ನಾನು ಅಂಗಾಂಗ ದಾನ ಮಾಡುತ್ತೇನೆ, ನೀವೂ ಮಾಡಿ- ಸಿಎಂ ಬೊಮ್ಮಾಯಿ ಕರೆ

ನಾನು ಅಂಗಾಂಗ ದಾನ ಮಾಡುತ್ತೇನೆ, ನೀವೂ ಮಾಡಿ- ಸಿಎಂ ಬೊಮ್ಮಾಯಿ ಕರೆ

– ಜೀವ ಹೋದ ನಂತರ ಇನ್ನೊಂದು ಜೀವ ಉಳಿಸೋಣ
ಉಡುಪಿ:
ನಾನು ಅಂಗಾಂಗ ದಾನಕ್ಕೆ ಸಹಿ ಹಾಕುತ್ತಿದ್ದೇನೆ. ನೀವು ಸಹಿ ಹಾಕಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಉಡುಪಿಯಲ್ಲಿ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.

ಇಂದು ವಿಶ್ವ ಅಂಗಾಂಗ ದಾನ ದಿನ. ಈ ದಿನ ನಾನು ಕೂಡ ಅಂಗಾಂಗ ದಾನ ಪತ್ರಕ್ಕೆ ಸಹಿ ಹಾಕುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಉಡುಪಿಯ ಮಣಿಪಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಕಿಡ್ನಿ ಸಹಿತ ಬೇರೆ ಬೇರೆ ಅಂಗಾಂಗ ದಾನ ಮಾಡುವುದು ಮತ್ತು ಅಂಗಾಂಗಗಳನ್ನು ಯಶಸ್ವಿಯಾಗಿ ಕಸಿ ಮಾಡುವುದು ನಡೆಯುತ್ತಿದೆ ಎಂದರು.

ಹೆಚ್ಚಿನ ಜನರು ಅಂಗಾಂಗ ದಾನಕ್ಕೆ ಮುಂದೆ ಬಂದರೆ ಸಾವಿರಾರು ಜೀವಗಳನ್ನು ಉಳಿಸಲು ಸಾಧ್ಯವಿದೆ. ಇವತ್ತು ವಿಶ್ವ ಅಂಗಾಂಗ ದಾನ ದಿನದಂದು ನಾನೂ ಅಂಗಾಂಗ ದಾನಕ್ಕೆ ಸಹಿ ಹಾಕುತ್ತೇನೆ. ಅಂಗಾಂಗ ದಾನಕ್ಕೆ ಎಲ್ಲರಿಗೂ ಕರೆ ಕೊಡುತ್ತಿದ್ದೇನೆ ಎಂದರು. ಅಂಗಾಂಗ ದಾನ ಮಾಡುವ ಮೂಲಕ ಮಣ್ಣಲ್ಲಿ ಮಣ್ಣಾಗುವ ಅಂಗಾಂಗಗಳು ಉಪಯೋಗವಾಗಿ ಇನ್ನೊಂದು ಜೀವ ಉಳಿಯಲು ಸಾಧ್ಯವಿದ್ದರೆ ಯಾಕೆ ಹಾಗೆ ಮಾಡಬಾರದು? ಆದ್ದರಿಂದ ಎಲ್ಲರೂ ವಿಶ್ವ ಅಂಗಾಂಗ ದಿನದಂದು ಎಲ್ಲರೂ ಅಂಗಾಂಗ ದಾನ ಮಾಡಲು ಸಂಕಲ್ಪ ಮಾಡೋಣ ಎಂದರು.

ಜೀವ ಉಳಿಸುವ ಈ ಪುಣ್ಯ ಕಾರ್ಯಕ್ಕೆ ಎಲ್ಲರೂ ಮುಂದೆ ಬರಬೇಕು. ಸಂಕಷ್ಟದಲ್ಲಿ ಇರುವ ಜೀವ ಉಳಿಸಲು ಸಹಕಾರಿಯಾಗಬೇಕು. ಕುಟುಂಬದವರ ಮನವೊಲಿಸಿ. ಜೀವ ಹೋದ ನಂತರ ಇನ್ನೊಂದು ಜೀವ ಉಳಿಸಿ ಎಂದು ಸಿಎಂ ಹೇಳಿದರು.

ತಾಜಾ ಸುದ್ದಿಗಳು