Hassan
ಕುಡಿಯುವ ನೀರು–ನೈರ್ಮಲ್ಯ ಇಲಾಖೆಯಲ್ಲಿ ಅಕ್ರಮ ನೇಮಕಾತಿ ಆರೋಪ – ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯ
ಹಾಸನ : ಹಾಸನ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆಯುತ್ತಿದ್ದು, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹಾಗೂ ಜಿಲ್ಲಾ ಪಂಚಾಯಿತಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಕೆಲವು ಏಜೆನ್ಸಿಗಳು ಶಾಮೀಲಾಗಿ, ಅಧಿಕೃತ ವ್ಯಕ್ತಿಗಳ ಹೆಸರನ್ನು ಬಳಸಿ ಬೇರೆಯವರಿಂದ ಕೆಲಸ ಮಾಡಿಸುತ್ತಿರುವುದು ಕಂಡುಬಂದಿದೆ ಎಂದು ಚೇತನ್ ಅವರು ತಿಳಿಸಿದರು.
ವಯೋಸಹಜ ನಿವೃತ್ತಿ ಹೊಂದಿರುವವರನ್ನು ಕಮಿಷನ್ ಆಧಾರದಲ್ಲಿ ಜಿಲ್ಲಾ ಪಂಚಾಯಿತಿಯ ವಿವಿಧ ಉಪಕಚೇರಿಗಳಲ್ಲಿ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ. ಈ ಎಲ್ಲಾ ಅಕ್ರಮಗಳಿಗೆ ಇಲಾಖೆಯ ಸಿಇಒ, ಕಾರ್ಯಪಾಲಕ ಇಂಜಿನಿಯರ್ (EE) ಹಾಗೂ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳು (AEE) ಕಾರಣರಾಗಿದ್ದಾರೆ ಎಂದು ಆರೋಪಿಸಿದರು.

ಲಕ್ಕಯ್ಯ ಅವರು ಇದೇ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ 58 ವರ್ಷಕ್ಕೆ ನಿವೃತ್ತಿ ಹೊಂದಿದ್ದು, ಪ್ರಸ್ತುತ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಜೀವನ ನಿರ್ವಹಣೆಗೆ ಹೊರಗುತ್ತಿಗೆಯಲ್ಲಿ ಕೆಲಸ ನೀಡುವಂತೆ ಮನವಿ ಮಾಡಿದರೂ ದಲಿತ ಸಮುದಾಯದವರಾದ ಕಾರಣ ಅವಕಾಶ ನೀಡಲಾಗುತ್ತಿಲ್ಲ ಎಂದು ಅವರು ಆರೋಪಿಸಿದರು. ಸರ್ಕಾರ ಮಟ್ಟದಲ್ಲಿ ಹಾಗೂ ಜಿಲ್ಲಾಧಿಕಾರಿಗಳ ಮಾರ್ಗದರ್ಶನ ಇದ್ದರೂ ಕೆಲಸಕ್ಕೆ ಸೇರಿಸಿಲ್ಲ ಎಂದು ಆರೋಪಿಸಿದರು.
ಭ್ರಷ್ಟ ಏಜೆನ್ಸಿಗಳನ್ನು ತಕ್ಷಣವೇ ಕಪ್ಪುಪಟ್ಟಿಗೆ ಸೇರಿಸಬೇಕು. ತಾರತಮ್ಯ ನಡೆಸಿ ದಾರಿ ತಪ್ಪಿಸುತ್ತಿರುವ ಅಧಿಕಾರಿಗಳನ್ನು ವಜಾಗೊಳಿಸಬೇಕು. ನಿವೃತ್ತರಾದರೂ ಅಧಿಕಾರಿಗಳ ಕುಮ್ಮಕ್ಕಿನಿಂದ ಇಲಾಖೆಯ ಇಂಜಿನಿಯರಿಂಗ್ ವಿಭಾಗ ಸೇರಿದಂತೆ ವಿವಿಧ ಕಡೆಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲರನ್ನು ತಕ್ಷಣ ಕೆಲಸದಿಂದ ತೆಗೆಯಬೇಕು. ಇಲ್ಲವಾದಲ್ಲಿ ಇದೇ ರೀತಿಯ ಅರ್ಹರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಇದಲ್ಲದೆ ಇಲಾಖೆಯಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ನಿವೃತ್ತರನ್ನು ತೆಗೆದುಹಾಕಿ, ಸರ್ಕಾರಿ ಸಮಯ ಹಾಗೂ ಸಂಪನ್ಮೂಲಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಅಧಿಕಾರಿಗಳು ಮತ್ತು ಏಜೆನ್ಸಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಸರ್ಕಾರಿ ಖಜಾನೆಗೆ ಆಗಿರುವ ನಷ್ಟವನ್ನು ಸಂಬಂಧಿಸಿದ ಅಧಿಕಾರಿಗಳು ಮತ್ತು ಏಜೆನ್ಸಿಗಳಿಂದ ವಸೂಲಿ ಮಾಡಬೇಕು ಎಂದು ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಈ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದಲ್ಲಿ, ಮುಂದಿನ ದಿನಗಳಲ್ಲಿ ಸಂಘಟನೆಗಳು ಜಿಲ್ಲಾದ್ಯಂತ ಹೋರಾಟ ಮತ್ತು ಕಾನೂನು ಹೋರಾಟದ ಮೂಲಕ ನ್ಯಾಯ ಪಡೆಯಲಿವೆ ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಹೇಶ್, ಮಂಜೇಗೌಡ ಹಾಗೂ ಇತರರು ಉಪಸ್ಥಿತರಿದ್ದರು.
Hassan
ಫೆ.12 ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಹಾಸನದಲ್ಲಿ ವ್ಯಾಪಕ ಬೆಂಬಲ
ಹಾಸನ : ನಾಲ್ಕು ಕರಾಳ ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು ಸೇರಿದಂತೆ ವಿವಿಧ ಜನವಿರೋಧಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೀತಿಗಳನ್ನು ವಿರೋಧಿಸಿ ಫೆಬ್ರವರಿ 12ರಂದು ನಡೆಯಲಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಹಾಸನ ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ನೀಡುವಂತೆ ಹಾಸನ ಜಿಲ್ಲಾ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಹಾಗೂ ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟ ಜಂಟಿಯಾಗಿ ಮನವಿ ಮಾಡಿವೆ.
ಫೆಬ್ರವರಿ 12ರಂದು ದೇಶದ ಎಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳು, ಸ್ವತಂತ್ರ ಒಕ್ಕೂಟಗಳು ಹಾಗೂ ನೌಕರರ ಸಂಘಟನೆಗಳು ಸೇರಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದ್ದು, ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕಾರ್ಮಿಕರು, ರೈತರು, ಕೃಷಿ ಕೂಲಿಕಾರರು, ದಲಿತರು, ಮಹಿಳೆಯರು, ವಿದ್ಯಾರ್ಥಿ–ಯುವಜನರು ಮತ್ತು ವ್ಯಾಪಾರಿಗಳು ಒಟ್ಟಾಗಿ ಬೃಹತ್ ಮೆರವಣಿಗೆ, ಸಾರ್ವಜನಿಕ ಸಭೆ, ರಸ್ತೆ ತಡೆ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳ ಮುಂದೆ ಪಿಕೆಟಿಂಗ್ ನಡೆಸಲಿದ್ದಾರೆ ಎಂದು ಧರ್ಮೇಶ್ ಅವರು ತಿಳಿಸಿದರು.

ವ್ಯಾಪಾರ ಸುಲಭೀಕರಣದ ಹೆಸರಿನಲ್ಲಿ 29 ಕಾರ್ಮಿಕ ಕಾನೂನುಗಳನ್ನು ರದ್ದುಪಡಿಸಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿರುವುದು ಕಾರ್ಮಿಕರ ಹಕ್ಕುಗಳ ಮೇಲೆ ಆರ್ಥಿಕ ಹಾಗೂ ರಾಜಕೀಯ ದಾಳಿ ನಡೆಸಿದಂತಾಗಿದೆ. ಇದರಿಂದ ಶೇ.90ಕ್ಕೂ ಹೆಚ್ಚು ಕಾರ್ಮಿಕರು ವೇತನ, ಇಎಸ್‌ಐ, ಪಿಎಫ್, ಗ್ರಾಚ್ಯುಟಿ, ಬೋನಸ್ ಮೊದಲಾದ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಸಂಘಟನೆಗಳು ಆರೋಪಿಸಿವೆ. ಜೀವನೋಪಾಯ ವೇತನದ ಬದಲು ತಳಮಟ್ಟದ ಕನಿಷ್ಠ ವೇತನದ ಪ್ರಸ್ತಾವನೆ ಕಾರ್ಮಿಕರ ಬದುಕನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುತ್ತಿದೆ ಎಂದು ತಿಳಿಸಿದರು.
ನರೇಗಾ ಕಾಯ್ದೆಯಡಿಯಲ್ಲಿ ಖಾತರಿಪಡಿಸಿದ ಕೆಲಸದ ಹಕ್ಕನ್ನು ಕಸಿದುಕೊಳ್ಳುವುದು, ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಿಸುವ ಮೂಲಕ ಸರ್ಕಾರ ತನ್ನ ಸಾಮಾಜಿಕ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿರುವುದು, ರೈತರಿಗೆ ಬೆಂಬಲ ಬೆಲೆ ನೀಡದೇ ಕಂಪನಿ ಕೃಷಿ ಮತ್ತು ಬಲವಂತದ ಭೂಸ್ವಾಧೀನಕ್ಕೆ ಉತ್ತೇಜನ ನೀಡುತ್ತಿರುವುದು ರೈತರು ಹಾಗೂ ಗ್ರಾಮೀಣ ಶ್ರಮಜೀವಿಗಳ ಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ.

ಇತ್ತೀಚೆಗೆ ಮಂಡಿಸಲಾದ 53.5 ಲಕ್ಷ ಕೋಟಿ ರೂ.ಗಳ ಕೇಂದ್ರ ಬಜೆಟ್ ಜನಸಾಮಾನ್ಯರ ಸಂಕಷ್ಟಗಳಿಗೆ ಪರಿಹಾರ ನೀಡದೆ ಬಂಡವಾಳಗಾರರಿಗೆ ಅನುಕೂಲ ಕಲ್ಪಿಸಿದೆ. ರಾಜ್ಯ ಸರ್ಕಾರವೂ ಕಾರ್ಮಿಕ ಸಂಹಿತೆಗಳಿಗೆ ನಿಯಮಾವಳಿ ರೂಪಿಸುವ ಮೂಲಕ ಕಾರ್ಮಿಕ ವಿರೋಧಿ ಧೋರಣೆಯನ್ನು ಮುಂದುವರೆಸುತ್ತಿದೆ ಎಂದು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ಫೆಬ್ರವರಿ 12ರಂದು ಉತ್ಪಾದನೆ, ಸೇವೆ, ಸಂಚಾರ ಮತ್ತು ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿ ಸ್ವಯಂಪ್ರೇರಿತವಾಗಿ ಮುಷ್ಕರವನ್ನು ಯಶಸ್ವಿಗೊಳಿಸುವಂತೆ ಸಂಘಟನೆಗಳು ಜಿಲ್ಲೆಯ ಎಲ್ಲಾ ವರ್ಗದ ಜನತೆಗೆ ಮನವಿ ಮಾಡಿದೆ.

ಸುದ್ದಿಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾ ಅಧ್ಯಕ್ಷ ಧರ್ಮೇಶ್, ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಧರ್ಮರಾಜ್, ಕೆಪಿಆರ್‌ಎಸ್ ಜಿಲ್ಲಾ ಅಧ್ಯಕ್ಷ ಎಚ್.ಆರ್. ನವೀನ್‌ಕುಮಾರ್, ಕ.ರಾ. ರೈತ ಸಂಘ ಜಿಲ್ಲಾ ಅಧ್ಯಕ್ಷ ರಘು, ಕದಸಂಸ (ಅಂಬೇಡ್ಕರ್‌ವಾದ) ರಾಜ್ಯ ಸಂಘಟನಾ ಸಂಚಾಲಕ ಈರೇಶ್ ಹಿರೆಹಳ್ಳಿ ಸೇರಿದಂತೆ ವಿವಿಧ ಕಾರ್ಮಿಕ, ರೈತ, ದಲಿತ, ಮಹಿಳಾ, ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳ ಮುಖಂಡರು ಹಾಗೂ ಇತರರು ಉಪಸ್ಥಿತರಿದ್ದರು.
Hassan
ಸಾರ್ವಜನಿಕ ರಸ್ತೆಗಳ ಮೇಲೆ ವೀಲ್ಹಿಂಗ್ : ಜನರ ಜೀವಕ್ಕೆ ಅಪಾಯ ತಂದೊಡ್ಡುವ ಪುಂಡರ ಹಾವಳಿ
ಹಾಸನ: ಜಿಲ್ಲೆಯಲ್ಲಿ ಸಾರ್ವಜನಿಕ ರಸ್ತೆಗಳ ಮೇಲೆ ವೀಲ್ಹಿಂಗ್ ಮಾಡಿ ಜನರ ಜೀವಕ್ಕೆ ಅಪಾಯ ತಂದೊಡ್ಡುವ ಪುಂಡರ ಹಾವಳಿ ದಿನೇದಿನೇ ಹೆಚ್ಚಾಗುತ್ತಿದೆ. ನೂರಾರು ವಾಹನಗಳು ಸಂಚರಿಸುವ ರಸ್ತೆಯಲ್ಲೇ ಇಬ್ಬರು ಯುವಕರು ಬೈಕ್‌ನಲ್ಲಿ ವೀಲ್ಹಿಂಗ್ ನಡೆಸಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಮುದುಡಿ ರಸ್ತೆಯಲ್ಲಿ ನಡೆದಿದೆ.
ಒಂದೇ ಚಕ್ರದಲ್ಲಿ ಬೈಕ್ ಚಲಾಯಿಸುತ್ತಾ, ಎದುರು ಬರುತ್ತಿದ್ದ ಹಾಗೂ ಹಿಂದೆ ಸಾಗುತ್ತಿದ್ದ ವಾಹನ ಸವಾರರಿಗೆ ಅಡ್ಡಿಯಾಗುವ ರೀತಿಯಲ್ಲಿ ಯುವಕರು ವೀಲ್ಹಿಂಗ್ ಮಾಡಿರುವುದು ಕಂಡುಬಂದಿದೆ. KA-31-J-5670 ಸಂಖ್ಯೆಯ ಬೈಕ್‌ನಲ್ಲಿ ಈ ಅಪಾಯಕಾರಿ ಕೃತ್ಯ ಎಸಗಲಾಗಿದ್ದಾರೆ.

ವೀಲ್ಹಿಂಗ್ ವೇಳೆ ಅಚಾನಕ್ ನಾಯಿಗಳು ರಸ್ತೆಗೆ ಅಡ್ಡ ಬಂದ ಪರಿಣಾಮ, ದೊಡ್ಡ ಅನಾಹುತ ಸಂಭವಿಸುವುದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಬೈಕ್ ಅಪಘಾತವಾಗಬಹುದು ಎಂದು ಆತಂಕಗೊಂಡು ಹಿಂದೆ ಬರುತ್ತಿದ್ದ ಕಾರಿನ ಚಾಲಕ ಕೂಡ ತಕ್ಷಣ ವಾಹನವನ್ನು ನಿಲ್ಲಿಸಿಕೊಂಡು ನಿಂತಿರುವ ದೃಶ್ಯ ಕಂಡುಬಂದಿದೆ.
ವೀಲ್ಹೀಂಗ್ ಮಾಡುತ್ತಿದ್ದ ದೃಶ್ಯವನ್ನು ಸ್ಥಳದಲ್ಲಿದ್ದವರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಸಾರ್ವಜನಿಕ ಸುರಕ್ಷತೆಯನ್ನು ಲೆಕ್ಕಿಸದೆ ಈ ರೀತಿಯ ಕೃತ್ಯಗಳಲ್ಲಿ ತೊಡಗುವ ಯುವಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ವೀಲ್ಹೀಂಗ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದರಿಂದ ನಿರಪರಾಧ ರಸ್ತೆ ಬಳಕೆದಾರರ ಜೀವಕ್ಕೆ ಭಾರಿ ಅಪಾಯ ಎದುರಾಗುತ್ತಿದೆ. ಪೊಲೀಸರು ತಕ್ಷಣ ಕ್ರಮ ಕೈಗೊಳ್ಳುವ ಮೂಲಕ ಇಂತಹ ಅಪಾಯಕಾರಿ ಕೃತ್ಯಗಳಿಗೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Hassan
ವಿಕಸಿತ ಭಾರತ ಸಂಕಲ್ಪಕ್ಕೆ ಕೇಂದ್ರದ ಬಜೆಟ್ ಪೂರಕ: ಶಾಸಕ ಸಿಮೆಂಟ್ ಮಂಜು
ಸಕಲೇಶಪುರ : ವಿಕಸಿತ ಭಾರತ ಮೋದಿಜಿಯವರ ಕನಸು. 2047ಕ್ಕೆ ವಿಕಸಿತ ಭಾರತ ಆಗಬೇಕು ಅನ್ನೊ ಸಂಕಲ್ಪಕ್ಕೆ ಪೂರಕವಾಗಿ ಕೇಂದ್ರದ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಈ ಭಾರಿಯ ಬಜೆಟ್ ಮಂಡಿಸಿದ್ದಾರೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಪಟ್ಟಣದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಈ ಬಜೆಟ್ ಮೂರು ಪ್ರಮುಖ ಕರ್ತವ್ಯಗಳ ಆಧಾರದ ಮೇಲೆ ಅಭಿವೃದ್ಧಿ ಪೂರಕ ಆಡಳಿತದತ್ತ ಸ್ಪಷ್ಟ ದಿಕ್ಸೂಚಿಯನ್ನು ನೀಡಿದೆ. ಮೊದಲನೆಯದಾಗಿ, ಜಾಗತಿಕ ಆರ್ಥಿಕ ಏರಿಳಿತಗಳ ನಡುವೆಯೂ ಭಾರತದ ಆರ್ಥಿಕ ಪ್ರಗತಿಗೆ ವೇಗ ನೀಡುವುದು ಮತ್ತು ಆರ್ಥಿಕತೆ ಚೇತರಿಸಿಕೊಳ್ಳುವ ಶಕ್ತಿಯನ್ನು ವೃದ್ಧಿಸುವುದು, ಎರಡನೆಯದಾಗಿ, ಯುವಜನತೆಯ ಆಕಾಂಕ್ಷೆಗಳನ್ನು ಈಡೇರಿಸುತ್ತಾ ಅವರಲ್ಲಿ ಹೊಸ ಸಾಮರ್ಥ್ಯ ಬೆಳೆಸುವುದು ಹಾಗೂ ಮೂರನೆಯದಾಗಿ, ’ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಂತ್ರದೊಂದಿಗೆ ಪ್ರತಿಯೊಂದು ಕುಟುಂಬ, ಸಮುದಾಯ ಮತ್ತು ಪ್ರದೇಶಗಳಿಗೆ ಅಗತ್ಯ ಸಂಪನ್ಮೂಲ ಹಾಗೂ ಸಮಾನ ಅವಕಾಶಗಳನ್ನು ಒದಗಿಸಿ, ಎಲ್ಲರೂ ದೇಶದ ಪ್ರಗತಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವುದು ಈ ಬಜೆಟ್‌ನ ಆಶಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

◦ ಈ ಬಜೆಟ್ ’ವಿಕ್ಷಿತ್ ಭಾರತ್ ಯಂಗ್ ಲೀಡರ್ಸ್ ಡೈಲಾಗ್ನಂತಹ ವೇದಿಕೆಗಳ ಮೂಲಕ ಯುವಜನರ ಆಲೋಚನೆಗಳನ್ನು ನೀತಿ ನಿರೂಪಣೆಯಲ್ಲಿ ಅಳವಡಿಸಿಕೊಂಡಿರುವುದು ಶ್ಲಾಘನೀಯ. ಇದು ಯುವಜನರನ್ನು ಕೇವಲ ಫಲಾನುಭವಿಗಳನ್ನಾಗಿ ನೋಡದೆ, ರಾಷ್ಟ್ರದ ನಿರ್ಧಾರಗಳಲ್ಲಿ ಸಕ್ರಿಯ ಪಾಲುದಾರರನ್ನಾಗಿ ಮಾಡಿದೆ. ಆ ಮೂಲಕ ಭಾರತದ ಮುಂದಿನ ಪ್ರಗತಿಯನ್ನು ಯುವಜನರು ಮುನ್ನಡೆಸುತ್ತಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪದೇ ಪದೇ ಒತ್ತಿ ಹೇಳಿದ್ದು, ಅದರತ್ತ ಈ ಬಜೆಟ್ ಕೂಡ ಗಮನಹರಿಸಿರುವುದು ಸಮಯೋಚಿತವೆನಿಸಿದೆ ಎಂದು ಹೇಳಿದರು.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 9ನೇ ಬಜೆಟ್ ಮಂಡಿಸಿದ್ದಾರೆ. ಕರ್ತವ್ಯ ಭವನದಲ್ಲಿ ಈ ಬಜೆಟ್ ತಯಾರಾಗಿದ್ದು.ನಿರ್ಮಲಾ ಸೀತಾರಾಮನ್ ನಮ್ಮವರು. ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿ ಹೋಗಿದ್ದಾರೆ. ಅವರು 9ನೇ ಬಾರಿ ದಾಖಲೆಯ ಬಜೆಟ್ ಮಂಡಿಸಿದ್ದಾರೆ.ಕ್ರೀಡಾ ಕ್ಷೇತ್ರ, ನಾರಿ ಶಕ್ತಿಗೆ ಹೆಚ್ಚು ಆದ್ಯತೆ ನೀಡಿದ್ದಾರೆ. ಯಾವುದೇ ಹೊಸ ತೆರಿಗೆಯನ್ನ ಹೇರಿಲ್ಲ. ಸರ್ವಸ್ಪರ್ಷಿ, ಸರ್ವವ್ಯಾಪಿ ಬಜೆಟ್ ಇದು.ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ. ಆರ್ಥಿಕ ಸದೃಢತೆ, ವಿಶ್ವಗುರುವಾಗಲು ಪೂರಕ ಬಜೆಟ್ ಮಂಡಿಸಿದ್ದಾರೆ ಎಂದು ತಿಳಿಸಿದರು.
-
Manglore17 hours agoಜಿ.ಎಲ್. ಟ್ರೋಫಿ-2026: ಜಿ.ಎಲ್. ಹಾಸನ ತಂಡ ಚಾಂಪಿಯನ್
-
Hassan18 hours agoಮಾಧ್ಯಮ ಸ್ವಾತಂತ್ರ್ಯ ಸದ್ಬಳಕೆಯಾಗಲಿ: ಎಎಸ್ಪಿ ತಮ್ಮಯ್ಯ
-
Hassan17 hours agoಅರಸೀಹಳ್ಳಿ ಹರೀಶ್ಗೆ ಪಿಹೆಚ್ಡಿ ಪದವಿ
-
Hassan18 hours agoಆನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ : ಕೇಂದ್ರ ಸಚಿವರನ್ನು ಭೇಟಿ ಮಾಡಿದ ಸಂಸದ ಶ್ರೇಯಸ್ ಪಟೇಲ್
-
Mandya23 hours agoಎಂ. ಅಂಕೇಗೌಡರ ಪುಸ್ತಕ ಪ್ರೀತಿ ಇಂದಿನ ಯುವ ಪೀಳಿಗೆಗೆ ಮಾದರಿ : ಡಾ.ಮಾನಸ
-
National20 hours ago17ನೇ ಬೆಂಗಳೂರು ಚಿತ್ರೋತ್ಸವದಲ್ಲಿ ತಾಯಿ-ಮಗನ ಸಂಬಂಧದ ʼಅಮ್ಮಂಗೆ ಹೇಳ್ಬೇಡʼ ಚಿತ್ರ ಪ್ರದರ್ಶನ
-
State21 hours agoಸಿಎಂ ಹೌದು ಹುಲಿಯಾ ಆಗಿಲ್ಲ, ಹೌದು ಇಲಿಯಾ ಆಗಿದ್ದಾರೆ: ಆರ್.ಅಶೋಕ್
-
Kodagu19 hours agoಗುಡುಗಳಲೆ ಜಾನುವಾರುಗಳ ಜಾತ್ರೆಗೆ ಚಾಲನೆ ನೀಡಿದ ಶ್ರೀ ಅಭಿನವ ಸಿದ್ದಲಿಂಗಶಿವಾಚಾರ್ಯ ಸ್ವಾಮೀಜಿ
