State
ರಾಜ್ಯಾದ್ಯಂತ ಹೆಚ್ಚಿದ ಹಕ್ಕಿಜ್ವರ: ಕೋಳಿ ಸೇವನೆಗೆ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ

ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಹಕ್ಕಿಜ್ವರದ ಆತಂಕ ಹೆಚ್ಚಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಹಕ್ಕಿಜ್ವರ ನಿಯಂತ್ರಣಕ್ಕಾಗಿ ಪಶುಸಂಗೋಪನೆ ಇಲಾಖೆ ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿದೆ.
ಕೇಂದ್ರ ಸರ್ಕಾರ ಮಾರ್ಗಸೂಚಿ ಬಿಡುಗಡೆಗೊಳಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರವು ಇಂದು ಗೈಡ್‌ಲೈನ್ಸ್ ಬಿಡುಗಡೆ ಮಾಡಿದೆ.
ಹಕ್ಕಿ ಜ್ವರದ ಮಧ್ಯೆಯೂ ಕೋಳಿ ಸೇವನೆಗೆ ಯಾವೆಲ್ಲಾ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದೆ.
೧) 70 ಡಿಗ್ರಿ ಸೆಂಟಿಗ್ರೇಡ್ ಅಧಿಕ ಉಷ್ಣಾಂಶದಲ್ಲಿ ಕನಿಷ್ಠ 30 ನಿಮಿಷ ಕೋಳಿ ಬೇಯಿಸಿ ಕೋಳಿ ಮಾಂಸ ಮತ್ತು ಮೊಟ್ಟೆ ಸೇವಿಸಬಹುದು
೨) ಕೋಳಿ ಮಾಂಸವನ್ನು ಅಡುಗೆಗೆ ತಯಾರು ಮಾಡುವವರು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು
೩) ಅಡುಗೆಗಾಗಿ ಕೋಳಿಮಾಂಸವನ್ನು ತಯಾರು ಮಾಡಿದ ಬಳಿಕ ನಂಜುನಾಶಕದಿಂದ ಕೈಗಳನ್ನು ಶುಚಿಗೊಳಿಸಿಕೊಳ್ಳಬೇಕು
೪) ಹಸಿ ಕೋಳಿಮಾಂಸ, ಅದರ ದ್ರವಗಳು ಅಥವಾ ಬೇಯಿಸಿದ ಮೊಟ್ಟೆಯನ್ನು ಬೇಯಿಸದೇ ಉಪಯೋಗಿಸುವ ಆಹಾರ ಪದಾರ್ಥಗಳು ಸಂಪರ್ಕಕ್ಕೆ ಬಾರದಂತೆ ಎಚ್ಚರಿಕೆ ವಹಿಸಬೇಕು
೫) ಬೇಯಿಸದಿರುವ, ಅರೆಬೆಂದ ಮೊಟ್ಟೆಯನ್ನು ತಿನ್ನಬಾರದು
೬) ಅಧಿಕ ಉಷ್ಣಾಂಶದ ವಾತಾವರಣದಲ್ಲಿ ವೈರಾಣು ಹೆಚ್ಚಿನ ಕಾಲ ಬದುಕುಳಿಯುವುದಿಲ್ಲ
ಇದಿಷ್ಟು ನಿಯಮಗಳನ್ನು ಜನರು ಪಾಲನೆ ಮಾಡಲೇಬೇಕು ಎಂದು ಪಶುಸಂಗೋಪನಾ ಇಲಾಖೆ ಸೂಚನೆ ನೀಡಿದೆ. ಇದರ ಜೊತೆಗೆ ಸಾರ್ವಜನಿಕರು ಅನಗತ್ಯವಾಗಿ ಕೋಳಿ ಫಾರಂಗೆ ಭೇಟಿ ನೀಡಬಾರದು ಎಂದು ಎಚ್ಚರಿಕೆ ನೀಡಲಾಗಿದೆ.
State
ಸಭಾಧ್ಯಕ್ಷ ಯು ಟಿ ಖಾದರ್ ಮನವಿಗೆ ಸ್ಪಂದಿಸಿದ ಶಿಕ್ಷಣ ಇಲಾಖೆ

ಕ್ರಿಶ್ಚಿಯನ್ ಸಮುದಾಯದ ಶಿಕ್ಷಕ/ಶಿಕ್ಷಕಿಯರಿಗೆ ಈಸ್ಟರ್ ಗುಡ್ ಫ್ರೈಡೇ ದಿನಗಳಲ್ಲಿ ಎಸ್ ಎಸ್ ಎಲ್ ಸಿ ಮೌಲ್ಯ ಮಾಪನ ಕರ್ತವ್ಯಕ್ಕೆ ವಿನಾಯಿತಿ,ಸಭಾಧ್ಯಕ್ಷ ಯು ಟಿ ಖಾದರ್ ಮನವಿಗೆ ಸ್ಪಂದಿಸಿದ ಶಿಕ್ಷಣ ಇಲಾಖೆ
ಪವಿತ್ರ ಈಸ್ಟರ್,ಗುಡ್ ಫ್ರೈಡೇ ದಿನಗಳಲ್ಲಿ ಕ್ರಿಶ್ಚಿಯನ್ ಸಮುದಾಯದ ಶಿಕ್ಷಕ/ಶಿಕ್ಷಕಿಯರು ಎಸ್ ಎಸ್ ಎಲ್ ಸಿ ಮೌಲ್ಯ ಮಾಪನದ ಕರ್ತವ್ಯಕ್ಕೆ ಹಾಜರಾಗಬೇಕಾಗಿತ್ತು.ಈ ಬಗ್ಗೆ ಯು ಟಿ ಖಾದರ್ ರವರ ಬಳಿ ಕ್ರಿಶ್ಚಿಯನ್ ಸಮುದಾಯದ ಶಿಕ್ಷಕ ಶಿಕ್ಷಕಿಯರು ಸರಕಾರದ ಜೊತೆ ಮಾತುಕತೆ ನಡೆಸಿ ವಿನಾಯಿತಿ ದೊರಕಿಸಿಕೊಡುವಂತೆ ಮನವಿ ಮಾಡಿದ್ದರು.
ಈ ಬಗ್ಗೆ ಶಿಕ್ಷಣ ಇಲಾಖೆಯ ಮಂತ್ರಿಗಳು ಹಾಗೂ ಮುಖ್ಯ ಕಾರ್ಯದರ್ಶಿಗಳ ಜೊತೆ ಮಾತುಕತೆ ನಡೆಸಿದ ಸಭಾಧ್ಯಕ್ಷ ಯು ಟಿ ಖಾದರ್ ಈಸ್ಟರ್ ಗುಡ್ ಫ್ರೈಡೇ ದಿನಗಳಾದ ಗುರುವಾರ,ಶುಕ್ರವಾರ ಹಾಗೂ ಭಾನುವಾರ ಕರ್ತವ್ಯಕ್ಕೆ ವಿನಾಯಿತಿ ನೀಡುವಂತೆ ಸೂಚನೆ ನೀಡಿದ್ದರು.
ಅದರಂತೆ ಶಿಕ್ಷಣ ಇಲಾಖೆಯು ಕ್ರಿಶ್ಚಿಯನ್ ಸಮುದಾಯದ ಶಿಕ್ಷಕ/ಶಿಕ್ಷಕಿಯರಿಗೆ ಈಸ್ಟರ್,ಗುಡ್ ಫ್ರೈಡೇ ದಿನಗಳಲ್ಲಿ ವಿನಾಯಿತಿ ನೀಡಿ ಉಳಿದ ದಿನಗಳಲ್ಲಿ ಹಾಜರಾಗಲು ಅನುಮತಿ ನೀಡಲಾಗಿದೆ ಎಂದು ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು ಮಾಹಿತಿ ನೀಡಿದ್ದಾರೆ.
State
ಸಿದ್ದರಾಮಯ್ಯ ಜಾತಿಗಣತಿಯನ್ನ ರಾಜಕೀಯ ದಾಳವಾಗಿ ಬಳಸುತ್ತಿದ್ದಾರೆ: ಆರ್.ಅಶೋಕ್

ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗದ ಕಾಂತರಾಜು ವರದಿ ಬಗ್ಗೆ ನಾಡಿನ ಜನತೆಗೆ ಅನುಮಾನ ಇರುವ ಕಾರಣ, ಇನ್ನಾದರೂ ಒಣ ಪ್ರತಿಷ್ಠೆ ಮತ್ತು ಸ್ವಹಿತಾಸಕ್ತಿ ಬದಿಗಿಟ್ಟು ಎಲ್ಲರೂ ಒಪ್ಪುವಂತಹ ವೈಜ್ಞಾನಿಕ ಸಮೀಕ್ಷೆ ನಡೆಸಿ ಹೊಸ ವರದಿ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಬೇಕು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಆಶೋಕ್ ಆಗ್ರಹಿಸಿದ್ದಾರೆ.
ಈ ಕುರಿತು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಆಶೋಕ್ ಅವರು, ಎಲ್ಲರೂ ಒಪ್ಪುವಂತಹ ವೈಜ್ಞಾನಿಕ ಸಮೀಕ್ಷೆ ನಡೆಸಿ ಹೊಸ ವರದಿ ಪಡೆಯಲು ತಮ್ಮ ತಕರಾರೇನು? ಸಿಎಂ ಸಿದ್ದರಾಮಯ್ಯನವರು ಪ್ರಾಮಾಣಿಕ ಮತ್ತು ಪಾರದರ್ಶಕ ನಿರ್ಧಾರ ತೆಗೆದುಕೊಳ್ಳಲಿ ಎಂದು ಒತ್ತಾಯಿಸಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರೊಂದಿಗೆ ಆಗಿದೆ ಎನ್ನಲಾದ ಅಧಿಕಾರ ಹಂಚಿಕೆ ಒಪ್ಪಂದವನ್ನು ಹೇಗಾದರೂ ಮಾಡಿ ಮುಂದೂಡಲು, ಅಧಿಕಾರ ಹಂಚಿಕೆ ಒಪ್ಪಂದದಿಂದ ತಪ್ಪಿಸಿಕೊಳ್ಳಲು ಜಾತಿ ಜನಗಣತಿ ವರದಿಯನ್ನು ತಂತ್ರವಾಗಿ ಬಳಸಿಕೊಳ್ಳಲಾಗುತ್ತಿದೆಯೇ?. ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ತಾವು ಈ ವರದಿ ಜಾರಿ ಬಾಣ ಬಿಟ್ಟಿರುವ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲೇ ಚರ್ಚೆ ನಡೆಯುತ್ತಿದೆ. ಇದರ ಬಗ್ಗೆ ಏನು ಹೇಳುತ್ತೀರಿ? ಎಂದು ಪ್ರಶ್ನೆಸಿದ್ದಾರೆ.
ಜಾತಿಗಣತಿಯನ್ನ ರಾಜಕೀಯ ದಾಳವಾಗಿ ಬಳಸುವುದು ದಲಿತರಿಗೆ, ಹಿಂದುಳಿದ ವರ್ಗಗಳಿಗೆ, ತಳ ಸಮುದಾಯಗಳಿಗೆ ಮಾಡುವ ಅಪಮಾನವಲ್ಲವೇ? ಸಾಮಾಜಿಕ ನ್ಯಾಯವೆಂಬ ಪವಿತ್ರ ಪರಿಕಲ್ಪನೆಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವುದು ಆತ್ಮವಂಚನೆಯಲ್ಲವೇ? ಜಾತಿ ಜನಗಣತಿ ವರದಿಯ ದತ್ತಾಂಶಗಳು ಮಾಧ್ಯಮಗಳಲ್ಲಿ ಸೋರಿಕೆಯಾಗಲು ಕಾರಣವೇನು? ಇದು ಸರ್ಕಾರದ ಲೋಪವೋ ಅಥವಾ ಉದ್ದೇಶಪೂರ್ವಕವಾಗಿಯೇ ವರದಿಯ ಅಂಕಿ-ಅಂಶಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಲಾಗುತ್ತಿದೆಯೇ? ಕೇವಲ ವೀರಶೈವ ಲಿಂಗಾಯತ ಮತ್ತು ಒಕ್ಕಲಿಗ ಜನಾಂಗಕ್ಕೆ ಸೇರಿದ ಉಪಜಾತಿಗಳನ್ನು ಬೇರ್ಪಡಿಸಲಾಗಿದೆ. ಇದೇ ಮಾನದಂಡ ಮುಸ್ಲಿಂ, ಕ್ರಿಶ್ಚಿಯನ್ ಧರ್ಮಗಳಿಗೆ ಏಕೆ ಅನುಸರಿಸಿಲ್ಲ? ಇದರ ಹಿಂದಿನ ಹುನ್ನಾರ ಏನು? ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
State
ಮತೀಯ ದ್ವೇಷ ಹುಟ್ಟಿಸಬೇಕೆಂಬ ಏಕೈಕ ದುರುದ್ದೇಶದಿಂದ ಮೋದಿ ಸುಳ್ಳು ಹೇಳುತ್ತಿದ್ದಾರೆ: ಸಿಎಂ

ಬೆಂಗಳೂರು: ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಬಾರದು ಎಂದು ಬಾಬಾಸಾಹೇಬ್ ಅಂಬೇಡ್ಕರ್ ಹೇಳಿದ್ದಾರೆ ಎನ್ನುವ ಹಸಿ ಹಸಿ ಸುಳ್ಳನ್ನು ದೇಶದ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರು ಹೇಳಿರುವುದು ಅತ್ಯಂತ ವಿಷಾದನೀಯವಾದುದು. ಮತೀಯ ದ್ವೇಷ ಹುಟ್ಟಿಸಬೇಕೆಂಬ ಏಕೈಕ ದುರುದ್ದೇಶದಿಂದ ಈ ರೀತಿಯ ಸುಳ್ಳುಗಳನ್ನು ಹೇಳುವ ಮಟ್ಟಕ್ಕೆ ದೇಶದ ಪ್ರಧಾನಿ ಇಳಿಯಬಾರದಿತ್ತು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸಿಎಂ ಸಿದ್ದರಾಮಯ್ಯ, ಪ್ರಧಾನಿ ಮೋದಿ ಅವರ ಭಾಷಣದ ವಿರುದ್ಧ ಕಿಡಿಕಾರಿದ್ದಾರೆ.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾಷಣ ಮತ್ತು ಬರವಣಿಗೆಗಳ ಹನ್ನೆರಡು ಸಂಪುಟಗಳನ್ನು ಮಹಾರಾಷ್ಟ್ರ ಸರ್ಕಾರ ವರ್ಷಗಳ ಹಿಂದೆಯೇ ಪ್ರಕಟಮಾಡಿದೆ. ಅವುಗಳ ಕನ್ನಡ ಅನುವಾದವನ್ನು ನಮ್ಮ ಸರ್ಕಾರವೇ ಮುದ್ರಿಸಿದೆ. ಅಲ್ಲೆಲ್ಲಾದರೂ ಧರ್ಮಾಧಾರಿತ ಮೀಸಲಾತಿ ಬೇಡ ಇಲ್ಲವೇ ಬೇಕು ಎನ್ನುವ ಅಂಬೇಡ್ಕರ್ ಅವರ ಅಭಿಪ್ರಾಯದ ಉಲ್ಲೇಖ ಇದ್ದರೆ ಅದನ್ನು ಪ್ರಧಾನಿ ಮೋದಿಯವರು ದೇಶದ ಜನರ ಮುಂದಿಡಬೇಕು, ಇಲ್ಲವಾದರೆ ಇಂತಹದ್ದೊಂದು ಸುಳ್ಳನ್ನು ಹೇಳಿರುವುದಕ್ಕಾಗಿ ದೇಶದ ಜನರ ಕ್ಷಮೆಯಾಚಿಸಬೇಕು.
ಕರ್ನಾಟಕದಲ್ಲಿ ಮುಸ್ಲಿಮರಿಗೆ ನೀಡಲಾಗಿರುವ ಮೀಸಲಾತಿ ಖಂಡಿತ ಧರ್ಮಾಧಾರಿತವಾದುದ್ದಲ್ಲ ಎನ್ನುವ ಸರಳವಾದ ಸತ್ಯವನ್ನು ನರೇಂದ್ರ ಮೋದಿ ಅವರು ಅರ್ಥಮಾಡಿಕೊಳ್ಳದೆ ಹೋಗಿರುವುದು ದುರಂತವೇ ಸರಿ. ಮುಸ್ಲಿಮರಿಗೆ ಅವರೊಳಗಿನ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಹಿಂದುಳಿಯುವಿಕೆಯನ್ನು ಆಧಾರವಾಗಿಟ್ಟುಕೊಂಡು ಮೀಸಲಾತಿ ನೀಡಲಾಗಿದೆಯೇ ಹೊರತು ಅದು ಧರ್ಮಾಧರಿತವಾದುದ್ದಲ್ಲ. ಇದನ್ನು ನಾನು ಹಲವು ಬಾರಿ ವಿಧಾನಮಂಡಲದ ಒಳಗೆ ಮತ್ತು ಹೊರಗೆ ಹೇಳಿದ್ದೇನೆ.
ಬಿಜೆಪಿಯ ಮಿತ್ರ ಪಕ್ಷವಾದ ತೆಲುಗುದೇಶಂ ಪಕ್ಷದ ನಾಯಕರು ಮತ್ತು ಆಂದ್ರಪ್ರದೇಶದ ಮುಖ್ಯಮಂತ್ರಿಗಳಾದ ಚಂದ್ರಬಾಬು ನಾಯ್ಡು ಅವರೇ ಬಹಿರಂಗವಾಗಿ ಮುಸ್ಲಿಂ ಮೀಸಲಾತಿಯನ್ನು ಬೆಂಬಲಿಸುತ್ತಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಭಿಪ್ರಾಯ ಏನು ಎನ್ನುವುದನ್ನು ನಾನು ತಿಳಿದುಕೊಳ್ಳಬಯಸುತ್ತೇನೆ.
ಮುಸ್ಲಿಂಮರಲ್ಲಿನ ಹಿಂದುಳಿಯುವಿಕೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಸನ್ಮಾನ್ಯ ನರೇಂದ್ರ ಮೋದಿ ಅವರು ತಿಳಿದುಕೊಳ್ಳಲು ಬಯಸುವುದಾದರೆ ಈ ಬಗ್ಗೆಯೇ ಅಧ್ಯಯನ ಮಾಡಿರುವ ಸಾಚಾರ್ ಸಮಿತಿಯ ವರದಿಯನ್ನು ಪರಿಶೀಲಿಸುವ ಕಷ್ಟ ತೆಗೆದುಕೊಳ್ಳಬೇಕು. ಆ ವರದಿಯ ಪ್ರಕಾರ ಶಿಕ್ಷಣ ಮತ್ತು ಉದ್ಯೋಗದ ಕ್ಷೇತ್ರಗಳಲ್ಲಿ ಮುಸ್ಲಿಂಮರ ಪ್ರಾತಿನಿಧ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗಿಂತಲೂ ಕಡಿಮೆ ಇದೆ.
ಮುಸ್ಲಿಂ ಸಮುದಾಯದ ಹಿತರಕ್ಷಣೆಗಾಗಿಯೇ ತಲಾಖ್ ನಿಷೇಧ ಮಾಡಿದ್ದೇವೆ, ವಕ್ಪ್ ಕಾಯ್ದೆಗೆ ತಿದ್ದುಪಡಿ ಮಾಡಿದ್ದೇವೆ ಎಂದು ಒಂದೆಡೆ ತಮ್ಮನ್ನು ಮುಸ್ಲಿಂ ಸಮುದಾಯದ ಸುಧಾರಕರಂತೆ ತಮ್ಮನ್ನು ಬಿಂಬಿಸಿಕೊಳ್ಳುತ್ತಿರುವ ನರೇಂದ್ರ ಮೋದಿ ಅವರು ಇನ್ನೊಂದೆಡೆ ಬಜರಂಗ ದಳದ ಕಾರ್ಯಕರ್ತನಂತೆ ಕೋಮುದ್ವೇಷವನ್ನು ಉಗುಳುತ್ತಿರುವುದು ಅವರು ಕೂತಿರುವ ಕುರ್ಚಿಗೆ ಮಾಡುತ್ತಿರುವ ಅವಮಾನವಾಗಿದೆ.
ವಕ್ಪ್ ಬೋರ್ಡಿನಲ್ಲಿ ಮುಸ್ಲಿಂಮೇತರರನ್ನು ಕಡ್ಡಾಯವಾಗಿ ಸದಸ್ಯರನ್ನಾಗಿ ಮಾಡುವ ತಿದ್ದುಪಡಿ ಕೋಮುದ್ವೇಷದಿಂದ ಕೂಡಿರುವುದು ಮೇಲ್ನೋಟದಲ್ಲಿಯೇ ಸಾಬೀತಾಗುತ್ತದೆ. ಇದೇ ಮಾನದಂಡವನ್ನು ಮುಂದಿನ ದಿನಗಳಲ್ಲಿ ಹಿಂದೂ ಮಠ-ಮಂದಿರಗಳಿಗೂ ವಿಸ್ತರಿಸಬೇಕೆಂಬ ಬೇಡಿಕೆ ಹುಟ್ಟಿಕೊಂಡರೆ ಸಮಾಜದಲ್ಲಿ ಅನವಶ್ಯಕವಾಗಿ ಧರ್ಮ-ಧರ್ಮಗಳ ನಡುವೆ ಸಂಘರ್ಷಕ್ಕೆ ಕಾರಣವಾಗುವುದಿಲ್ಲವೇ? ದೇಶದ ಪ್ರಧಾನಿಯಾದವರು ಇಂತಹ ಸಂಘರ್ಷಗಳನ್ನು ನಿಯಂತ್ರಿಸಲು ಪ್ರಯತ್ನಿಸಬೇಕೇ ಹೊರತು ಹುಟ್ಟುಹಾಕುವುದಲ್ಲ.
ಕರ್ನಾಟಕದಲ್ಲಿ ದಲಿತರ ಮೀಸಲಾತಿಯನ್ನು ಕಿತ್ತುಕೊಂಡು ಮುಸ್ಲಿಂಮರಿಗೆ ನೀಡಲಾಗಿದೆ ಎನ್ನುವ ಇನ್ನೊಂದು ಸುಳ್ಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಇಂತಹ ಆಧಾರ-ತಲೆಬುಡ ಇಲ್ಲದ ಆರೋಪಗಳನ್ನು ಮಾಡುವಾಗ ಪ್ರಧಾನಿಯವರು ಕನಿಷ‍್ಠ ವಾಸ್ತವಾಂಶಗಳನ್ನು ತಿಳಿದುಕೊಳ್ಳುವ ಪ್ರಯತ್ನವನ್ನಾದರೂ ಮಾಡಬೇಕಲ್ಲವೇ?
ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲಾಗಿದೆಯೇ ಹೊರತು ಕಡಿಮೆ ಮಾಡಿಲ್ಲ. ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯ ಶಿಫಾರಸಿನ ಆಧಾರದಲ್ಲಿ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇಕಡಾ 15ರಿಂದ 17ಕ್ಕೆ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇಕಡಾ ಮೂರರಿಂದ ಏಳಕ್ಕೆ ಹೆಚ್ಚಿಸಲಾಗಿದೆ. ಹೀಗಿರುವಾಗ ಅವರಿಂದ ಕಿತ್ತುಕೊಳ್ಳುವುದೇನು ಬಂತು? ಇಂತಹ ಮೂಲಭೂತ ಮಾಹಿತಿಯೂ ಇಲ್ಲದ ಪ್ರಧಾನಿ ಮೋದಿಯವರು ನಮ್ಮ ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡಿ ತಮ್ಮ ಘನತೆಯನ್ನು ತಾವೇ ಹಾಳುಗೆಡಹುತ್ತಿದ್ದಾರೆ.
-
Mandya22 hours ago
ಪತ್ನಿಯ ಶೀಲ ಶಂಕಿಸಿ ಪತಿಯಿಂದಲೇ ಬರ್ಬರ ಹತ್ಯೆ…!
-
Chamarajanagar22 hours ago
ಅಂಬಳೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ನವೀನ್ ಅವಿರೋಧ ಆಯ್ಕೆ
-
Kodagu19 hours ago
ಹಾತೂರುವಿನಲ್ಲಿ ಮಾರುತಿ ಓಮ್ನಿ ಹಾಗೂ ಲಾರಿ ನಡುವೆ ಭೀಕರ ರಸ್ತೆ ಅಪಘಾತ.
-
Chamarajanagar22 hours ago
ಬೋನಿಗೆ ಬಿದ್ದ 3 ನೇ ಚಿರತೆ
-
Kodagu16 hours ago
ನಾಪೋಕ್ಲು ಬೇತು ಗ್ರಾಮದಲ್ಲಿ ನಿವೃತ ಸೈನಿಕನ ಮನೆಗೆ ಕನ್ನ ಹಾಕಿದ ಚೋರರು -ಕೋವಿ,ಬೆಳ್ಳಿಯಪೀಚೆಕತ್ತಿ ಕದ್ದು ಪರಾರಿ
-
Chamarajanagar14 hours ago
ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ
-
Chikmagalur16 hours ago
ಅಕ್ರಮ ಸಂಬಂಧಕ್ಕಾಗಿ ಪತಿಯನ್ನ ಕೊಂದ ಸತಿ
-
Mysore11 hours ago
12 ವರ್ಷದ ಬಾಲಕಿ ಮೇಲೆ ಅತ್ಯಾಚಾರ : ಆರೋಪಿ ಬಂಧನ