Connect with us

State

ಅತಿಥಿ ಉಪನ್ಯಾಸಕರ ಬೇಡಿಕೆ/ಸಮಸ್ಯೆಗಳಿಗೆ ಸರ್ಕಾರದ ನಿರ್ಧಾರಗಳನ್ನು ಉನ್ನತ ಶಿಕ್ಷಣ ಸಚಿವರಾದ ಡಾಕ್ಟರ್ ಎಂ ಸಿ ಸುಧಾಕರ್ ಪ್ರಕಟಿಸಿದರು.

Published

on

ಅತಿಥಿ ಉಪನ್ಯಾಸಕರ ಬೇಡಿಕೆ/ಸಮಸ್ಯೆಗಳ ಕುರಿತಂತೆ ಅತಿಥಿ ಉಪನ್ಯಾಸಕರ ಸಂಘಟನೆಗಳ ಮುಖಂಡರೊಂದಿಗೆ ನಡೆದ ಚರ್ಚೆಯ ನಂತರ ಸರ್ಕಾರದ ನಿರ್ಧಾರಗಳನ್ನು ಉನ್ನತ ಶಿಕ್ಷಣ ಸಚಿವರಾದ ಡಾಕ್ಟರ್ ಎಂ ಸಿ ಸುಧಾಕರ್ ಪ್ರಕಟಿಸಿದರು.

 ಅತಿಥಿ ಉಪನ್ಯಾಸಕರಿಗೆ ತಿಂಗಳಿಗೆ ಒಂದು ದಿನ ರಜೆ ನೀಡುವ ಕುರಿತು ಪರಿಶೀಲಿಸಲಾಗಿದ್ದು, ರಜೆಯ 01 ದಿನದ ಕಾರ್ಯಭಾರವನ್ನು ಇತರೆ ದಿನಗಳಲ್ಲಿ ಸರಿದೂಗಿಸುವ ಷರತ್ತಿಗೊಳಪಟ್ಟು 15/19 ಗಂಟೆಗಳ ಕಾರ್ಯಭಾರ ನಿರ್ವಹಿಸುವ ಅತಿಥಿ ಉಪನ್ಯಾಸಕರಿಗೆ ತಿಂಗಳಿಗೆ ಮಾಸಿಕ 01 ದಿನ ರಜೆಯನ್ನು ನೀಡಲು ತೀರ್ಮಾನಿಸಲಾಗಿದೆ.

 ಕಾಲೇಜಿನ ಎಲ್ಲಾ ಪ್ರಾಂಶುಪಾಲರುಗಳು ಪೂರ್ಣಕಾಲಿಕ ಮತ್ತು ಅತಿಥಿ ಉಪನ್ಯಾಸಕರ ಮಧ್ಯೆ ಯಾವುದೇ ತಾರತಮ್ಯವನ್ನು ಅನುಸರಿಸದಂತೆ ಹಾಗೂ ಗೌರವಯುತವಾಗಿ ನಡೆಸಿಕೊಳ್ಳುವ ಬಗ್ಗೆ ಪರಿಶೀಲಿಸಲಾಗಿದ್ದು, ಈಗಾಗಲೇ ಎಲ್ಲಾ ಪ್ರಾಂಶುಪಾಲರಿಗೆ ದಿನಾಂಕ:12.12.2023 ರಂದು ನಡೆದ ವಿಡಿಯೋ ಕಾನ್ಫೆರೆನ್ಸ್‌ ಮೂಲಕ ಅತಿಥಿ ಉಪನ್ಯಾಸಕರನ್ನು ಗೌರವಯುತವಾಗಿ ನಡೆಸಿಕೊಳ್ಳಲು ಸೂಚಿಸಿರುತ್ತೇನೆ.

 ಅತಿಥಿ ಉಪನ್ಯಾಸಕರಿಗೆ ಪ್ರತಿ ವರ್ಷ ಅರ್ಜಿಗಳನ್ನು ಕರೆಯದೆ, Document Verification ಮಾಡುವುದರ ಬದಲು ಹಿಂದಿನ ವರ್ಷದ ಅರ್ಜಿಯನ್ನೇ ನಂತರದ ವರ್ಷಗಳಲ್ಲಿನ ಆಯ್ಕೆಗೆ ಪರಿಗಣಿಸುವ ಬಗ್ಗೆ ಪರಿಶೀಲಿಸಲಾಗಿದ್ದು, ಈ ಪ್ರಕ್ರಿಯೆಯನ್ನು ಸರಳೀಕರಣಗೊಳಿಸುವ ನಿಟ್ಟಿನಲ್ಲಿ ಆಯ್ಕೆಯಾದ ಅತಿಥಿ ಉಪನ್ಯಾಸಕರ ದಾಖಲೆಗಳ Centralized Data-base ಅನ್ನು ಸೃಜಿಸಿ, ನಿರ್ವಹಿಸಲು ತೀರ್ಮಾನಿಸಲಾಗಿದೆ.

 ಹಿಂದಿನ ಸೇವೆಯನ್ನು ಆಧರಿಸಿ ವಿಶೇಷ ನೇಮಕಾತಿ ನಿಯಮಗಳನ್ನು ರೂಪಿಸಿ, ಅವರಿಗೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಕೃಪಾಂಕವನ್ನು ನೀಡುವುದರ ಬಗ್ಗೆ ಪರಿಶೀಲಾಗಿದ್ದು, ಮಾನ್ಯ ಸರ್ವೋಚ್ಚ ನ್ಯಾಯಾಲಯವು ಉಮಾದೇವಿ ಪ್ರಕರಣದಲ್ಲಿ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಹಾಗೂ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ನೀಡಿರುವ ತೀರ್ಪುಗಳ ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕರನ್ನು ಸೇವಾ ಸಕ್ರಮಾತಿಗೊಳಿಸಲು ಅವಕಾಶ ಇಲ್ಲದಿರುವುದರಿಂದ ಕಾಲೇಜು ಶಿಕ್ಷಣ ಇಲಾಖೆಯ ಸಹಾಯಕ ಪ್ರಾಧ್ಯಾಪಕರು, ತಾಂತ್ರಿಕ ಶಿಕ್ಷಣ ಇಲಾಖೆಯ ಇಂಜಿನಿಯರಿಂಗ್‌ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರು ಹಾಗೂ ಪಾಲಿಟೆಕ್ನಿಕ್‌ ಉಪನ್ಯಾಸಕರುಗಳ ಮುಂದಿನ ನೇಮಕಾತಿ ಪ್ರಕ್ರಿಯೆ ಕೈಗೊಳ್ಳುವ ಸಂದರ್ಭದಲ್ಲಿ ಕನಿಷ್ಠ 05 ವರ್ಷಗಳಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರಿಗೆ ಪ್ರತಿ ವರ್ಷ ಶೇ.1 ರಂತೆ ಗರಿಷ್ಠ ಶೇ.5 ರಷ್ಟು ಕೃಪಾಂಕ (Weightage) ನೀಡುವ ಅವಕಾಶವನ್ನು ವಿಶೇಷ ನಿಯಮಗಳಲ್ಲಿ ಅಳವಡಿಸಲು ತೀರ್ಮಾನಿಸಲಾಗಿದೆ.

 ಅತಿಥಿ ಉಪನ್ಯಾಸಕರನ್ನು ಅವರ ಆದ್ಯತೆ ಮೇರೆಗೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಬೋಧಕೇತರ ಹುದ್ದೆಗಳಿಗೆ ಪರಿಗಣಿಸುವುದರ ಬಗ್ಗೆ ಪರಿಶೀಲಿಸಲಾಗಿದ್ದು, ಮಾನ್ಯ ಸರ್ವೋಚ್ಚ ನ್ಯಾಯಾಲಯವು ಉಮಾದೇವಿ ಪ್ರಕರಣದಲ್ಲಿ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಹಾಗೂ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ನೀಡಿರುವ ತೀರ್ಪುಗಳ ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕರನ್ನು ಸೇವಾ ಸಕ್ರಮಾತಿಗೊಳಿಸಲು ಅವಕಾಶ ಇಲ್ಲದಿರುವುದರಿಂದ ಅತಿಥಿ ಉಪನ್ಯಾಸಕರನ್ನು ಬೋಧಕೇತರ ಹುದ್ದೆಗಳ ಎದುರಾಗಿ ಪರಿಗಣಿಸಲು ಅವಕಾಶ ಇರುವುದಿಲ್ಲ ಎಂದು ತೀರ್ಮಾನಿಸಲಾಯಿತು.

 10/15 ವರ್ಷಗಳಿಗೂ ಹೆಚ್ಚಿನ ಅವಧಿಗೆ ಸೇವೆ ಸಲ್ಲಿಸಿ, 60 ವರ್ಷ ಮೀರಿದ ಅತಿಥಿ ಉಪನ್ಯಾಸಕರ ಸೇವೆಯನ್ನು ಬಳಸಿಕೊಳ್ಳಲು ಅವಕಾಶ ಇಲ್ಲದಿರುವುದರಿಂದ ಇವರಿಗೆ ಭದ್ರತಾ ರೂಪದಲ್ಲಿ ಇಡಿಗಂಟು ಸೌಲಭ್ಯವನ್ನು ಅವರುಗಳು ಸಲ್ಲಿಸಿರುವ ಸೇವಾ ಅವಧಿ ಪರಿಗಣಿಸಿ ವಾರ್ಷಿಕ ರೂ.50,000/- ಮೊತ್ತದಂತೆ (ಉದಾಹರಣೆಗೆ 10 ವರ್ಷ ಸೇವೆ ಸಲ್ಲಿಸಿದಲ್ಲಿ 10 ವರ್ಷ x ರೂ.50000/- = ರೂ.5,00,000/-) ಇಡಿಗಂಟು ನೀಡಲು ತೀರ್ಮಾನಿಸಲಾಗಿದೆ.

 ಅತಿಥಿ ಉಪನ್ಯಾಸಕರ ಆರೋಗ್ಯದ ದೃಷ್ಟಿಯಿಂದ ವಾರ್ಷಿಕ ರೂ.5.00 ಲಕ್ಷಗಳ ಆರೋಗ್ಯ ವಿಮಾ ಸೌಲಭ್ಯವನ್ನು ನೀಡುವ ನಿಟ್ಟಿನಲ್ಲಿ ಅತಿಥಿ ಉಪನ್ಯಾಸಕರಿಂದ ವಂತಿಗೆ ರೂಪದಲ್ಲಿ ಮಾಸಿಕ ರೂ.400/- ಸ್ವೀಕರಿಸಿ ಅಷ್ಟೇ ಮೊತ್ತದ ವಂತಿಗೆಯನ್ನು (ಅತಿಥಿ ಉಪನ್ಯಾಸಕರಿಂದ ರೂ.400 + ಸರ್ಕಾರದಿಂದ ರೂ.400 ಒಟ್ಟು ರೂ.800) ಸರ್ಕಾರದಿಂದ ಭರಿಸಿ ಆರೋಗ್ಯ ವಿಮಾ ಸೌಲಭ್ಯವನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ. ಸದರಿ ಸೌಲಭ್ಯವನ್ನು ಒದಗಿಸಲು ಸರ್ಕಾರಕ್ಕೆ ವಾರ್ಷಿಕ ಅಂದಾಜು ರೂ.68 ಕೋಟಿಗಳ ಅನುದಾನ ಅವಶ್ಯವಿರುತ್ತದೆ.


 ಅತಿಥಿ ಉಪನ್ಯಾಸಕರಿಗೆ ಪ್ರಸ್ತುತ ಚಾಲ್ತಿಯಲ್ಲಿರುವ ಗೌರವಧನಕ್ಕೆ ರೂ.5000/- ಗಳನ್ನು ಹೆಚ್ಚುವರಿಯಾಗಿ ಪಾವತಿಸಲು ತೀರ್ಮಾನಿಸಲಾಗಿದೆ. ಸದರಿ ಹೆಚ್ಚುವರಿ ಮೊತ್ತವನ್ನು ಒದಗಿಸಲು ಸರ್ಕಾರಕ್ಕೆ ವಾರ್ಷಿಕ ಅಂದಾಜು ರೂ.84.00 ಕೋಟಿಗಳ ಅನುದಾನ ಅವಶ್ಯವಿರುತ್ತದೆ.
ಅತಿಥಿ ಉಪನ್ಯಾಸಕರ ಬೇಡಿಕೆ/ಸಮಸ್ಯೆಗಳನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಸರ್ಕಾರವು ಇಚ್ಛಾಶಕ್ತಿ, ಬದ್ದತೆಯಿಂದ ಮೇಲಿನಂತೆ ತೀರ್ಮಾನಗಳನ್ನು ಕೈಗೊಂಡಿರುತ್ತದೆ. ಆದ್ದರಿಂದ ಸರ್ಕಾರದ ತೀರ್ಮಾನವನ್ನು ಒಪ್ಪಿ, ದಿನಾಂಕ:01.01.2024 ರಿಂದ ಎಲ್ಲಾ ಅತಿಥಿ ಉಪನ್ಯಾಸಕರು ತರಗತಿಗಳಿಗೆ ಹಾಜರಾಗಲು ಸೂಚಿಸಲಾಗಿದೆ. ಒಂದು ವೇಳೆ ತರಗತಿಗಳಿಗೆ ಗೈರು ಹಾಜರಾದಲ್ಲಿ ಸರ್ಕಾರವು ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ನಿಯಮಾನುಸಾರ ಮುಂದಿನ ಪರ್ಯಾಯ ಕ್ರಮಗಳನ್ನು ಕೈಗೊಳ್ಳಲಿದೆ ಎಂಬುದಾಗಿ ಈ ಮೂಲಕ ತಿಳಿಸಲು ಇಚ್ಛಿಸುತ್ತೇನೆ ಎಂದರು.

Continue Reading
Click to comment

Leave a Reply

Your email address will not be published. Required fields are marked *

State

ಮಂಗಳೂರು: ಕಾನ್‌ಸ್ಟೇಬಲ್‌ನಿಂದಲೇ ಲಂಚ ಪಡೆಯುತ್ತಿದ್ದಾಗ ಕೆಎಸ್ಆರ್‌ಪಿ ಇನ್‌ಸ್ಪೆಕ್ಟರ್ ಲೋಕಾಯುಕ್ತ ಬಲೆಗೆ

Published

on

ಮಂಗಳೂರು: ನಗರದ ಕೊಣಾಜೆಯ ಕೆಎಸ್ಆರ್‌ಪಿ 7ನೇ ಬೆಟಾಲಿಯನ್‌ ಇನ್‌ಸ್ಪೆಕ್ಟರ್ ಮಹಮ್ಮದ್ ಹ್ಯಾರೀಸ್ ಎಂಬಾತ 18ಸಾವಿರ ರೂ. ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದಿದ್ದಾನೆ.

ಕೆಎಸ್ಆರ್‌ಪಿ 7ನೇ ಬೆಟಾಲಿಯನ್‌‌ನ ಪೊಲೀಸ್ ಅತಿಥಿಗೃಹದಲ್ಲಿ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸಲು ಮೀಸಲು ಪೊಲೀಸ್ ಕಾನ್ಸ್‌ಸ್ಟೇಬಲ್‌ರಿಂದ ಮಹಮ್ಮದ್ ಹ್ಯಾರೀಸ್ 20,000 ಲಂಚಕ್ಕೆ ಬೇಡಿಕೆಯಿಟ್ಟಿದ್ದ. ಜೊತೆಗೆ ಪ್ರತೀ ತಿಂಗಳು 6,000 ರೂ.ನಂತೆ ಹಣ ನೀಡಬೇಕೆಂದು ಲಂಚ ಕೇಳಿದ್ದ. ಅದರಂತೆ ಮೊದಲಿಗೆ 20000 ಹಣನೀಡಿ, ಬಳಿಕ ಪ್ರತಿ ತಿಂಗಳು 6,000ದಂತೆ ಲಂಚ ನೀಡುತ್ತಾ ಬಂದಿದ್ದಾರೆ. ಈ ಮೂಲಕ ಈವರೆಗೆ ಒಟ್ಟು 50,000 ರೂ. ಲಂಚ ನೀಡಲಾಗಿತ್ತು.

ಆದರೆ ಪೊಲೀಸ್ ಕಾನ್ಸ್‌ಸ್ಟೇಬಲ್‌ ತಂದೆಯ ಅನಾರೋಗ್ಯದ ಹಿನ್ನೆಲೆಯಲ್ಲಿ 3ತಿಂಗಳಿನಿಂದ ಲಂಚ ನೀಡಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಮಹಮ್ಮದ್ ಹ್ಯಾರೀಸ್ ಪ್ರತಿದಿನ ಕರೆಮಾಡಿ 18,000 ರೂ. ಹಣ ಲಂಚವಾಗಿ ನೀಡಬೇಕೆಂದು ಇಲ್ಲವಾದರೆ ಡ್ಯೂಟಿ ಬದಲಾಯಿಸುತ್ತೇನೆ ಎಂದು ಫಿರ್ಯಾದಿದಾರರಿಗೆ ಬೆದರಿಸುತ್ತಿದ್ದ.

ಇದರಿಂದ ಬೇಸತ್ತ ಪೊಲೀಸ್ ಕಾನ್ಸ್‌ಸ್ಟೇಬಲ್‌ ಮಂಗಳೂರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಅದರಂತೆ 18,000 ಲಂಚ ಪಡೆಯುತ್ತಿದ್ದಾಗಲೇ ಮಹಮ್ಮದ್ ಹ್ಯಾರೀಸ್‌ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.

Continue Reading

State

ಮಹಜರು ವೇಳೆ ಚಡ್ಡಿಗ್ಯಾಂಗ್ ಆರೋಪಿಗಳು ಪರಾರಿಗೆ ಯತ್ನ – ಇಬ್ಬರಿಗೆ ಗುಂಡೇಟು

Published

on

ಮಂಗಳೂರು: ಸ್ಥಳ ಮಹಜರು ನಡೆಸಲು ಚಡ್ಡಿಗ್ಯಾಂಗ್‌ನ ಆರೋಪಗಳನ್ನು ಕೊಂಡೊಯ್ಯುತ್ತಿದ್ದ ವೇಳೆ ಪರಾರಿಗೆ ಯತ್ನಿಸಿದ ಇಬ್ಬರು ಆರೋಪಿಗಳಿಗೆ ಪೊಲೀಸರು ಗುಂಡಿಕ್ಕಿರುವ ಘಟನೆ ನಗರದ ಮುಲ್ಕಿ ಸಮೀಪದ ಪಡು ಪಣಂಬೂರು ಬಳಿ ನಡೆದಿದೆ.

ಮಂಗಳವಾರ ನಸುಕಿನ ವೇಳೆ ಚಡ್ಡಿಗ್ಯಾಂಗ್‌ನ ನಾಲ್ವರಿದ್ದ ತಂಡ ಮಂಗಳೂರಿನ ಕೋಟೆಕಣಿಯ ಮನೆಯೊಂದಕ್ಕೆ ನುಗ್ಗಿ ದಂಪತಿಯನ್ನು ಬೆದರಿಸಿ 14ಲಕ್ಷ ಮೌಲ್ಯದ ಸೊತ್ತು ದರೋಡೆ ಮಾಡಿ ಪರಾರಿಯಾಗಿತ್ತು. ಬಳಿಕ ಕಾರನ್ನು ಮುಲ್ಕಿ ಬಳಿ ತೊರೆದು, ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಮತ್ತೆ ಮಂಗಳೂರಿಗೆ ಬಂದು ಬೆಂಗಳೂರಿಗೆ ಪರಾರಿಯಾಗಲೆತ್ನಿಸಿತ್ತು. ಅಷ್ಟರಲ್ಲಿ ಅಲರ್ಟ್ ಆದ ಪೊಲೀಸರು ಸಕಲೇಶಪುರ ಮಾರ್ಗದಲ್ಲಿದ್ದ ಬಸ್‌ಅನ್ನು ತಡೆದು ನಿಲ್ಲಿಸಿ ಬಂಧಿಸಿತ್ತು.

ಅದರಂತೆ ಇಂದು ಸ್ಥಳ ಮಹಜರು ನಡೆಸಲು ಮಂಗಳೂರಿನಿಂದ ಆರೋಪಿಗಳನ್ನು ಮುಲ್ಕಿ ಕಡೆಗೆ ಪೊಲೀಸರು ಕರೆದೊಯ್ಯುತ್ತಿದ್ದರು. ಈ ವೇಳೆ ರಾಜು ಸಿಂಗ್ವಾನಿಯ(24) ಹಾಗೂ ಬಾಲಿ(22) ಎಂಬಿಬ್ಬರು ಆರೋಪಿಗಳು ಪೊಲೀಸರನ್ನು ತಳ್ಳಿ ಎಸ್ಕೇಪ್ ಆಗಲು ಯತ್ನಿಸಿದ್ದಾರೆ. ಆಗ ಪೊಲೀಸರು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ, ಬಳಿಕ ಇಬ್ಬರ ಕಾಲಿಗೆ ಗುಂಡಿಕ್ಕಿದ್ದಾರೆ. ಸದ್ಯ ಗಾಯಾಳು ಆರೋಪಿಗಳನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿಗಳು ತಳ್ಳಿರುವ ಪರಿಣಾಮ ಇಬ್ಬರು ಪೊಲೀಸರಿಗೂ ಗಾಯವಾಗಿದ್ದು, ಅವರನ್ನು ನಗರದ ಎ‌.ಜೆ.ಆಸ್ಪತ್ರೆಗೆ ದಾಖಲಿಸಲಾಗಿದೆ.

Continue Reading

State

ವೃದ್ಧದಂಪತಿಯ ಹಲ್ಲೆಗೈದು ದರೋಡೆ – ಘಟನೆ ನಡೆದು 5ಗಂಟೆಯೊಳಗೆ ಚಡ್ಡಿಗ್ಯಾಂಗ್‌ನ ನಾಲ್ವರು ಅಂದರ್

Published

on

 


ಮಂಗಳೂರು: ನಗರದ ಕೋಟೆಕಣಿಯ ಮನೆಯೊಂದಕ್ಕೆ ಕಿಟಕಿ ಸರಳು ಕತ್ತರಿಸಿ ನುಗ್ಗಿ ವೃದ್ಧದಂಪತಿಯನ್ನು ಬೆದರಿಸಿ ಲಕ್ಷಾಂತರ ಮೌಲ್ಯದ ಕಾರು, ಚಿನ್ನಾಭರಣ ದರೋಡೆಗೈದು ಪರಾರಿಯಾಗಿದ್ದ ಚಡ್ಡಿಗ್ಯಾಂಗ್‌ ಅನ್ನು ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿ ಕಂಬಿ ಹಿಂದೆ ಕಳುಹಿಸಿದೆ.

ಮಧ್ಯಪ್ರದೇಶ ರಾಜ್ಯ ಮೂಲದ ರಾಜು ಸಿಂಗ್ವಾನಿಯ(24), ಮಯೂರ್(30), ಬಾಲಿ(22), ವಿಕ್ಕಿ(21)‌ ಬಂಧಿತ ಚಡ್ಡಿಗ್ಯಾಂಗ್‌ ದರೋಡೆಕೋರರು.

ಜುಲೈ 9ರ ನಸುಕಿನ ಜಾವ 4ಗಂಟೆ ಸುಮಾರಿಗೆ ಬರ್ಮುಡಾ ಚಡ್ಡಿ, ಬನಿಯನ್ ಧರಿಸಿರುವ ನಾಲ್ವರ ತಂಡ ಕೋಟೆಕಣಿ ರಸ್ತೆಯ ವಿಕ್ಟರ್ ಮೆಂಡೋನ್ಸಾ ಎಂಬವರ ಮನೆ ಕಿಟಕಿಯ ಗ್ರಿಲ್ ಕತ್ತರಿಸಿ ಒಳನುಗ್ಗಿದೆ‌. ತಂಡ ವಿಕ್ಟರ್‌ವರಿಗೆ ರಾಡಿನಿಂದ ಹಲ್ಲೆಗೈದು ಅವರ ಪತ್ನಿಗೂ ಹಲ್ಲೆಗೈದು ಬೊಬ್ಬೆ ಹಾಕದಂತೆ, ಯಾರಿಗೂ ಫೋನ್ ಮಾಡದಂತೆ ಬೆದರಿಸಿದೆ. ಬಳಿಕ ಕಪಾಟಿನಲ್ಲಿದ್ದ 12 ಲಕ್ಷ ಮೌಲ್ಯದ ಚಿನ್ನ, ವಜ್ರದಾಭರಣ, ಮೊಬೈಲ್ ಮತ್ತು 1 ಲಕ್ಷ ಮೌಲ್ಯದ 10 ಬ್ರಾಂಡೆಡ್ ವಾಚ್ ಗಳು, 3ಸಾವಿರ ನಗದು ಸುಲಿಗೆ ಮಾಡಿದೆ. ಅಲ್ಲದೆ ಸದ್ರಿ ಮನೆಯ ಹೊರಗೆ ಪಾರ್ಕ್ ಮಾಡಿದ್ದ ಕಾರಿನ ಸಮೇತ ಪರಾರಿಯಾಗಿದೆ. ಈ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರ ಆರೋಪಿಗಳ ಬೆನ್ನುಬಿದ್ದಿದ್ದಾರೆ. ಆರೋಪಿಗಳು ಕದ್ದೊಯ್ದ ಕಾರು ಮುಲ್ಕಿ ಬಳಿ ಪತ್ತೆಯಾಗಿದೆ. ಅಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಆರೋಪಿಗಳು ಅಲ್ಲಿಂದ ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಮಂಗಳೂರಿಗೆ ಪ್ರಯಾಣಿಸಿದ್ದು ತಿಳಿದುಬಂದಿದೆ. ತಕ್ಷಣ ಕೆಎಸ್ಆರ್‌ಟಿಸಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಶಂಕಿತ ಆರೋಪಿಗಳು ಬೆಂಗಳೂರು ಕಡೆ ಪ್ರಯಾಣಿಸಿದ ಮಾಹಿತಿ ಲಭ್ಯವಾಗಿದೆ. ಅದರಂತೆ ಸಕಲೇಶಪುರ ಡಿವೈಎಸ್ಪಿ, ಸಿಪಿಸಿ ಹಾಗೂ ಸಿಬ್ಬಂದಿ ಸಕಲೇಶಪುರದಲ್ಲಿ ಬಸ್ಸು ತಡೆದು ಪ್ರಯಾಣಿಸುತ್ತಿದ್ದ ನಾಲ್ವರನ್ನು ವಶಕ್ಕೆ ಪಡೆದು ದರೋಡೆಗೈದ ಎಲ್ಲಾ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಿಚಾರಣೆ ನಡೆಸಲಾಗಿ ಅವರುಗಳು ಕೃತ್ಯವೆಸಗಿದ ಬಗ್ಗೆ ಒಪ್ಪಿದ್ದು, ಅವರ ವಶದಲ್ಲಿದ್ದ ಮಂಗಳೂರು ನಗರದಲ್ಲಿ ಸುಲಿಗೆ ಮಾಡಿದ್ದ ಎಲ್ಲಾ ಚಿನ್ನ ಹಾಗೂ ವಜ್ರದ ಆಭರಣಗಳು, ವಾಚ್ ಗಳು ಹಾಗೂ ಹಣವನ್ನು ಅಮಾನತ್ತು ಪಡಿಸಿ ಉರ್ವಾ ಪೊಲೀಸ್ ಅಧಿಕಾರಿಗಳಿಗೆ ವಶಕ್ಕೆ ನೀಡಿರುತ್ತಾರೆ. ಈ ಮೂಲಕ ಪೊಲೀಸರು ಘಟನೆ ನಡೆದ 5ಗಂಟೆಗಳೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Continue Reading

Trending

error: Content is protected !!