Hassan
ಧರ್ಮಸ್ಥಳ ಪ್ರಕರಣ| ಸರ್ಕಾರ ಎಚ್ಚೆತ್ತುಕೊಳ್ಳಬೇಕು: ಬಿ.ವೈ.ವಿಜಯೇಂದ್ರ
ಸಕಲೇಶಪುರ: ಧರ್ಮಸ್ಥಳ ಅಸಂಖ್ಯಾತ ಭಕ್ತರು ನಂಬಿರುವ ಪುಣ್ಯ ಕ್ಷೇತ್ರ. ಹಿಂದೂಗಳ ಭಾವನೆಗಳಿಗೆ ಧಕ್ಕೆ ಬಂದಾಗ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಸಕಲೇಶಪುರ ಪಟ್ಟಣದಲ್ಲಿ ಮಾತನಾಡಿದ ಅವರು, ನಮ್ಮೆಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರೊಂದಿಗೆ ಧರ್ಮಸ್ಥಳದ ಮಂಜುನಾಥನ ದರ್ಶನ ಪಡೆದಿದ್ದೇವೆ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ, ಚರ್ಚೆ ಮಾಡಿ ಬಂದಿದ್ದೇವೆ. ರಾಜ್ಯ ಸರ್ಕಾರ ಧರ್ಮಸ್ಥಳದ ವಿಚಾರದಲ್ಲಿ ಎಸ್‌ಐಟಿ ರಚನೆ ಮಾಡಿದ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಯುತ್ತಿದೆ. ಇದು ಕೋಟಿ ಕೋಟಿ ಭಕ್ತರಿಗೆ ನೋವುಂಟು ಮಾಡಿದೆ ಎಂದರು.

ಸಚಿವ ದಿನೇಶ್ ಗುಂಡೂರಾವ್ ಅವರು ಎಡಪಂಥೀಯರ ಒತ್ತಡಕ್ಕೆ ಮಣಿದು ಎಸ್‌ಐಟಿ ರಚನೆ ಮಾಡಿದ್ದೇವೆ ಅಂಥ ಹೇಳಿದರೆ, ಡಿ.ಕೆ.ಶಿವಕುಮಾರ್ ಅವರು ಷಡ್ಯಂತ್ರ ಇದೆ, ಸಮಯ ಬಂದಾಗ ಬಹಿರಂಗ ಪಡಿಸುತ್ತೇನೆ ಎಂದು ಹೇಳಿದ್ದಾರೆ. ತನಿಖೆ ಆಗಲಿ, ಸತ್ಯ ಹೊರಬರಲಿ ಎಂದು ರಾಜ್ಯದ ಜನತೆ ಕೇಳುತ್ತಿದ್ದರೆ, ಒತ್ತಡಕ್ಕೆ ಮಣಿದು ತನಿಖೆ ಹಾದಿ ತಪ್ಪುತ್ತಿದೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ ಎಂದು ಹೇಳಿದರು.
ಅಪಪ್ರಚಾರ ತಡೆಯುವ ಕೆಲಸವನ್ನು ಸರ್ಕಾರ ಏಕೆ ಮಾಡಲಿಲ್ಲ. ತನಿಖೆ ಬೇಗ ಮುಗಿಯಬೇಕು, ಸದನದಲ್ಲಿ ಮಧ್ಯಂತರ ವರದಿ ಮಂಡನೆ ಮಾಡಬೇಕು. ದೂರದಾರನ ಹಿಂದೆ ಇರುವ ಶಕ್ತಿಗಳು ಯಾರು, ಅವರ ಉದ್ದೇಶ ಏನು ಎಲ್ಲದರ ಬಗ್ಗೆ ಸಮಗ್ರ ತನಿಖೆ ಆಗಬೇಕು. ಈ ವಿಚಾರದಲ್ಲಿ ಬಿಜೆಪಿ ಇದರಲ್ಲಿ ರಾಜಕಾರಣ ಮಾಡುತ್ತಿಲ್ಲ. ಬಿಜೆಪಿಯ ನಿಲುವಿನಲ್ಲಿ ಯಾವುದೇ ಒಂದು ಬದಲಾವಣೆ ಇಲ್ಲ ಎಂದು ತಿಳಿಸಿದರು.

ಎಸ್‌ಐಟಿ ರಚನೆ ಮಾಡಿದಾಗ ಸ್ವಾಗತ ಮಾಡಿದ್ದೆವು. ತನಿಖೆ ಅಂಥ ಹೇಳಿ ದಿನಕ್ಕೊಂದು ಕಡೆ ಗುಂಡಿ ತೆಗೆದು ಸರ್ಕಾರ ಏನು ಮಾಡಲು ಹೊರಟಿದೆ. ತನಿಖೆ ಸಂಸ್ಥೆಗಳ ಮೇಲೆ ಅಪನಂಬಿಕೆ ಹುಟ್ಟುವ ಸಂದರ್ಭ ಸೃಷ್ಟಿಯಾಗಿದೆ. ಜನರ ಭಾವನೆಗಳಿಗೆ ಧಾರ್ಮಿಕ ಶ್ರದ್ದೆಗೆ ಧಕ್ಕೆ ಆಗಬಾರದು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಿದ್ದೇವೆ ಎಂದರು. ಸದನದಲ್ಲಿ ಈ ಬಗ್ಗೆ ನಾವು ಮಾತನಾಡಿದ್ದೇವೆ. ಎಲ್ಲದಕ್ಕೂ ಇತಿಮಿತಿಗಳು ಇದೆ. ನಾಡಿನ ಜನ ಶಾಂತಿಯಿಂದ ಎದುರು ನೋಡುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ಜನರು ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಆ ಸಂದರ್ಭ ಸೃಷ್ಟಿಯಾಗಬಾರದು, ಸರ್ಕಾರ ಎಚ್ಚೆತ್ತುಕೊಂಡು ಮಧ್ಯಂತರ ವರದಿ ನೀಡಬೇಕು, ನಾವು ಅದನ್ನ ಎದುರು ನೋಡುತ್ತಿದ್ದೇವೆ ಎಂದರು.
ಸೌಜನ್ಯ ಹತ್ಯೆ ಪ್ರಕರಣ, ಯಾವುದೇ ಪ್ರಕರಣ ಇದ್ದರು ಸಮಗ್ರ ತನಿಖೆ ಆಗಲಿ, ಆದರೆ ಆ ನೆಪದಲ್ಲಿ ನಮ್ಮ ಭಾವನೆಗಳಿಗೆ ಧಕ್ಕೆ ಬರುವಾಗ ಸರ್ಕಾರ ಕೈಕಟ್ಟಿ ಕುಳಿತರೆ ಯಾರು ಒಪ್ಪಲ್ಲ. ವೀರೇಂದ್ರ ಹೆಗ್ಗಡೆ ಅವರಿಗೆ ಸಹಜವಾಗಿ ನೋವಾಗಿದೆ. ಎಸ್‌ಐಟಿ ರಚನೆ ಮಾಡಿದಾಗ ಸ್ವಾಗತ ಮಾಡಿದ್ದು, ತನಿಖೆ ಮುಗಿಯಬೇಕು ಎನ್ನುವ ಅಪೇಕ್ಷೆ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರದಿಂದ ಸಹವಾಗಿಯೇ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ಸದನದಲ್ಲಿ ಎಲ್ಲಾ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
Hassan
ಚೆನ್ನಮ್ಮ ಸಮಾಧಿಗೆ ದೇವೇಗೌಡ, ಕುಮಾರಸ್ವಾಮಿ ಭೇಟಿ: ಭಾವುಕರಾದ ಮಾಜಿ ಪ್ರಧಾನಿ, ನಿತ್ಯ ಪೂಜೆಗೆ ನಿರ್ಧಾರ
ಹೊಳೆನರಸೀಪುರ : ಜು.21: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪತ್ನಿ ಚನ್ನಮ್ಮ ಅವರ ಸಮಾಧಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಕುಟುಂಬ ಸದಸ್ಯರು ಹಾಗೂ ಬಂಧುಗಳು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಸಮಾಧಿ ಸ್ಥಳದಲ್ಲಿ ನಿತ್ಯ ಪೂಜೆ, ಸಹಸ್ರನಾಮ ಪಠಣ ಹಾಗೂ ನಂದಾದೀಪ ಬೆಳಗುವ ವ್ಯವಸ್ಥೆ ಮಾಡುವ ನಿರ್ಧಾರ ಕೈಗೊಳ್ಳಲಾಯಿತು. ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಸಮೀಪದ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿರುವ ಚನ್ನಮ್ಮ ಅವರ ಸಮಾಧಿಗೆ ಎಚ್.ಡಿ. ದೇವೇಗೌಡ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಪುತ್ರಿ ಅನಸೂಯಾ ಸೇರಿದಂತೆ ಕುಟುಂಬ ಸದಸ್ಯರು ಆಗಮಿಸಿ ನಮನ ಸಲ್ಲಿಸಿದರು.

ಚನ್ನಮ್ಮ ಅವರು ಬದುಕಿದ್ದಾಗ ಪ್ರತಿದಿನ ಪಠಿಸುತ್ತಿದ್ದ ಲಲಿತ ಸಹಸ್ರನಾಮ, ವಿಷ್ಣು ಸಹಸ್ರನಾಮ ಹಾಗೂ ಶಿವನಿಗೆ ಪ್ರಿಯವಾದ ರುದ್ರ ಚಮಕ ಶ್ಲೋಕಗಳನ್ನು ಸಮಾಧಿ ಎದುರು ಅರ್ಚಕರು ಪಠಿಸಿದರು. ಮೂವರು ಅರ್ಚಕರು ಶ್ಲೋಕಗಳ ಉದ್ಘೋಷಣೆ ಮೂಲಕ ಪೂಜೆ ನೆರವೇರಿಸಿದರೆ, ಪುತ್ರಿ ಅನಸೂಯಾ ಸಮಾಧಿ ಎದುರು ನೆಲದ ಮೇಲೆ ಕುಳಿತು ಶ್ಲೋಕ ಪಠಣದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಪುತ್ರಿ ಅನಸೂಯಾ ನಂದಾದೀಪ ಹಚ್ಚಿದರು.

ಜುಲೈ 30ರಂದು ನಡೆಯಲಿರುವ ಆರಾಧನಾ ಮಹೋತ್ಸವದವರೆಗೆ ದೀಪ ಆರದಂತೆ ವ್ಯವಸ್ಥೆ ಮಾಡುವಂತೆ ಕುಟುಂಬ ಸದಸ್ಯರು ಸೂಚನೆ ನೀಡಿದರು. ಮುಂದೆಯೂ ಪ್ರತಿನಿತ್ಯ ಸಮಾಧಿ ಸ್ಥಳದಲ್ಲಿ ಲಲಿತ ಸಹಸ್ರನಾಮ, ವಿಷ್ಣು ಸಹಸ್ರನಾಮ ಪಠಿಸಿ ಪೂಜೆ ನಡೆಸಲು ತೀರ್ಮಾನಿಸಲಾಯಿತು. ಪತ್ನಿಯನ್ನು ಕಳೆದುಕೊಂಡ ಬಳಿಕ ಮೊದಲ ಬಾರಿಗೆ ಸಮಾಧಿಗೆ ಆಗಮಿಸಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಭಾವುಕರಾಗಿ ಕಣ್ಣೀರಿಟ್ಟರು. ಭೂಮಿ ತಾಯಿಯ ಮಡಿಲಿನಲ್ಲಿ ಚಿರನಿದ್ರೆಗೆ ಜಾರಿರುವ ತಮ್ಮ ಬಾಳ ಸಂಗಾತಿಯನ್ನು ನೆನೆದು ಕೆಲಕಾಲ ಮೌನವಾಗಿ ನಿಂತ ಅವರು, ಸಮಾಧಿಗೆ ಪ್ರದಕ್ಷಿಣೆ ಹಾಕಿ ನಮನ ಸಲ್ಲಿಸಿದರು. ಜುಲೈ 30ರಂದು ನಡೆಯಲಿರುವ ಚನ್ನಮ್ಮ ಅವರ ಆರಾಧನಾ ಮಹೋತ್ಸವದ ಅಂಗವಾಗಿ ಸಮಾಧಿ ಸ್ಥಳದಲ್ಲಿ ಪ್ರತಿದಿನ ವಿಶೇಷ ಪೂಜೆ, ಸಹಸ್ರನಾಮ ಪಠಣ ಹಾಗೂ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ.
Hassan
ಹಾಸನದ ವಿದ್ಯಾರ್ಥಿಗಳಿಗೆ ನೀಟ್–ಜೆಇಇ ತರಬೇತಿಯಲ್ಲಿ ಹೊಸ ಮೈಲುಗಲ್ಲು ನಿರ್ಮಿಸಿದ ಪಾಠಶಾಲಾ ನೀಟ್ ಅಕಾಡೆಮಿ
ಹಾಸನ: ಕೋವಿಡ್-19 ಸಂಕಷ್ಟದ ಸಮಯದಲ್ಲಿ ಕೇವಲ ಒಂದು ತರಗತಿ ಕೊಠಡಿ ಹಾಗೂ ಮೂವರು ಉಪನ್ಯಾಸಕರೊಂದಿಗೆ ಆರಂಭವಾದ ಪಾಠಶಾಲಾ ನೀಟ್ ಅಕಾಡೆಮಿ, ಇಂದು ಹಾಸನ ಜಿಲ್ಲೆಯ ವಿದ್ಯಾರ್ಥಿಗಳಿಗೆ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಯಶಸ್ಸಿನ ದಾರಿ ತೋರಿಸುತ್ತಿರುವ ಪ್ರಮುಖ ಶಿಕ್ಷಣ ಸಂಸ್ಥೆಯಾಗಿ ಬೆಳೆದಿದೆ ಎಂದು ಪಾಠಶಾಲಾ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುನಿಲ್ ಕುಮಾರ್ ತಿಳಿಸಿದರು.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2021ರ ಫೆಬ್ರವರಿಯಲ್ಲಿ ಕೆ.ಆರ್.ಪುರಂನ ಸ್ಮಾರ್ಟ್ ಆರ್ಕೇಡ್ ಕಟ್ಟಡದಲ್ಲಿ ಆರಂಭವಾದ ಸಂಸ್ಥೆ, ವಿದ್ಯಾರ್ಥಿಗಳು ಮತ್ತು ಪೋಷಕರ ವಿಶ್ವಾಸ ಗಳಿಸಿ ನಿರಂತರ ಬೆಳವಣಿಗೆ ಸಾಧಿಸಿದೆ. ಬಳಿಕ 2024ರ ಡಿಸೆಂಬರ್‌ನಲ್ಲಿ ಕುವೆಂಪುನಗರದ ಕೆಎನ್‌ಟಿ ಟವರ್‌ನಲ್ಲಿ ಎರಡನೇ ಶಾಖೆಯನ್ನು ಆರಂಭಿಸಲಾಗಿದೆ ಎಂದರು.

ಹಾಸನ ಜಿಲ್ಲೆಯ ವಿದ್ಯಾರ್ಥಿಗಳು ನೀಟ್ ಹಾಗೂ ಜೆಇಇ ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿ ಪಡೆಯಲು ಬೆಂಗಳೂರು, ಮಂಗಳೂರು ಮೊದಲಾದ ನಗರಗಳಿಗೆ ತೆರಳುವ ಅಗತ್ಯವಿಲ್ಲದಂತೆ ಸ್ಥಳೀಯ ಮಟ್ಟದಲ್ಲೇ ರಾಷ್ಟ್ರಮಟ್ಟದ ತರಬೇತಿ ನೀಡುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿತ್ತು. ಆರಂಭದಲ್ಲಿ ವಿಶ್ವಾಸದ ಕೊರತೆ ಎದುರಾದರೂ, ಗುಣಮಟ್ಟದ ಬೋಧನೆ ಮತ್ತು ಶಿಸ್ತಿನ ತರಬೇತಿಯಿಂದ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತ ಬಂದಿದೆ ಎಂದು ಹೇಳಿದರು. 2022ರ ನೀಟ್ ಪರೀಕ್ಷೆಯಲ್ಲಿ ತರಬೇತಿ ಪಡೆದ 24 ವಿದ್ಯಾರ್ಥಿಗಳಲ್ಲಿ 9 ಮಂದಿ ಎಂಬಿಬಿಎಸ್ ಸೀಟ್ ಪಡೆದಿದ್ದು, ಆಶೀಶ್ 636 ಅಂಕಗಳೊಂದಿಗೆ ಜಿಲ್ಲೆಯ ಟಾಪರ್ ಆಗಿದ್ದರು. 2023ರಲ್ಲಿ ಸುಹಾನಿ 646 ಅಂಕ ಪಡೆದು ಮೈಸೂರಿನ ಎಂಎಂಸಿ ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆದಿದ್ದರು.

2024ರಲ್ಲಿ ಸುಹಾಸ್ 705 ಅಂಕ ಗಳಿಸಿ ಅಖಿಲ ಭಾರತ ರ್ಯಾಂಕ್ (ಎಐಆರ್) 1052 ಪಡೆದು ಎಐಐಎಂಎಸ್‌ಗೆ ಪ್ರವೇಶ ಪಡೆದಿದ್ದು, ಜಿಲ್ಲೆಯ ನೀಟ್ ಫಲಿತಾಂಶದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಇದೇ ವೇಳೆ ರೀತನ್ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. 2025ರಲ್ಲಿ ಶೃಂಗ ಎಐಆರ್-4094 ಪಡೆದು ಸಾಧನೆ ಮಾಡಿದ್ದು, ಅದೇ ವರ್ಷ ಸಂಸ್ಥೆಯ 22 ವಿದ್ಯಾರ್ಥಿಗಳು ಉಚಿತ ಎಂಬಿಬಿಎಸ್ ಸೀಟ್ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ. ಪ್ರಸಕ್ತ ಸಾಲಿನ ನೀಟ್ ಪರೀಕ್ಷೆಯಲ್ಲಿ 600ಕ್ಕೂ ಅಧಿಕ ಅಂಕ ಗಳಿಸಿದ ಇಬ್ಬರು ಹಾಗೂ 590ಕ್ಕೂ ಹೆಚ್ಚು ಅಂಕ ಗಳಿಸಿದ ನಾಲ್ವರು ವಿದ್ಯಾರ್ಥಿಗಳು ಸಂಸ್ಥೆಯಿಂದ ಹೊರಹೊಮ್ಮಿದ್ದಾರೆ. 2026ರ ಜೆಇಇ ಮೇನ್ಸ್-2 ಪರೀಕ್ಷೆಯಲ್ಲೂ ಮೊದಲ ಐದು ಜಿಲ್ಲಾ ಸ್ಥಾನಗಳನ್ನು ಸಂಸ್ಥೆಯ ವಿದ್ಯಾರ್ಥಿಗಳು ಪಡೆದಿದ್ದು, ಅಭಿಜ್ಞಾ (605) ಹಾಗೂ ಚಿನ್ಮಯಿ (600) ನೀಟ್‌ನಲ್ಲಿ ಜಿಲ್ಲಾ ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ ಎಂದು ಮಾಹಿತಿ ನೀಡಿದರು.

ಸಂಸ್ಥೆಯಲ್ಲಿ ಹೈಟೆಕ್ ಎಸಿ ತರಗತಿ ಕೊಠಡಿಗಳು, ಡಿಜಿಟಲ್ ಬೋರ್ಡ್ ಸೇರಿದಂತೆ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇದುವರೆಗೆ 90ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಂಬಿಬಿಎಸ್, 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಿಎಎಂಎಸ್, 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಿಡಿಎಸ್ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಕೋರ್ಸ್‌ಗಳಲ್ಲಿ ಉಚಿತ ಸೀಟುಗಳನ್ನು ಪಡೆಯಲು ಸಂಸ್ಥೆ ನೆರವಾಗಿದೆ ಎಂದು ವಿವರಿಸಿದರು. ಈ ವರ್ಷದಿಂದ ನೀಟ್ ಪರೀಕ್ಷೆಯಲ್ಲಿ 400ಕ್ಕೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಶುಲ್ಕದಲ್ಲಿ ಶೇ.30 ರಿಯಾಯಿತಿ ನೀಡುವ ಯೋಜನೆಯನ್ನು ಆರಂಭಿಸಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಶಿಸ್ತು, ಗುಣಮಟ್ಟದ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಾದ ತರಬೇತಿ ನೀಡುವ ಮೂಲಕ ಹಾಸನ ಜಿಲ್ಲೆಯ ವಿದ್ಯಾರ್ಥಿಗಳನ್ನು ರಾಷ್ಟ್ರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ತಲುಪಿಸುವ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪಾಠಶಾಲಾ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಮಂಜುನಾಥ್ ಜೆ.ಎಸ್., ಪಾಠಶಾಲಾ ನೀಟ್ ಅಕಾಡೆಮಿ ವ್ಯವಸ್ಥಾಪಕರಾದ ಕೌಶಿಕ್ ಹಾಗೂ ತೇಜಸ್ ಉಪಸ್ಥಿತರಿದ್ದರು.
Hassan
ಜನಸ್ನೇಹಿ ಪೊಲೀಸ್ ಸಿದ್ದೇಶ್‌ಗೆ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರ: ಕರ್ತವ್ಯನಿಷ್ಠೆ, ಜನಸೇವೆ–ಕಾನೂನು ಸುವ್ಯವಸ್ಥೆಯಲ್ಲಿ ಗಮನಾರ್ಹ ಸೇವೆ
ಅರಸೀಕೆರೆ: ಅರಸೀಕೆರೆ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಜನಸ್ನೇಹಿ ಪೊಲೀಸ್ ಸಿಬ್ಬಂದಿ ಶ್ರೀ ಸಿದ್ದೇಶ್ ಅವರ ಹುಟ್ಟುಹಬ್ಬದ ಅಂಗವಾಗಿ ಸಾರ್ವಜನಿಕರು, ವಿವಿಧ ಸಂಘ–ಸಂಸ್ಥೆಗಳ ಪದಾಧಿಕಾರಿಗಳು, ಸಮಾಜದ ಮುಖಂಡರು, ಸ್ನೇಹಿತರು ಹಾಗೂ ಅಭಿಮಾನಿಗಳು ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದ್ದಾರೆ. ಕರ್ತವ್ಯವನ್ನು ಅತ್ಯಂತ ಪ್ರಾಮಾಣಿಕತೆ, ಶಿಸ್ತು ಮತ್ತು ನಿಷ್ಠೆಯಿಂದ ನಿರ್ವಹಿಸುತ್ತಿರುವ ಸಿದ್ದೇಶ್ ಅವರು ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರ ನಡುವೆ ಉತ್ತಮ ಬಾಂಧವ್ಯ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಅವರ ಸರಳ ವ್ಯಕ್ತಿತ್ವ ಹಾಗೂ ಸೇವಾ ಮನೋಭಾವದಿಂದ ಅವರು ನಗರದ ಜನರ ವಿಶ್ವಾಸ ಗಳಿಸಿದ್ದು, ಜನಸ್ನೇಹಿ ಪೊಲೀಸ್ ಸಿಬ್ಬಂದಿಯಾಗಿ ಗುರುತಿಸಿಕೊಂಡಿದ್ದಾರೆ.

ನಗರದಲ್ಲಿ ನಡೆಯುವ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಅಗತ್ಯ ಮಾಹಿತಿಯನ್ನು ಮುಂಚಿತವಾಗಿಯೇ ಸಂಗ್ರಹಿಸಿ ಪೊಲೀಸ್ ಇಲಾಖೆಗೆ ರವಾನಿಸುವ ಮೂಲಕ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಅವರು ವಿಶೇಷ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು, ಸಾರ್ವಜನಿಕರಲ್ಲಿ ಶಾಂತಿ ಮತ್ತು ಸೌಹಾರ್ದದ ವಾತಾವರಣ ನಿರ್ಮಿಸುವುದು ಹಾಗೂ ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸುವಲ್ಲಿ ಅವರ ಪಾತ್ರ ಗಮನಾರ್ಹವಾಗಿದೆ.

ಸಾರ್ವಜನಿಕರೊಂದಿಗೆ ಸ್ನೇಹಪರವಾಗಿ ವರ್ತಿಸುವ ಗುಣ, ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ ಪರಿಹಾರಕ್ಕೆ ಪ್ರಯತ್ನಿಸುವ ಮನೋಭಾವ ಮತ್ತು ಕರ್ತವ್ಯದ ಮೇಲಿನ ಬದ್ಧತೆಯಿಂದ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪೊಲೀಸ್ ಇಲಾಖೆಯ ಘನತೆ ಹೆಚ್ಚಿಸುವ ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿದ್ದೇಶ್ ಅವರು ಯುವ ಪೊಲೀಸ್ ಸಿಬ್ಬಂದಿಗೆ ಮಾದರಿಯಾಗಿದ್ದಾರೆ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.

ನಗರದ ಶಾಂತಿ, ಸುವ್ಯವಸ್ಥೆ ಮತ್ತು ಸಾರ್ವಜನಿಕ ಸುರಕ್ಷತೆ ಕಾಪಾಡುವಲ್ಲಿ ಹಗಲಿರುಳು ಶ್ರಮಿಸುತ್ತಿರುವ ಅವರ ಸೇವೆಯನ್ನು ವಿವಿಧ ಸಂಘ–ಸಂಸ್ಥೆಗಳು ಹಾಗೂ ನಾಗರಿಕರು ಪ್ರಶಂಸಿಸಿದ್ದು, ಮುಂದಿನ ದಿನಗಳಲ್ಲಿಯೂ ಇದೇ ಸೇವಾ ಮನೋಭಾವದೊಂದಿಗೆ ಇನ್ನಷ್ಟು ಉನ್ನತ ಸ್ಥಾನಗಳನ್ನು ಅಲಂಕರಿಸಲಿ ಎಂದು ಹಾರೈಸಿದ್ದಾರೆ
-
Kodagu21 hours agoಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ಕುಶಾಲನಗರದ ಐಎಎಸ್ ಅಧಿಕಾರಿ ಎಸ್.ಎಸ್. ನಕುಲ್ ನೇಮಕ
-
Politics15 hours agoಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ: 3.68 ಲಕ್ಷಕ್ಕೂ ಅಧಿಕ ಅರ್ಜಿಗಳು – ಜಿಲ್ಲಾವಾರು ಅಂಕಿಅಂಶ ಪ್ರಕಟ!!
-
Hassan20 hours agoಪಂಚಭೂತಗಳಲ್ಲಿ ಲೀನರಾದ ಚೆನ್ನಮ್ಮ ದೇವೇಗೌಡ
-
Politics18 hours agoಬಿಡದಿ ಟೌನ್ಶಿಪ್ ಭೂಸ್ವಾಧೀನಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್; PIL ವಜಾ
-
Hassan24 hours agoಎತ್ತಿನಗಾಡಿಯಲ್ಲಿ ದೇವರ ಒಡವೆ ವಸ್ತ್ರ ಮೆರವಣಿಗೆ: ಮಲೆಕಲ್ಲು ತಿರುಪತಿ ಜಾತ್ರೆಗೆ ಸಂಪ್ರದಾಯದ ಚಾಲನೆ
-
Kodagu21 hours agoಇಂದಿನಿಂದ ಪುಷ್ಯ ಮಳೆ : ಉತ್ತಮ ಮಳೆ ನಿರೀಕ್ಷೆಯಲ್ಲಿ ಜಿಲ್ಲೆಯ ರೈತರು
-
Hassan24 hours agoನೀಟ್–ಜೆಇಇ ಫಲಿತಾಂಶದಲ್ಲಿ ಹೊಸ ಇತಿಹಾಸ ಬರೆದ ಪಾಠಶಾಲಾ ನೀಟ್ ಅಕಾಡೆಮಿ
-
Chikmagalur18 hours agoಕಂಬಳದ ಕೆಸರುಗದ್ದೆಯಂತಾದ ಕೋಳೂರು ರಸ್ತೆ: ಶಾಲಾ ಮಕ್ಕಳ ಹರಸಾಹಸ, ಪಂಚಾಯತ್ ನಿರ್ಲಕ್ಷ್ಯಕ್ಕೆ ಆಕ್ರೋಶ
