ಕೊಡಗಿನಲ್ಲಿ ಭಾರೀ ಮಳೆ- ಜಲಧಾರೆಗಳ ವಯ್ಯಾರ

ಕೊಡಗಿನಲ್ಲಿ ಭಾರೀ ಮಳೆ- ಜಲಧಾರೆಗಳ ವಯ್ಯಾರ

ಮಡಿಕೇರಿ: ಕೊಡಗು ಎಂದರೆ ನೆನಪಾಗುವುದು ಹಚ್ಚ ಹಸಿರಿನ ವನರಾಶಿ. ಭೂಮಿಗೆ ಮುತ್ತಿಡುವ ಮಂಜು, ಸದಾ ನೀರಿನಿಂದ ಭೋರ್ಗರೆಯುವ ಜಲಪಾತಗಳು. ಅದರಲ್ಲೂ ಮಳೆಗಾಲ ಶುರುವಾದರೆ ಸಾಕು, ಗಿರಿಕಾನನದ ಮಧ್ಯೆ ಧುಮ್ಮಿಕ್ಕುವ ಜಲಧಾರೆಗಳ ವಯ್ಯಾರವನ್ನು ನೋಡುವುದೇ ಚೆಂದ. ನೈಜ ಸೌಂದರ್ಯದ ಕೊಡಗಿನಲ್ಲೀಗ ಜಲಸುಂದರಿಯರದ್ದೇ ದರ್ಬಾರ್ ಶುರುವಾಗಿದೆ.

ಕೊಡಗು ಪ್ರವಾಸಿಗರ ಸ್ವರ್ಗ. ಹಸಿರನಾಡು ಕೊಡಗಿನ ಅಬ್ಬಿ ಜಲಪಾತದ ವೈಭವ ದೃಶ್ಯ ಕಾವ್ಯದ ವಿಹಂಗಮ ನೋಟ ಎಲ್ಲರ ಕಣ್ಮನ ಸೆಳೆಯುತ್ತದೆ. ಕೈಗೆಟುಕುವಷ್ಟು ಹತ್ತಿರದಲ್ಲಿ ಸಾಗುವ ಮೋಡಗಳೊಂದಿಗೆ ಚೆಲ್ಲಾಟವಾಡುತ್ತ, ಚುಮು ಚುಮು ಚಳಿಯನ್ನು ಎಂಜಾಯ್ ಮಾಡುತ್ತಾರೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ನೀರಿಲ್ಲದೇ ಬಣಗುಡುವ ಅಬ್ಬಿ ಫಾಲ್ಸ್ ಮಳೆಗಾಲದಲ್ಲಿ ತನ್ನ ನೈಜ ಸೌಂದರ್ಯವನ್ನು ತೆರೆದುಕೊಂಡು ಪ್ರವಾಸಿಗರ ಹಾಟ್ ಸ್ಪಾಟ್ ಆಗಿ ಬದಲಾಗುತ್ತಿದೆ. 80 ಅಡಿ ಎತ್ತರದಿಂದ ಹಾಲ್ನೊರೆಯಂತೆ ಹರಿಯುವ ಜಲಪಾತವನ್ನು ನೋಡುತ್ತಾ ನಿಂತರೆ ಸ್ವರ್ಗವೇ ಧರೆಗೆ ಇಳಿದಂತೆ ಕಾಣುತ್ತಿದೆ.

ಜಲಧಾರೆಯ ಮೋಹಕ ಸೆಳೆತ ಒಂದೆಡೆಯಾದರೆ, ಮಂಜಿನ ಸ್ಪರ್ಶ, ಮೈಗೆ ಸೋಕುವ ತಂಗಾಳಿ ಮನಸ್ಸಿಗೆ ಹಿತ ನೀಡುತ್ತದೆ. ಮಡಿಕೇರಿಯಿಂದ ಕೇವಲ 8 ಕಿ.ಮೀ. ದೂರದಲ್ಲಿರುವ ಅಬ್ಬಿ ಜಲಪಾತ ಮಳೆಗಾಲದಲ್ಲಿ ಹೆಚ್ಚು ಸುಂದರವಾಗಿ ಕಾಣುತ್ತೆ. ಅದಕ್ಕಾಗಿಯೇ ವೀಕೆಂಡ್‍ಗಳಲ್ಲಿ ಜಲಪಾತ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಕಪ್ಪು ಕಲ್ಲುಗಳ ನಡುವೆ ಶ್ವೇತಧಾರೆಯಾಗಿ ಧರೆಗಿಳಿಯುವ ಜಲಪಾತದ ದೃಶ್ಯವನ್ನು ಸೆರೆಹಿಡಿಯುವ ಪ್ರವಾಸಿಗರು ತಮ್ಮ ಪ್ರವಾಸದ ನೆನಪುಗಳನ್ನು ಹಸಿರಾಗಿಡಲು ಹಂಬಲಿಸುತ್ತಾರೆ.

ಮಳೆಗಾಲ ಬಂದರೆ ಸಾಕು ಕೊಡಗಿನ ಪ್ರತೀ ಬೆಟ್ಟಗುಡ್ಡದ ತಪ್ಪಲಿನಲ್ಲೂ ಜಲಕನ್ಯೆಯರು ಮೈದಳೆದು ವೈಯ್ಯಾರ ತೋರುತ್ತಾರೆ. ಜಿಲ್ಲೆಯಲ್ಲಿ ಸುರಿಯುವ ಜಿಟಿಜಿಟಿ ಮಳೆಯಲ್ಲಿ ಹಸಿರನ್ನೇ ಹೊದ್ದು ಮಲಗಿದ ಪರಿದಲ್ಲಿ ಹಾಲ್ನೊರೆಯಂತೆ ಹರಿಯುವ ಜಲಪಾತಗಳನ್ನು ನೋಡಲು ಎರಡು ಕಣ್ಣುಗಳು ಸಾಲದು. ನಿಧಾನವಾಗಿ ಹರಿಯುವ ಸೋಮವಾರಪೇಟೆ ತಾಲೂಕಿನ ಮೇದೂರ ಜಲಪಾತ. ರಭಸವಾಗಿ ಮೇಲಿಂದ ಜಿಗಿದು, ವೇಗವಾಗಿ ಹರಿಯುವ ಅಬ್ಬಿಕೊಲ್ಲಿ ಜಲಪಾತ. ಹಾಲ್ನೊರೆಯಂತೆ ಹರಿಯುವ ನೀರಿನಿಂದ ಮಂಜಿನ ಹನಿಗಳ ರಾಶಿಯನ್ನು ಹೊಮ್ಮಿ ಮುಖಕ್ಕೆ ಸಿಂಚನ ಮಾಡುವ ಮಡಿಕೇರಿ ಸಮೀಪದ ಅಬ್ಬಿ ಜಲಪಾತ. ಅಷ್ಟೇ ಏಕೆ ಅರ್ಧಚಂದ್ರಾಕೃತಿಯಲ್ಲಿ ನಿಮ್ಮನ್ನು ಚಿತ್ತಾಕರ್ಷಕಗೊಳಿಸುವ ಕುಶಾಲನಗರ ತಾಲೂಕಿನ ಮಿನಿ ನಯಾಗರವೆಂದೇ ಪ್ರಸಿದ್ಧಿಯಾಗಿರುವ ಚಿಕ್ಲಿಹೊಳೆ ಜಲಾಶಯ. ಅಬ್ಬಾ ಒಂದಾ ಎರಡ ಇಂತಹ ಹತ್ತಾರು ಜಲಾಶಯಗಳು ನಿಮ್ಮನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ.

ಒಟ್ನಲ್ಲಿ ಮಳೆಗಾಲದಲ್ಲಿ ನೋಡುಗರ ಮನಸೂರೆಗೊಳ್ಳುವ ಜಲಪಾತಗಳು, ಕೊಡಗಿನಲ್ಲಿ ಮಳೆ ಬಂದರೆ ಸಾಕು, ಮೇಲಿನಿಂದ ಧುಮ್ಮಿಕ್ಕಿ ತನ್ನ ಸೌಂದರ್ಯವನ್ನು ಬಿಚ್ಚಿಡುತ್ತವೆ. ಮಳೆಯ ರಭಸ ಹೆಚ್ಚಿದಂತೆಲ್ಲ ಹಾಲಿನ ನೊರೆಯಂತೆ ಬಂಡೆಗಳ ನಡುವೆ ರಭಸದಿಂದ ಹರಿದು ಪ್ರವಾಸಿಗರ ಗಮನ ಸೆಳೆಯುತ್ತಿವೆ.

ತಾಜಾ ಸುದ್ದಿಗಳು