Kodagu
ಮಡಿಕೇರಿಯಲ್ಲಿ ಡಿ ಗ್ರೂಪ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಮಡಿಕೇರಿ : ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆಗೆ ಸೇರಿರುವ ಮಡಿಕೇರಿ ನಗರದ ಶ್ರೀ ಓಂಕಾರೇಶ್ವರ ದೇವಾಲಯಕ್ಕೆ ಒಳಪಡುವ ಶ್ರೀ ಆಂಜನೇಯ ಮತ್ತು ಕೋಟೆ ಗಣಪತಿ ದೇವಾಲಯದ ಕಾರ್ಯಗಳಿಗೆ ತಾತ್ಕಾಲಿಕ ನೆಲೆಯಲ್ಲಿ ಕರ್ತವ್ಯ ನಿರ್ವಹಿಸಲು 03 ‘ಡಿ’ ಗ್ರೂಪ್ ಹುದ್ದೆಗಳು ಖಾಲಿ ಇದ್ದು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವವರ ವಯೋಮಿತಿ 18 ವರ್ಷ ತುಂಬಿರಬೇಕು. 35 ವರ್ಷ ಮೀರಿರಬಾರದು(ವಯಸ್ಸಿನ ಬಗ್ಗೆ ಶಾಲಾ ದಾಖಲೆ ನೀಡಬೇಕು). ದೇವಾಲಯದ ಹೊರಾಂಗಣದ ನೌಕರರು ‘ಡಿ’ ಗ್ರೂಪ್ ಹುದ್ದೆ-3 (ಸ್ವಚ್ಛತಗಾರ ಮತ್ತು ಕಾವಲುಗಾರರು) ವೇತನ ರೂ.9,600 ಮತ್ತು ಇತರೆ, ದೇವಾಲಯದ ಕರ್ತವ್ಯದ ಅವಧಿ ಬೆಳಗ್ಗೆ 7.30 ರಿಂದ ಮಧ್ಯಾಹ್ನ 1 ಗಂಟೆ, ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆವರೆಗೆ.
ದೇವಾಲಯದ ಕೆಲಸ ಕಾರ್ಯಗಳು ಮುಜರಾಯಿ ಇಲಾಖೆ ಸೂಚಿಸಿದ ನಿಯಮಗಳು ಹಾಗೂ ಶಿಸ್ತು ಪಾಲನೆಗೆ ಒಳಪಟ್ಟಿರುತ್ತದೆ. ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯಿಂದ ಪಡೆದ ದೇಹ ದಾಢ್ರ್ಯ ಪ್ರಮಾಣ ಪತ್ರವನ್ನು ಹಾಜರುಪಡಿಸಬೇಕು. ಯಾವುದೇ ಕ್ರಿಮಿನಲ್ ಮೊಕದ್ದಮೆ ಹಾಗೂ ನ್ಯಾಯಾಲಯದ ಆದೇಶದಂತೆ ಕಾರಾಗೃಹದ ಶಿಕ್ಷೆಗೆ ಒಳಪಟ್ಟಿರಬಾರದು. ಅರ್ಜಿ ಸಲ್ಲಿಸಲು ಫೆಬ್ರವರಿ, 26 ಕೊನೆಯ ದಿನವಾಗಿದೆ.
ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ದೇವಾಲಯದ ಕಚೇರಿಯ ಸಮಯ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆ ಒಳಗೆ ಭೇಟಿ ನೀಡಬಹುದು ಎಂದು ಶ್ರೀ ಓಂಕಾರೇಶ್ವರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಅವರು ತಿಳಿಸಿದ್ದಾರೆ.

Kodagu
ಸಂಭ್ರಮ, ಸಡಗರದಿಂದ ನಡೆದ ಇತಿಹಾಸ ಪ್ರಸಿದ್ಧದ ‘ಕೈಮುಡಿಕೆ ಪುತ್ತರಿ ಕೋಲ್ ಮಂದ್
ಪೊನ್ನಂಪೇಟೆ : ಬೊಟ್ಟಿಯತ್ ನಾಡ್, ಕುತ್ತ್ ನಾಡ್ ಹಾಗೂ ಬೇರಳಿ ನಾಡ್ ಈ ಮೂರು ನಾಡುಗಳು ಒಂದೆಡೆ ಸೇರಿ ನಡೆಸುವ ಇತಿಹಾಸ ಪ್ರಸಿದ್ಧದ ‘ಕೈಮುಡಿಕೆ ಪುತ್ತರಿ ಕೋಲ್ ಮಂದ್’ ಕುಂದಾ ಸಮೀಪದ ಕೈಮುಡಿಕೆ ಕೋಲ್ ಮಂದ್’ನಲ್ಲಿ ತಕ್ಕ ಮುಖ್ಯಸ್ಥರಾದ ಅಡ್ಡಂಡ ಪ್ರಕಾಶ್ ಕುಶಾಲಪ್ಪ ಅವರ ಮುಂದಾಳತ್ವದಲ್ಲಿ ಸಂಭ್ರಮದಿಂದ ನಡೆಯಿತು.
ಮೂರು ನಾಡಿನ ತಕ್ಕ ಮುಖ್ಯಸ್ಥರು ಮೂರು ಕಡೆಯಿಂದ ಪಟ್ಟು ಹಿಡಿದು ಓಡಿ ಬಂದು ಮಂದ್ ಮಧ್ಯ ಭಾಗದಲ್ಲಿರುವ ಆಲದ ಮರಕ್ಕೆ ಕೋಲು ಬಾರಿಸುವ ಮೂಲಕ ಮಂದ್’ಗೆ ಚಾಲನೆ ನೀಡಲಾಯಿತು. ನಂತರ ಮೂರು ನಾಡಿನವರು ಒಟ್ಟಾಗಿ ಸೇರಿ ಪುತ್ತರಿ ಕೋಲು ಹೊಡೆಯುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜು ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಸಾಹಿತಿ ಬಾಚಿರಣಿಯಂಡ ಅಪ್ಪಣ್ಣ ಹಾಗೂ ಅಖಿಲ ಕೊಡವ ಸಮಾಜ ಪೊಮ್ಮಕಡ ಪರಿಷತ್ ಅಧ್ಯಕ್ಷೆ ಬಾಚಿರಣಿಯಂಡ ರಾಣು ಅಪ್ಪಣ್ಣ ದಂಪತಿಗಳನ್ನು ಕೈಮುಡಿಕೆ ಮಂದ್ ಪರವಾಗಿ ಸನ್ಮಾನಿಸಿ, ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಬಾಚಿರಣಿಯಂಡ ಅಪ್ಪಣ್ಣ ಅವರು, ಈ ಸಡಗರ ಸಂಭ್ರಮ ಹಬ್ಬದ ವಾತಾವರಣ ನೋಡಿದರೇ ತಮ್ಮ ಬಾಲ್ಯದ ದಿನಗಳು ನೆನಪಾಗುವುದಲ್ಲದೆ ಹಲವಾರು ವರ್ಷಗಳ ಕಾಲ ಮಂದ್ ಮಾನಿಯಲ್ಲಿ ಆಡಿದ ಸಂಭ್ರಮ ನೆನಪಾಗುತ್ತದೆ. ಹಿಂದಿನ ಕಾಲದಲ್ಲಿ ಹಲವಾರು ಮಂದ್ ಇದ್ದರೂ ಬೊಟ್ಟಿಯತ್ ನಾಡಿನ ಕೈ ಮುಡಿಕೆ ಕೋಲ್ ಮಂದ್ ಬಹಳ ಪ್ರಸಿದ್ಧಿಯನ್ನು ಪಡೆದಿತ್ತು. 54 ವರ್ಷಗಳ ಹಿಂದೆ ಈ ಮಂದ್ ಗೆ ಭೇಟಿ ನೀಡಿದ್ದೆ. ಅಲ್ಲದೆ ಕಳೆದ 28 ವರ್ಷಗಳ ಹಿಂದೆ ಈ ಜಾಗಕ್ಕೆ ಭೇಟಿ ನೀಡಿ ಇದರ ಇತಿಹಾಸದ ಬಗ್ಗೆ ಅಧ್ಯಯನ ನಡೆಸಿದ್ದೆವು ಎಂದು ಆ ದಿನಗಳನ್ನು ಮೆಲುಕು ಹಾಕಿದರು. ಕೊಡವ ಸಂಸ್ಕೃತಿ ಆಚಾರ ವಿಚಾರವನ್ನು ಬೆಳೆಸುವಲ್ಲಿ ಈ ಮಂದ್ ಶ್ರಮಿಸುತ್ತಿದೆ. ಕೊಡಗಿನಲ್ಲಿರುವ ಹಲವಾರು ಮಂದ್ ಅಭಿವೃದ್ದಿ ಕಾಣದೇ ಮುಚ್ಚಿಹೋಗಿವೆ. ಆದರೆ ಹಿಂದಿನ ಕಾಲದಂತೆಯೇ ಸಂಭ್ರಮ ಸಡಗರದಿಂದ ಕಾರ್ಯನಿರ್ವಹಿಸುತ್ತಿರುವ ಕೈಮುಡಿಕೆ ಮಂದ್ ಗಮನಿಸಿದರೇ ಕೊಡವರ ಸಂಸ್ಕೃತಿ, ಆಚಾರ ವಿಚಾರ ಉತ್ತುಂಗಕ್ಕೆ ತಲುಪುವುದರಲ್ಲಿ ಸಂಶಯವಿಲ್ಲವೆಂದು ದೃಢವಾಗಿದೆ ಎಂದು ನುಡಿದರು.

ಮತ್ತೋರ್ವ ಮುಖ್ಯ ಅತಿಥಿ ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ ಅವರು ಮಾತನಾಡಿ, ನಾನು ಹುಟ್ಟಿಬೆಳೆದ ನಾಡಿನಲ್ಲಿ ನನಗೆ ದೊರಕಿರುವ ಸನ್ಮಾನ ನಿಜಕ್ಕೂ ಖುಷಿಕೊಟ್ಟಿದೆ. ಕೊಡಗಿನ ಆಚಾರ, ವಿಚಾರ, ಪದ್ಧತಿ, ಪರಂಪರೆ ಉಳಿಸಿ ಬೆಳೆಸಿ ಕಿರಿಯರಿಗೆ ತಿಳುವಳಿಕೆ ನೀಡಿರುವುದು ನಮ್ಮ ಹಿರಿಯರು. ಹಲವಾರು ಮಂದ್ ಮಾನಿಗಳು ಮುಚ್ಚಿ ಹೋಗಿರುವ ಸಂದರ್ಭದಲ್ಲಿಯೂ ಈ ಕೈಮುಡಿಕೆ ಮಂದ್ ಕಂಬದಂತೆ ನಿಂತು ಕೊಡವರ ಆಚಾರ ವಿಚಾರವನ್ನು ಬೆಳೆಸುತ್ತಾ ಬಂದಿದೆ. ಇಷ್ಟು ವರ್ಷದವರೆಗೂ ಆಚಾರ ವಿಚಾರವನ್ನು ಪ್ರೋತ್ಸಾಹಿಸಿ ಬೆಳೆಸಿ ಕೈಮುಡಿಕೆ ಮಂದ್ ಅನ್ನು ಹಾಗೆಯೇ ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಚಾರ. ಈ ನಾಡಿನ ಜನರ ಸೇವೆಯನ್ನು ಮೆಚ್ಚುವಂಥದ್ದು ಹಾಗೆಯೇ ನನಗೂ ಈ ಸಂದರ್ಭದಲ್ಲಿ ನಿಮ್ಮೊಡನೆ ಸಂತೋಷದಿಂದ ಕಳೆಯಲು ಅವಕಾಶ ಮಾಡಿಕೊಟ್ಟಿರುವುದು ಸಂತೋಷ ತಂದಿದೆ ಸೂರ್ಯ ಚಂದ್ರ, ಕಲ್ಲು ಕಾವೇರಿ ಹುಲ್ಲು ಭೂಮಿ ಇರುವವರೆಗೂ ಈ ಕೈಮುಡಿಕೆ ಮಂದ್ ನ ಕೀರ್ತಿ ಜಗತ್ತಿನೆಲ್ಲೆಡೆ ಬೆಳಗುವಂತಾಗಲಿ ಎಂದು ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಬೊಟ್ಟಿಯತ್ ಮೂಂದ್ ನಾಡ್ ತಕ್ಕ ಮುಖ್ಯಸ್ಥರಾದ ಅಡ್ಡಂಡ ಪ್ರಕಾಶ್ ಕುಶಾಲಪ್ಪ ಮಾತನಾಡಿ ಹಿಂದಿನ ಕಾಲದಲ್ಲಿ ಮಂದ್ ಹಾಗೂ ಮುಂದ್ ಎಂಬ ಎರಡು ಪ್ರಾಮುಖ್ಯ ಸ್ಥಳಗಳಿದ್ದವು. ಮಂದ್ ನಲ್ಲಿ ಊರು ಕೇರಿಯ ವ್ಯಾಜ್ಯಗಳು ಬಗ್ಗೆ ಹರಿಯದಿದ್ದರೆ ಮುಂದ್ ನಲ್ಲಿ ಕುಟುಂಬದ ವ್ಯಾಜ್ಯಗಳು ಬಗ್ಗೆ ಹರಿಯುತ್ತಿದ್ದವು. ಈ ಮಂದ್ ಮೂರು ನಾಡಿಗೆ ಸೇರಿರುವ ಜಾಗವಾಗಿದ್ದರು ಬೊಟ್ಟಿಯತ್ ನಾಡ್ ನಲ್ಲಿದ್ದು ವೀರ ಪಡೆಯಾಳಿ ಜನಿಸಿರುವ ಈ ಮಣ್ಣಿನಲ್ಲಿ ಜನರಲ್ ತಿಮ್ಮಯ್ಯ ಹಾಗೂ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು, ಕೋಲಾಟ ಆಡಿರುವುದು ಹೆಮ್ಮೆಯ ವಿಚಾರ. ಕೊಡವರ ಆಚಾರ ವಿಚಾರ ಉಡುಗೆ ತೊಡುಗೆಗೆ ಧಕ್ಕೆ ಉಂಟಾದ ಸಂದರ್ಭದಲ್ಲಿ ನಡುಪು ಕಾರ್ಯಕ್ರಮ ಏರ್ಪಡಿಸುವ ಸಂದರ್ಭದಲ್ಲಿ ಮೊದಲಿಗೆ ಇದೇ ಮಂದ್‌ನಲ್ಲಿ ಕೊಡವರು ಹಾಗೂ ಮೂಲ ನಿವಾಸಿಗಳು ಸಭೆ ಸೇರಿ ಸಾವಿರಾರು ಸಂಖ್ಯೆಯಲ್ಲಿ ಕೊಡಗಿನ ಮೂಲ ನಿವಾಸಿಗಳು ನಡುಪು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಂದ್ ಮಾನಿ ಯಲ್ಲಿ ಸೇರುವ ಕೊಡವ ಬಾಂಧವರು ಕೊಡವರ ಸಾಂಪ್ರದಾಯಿಕ ಉಡುಪಿನಲ್ಲಿ ಭಾಗವಹಿಸಬೇಕು. ಇಂದಿನ ಕಾರ್ಯಕ್ರಮದಲ್ಲಿ ಯುವಕರು ಕೊಡವರ ಸಾಂಪ್ರದಾಯಿಕ ಉಡುಪಿನಲ್ಲಿ ಬಾರದೇ ಇರುವುದು ಬೇಸರದ ಸಂಗತಿಯಾಗಿದೆ. ಕೊಡವರ ಉಡುಪು ಕೇವಲ ಮದುವೆ ಸಮಾರಂಭಗಳಿಗೆ ಸೀಮಿತವಲ್ಲ ಮಂದ್ ಎಂಬ ದೇವರ ಸ್ಥಾನಕ್ಕೆ ಕೊಡವರು ತಮ್ಮ ಸಾಂಪ್ರದಾಯಿಕ ಉಡುಪಿನಲ್ಲಿ ಬರದಿದ್ದ ಮೇಲೆ ಬೇರೆ ಯಾವ ಕಾರ್ಯಕ್ಕಾಗಿ ಕೊಡವರ ಉಡುಪು ಇದೆ ಎಂದು ಪ್ರಶ್ನಿಸಿದರಲ್ಲದೆ, ಮಂದ್ ಮಾನಿಗೆ ಬರುವಾಗ ಕೊಡವರ ಸಾಂಪ್ರದಾಯಿಕ ಉಡುಪು ಧರಿಸಿ ಬರಬೇಕೆಂದು ಮನವಿ ಮಾಡಿದರು.

ಪೊನ್ನಂಪೇಟೆ ಕೊಡವ ಪೊಮ್ಮಕಡ ಕೂಟ, ಕಾವೇರಿ ಕಾಲೇಜ್ ವಿದ್ಯಾರ್ಥಿಗಳು, ಅಪ್ಪಚ್ಚಕವಿ ವಿದ್ಯಾರ್ಥಿಗಳು, ಕುತ್ತ್ ನಾಡ್ ಪೊಮ್ಮಕ್ಕ, ಲಯನ್ಸ್ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಮೂರು ನಾಡಿನವರಿಂದ ಉಮ್ಮತಾಟ್, ಬೊಳಕಾಟ್, ಕತ್ತಿಯಾಟ್, ಪರೆಯಕಳಿ, ಬಾಳೋ ಪಾಟ್, ಗ್ರೂಪ್ ಡಾನ್ಸ್, ಕೊಡವ ಪಾಟ್ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಕಣ್ಮನ ಸೆಳೆಯಿತು.
ಈ ಸಂದರ್ಭ ಬೇರಳಿನಾಡ್ ತಕ್ಕ ಮಳುವಂಡ ಭುವೇಶ್ ದೇವಯ್ಯ, ಕುತ್ತ್ ನಾಡ್ ತಕ್ಕ ಪಂದಿಮಾಡ ರಮೇಶ್ ಅಚ್ಚಪ್ಪ, ಮೂಂದ್ ನಾಡ್ ಗೌರವ ಕಾರ್ಯದರ್ಶಿ ನಾಳಿಯಮ್ಮಂಡ ಉಮೇಶ್ ಕೇಚಮ್ಮಯ್ಯ, ಬೇರಳಿನಾಡ್ ಕಾರ್ಯದರ್ಶಿ ಅಪ್ಪಂಡೇರಂಡ ಮೋಹನ್, ಬೊಟ್ಟಿಯತ್ ನಾಡ್ ಸಹ ಕಾರ್ಯದರ್ಶಿ ತೀತಮಾಡ ಶಿವಮಣಿ ಕರುಂಬಯ್ಯ, ಕುತ್ತ್ ನಾಡ್ ಸಹ ಕಾರ್ಯದರ್ಶಿ ತೀತಮಾಡ ಗಣೇಶ್ (ಗಾಂಧಿ), ಹಳ್ಳಿಗಟ್ಟ್ ಊರು ತಕ್ಕ ಚಮ್ಮಟೀರ ಪ್ರವೀಣ್ ಉತ್ತಪ್ಪ, ಅಚ್ಚಿಯಂಡ ವೇಣು ಗೋಪಾಲ್, ಅರ್ವತೋಕ್ಲು ಊರು ತಕ್ಕ ಕಾಡ್ಯಮಾಡ ಮೋತಿ ಅಪ್ಪಚ್ಚು, ಕುಂದ ಊರು ತಕ್ಕ ಕೋಡಂದೆರ ಸುಬ್ಬಯ್ಯ, ಈಚೂರು ಊರು ತಕ್ಕ ತೀತಮಾಡ ಉಮೇಶ್, ಮುಗುಟಗೇರಿ ಊರು ತಕ್ಕ ಮನೆಯಪಂಡ ಬೆಳ್ಯಪ್ಪ, ಬೇರಳಿನಾಡಿನ ತಕ್ಕ ಅಪ್ಪಂಡೇರಂಡ ಅಶೋಕ್, ಕೊಂಗಂಡ ಡೆಟ್ರನ್, ಮೂಕಚಂಡ ಚುಮ್ಮಿ ದೇವಯ್ಯ, ಬೋಳಡಿಚಂಡ ಕಿರಣ್ ಸೇರಿದಂತೆ ಇತರ ತಕ್ಕಮುಖ್ಯಸ್ಥರು ಉಪಸ್ಥಿತರಿದ್ದರು.
Kodagu
ಜಿಲ್ಲಾಡಳಿತದಿಂದ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ
ಮಡಿಕೇರಿ : ಜಿಲ್ಲಾಡಳಿತ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯು ಭಾನುವಾರ ಜರುಗಿತು.
ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನದ ಆವರಣದಲ್ಲಿನ ಯುದ್ಧ ಸ್ಮಾರಕಕ್ಕೆ ಮೇಜರ್ ಜನರಲ್ ಕಾಳೆಂಗಡ ಸಿ. ಕಾರ್ಯಪ್ಪ (ನಿವೃತ್ತ), ಏರ್ ಮಾರ್ಷಲ್ ನಂದಾ ಕಾರ್ಯಪ್ಪ(ನಿ), ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್ ಕುಮಾರ್, ಗ್ರೂಪ್ ಕ್ಯಾಪ್ಟನ್ ಮನು ಭೀಮಯ್ಯ(ನಿ), ಏರ್ ಕಮಾಂಡರ್ ದೇವಯ್ಯ(ನಿ), ಲೆ.ಕರ್ನಲ್ ಕಾವೇರಪ್ಪ(ನಿ), ಕರ್ನಲ್ ನಾಚಪ್ಪ (ನಿ), ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಬಿ.ಆರ್.ಶೆಟ್ಟಿ, ಜಿಲ್ಲಾ ಖಜಾನಾಧಿಕಾರಿ ರಘುನಾಥ್, ನಿವೃತ್ತ ಸೈನಾಧಿಕಾರಿಗಳು, ಎನ್‍ಸಿಸಿ ವಿದ್ಯಾರ್ಥಿಗಳು ಇತರರು ಯುದ್ಧ ಸ್ಮಾರಕಕ್ಕೆ ಪುಷ್ಪ ಗುಚ್ಛವಿರಿಸಿ, ಗೌರವಪ ನಮನ ಸಲ್ಲಿಸಿದರು.

ಕರ್ತವ್ಯ ಪಾಲನೆ ಸಂದರ್ಭದಲ್ಲಿ ವೀರ ಮರಣವನ್ನಪ್ಪಿದ ಯೋಧರ ಸ್ಮರಣಾರ್ಥ ಎರಡು ನಿಮಿಷಗಳ ಕಾಲ ಮೌನಾಚರಿಸಲಾಯಿತು. ಪೊಲೀಸ್ ತಂಡದವರು ಮೂರು ಸುತ್ತು ಕುಶಾಲತೋಪು ಹಾರಿಸಿ ಗೌರವ ವಂದನೆ ಸಲ್ಲಿಸಿದರು. ಮೇ.ಜ. ಕೆ.ಸಿ.ಕಾರ್ಯಪ್ಪ(ನಿ) ಅವರು ಸಶಸ್ತ್ರ ಪಡೆಗಳ ಧ್ವಜ ಬಿಡುಗಡೆ ಮಾಡಿದರು.
ಪೊಲೀಸ್ ಇಲಾಖೆಯ ಎಆರ್‍ಎಸ್‍ಐ ತಂಡದ ಚೆನ್ನಕೇಶವ ಮತ್ತು ಪೊಲೀಸರು ಗೌರವ ವಂದನೆ ನಡೆಸಿಕೊಟ್ಟರು. ಹಾಗೆಯೇ ಪೊಲೀಸ್ ಬ್ಯಾಂಡ್ ತಂಡದವರು ಪೊಲೀಸ್ ವಾದ್ಯದೊಂದಿಗೆ ಗೌರವ ನಮನ ಸಲ್ಲಿಸಿದರು. ಮಾಜಿ ಸೈನಿಕರು, ಪೊಲೀಸರು, ಎನ್‍ಸಿಸಿ ವಿದ್ಯಾರ್ಥಿಗಳು, ಇತರರು ಗೌರವ ಸಲ್ಲಿಸಿದರು.

ಬಳಿಕ ಮಾತನಾಡಿದ ಮೇ.ಜ.,ಕೆ.ಸಿ.ಕಾರ್ಯಪ್ಪ ಅವರು ರಾಷ್ಟ್ರದಲ್ಲಿ ಸೇನೆಗೆ ಸೇರುವವರಲ್ಲಿ ಪಂಜಾಬ್ ಪ್ರಥಮ ಸ್ಥಾನದಲ್ಲಿ, ರಾಜ್ಯದಲ್ಲಿ ಕೊಡಗು ಜಿಲ್ಲೆ ಮೂರನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.
ಈ ಹಿಂದೆ ಕೊಡಗು ಜಿಲ್ಲೆಯಿಂದ ಸೇನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆ ಆಗುತ್ತಿದ್ದರು, ಆದರೆ ಇತ್ತೀಚಿನ ದಿನಗಳಲ್ಲಿ ವಿವಿಧ ಕಾರಣಗಳಿಂದ ಸೇನೆಗೆ ಸೇರ್ಪಡೆ ಆಗುವವರ ಸಂಖ್ಯೆ ಕಡಿಮೆ ಆಗಿದೆ ಎಂದು ಮೇಜರ್, ಕೆ.ಸಿ.ಕಾರ್ಯಪ್ಪ ಅವರು ಹೇಳಿದರು.
ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಸೇನೆಗೆ ಸೇರುವಂತಾಗಬೇಕು ಎಂದು ಅವರು ಕರೆ ನೀಡಿದರು.
Kodagu
ಕಾನೂನು ಸಂಸ್ಥೆಗಳ ನಡುವಿನ ಫುಟ್ಬಾಲ್ ಪಂದ್ಯಾವಳಿಗೆ ಚಾಲನೆ ನೀಡಿದ ಎ.ಎಸ್.ಪೊನ್ನಣ್ಣ
ಮಡಿಕೇರಿ : ಬೆಂಗಳೂರಿನ ಪ್ರತಿಷ್ಠಿತ ಕಾನೂನು ಸಂಸ್ಥೆಯಾದ ಎ.ಕೆ.ಎಸ್ ಲೀಗಲ್ ಹಾಗೂ ರೇ ಸಂಸ್ಥೆಯು ಜಂಟಿಯಾಗಿ ಆಯೋಜಿಸಿದ, “ಕಾನೂನು ಸಂಸ್ಥೆಗಳ ನಡುವಿನ ಫುಟ್ಬಾಲ್ ಪಂದ್ಯಾವಳಿಗೆ” ಬೆಂಗಳೂರಿನಲ್ಲಿ ಜರಗಿತು.
ಪಂದ್ಯಾಟವನ್ನು ಉದ್ಘಾಟಿಸಲು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಜಸ್ಟಿಸ್ ಅರವಿಂದ್ ಕುಮಾರ್ ಆಗಮಿಸಿದ್ದರು. ಪಂದ್ಯಾಟ ಉದ್ಘಾಟಿಸಿ ಮಾತನಾಡಿದ ಅರವಿಂದ್ ಕುಮಾರ್, ಸುಮಾರು 40ಕ್ಕೂ ಅಧಿಕ ಕಾನೂನು ಸಂಸ್ಥೆಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ಸರ್ವೋತ್ತಮ ತಂಡವು ಜಯಗಳಿಸಲಿ ಎಂಬ ಶುಭಾಶಯಗಳು ಕೋರುತ್ತೇನೆ ಎಂದರು.

ಈ ಸಂದರ್ಭದಲ್ಲಿ, ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮತ್ತು ಎ.ಕೆ.ಎಸ್ ಲೀಗಲ್ ಸಂಸ್ಥೆಯ ಸ್ಥಾಪಕ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಹಾಗೂ ಅವರ ಧರ್ಮಪತ್ನಿ ಕಾಂಚನ್ ಪೊನ್ನಣ್ಣ ಉಪಸ್ಥಿತರಿದ್ದರು.
-
Mysore2 hours agoಬಸ್ ನಿಲ್ದಾಣಕ್ಕೆ ಕಾರು ಡಿಕ್ಕಿ: ಚಾಲಕನಿಗೆ ಗಂಭೀರ ಗಾಯ
-
Hassan33 minutes agoHKS PUC ಕಾಲೇಜಿನಲ್ಲಿ ಜರುಗಿದ ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟ ಸಮಾರೋಪ ಸಮಾರಂಭ
-
State3 hours agoನಾಳೆಯಿಂದ ಚಳಿಗಾಲದ ಅಧಿವೇಶನ: ಸುವರ್ಣಸೌಧದಲ್ಲಿ ಸುತ್ತ ಹೈ ಆಲರ್ಟ್ 6,000 ಪೊಲೀಸ್ ಭದ್ರತೆ
-
Chikmagalur2 hours agoಗ್ರಾ.ಪಂ.ಸದಸ್ಯ ಗಣೇಶ್ ಕೊಲೆ ಪ್ರಕರಣ: ಐವರ ಬಂಧನ, ಮೂವರಿಗಾಗಿ ತೀವ್ರ ಶೋಧ
-
Chikmagalur2 hours agoಕಾಫಿನಾಡಲ್ಲಿ ನಿಲ್ಲದ ಕಾಡಾನೆ ದಾಳಿ: ಕಾರ್ಮಿಕ ಗಣಪತಿ ಪ್ರಾಣಾಪಾಯದಿಂದ ಪಾರು
-
Hassan24 hours agoದೆಹಲಿ ನೋಟಿಸ್, ಕಾರ್ಟಿಯರ್ ವಾಚ್ ವಿವಾದದ ಬಗ್ಗೆ ಆತ್ಮವಿಶ್ವಾಸದ ನಿಲುವು ಘೋಷಿಸಿದ ಡಿಸಿಎಂ ಡಿಕೆಶಿ
-
Hassan7 hours agoರಾತ್ರೋರಾತ್ರಿ ಮಿನಿ ಪಿಕಪ್ ವಾಹನದಲ್ಲಿ ಬಂದು ಕಾಫಿ ಕಳ್ಳತನ
-
Mysore7 hours agoಕೊಲ್ಕತ್ತಾದ ಮೈಸೂರು ಉದ್ಯಾನಕ್ಕೆ 10ನೇ ಚಾಮರಾಜ ಒಡೆಯರ್ ನಾಮಫಲಕ ಅಳವಡಿಸಲು ಪತ್ರ
