೈನುಗಾರಿಕೆ ಮತ್ತು ಪಶುಸಂಗೋಪನಾ ಖಾತೆ ಸಚಿವರಾದ ರಾಜೀವ್ ರಂಜನ್ ಸಿಂಗ್ (ಲಲನ್ ಸಿಂಗ್) ಅವರನ್ನು ಭೇಟಿಯಾಗಿ ವಿನಂತಿ ಮಾಡಿದರು.

ಸಚಿವ ಕುಮಾರಸ್ವಾಮಿ ಅವರ ಮನವಿಗೆ ತಕ್ಷಣವೇ ಸ್ಪಂದಿಸಿದ ಸಚಿವರು
ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿ ಮೂಲಕ 150 ಕೋಟಿ ರೂ. ಸಾಲ ಮಂಜೂರು ಮಾಡಲು ಒಪ್ಪಿಗೆ ನೀಡಿದರು. ತಮ್ಮ ಮನವಿಗೆ ಸ್ಪಂದಿಸಿದ ಹೈನುಗಾರಿಕೆ ಸಚಿವರಿಗೆ ಕುಮಾರಸ್ವಾಮಿ ಅವರು ಕೃತಜ್ಞತೆಗಳನ್ನು ಸಲ್ಲಿಸಿದರು.
ಹಾಸನ ಹಾಲು ಒಕ್ಕೂಟವು ಲಾಭದ ದಾರಿಯಲ್ಲಿ ನಡೆಯುತ್ತಿರುವ ಅತ್ಯುತ್ತಮ ಸಹಕಾರ ಒಕ್ಕೂಟವಾಗಿದೆ. ಹಾಸನ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳ ಹಾಲು ಉತ್ಪಾದಕರಿಗೆ ಅತಿದೊಡ್ಡ ಆಸರೆಯಾಗಿದೆ. 1977ರಲ್ಲಿ ಆರಂಭವಾದ ಈ ಒಕ್ಕೂಟವು ಪ್ರತೀ ದಿನ 14.5ರಿಂದ 15 ಲಕ್ಷ ಲೀಟರ್ ನಷ್ಟು ಹಾಲು ಸಂಗ್ರಹ ಮಾಡುತ್ತದೆ. ಸುಮಾರು ಒಂದು ಲಕ್ಷಕ್ಕೂ ಅಧಿಕ ಹಾಲು ಉತ್ಪಾದಕರಿಗೆ ಜೀವನೋಪಾಯ ಒದಗಿಸಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಸಚಿವ ಲಲನ್ ಸಿಂಗ್ ಅವರಿಗೆ ವಿವರಿಸಿದರು.

ನಿತ್ಯವೂ ಸಂಗ್ರಹ ಆಗುತ್ತಿರುವ ಹಾಲನ್ನು ಸಂಸ್ಕರಿಸಿ ಪ್ಯಾಕೆಟ್ ಗಳಲ್ಲಿ ತುಂಬಿ ಮಾರಾಟ ಮಾಡುತ್ತಿದೆ ಹಾಗೂ ಅನೇಕ ಉಪ ಉತ್ಪನ್ನಗಳ ತಯಾರಿಸಿ ಲಾಭದ ಹಾದಿಯಲ್ಲಿ ಮುಂದೆ ಸಾಗುತ್ತಿದೆ. ಈಗ ಹಾಲು ಸಂಗ್ರಹಣೆಯ ಪ್ರಮಾಣ ಹೆಚ್ಚಾಗುತ್ತದೆ ಹಾಗೂ ಗ್ರಾಮೀಣ ಭಾಗದಲ್ಲಿ ಜೀವನೋಪಾಯ ವೃದ್ಧಿ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಹಾಸನ ಮೆಗಾಡೇರಿಯನ್ನು ಮತ್ತಷ್ಟು ವಿಸ್ತರಿಸಿ ಸಶಕ್ತಿಗೊಳಿಸಬೇಕಿದೆ. ಹೀಗಾಗಿ ಕೇಂದ್ರ ಸರಕಾರದ ನೆರವು ಅಗತ್ಯವಾಗಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಮನವಿ ಮಾಡಿದರು.
ಮೊಸಳೆ ಹೊಸಹಳ್ಳಿ, ಮಾವಿನಕೆರೆ ರೈಲು ನಿಲ್ದಾಣಗಳ ಅಭಿವೃದ್ಧಿಗೆ ಮನವಿ:
ತಮ್ಮ ತವರು ಜಿಲ್ಲೆಯ ಮೊಸಳೆ ಹೊಸಹಳ್ಳಿ, ಮಾವಿನಕೆರೆ ರೈಲು ನಿಲ್ದಾಣಗಳ ಅಭಿವೃದ್ಧಿ ಬಗ್ಗೆ ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರು ಹಾಗೂ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಚರ್ಚೆ ನಡೆಸಿದರು.
ಸಂಸತ್ ಭವನದಲ್ಲಿರುವ ತಮ್ಮ ಕಚೇರಿಗೆ ಬಂದ ರೈಲ್ವೆ ಸಚಿವ ಅಶ್ವಿನ್ ವೈಷ್ಣವ ಅವರಿಗೆ ತಮ್ಮ ಪ್ರಸ್ತಾವನೆಗಳನ್ನು ಸಲ್ಲಿಸಿ ಚರ್ಚಿಸಿದರು ಕೇಂದ್ರ ಸಚಿವರು.

ತಾವು ಹುಟ್ಟಿ ಬೆಳೆದ ಹೊಳೆನರಸೀಪುರ ತಾಲೂಕಿನ ಮೊಸಳೆ ಹೊಸಹಳ್ಳಿ ಹಾಗೂ ಬೆಟ್ಟದ ರಂಗನಾಥ ಸ್ವಾಮಿ ದೇವಾಲಯಕ್ಕೆ ನೇರ ಸಂಪರ್ಕ ಕಲ್ಪಿಸುವ ಮಾವಿನಕೆರೆ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಿ ಅತ್ಯಾಧುನಿಕವಾಗಿ ಅಭಿವೃದ್ಧಿ ಮಾಡಬೇಕು ಎಂದು ಮಾಜಿ ಪ್ರಧಾನಿಗಳು ವಿನಂತಿ ಮಾಡಿದರು.
ಇದಕ್ಕೆ ಸ್ಪಂದಿಸಿದ ರೈಲ್ವೆ ಸಚಿವರು, ಪ್ರಸಕ್ತ ಸಂಸತ್ ಅಧಿವೇಶನ ಮುಗಿಯುವುದಕ್ಕೆ ಮೊದಲೇ ಈ ಬಗ್ಗೆ ವಿಸ್ತೃತ ವರದಿ ಪಡೆದುಕೊಳ್ಳಲಾಗುವುದು. ಮೊಸಳೆ ಹೊಸಹಳ್ಳಿ ರೈಲು ನಿಲ್ದಾಣವನ್ನು ಅತ್ಯಾಧುನಿಕವಾಗಿ ಅಭಿವೃದ್ಧಿಪಡಿಸಲಾಗುವುದು. ಧಾರ್ಮಿಕ ಕೇಂದ್ರ ಬೆಟ್ಟದ ರಂಗನಾಥ ಸ್ವಾಮಿ ದೇವಾಲಯಕ್ಕೆ ನೇರ ಸಂಪರ್ಕ ಕಲ್ಪಿಸುವ ಮಾವಿನಕೆರೆ ರೈಲು ನಿಲ್ದಾಣವನ್ನು ಪಾರಂಪರಿಕ ರೈಲು ನಿಲ್ದಾಣವನ್ನಾಗಿ ಅಭಿವೃದ್ಧಿ ಮಾಡಲು ಕ್ರಮ ವಹಿಸಲಾಗುವುದು ಎಂದು ರೈಲ್ವೆ ಸಚಿವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಮಂತ್ರಿಗಳಾದ ಹೆಚ್.ಡಿ. ರೇವಣ್ಣ ಅವರು ಉಪಸ್ಥಿತರಿದ್ದರು.
National
ವಿಕಸಿತ ಭಾರತ ಒಂದೇ ನಮ್ಮ ಅಜೆಂಡಾ, ಗುರಿ: ಪ್ರಧಾನಿ ಮೋದಿ
ನವದೆಹಲಿ: ದೇಶದ ಅಭಿವೃದ್ದಿ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದು, ವಿಕಸಿತ ಭಾರತ ಒಂದೇ ನಮ್ಮ ಅಜೆಂಡಾ ಮತ್ತು ಗುರಿ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆಗೆ ವಂದನಾ ನಿರ್ಣಯ ಮಂಡಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ನಾವು ಪ್ರತಿಯೊಂದು ಗುರಿಯನ್ನು ಸಾಧಿಸಬೇಕು ಎಲ್ಲಾ ಕ್ಷೇತ್ರಗಳಲ್ಲೂ ಭಾರತ ಆತ್ಮವಿಶ್ವಾಸದಿಂದ ಮುನ್ನುಗ್ಗುತ್ತಿದೆ. ಭಾರತವು ಭವಿಷ್ಯಕ್ಕೆ ಬೇಕಾದ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದೆ ಭಾರತ 9 ದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ ಕಾಂಗ್ರೆಸ್ ಪಕ್ಷ ದೇಶದ ರೈತರಿಗೂ ಅನ್ಯಾಯ ಮಾಡಿದೆ. ನಾವು ಮಣ್ಣಿನ ಮಕ್ಕಳಿಗೆ ನೆರವಾಗಿದ್ದೇವೆ ಎಂದು ಹೇಳಿದ್ದಾರೆ.

ನಮ್ಮ ಯುವ ಪ್ರತಿಭೆಗಳಿಗೆ ಜಾಗತಿಕವಾಗಿ ಬೇಡಿಕೆ ಹೆಚ್ಚಾಗಿದೆ. ಭಾರತ ಇತ್ತೀಚೆಗೆ 9 ಒಪ್ಪಂದಗಳಿಗೆ ಸಹಿ ಹಾಕಿದೆ. ಈ ಹಿಂದೆ ಯಾವುದೇ ದೇಶ ಭಾರತದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿರಲಿಲ್ಲ. ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಏಕೆ ಮುಂದೆ ಬಂದಿರಲಿಲ್ಲ . ಇದಕ್ಕೆ ವಿರೋಧ ಪಕ್ಷಗಳು ಉತ್ತರಿಸಬೇಕು ಕಾಂಗ್ರೆಸ್ ತಪ್ಪುಗಳನ್ನ ಸರಿಪಡಿಸಲು ಸಮಯ ಕಳೆಯುತ್ತಿದ್ದೇವೆ. ಅವರ ತಪ್ಪು ಸರಿಪಡಿಸಲು ಸಾಕಷ್ಟು ಸಮಯ ಬೇಕು. ಕಾಂಗ್ರೆಸ್ ಗೆ ಯಾವುದೇ ಯೋಜನೆ ದೃಷ್ಠಿಕೋನವಿಲ್ಲ, ಕಾಂಗ್ರೆಸ್ ಸರ್ಕಾರ ತನ್ನ ಜೇಬು ತುಂಬಿಕೊಂಡಿತ್ತು ಅಷ್ಟೇ ಎಂದು ವಾಗ್ದಾಳಿ ನಡೆಸಿದ್ದಾರೆ.
National
ಪ್ರಧಾನಿ ಮೋದಿ ಮೇಲೆ ದೈಹಿಕ ದಾಳಿಗೆ ಯೋಜನೆ ರೂಪಿಸಲಾಗಿತ್ತು: ಸ್ಪಷ್ಟನೆ ನೀಡಿದ ಲೋಕಸಭೆ ಸ್ಪೀಕರ್
ನವದೆಹಲಿ: ಲೋಕಸಭೆಯಲ್ಲಿ ನಿನ್ನೆ (ಬುಧವಾರ) ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭಾಷಣ ರದ್ದುಗೊಳಸಿದ್ದನ್ನು, ಇಂದು ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದೇವು. ಪ್ರತಿಭಟನೆ ತೀವ್ರಗೊಂಡ ಬೆನ್ನಲ್ಲೇ ಸಂಸತ್ತಿನ ಸದನ ಮುಂದೂಡಿದ್ದ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಪ್ರಧಾನಿ ಮೋದಿ ಭಾಷಣ ರದ್ದುಗೊಳಿಸಿದ್ದಕ್ಕೆ ಕಾರಣ ನೀಡಿ ಸ್ಪಷ್ಟನೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ದೈಹಿಕ ದಾಳಿ ನಡೆಸಲು ಕಾಂಗ್ರೆಸ್ ಸಂಸದರು ಯೋಜನೆ ರೂಪಿಸಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿತ್ತು. ವಿರೋಧ ಪಕ್ಷದ ಸಂಸದರು ಅನಿರೀಕ್ಷಿತವಾದದ್ದನ್ನು ಮಾಡಬಹುದು ಎಂಬ ಮಾಹಿತಿ ಇತ್ತು. ಪ್ರಜಾಪ್ರಭುತ್ವದ ದೇವಾಲಯದಲ್ಲಿ ಅಹಿತಕರ ಘಟನೆಯನ್ನ ತಡೆಯಲು ಸದನವನ್ನು ಮುಂದೂಡಲಾಯಿತು. ಅಲ್ಲದೇ ಪ್ರಧಾನಿ ಮೋದಿ ಭಾಷಣ ರದ್ದುಗೊಳಿಸಲೂ ಇದೇ ಕಾರಣ ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ.
ವಿರೋಧ ಪಕ್ಷಗಳಿಂದ ತೀವ್ರ ಖಂಡನೆ
ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ರದ್ದುಗೊಳಿಸಿದ್ದನ್ನು ಖಂಡಿಸಿ ಸಂಸತ್ತಿನಲ್ಲಿ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದವು. ಈ ವೇಳೆ ಲೋಕಸಭೆಯಲ್ಲಿ ಗದ್ದಲ ಉಂಟಾಗಿದ್ದರಿಂದ ಸದನವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿತ್ತು. ರಾಜ್ಯಸಭೆಯಲ್ಲೂ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ.

ರಾಜ್ಯಸಭೆ ಕಲಾಪ ಪ್ರಾರಂಭವಾಗುತ್ತಿದ್ದಂತೇ ಮಾತನಾಡಿದ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ ಮಾಡುವುದಿಲ್ಲ, ವಿಪಕ್ಷ ನಾಯಕ ಮಾತನಾಡುತ್ತೇನೆ ಅಂದ್ರೆ ಅದಕ್ಕೂ ಅವಕಾಶ ಕೊಡುತ್ತಿಲ್ಲ. ಸರ್ಕಾರದ ಈ ನಡೆ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಚಾರ ಎಂದು ವಾಗ್ದಾಳಿ ನಡೆಸಿದ್ದಾರೆ. ಆದರೆ, ಸಂಜೆ 5 ಗಂಟೆಗೆ ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ ಎಂದು ವರದಿಗಳಿಂದ ತಿಳಿದು ಬಂದಿದೆ.

ಸರ್ಕಾರ ದಾರಿ ತಪ್ಪಿಸುತ್ತಿದೆ: ಪ್ರಿಯಾಂಕ ಗಾಂಧಿ ತಿರುಗೇಟು
ಇನ್ನೂ ಸ್ಪೀಕರ್ ಹೇಳಿಕೆಯನ್ನು ಕಾಂಗ್ರೆಸ್ ಸಂಸದರಾದ ಪ್ರಿಯಾಂಕಾ ಗಾಂಧಿ ವಾದ್ರಾ ತಳ್ಳಿಹಾಕಿದ್ದು, ಇದು ಶುದ್ಧ ಸುಳ್ಳು ಎಂದು ಹೇಳಿದರು. ವಿರೋಧ ಪಕ್ಷಗಳು ಎತ್ತಿರುವ ವಿಷಯಗಳಿಗೆ ಸರಿಯಾಗಿ ಉತ್ತರ ನೀಡದೇ ಸರ್ಕಾರ ದಾರಿ ತಪ್ಪಿಸುತ್ತಿದೆ ಎಂದು ವ್ಯಂಗ್ಯ ಮಾಡಿದ್ದಾರೆ.
National
ಹೈ-ಸ್ಪೀಡ್ ರೈಲ್ವೆ ಕಾರಿಡಾರ್: ಅಶ್ವಿನಿ ವೈಷ್ಣವ್ ಅವರನ್ನು ಅಭಿನಂದಿಸಿದ ಎಚ್‌ಡಿಡಿ
ನವದೆಹಲಿ: ರಾಷ್ಟ್ರದ ಅಗತ್ಯಗಳಿಗೆ ಮೀರಿ ಕೇಂದ್ರ ಬಜೆಟ್‌ನಲ್ಲಿ ರೈಲ್ವೆ ವಲಯಕ್ಕೆ ಅಧಿಕ ಅನುದಾನ, ಯೋಜನೆಗಳನ್ನು ನೀಡಿರುವ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕೇಂದ್ರದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಅಭಿನಂದಿಸಿದ್ದಾರೆ.

ಈ ಕುರಿತು ರೈಲ್ವೆ ಸಚಿವರಿಗೆ ಪತ್ರ ಬರೆದಿರುವ ಮಾಜಿ ಪ್ರಧಾನಿಗಳು, 2026ರ ಬಜೆಟ್‌ನಲ್ಲಿ ಸುಸ್ಥಿರ ಸಾರಿಗೆ ಮತ್ತು ಆರ್ಥಿಕ ಬೆಳವಣಿಗೆಗಾಗಿ ಬೆಳವಣಿಗೆಯ ಕನೆಕ್ಟರ್‌ಗಳಾಗಿ ಸುಮಾರು 4,000 ಕಿ.ಮೀ. ಉದ್ದದ ಏಳು ಹೊಸ ಹೈ-ಸ್ಪೀಡ್ ರೈಲು ಕಾರಿಡಾರ್‌ಗಳನ್ನು ಘೋಷಿಸಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ಪೈಕಿ ಚೆನ್ನೈ-ಬೆಂಗಳೂರು-ಹೈದರಾಬಾದ್ (ಹೈದರಾಬಾದ್-ಚೆನ್ನೈ ಮತ್ತು ಚೆನ್ನೈ-ಬೆಂಗಳೂರು ವಿಭಾಗಗಳೊಂದಿಗೆ) ದಕ್ಷಿಣ ಭಾಗದಲ್ಲಿ ಹೈ-ಸ್ಪೀಡ್ ತ್ರಿಕೋನವನ್ನು ಸೃಷ್ಟಿಸಲಾಗುತ್ತಿದೆ. ಇದು ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕದ ಜನರ ಆಕಾಂಕ್ಷೆಗಳು ಮತ್ತು ಅವರ ಚಲನಶೀಲತೆಯ ಅಗತ್ಯಗಳನ್ನು ನೇರವಾಗಿ ಪೂರೈಸುತ್ತದೆ. ಕೇರಳ ಮತ್ತು ಪುದುಚೇರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದ್ದಾರೆ.

ಮುಂಬೈ-ಪುಣೆ, ಪುಣೆ-ಹೈದರಾಬಾದ್, ದೆಹಲಿ-ವಾರಣಾಸಿ ಮತ್ತು ವಾರಣಾಸಿ-ಸಿಲಿಗುರಿಯಂತಹ ಇತರ ಕಾರಿಡಾರ್‌ಗಳು ದೇಶಾದ್ಯಂತದ ಪ್ರಮುಖ ನಗರ, ಕೈಗಾರಿಕಾ ಮತ್ತು ಆಧ್ಯಾತ್ಮಿಕ ಕೇಂದ್ರಗಳನ್ನು ಸಂಪರ್ಕಿಸುತ್ತವೆ. ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ. ಜೊತೆಗೆ 16 ಲಕ್ಷ ಕೋಟಿ ರೂ. ಹೂಡಿಕೆಗಳನ್ನು ಆಕರ್ಷಿಸುತ್ತವೆ. ಈ ದೂರದೃಷ್ಟಿಯ ಉಪಕ್ರಮವು ವಿಕಸಿತ ಭಾರತ 2047ರ ಉದಾತ್ತ ಕನಸಿನೊಂದಿಗೆ ಸರಾಗವಾಗಿ ಹೊಂದಿಕೆಯಾಗುತ್ತದೆ. ಜಾಗತಿಕ ದರ್ಜೆಯ ಮೂಲಸೌಕರ್ಯದಿಂದ ನಡೆಸಲ್ಪಡುವ ಅಭಿವೃದ್ಧಿ ಹೊಂದಿದ, ಆಧುನಿಕ ಆರ್ಥಿಕತೆಯತ್ತ ನಮ್ಮ ರಾಷ್ಟ್ರದ ಪ್ರಯಾಣವನ್ನು ವೇಗಗೊಳಿಸುತ್ತದೆ ಎಂದು ಉಲ್ಲೇಖಿಸಿದ್ದಾರೆ.
ಬೆಂಗಳೂರು-ಹೈದರಾಬಾದ್ ಹೈ-ಸ್ಪೀಡ್ ರೈಲ್ವೆ ಕಾರಿಡಾರ್ ಅನ್ನು ಬೀದರ್ ವರೆಗೆ ವಿಸ್ತರಿಸಬೇಕು. ಇದು ಉತ್ತರ ಕರ್ನಾಟಕ ಮತ್ತು ತೆಲಂಗಾಣ ಪ್ರದೇಶಗಳಿಗೆ ಹೆಚ್ಚು ಅನುಕೂಲ ಆಗುತ್ತದೆ ಎಂದು ಮನವಿ ಮಾಡಿರುವ ಮಾಜಿ ಪ್ರಧಾನಿಗಳು, ಇದರಿಂದ ಬೀದರ್ ಭಾಗದ ಅಗತ್ಯಗಳಿಗೆ ಅನುಕೂಲ ಆಗುತ್ತದೆ ಎಂದು ಹೇಳಿದ್ದಾರೆ.

ಕರ್ನಾಟಕ ರಾಜ್ಯದೊಳಗೆ ಸುಧಾರಿತ ಆಂತರಿಕ ಸಂಪರ್ಕದ ಅಗತ್ಯವಾಗಿದೆ. ಬೆಂಗಳೂರು ಮತ್ತು ಬೆಳಗಾವಿ ನಡುವಿನ ಅಂತರವು ಸುಮಾರು 600 ಕಿ.ಮೀ., ಮತ್ತು ಪ್ರಸ್ತುತ ಪ್ರಯಾಣದ ಸಮಯ – ಸಾಮಾನ್ಯವಾಗಿ ರಸ್ತೆ ಅಥವಾ ರೈಲು ಮೂಲಕ 8-10 ಗಂಟೆಗಳು ಆಗುತ್ತದೆ. ಈ ದೀರ್ಘ ಪ್ರಯಾಣವು ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಪ್ರದೇಶಗಳಿಗೆ ಪ್ರಗತಿಗೆ ತೀವ್ರವಾಗಿ ಅಡ್ಡಿಯಾಗುತ್ತದೆ. ಬೆಂಗಳೂರು-ಬೆಳಗಾವಿ-ಪುಣೆ-ಮುಂಬೈ ಅನ್ನು ಸಂಪರ್ಕಿಸುವ ವೇಗದ ಹೈ-ಸ್ಪೀಡ್ ರೈಲು ಕಾರಿಡಾರ್ ಅಪಾರ ಪ್ರಯೋಜನಕಾರಿ ಆಗಲಿದೆ ಎಂದು ತಿಳಿಸಿದ್ದಾರೆ.
-
Special8 hours agoBSNL Recruitment 2026: ಬಿಎಸ್ಎನ್ಎಲ್ನಲ್ಲಿ ಭರ್ಜರಿ ನೇಮಕಾತಿ;ತಿಂಗಳಿಗೆ ₹90,000 ವರೆಗೆ ವೇತನ
-
Hassan23 hours agoಪ್ರತ್ಯೇಕ ಪ್ರಕರಣ: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ
-
Kodagu3 hours agoಫೆ. 7ಕ್ಕೆ ಕೆಎಸ್ಆರ್ಟಿಸಿ ನೂತನ ಬಸ್ಸು ನಿಲ್ದಾಣ ಉದ್ಘಾಟನೆ
-
National6 hours agoಕೆ.ಆರ್. ನಗರ ಮಹಿಳೆಯ ಅಪಹರಣ ಕೇಸ್ – ಹೆಚ್.ಡಿ.ರೇವಣ್ಣಗೆ ಹೈಕೋರ್ಟ್ ಬಿಗ್ ಶಾಕ್
-
National2 hours agoಮಂಡ್ಯ, ಮದ್ದೂರಿನಲ್ಲಿ ಮುರುಡೇಶ್ವರ ರೈಲು ನಿಲುಗಡೆಗೆ ಎಚ್ಡಿಕೆ ಮನವಿ: ಅಶ್ವಿನಿ ವೈಷ್ಣವ್ರಿಂದ ಸಕರಾತ್ಮಕ ಪ್ರತಿಕ್ರಿಯೆ
-
Chikmagalur8 hours agoವಿವಾಹಿತ ಹಿಂದೂ ಮಹಿಳೆಯ ಜೊತೆ : ಸಿಕ್ಕಿ ಬಿದ್ದ ಕಾಂಗ್ರೆಸ್ ಮುಖಂಡ
-
Mysore4 hours agoಪಾರಂಪರಿಕ ತಾಣದಲ್ಲಿ ಧೂಮಪಾನ: ಬಿಗ್ಬಾಸ್ ಸ್ಪರ್ಧಿ ರಜತ್ ವಿರುದ್ಧ ದೂರು
-
Mysore8 hours agoಫುಟ್ಪಾತ್ ವ್ಯಾಪಾರಿಗಳಿಗೆ ನಂಜನಗೂಡು ನಗರಸಭೆ ಆಯುಕ್ತ ಎಂ. ಬಸವರಾಜು ಎಚ್ಚರಿಕೆ
