Chamarajanagar
ಅರಣ್ಯದೊಳಗೆ ಏಕಬಳಕೆ ಪ್ಲಾಸ್ಟಿಕ್ ನಿಷೇಧ: ಈಶ್ವರ ಖಂಡ್ರೆ

ಬಂಡೀಪುರ: ಏಕ ಬಳಕೆ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಬಾಟಲಿ, ತಟ್ಟೆ, ಚಮಚ ಇತ್ಯಾದಿ ತ್ಯಾಜ್ಯ ಅರಣ್ಯ ಪ್ರವೇಶಿಸದಂತೆ ತಡೆಯಲು ಅರಣ್ಯದೊಳಗೆ ಸಾಗುವ ಮಾರ್ಗದಲ್ಲಿ 2 ಹಂತದ ತಪಾಸಣೆ ವ್ಯವಸ್ಥೆಯನ್ನು ಶೀಘ್ರ ಜಾರಿಗೊಳಿಸುವಂತೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಂಡೀಪುರದಲ್ಲಿಂದು ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಉದ್ಘಾಟಿಸಿದ ತರುವಾಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕೆಕ್ಕನಹಳ್ಳ, ಮೂಲೆಹೊಳೆ, ಮದ್ದೂರು ಗೇಟ್, ಮೇಲುಕಾಮನಹಳ್ಳಿ ಗೇಟ್ ಬಳಿ ಪ್ರತಿ ನಿತ್ಯ 30-35 ಕೆ.ಜಿ. ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ಆಗುತ್ತಿದೆ. ಪ್ರತಿ ವರ್ಷ ಈ ನಾಲ್ಕು ತಪಾಸಣಾ ಕೇಂದ್ರಗಳಲ್ಲಿ ಸುಮಾರು 11ರಿಂದ 12 ಟನ್ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗುತ್ತಿದೆ ಎಂಬ ಮಾಹಿತಿ ಇದೆ. ಅರಣ್ಯ ಸಿಬ್ಬಂದಿ ಕಾಡಿನಲ್ಲಿ ಇಳಿದು ಪ್ಲಾಸ್ಟಿಕ್ ಸಂಗ್ರಹಿಸುವಾಗ ವನ್ಯಜೀವಿ ದಾಳಿ ಮಾಡುವ, ಹಾವು ಕಚ್ಚುವ ಅಪಾಯ ಇರುತ್ತದೆ. ಹೀಗಾಗಿ ಪ್ಲಾಸ್ಟಿಕ್ ತ್ಯಾಜ್ಯ ಅರಣ್ಯ ಪ್ರವೇಶಿಸದಂತೆ ದ್ವಾರದಲ್ಲೇ ತಡೆಯುವ ವ್ಯವಸ್ಥೆ ಮಾಡಿ ಎಂದರು.
ಅರಣ್ಯದೊಳಗೆ ಹಾದು ಹೋಗುವ ಹೆದ್ದಾರಿಗಳಲ್ಲಿ, ರಸ್ತೆಗಳಲ್ಲಿ ಸಂಚರಿಸುವ ವಾಹನಗಳಿಗೆ 2 ಹಂತದ ತಪಾಸಣೆ ವ್ಯವಸ್ಥೆ ಜಾರಿ ಮಾಡಿ, ಮೊದಲ ಹಂತದಲ್ಲಿ ಒಂದು ದೊಡ್ಡ ಬುಟ್ಟಿ ಇಟ್ಟು ಏಕ ಬಳಕೆ ಪ್ಲಾಸ್ಟಿಕ್ ಬಾಟಲಿ, ಲೋಟ, ತಟ್ಟೆ, ಕ್ಯಾರಿ ಬ್ಯಾಗ್ ಅನ್ನು ಅದರಲ್ಲಿ ಸ್ವಯಂ ಪ್ರೇರಿತವಾಗಿ ಹಾಕಲು ವಾಹನದಲ್ಲಿರುವವರಿಗೆ ತಿಳಿಸಿ. ನಂತರ ಎರಡನೇ ಹಂತದಲ್ಲಿ ವಾಹನ ತಪಾಸಣೆ ಮಾಡಿ, ವಾಹನಗಳಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಇದ್ದರೆ ದಂಡ ವಿಧಿಸಿ ಎಂದು ಸೂಚಿಸಿದರು.
ಬೇಸಿಗೆಯಲ್ಲಿ ನೀರಿನ ಕೊರತೆ ಬಾರದಂತೆ ಕ್ರಮ ವಹಿಸಿ: ಈ ಬಾರಿ ಮುಂಗಾರು ಮತ್ತು ಹಿಂಗಾರು ಮಳೆ ಉತ್ತಮವಾಗಿದ್ದರೂ, ವನ್ಯಜೀವಿಗಳು ಕಾಡಿನಿಂದ ನಾಡಿಗೆ ಬರುತ್ತಿರುವುದು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಬರುವ ಬೇಸಿಗೆಯಲ್ಲಿ ಅರಣ್ಯದೊಳಗೆ ನೀರು ಮತ್ತು ಮೇವಿನ ಕೊರತೆ ಆಗದಂತೆ ಈಗಿನಿಂದಲೇ ಕ್ರಮ ವಹಿಸಿ, ನೀರು ಗುಂಡಿಗಳಲ್ಲಿ ನೀರು ಸಂಗ್ರಹಣೆಗೆ ಆದ್ಯತೆ ನೀಡಿ. ಅಗತ್ಯಬಿದ್ದರೆ ಕೊಳವೆ ಬಾವಿಗಳಿಗೆ ಸೌರ ವಿದ್ಯುತ್ ಪಂಪ್ ಅಳವಡಿಸಿ ನೀರು ಹರಿಸಿ ಎಂದು ಹೇಳಿದರು.
ಲಂಟನಾ, ಸೆನ್ನಾ ಕಳೆಗಳು ವ್ಯಾಪಕವಾಗಿ ಬೆಳೆಯುತ್ತಿದ್ದು, ಇದರಿಂದ ಸಸ್ಯಹಾರಿ ಪ್ರಾಣಿಗಳಿಗೆ ಮೇವಿನ ಕೊರತೆ ಆಗುತ್ತಿದೆ. ಈ ಕಳೆ ತೆಗೆಯಲು ಸಮಗ್ರ ಯೋಜನೆ ರೂಪಿಸಿ, ಪರಿಹಾರ ಕಂಡು ಹಿಡಿಯಿರಿ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲೆಯ ರೈತರ ಅಹವಾಲು ಆಲಿಸಿದ ಸಚಿವರು, ಕಾನೂನಿನ ಚೌಕಟ್ಟಿನೊಳಗೆ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುವುದಾಗಿ ಹೇಳಿದರು.
Chamarajanagar
ಚಿಕ್ಕಮಗಳೂರು: ನಕ್ಸಲ್ ರವೀಂದ್ರಗೆ ಸೇರಿದ್ದು ಎನ್ನಲಾದ ಬಂದೂಕು ಪತ್ತೆ?

ಚಿಕ್ಕಮಗಳೂರು: ಮೊನ್ನೆ ಶರಣಾಗತಿಯಾದ ನಕ್ಸಲ್ ರವೀಂದ್ರಗೆ ಸೇರಿದ್ದು ಎನ್ನಲಾದ ಬಂದೂಕು ಶೃಂಗೇರಿ ಅರಣ್ಯ ಪ್ರದೇಶದಲ್ಲಿ ಗುರುವಾರ ಪತ್ತೆಯಾಗಿದೆ.
ಶೃಂಗೇರಿ ತಾಲೂಕಿನ ಮರ್ಕಲ್ ಗ್ರಾಮದ ಬಳಿಯಿರುವ ತಿರುಗುಣಿಬೈಲು ಅರಣ್ಯ ಪ್ರದೇಶದಲ್ಲಿ ಎಸ್.ಬಿ.ಎ.ಎಲ್ ಬಂದೂಕು ಪತ್ತೆಯಾಗಿದ್ದು, ಆ ಬಂದೂಕು ಮತ್ತು ಜೀವಂತ ಗುಂಡುಗಳನ್ನು ಭೂಮಿಯ ಒಳಗೆ ಹೂಳಲಾಗಿತ್ತು.
ಬಂದೂಕು ಸಂಬಂಧ ಪರಿಶೀಲನೆ ನಡೆಸಿದ ಪೊಲೀಸರು ಬಂದೂಕು ಮತ್ತು ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಅಪರಿಚಿತರು ಎಂದು ಪ್ರಕರಣ ದಾಖಲಿಸಲಾಗಿದೆ.
Chamarajanagar
ಗುಂಡಲ್ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಮಾಜಿ ಶಾಸಕ ಆರ್.ನರೇಂದ್ರ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸತ್ತೇಗಾಲ ಗ್ರಾಮದಿಂದ ಕೀರೆ ಪಾತಿ ಗ್ರಾಮದವರೆಗೆ ಇರುವ 20 ಕೆರೆಗಳಿಗೆ ನೀರು ತುಂಬಿಸಲು ಕ್ಯಾಬಿನೆಟ್ ನಲ್ಲಿ ಅನುಮೋದನೆ ನೀಡಿ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಲಾಗಿದೆ ಎಂದು ಮಾಜಿ ಶಾಸಕ ಆರ್ ನರೇಂದ್ರ ತಿಳಿಸಿದರು.
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಂಡಾಲ್ ಜಲಾಶಯ ವ್ಯಾಪ್ತಿಯ ಅಚ್ಚುಕಟ್ಟು ರೈತರುಗಳು ಹಮ್ಮಿಕೊಂಡಿದ್ದ ಬಾಗಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೈತರುಗಳು ಆರ್ಥಿಕವಾಗಿ ಸದೃಢರಾದರೆ ಮಾತ್ರ ಕ್ಷೇತ್ರ ಅಭಿವೃದ್ಧಿ ಆಗುತ್ತದೆ ಎಂಬ ದೂರದೃಷ್ಟಿಯ ಫಲವಾಗಿ ಗುಂಡಾಲ್ ಜಲಾಶಯ, ಹುಬ್ಬೆ ಹುಣಸೆ, ರಾಮನಗುಡ್ಡ, ಉಡುತೊರೆ ಜಲಾಶಯ, ಕೌಳಿ ಹಳ್ಳ ಡ್ಯಾಮ್, ಹೂಗ್ಯಂ ಜಲಾಶಯ, ಕಿರೇ ಪಾತಿ ಜಲಾಶಯ ಸೇರಿದಂತೆ ಗೋಪಿನಾಥಂ ಜಲಾಶಯವನ್ನು ನಮ್ಮ ತಂದೆಯವರಾದ ದಿ.ಜಿ ರಾಜುಗೌಡ ಹಾಗೂ ದೊಡ್ಡಪ್ಪ ದಿ. ಜಿ.ವೆಂಕಟೇಗೌಡರವರ ಶಾಸಕರಾಗಿದ್ದಾಗ ನಿರ್ಮಾಣ ಮಾಡಲಾಗಿದೆ. ಹುಬ್ಬೆ ಹುಣಸೆ ಜಲಾಶಯ ಮಾತ್ರ ನನ್ನ ಅವಧಿಯಲ್ಲಿ 5.5 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕ್ಷೇತ್ರ ವ್ಯಾಪ್ತಿಯಲ್ಲಿರುವ ಎಲ್ಲಾ ಜಲಾಶಯಗಳಿಗೆ ನೀರು ತುಂಬಿದರೆ 40 ಸಾವಿರ ಎಕರೆ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಸಿಗಲಿದೆ. ಗುಂಡಾಲ್ ಜಲಾಶಯ ನಿರ್ಮಾಣ ಮಾಡಿ 45 ವರ್ಷಗಳಾಗಿದೆ. ಆದರೆ ಒಂದೇ ಒಂದು ಬಾರಿ ಜಲಾಶಯ ಭರ್ತಿಯಾಗಿತ್ತು. ಉಳಿದ ವರ್ಷಗಳಲ್ಲಿ ಬರಗಾಲ ತತ್ತರಿಸಿದ್ದ ವೇಳೆ ರೈತರಿಗೆ ತೊಂದರೆಯಾಗಿತ್ತು. ಈ ನಿಟ್ಟಿನಲ್ಲಿ ಮೊದಲ ಹಂತದಲ್ಲಿ 127 ಕೋಟಿ ವೆಚ್ಚದಲ್ಲಿ ಗುಂಡಾಲ್ ರಾಮನಗುಡ್ಡ ಹುಬ್ಬೆ ಹುಣಸೆ ಜಲಾಶಯಗಳಿಗೆ ನದಿ ಮೂಲದಿಂದ ನೀರು ತುಂಬಿಸುವ ಯೋಜನೆಗೆ ಅನುಮೋದನೆ ಪಡೆದು ಕಾಮಗಾರಿ ಅಂತಿಮ ಹಂತದಲ್ಲಿದೆ. ಅನುದಾನದ ಕೊರತೆಯಿಂದ ರಾಮನ ಗುಡ್ಡ ಹಾಗೂ ಹುಬ್ಬೆ ಹುಣಸೆ ಜಲಾಶಯಕ್ಕೆ ನೀರು ತುಂಬಿಸುವ ಕಾಮಗಾರಿ ಸ್ಥಗಿತವಾಗಿದ ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಜಲ ಸಂಪನ್ಮೂಲ ಸಚಿವರಾದ ಡಿ.ಕೆ ಶಿವಕುಮಾರ್ ಅವರಿಗೆ ಒಂಬತ್ತು ಕೋಟಿ ಅನುದಾನ ನೀಡುವಂತೆ ಮನವಿ ನೀಡಲಾಗಿದ್ದು ಅವರು ಸಹ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಅನುದಾನ ನೀಡಿದ ತಕ್ಷಣ ಕಾಮಗಾರಿ ಪೂರ್ಣಗೊಂಡರೆ ಸುಮಾರು 20,000 ಎಕರೆಗೆ ನೀರಾವರಿ ಸೌಲಭ್ಯ ಸಿಗಲಿದೆ ಎಂದರು.
1400 ಕೋಟಿ ಯೋಜನೆಗಳಿಗೆ ಕ್ರಿಯಾಯೋಜನೆ: ನಾನು ಮೂರನೇ ಬಾರಿ ಶಾಸಕನಾಗಿದ್ದಾಗ ಉಡುತೊರೆ ಜಲಾಶಯಕ್ಕೆ ಕೆರೆ ನೀರು ತುಂಬಿಸಲು 200 ಕೋಟಿ ವೆಚ್ಚದಲ್ಲಿ ಕ್ರಿಯಾಯೋಜನೆ ಮಾಡಿ ಕಳುಹಿಸಲಾಗಿತ್ತು. ಅನುಮೋದನೆ ಹಂತಕ್ಕೆ ತಲುಪಿದ ನಂತರ ಅದು ಸ್ಥಗಿತವಾಗಿದೆ. ಈ ಬಾರಿ ಈ ಯೋಜನೆಗೂ ಅನುದಾನ ನೀಡುವಂತೆ ಮನವಿ ಮಾಡಿದ್ದೇನೆ ಇದಲ್ಲದೆ ಮುಖ್ಯ ಕಾಲುವೆ, ತೋಬು ಕಾಲುವೆ, ಹಾಗೂ ಕಾಲುವೆಗಳಲ್ಲಿ ತುಂಬಿರುವ ಹೂಳು ತೆಗೆಯಲು ಅನುದಾನ ಕೇಳಿದ್ದು ಸರ್ಕಾರ ಅನುದಾನ ನೀಡಿದರೆ ಇನ್ನಷ್ಟು ಅಭಿವೃದ್ಧಿಯಾಗಲಿದೆ ಎಂದು ತಿಳಿಸಿದರು.
12 ಹಾಡಿಗಳಿಗೆ ವಿದ್ಯುತ್ ಸಂಪರ್ಕ: ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 32 ಹಾಡಿಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ತೊಂದರೆ ಅನುಭವಿಸುತ್ತಿದ್ದರು ನಾನು ಶಾಸಕನಾಗಿ ಆಯ್ಕೆಯಾದ ನಂತರ 20 ಹಾಡಿಗಳಿಗೆ ವಿದ್ಯುತ್ ಸಂಪರ್ಕ ಕೊಡಿಸಿದ್ದೇನೆ. ಉಳಿದ 12 ಹಾಡುಗಳಿಗೂ ವಿದ್ಯುತ್ ಸಂಪರ್ಕ ನೀಡಲು ಕ್ರಿಯೆ ಯೋಜನೆ ಮಾಡಿ ಅನುಮೋದನೆಗಾಗಿ ಕಳುಹಿಸಲಾಗಿತ್ತು .ಈಗ ಅನುಮೋದನೆ ಸಿಕ್ಕಿದ್ದು ಅತಿ ಶೀಘ್ರದಲ್ಲಿಯೇ ಈ ಹಾಡಿಗಳಿಗೂ ವಿದ್ಯುತ್ ಸಂಪರ್ಕ ಸಿಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್, ಕೊಳ್ಳೇಗಾಲ, ಯಳಂದೂರು, ಹನೂರು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಕೆ ಸಿ ಮಾದೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಗೋವಿಂದ, ಪಟ್ಟಣ ಪಂಚಾಯಿತಿ ಸದಸ್ಯರಾದ ಗಿರೀಶ್ ಹರೀಶ್ ನವೀನ್, ಮುಖಂಡರಾದ ವೆಂಕಟರಮಣ ನಾಯ್ಡು, ಕಾಮಗೆರೆ ಕುಮಾರ್ ಗೌಡ, ನವನೀತ್ ಗೌಡ, ಕಾಮಗೆರೆ ರವಿ, ಪ್ರದೀಪ್, ಉದ್ದನೂರು ಸಿದ್ದರಾಜು, ಚೇತನ್ ದೊರೆರಾಜು, ಚಿಕ್ಕ ಮಾಲಾಪುರ ಅಂಕರಾಜು ಸೇರಿದಂತೆ ಇನ್ನಿತರರು ಹಾಜರಿದ್ದರು.
Chamarajanagar
ಡಯಾಬಿಟಿಕ್ ಕ್ಲಿನಿಕ್-ಜಿಲ್ಲಾಧಿಕಾರಿಗಳಿಂದ ನೂತನ ಸೇವೆಗೆ ಚಾಲನೆ

ಚಾಮರಾಜನಗರ: ಎಲ್ಲಾ ಸಾರ್ವಜನಿಕ ಆಸ್ಪತ್ರೆ, ಸಮುದಾಯ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರತಿ ಬುಧವಾರ ಮಧುಮೇಹಿಗಳಿಗೆ ಆರೋಗ್ಯ ಸೌಲಭ್ಯ ಒದಗಿಸುವ ರಾಜ್ಯದಲ್ಲೇ ಮೊದಲು ಎನಿಸಿರುವ ಡಯಾಬಿಟಿಕ್ ಕ್ಲಿನಿಕ್‍ಗಳು ಚಾಮರಾಜನಗರ ಜಿಲ್ಲೆಯಲ್ಲಿ ಆರಂಭವಾಗಿದೆ.
ಪ್ರತಿ ಬುಧವಾರ ಜಿಲ್ಲೆಯ ಎಲ್ಲಾ ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬೆಳಿಗ್ಗೆ 7 ರಿಂದ 11 ಗಂಟೆಯವರೆಗೆ ಮಧುಮೇಹಿಗಳ ಆರೋಗ್ಯ ಕಾಳಜಿಗಾಗಿ ಡಯಾಬಿಟಿಕ್ ಕ್ಲಿನಿಕ್ ನಿರ್ವಹಣೆಯಾಗಲಿದೆ. ಈ ವಿನೂತನ ಆರೋಗ್ಯ ಸೇವೆಯನ್ನು ರಾಜ್ಯದಲ್ಲೇ ಚಾಮರಾಜನಗರ ಜಿಲ್ಲೆಯು ಮೊದಲಿಗೆ ಆರಂಭಿಸುವ ಮೂಲಕ ಗಮನಸೆಳೆದಿದೆ.
ಮಧುಮೇಹಿ ರೋಗಿಗಳಿಗೆ ತಪಾಸಣೆ, ಔಷದೋಪಾಚಾರ, ಡಯಾಬಿಟಿಕ್ ಚಾರ್ಟ್, ಪಥ್ಯ ಆಹಾರದ ವಿವರ ಸೇರಿದಂತೆ ಇತರೆ ಎಲ್ಲ ಸೇವೆ ಸಲಹೆಗಳನ್ನು ಡಯಾಬಿಟಿಕ್ ಕ್ಲಿನಿಕ್ ನಲ್ಲಿ ಒದಗಿಸಲಾಗುತ್ತಿದೆ. ಮಧುಮೇಹ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆ ಅವಶ್ಯಕತೆಯಿದ್ದಲ್ಲಿ ನಿಯಮಾನುಸಾರ ಮೇಲ್ಮಟ್ಟದ ಆಸ್ಪತ್ರೆಗೆ ಶಿಫಾರಸು ಮಾಡಿ ಮುಂದಿನ ಆರೋಗ್ಯ ಸೇವೆಗೆ ಅನುಸರಣೆ ಮಾಡುವಂತೆಯೂ ಸುತ್ತೋಲೆ ಹೊರಡಿಸಲಾಗಿದೆ. ಡಯಾಬಿಟಿಕ್ ಕ್ಲಿನಿಕ್ ನಿರ್ವಹಣೆ ಹಾಗೂ ಸುಸೂತ್ರವಾಗಿ ನಡೆಸಲು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಮೇಲ್ವಿಚಾರಣೆ ಕಾರ್ಯವಹಿಸಲು ಸೂಚನೆ ನೀಡಲಾಗಿದೆ.
ಆರೋಗ್ಯ ಸೇವಾ ಕ್ಷೇತ್ರದ ಹೊಸ ವಿಶಿಷ್ಟ ಕಾರ್ಯಕ್ಕೆ ಮುಂದಾಗಿರುವ ನೂತನ ಡಯಾಬಿಟಿಕ್ ಕ್ಲಿನಿಕ್‍ಗೆ ಚಾಮರಾಜನಗರ ತಾಲೂಕಿನ ವೆಂಕಟಯ್ಯನಛತ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಇಂದು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಈ ಕಾರ್ಯಕ್ರಮವನ್ನು ಇಡೀ ರಾಜ್ಯದಲ್ಲೇ ಚಾಮರಾಜನಗರ ಜಿಲ್ಲೆ ಮೊದಲು ಆರಂಭಿಸಿದೆ. ಇದು ವಿಶೇಷವಾಗಿ ಜಿಲ್ಲೆಯ ಗ್ರಾಮೀಣ ಬಡಜನರಿಗೆ ತುಂಬಾ ಉಪಯುಕ್ತವಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮತ್ತು ಅವರ ತಂಡ ಜಿಲ್ಲೆಯಲ್ಲಿ ಇಂತಹ ಆರೋಗ್ಯ ಸೇವೆಗಳನ್ನು ಒದಗಿಸಲು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಡಯಾಬಿಟಿಕ್ ಕ್ಲಿನಿಕ್ ಸೌಲಭ್ಯ ಅನುಷ್ಠಾನಕ್ಕೆ ಮುಂದಾಗಿರುವ ಎಲ್ಲರನ್ನು ಅಭಿನಂದಿಸುವುದಾಗಿ ನುಡಿದರು.
ಸಾಮಾನ್ಯವಾಗಿ ಎಲ್ಲಾ ಆರೋಗ್ಯ ಕೇಂದ್ರಗಳು ಬೆಳ್ಳಿಗೆ 9 ಗಂಟೆಗೆ ಪ್ರಾರಂಭವಾಗುತ್ತವೆ. ಮಧುಮೇಹ ಇರುವವರು ತಪಾಸಣೆಗೆ 9 ಗಂಟೆಯವರೆಗೂ ಕಾಯಬೇಕಾಗಿತ್ತು. ಆದರೆ ಮಧುಮೇಹಿಗಳು ಆರೋಗ್ಯ ಪರೀಕ್ಷೆಗಾಗಿ ಕಾಯಲು ಕಷ್ಟವಾಗುತ್ತಿತ್ತು. ಹೀಗಾಗಿ ವಾರದಲ್ಲಿ ಒಂದು ದಿನ ಅಂದರೆ ಪ್ರತಿ ಬುಧವಾರ ಬೆಳ್ಳಿಗೆ 7 ರಿಂದ 11 ರವರೆಗೆ ಮಧುಮೇಹದವರಿಗಾಗಿಯೇ ಪ್ರಯೋಗಾಲಯವನ್ನು ತೆರೆದು ರಕ್ತಪರೀಕ್ಷೆ ಮಾಡುವ ಕಾರ್ಯಕ್ರಮವನ್ನು ಮಾಡಲಾಗುತ್ತದೆ. ರಾಜ್ಯದಲ್ಲಿಯೇ ಪ್ರಥಮವಾಗಿ ನಮ್ಮ ಜಿಲ್ಲೆಯಲ್ಲಿ ಇಂತಹ ಡಯಾಬಿಟಿಕ್ ಕ್ಲಿನಿಕ್ ಸೇವೆ ಒದಗಿಸಲು ಮುಂದಾಗಿದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ ಮಾತನಾಡಿ, ಮಾರ್ಗಸೂಚಿ ಪ್ರಕಾರ ಜಿಲ್ಲೆಯಾದ್ಯಂತ ವೈದ್ಯರು ಆರೋಗ್ಯ ಸಿಬ್ಬಂದಿ ಡಯಾಬಿಟಿಕ್ ಕ್ಲಿನಿಕ್ ಅನ್ನು ಸಮರ್ಪಕವಾಗಿ ನಿರ್ವಹಿಸಲು ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಾವಣ್ಯ ಮಹೇಶ್, ಉಪಾಧ್ಯಕ್ಷ ಕೃಷ್ಣಮೂರ್ತಿ, ಸದಸ್ಯ ಎ.ಎಂ. ಸೋಮಣ್ಣ, ಅಶೋಕ್, ಸ್ವಾಮಿ, ಶೈಲಜ, ಚಾಮುಲ್ ನಿರ್ಧೇಶಕ ಹೆಚ್.ಎಸ್ ಬಸವರಾಜು, ಜಿಲ್ಲಾ ನೋಡಲ್ ಅಧಿಕಾರಿ ಡಾ.ರಾಜೇಶ್ ಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಸುಂದರೇಶ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್, ವೆಂಕಟಯ್ಯನಛತ್ರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಡಾ. ಗೋವಿಂದರಾಜು, ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಮಹೇಶ್, ಇನ್ನಿತರರು ಉಪಸ್ಥಿತರಿದ್ದರು.
-
State11 hours ago
ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯ ದುರದೃಷ್ಟಕರ: ಬಸವರಾಜ ಬೊಮ್ಮಾಯಿ ಬೇಸರ
-
Kodagu8 hours ago
ಕೊಡವಾಮೆ ಬಾಳೋ ಪಾದಯಾತ್ರೆ: ಮಧ್ಯ ಮಾರಾಟ ನಿಷೇಧ
-
Chamarajanagar8 hours ago
ಚಿಕ್ಕಮಗಳೂರು: ನಕ್ಸಲ್ ರವೀಂದ್ರಗೆ ಸೇರಿದ್ದು ಎನ್ನಲಾದ ಬಂದೂಕು ಪತ್ತೆ?
-
Kodagu13 hours ago
ಫೆ.7 ರ ಕೊಡವ ಪಾದಯಾತ್ರೆಗೆ ಸಿಎನ್ ಸಿ ಬೆಂಬಲ
-
Kodagu8 hours ago
ಕೊಟ್ಟಮುಡಿ ಝೀನತ್ ಯುವಕ ಸಂಘ ಅಧ್ಯಕ್ಷರಾಗಿ ಸೌಕತ್ ಆಯ್ಕೆ
-
Hassan7 hours ago
ಆಸ್ತಿ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ
-
Sports9 hours ago
ಏಕದಿನ ಮಾದರಿಗೆ ದಿಢೀರ್ ನಿವೃತ್ತಿ ಘೋಷಿಸಿದ ಆಸೀಸ್ ಆಲ್ರೌಂಡರ್ ಸ್ಟೋಯ್ನಿಸ್
-
Hassan6 hours ago
ಎಂಸಿಇ ಕಾಲೇಜು ಉಪಾಧ್ಯಕ್ಷರಿಗೆ ವೀರಶೈವ ಲಿಂಗಾಯತ ಮಹಾಸಭಾದಿಂದ ಸನ್ಮಾನ