Chikmagalur
ಜಿಲ್ಲಾ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಿ.ಟಿ.ರವಿ
ಚಿಕ್ಕಮಗಳೂರು: ನಗರದ ಅರಳಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿನ ಅವ್ಯವಸ್ಥೆ ಹಾಗೂ ಔಷಧಿಗಳ ತೀವ್ರ ಕೊರತೆಯ ಕುರಿತು ಕೇಳಿಬಂದ ದೂರುಗಳ ಹಿನ್ನೆಲೆಯಲ್ಲಿ, ಎಂಎಲ್‌ಸಿ ಡಾ.ಸಿ.ಟಿ. ರವಿ ಅವರು ಇಂದು ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆಸ್ಪತ್ರೆಯ ದುಸ್ಥಿತಿ ಕಂಡು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಸಿ.ಟಿ. ರವಿ ಅವರಿಗೆ ರೋಗಿಗಳು ಮತ್ತು ಅವರ ಸಂಬಂಧಿಕರು ತಮ್ಮ ಸಂಕಷ್ಟಗಳನ್ನು ಬಿಚ್ಚಿಟ್ಟರು. “ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ಸಿಗುತ್ತದೆ ಎಂದು ಬಂದರೆ, ಇಲ್ಲಿನ ವೈದ್ಯರು ಔಷಧಿಗಳನ್ನು ಹೊರಗಿನಿಂದ ತರಲು ಚೀಟಿ ಬರೆದುಕೊಡುತ್ತಿದ್ದಾರೆ. ಬಡವರು ಹಣಕ್ಕೆ ಎಲ್ಲಿ ಹೋಗಬೇಕು?” ಎಂದು ರೋಗಿಗಳ ಸಂಬಂಧಿಕರು ಕಣ್ಣೀರಿಟ್ಟರು. ಆಸ್ಪತ್ರೆಯ ಅವ್ಯವಸ್ಥೆ ಕಂಡು ಸಿ.ಟಿ. ರವಿ ಅವರು ಜಿಲ್ಲಾ ಸರ್ಜನ್ ಹಾಗೂ ವೈದ್ಯರ ವಿರುದ್ಧ ಸ್ಥಳದಲ್ಲೇ ಗರಂ ಆದರು.

ಆಸ್ಪತ್ರೆಯ ಸಿಬ್ಬಂದಿ ಹಾಗೂ ಜಿಲ್ಲಾ ಸರ್ಜನ್ ಅವರನ್ನು ತರಾಟೆಗೆ ತೆಗೆದುಕೊಂಡ ಸಿ.ಟಿ. ರವಿ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಡವರ ಬದುಕು ದುಸ್ತರ
“ಸರ್ಕಾರಿ ಆಸ್ಪತ್ರೆಗೆ ಬರುವವರು ಅಸಹಾಯಕರು ಮತ್ತು ಬಡವರು. ಇಲ್ಲಿಯೇ ಔಷಧಿ ಇಲ್ಲದಿದ್ದರೆ ಅವರು ಎಲ್ಲಿಂದ ಹಣ ತರಬೇಕು? ರಾಜ್ಯದಾದ್ಯಂತ ಪ್ರತಿ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ಕಾಡುತ್ತಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆದ್ಯತೆ ಯಾವುದು?: “ನಿಮಗೆ ಸಚಿವ ಸಂಪುಟದ ಸ್ಥಾನಮಾನ ನೀಡುವುದು ಮೊದಲ ಆದ್ಯತೆಯೋ ಅಥವಾ ಜೀವ ಉಳಿಸಿಕೊಳ್ಳಲು ಬರುವ ಬಡವರಿಗೆ ಚಿಕಿತ್ಸೆ ನೀಡುವುದು ಆದ್ಯತೆಯೋ?” ಎಂದು ಸರ್ಕಾರವನ್ನು ನೇರವಾಗಿ ಪ್ರಶ್ನಿಸಿದರು.
ಡಯಾಲಿಸಿಸ್ ಸಮಸ್ಯೆ: ಡಯಾಲಿಸಿಸ್ ಘಟಕದ ಟೆಂಡರ್ ಪಡೆದ ಖಾಸಗಿ ಕಂಪನಿಗೆ ಕಳೆದ 10 ತಿಂಗಳಿನಿಂದ ಸರ್ಕಾರ ಒಂದು ರೂಪಾಯಿ ಹಣವನ್ನೂ ನೀಡಿಲ್ಲ. ಇದರಿಂದಾಗಿ ರೋಗಿಗಳಿಗೆ ಚಿಕಿತ್ಸೆ ಸಿಗದಂತಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ತುರ್ತು ಕ್ರಮಕ್ಕೆ ಆಗ್ರಹ: ಔಷಧಿಗಳ ಸರಬರಾಜು ಸಂಬಂಧ ಸರ್ಕಾರ ಯಾವುದೇ ಗಂಭೀರ ಕ್ರಮ ಕೈಗೊಂಡಿಲ್ಲ. ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಬಡ ರೋಗಿಗಳಿಗೆ ಅಗತ್ಯವಿರುವ ಔಷಧಿ ಹಾಗೂ ಸೌಲಭ್ಯಗಳನ್ನು ಒದಗಿಸಬೇಕು, ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದು ಅವರು ಎಚ್ಚರಿಸಿದರು.
Chikmagalur
ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ – ಸಿ.ಟಿ. ರವಿ ವಿರುದ್ಧ ಎಸ್‌ಡಿಪಿಐ ದೂರು
ಚಿಕ್ಕಮಗಳೂರು: ಯೂತ್ ಫಾರ್ ನೇಷನ್ ವತಿಯಿಂದ ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಅವರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಸಿ.ಟಿ. ರವಿ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಸಂಸತ್ ಭವನದ ಬಳಿ ನಡೆದ ಪ್ರತಿಭಟನೆಗಳ ಕುರಿತು ವಾಗ್ದಾಳಿ ನಡೆಸುವ ವೇಳೆ ಮುಸ್ಲಿಂ ಸಮುದಾಯವನ್ನು ಉದ್ದೇಶಿಸಿ, “ನೀಟ್ ಪರೀಕ್ಷೆಗೂ ಹಾಗೂ ಮುಲ್ಲಾಗಳಿಗೂ ಏನು ಸಂಬಂಧ, ಅವರ ಎದೆ ಸೀಳಿದರೆ ಮೂರು ಅಕ್ಷರವೂ ಇಲ್ಲ, ಅಂತಹವರು ನೀಟ್ ವಿರುದ್ಧ ಹೋರಾಟ ಮಾಡುತ್ತಿದ್ದಾರೆ” ಎಂದು ಹೇಳಿಕೆ ನೀಡಿದ್ದರು.
ಈ ಹೇಳಿಕೆಯಿಂದ ಮುಸ್ಲಿಂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ, ಸಮುದಾಯವನ್ನು ಅವಹೇಳನ ಮಾಡಲಾಗಿದೆ ಹಾಗೂ ಸಮಾಜದಲ್ಲಿ ದ್ವೇಷ ಮತ್ತು ಅಶಾಂತಿ ಸೃಷ್ಟಿಸಲು ಯತ್ನಿಸಲಾಗಿದೆ ಎಂದು ಆರೋಪಿಸಿ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಚಿಕ್ಕಮಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಿಜ್ವಾನ್ ಹುಸೇನ್ ಅವರು ಸಿ.ಟಿ. ರವಿ ವಿರುದ್ಧ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ದ್ವೇಷಪೂರಿತ ಭಾಷಣ ಮಾಡಿದ ಆರೋಪದಡಿ ಸಿ.ಟಿ. ರವಿ ವಿರುದ್ಧ ಸೂಕ್ತ ಹಾಗೂ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ.
Chikmagalur
ಕೂಲಿ ವಿವಾದ – ಕಾರ್ಮಿಕರನ್ನು ಬೆದರಿಸಲು ಹೋದ ತೋಟದ ಮಾಲೀಕನಿಂದ ಮಿಸ್ ಫೈರ್; ಮಗುವಿಗೆ ಗಂಭೀರ ಗಾಯ!
ಮೂಡಿಗೆರೆ: ಕೂಲಿ ಹಣದ ವಿಚಾರವಾಗಿ ತೋಟದ ಮಾಲೀಕ ಮತ್ತು ಕಾರ್ಮಿಕರ ನಡುವೆ ಉಂಟಾದ ಜಗಳ ತಾರಕಕ್ಕೇರಿ, ಮಾಲೀಕ ನಡೆಸಿದ ಮಿಸ್ ಫೈರಿಂಗ್‌ನಿಂದಾಗಿ ಅಪ್ರಾಪ್ತ ಮಗುವಿನ ತಲೆಗೆ ಗಂಭೀರ ಗಾಯವಾಗಿರುವ ಘಟನೆ ಮೂಡಿಗೆರೆ ತಾಲೂಕಿನ ಬಾಳೆಹಳ್ಳಿ ಗ್ರಾಮದಲ್ಲಿ ನಡೆದಿದೆ.

ಘಟನೆಯ ಹಿನ್ನೆಲೆ:
ಬಾಳೆಹಳ್ಳಿ ಗ್ರಾಮದ ತೋಟದ ಮಾಲೀಕ ಜಗದೀಶ್ ಗೌಡ ಎಂಬುವರ ಬಳಿ ಅಸ್ಸಾಂ ಮೂಲದ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ದಿನವೊಂದಕ್ಕೆ 400 ರೂಪಾಯಿ ಕೂಲಿ ನೀಡುವಂತೆ ಕಾರ್ಮಿಕರು ಪಟ್ಟು ಹಿಡಿದಿದ್ದರು. ಆದರೆ ಮಾಲೀಕ ಜಗದೀಶ್ ಗೌಡ, “ಈಗ 350 ರೂಪಾಯಿ ನೀಡುತ್ತೇನೆ, ಬಾಕಿ 50 ರೂಪಾಯಿಯನ್ನು ಆಮೇಲೆ ಕೊಡುತ್ತೇನೆ” ಎಂದು ಹೇಳಿದ್ದಾರೆ ಎನ್ನಲಾಗಿದೆ.
ಇದಕ್ಕೆ ಒಪ್ಪದ ಕಾರ್ಮಿಕರು, “ಈಗಲೇ 400 ರೂಪಾಯಿ ಕೊಟ್ಟರೆ ಮಾತ್ರ ಕೆಲಸ ಮಾಡುತ್ತೇವೆ, ಇಲ್ಲವಾದಲ್ಲಿ ಕೆಲಸ ಮಾಡುವುದಿಲ್ಲ” ಎಂದು ಅಲ್ಲಿಂದ ಹೊರಡಲು ಅನುವಾಗಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು, ಕಾರ್ಮಿಕರು ಮಾಲೀಕನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಮಿಸ್ ಫೈರ್ – ಮಗುವಿಗೆ ಗಾಯ:
ಸ್ಥಿತಿ ಕೈಮೀರುತ್ತಿದ್ದಂತೆ ಕಾರ್ಮಿಕರನ್ನು ಬೆದರಿಸಲು ತೋಟದ ಮಾಲೀಕ ಜಗದೀಶ್ ಗೌಡ ಬಂದೂಕಿನಿಂದ ಗುಂಡು ಹಾರಿಸಲು ಯತ್ನಿಸಿದ್ದು, ಈ ವೇಳೆ ಆಕಸ್ಮಿಕವಾಗಿ ಮಿಸ್ ಫೈರ್ ಆಗಿದೆ. ಪರಿಣಾಮವಾಗಿ ಸ್ಥಳದಲ್ಲಿದ್ದ ಅಪ್ರಾಪ್ತ ಮಗುವಿನ ತಲೆಗೆ ಗುಂಡು ತಾಗಿ ಗಂಭೀರ ಗಾಯಗಳಾಗಿವೆ.

ಆಸ್ಪತ್ರೆಗೆ ದಾಖಲು:
ಗಾಯಗೊಂಡ ಮಗುವನ್ನು ತಕ್ಷಣವೇ ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಆದರೆ ಮಗುವಿನ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದರಿಂದ, ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Chikmagalur
ಮೂಡಿಗೆರೆಯಲ್ಲಿ ಖೋಟಾ ನೋಟು ಚಲಾವಣೆ ಜಾಲ ಭೇದಿಸಿದ ಪೋಲಿಸರು: ಇಬ್ಬರ ಬಂಧನ, ₹18,000 ನಕಲಿ ಹಣ ವಶ!
ಚಿಕ್ಕಮಗಳೂರು (ಮೂಡಿಗೆರೆ): ಖೋಟಾ ನೋಟುಗಳನ್ನು ಚಲಾವಣೆ ಮಾಡಲು ಯತ್ನಿಸುತ್ತಿದ್ದ ಬೃಹತ್ ಜಾಲವೊಂದನ್ನು ಮೂಡಿಗೆರೆ ಠಾಣೆ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ₹200 ಮುಖಬೆಲೆಯ ಒಟ್ಟು ₹18,000 ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಘಟನೆಯ ವಿವರ:
ಮೂಡಿಗೆರೆ ಪಟ್ಟಣದ ನೂತನ ಲೇಔಟ್ ಪ್ರದೇಶದಲ್ಲಿ ನಕಲಿ ನೋಟುಗಳನ್ನು ಚಲಾವಣೆ ಮಾಡಲು ಯತ್ನಿಸುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಕೈಯಾರೆ ಹಿಡಿದಿದ್ದಾರೆ. ಬಂಧಿತ ಆರೋಪಿಗಳು: ಮಂಗಳೂರು ಮೂಲದ ಮಹಮದ್ ಅಲಿ ಹಾಗೂ ಮೂಡಿಗೆರೆಯ ಸ್ಥಳೀಯ ನಿವಾಸಿ ಮಹೇಶ್. ವಶಪಡಿಸಿಕೊಂಡ ಸೊತ್ತು: ಇಬ್ಬರೂ ಆರೋಪಿಗಳ ಬಳಿ ತಲಾ 45 ರಂತೆ ಒಟ್ಟು 90 ನಕಲಿ ನೋಟುಗಳು (₹200 ಮುಖಬೆಲೆ) ಪತ್ತೆಯಾಗಿವೆ.
ರಿಸರ್ವ್ ಬ್ಯಾಂಕ್ ಆಫ್ ‘ಇಂಡಿಯಾ’ ಅಲ್ಲ, ‘ಬಿಸರ್ವ್ ಬ್ಯಾಂಕ್!’
ಆರೋಪಿಗಳು ಚಲಾವಣೆ ಮಾಡಲು ತಂದಿದ್ದ ನೋಟುಗಳ ಮೇಲೆ ‘ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ’ (Reserve Bank of India) ಎಂದು ಇರಬೇಕಾದ ಜಾಗದಲ್ಲಿ ‘ಬಿಸರ್ವ್ ಬ್ಯಾಂಕ್ ಆಫ್ ಇಂಡಿಯಾ’ (Beserve Bank of India) ಎಂದು ಮುದ್ರಿಸಲಾಗಿತ್ತು. ಮಂಗಳೂರಿನಿಂದ ಆಗಮಿಸಿದ್ದ ಮಹಮದ್ ಅಲಿ, ಮೂಡಿಗೆರೆಯಲ್ಲಿ ಈ ನಕಲಿ ನೋಟುಗಳನ್ನು ಮಾರಾಟ ಮಾಡಲು ಹಾಗೂ ಚಲಾವಣೆ ಮಾಡಲು ಯತ್ನಿಸುತ್ತಿದ್ದ ಎಂದು ತಿಳಿದುಬಂದಿದೆ.

ಪೋಲಿಸ್ ಕಠಿಣ ಕ್ರಮ:
ಸದ್ಯ ಮೂಡಿಗೆರೆ ಪೊಲೀಸರು ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ನಕಲಿ ನೋಟುಗಳನ್ನು ಜಪ್ತಿ ಮಾಡಿದ್ದಾರೆ. ಈ ಕುರಿತು ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಜಾಲದ ಹಿಂದೆ ಇನ್ನು ಯಾರಿದ್ದಾರೆ ಹಾಗೂ ನಕಲಿ ನೋಟುಗಳ ಮುದ್ರಣ ಎಲ್ಲಿ ನಡೆಯುತ್ತಿತ್ತು ಎಂಬ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
-
National23 hours agoನೀಟ್ ವಿವಾದ: ಉನ್ನತ ಶಿಕ್ಷಣ ಕಾರ್ಯದರ್ಶಿ ವಿನೀತ್ ಜೋಶಿ ವಜಾ, ನರೇಶ್ ಗಂಗ್ವಾರ್ ನೇಮಕ
-
Chikmagalur22 hours agoಮೂಡಿಗೆರೆಯಲ್ಲಿ ಖೋಟಾ ನೋಟು ಚಲಾವಣೆ ಜಾಲ ಭೇದಿಸಿದ ಪೋಲಿಸರು: ಇಬ್ಬರ ಬಂಧನ, ₹18,000 ನಕಲಿ ಹಣ ವಶ!
-
National19 hours agoನೀಟ್ ಪ್ರಕರಣ: ಎರಡು ಬೇಡಿಕೆ ಒಪ್ಪಿದ ಕೇಂದ್ರ, ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಸಿಜೆಪಿ ಪಟ್ಟು
-
Kodagu15 hours agoನಾಪೋಕ್ಲು ಹೋಬಳಿ ಕರ್ನಾಟಕ ರಕ್ಷಣಾ ವೇದಿಕೆ ನೂತನ ಪದಾಧಿಕಾರಿಗಳ ಆಯ್ಕೆ -ಅಧ್ಯಕ್ಷರಾಗಿ ಅನೀಫ್ ನೇಮಕ
-
Mysore24 hours ago“ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ”: ಶಾಸಕ ಗಣಿಗ ರವಿಕುಮಾರ್ ಸ್ಪಷ್ಟನೆ
-
Chikmagalur2 hours agoಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ – ಸಿ.ಟಿ. ರವಿ ವಿರುದ್ಧ ಎಸ್‌ಡಿಪಿಐ ದೂರು
-
Kodagu15 hours ago₹24 ಲಕ್ಷ ವೆಚ್ಚದ 3 ಕಾಂಕ್ರೀಟ್ ರಸ್ತೆಗಳ ಲೋಕಾರ್ಪಣೆಗೊಳಿಸಿದ ಎ.ಎಸ್.ಪೊನ್ನಣ್ಣ
-
Chamarajanagar17 hours agoಹೊಂಗನೂರಿನಲ್ಲಿ ಶಾಲಾ–ಕಾಲೇಜು ವಿದ್ಯಾರ್ಥಿಗಳ ಪರದಾಟ: ಸಮಯಕ್ಕೆ ಬಸ್ ಇಲ್ಲದೆ ನಿತ್ಯ ಸಂಕಷ್ಟ
