ಮತ್ತೆ ಬೆಟ್ಟ ಕುಸಿಯುವ ಭೀತಿ- ಏಳು ಕುಟುಂಬಗಳ ಸ್ಥಳಾಂತರಕ್ಕೆ ನೋಟಿಸ್

ಮತ್ತೆ ಬೆಟ್ಟ ಕುಸಿಯುವ ಭೀತಿ- ಏಳು ಕುಟುಂಬಗಳ ಸ್ಥಳಾಂತರಕ್ಕೆ ನೋಟಿಸ್

ಮಡಿಕೇರಿ: ಪ್ರಕೃತಿಯ ತವರು ಕೊಡಗಿನಲ್ಲಿ ಮಳೆಗಾಲ ಬಂದರೆ ಇಲ್ಲಿನ ಜನರಿಗೆ ಅತಂಕ ಶುರುವಾಗುತ್ತದೆ. ಅದರಲ್ಲೂ ಗುಡ್ಡಗಾಡು, ನದಿ ಪಾತ್ರದ ಜನ ಭಯದಿಂದ ದಿನ ದೂಡುವ ಪರಿಸ್ಥಿತಿ ನಿರ್ಮಾಣ ಅಗುತ್ತೆ. ಕೊಡಗಿನಲ್ಲಿ ಕಳೆದ 10 ದಿನಗಳಿಂದ ಮಳೆಯ ಅರ್ಭಟ ಮುಂದುವರೆದಿದೆ. ಹೀಗಾಗಿ ಮಡಿಕೇರಿ ತಾಲೂಕಿನ ಮಕ್ಕಂದೂರು ಗ್ರಾಮದ ಜನರಲ್ಲಿ ಮತ್ತೆ ಆತಂಕ ಮೂಡಿದೆ. ಅಲ್ಲದೆ ಸ್ಥಳಾಂತರಗೊಳ್ಳುವಂತೆ 7 ಕುಟುಂಬಗಳಿಗೆ ಗ್ರಾಮ ಪಂಚಾಯಿತಿ ನೋಟಿಸ್ ಸಹ ನೀಡಿದೆ.

2018ರಲ್ಲಿ ಮಾದಾಪುರ-ಮಡಿಕೇರಿ ನಡುವಿನ ಮಕ್ಕಂದೂರುವಿನ ಬಾಲಾಜಿ ತೋಟದ ಬಳಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದ ಪರಿಣಾಮ ಮನೆಗಳು ಸಂಪೂರ್ಣ ನೆಲಕಚ್ಚಿ, ಪ್ರಾಣಿಗಳು ಸಾವನ್ನಪ್ಪಿದ್ದವು. ಇದೀಗ ಅಂದು ಗುಡ್ಡ ಕುಸಿದ ಸ್ಥಳದಲ್ಲಿಯೇ ಮತ್ತೊಮ್ಮೆ ಸಣ್ಣ ಪ್ರಮಾಣದಲ್ಲಿ ಗುಡ್ಡ ಕುಸಿಯುತ್ತಿದ್ದು, ಆತಂಕ ಸೃಷ್ಟಿಸಿದೆ. ಅಷ್ಟೇ ಅಲ್ಲದೆ ಮಕ್ಕಂದೂರು ಸುತ್ತಲಿನ ಪ್ರದೇಶವಾದ ಉದಯಗಿರಿ, ಮೇಘಾತಾಳು, ತಂತಿಪಾಲ ಹಾಗೂ ಹುಲಿತಾಳ ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿ ಸಾಕಷ್ಟು ನಷ್ಟ ಅನುಭವಿಸಿದ ಜನರಿಗೆ ಮತ್ತೆ ಇಲ್ಲಿನ ಉದಯಗಿರಿ ಬೆಟ್ಟ ಕುಸಿಯುವ ಅತಂಕ ಮನೆ ಮಾಡಿದೆ. ವಾರದಿಂದ ಅಗುತ್ತಿರುವ ಮಳೆಯಿಂದ ಈಗಾಗಲೇ ಬೆಟ್ಟ ಪ್ರದೇಶಗಳಲ್ಲಿ ಸಣ್ಣ ಪುಟ್ಟ ಪ್ರಮಾಣದಲ್ಲಿ ಗುಡ್ಡ ಕುಸಿಯಲು ಅರಂಭವಾಗಿದೆ. ಹೀಗಾಗಿ ಈ ಬೆಟ್ಟದ ಕೆಳಭಾಗದಲ್ಲಿ ವಾಸ ಮಾಡುವ 7 ಕುಟುಂಬಗಳ ಮನೆಗೆಗಳಲ್ಲಿ ಆತಂಕ ಮನೆ ಮಾಡಿದೆ.

ಈ ಪ್ರದೇಶದಲ್ಲಿ ವಾಸ ಮಾಡುವ ಜನರು ತಮ್ಮನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಆಗ್ರಹ ಮಾಡುತ್ತಿದ್ದಾರೆ. ಸುತ್ತಲೂ ಬೆಟ್ಟ ಇರುವ ಹಿನ್ನಲೆಯಲ್ಲಿ 2018 ರಲ್ಲೂ ಪಕ್ಕದ ಬೆಟ್ಟ ಕುಸಿದಿದ್ದು, ಬಾಬು ಎಂಬುವರು ಇದೇ ಬೆಟ್ಟಸ ಕೆಳಗೆ ಸಿಲುಕಿ ಸಾವನ್ನಪ್ಪಿದ್ದರು. 2018ರಲ್ಲಿ ಬೆಟ್ಟ ಕುಸಿದು ಈ ಭಾಗದ ಮನೆಗಳ ಬಳಿ ಕೃತಕವಾಗಿ ಕೆರೆ ನಿರ್ಮಾಣವಾಗಿದೆ. ಹೀಗಾಗಿ ಬೆಟ್ಟದಲ್ಲಿ ತೇವಾಂಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗೆ ಮಳೆ ಮುಂದುವರಿದಲ್ಲಿ ಬೆಟ್ಟ ಕುಸಿಯುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಇಲ್ಲಿನ ನಿವಾಸಿಗಳು ತಕ್ಷಣ ಸ್ಥಳಾಂತರಿಸುವಂತೆ ಮನವಿ ಮಾಡುತ್ತಿದ್ದಾರೆ. ಈ ಸೂಕ್ಷ್ಮತೆಗಳನ್ನು ಪರಿಶೀಲನೆ ಮಾಡಿದ ಮಕ್ಕಂದೂರು ಗ್ರಾಮ ಪಂಚಾಯತಿ ಈಗಾಗಲೇ ಏಳು ಕುಟುಂಬಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮಾನವಿ ಮಾಡಿದ್ದಾರೆ.

ಈ ಜನರ ಸಮಸ್ಯೆಗಳನ್ನು ಅಲಿಸಲು ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷ ರವಿಕುಶಾಲಪ್ಪ ಅವರು ಸ್ಥಳಕ್ಕೆ ಅಗಮಿಸಿ ಬೆಟ್ಟ ಪ್ರದೇಶದ ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಬೃಹತ್ ಪ್ರಮಾಣದಲ್ಲಿ ಬೆಟ್ಟ ಕುಸಿಯುವ ಸೂಚನೆ ಇದ್ದು, ಈಗಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಜನರನ್ನು ಸ್ಥಳಾಂತರ ಮಾಡದಿದ್ದರೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾದ್ಯತೆ ಇದೆ.

ತಾಜಾ ಸುದ್ದಿಗಳು