ಆನೆ ಓಡಿಸಲು ಹೋದ ವ್ಯಕ್ತಿ ನಾಪತ್ತೆ-ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರ ಆಕ್ರೋಶ

ಆನೆ ಓಡಿಸಲು ಹೋದ ವ್ಯಕ್ತಿ ನಾಪತ್ತೆ-ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರ ಆಕ್ರೋಶ

ಚಿಕ್ಕಮಗಳೂರು: ಜಮೀನಿಗೆ ಬಂದ ಆನೆಯನ್ನು ಓಡಿಸಲು ಹೋದ ವ್ಯಕ್ತಿ ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬೈರಾಪುರ ಗ್ರಾಮದಲ್ಲಿ ನಡೆದಿದೆ.

ಬೈರಾಪುರ ಗ್ರಾಮದ ನಿವಾಸಿ ಯಶವಂತ್(50) ನಾಪತ್ತೆಯಾಗಿರುವ ವ್ಯಕ್ತಿ. ಕಳೆದ ರಾತ್ರಿ ಕಾಡಾನೆ ಬೈರಾಪುರ ಗ್ರಾಮದ ಅಂಚಿಗೆ ಬಂದಿತ್ತು. ಹೊಲ-ಗದ್ದೆಗಳ ಮೇಲೆ ದಾಳಿಗೆ ಮುಂದಾಗಿತ್ತು. ಈ ವೇಳೆ ಯಶವಂತ್ ಗ್ರಾಮದ ಹರೀಶ್ ಎಂಬವರ ಜೊತೆ ಆನೆಯನ್ನು ಓಡಿಸಲು ಹೋಗಿದ್ದರು. ಈ ವೇಳೆ ಆನೆ ಅಟ್ಟಿಸಿಕೊಂಡು ಬಂದ ಹಿನ್ನೆಲೆ ಹರೀಶ್ ಗ್ರಾಮದತ್ತ ಓಡಿ ಬಂದಿದ್ದಾರೆ. ಆದರೆ ಕತ್ತಲಲ್ಲಿ ಯಶವಂತ್ ಯಾವ ಕಡೆ ಹೋಗಿದ್ದಾರೆ ಎಂದು ಗೊತ್ತಾಗಿಲ್ಲ. ಇಂದು ಮಧ್ಯಾಹ್ನವಾದರೂ ಯಶವಂತ್ ಪತ್ತೆಯಾಗಿಲ್ಲ.

ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆ ಗಮನಕ್ಕೆ ತಂದರೂ ಅರಣ್ಯ ಇಲಾಖೆ ಯಾವುದೇ ಕ್ರಮಕೈಗೊಂಡಿಲ್ಲ, ಸೂಕ್ತವಾಗಿ ಸ್ಪಂದಿಸಿಲ್ಲ ಎಂದು ಸ್ಥಳಿಯರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮಲೆನಾಡಿನ ಹಲವು ಗ್ರಾಮಗಳಲ್ಲಿ ಕಾಡಾನೆ ಹಾವಳಿ ಮಿತಿಮೀರಿದೆ. ಮೂಡಿಗೆರೆ ತಾಲೂಕಿನ ಗುತ್ತಿ, ಬೈರಾಪುರ, ಕೋಗಿಲೆ, ಸಾರಗೋಡು, ಮೂಲರಹಳ್ಳಿ, ಗೌಡಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಕಾಡಾನೆ ಹಾವಳಿ ಮಿತಿಮೀರಿದೆ. ಆನೆ ಹಾವಳಿಯಿಂದ ರೈತರು ಬೆಳೆಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ.

ಎನ್.ಆರ್.ಪುರ ತಾಲೂಕಿನ ಬೈರಾಪುರ, ಮುತ್ತಿನಕೊಪ್ಪ ಭಾಗದಲ್ಲಿ ಆನೆ ಹಾವಳಿ ಹೆಚ್ಚಾಗಿದ್ದು, ರೈತರು ಭತ್ತ, ಬಾಳೆ, ಅಡಿಕೆ ಸೇರಿದಂತೆ ಬೆಳೆಗಳನ್ನು ಉಳಿಸಿಕೊಳ್ಳುವುದೇ ಕಷ್ಟವಾಗಿದೆ. ರೈತರು ತಮ್ಮ ಬೆಳೆಗಳನ್ನು ತಾವೇ ಉಳಿಸಿಕೊಳ್ಳವಂತಹಾ ಸ್ಥಿತಿ ನಿರ್ಮಾಣವಾಗಿದೆ. ಬೆಳೆ ಉಳಿಸಿಕೊಳ್ಳಲು ಹೋದ ರೈತನೇ ಇಂದು ನಾಪತ್ತೆಯಾಗಿದ್ದಾರೆ. ಅರಣ್ಯ ಇಲಾಖೆ ಆನೆಗಳು ಹೊಲಗದ್ದೆ, ತೋಟಗಳಿಗೆ ಹೋಗದಂತೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕಾಡಂಚಿನ ಗ್ರಾಮಗಳಲ್ಲಿ ಟ್ರಂಚ್ ನಿರ್ಮಿಸಿ ಆನೆಗಳು ಗ್ರಾಮ ಹಾಗೂ ಹೊಲಗದ್ದೆ-ತೋಟಗಳಿಗೆ ಬಾರದಂತೆ ಕ್ರಮಕೈಗೊಳ್ಳಬಹುದಿತ್ತು. ಆದರೆ, ಅರಣ್ಯ ಇಲಾಖೆ ಟ್ರಂಚ್ ನಿರ್ಮಿಸಿಲ್ಲ ಎಂದು ಆರೋಪಿಸುತ್ತಿರುವ ಸ್ಥಳೀಯರು ಅರಣ್ಯ ಇಲಾಖೆಯ ಬೇಜವಾಬ್ದಾರಿಯಿಂದಲೇ ಇಂದು ಈ ದುರ್ಘಟನೆ ಸಂಭವಿಸಿದೆ ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಳು