Mandya
ಕುರಿ ರಕ್ಷಿಸಲು ಹೋದ ಯುವಕನಿಗೆ ಕಾರು ಡಿಕ್ಕಿ: ಸಾವು
ಮಂಡ್ಯ: ಸಾಕಿದ ಕುರಿ ಪ್ರಾಣ ರಕ್ಷಣೆಗೆ ಮುಂದಾದ ಯುವಕನಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲ್ಲೂಕಿನ ಹೊಸಬೂದನೂರು ಗ್ರಾಮದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಶುಕ್ರವಾರ ನಡೆದಿದೆ.
ಹೊಸಬೂದನೂರು ಗ್ರಾಮದ ಚಿಕ್ಕಲಿಂಗಯ್ಯ ಅವರ ಪುತ್ರ, ಟ್ರ್ಯಾಕ್ಟರ್ ಚಾಲಕ ವಿಶ್ವ(39) ಮೃತ ಯುವಕ. ಕುರಿಯನ್ನು ಸಾಕಿದ್ದ ವಿಶ್ವ ಅವರು, ಕುರಿಯನ್ನು ತಮ್ಮ ಜಮೀನಿನಿಂದ ಹಿಡಿದುಕೊಂಡು ಸರ್ವೀಸ್ ರಸ್ತೆ ಮೂಲಕ ಮನೆಗೆ ವಾಪಸ್ಸಾಗುವಾಗ ಕುರಿಯು ಕಿತ್ತುಕೊಂಡು ಹೆದ್ದಾರಿಗೆ ನುಗ್ಗಿದೆ. ಅದನ್ನು ರಕ್ಷಿಸಲು ವಿಶ್ವ ಹೋದಾಗ ಬೆಂಗಳೂರು-ಮೈಸೂರು ಹೆದ್ದಾರಿಯನ್ನು ದಾಟುವಾಗ ಕಾರು ಡಿಕ್ಕಿ ಹೊಡೆದಿದೆ.

ಅಪಘಾತದಿಂದ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದು ಬಂದಿದ್ದು, ಅಪಘಾತದ ನಂತರ ಕಾರನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಧಾವಿಸಿದ ಮಂಡ್ಯ ಗ್ರಾಮಾಂತರ ಠಾಣೆಯ ಪೊಲೀಸರು, ಮೃತ ದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ.
ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಜ್ಜಿ ಮೊಮ್ಮಗ ಸಾವು ಮಾಸುವ ಮುನ್ನವೇ ಮತ್ತೊಂದು ಅಪಘಾತ: ಗುರುವಾರವಷ್ಟೇ ಬೈಕ್‌ಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಇದೇ ಗ್ರಾಮದ ಅಜ್ಜಿ ಮತ್ತು ಮೊಮ್ಮಗ ಮೃತಪಟ್ಟಿದ್ದರು. ಇದು ಮಾಸುವ ಮುನ್ನವೇ ಈ ದುರ್ಘಟನೆ ನಡೆದಿರುವುದು ದುರಂತ. ಬೆಂಗಳೂರು-ಮೈಸೂರು ಹೆದ್ದಾರಿಗೆ ಜನ ಬಾರದಂತೆ ಹೆದ್ದಾರಿ ಪ್ರಾಧಿಕಾರದವರು ತಂತಿಬೇಲಿ ಹಾಕಿದ್ದರೂ ಗ್ರಾಮಸ್ಥರು ತಂತಿಬೇಲಿ ಮುರಿದು ದಾಟುತ್ತಿದ್ದಾರೆ. ಹೆದ್ದಾರಿ ನಿರ್ಮಾಣವಾದ ನಂತರ ಈ ಸ್ಥಳದಲ್ಲೇ ಹೊಸಬೂದನೂರು ಗ್ರಾಮದ ಐದು ಮಂದಿ ಅಪಘಾತದಿಂದ ಮೃತಪಟ್ಟಿದ್ದಾರೆ.
Mandya
ವಸತಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಿ: ಡಾ.ಕುಮಾರ
ಮಂಡ್ಯ : ಜಿಲ್ಲೆಯಲ್ಲಿರುವ ವಸತಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಹೊತ್ತು ನೀಡಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ/ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ/ ಡಾ:ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಮತ್ತು ಇಂದಿರಾ ಗಾಂಧಿ ವಸತಿ ಶಾಲೆಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡುತ್ತಿರುವ ಕಟ್ಟಡಗಳ ಪ್ರಗತಿಯ ಬಗ್ಗೆ ಮತ್ತು ವಸತಿ ಶಾಲೆಗಳಲ್ಲಿನ ಮೂಲಭೂತ ಸೌಲಭ್ಯಗಳ ಕೊರತೆಗಳ ಬಗ್ಗೆ ಚರ್ಚಿಸುವ ಸಂಬಂಧ ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಡಾ:ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಮತ್ತು ಇಂದಿರಾ ಗಾಂಧಿ ವಸತಿ ಶಾಲೆಗಳು ಸೇರಿದಂತೆ ಒಟ್ಟು 43 ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಎಲ್ಲಾ ವಸತಿ ಶಾಲೆಗಳಲ್ಲೂ ಕುಡಿಯುವ ನೀರು, ಆಹಾರ, ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ನೀಡಲಾಗುವ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದರು.

ವಸತಿ ಶಾಲೆಗಳ ಫಲಿತಾಂಶ ವೃದ್ಧಿಗೆ ಕ್ರಮ :
ಜಿಲ್ಲೆಯ ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಫಲಿತಾಂಶ ವೃದ್ಧಿಸಲು ವಿಶೇಷ ತರಗತಿ ಹಾಗೂ ಕಿರು ಪರೀಕ್ಷೆ ಗಳನ್ನು ಆಯೋಜಿಸಿ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಹೇಳಿದರು.
ಈಗಾಗಲೇ ವಸತಿ ಶಾಲೆ ನಿರ್ಮಾಣಕ್ಕಾಗಿ ಕೈಗೊಂಡಿರುವ ಕಾಮಗಾರಿಗಳನ್ನು ಪ್ರಾರಂಭಿಸಿ ನಿಗಧಿತ ಅವಧಿಯೊಳಗೆ ಕಾಮಗಾರಿಗಳು ಪೂರ್ಣಗೊಳಿಸಿ. ಅಧಿಕಾರಿಗಳು ಕಾಮಗಾರಿಗಳನ್ನು ಪರಿಶೀಲಿಸಿ ತ್ವರಿತವಾಗಿ ಕಾಮಗಾರಿಗಳು ಪೂರ್ಣಗೊಳ್ಳುವಂತೆ ಮುತುವರ್ಜಿ ವಹಿಸಿ ಕಾರ್ಯ ನಿರ್ವಹಿಸಿ ಎಂದು ಸೂಚಿಸಿದರು.
ಜಿಲ್ಲೆಯ ವಸತಿ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳ ಪಟ್ಟಿಯನ್ನು ಸಿದ್ಧಪಡಿಸಿ. ಸದರಿ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಕೆ ಮಾಡಿ ಎಂದು ತಿಳಿಸಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶ್ರೀನಿವಾಸ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಮಂಜುಳಾ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅರುಣ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Mandya
ರೈತರು ಬೆಳೆದ ಬೆಳೆಗಳಿಗೆ ಸಮರ್ಪಕವಾದ ವೈಜ್ಞಾನಿಕ ಬೆಲೆ ದೊರೆಯಬೇಕು : ಡಾ.ಕುಮಾರ
ಮಂಡ್ಯ : ಸಮಾಜದಲ್ಲಿ ಕಾಯಕಯೋಗಿಯಾಗಿ ರೈತರು ಕಾರ್ಯ ನಿರ್ವಹಿಸುತ್ತಿದ್ದು, ತಮ್ಮ ಕೆಲಸದಲ್ಲಿ ನಿಸ್ವಾರ್ಥ ಮನೋಭಾವ ಮತ್ತು ವೃತ್ತಿ ನಿಷ್ಠೆಯನ್ನು ತೋರುತ್ತಾ ಯಾವ ಕೀರ್ತಿಯನ್ನು ಬಯಸದೆ ಸಮಾಜದ ಹಿತಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ “ರಾಷ್ಟ್ರೀಯ ರೈತ ದಿನಾಚರಣೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರನ್ನು ಕುಗ್ಗಿಸುವ ಕೆಲಸವಾಗುತ್ತಿದೆ. ಇದು ದೇಶದ ಹಿತಕ್ಕೆ ಮಾರಕ. ರೈತರನ್ನು ಹಿಗ್ಗಿಸುವ ಕೆಲಸವಾಗಬೇಕಿದೆ. ರೈತರುಗಳು ಬೆಳೆದ ಬೆಳೆಗಳಿಗೆ ಸಮರ್ಪಕವಾದ ವೈಜ್ಞಾನಿಕ ಬೆಲೆ ದೊರೆತಾಗ ಮಾತ್ರ ರೈತರ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ರೈತರಿಲ್ಲದ ಪ್ರಪಂಚವನ್ನು ಊಹಿಸಲು ಸಾಧ್ಯವಿಲ್ಲ ರೈತರ ಅಭಿವೃದ್ಧಿ ಮತ್ತು ಏಳಿಗೆಗಾಗಿ ಪ್ರತಿಯೊಬ್ಬರೂ ಶ್ರಮಿಸಬೇಕು. ಅನ್ನದಾತನನ್ನು ಎಲ್ಲರೂ ಸ್ಮರಿಸಿ ಗೌರವಿಸಬೇಕು. 1930 ರಲ್ಲೆ ರಾಷ್ಟ್ರಕವಿ ಕುವೆಂಪು ಅವರು ತಮ್ಮ ಕೊಳಲು ಎನ್ನುವ ಕವನ ಸಂಕಲನದಲ್ಲಿ ರೈತ ಗೀತೆಯನ್ನು ಬರುತ್ತಿದ್ದಾರೆ. ಸದರಿ ರೈತ ಗೀತೆಯ ಮಹತ್ವವನ್ನು ಕೇಳುವುದರ ಜೊತೆಗೆ ಅರ್ಥೈಸಿಕೊಳ್ಳಬೇಕು ಎಂದು ತಿಳಿಸಿದರು.
ಆಧುನಿಕ ಜಗತ್ತಿನಲ್ಲಿ ರೈತರಿಗೆ ದೊರೆಯಬೇಕಾದ ಮನ್ನಣೆ ದೊರೆಯುತ್ತಿಲ್ಲ ಎನ್ನುವುದು ದುಃಖಕರ ಸಂಗತಿ. ಆಧುನಿಕತೆಗೆ ರೈತರು ಹೊಂದಿಕೊಳ್ಳಲು ತಾಂತ್ರಿಕ ಮತ್ತು ವೈಜ್ಞಾನಿಕ ಉಪಕ್ರಮಗಳನ್ನು ತಮ ಕೃಷಿ ಪದ್ಧತಿಯಲ್ಲಿ ಅಳವಡಿಸಿಕೊಳ್ಳಬೇಕು. ರೈತರು ದೇಶ ಆರ್ಥಿಕತೆಗೆ ರೈತರ ಕೊಡುಗೆ ಅಪಾರ ಎಂದರು.

ಮಂಡ್ಯ ಕೃಷಿ ಪ್ರಧಾನವಾದ ಜಿಲ್ಲೆ, ಜಿಲ್ಲೆಯ ರೈತರು ಸಹ ನಮ್ಮ ಆರ್ಥಿಕತೆಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ. ರೈತರು ವೈಜ್ಞಾನಿಕತೆಯನ್ನು ಕೃಷಿಯಲ್ಲಿ ಅಳವಡಿಸಿಕೊಂಡು ಪರ್ಯಾಯ ಬೆಳೆಗಳನ್ನು ಬೆಳೆಯಬೇಕು. ಮಣ್ಣಿನ ಗುಣಮಟ್ಟವನ್ನು ಯಾವ ರೀತಿಯಲ್ಲಿ ಹೆಚ್ಚಿಸಿಕೊಳ್ಳಬೇಕು. ಕಬ್ಬು, ಭತ್ತ ಬಿಟ್ಟು ವಿವಿಧ ವೈಜ್ಞಾನಿಕ ಬೆಳೆಗಳನ್ನು ಬೆಳೆಯುವ ನಿಟ್ಟಿನಲ್ಲಿ ಕೃಷಿ ಕ್ಷೇತ್ರದಲ್ಲಿ ಇನ್ನಷ್ಟು ಸಂಶೋಧನೆಗಳು ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ರೈತರ ಕ್ಷೇಮಾಭಿವೃದ್ಧಿಗಾಗಿ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಎಲ್ಲಾ ಕಾರ್ಯಕ್ರಮಗಳನ್ನು ರೈತರು ಸಮರ್ಪಕವಾಗಿ ಸದುಪಯೋಗಪಡಿಸಿಕೊಂಡು ಪ್ರಗತಿ ಕಾಣಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್. ಜಿಲ್ಲಾ ಕೃಷಿಕರ ಸಮಾಜದ ಅಧ್ಯಕ್ಷ ಸಿ.ಎಂ. ನಾಗರಾಜು, ಕಬ್ಬಿನ ಗಾಣದ ಮಾಲೀಕರ ಸಂಘ ಅಧ್ಯಕ್ಷ ಸೋಮಶೇಖರ್ ಗೌಡ, ರೈತರ ಪಾಠ ಶಾಲೆಯ ಸತ್ಯ ಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Mandya
ಜ.14 ಮತ್ತು 15 ರಂದು ಅಂಬಿಗರ 10ನೇ ಶರಣ ಸಂಸ್ಕೃತಿ ಉತ್ಸವ ಹಾಗೂ ವಚನಗ್ರಂಥಿ ಮಹಾ ರಥೋತ್ಸವ : ಶಂತಭೀಷ್ಮಚೌಡಯ್ಯ
ಮಂಡ್ಯ: ಅಂಬಿಗರ 10 ನೇ ಶರಣ ಸಂಸ್ಕೃತಿ ಉತ್ಸವ ಹಾಗೂ ವಚನ ಗ್ರಂಥಿ ಮಹಾ ರಥೋತ್ಸವ ಕಾರ್ಯಕ್ರಮವು ಜ14ಮತ್ತು 15 ರಂದು ಹಾವೇರಿ ಜಿಲ್ಲೆಯ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ ನೆರವೇರಲಿದೆ ಎಂದು ಪೀಠಾಧ್ಯಕ್ಷ ಶಂತಭೀಷ್ಮಚೌಡಯ್ಯ ಸ್ವಾಮೀಜಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಅಂಗವಾಗಿ ನಿಜಶರಣ ಅಂಬಿಗರ ಚೌಡಯ್ಯನವರ ಶಿಲಾಮಂಟಪ, ಕಂಚಿನ ಪುತ್ತಳಿ ಲೋಕಾರ್ಪಣೆ ಹಾಗೂ ಮಹರ್ಷಿ ವೇದವ್ಯಾಸ ಕಲ್ಯಾಣ ಮಂಟಪ ಉದ್ಘಾಟನೆ ನೆರವೇರಲಿದೆ ಎಂದರು.

ಜ.14ರ ಬೆಳಿಗ್ಗೆ 6 ಗಂಟೆಗೆ ನಿಜಶರಣ ಅಂಬಿಗರ ಚೌಡಯ್ಯನವರ ತೊಟ್ಟಿಲೋತ್ಸವ, 8 ಕ್ಕೆ ಐಕ್ಯಮಂಟಪ ಪೂಜೆ, 10ಕ್ಕೆ ಸಾಮೂಹಿಕ ರಕ್ತದಾನ, 11ಕ್ಕೆ ಸಾಮೂಹಿಕ ಸರಳ ವಿವಾಹ, ಲಿಂಗೈಕ್ಯ ಶ್ರೀ ಶಾಂತಮುನಿ ಸ್ವಾಮೀಜಿಗಳ 10ನೇ ಸ್ಮರಣೋತ್ಸವ ಮಧ್ಯಾಹ್ನ 12 ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ವಚನ ಕಂಠಪಾಠ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ, ಸಂಜೆ 7ಕ್ಕೆ ಐತಿಹಾಸಿಕ ಗಂಗಾರತಿ, ೮ಕ್ಕೆ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಜ.15 ರಂದು ಬೆಳಿಗ್ಗೆ 8 ಗಂಟೆಗೆ ಧರ್ಮ ಧ್ವಜಾರೋಹಣ, 9.30ಕ್ಕೆ ಧರ್ಮಸಭೆ, 10 ಕ್ಕೆ ಚೌಡಯ್ಯನವರ ಶಿಲಾಮಂಟಪ, 6 ಅಡಿ ಎತ್ತರದ ಕಂಚಿನ ಪುತ್ತಳಿ ಲೋಕಾರ್ಪಣೆ ಹಾಗೂ ಮಹರ್ಷಿ ವೇದವ್ಯಾಸ ಕಲ್ಯಾಣ ಮಂಟಪ ಉದ್ಘಾಟನೆ, 11 ಗಂಟೆಗೆ ಅಂಬಿಗರ ಚೌಡಯ್ಯಅವರ 906 ನೇ ಜಯಂತೋತ್ಸವ, ಮಧ್ಯಾಹ್ನ 12 ಶಾಂತಭೀಷ್ಮಚೌಡಯ್ಯ ಮಹಾಸ್ವಾಮೀಜಿಗಳ ಪೀಠಾರೋಹಣ ದಶಮಾನೋತ್ಸವ, ಸಂಜೆ 5 ಕ್ಕೆ ವಚನ ಗ್ರಂಥ ಮಹಾರಥೋತ್ಸವ ನಡೆಯಲಿದೆ ಎಂದು ವಿವರಿಸಿದರು.
ಸಾಮೂಹಿಕ ವಿವಾಹ ಮಾಡಿಕೊಳ್ಳುವವರು ಜ.1 ರೊಳಗೆ ಹಾಗೂ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರಕ್ಕೆ ಜ.5 ರೊಳಗೆ ನೋಂದಾಯಿಸಿಕೊಳ್ಳುವಂತೆ ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಠದ ನಿರ್ದೇಶಕ ಬಸವರಾಜ ಸಪ್ಪನಗೋಳ, ಮಂಡ್ಯ ಜಿಲ್ಲಾ ಗಂಗಾಮತಸ್ತ(ಬೆಸ್ತರ್) ಸಂಘದ ಅಧ್ಯಕ್ಷ ಎಸ್.ರಮೇಶ್, ಗಂಗಾಮತಸ್ತರ ಸರ್ಕಾರಿ ನೌಕರರ ಸಂಘದ ರಾಜ್ಯ ಗೌರವಾಧ್ಯಕ್ಷ ಕೃಷ್ಣಯ್ಯ, ಜಿ.ಪಂ ಮಾಜಿ ಸದಸ್ಯ ವೀರಣ್ಣ, ಎಂ.ಚಂದ್ರು ಹಾಜರಿದ್ದರು.
-
State24 hours agoಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಗೌರವ ನೀಡುತ್ತೇವೆ: ಡಾ.ಜಿ. ಪರಮೇಶ್ವರ್
-
Hassan2 hours agoವಿದ್ಯಾರ್ಥಿನಿಗೆ ಥಳಿತ : ಶಿಕ್ಷಕನ ಮೇಲೆ ಕೇಸ್
-
Hassan6 hours agoತಲೆಗೆ ಪಿಸ್ತೂಲ್ನಿಂದ ಗುಂಡು ಹಾರಿಸಿಕೊಂಡು ನಿವೃತ್ತ ಯೋಧ ಆತ್ಮಹತ್ಯೆ
-
National7 hours agoಏಕದಿನ ವಿಶ್ವಕಪ್ ಗೆಲುವಿನ ನಂತರ ಮಹಿಳಾ ದೇಶೀಯ ಕ್ರಿಕೆಟ್ನ ಪಂದ್ಯ ಶುಲ್ಕ ಹೆಚ್ಚಿಸಿದ ಬಿಸಿಸಿಐ!
-
Mysore2 hours agoದ್ವೇಷ ಭಾಷಣ, ಅಪರಾಧಗಳ ಪ್ರತಿಬಂಧಕ ವಿಧೇಯಕ-2026 ವಿರೋಧಿಸಿ ಬಿಜೆಪಿ ಪ್ರತಿಭಟನೆ
-
State4 hours agoನಟ ಪ್ರಕಾಶ್ ರಾಜ್ 17ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ರಾಯಭಾರಿಯಾಗಿ ಆಯ್ಕೆ
-
Kodagu4 hours agoರಸ್ತೆ ಉದ್ಘಾಟನೆ ನೆರವೇರಿಸಿದ ಶಾಸಕ ಎ.ಎಸ್. ಪೊನ್ನಣ್ಣ
-
State2 hours agoಡಾ.ಮನಮೋಹನ್ ಸಿಂಗ್ ವಿವಿಯ ಹೊಸ ಸ್ನಾತಕೋತ್ತರ ಉದ್ಘಾಟಿಸಿದ ಡಾ.ಎಂ.ಸಿ.ಸುಧಾಕರ್
