Kodagu
ಅತ್ತೆಯನ್ನು ಹತ್ಯೆಗೈದ ಆರೋಪದಡಿ ಸೊಸೆ ಬಂಧನ

ಮಡಿಕೇರಿ : ಅತ್ತೆಯನ್ನು ಕೊಲೆಗೈದು ಬಳಿಕ ಸಹಜ ಸಾವು ಎಂದು ಬಿಂಬಿಸಿದ್ದ ಆರೋಪದಡಿ ಸೊಸೆಯನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮರಗೋಡಿನ ನಿವಾಸಿ ಐಮಂಡ ಪೂವಮ್ಮ (೭೩) ಅವರನ್ನು ಕೊಲೆಗೈದ ಆರೋಪದಡಿ ಸೊಸೆ ಬಿಂದು (೨೬) ಅವರನ್ನು ಬಂಧಿಸಲಾಗಿದೆ.
ಘಟನೆ ಹಿನ್ನೆಲೆ – ಮರಗೋಡಿನಲ್ಲಿ ಅತ್ತೆ ಪೂವಮ್ಮ, ವೃತ್ತಿಯಲ್ಲಿ ಶಿಕ್ಷಕ ರಾಗಿರುವ ಪತಿ ಪ್ರಸನ್ನ, ಒಂದು ವರ್ಷದ ಪುತ್ರಿ ಜೊತೆಗೆ ಬಿಂದು ವಾಸವಾಗಿದ್ದು, ಅತ್ತೆ-ಸೊಸೆ ನಡುವೆ ಹಲವು ವರ್ಷಗಳಿಂದ ಮನಸ್ತಾಪ ಇತ್ತು. ಇಬ್ಬರ ನಡುವೆ ಕಲಹವೂ ಆಗಾಗ್ಗೆ ನಡೆಯುತ್ತಿತ್ತು ಎನ್ನಲಾಗಿದೆ. ಏ. ೧೫ ರಂದು ಪತಿ ಮೌಲ್ಯಮಾಪನ ಕರ್ತವ್ಯಕ್ಕಾಗಿ ಮಡಿಕೇರಿಗೆ ತೆರಳಿದ್ದ ಸಂದರ್ಭ ಪೂವಮ್ಮ ಕುಸಿದು ಬಿದ್ದಿರುವುದಾಗಿ ಪತಿ ಪ್ರಸನ್ನ ಅವರಿಗೆ ಬೆಳಿಗ್ಗೆ ೧೦.೪೫ರ ಸುಮಾರಿಗೆ ಬಿಂದು ಕರೆ ಮಾಡಿ ತಿಳಿಸಿದ್ದಾಳೆ. ಅವರು ಬಂದು ನೋಡುವಷ್ಟರಲ್ಲಿ ಮೃತಪಟ್ಟಿರುವುದು ದೃಢಪಟ್ಟಿದೆ. ನಂತರ ಮೃತ ಪೂವಮ್ಮ ಅವರನ್ನು ಅಗ್ನಿಸ್ಪರ್ಶದ ಮೂಲಕ ಅಂತ್ಯಸAಸ್ಕಾರವನ್ನು ನೆರವೇರಿಸ ಲಾಗಿದೆ. ಪೂವಮ್ಮ ಹೃದ್ರೋಗ ಕಾಯಿಲೆಯಿಂದ ಬಳಲುತ್ತಿದ್ದ ಹಿನ್ನೆಲೆ ಆ ಕ್ಷಣದಲ್ಲಿ ಸಾವಿನ ಕುರಿತು ಹೆಚ್ಚಿನ ಅನುಮಾನವೂ ಕುಟುಂಬಸ್ಥರಲ್ಲಿ ಮೂಡಿರಲಿಲ್ಲ. ಅಂತ್ಯಸAಸ್ಕಾರದ ಬಳಿಕ ಗ್ರಾಮದಲ್ಲಿ ಸಾವಿನ ಕುರಿತು ಊಹಾಪೋಹಗಳು ಕೇಳಿ ಬರುತ್ತಿದ್ದವು.
ದಿನಕಳೆದಂತೆ ಪೂವಮ್ಮ ಸಾವಿನ ಬಗ್ಗೆ ಕುಟುಂಬಸ್ಥರಿಗೆ ತೀವ್ರ ಅನುಮಾನ ಮೂಡಿದೆ. ಅದರಲ್ಲೂ ಪತಿ ಪ್ರಸನ್ನ ಅವರಿಗೆ ಘಟನೆ ನಡೆದ ಸ್ಥಳ, ದಿಂಬಿನ ಕವರ್, ಬಟ್ಟೆಯ ಮೇಲೆ ರಕ್ತದ ಕಲೆ, ಮುಖದಲ್ಲಿ ಕೆಲವೊಂದು ಪರಚಿದ ಕಲೆಗಳು ಗಮನಿಸಿ ಸಂಶಯ ಮತ್ತಷ್ಟು ಹೆಚ್ಚಾಗಿದೆ. ಇದರೊಂದಿಗೆ ಬಿಂದು ನಡವಳಿಕೆಯಲ್ಲಿನ ಬದಲಾವಣೆಯೂ ಹೆಚ್ಚಿನ ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ. ಆದರೆ, ಘಟನೆ ನಡೆದ ದಿನದಂದು ಪೊಲೀಸರಿಗೆ ಮಾಹಿತಿ ನೀಡುವುದಾಗಲಿ ಯಾರೂ ಮಾಡಿರುವುದಿಲ್ಲ.
ಏ. ೨೮ ರಂದು ಅತ್ತೆಗೆ ಬೆಳಗ್ಗಿನ ಉಪಹಾರ ಮಾಡಲು ಬರುವಂತೆ ಬಿಂದು ಕರೆದಿದ್ದಾಳೆ. ಈ ಸಂದರ್ಭ ತಿಂಡಿ ಮಾಡಲು ನಿರಾಕರಿಸಿದ ಹಿನ್ನೆಲೆ ವಾಗ್ವಾದ ಉಂಟಾಗಿದೆ. ಈ ಸಂದರ್ಭ ಕೋಪಗೊಂಡ ಬಿಂದು ಕೈಯಲ್ಲಿದ್ದ ಮೊಬೈಲ್‌ನಿಂದ ತಲೆಯ ಹಿಂಭಾಗಕ್ಕೆ ಹಲ್ಲೆಗೈದಿದ್ದಾಳೆ. ಹಾಸಿಗೆ ಮೇಲೆ ಕುಸಿದು ಬಿದ್ದ ಪೂವಮ್ಮ ಅವರನ್ನು ನೋಡದೆ ಹಾಗೆಯೇ ತೆರಳಿದ್ದಾಳೆ. ತೀವ್ರ ರಕ್ತಸ್ರಾವವಾದ ಪರಿಣಾಮ ಪೂವಮ್ಮ ಕೊನೆಯುಸಿರೆಳೆದಿದ್ದಾರೆ. ನಂತರ ಸಾವಿನ ವಿಚಾರ ತಿಳಿದ ಬಿಂದು ಮನೆಯಲ್ಲಿ ಹರಿದಿದ್ದ ರಕ್ತವನ್ನು ಶುಚಿಮಾಡಿದ್ದಲ್ಲದೆ, ಹಾಸಿಗೆ ಮೇಲಿದ್ದ ಬೆಡ್‌ಶೀಟ್ ಸೇರಿದಂತೆ ಕೆಲ ಬಟ್ಟೆಯನ್ನು ಬಟ್ಟೆ ಒಗೆಯಲು ಶೇಖರಿಸಿಡುವ ಬಾಸ್ಕೆಟ್‌ಗೆ ಹಾಕಿ ನೆಲಕ್ಕೆ ಹಾಸಿದ್ದ ಮ್ಯಾಟ್‌ನ್ನು ಬದಲಾಯಿಸಿ ಆಕೆ ಧರಿಸಿದ್ದ ಬಟ್ಟೆಯನ್ನೂ ಬದಲಾಯಿಸಿಕೊಂಡು ಪ್ರಕರಣವನ್ನು ಮರೆಮಾಚುವ ಯತ್ನಕ್ಕೆ ಮುಂದಾಗಿದ್ದಳು ಎಂದು ಪತಿ ಪ್ರಸನ್ನ ದೂರಿನಲ್ಲಿ ಉಲ್ಲೇಖಿಸಿ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ಪೊಲೀಸರು ವಿಚಾರಣೆ ನಡೆಸಿದ ಸಂದರ್ಭ ತಪ್ಪೊಪ್ಪಿಕೊಂಡಿರುವ ಬಿಂದು ವಿರುದ್ಧ ಐಪಿಸಿ ೧೮೬೦, ಸೆಕ್ಷನ್ ೩೦೪, ೨೦೧ ಅಡಿ ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇದೀಗ ಆರೋಪಿತೆ ಮಡಿಕೇರಿ ಬಂದಿಖಾನೆಯಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾಳೆ.
Kodagu
ನೆಲ್ಯಹುದಿಕೇರಿಯಲ್ಲಿ ಸ್ಮಶಾನಕ್ಕಾಗಿ ಒತ್ತಾಯಿಸಿ ಅಣಕು ಶವಯಾತ್ರೆ ಪ್ರತಿಭಟನೆ

ಸಿದ್ದಾಪುರ : ನೆಲ್ಯಹುದಿಕೇರಿ ಗ್ರಾಮ ವ್ಯಾಪ್ತಿಯಲ್ಲಿ ಮೃತ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಸ್ಮಶಾನವೇ ಇಲ್ಲವಾಗಿದ್ದು, ಈ ಸಮಸ್ಯೆಯ ಪರಿಹಾರಕ್ಕೆ ಆಡಳಿತ ವ್ಯವಸ್ಥೆ ಮತ್ತು ಜನಪ್ರತಿನಿಧಿಗಳು ಆಸಕ್ತಿ ತೋರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸ್ಮಶಾನ ಜಾಗ ಒದಗಿಸುವಂತೆ ಆಗ್ರಹಿಸಿ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ಮುಂಭಾಗ ಅಣಕು ಶವಯಾತ್ರೆ ಪ್ರತಿಭಟನೆ ಸೋಮವಾರ ನಡೆಸಿದರು .
ಸ್ಮಶಾನ ಹೋರಾಟ ಸಮಿತಿ ಸಂಚಾಲಕ ಪಿ.ಆರ್. ಭರತ್ ಮಾತನಾಡಿ, ನೆಲ್ಯಹುದಿಕೇರಿಯಲ್ಲಿ ಬಡವರು ಮತ್ತು ಕೂಲಿಕಾರ್ಮಿಕರೇ ಹೆಚ್ಚಾಗಿ ವಾಸವಾಗಿದ್ದಾರೆ. ಆದರೆ ಇವರುಗಳಿಗೆ ಬಹಳಷ್ಟು ವರ್ಷಗಳಿಂದ ವ್ಯವಸ್ಥಿತವಾದ ಸ್ಮಶಾನ ಜಾಗವಿಲ್ಲದೆ ಪರದಾಡುವಂತಾಗಿದೆ.
ಸ್ಮಶಾನ ಹೋರಾಟ ಸಮಿತಿಯ ಹೋರಾಟಗಳ ಹಿನ್ನೆಲೆಯಲ್ಲಿ ಕೆಲ ತಿಂಗಳ ಹಿಂದೆ ತಹಶೀಲ್ದಾರರು ಸಭೆ ನಡೆಸಿ ಮೂರು ತಿಂಗಳ ಅವಧಿಯಲ್ಲಿ ಸ್ಮಶಾನ ಜಾಗ ಒದಗಿಸುವುದಾಗಿ ಭರವಸೆ ನೀಡಿದ್ದರು. ಇದೀಗ ಏಳು ತಿಂಗಳು ಕಳೆದಿದ್ದರೂ ಸ್ಮಶಾನ ಜಾಗ ದೊರಕಿಲ್ಲ. ಹೀಗಿದ್ದೂ ಈ ಅವಧಿಯಲ್ಲಿ ತಹಶೀಲ್ದಾರರು ಬೆಟ್ಟದಕಾಡು ಮಾರ್ಗದ ಬಳಿಯ ಸರ್ವೇ ನಂ.೧೭೭ ರಲ್ಲಿ ೧.೦೨ ಎಕರೆ ಜಾಗವನ್ನು ಸ್ಮಶಾನಕ್ಕೆಂದು ಗುರುತಿಸಿದ್ದಾರೆ. ಆದರೆ, ಇದನ್ನು ಸ್ಮಶಾನಕ್ಕೆ ನಿಗದಿಗೊಳಿಸಿ ಆರ್‌ಟಿಸಿ ಮಾಡುವಲ್ಲಿ ನೆಲ್ಯಹುದಿಕೇರಿ ವ್ಯಾಪ್ತಿಯ ಭೂ ಮಾಫಿಯಾಗಳು, ರಿಯಲ್ ಎಸ್ಟೇಟ್ ದಂಧೆಗಳು ಅಡ್ಡಗಾಲು ಹಾಕುತ್ತಿವೆ ಎಂದು ಆರೋಪಿಸಿದರು.
ನೆಲ್ಯಹುದಿಕೇರಿ ಸ.ನಂ.183 ರಲ್ಲಿ 1.8 ಎಕರೆ ಜಾಗ ಸ್ಮಶಾನಕ್ಕೆಂದು ಮೀಸಲಾಗಿ ಆರ್‌ಟಿಸಿಯಾಗಿದ್ದರೂ ಕೂಡ ಅದು ಒತ್ತುವರಿಯಾಗಿ ಕಾಫಿ ತೋಟವಾಗಿ ಪರಿವರ್ತನೆಯಾಗಿದ್ದು, ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಮುಂದಿನ ದಿನಗಳಲ್ಲಿ ಗ್ರಾಮ ವ್ಯಾಪ್ತಿಯಲ್ಲಿ ಸಾವು ಸಂಭವಿಸಿದಾಗ, ಅಂತ್ಯಸಂಸ್ಕಾರವನ್ನು ಒತ್ತುವರಿ ಜಾಗದಲ್ಲೇ ನಡೆಸಲಾಗುವುದು.
ಈ ಸಂದರ್ಭ ಉಂಟಾಗಬಹುದಾದ ಸಂಘರ್ಷಕ್ಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೇ ಕಾರಣರಾಗುತ್ತಾರೆ ಎಂದ ಭರತ್, ನೆಲ್ಲಿಹುದಿಕೇರಿಯಲ್ಲಿ ಸ್ಮಶಾನ ಜಾಗಕ್ಕಾಗಿ ಕಾನೂನಾತ್ಮಕ ಹೋರಾಟಕ್ಕೂ ಸ್ಮಶಾನ ಹೋರಾಟ ಸಮಿತಿ ಸಿದ್ಧವಿದೆ ಎಂದು ಎಚ್ಚರಿಸಿದರು.
ಇದೇ ಸಂದರ್ಭದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಅಧಿಕಾರಿಗಳಿಗೆ ಮನವಿ ಪತ್ರ ನೀಡಿದರು . ಮಳೆಯ ನಡುವೆಯೂ ಪ್ರತಿಭಟನೆ ನಡೆಸಿ ಸ್ಮಶಾನ ಜಾಗಕ್ಕಾಗಿ ಒತ್ತಾಯಿಸಿದರು .
ಈ ಸಂದರ್ಭದ ಪ್ರಮುಖರಾದ ಟಿ.ಟಿ. ಉದಯಕುಮಾರ್, ಎನ್. ನಾರಾಯಣ, ಕೆ.ಜಿ. ರಮೇಶ್, ಸುರೇಶ್, ಪ್ರಭಾಕರ, ಚಂದ್ರ , ಮುಕುಂದ , ರವಿ, ಅನಿಲ್, ರಾಜು, ಶಿವರಾಮ, ದಾಸ್, ರಮೇಶ್, ಬೋಜಿ, ಬೇಬಿ, ಸುಶೀಲಾ, ಕುಟ್ಟನ್ , ಅಭಿ ಸೇರಿದಂತೆ ಸ್ಥಳೀಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
Kodagu
ಕಾಂಗ್ರೆಸ್‌ಗೆ ರಾಜೀನಾಮೆ ನೀಡುವ ನಿರ್ಧಾರ ಮಾಡಿದ ಪ್ರತೀಕ್ ಪೊನ್ನಣ್ಣ !

ಮಡಿಕೇರಿ : ಕೆಲ ವರ್ಷದ ಹಿಂದಷ್ಟೇ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಸಾಮಾಜಿಕ ಕಾರ್ಯಕರ್ತ ಪ್ರತೀಕ್ ಪೊನ್ನಣ್ಣ ಕಾಂಗ್ರೆಸ್ ತ್ಯಜಿಸುವ ನಿರ್ಧಾರಕ್ಕೆ ಬಂದಿದ್ದಾರೆ.
ಈ ಕುರಿತು ತಮ್ಮ ಫೇಸ್‌ಬುಕ್‌ನಲ್ಲಿ ಫೋಸ್ಟ್ ಹಾಕಿರುವ ಅವರು, ರಾಜೀನಾಮೆ ನಿರ್ಧಾರಕ್ಕೆ ಕಾರಣವನ್ನು ಉಲ್ಲೇಖಿಸಿದ್ದಾರೆ.
ಪೋಸ್ಟ್ ಏನು?
ನೆನ್ನೆಯ ದಿನ ನಡೆದ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಕೃತಜ್ಞತೆಗಳು ಅರ್ಪಿಸಿದ್ದೆ, ಅದೇ ರೀತಿ ಮಾಜಿ ಶಾಸಕ ಕೆ.ಜಿ.ಬೋಪಯ್ಯ ಅವರನ್ನು ಕೂಡ ಸ್ಮರಿಸಿದ್ದೆ.
ಇದನ್ನು ಕೆಲವು “ಜನರು” ಪ್ರತೀಕ್ ಕೆಜಿ ಬೋಪಯ್ಯ ಅವರ ಪರ ಎಂದು ವಾದ ಮಾಡಿಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ, ಅದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ, ಅವರ ಶ್ರಮ ಕೂಡ ಇದೆ, ಅದಕ್ಕೆ ಅವರಿಗೆ ಕೃತಜ್ಞತೆಗಳು ಅರ್ಪಿಸುವುದು ಕೊಡಗು ಜಿಲ್ಲೆಯ ಸಂಸ್ಕೃತಿ ಮತ್ತು ಮಾನವೀಯತೆ ಕೂಡ.
ಕಾಂಗ್ರೆಸ್ ಪಕ್ಷದ ಯಾವ ನಾಯಕರು ಕೂಡ ಇದನ್ನು ಅಧಿಕೃತವಾಗಿ ಪ್ರಶ್ನೆ ಮಾಡಿಲ್ಲಾ, ಆದರೆ ಕೊಡವಾಮೆ ಇವರ ಸ್ವತ್ತು ಇಡೀ 2.5 ಲಕ್ಷ ಜನರು ಇವರು ಹೇಳಿದ ಕೊಡವಾಮೆ ಪಾಲಿಸಬೇಕು ಇಲ್ಲವಾದರೆ ಅವರು ಕೊಡವರಲ್ಲಾ ಎಂದು ಬಿಟ್ಟಿ ಪ್ರಮಾಣ ಪತ್ರ ಕೊಡುವ ಮೂಲಭೂತವಾದಿ ಕೆಲವು ಜನರ ಪಡೆ ಪ್ರಶ್ನೆ ಮಾಡುತ್ತಿರುವುದು ಹಾಸ್ಯಾಸ್ಪದ.
ಇಂತಹ ಮನಸ್ಥಿತಿಯ ಜನರು ನಮ್ಮ ಜನಾಂಗಕ್ಕೂ ಮಾರಕ, ಇವರಿಗೆ ಪ್ರತೀಕ್ ಪೊನ್ನಣ್ಣ ಹೆದರುವ ಗಂಡಸಲ್ಲಾ, ನಾನು ಹಾಲಿ ಮತ್ತು ಮಾಜಿ ಶಾಸಕರಿಂದ ವೈಯಕ್ತಿಕವಾಗಿ ಯಾವುದೇ ಲಾಭ ಕೂಡ ಪಡೆದುಕೊಂಡಿಲ್ಲಾ, ಯಾರಿಗೂ ಮುಲಾಜಿಲ್ಲದೆ ನನ್ನ ಕೈಲಾದ ಕೆಲಸ ಸೇವೆ ಮಾಡುತ್ತಿದ್ದೇನೆ.
ಕಾಂಗ್ರೆಸ್ ಪಕ್ಷ ನನಗೆ ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ, ಶಾಸಕರು ಕೂಡ ಯಾವುದೇ ತೊಂದರೆ ಅಥವಾ ನನ್ನ ಸಾಂವಿಧಾನಿಕ ಹಕ್ಕುಗಳಿಗೆ ತೊಂದರೆ ಉಂಟು ಮಾಡಿಲ್ಲಾ, ಅವರ ಮೇಲೆ ಮತ್ತು ಪಕ್ಷದ ಮೇಲೆ ಗೌರವ ಇದೆ.
ಕೆಲವು ವಿಚಾರಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಉಸಿರುಗಟ್ಟಿಸುವ ವಾತಾವರಣದಲ್ಲಿ ಇರಲು ಆಗುವುದಿಲ್ಲ ಮತ್ತು ಇರಬಾರದು ಕೂಡ, ಇದು ನಮ್ಮ ವೈಯಕ್ತಿಕ ಹಕ್ಕು ಮತ್ತು ಸಾಂವಿಧಾನಿಕ ಹಕ್ಕು, ಈ ನಿಟ್ಟಿನಲ್ಲಿ ಶಾಸಕರೊಂದಿಗೆ ಚರ್ಚಿಸಿ, ಕಾಂಗ್ರೆಸ್ ಪಕ್ಷಕ್ಕೆ ಮತ್ತು ಶಾಸಕರಿಗೆ ನನ್ನ ಬೆಂಬಲವನ್ನು ರಾಜಿನಾಮೆ ಮೂಲಕ ತಿಳಿಸಲು ಮುಂದಾಗುತ್ತಿದ್ದೇನೆ.
ನನ್ನೊಂದಿಗೆ ನನ್ನ ಗೆಳೆಯರು ಮತ್ತು ಸಹೃದಯಿಗಳು ಇದ್ದಾರೆ ಅವರಿಗೂ ವಿಷಯ ಮುಟ್ಟಿಸಿ, ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಪಕ್ಷದಿಂದ ಮತ್ತು ಶಾಸಕರ ಬೆಂಬಲದಿಂದ ಹೊರ ಬರಲಿದ್ದೇನೆ.
ಸಮಾಜದ ಮಾಲೀಕರು ಮತ್ತು ದಾರಿದೀಪ ನಾವು ಅಂದುಕೊಂಡ ಕೆಲವರು ನನ್ನ ಬಗ್ಗೆ ಮುಂದಿನ ದಿನಗಳಲ್ಲಿ ಪಿತ್ತೂರಿ ಮಾಡಿ ಅಪಪ್ರಚಾರ ಮಾಡಲಿದ್ದಾರೆ ಅದನ್ನು ಹೆದರಿಸುವ ತಾಕತ್ತು ನನಗೂ ಇದೆ, ನನ್ನನ್ನು ರಾಜಕೀಯವಾಗಿ ಸಾಮಾಜಿಕವಾಗಿ ಪ್ರಶ್ನೆ ಮಾಡಿ, ಅದು ಬಿಟ್ಟು ವೈಯಕ್ತಿಕವಾಗಿ ಬಂದರೆ ಖಂಡಿತಾ ಸಾಂವಿಧಾನಿಕವಾಗಿ ಮತ್ತು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹೊರ ಹಾಕಬೇಕಾಗುತ್ತದೆ.
ಕಾನೂನು ಅಡಿಯಲ್ಲಿ ಸುಳ್ಳು ಮೊಕದ್ದಮೆ ಹಾಕಿ ನನ್ನನ್ನು ಮೌನವಾಗಿಸಬಹುದು ಎಂದು ಅಂದುಕೊಂಡರೆ, ಅದನ್ನು ಸಂವಿಧಾನ ಇಟ್ಟುಕೊಂಡು ಕಾನೂನು ಅಡಿಯಲ್ಲಿಲ್ಲೇ ಏನು ಮಾಡಬೇಕು ಅಂತ ಗೊತ್ತಿದೆ.
ತಾಯಿ ಕಾವೇರಮ್ಮೆ, ಈಶ್ವರ ಇಗ್ಗುತ್ತಪ್ಪ, ಗುರುವಿನ ಸಾಕ್ಷಿಯಾಗಿ ನಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ, ಶಾಸಕರೊಂದಿಗೂ ಮಾತನಾಡುತ್ತೇನೆ.
Kodagu
ದೇವಸ್ಥಾನ ಪುನರ್ ನಿರ್ಮಾಣಕ್ಕೆ ಶಾಸಕ ಎ.ಎಸ್. ಪೊನ್ನಣ್ಣ ಧನ ಸಹಾಯ

ಪೊನ್ನಂಪೇಟೆ : ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 1ನೇ ವಿಭಾಗದ ಎಂ.ಜಿ. ನಗರದಲ್ಲಿರುವ ಕನ್ನಂಬಾಡಿಯಮ್ಮನವರ ದೇವಸ್ಥಾನದ ಪುನರ್ ನಿರ್ಮಾಣಕ್ಕಾಗಿ ಕ್ಷೇತ್ರದ ಶಾಸಕರು ಮತ್ತು ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿರುವ ಎ. ಎಸ್. ಪೊನ್ನಣ್ಣ ಅವರು ವೈಯಕ್ತಿಕವಾಗಿ ಧನಸಹಾಯ ನೀಡಿದ್ದಾರೆ.
ಶಾಸಕರು ನೀಡಿದ ರೂ. 1.5 ಲಕ್ಷ ಮೊತ್ತದ ಧನಸಹಾಯವನ್ನು ಸೋಮವಾರದಂದು ಕನ್ನಂಬಾಡಿಯಮ್ಮನವರ ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಮೀದೇರೀರ ನವೀನ್ ಆಡಳಿತ ಮಂಡಳಿ ಅಧ್ಯಕ್ಷರಾದ ಎಂ.ಪಿ. ಪರಮೇಶ್ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನವೀನ್, ಗ್ರಾಮಸ್ಥರ ಕೋರಿಕೆಯಂತೆ ಸ್ಪಂದಿಸಿರುವ ಶಾಸಕರು ತಮ್ಮ ಕೈಯಿಂದ ಈ ಧನ ಸಹಾಯ ನೀಡಿದ್ದಾರೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಕಿವಿಮಾತು ಹೇಳಿದರು.
ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾದ ಆಲೀರ ಎಂ. ರಶೀದ್, ಸದಸ್ಯರಾದ ಮೂಕಳೇರ ಸುಮಿತ, ಕೋಳೆರ ಭಾರತಿ, ಜುನೈದ್, ಕನ್ನಂಬಾಡಿಯಮ್ಮ ದೇವಸ್ಥಾನದ ಆಡಳಿತ ಮಂಡಳಿ ಪದಾಧಿಕಾರಿಗಳಾದ ಶಶಿ, ಶೇಖರ, ದರ್ಶನ್, ಸ್ವಾಮಿ ಮೊದಲಾದವರು ಹಾಜರಿದ್ದರು.
-
Uncategorized24 hours ago
ಸೆಕ್ಯುರಿಟಿ ಸಿಬ್ಬಂದಿಗಳಿಂದ ಯುವಕನ ಮೇಲೆ ಹಲ್ಲೆ ಪ್ರಕರಣ: ಪೊಲೀಸ್ ಕಾನ್ಸ್ಟೇಬಲ್ ಸೇರಿ ಮೂವರ ವಿರುದ್ದ ಎಫ್ಐಆರ್ ದಾಖಲು
-
Hassan11 hours ago
ಹಾಸನದ ಖಾಸಗಿ ಶಾಲಾ-ಕಾಲೇಜಿಗೆ ಬಾಂಬ್ ಹಾಕುವ ಬೆದರಿಕೆ
-
Kodagu10 hours ago
ಪಂಚಾಯತಿಯಲ್ಲಿ ಶೇ.25 ನಿಧಿಯಲ್ಲಿ ಹೊಲಿಗೆ ಯಂತ್ರ ವಿತರಣೆ.
-
State24 hours ago
SSC ಯಿಂದ 14 ಸಾವಿರಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ : ಅರ್ಜಿ ಸಲ್ಲಿಸಲು ಯಾರು ಅರ್ಹರು?
-
Mandya5 hours ago
ಕೆ.ಆರ್.ಪೇಟೆ ದೇವಿರಮ್ಮಣ್ಣಿ ಕೆರೆಯಲ್ಲಿ ಬಲೆಗೆ ಬಿದ್ದ ಬಂಗಾರ ಬಣ್ಣದ ಗೌರಿ ಮೀನು
-
Chikmagalur13 hours ago
ಕೊಪ್ಪ ತಾಲ್ಲೂಕಿನಲ್ಲಿ ಬೃಹತ್ ಗಾತ್ರದ ಮರ ಉರುಳಿ ರಸ್ತೆ ಬಂದ್
-
Kodagu12 hours ago
ಕೊಡವರ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಅಪಾರ
-
Kodagu12 hours ago
ರಾಜ್ಯ ಸರಕಾರಕ್ಕೆ ಅಭಿನಂದನೆ ಸಲ್ಲಿಸಿದ ಕೊಡವ ಸಮಾಜ