Politics
ನೀರಾವರಿ ಅಭಿವೃದ್ಧಿ, ಕೆರೆಗಳಿಗೆ ನೀರು ತುಂಬಿಸುವುದಕ್ಕೆ ಮೊದಲ ಆದ್ಯತೆ: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು, ಫೆ. 13:
“ನೀರಾವರಿ ಕ್ಷೇತ್ರದ ಅಭಿವೃದ್ಧಿ, ಕೆರೆ ಮತ್ತು ಕಾಲುವೆಗಳಿಗೆ ನೀರು ಹರಿಸುವುದಕ್ಕೆ ಮೊದಲ ಆದ್ಯತೆ. ನಂತರ ರಸ್ತೆ ಅಭಿವೃದ್ದಿಗೆ ಒತ್ತು ನೀಡಲಾಗುವುದು. ಈ ವಿಚಾರವಾಗಿ ಮುಖ್ಯಮಂತ್ರಿಗಳ ಜತೆ ಚರ್ಚೆ ನಡಿಸಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬೃಹತ್ ನೀರಾವರಿ ಹಾಗೂ ಬೆಂಗಳೂರು ಅಭಿವೃದ್ದಿ ವಿಚಾರವಾಗಿ ಕೇಳಿದ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಉತ್ತರಿಸಿದರು.
ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಅವರು ಯಗಚಿ ನದಿ ಆಣೆಕಟ್ಟಿನ ಅಭಿವೃದ್ಧಿ ವಿಚಾರವಾಗಿ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ್ದು ಹೀಗೆ;
“ಯಗಚಿ ನದಿ ಅಣೆಕಟ್ಟಿನ ಕಾಲುವೆಗಳ ಅಭಿವೃದ್ದಿ ಬಗ್ಗೆ ಅಧಿಕಾರಿಗಳು ವರದಿ ನೀಡಿದ್ದು, ಈಗಾಗಲೇ 5.5 ಕಿ.ಮೀ.ನಷ್ಟು ಮಣ್ಣನ್ನು ತೆಗೆದಿದ್ದು, 1.5 ಕಿ.ಮೀ.ನಷ್ಟು ಕಾಮಗಾರಿ ಭೂಸ್ವಾಧೀನದ ವಿಚಾರವಾಗಿ ಸ್ಥಗಿತಗೊಂಡಿದೆ. ಎತ್ತಿನಹೊಳೆ ಯೋಜನೆಗೆ ಮಹತ್ವ ನೀಡಿದಂತೆ ಯಗಚಿ ಯೋಜನೆಗೂ ಮೊದಲ ಆದ್ಯತೆ ನೀಡುತ್ತೇವೆ” ಎಂದರು.
ಚಿಕ್ಕನಾಯಕನಹಳ್ಳಿ ಶಾಸಕರಾದ ಸುರೇಶ್ ಬಾಬು ಅವರ “ಭದ್ರಾ ಮೇಲ್ದಂಡೆ ಯೋಜನೆಯ ಮಂದಗತಿ ಕಾಮಗಾರಿಯ ಬಗ್ಗೆ ಪ್ರಶ್ನೆ ಕೇಳಿದಾಗ, “ಭದ್ರಾ ಮೇಲ್ದಂಡೆ ಯೋಜನೆಯ ಅಡಿ ರೂ. 856 ಕೋಟಿ ಮೊತ್ತದ ಕಾಮಗಾರಿಗೆ ಮಂಜೂರಾತಿ ನೀಡಲಾಗಿದೆ. ಯೋಜನೆ ಹಾದು ಹೋಗುವ ಸಾಕಷ್ಟು ಕಡೆ ಭೂ ಸ್ವಾಧೀನದ ಸಮಸ್ಯೆಯಿದ್ದು, ಅದನ್ನು ಬಗೆಹರಿಸಲಾಗುತ್ತಿದೆ. ಕೋವಿಡ್ ಸಮಯದಲ್ಲಿ ಕಾಮಗಾರಿ ಕುಂಠಿತವಾಯಿತು. ಕೇಂದ್ರ ಸರ್ಕಾರ ರೂ.5,300 ಕೋಟಿ ಅನುದಾನ ನೀಡುವಲ್ಲಿ ವಿಳಂಬ ಮಾಡಿರುವ ಕಾರಣ ಹಿನ್ನಡೆಯಾಗಿದೆ” ಎಂದರು.
ಎತ್ತಿನಹೊಳೆ ಯೋಜನೆಯು ಮಂದಗತಿ ಕಾಮಗಾರಿ ಹಾಗೂ ರಣಘಟ್ಟ ಯೋಜನೆಯಲ್ಲಿ ಯಾವುದೇ ಪ್ರಗತಿ ಕಾಣುತ್ತಿಲ್ಲ ಎನ್ನುವ ಬೇಲೂರು ಶಾಸಕ ಎಚ್.ಕೆ.ಸುರೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, “ರಣಘಟ್ಟ ಯೋಜನೆಯ ಕಾಲುವೆಯು 5.24 ಕಿಮೀ ನಷ್ಟು ಉದ್ದ ಸುರಂಗ ಮಾರ್ಗದಲ್ಲಿ ಹೋಗಬೇಕು. ಇದರಲ್ಲಿ 2.4 ಕಿಮೀ ನಷ್ಟು ಕಾಮಗಾರಿ ಮುಗಿದಿದೆ. ಎತ್ತಿನಹೊಳೆ ಯೋಜನೆಗೆ 402 ಎಕರೆಯಷ್ಟು ಅರಣ್ಯ ಭೂಮಿಯನ್ನು ಹಾಸನ ಮತ್ತು ತುಮಕೂರು ಭಾಗದಲ್ಲಿ ಸ್ವಾಧೀನ ಪಡಿಸಿಕೊಳ್ಳಬೇಕು” ಎಂದರು.
ಮದಗ ಮಸೂರು ಕೆರೆಯ ಎಡದಂಡೆ ಮತ್ತು ಬಲದಂಡೆ ಕಾಲುವೆಯ ಅಭಿವೃದ್ದಿ ಕುರಿತು ಯು.ಬಿ.ಬಣಕಾರ್ ಅವರ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಅವರು “2019 ರಲ್ಲಿ 25 ಕೋಟಿ ವೆಚ್ಚದಲ್ಲಿ ಮದಗ ಮಸೂರು ಕೆರೆಯ ಸಮಗ್ರ ಅಭಿವೃದ್ದಿಗೆ ಯೋಜನೆ ಘೋಷಿಸಲಾಗಿತ್ತು. ರೂ.52 ಕೋಟಿ ವೆಚ್ಚದಲ್ಲಿ ಕೆರೆಯ ಎಡದಂಡೆ ಮತ್ತು ಬಲದಂಡೆ ಆಧುನೀಕರಣ ಯೋಜನೆಯ ಪ್ರಸ್ತಾವನೆ ಸರ್ಕಾರ ಮುಂದಿದ್ದು, ರೂ.60 ಕೋಟಿ ವೆಚ್ಚದಲ್ಲಿ ಕೆರೆ ಅಭಿವೃದ್ದಿ ಮಾಡಲಾಗುವುದು” ಎಂದು ಭರವಸೆ ನೀಡಿದರು.
ಕೃಷ್ಣ ಮೇಲ್ದಂಡೆ ಯೋಜನೆ ಪುನರ್ ವಸತಿ ಕಾರ್ಯ ನಿರಂತರ
ಕೃಷ್ಣ ಮೇಲ್ದಂಡೆ ಯೋಜನೆಯ ಸಂತ್ರಸ್ಥ ಕೇಂದ್ರಗಳಲ್ಲಿ ಮೂಲ ಸೌಕರ್ಯ ಕಲ್ಪಿಸುವ ವಿಚಾರವಾಗಿ ಬೀಳಗಿ ಕ್ಷೇತ್ರದ ಶಾಸಕರಾದ ಜಿ.ಟಿ.ಪಾಟೀಲ್ ಅವರ ಪ್ರಶ್ನೆಗೆ “ಕೃಷ್ಣ ಮೇಲ್ದಂಡೆ ಯೋಜನೆಯ ಪುನರ್ ವಸತಿ ಕಾರ್ಯ ಎಂದಿಗೂ ಮುಗಿಯದ ಕೆಲಸ. ಈ ಹಿಂದೆ ಮೂಲಸೌರ್ಕರ್ಯಗಳ ಅಭಿವೃದ್ದಿಗೆ ಎಂದು 2017 ರಲ್ಲಿ ರೂ.191 ಕೋಟಿ ರೂಪಾಯಿ ಮೀಸಲಿಟ್ಟು ಮುಕ್ತಾಯ ಮಾಡಲಾಗುವುದು ಎಂದು ಹೇಳಲಾಗಿತ್ತು. ಈಗ ಹೊಸದಾಗಿ 2,600 ಕೋಟಿ ಪ್ರಸ್ತಾವನೆ ಸಲ್ಲಿಸಿದ್ದೀರಿ. ಮೊದಲಿಗೆ ಜಮೀನು ಕಳೆದಕೊಂಡವರಿಗೆ ಪರಿಹಾರ ಹಣ ಮತ್ತು ಜಮೀನುಗಳಿಗೆ ನೀರು ಬಿಡುಗಡೆ ಮಾಡಬೇಕು. ಈ ಎಲ್ಲಾ ಕೆಲಸಗಳು ಆದ ನಂತರ ಮಿಕ್ಕ ವಿಚಾರಗಳ ಬಗ್ಗೆ ಗಮನ ಹರಿಸಲಾಗುವುದು” ಎಂದು ಉತ್ತರಿಸಿದರು.
ಡಿಸಿಎಂ ಹೊಗಳಿದ ಶಾಸಕ ಶಿವಲಿಂಗೇಗೌಡ
ಅರಸೀಕೆರೆ ಭಾಗದಲ್ಲಿ ಘಟಾನುಘಟಿಯೊಬ್ಬರು ಕೇವಲ 200 ಮೀಟರ್ ಜಾಗ ನೀಡದೆ ತೊಂದರೆ ನೀಡುತ್ತಿದ್ದರು. ಶಿವಕುಮಾರ್ ಅವರು ಈ ಸಮಸ್ಯೆ ಬಗೆಹರಿಸಿದರು. ಡಿಸಿಎಂ ಅವರು ಅಧಿಕಾರವಹಿಸಿಕೊಂಡ ನಂತರ ಮೋಟರ್ ಅಳವಡಿಸಿ ನೀರನ್ನು ಎತ್ತುವಂತಹ ಕೆಲಸ ಮಾಡಿದ್ದಾರೆ. ಈ ಯೋಜನೆ ಬೋಗಸ್ ಎನ್ನುವವರಿಗೆ ಉತ್ತರ ನೀಡಿದ್ದಾರೆ” ಎಂದು ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅವರು ಡಿಸಿಎಂ ಅವರ ಕಾರ್ಯವೈಖರಿಯನ್ನು ಹೊಗಳಿದರು.
2017 ರಿಂದ ಕೊಳೆಗೇರಿ ನಿವಾಸಿಗಳಿಗೆ ಮಾಸಿಕ 10 ಸಾವಿರ ಲೀ. ಕಾವೇರಿ ನೀರು ಪೂರೈಕೆ
ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ 13 ಕೊಳೆಗೇರಿಗಳಿದ್ದು ಕಾವೇರಿ ನೀರು ಇಂದಿಗೂ ಅವರಿಗೆ ದೊರೆಯುತ್ತಿಲ್ಲ ಎಂದು ಬೆಂಗಳೂರು ಜಯನಗರ ಶಾಸಕರಾದ ಸಿ.ಕೆ. ರಾಮಮೂರ್ತಿ ಅವರ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಅವರು, “ಬೆಂಗಳೂರು ನೀರು ಸರಬರಾಜು ಮಂಡಳಿಯು 2017 ರಿಂದ ಇಲ್ಲಿಯ ತನಕ 10 ಸಾವಿರ ಲೀ. ನೀರನ್ನು ಕೊಳೆಗೇರಿ ನಿವಾಸಿಗಳಿಗೆ ನೀಡಲಾಗುತ್ತಿದೆ. 32,010 ಕುಟುಂಬಗಳು ಪರಿಶಿಷ್ಟ ಪಂಗಡ- ವರ್ಗಗಳ ಕಾಲೋನಿಯಲ್ಲಿ ವಾಸವಿದ್ದು, ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ 5,515 ಕುಟುಂಬಗಳು ಪ್ರತಿ ತಿಂಗಳು 10 ಸಾವಿರ ಲೀ. ಕಾವೇರಿ ನೀರಿನ ಸೌಲಭ್ಯ ಪಡೆಯುತ್ತಿವೆ. ಕೊಳೆಗೇರಿ ಅಭಿವೃದ್ದಿ ಮಂಡಳಿಯಿಂದ ರಾಗಿಗುಡ್ಡದಲ್ಲಿ 250 ಫ್ಲಾಟ್, 400 ಫ್ಲಾಟ್ಗಳನ್ನು ರಾಜೇಶ್ವರಿ, ಶಾಖಾಂಬರಿ ನಗರ ಕೊಳೆಗೇರಿಗಳಲ್ಲಿ ಒಟ್ಟು 2,900 ಫ್ಲಾಟ್ಗಳನ್ನು ಕಟ್ಟಿ ಹಂಚಿಕೆ ಮಾಡಲಾಗಿದೆ” ಎಂದರು.
“2013 ರಿಂದ ಇಲ್ಲಿಯ ತನಕ ಅಂದರೆ ಕಳೆದ 11 ವರ್ಷಗಳಿಂದ ನೀರಿನ ದರ ಏರಿಕೆ ಮಾಡಿಲ್ಲ. ವಿದ್ಯುತ್ ಬೆಲೆ ಏರಿಕೆ ಮತ್ತು ಇತರೇ ವೆಚ್ಚಗಳು ಹೆಚ್ಚಾದರೂ ಬೆಂಗಳೂರಿನಲ್ಲಿ ನೀರಿನ ದರ ಏರಿಕೆಯನ್ನು ವಿವಿಧ ಕಾರಣಗಳಿಂದ ಮಾಡಿಲ್ಲ. ಇಂತಿಷ್ಟು ಮೊತ್ತವನ್ನು ಕೊಳೆಗೇರಿ ಅಭಿವೃದ್ದಿ ಮಂಡಳಿ ಪಾವತಿ ಮಾಡಿದರೆ ಮುಂದಿನ ದಿನಗಳಲ್ಲಿ ಏನೂ ತೊಂದರೆಯಾಗದಂತೆ ನೀರಿನ ಸರಬರಾಜು ಮಾಡಬಹುದು”
ಬೆಂಗಳೂರಿನ ಜನತೆಗೆ ತೊಂದರೆಯಾಗದಂತೆ ಕುಡಿಯುವ ನೀರು ಪೂರೈಕೆ
“ಪ್ರತಿ ವರ್ಷ ಬೆಂಗಳೂರಿನ ಜನಸಂಖ್ಯೆ 10 ಲಕ್ಷದಷ್ಟು ಹೆಚ್ಚಾಗುತ್ತಿದೆ. ಹೆಚ್ಚುವರಿಯಾಗಿ 6.5 ಟಿಎಂಸಿ ಕಾವೇರಿ ನೀರು ಬೆಂಗಳೂರಿಗೆ ಮೀಸಲು ಇಡಬೇಕು ಎಂದು ಹೊಸದಾಗಿ ಲೆಕ್ಕಾಚಾರ ಮಾಡಲಾಗಿದೆ. ಇದರಲ್ಲಿ 1.5 ಟಿಎಂಸಿಯಷ್ಟು ನೀರು ಉಳಿಯುವ ನಿರೀಕ್ಷೆ ಇದೆ. ದಿನೇ, ದಿನೇ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು, ಬೆಂಗಳೂರಿನ ಜನತೆಗೆ ಯಾವುದೇ ತೊಂದರೆಯಾಗದಂತೆ ಕುಡಿಯುವ ನೀರು ಪೂರೈಸುವುದು ನಮ್ಮ ಕರ್ತವ್ಯ” ಎಂದು ಭರವಸೆ ನೀಡಿದರು.
ಒಂದು ಹನಿ ಕಾವೇರಿ ನೀರು ಯಾವ ಮನೆಯನ್ನೂ ತಲುಪಿಲ್ಲ. ನೀರು ಪೂರೈಕೆ ಮಾಡಲು ಕೊಳೆಗೇರಿ ಅಭಿವೃದ್ದಿ ಮಂಡಳಿಯವರು ಹಣ ಪಾವತಿ ಮಾಡಬೇಕು ಎಂದು ಶಾಸಕ ರಾಮಮೂರ್ತಿ ಅವರು ಹೇಳಿದಾಗ “ನಿಮ್ಮ ಕ್ಷೇತ್ರದ ಅಭಿವೃದ್ದಿಗೆ 5 ಕೋಟಿ ಹಣ ನೀಡಲಾಗುವುದು, ಈ ಹಣವನ್ನೇ ಬಳಸಿಕೊಂಡು ನೀರಿನ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಪಾವತಿ ಮಾಡಿ” ಎಂದು ಡಿಸಿಎಂ ಹೇಳಿದರು.
ಮೇಕೆದಾಟು ಯೋಜನೆಗೆ ಸಹಕಾರ ನೀಡಿ
ಟ್ಯಾಂಕರ್ ನಲ್ಲಿ ನೀರನ್ನು ಪೂರೈಕೆ ಮಾಡುವವರಿಗೆ ನೀರು ದೊರಕುತ್ತದೆ, ಸರ್ಕಾರಕ್ಕೆ ಏಕೆ ದೊರೆಯುವುದಿಲ್ಲ ಎಂದು ಶಾಸಕ ಅರವಿಂದ ಬೆಲ್ಲದ ಪ್ರಶ್ನಿಸಿದಾಗ, “ಬೆಂಗಳೂರಿನ ನೀರಿನ ಸಮಸ್ಯೆ ಮತ್ತು ಟ್ಯಾಂಕರ್ ಗಳಿಗೆ ನೀರು ಎಲ್ಲಿಂದ ದೊರೆಯುತ್ತದೆ ಎಂದು ನಿಮ್ಮ ಅಕ್ಕ- ಪಕ್ಕದಲ್ಲೇ ಇರುವ ಆರ್.ಅಶೋಕ, ಸುರೇಶ್ ಕುಮಾರ್ ಅವರ ಬಳಿ ಕೇಳಿ. ಟ್ಯಾಂಕರ್ ನವರು ಕಾವೇರಿ ನೀರು ಪೂರೈಸುವುದಿಲ್ಲ, ಕೊಳವೆಬಾವಿ ನೀರನ್ನು ಪೂರೈಸುತ್ತಾರೆ. ಶೇ 25 ರಷ್ಟು ಬೆಂಗಳೂರಿಗೆ ಟ್ಯಾಂಕರ್ ಮೂಲಕವೇ ನೀರು ಪೂರೈಕೆಯಾಗುತ್ತಿದೆ. ಈ ಎಲ್ಲಾ ಸಮಸ್ಯೆಗಳಿಗೆ ಮೇಕೆದಾಟು ಯೋಜನೆಯೇ ಪರಿಹಾರ. ನಾವು ‘ಮೇಕೆದಾಟು’ ಯೋಜನೆಯ ಬಗ್ಗೆ ದೊಡ್ಡ ಹೋರಾಟ ನಡೆಸುತ್ತಿದ್ದೇವೆ. ನೀವೆಲ್ಲಾ ಸಹಕಾರ ನೀಡಿ” ಎಂದರು.
Politics
ನೆಲ – ಜಲ – ಭಾಷೆ ವಿಚಾರದಲ್ಲಿ ನಾನು ಕನ್ನಡಿಗ, ರಾಜಕಾರಣಿ ಅಲ್ಲ: ಸಿದ್ದರಾಮಯ್ಯ

ನೀರಾವರಿ ವಿಚಾರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಪಕ್ಷಾತೀತವಾಗಿ ಹೋರಾಡಲು ಸಿದ್ಧ ಎಂಬ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹೇಳಿಕೆಯನ್ನು ನಾನು ಸಂಪೂರ್ಣ ಸ್ವಾಗತಿಸುತ್ತೇನೆ. ವೈಯಕ್ತಿಕವಾಗಿ ಇದು ನನ್ನ ಅಭಿಪ್ರಾಯವಾಗಿದ್ದು, ನೆಲ-ಜಲ-ಭಾಷೆ ವಿಚಾರದಲ್ಲಿ ನಾನು ಸದಾ ಕನ್ನಡಿಗನಾಗಿ ನಡೆದುಕೊಂಡಿದ್ದೇನೆಯೇ ಹೊರತು ರಾಜಕಾರಣಿಯಾಗಿ ಅಲ್ಲ ಎನ್ನುವುದನ್ನು ಹಿರಿಯರಾದ ದೇವೇಗೌಡರ ಗಮನಕ್ಕೆ ತರಬಯಸುತ್ತೇನೆ.
ಹತ್ತು ದಿನಗಳ ಅವಧಿಯಲ್ಲಿ 15,000 ಕ್ಯುಸೆಕ್ಸ್ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಬೇಕೆಂದು 2016ರ ಸೆಪ್ಟೆಂಬರ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿದಾಗ ಉದ್ಭವವಾದ ಬಿಕ್ಕಟ್ಟಿನ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ನಾನು ನಿಮ್ಮ ಮನೆಗೆ ಬಂದು ಕೈಹಿಡಿದು ಕರೆದುಕೊಂಡು ಬಂದು ಸರ್ವಪಕ್ಷಗಳ ಸಭೆ ನಡೆಸಿದ್ದು ನಿಮಗೆ ನೆನಪಿರಬಹುದೆಂದು ಭಾವಿಸಿದ್ದೇನೆ.
ಹಿಂದೆಲ್ಲ ರಾಜ್ಯದ ಹಿತಾಸಕ್ತಿಯ ರಕ್ಷಣೆಯ ಪ್ರಶ್ನೆ ಎದುರಾದಾಗ ಒಬ್ಬ ಮುತ್ಸದ್ದಿಯಾಗಿ ಇದಕ್ಕಿಂತಲೂ ಮುಖ್ಯವಾಗಿ ಒಬ್ಬ ಹೆಮ್ಮೆಯ ಕನ್ನಡಿಗನಾಗಿ ರಾಜ್ಯಕ್ಕೆ ನ್ಯಾಯ ಕೊಡಲು ನೀವು ಹೋರಾಟ ನಡೆಸಿದ್ದನ್ನು ರಾಜ್ಯದ ಜನರು ಗಮನಿಸಿದ್ದಾರೆ. ಆದರೆ ಇತ್ತೀಚೆಗೆ ನೀವು ಮತ್ತು ನಿಮ್ಮ ಪಕ್ಷ ಕೇಂದ್ರ ಸರ್ಕಾರದ ವಕ್ತಾರರಂತೆ ಪಕ್ಷಪಾತಿಯಾಗಿ ವರ್ತಿಸುತ್ತಿರುವುದನ್ನು ಕೂಡಾ ನನ್ನನ್ನೂ ಸೇರಿದಂತೆ ಏಳುಕೋಟಿ ಕನ್ನಡಿಗರು ಗಮನಿಸುತ್ತಿದ್ದಾರೆ. ಕೇಂದ್ರ ಸಂಪುಟದಲ್ಲಿ ಮಗನನ್ನು ಸಚಿವನನ್ನಾಗಿ ಮಾಡಲು ಗೌಡರು ಇಷ್ಟೊಂದು ರಾಜಿ ಮಾಡಿಕೊಳ್ಳುವ ಅಗತ್ಯ ಇತ್ತಾ? ಎಂದು ಜನ ಪ್ರಶ್ನಿಸುತ್ತಿದ್ದಾರೆ.
ನೀರಾವರಿ ವಿಚಾರದಲ್ಲಿ ನ್ಯಾಯಪಕ್ಷಪಾತಿಯಾಗಿ ಕರ್ನಾಟಕದ ಹಿತಾಸಕ್ತಿಯ ರಕ್ಷಣೆ ಮಾಡಬೇಕಾಗಿದ್ದ ಕೇಂದ್ರದ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಸತತವಾಗಿ ಕನ್ನಡಿಗರ ಹಿತವನ್ನು ಬಲಿಗೊಡಲು ಹೊರಟಿರುವುದನ್ನು ಸನ್ಮಾನ್ಯ ದೇವೇಗೌಡರಿಗೆ ನಾನು ಬಿಡಿಸಿ ಹೇಳಬೇಕಾಗಿಲ್ಲ ಎಂದು ತಿಳಿದುಕೊಂಡಿದ್ದೇನೆ.
ಮಹದಾಯಿ ಜಲಾನಯನ ಪ್ರದೇಶದ ಕಳಸಾ ನಾಲೆ ಯೋಜನೆಯ ರೂ.995.30 ಕೋಟಿ ವೆಚ್ಚದ ವಿಸ್ತೃತ ಯೋಜನಾ ವರದಿ (ಡಿಪಿಆರ್ )ಗೆ 2023ರ ಮಾರ್ಚ್ ನಲ್ಲಿಯೇ ಅನುಮೋದನೆ ನೀಡಲಾಗಿದೆ. ಈ ಯೋಜನೆಗೆ ಅಗತ್ಯವಿರುವ ಭೂಮಿಯಲ್ಲಿ 26,925 ಹೆಕ್ಟೇರ್ ಅರಣ್ಯಪ್ರದೇಶದ ಸ್ವಾಧೀನ ಪ್ರಕ್ರಿಯೆ ಗೋವಾ ರಾಜ್ಯದ ಆಕ್ಷೇಪದ ಕಾರಣದಿಂದಾಗಿ ಕುಂಟುತ್ತಾ ಸಾಗಿದೆ. ಪ್ರಸ್ತುತ ಈ ಪ್ರಕ್ರಿಯೆ ರಾಷ್ಟ್ರೀಯ ವನ್ಯಜೀವಿ ಮಂಡಳಿ (ಎನ್ ಬಿಡಬ್ಯುಎಲ್ ) ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ ಟಿಸಿಎ)ದ ಪರಿಶೀಲನೆಯಲ್ಲಿದೆ. ಈ ಯೋಜನೆಗೆ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರ ಅನುಮೋದನೆ ಪಡೆಯಬಹುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟೀಕರಣ ನೀಡಿರುವ ಕಾರಣ ಶೀಘ್ರವಾಗಿ ಈ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕಾಗಿದೆ.
ಬಂಡೂರಿ ನಾಲೆ ತಿರುವು ಯೋಜನೆಗೆ ಅಗತ್ಯವಿರುವ 28 ಹೆಕ್ಟೇರ್ ಅರಣ‍್ಯ ಪ್ರದೇಶದ ಸ್ವಾಧೀನಕ್ಕಾಗಿ 2024ರ ಆಗಸ್ಟ್ ನಲ್ಲಿಯೇ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಈ ಬೇಡಿಕೆಗೆ ಸಂಬಂಧಿಸಿದ ಇತರ ಪ್ರಕ್ರಿಯೆಗಳನ್ನು ರಾಜ್ಯ ಸರ್ಕಾರ ಸಂಪೂರ್ಣಗೊಳಿಸಲಾಗಿದ್ದು ಈ ನದಿ ತಿರುವು ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡುವುದಷ್ಟೇ ಬಾಕಿ ಉಳಿದಿದೆ.
ಕೃಷ್ಣಾ ಜಲವಿವಾದ ನ್ಯಾಯಮಂಡಳಿ ಕರ್ನಾಟಕಕ್ಕೆ 173 ಟಿಎಂಸಿ ನೀರಿನ ಪಾಲನ್ನು ನೀಡಿ 2010ರಲ್ಲಿಯೇ ಐತೀರ್ಪು ನೀಡಿದೆ. ಈ ನೀರಿನ ಪಾಲಿನಲ್ಲಿ 130 ಟಿಎಂಸಿಯನ್ನು ಬಳಸಿಕೊಂಡು ಉತ್ತರ ಕರ್ನಾಟಕದ ಏಳು ಜಿಲ್ಲೆಗಳಿಗೆ ನೀರುಣಿಸುವ ರೂ.51,148 ಸಾವಿರ ವೆಚ್ಚದ ಮೂರನೇ ಹಂತದ ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಸಿದ್ಧವಾಗಿದೆ. ಆದರೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಯಲ್ಲಿರುವ ಪ್ರತಿವಾದಿ ರಾಜ್ಯಗಳ ಆಕ್ಷೇಪಣಾ ಅರ್ಜಿಗಳನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರ ನ್ಯಾಯಮಂಡಳಿಯ ಐತೀರ್ಪನ್ನು ಗೆಜೆಟ್ ನಲ್ಲಿ ಪ್ರಕಟಿಸಲು ನಿರಾಕರಿಸುತ್ತಾ ಬಂದಿದೆ. ಈ ಯೋಜನೆಯ ಅನಿವಾರ್ಯತೆಯನ್ನು ಸುಪ್ರೀಂಕೋರ್ಟ್ ಗೆ ಮನವರಿಕೆ ಮಾಡಿಕೊಟ್ಟು ಶೀಘ್ರವಾಗಿ ಐತೀರ್ಪನ್ನು ಗೆಜೆಟ್ ನಲ್ಲಿ ಪ್ರಕಟಿಸಿದರೆ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಬೇಕೆಂಬ ಪ್ರಸ್ತಾವವನ್ನು ಸಲ್ಲಿಸಲು ಅನುಕೂಲವಾಗುತ್ತದೆ.
ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿದರೆ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಮತ್ತು ದಾವಣಗೆರೆಯ ಬರಪೀಡಿತ ಪ್ರದೇಶಗಳಿಗೆ ವರದಾನವಾಗಲಿದೆ. ಈ ಘೋಷಣೆಯ ಪ್ರಸ್ತಾವಕ್ಕೆ ಸಾರ್ವಜನಿಕ ಹೂಡಿಕೆ ಸಮಿತಿ ಈಗಾಗಲೇ ಅಂಗೀಕಾರ ನೀಡಿದೆ. ಆದರೆ ಕೇಂದ್ರ ಸರ್ಕಾರ ಮೀನಮೇಷ ಎಣಿಸುತ್ತಾ ಕೂತಿದೆ.
ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಪೂರೈಕೆ ಮತ್ತು 400 ಮೆಗಾವಾಟ್ ವಿದ್ಯುತ್ ಉತ್ಪಾದನೆಗಾಗಿಯೇ ಮೇಕೆದಾಟು ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಯ ವಿವರಗಳೆಲ್ಲ ನಿಮಗೆ ಬಾಯಿಪಾಠದಲ್ಲಿರಬಹುದು. ಈ ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುಮತಿ ದೊರಕಿಸಿಕೊಟ್ಟರೆ ಬೆಂಗಳೂರು ನಿವಾಸಿಗಳು ಸದಾ ನಿಮಗೆ ಋಣಿಯಾಗಿರುತ್ತಾರೆ.
ಕೃಷ್ಣಾ ಮತ್ತು ಕಾವೇರಿ ನದಿಗಳ ಜೋಡಣೆಯ ನೀರಾವರಿ ಯೋಜನೆಯ ಬಗ್ಗೆ ನಿಮ್ಮ ಕಳಕಳಿಗೆ ನಮ್ಮ ಸಂಪೂರ್ಣ ಸಹಕಾರ ಇದೆ. ಈ ವಿಷಯದಲ್ಲಿ ನೀವು ನಡೆಸುವ ಹೋರಾಟಕ್ಕೆ ನಾನು ಮತ್ತು ಡಿ.ಕೆ.ಶಿವಕುಮಾರ್ ಮಾತ್ರವಲ್ಲ ಸಮಸ್ತ ಕರ್ನಾಟಕ ನಿಮ್ಮ ಜೊತೆ ಇರುತ್ತದೆ. ಆದರೆ ಹೊಸ ನೀರಾವರಿ ಯೋಜನೆಗಳನ್ನು ಪ್ರಾರಂಭಿಸುವ ಮೊದಲು ಅಪೂರ್ಣ ಸ್ಥಿತಿಯಲ್ಲಿರುವ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ನಿಮ್ಮ ಸಹಕಾರ ಇರಲಿ ಎಂದು ಮನವಿ ಮಾಡಿಕೊಳ‍್ಳುತ್ತಿದ್ದೇನೆ.
ಕರ್ನಾಟಕ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಗಳ ಸರಮಾಲೆಯನ್ನು ಸದ್ಯ ನೀರಾವರಿ ಕ್ಷೇತ್ರಕ್ಕಷ್ಟೇ ಸೀಮಿತಗೊಳಿಸುತ್ತಿದ್ದೇನೆ. ಇನ್ನು ತೆರಿಗೆ ಹಂಚಿಕೆ, ಪ್ರಕೃತಿ ವಿಕೋಪ ಪರಿಹಾರ, ಕುಡಿಯುವ ನೀರು ಪೂರೈಕೆ, ರೈಲ್ವೆ ಯೋಜನೆಗಳ ವಿಚಾರದಲ್ಲಿಯೂ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕರ್ನಾಟಕವನ್ನು ಶತ್ರು ರಾಜ್ಯದಂತೆ ನಡೆಸಿಕೊಳ್ಳುತ್ತಿದೆ. ಈ ವಿಚಾರಗಳು ಕೂಡಾ ನಿಮಗೆ ಗೊತ್ತಿರುವುದರಿಂದ ಸಂಸತ್ ನಲ್ಲಿ ಈ ಬಗ್ಗೆ ನೀವು ದನಿ ಎತ್ತುತ್ತೀರಿ ಎಂದು ರಾಜ್ಯದ ಜನರು ನಿರೀಕ್ಷಿಸಿದ್ದರು.
ಕೇಂದ್ರದಲ್ಲಿ ಯಾವ ಪಕ್ಷದ ಸರ್ಕಾರ ಇದ್ದರೂ ನೀವು ಮುಲಾಜಿಗೆ ಬೀಳದೆ ಕರ್ನಾಟಕದ ಹಿತಾಸಕ್ತಿಯ ರಕ್ಷಣೆಯ ಪ್ರಶ್ನೆ ಎದುರಾದಾಗ ದನಿ ಎತ್ತುತ್ತಾ ಬಂದವರು. ಆ ಮುತ್ಸದ್ದಿ ದೇವೇಗೌಡರನ್ನು ಕಾಣಲು ಕನ್ನಡಿಗರು ಬಯಸುತ್ತಿದ್ದಾರೆ. ಆದರೆ ಈಗಿನ ದೇವೇಗೌಡರು ಬಿಜೆಪಿ ಮತ್ತು ನರೇಂದ್ರ ಮೋದಿಯವರ ಚಿಯರ್ ಲೀಡರ್ ರೀತಿ ವರ್ತಿಸುತ್ತಿದ್ದಾರೆ ಎಂದು ವಿಷಾದದಿಂದ ಹೇಳಬೇಕಾಗಿದೆ.
ದೈಹಿಕವಾಗಿ ನೀವು ಸ್ವಲ್ಪ ಕುಗ್ಗಿದಂತೆ ಕಂಡರೂ ಮಾನಸಿಕವಾಗಿ ನೀವಿನ್ನೂ ದೃಡವಾಗಿದ್ದೀರಿ. ದಯವಿಟ್ಟು ಈಗಲಾದರೂ ಪಕ್ಷ ರಾಜಕಾರಣವನ್ನು ಮೀರಿ ಒಬ್ಬ ಮುತ್ಸದ್ದಿ ನಾಯಕನ ರೀತಿಯಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕದ ಹಿತರಕ್ಷಣೆಗೆ ಮುಂದಾಗಬೇಕೆಂದು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ಈ ನಿಟ್ಟಿನಲ್ಲಿ ನೀವು ಮಾಡುವ ಪ್ರಯತ್ನಕ್ಕೆ ನಮ್ಮ ಸರ್ಕಾರದ ಸಂಪೂರ್ಣ ಬೆಂಬಲ ಇದೆ. ಏಳು ಕೋಟಿ ಕನ್ನಡಿಗರೂ ನಿಮ್ಮ ಜೊತೆಯಲ್ಲಿ ಇರುತ್ತಾರೆ ಎಂಬ ಭರವಸೆಯೂ ನನಗಿದೆ.

ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ಇತ್ತೀಚೆಗೆ ಪರಿಷ್ಕರಿಸಿರುವ ಪ್ರಯಾಣ ದರ ಏರಿಕೆ ಹಲವು ರೀತಿಯ ವೈಪರೀತ್ಯಗಳಿಂದ ಕೂಡಿದ್ದು, ಕೆಲವು ಕಡೆಗಳಲ್ಲಿ ಪ್ರಯಾಣ ದರ ದುಪ್ಪಟ್ಟಾಗಿರುವುದನ್ನು ಗಮನಿಸಿದ್ದೇನೆ. ಇದರ ವಿರುದ್ಧ ವ್ಯಕ್ತವಾದ ಸಾರ್ವಜನಿಕರ ವಿರೋಧವನ್ನು ಪರಿಗಣಿಸಿ ಎಲ್ಲೆಲ್ಲಿ ಅಸಹಜ ರೀತಿಯಲ್ಲಿ ದರ ಏರಿಕೆಯಾಗಿದೆಯೋ ಅಂತಹ ಕಡೆಗಳಲ್ಲಿ ಪ್ರಯಾಣ ದರ ಇಳಿಸುವಂತೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಿದ್ದೇನೆ.
ಮೆಟ್ರೊ ರೈಲು ವ್ಯವಸ್ಥೆ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಬೇಕಾಗಿರುವ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿರುವ ಕಾರಣ ಪ್ರಯಾಣ ದರ ಪರಿಷ್ಕರಣೆ ಅನಿವಾರ್ಯವಾಗಿತ್ತು ಎನ್ನುವುದು ನಿಜವಾದರೂ ಅಂತಿಮವಾಗಿ ಪ್ರಯಾಣಿಕರ ಹಿತರಕ್ಷಣೆ ಮಾಡಬೇಕಾಗಿರುವುದು ನಮ್ಮ ಕರ್ತವ್ಯ ಎನ್ನುವುದನ್ನು ಬಿಎಂಆರ್‌ಸಿಎಲ್ ಗಮನಕ್ಕೆ ತಂದಿದ್ದೇನೆ.
Politics
ಕೆಪಿಸಿಸಿ ಹುದ್ದೆ ಅಂಗಡಿಯಲ್ಲೂ ಸಿಗೋದಿಲ್ಲ, ಮಾಧ್ಯಮಗಳ ಮುಂದೆ ಮಾತನಾಡಿದರೂ ಸಿಗೋದಿಲ್ಲ: ಡಿಸಿಎಂ ಡಿ. ಕೆ. ಶಿವಕುಮಾರ್

ಬೆಂಗಳೂರು
“ಕೆಪಿಸಿಸಿ ಹುದ್ದೆ ಅಂಗಡಿಯಲ್ಲೂ ಸಿಗುವುದಿಲ್ಲ, ಮಾಧ್ಯಮಗಳ ಮುಂದೆ ಮಾತನಾಡಿದರೂ ಸಿಗುವುದಿಲ್ಲ” ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಖಾರವಾಗಿ ಪ್ರತಿಕ್ರಿಯಿಸಿದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಉತ್ತರಿಸಿದರು.
ಕೆಪಿಸಿಸಿ ಅಧ್ಯಕ್ಷ ಹುದ್ದೆ ಬದಲಾವಣೆ ಚರ್ಚೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ನಾವು ಮಾಡುವ ಕೆಲಸ, ಶ್ರಮವನ್ನು ಪಕ್ಷದ ನಾಯಕರು ಗುರುತಿಸಿ ಅದಕ್ಕೆ ಸೂಕ್ತವಾಗಿ ಹುದ್ದೆ ನೀಡುತ್ತಾರೆ. ಮಾಧ್ಯಮಗಳ ಮುಖಾಂತರ ಯಾರಾದರೂ ಹುದ್ದೆ ಕೇಳುತ್ತಾರೆಯೇ? ಇದನ್ನೆಲ್ಲಾ ಹೊಸದಾಗಿ ಕೇಳುತ್ತಿರುವೆ” ಎಂದರು.
“ಪಕ್ಷದ ವಿಚಾರದ ವಿಚಾರವಾಗಿ ಯಾವುದೇ ಬೆಳವಣಿಗೆ ಇದ್ದರೂ ನಾನೇ ಮಾಧ್ಯಮಗೋಷ್ಠಿ ಕರೆದು ಮಾಹಿತಿ ನೀಡುತ್ತೇನೆ. ಈಗ ನಮ್ಮ ಪಕ್ಷ ಸಂಘಟನೆ ಮಾಡಿ, ಪಕ್ಷ ಉಳಿಸಿ, ಬೆಳೆಸುವ ಕೆಲಸ ಮಾಡಬೇಕು. ಪಕ್ಷದಲ್ಲಿ ಎಲ್ಲರೂ ಶಿಸ್ತು ಕಾಪಾಡಬೇಕು ಎಂದು ನಮ್ಮ ಮುಖ್ಯಮಂತ್ರಿಗಳು ಹಾಗೂ ಪ್ರಧಾನ ಕಾರ್ಯದರ್ಶಿಗಳು ಬುದ್ಧಿವಾದ ಹೇಳಿದ್ದಾರೆ. ಯಾವುದೇ ವಿಚಾರವಾಗಿ ಬಹಿರಂಗವಾಗಿ ಚರ್ಚೆ ಮಾಡದಂತೆ ಸೂಚಿಸಿದ್ದಾರೆ” ಎಂದು ತಿಳಿಸಿದರು.
ಮಾಧ್ಯಮಗಳ ಮುಂದೆ ಹೇಳಿಕೆಯಿಂದ ಪ್ರಯೋಜನವಿಲ್ಲ:
“ಪಕ್ಷದ ವಿಚಾರ ಮಾಧ್ಯಮಗಳ ಮುಂದೆ ಮಾತನಾಡುವಂತಹದಲ್ಲ. ಏನೇ ಇದ್ದರೂ ಎಐಸಿಸಿ ಅಧ್ಯಕ್ಷರು, ರಾಹುಲ್ ಗಾಂಧಿ, ಮುಖ್ಯಮಂತ್ರಿ ಅಥವಾ ನನ್ನ ಬಳಿ ಬಂದು ಮಾತನಾಡಲಿ. ಇದು ಕೇವಲ ಕಾಂಗ್ರೆಸ್ ಮಾತ್ರವಲ್ಲ. ಬಿಜೆಪಿ, ಜೆಡಿಎಸ್, ರೈತ ಸಂಘ ಸೇರಿದಂತೆ ಯಾವುದೇ ಪಕ್ಷವಾದರೂ ಪಕ್ಷದ ವಿಚಾರವನ್ನು ಆಂತರಿಕವಾಗಿ ಚರ್ಚೆ ಮಾಡಬೇಕು ಎಂದು ಹೇಳುತ್ತೇನೆ. ನಾನು ಯಾವುದಾದರೂ ಹುದ್ದೆ ಬಯಸಿದರೆ ನೀವು (ಮಾಧ್ಯಮಗಳು) ಆ ಸ್ಥಾನ ನನಗೆ ಕೊಡಿಸುತ್ತೀರಾ? ಅಥವಾ ಈ ಹುದ್ದೆಗಳು ಅಂಗಡಿಯಲ್ಲಿ ಸಿಗುತ್ತದೆಯೇ? ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರೆ ಯಾವುದೇ ಪ್ರಯೋಜನವಿಲ್ಲ. ಬದಲಿಗೆ ಇದರಿಂದ ವ್ಯತಿರಿಕ್ತ ಪರಿಣಾಮ ಬೀರುತ್ತದೆ” ಎಂದು ಕೇಳಿದರು.
ಯಾರೇ ಇರಲಿ, ಹೋಗಲಿ ಪಕ್ಷ ಇರುತ್ತದೆ
“ಈ ಪಕ್ಷವನ್ನು ಕೇವಲ ಡಿ.ಕೆ. ಶಿವಕುಮಾರ್ ಒಬ್ಬನೇ ಅಧಿಕಾರಕ್ಕೆ ತಂದಿಲ್ಲ. ಕಾರ್ಯಕರ್ತರು, ಮತದಾರರು ನಮ್ಮ ಮೇಲೆ ಅಪಾರವಾದ ವಿಶ್ವಾಸ ಇಟ್ಟು ನಮಗೆ ಅಧಿಕಾರ ನೀಡಿದ್ದಾರೆ. ಇದನ್ನು ನಾವು ಉಳಿಸಿಕೊಳ್ಳಬೇಕು, ಉಳಿಸಿಕೊಳ್ಳುತ್ತೇವೆ. ಇದು ಕಾರ್ಯಕರ್ತರ ಹಾಗೂ ಮತದಾರರ ಪಕ್ಷ. ಇದಕ್ಕೆ ತನ್ನದೇ ಆದ ದೊಡ್ಡ ಇತಿಹಾಸವಿದೆ. ಯಾರೇ ಇರಲಿ, ಹೋಗಲಿ ತನ್ನನ್ನು ತಾನು ಉಳಿಸಿಕೊಳ್ಳುವ ಶಕ್ತಿ ಈ ಪಕ್ಷಕ್ಕೆ ಇದೆ. ಮಹಾತ್ಮಾ ಗಾಂಧೀಜಿ ಅವರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ಅಧಿಕಾರವನ್ನು ತ್ಯಾಗ ಮಾಡಿದ್ದಾರೆ. ಅಂಬೇಡ್ಕರ್ ಅವರು ಸಂವಿಧಾನ ಕೊಟ್ಟರು ಅವರು ಯಾವ ಅಧಿಕಾರ ಪಡೆದಿದ್ದಾರೆ? ನಾವು ಅವರನ್ನೆಲ್ಲ ಸ್ಮರಿಸಬೇಕು. ಹೀಗಾಗಿ ಮಾಧ್ಯಮಗಳ ಮುಂದೆ ಮಾತನಾಡುವುದಕ್ಕಿಂತ ಪಕ್ಷ ಬಹಳ ಮುಖ್ಯ ಎಂದು ನಾನು ಬಹಳ ನಮ್ರತೆಯಿಂದ ಮನವಿ ಮಾಡುತ್ತೇನೆ. ಯಾರಿಗಾದರೂ ಏನೇ ಸಮಸ್ಯೆ ಇದ್ದರೂ ಹೈಕಮಾಂಡ್ ಜತೆ ಚರ್ಚಿಸಿ ಬಗೆಹರಿಸಿಕೊಳ್ಳಿ. ಸಧ್ಯಕ್ಕೆ ನಾವು ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶದ ಸಿದ್ಧತೆಯಲ್ಲಿದ್ದು, ಇದರ ಪರಿಶೀಲನೆಗೆ ಸುರ್ಜೆವಾಲ ಅವರು ಶುಕ್ರವಾರ ಬೆಳಗಾವಿಗೆ ಆಗಮಿಸಲಿದ್ದಾರೆ. ನಿಮ್ಮ ಪ್ರಶ್ನೆಗಳು ಏನೇ ಇದ್ದರೂ ಅವರನ್ನು ಕೇಳಿ” ಎಂದು ತಿಳಿಸಿದರು.
ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಶ್ನೆ ಮಾಡುವುದು ಸರಿಯಲ್ಲ
ಪಕ್ಷದ ಸಂಘಟನೆ ಕುಂಠಿತವಾಗಿದೆ, ಪಕ್ಷಕ್ಕೆ ಪೂರ್ಣಪ್ರಮಾಣದ ಅಧ್ಯಕ್ಷರು ಬೇಕು ಎಂಬ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿ ಎಂದು ಕೇಳಿದಾಗ, “ಈ ಬಗ್ಗೆ ಸ್ಪಷ್ಟನೆ ನೀಡಬೇಕಿರುವುದು ನಾನಲ್ಲ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು. ಈ ವಿಚಾರವಾಗಿ ಅವರ ಬಳಿ ಕೇಳಿ. ಅವರ ನಿರ್ಧಾರವನ್ನು ಪ್ರಶ್ನೆ ಮಾಡಲಾಗುತ್ತಿದೆ. ಈ ರೀತಿ ಮಾಡಬಾರದು” ಎಂದು ತಿಳಿಸಿದರು.
-
Chamarajanagar21 hours ago
ಕಾಂಗ್ರೆಸ್ ಗೆ ಭರ್ಜರಿ ಗೆಲುವು
-
Uncategorized20 hours ago
ಕಾಡಾನೆ ಸೆರೆ ಕಾರ್ಯಾಚರಣೆ ಯಶಸ್ವಿ: ಪುಂಡಾನೆ ಸೆರೆ ಹಿಡಿದ ಕ್ಯಾಪ್ಟನ್ ಪ್ರಶಾಂತ್ ಅಂಡ್ ಟೀಮ್
-
Chamarajanagar22 hours ago
ಕಾರು ಅಪಘಾತ ಇಬ್ಬರು ಸ್ಥಳದಲ್ಲೇ ಮೃತ
-
Chikmagalur23 hours ago
ಹತ್ತು ಲಕ್ಷ ಮೌಲ್ಯದ 11 ಬೈಕ್ ಕದ್ದಿದ್ದ ಕಳ್ಳನ ಬಂಧನ
-
National - International13 hours ago
ಪಾಕ್ನ 90 ಮಂದಿ ಸೈನಿಕರನ್ನು ಹತ್ಯೆ ಮಾಡಿದ್ದೇವೆ ಎಂದ ಬಲೂಚ್ ಲಿಬರೇಶನ್ ಆರ್ಮಿ
-
Chamarajanagar15 hours ago
ತಲೆಯಲ್ಲಿ ಕೂದಲಿಲ್ಲ ಎಂದು ನಿಂದಿಸಿದ ಪತ್ನಿ: ಮನನೊಂದ ಪತಿ ಆತ್ಮ*ಹತ್ಯೆ
-
Kodagu15 hours ago
ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕೆರೆಗೆ ಬಿದ್ದು ಬಾಲಕಿ ಮೃ*ತ
-
Mandya18 hours ago
ಮಳವಳ್ಳಿ ವಸತಿ ಶಾಲೆಯ ದುರ್ಘಟನೆ : ಎಚ್ಡಿಕೆ ಕಳವಳ