ಮೈಸೂರಿನಲ್ಲಿ ಸಿಮ್ ಬಾಕ್ಸ್ ವಂಚನೆ ಜಾಲ, ಕೇರಳ ವ್ಯಕ್ತಿ ಬಂಧನ

ಮೈಸೂರಿನಲ್ಲಿ ಸಿಮ್ ಬಾಕ್ಸ್ ವಂಚನೆ ಜಾಲ, ಕೇರಳ ವ್ಯಕ್ತಿ ಬಂಧನ

ಮೈಸೂರು: ಮೈಸೂರಿನ ಬಾಡಿಗೆ ಮನೆಯಲ್ಲಿ ಅಕ್ರಮ ಟೆಲಿಫೋನ್ ಎಕ್ಸ್‌ಚೇಂಜ್ ಮೂಲಕ ಐಎಸ್ ಡಿ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ ದೂರಸಂಪರ್ಕ ಇಲಾಖೆಗೆ ವಂಚಿಸುತ್ತಿದ್ದ ಕೇರಳ ಮೂಲದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ನಗರ ಪೊಲೀಸರ ಪ್ರಕಾರ, ಆರೋಪಿ ಶಮೀಮ್ ಸಿಮ್ ಬಾಕ್ಸ್ ಮತ್ತು ವಾಯ್ಸ್ ಓವರ್ ಇಂಟರ್ನೆಟ್ ಪ್ರೊಟೊಕಾಲ್(VoIP)
ತಂತ್ರಜ್ಞಾನವನ್ನು ಬಳಸಿಕೊಂಡು ಅಕ್ರಮವಾಗಿ ಟೆಲಿಫೋನ್ ಎಕ್ಸ್‌ಚೇಂಜ್ ನಡೆಸುತ್ತಿದ್ದನು. ಇದು ಅಂತರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಲು ಸಹಾಯ ಮಾಡುತ್ತಿತ್ತು.

ಈ ವಂಚನೆ ಜಾಲದ ಬಗ್ಗೆ ಸಿಕ್ಕಿ ಖಚಿತ ಮಾಹಿತಿಯ ಆಧಾರದ ಮೇಲೆ, ಸಿಸಿಬಿ ಪೊಲೀಸರು ಆರೋಪಿಗಳ ಮನೆಯ ಮೇಲೆ ದಾಳಿ ಮಾಡಿ, ನಾಲ್ಕು ಸಿಮ್ ಬಾಕ್ಸ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರತಿಯೊಂದೂ ಸಿಮ್ ಬಾಕ್ಸ್ 32 ಪೋರ್ಟ್‌ಗಳನ್ನು ಹೊಂದಿದ್ದು ಹಲವಾರು ಸೆಲ್‌ಫೋನ್‌ಗಳು, ಕಂಪ್ಯೂಟರ್‌ಗಳು, ಸಿಮ್ ಸ್ಲಾಟ್‌ಗಳು ಮತ್ತು ಮೋಡೆಮ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ವಿಚಾರಣೆಯ ಸಮಯದಲ್ಲಿ ಆರೋಪಿಗಳು ತಪ್ಪು ಒಪ್ಪಿಕೊಂಡಿದ್ದು, ಅಂತರರಾಷ್ಟ್ರೀಯ ಕರೆ ದರಗಳನ್ನು ಮತ್ತು ನೆಟ್‌ವರ್ಕ್ ಆಪರೇಟರ್‌ಗಳಿಂದ ವಿಧಿಸಲಾದ ಸುಂಕವನ್ನು ಬೈಪಾಸ್ ಮಾಡಲು ಸ್ಥಳೀಯ ಕರೆಗಳಾಗಿ ಪರಿವರ್ತಿಸಲು 500 ಕ್ಕೂ ಹೆಚ್ಚು ಸಿಮ್‌ಗಳನ್ನು ಬಳಸಲಾಗುತ್ತಿತ್ತು ಎಂದು ಬಹಿರಂಗಪಡಿಸಿದ್ದಾರೆ.

“ಈ ಸೆಟಪ್ ಮೂಲಕ, ಆಪಾದಿತ ವ್ಯಕ್ತಿಯು ಸಿಮ್ ಬಾಕ್ಸ್ ಮತ್ತು VoIP ತಂತ್ರಜ್ಞಾನವನ್ನು ಬಳಸಿ ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರವರ್ತಿಸುತ್ತಿದ್ದರು. ಆ ಮೂಲಕ ಅಂತಾರಾಷ್ಟ್ರೀಯ ದರಗಳನ್ನು ಬೈಪಾಸ್ ಮಾಡುವ ಮೂಲಕ
ಸೇವಾ ಪೂರೈಕೆದಾರರಿಗೆ ನಷ್ಟ ಉಂಟು ಮಾಡುತ್ತಿದ್ದರು. ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ದರಗಳ ನಡುವಿನ ವ್ಯತ್ಯಾಸವನ್ನು ಆಧರಿಸಿ ಅವರು ಹಣ ಗಳಿಸುತ್ತಾರೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಳು