ಕಂದಹಾರ್ ಏರ್ ಪೋರ್ಟ್ ಮೇಲೆ ರಾಕೆಟ್ ದಾಳಿ – ವಿಮಾನ ಹಾರಾಟ ರದ್ದು

ಕಂದಹಾರ್ ಏರ್ ಪೋರ್ಟ್ ಮೇಲೆ ರಾಕೆಟ್ ದಾಳಿ – ವಿಮಾನ ಹಾರಾಟ ರದ್ದು

ಕಾಬೂಲ್: ದಕ್ಷಿಣ ಅಫ್ಘಾನಿಸ್ತಾನದ ಕಂದಹಾರ್ ವಿಮಾನ ನಿಲ್ದಾಣದಲ್ಲಿ ಉಗ್ರರು ಮೂರು ರಾಕೆಟ್‍ಗಳ ದಾಳಿ ನಡೆಸಿದ್ದಾರೆ. ಮೂರರಲ್ಲಿ ಎರಡು ರಾಕೆಟ್‍ಗಳು ರನ್ ವೇ ಮೇಲೆ ಬಿದ್ದು, ಸ್ಫೋಟಗೊಂಡಿವೆ.

ಶನಿವಾರ ರಾತ್ರಿ ವಿಮಾನ ನಿಲ್ದಾಣದ ಮೇಲೆ ಮೂರು ರಾಕೆಟ್‍ಗಳನ್ನು ಹಾರಿಸಲಾಗಿದ್ದು, ಅವುಗಳಲ್ಲಿ ಎರಡು ರಾಕೆಟ್ ರನ್‍ವೇಗೆ ಹೊಡೆದಿದೆ. ಪರಿಣಾಮ ಎಲ್ಲಾ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ ಎಂದು ವಿಮಾನ ನಿಲ್ದಾಣದ ಮುಖ್ಯಸ್ಥ ಮಸೂದ್ ಪಶ್ತುನ್ ತಿಳಿಸಿದ್ದಾರೆ. ಇದೀಗ ರನ್‍ವೇಯನ್ನು ದುರಸ್ತಿ ಮಾಡಿಸುವ ಕೆಲಸ ನಡೆಯುತ್ತಿದ್ದು, ವಿಮಾನಗಳು ಭಾನುವಾರದ ನಂತರ ಕಾರ್ಯನಿರ್ವಹಿಸುವ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.

ತಾಲಿಬಾನ್ ಕೃತ್ಯ ಶಂಕೆ:
ಕಳೆದ ಕೆಲ ದಿನಗಳಿಂದಲೂ ಉಗ್ರರು ಸತತ ದಾಳಿ ನಡೆಸುತ್ತಿದ್ದಾರೆ. ನಗರದ ಸುತ್ತಲೂ ತಾಲಿಬಾನ್, ಹೆರಾತ್, ಲಷ್ಕರ್ ಗಾಹಾ ಸಂಘಟನೆಯಯ ಉಗ್ರರು ಆವರಿಸಿದ್ದು, ಕಂದಹಾರ್ ವಶಕ್ಕೆ ಮುಂದಾಗುತ್ತಿರುವ ಬಗ್ಗೆ ಆತಂಕ ವ್ಯಕ್ತವಾಗಿವೆ. ರಾಕೆಟ್ ದಾಳಿ ಸಹ ತಾಲಿಬಾನ್ ನಡೆಸಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದೆ.

ಕಂದಹಾರ್ ಮೇಲೆ ದಾಳಿ ಏಕೆ?:
ಕಂದಹಾರ್ ಅಫ್ಘಾನಿಸ್ತಾನದ ಎರಡನೇ ಅತಿ ದೊಡ್ಡ ನಗರವಾಗಿದ್ದು, ಇಲ್ಲಿಯ ವಿಮಾನ ನಿಲ್ದಾಣದಿಂದಲೇ ಸೇನೆಗೆ ಸಶಾಸ್ತ್ರಗಳ ಸರಬರಾಜು ಮಾಡಲಾಗುತ್ತದೆ. ಈ ಹಿನ್ನೆಲೆ ಕಂದಹಾರ್ ಮೇಲೆ ದಾಳಿ ನಡೆದಿರುವ ಸಾಧ್ಯತೆಗಳಿವೆ. ಕಂದಹಾರ್ ವಿಮಾನ ನಿಲ್ದಾಣದ ಮೇಲೆಯೇ ಉಗ್ರರು ಕಣ್ಣಿಟ್ಟಿದ್ದು, ಕಳೆದ ಎರಡ್ಮೂರು ವಾರಗಳಿಂದ ಸೇನೆಯ ಮೇಲೆ ನಿರಂತರವಾಗಿ ದಾಳಿ ನಡೆಸಿಕೊಂಡು ಬರುತ್ತಿದ್ದಾರೆ. ಉಗ್ರರ ವಿರುದ್ಧ ಅಫ್ಘಾನಿಸ್ತಾನ ಸೇನೆ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ.

ಅಮೆರಿಕದ ಸಹಾಯ: ಅಫ್ಘಾನಿಸ್ತಾನದ ನ್ಯಾಷನಲ್ ಡಿಫೆನ್ಸ್ ಸೆಕ್ಯುರಿಟಿ ಫೋರ್ಸ್ ಅಮೆರಿಕದ ಸಹಾಯ ಪಡೆದು ಉಗ್ರರು ವಶಕ್ಕೆ ಗ್ರಾಮಗಳನ್ನು ಖಾಲಿ ಮಾಡಿಸುವಲ್ಲಿ ಯಶಸ್ವಿಯಾಗಿದೆ. ಪಾಕಿಸ್ತಾನದ ಬೆಂಬಲದಿಂದ ತಾಲಿಬಾನ್ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿಕೊಂಡಿರುವ ಬಗ್ಗೆ ವರದಿಯಾಗಿದೆ.

ಯುದ್ಧದ ಸ್ಥಿತಿ ನಿರ್ಮಾಣ: ಕಂದಹಾರ್ ನಗರ ಪ್ರವೇಶಿಸಿರುವ ತಾಲಿಬಾನ್ ಉಗ್ರರು ಸೇನೆಯ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ. ಅಫ್ಘಾನಿಸ್ತಾನದಲ್ಲಿ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಾವಿರಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ಹಲವು ಇಲಾಖೆಗಳಲ್ಲಿ ಅಡಗಿ ಕುಳಿತಿದ್ದ ಉಗ್ರರನ್ನು ಸೇನೆ ಹೊಡೆದುರಿಳಿಸಿದ್ದು, ಮೃತರಲ್ಲಿ ಪಾಕಿಸ್ತಾನದ ಅಧಿಕಾರಿಗಳು ಸಹ ಇದ್ದಾರೆ. ಮೃತರ ಬಳಿ ಪಾಕಿಸ್ತಾನದ ಗುರುತಿನ ಚೀಟಿಗಳು ಲಭ್ಯವಾಗಿವೆ.

ತಾಜಾ ಸುದ್ದಿಗಳು