ಬ್ಲ್ಯಾಕ್ ಫಂಗಸ್ ಚಿಕಿತ್ಸೆಯ ಸಂಪೂರ್ಣ ವೆಚ್ಚ ಸರ್ಕಾರವೇ ಭರಿಸಲಿದೆ: ಸಿಎಂ ಬೊಮ್ಮಾಯಿ

ಬ್ಲ್ಯಾಕ್ ಫಂಗಸ್ ಚಿಕಿತ್ಸೆಯ ಸಂಪೂರ್ಣ ವೆಚ್ಚ ಸರ್ಕಾರವೇ ಭರಿಸಲಿದೆ: ಸಿಎಂ ಬೊಮ್ಮಾಯಿ

ವಿಜಯಪುರ: ಬ್ಲ್ಯಾಕ್‌ ಫಂಗಸ್‌ಗೆ ತುತ್ತಾದವರು ಗುಣಮುಖರಾಗುವವರೆಗೂ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಇನ್ನು ಮುಂದೆ ಸರ್ಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಜ್ಯದಲ್ಲಿ ಕಪ್ಪು ಶಿಲೀಂಧ್ರದ ಪ್ರಕರಣಗಳು ಕಡಿಮೆಯಾಗಿವೆ. ಸೋಂಕಿಗೊಳಗಾದ ಜನರು ಚಿಕಿತ್ಸೆ ಪಡೆದುಕೊಳ್ಳಲು ಕಷ್ಟ ಪಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಏಕೆಂದರೆ ಸೋಂಕಿಗೆ ನೀಡಲಾಗುವ ಪ್ರತೀ ಡೋಸ್ ಇಂಜೆಕ್ಷನ್’ಗೆ ರೂ.10,000 ದಿಂದ 12,000 ವೆಚ್ಚವಾಗುತ್ತಿದೆ. ಈ ಇಂಜೆಕ್ಷನ್ ನ್ನು ಸೋಂಕಿಗೊಳಗಾದ ಜನರು ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಪ್ರತೀನಿತ್ಯ ಪಡೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಜನರು ಹಾಗೂ ಅವರು ಕುಟುಂಬಸ್ಥರ ಮೇಲಿನ ಹೊರೆಯನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರವೇ ಈ ವೆಚ್ಚವನ್ನು ಭರಿಸಲಿದೆ ಎಂದು ಹೇಳಿದ್ದಾರೆ.

ಆಸ್ಪತ್ರೆಗೆ ದಾಖಲಾಗಿರುವಾಗವಷ್ಟೇ ಅಲ್ಲದೆ, ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕವೂ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಸೋಂಕಿತ ವ್ಯಕ್ತಿ ಸಂಪೂರ್ಣವಾಗಿ ಗುಣಮುಖರಾಗುವವರೆಗೂ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಪ್ರಕಾರ, “ರಾಜ್ಯದಲ್ಲಿ ಒಟ್ಟು 3,836 ಮ್ಯೂಕೋರ್ಮೈಕೋಸಿಸ್ ಪ್ರಕರಣಗಳು ವರದಿಯಾಗಿದ್ದು, ಇವುಗಳಲ್ಲಿ ಬೆಂಗಳೂರು ನಗರವು ಅತಿಹೆಚ್ಚು 1,207 ಪ್ರಕರಣಗಳನ್ನು ಹೊಂದಿದೆ, ಧಾರವಾಡದಲ್ಲಿ 342, ವಿಜಯಪುರದಲ್ಲಿ 228 ಮತ್ತು ಕಲಬುರಗಿಯಲ್ಲಿ 213 ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಿದೆ. ಆದಾಗ್ಯೂ, ಎಲ್ಲಾ ಜಿಲ್ಲೆಗಳಲ್ಲಿ ಸಾವಿನ ಪ್ರಮಾಣ ಕಡಿಮೆಯಾಗಿದೆ ಎಂದು ಮಾಹಿತಿ ನೀಡಿದೆ.

ಬಿಎಲ್‌ಡಿಇಎಯ ಶ್ರೀ ಬಿಎಂ ಪಾಟೀಲ್ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಕಿವಿ, ಮೂಗು ಮತ್ತು ಗಂಟಲು ವಿಭಾಗದ ಮುಖ್ಯಸ್ಥೆ ಓಟೋಲರಿಂಗೋಲಜಿಸ್ಟ್ ಡಾ ಲತಾ ದೇವಿ ಅವರು ಮಾತನಾಡಿ, “ಶಿಲೀಂಧ್ರ ಸೋಂಕಿನ ಚಿಕಿತ್ಸೆಗಾಗಿ ಎರಡು ವಿಧದ ಡೋಸ್‌ಗಳನ್ನು ನೀಡಲಾಗುತ್ತಿದೆ, ಒಂದು ಲಿಪೊಸೋಮಲ್ ಆಂಫೊಟೆರಿಸಿನ್ ಬಿ, ಪ್ರತಿ ಬಾಟಲಿಗೆ ರೂ 8,000 ವೆಚ್ಚವಾಗುತ್ತದೆ. ಇವುಗಳಿಂದ ಯಾವುದೇ ಅಡ್ಡಪರಿಣಾಮಗಳಿರುವುದಿಲ್ಲ. ಲಿಯೋಫಿಲೈಸ್ಡ್ ಆಂಫೊಟೆರಿಸಿನ್ ಬಿ ಇಂಜೆಕ್ಷನ್ ಪ್ರತಿ ಬಾಟಲಿಗೆ ರೂ 400 ವೆಚ್ಚವಾಗುತ್ತದೆ. ಇದು ಮೂತ್ರಪಿಂಡದ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಸೋಂಕಿತ ರೋಗಿಗೆ ಚಿಕಿತ್ಸೆಯ ಸಮಯದಲ್ಲಿ 60 ರಿಂದ 70 ಬಾಟಲುಗಳು ಬೇಕಾಗುತ್ತವೆ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಳು