ಕೊಳ್ಳೇಗಾಲ ಶಾಸಕ ಎನ್.ಮಹೇಶ್‍ಗೆ ಪತ್ನಿ ವಿಯೋಗ

ಕೊಳ್ಳೇಗಾಲ ಶಾಸಕ ಎನ್.ಮಹೇಶ್‍ಗೆ ಪತ್ನಿ ವಿಯೋಗ

ಚಾಮರಾಜನಗರ: ಕೊಳ್ಳೇಗಾಲ ಶಾಸಕ ಎನ್.ಮಹೇಶ್‍ರವರ ಧರ್ಮಪತ್ನಿ ವಿಜಯಾ(64) ಅವರು ಭಾನುವಾರ ರಾತ್ರಿ ನಿಧನರಾಗಿದ್ದಾರೆ.

ಕೆಲವು ದಿನಗಳಿಂದ ವಿಜಯಾ ಅವರು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಆದರೆ ಭಾನುವಾರ ರಾತ್ರಿ ತೀವ್ರವಾಗಿ ಉಸಿರಾಟ ಸಮಸ್ಯೆ ಕಾಣಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ಜೆ.ಪಿ ನಗರದ ಆರ್.ವಿ ಆಸ್ಟರ್ ಆಸ್ಪತ್ರೆಯಲ್ಲಿ ರಾತ್ರಿ 11. 30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.

ಇವರಿಗೆ ಕ್ಯಾನ್ಸರ್ ನಾಲ್ಕನೇ ಹಂತದಲ್ಲಿತ್ತು. ಹೀಗಾಗಿ ಕಳೆದ ಒಂದೂವರೆ ತಿಂಗಳಿನಿಂದ ವಿಜಯಾ ಅವರು ಆರ್.ವಿ ಆಸ್ಟರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲದೇ ಕೆಲವು ದಿನಗಳ ಹಿಂದೆಯಷ್ಟೇ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದರಿಂದ ವಿಜಯಾ ಅವರನ್ನು ಐಸಿಯುವಿನಿಂದ ಜನರಲ್ ವಾರ್ಡ್‍ಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಭಾನುವಾರ ರಾತ್ರಿ ಆರೋಗ್ಯದಲ್ಲಿ ಏರು-ಪೇರು ಕಾಣಿಸಕೊಂಡು ಮೃತಪಟ್ಟಿದ್ದಾರೆ.

ಬೆಂಗಳೂರಿನ ಕನಕಪುರ ರಸ್ತೆಯ ರವಿಶಂಕರ್ ಗುರೂಜಿ ಆಶ್ರಮದ ಬಳಿ ಇರುವ ಕಾನ್ಶ್ ಫೌಂಡೇಶನ್‍ನಲ್ಲಿ ವಿಜಯಾ ಅವರ ಅಂತ್ಯಕ್ರಿಯೆ ನಡೆಸುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.

ಎನ್.ಮಹೇಶ್ ಮತ್ತು ವಿಜಯಾ ಇಬ್ಬರದ್ದು ಲವ್ ಜೊತೆಗೆ ಅರೇಂಜ್ ಮ್ಯಾರೇಜ್. ಇವರಿಬ್ಬರು ಒಂದೇ ಕಡೆ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಪ್ರೀತಿ ಹುಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವರು. ಸುಮಾರು 37 ವರ್ಷಗಳ ಸುಖಕರ ದಾಂಪತ್ಯ ಜೀವನ ನಡೆಸಿದ್ದಾರೆ. ವಿಜಯ ಮೂಲತಃ ಕನಕಪುರದವರು. ಮೈಸೂರಿನ ಆಕ್ಸಿಸ್ ಬ್ಯಾಂಕ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು. ಕಳೆದ ಒಂದು ವರ್ಷದ ಹಿಂದೆಯಷ್ಟೇ ಮಗನಿಗೆ ಮದುವೆ ಮಾಡಲಾಗಿತ್ತು.

ತಾಜಾ ಸುದ್ದಿಗಳು