ಮದುವೆಯಾಗುವುದಾಗಿ ನಂಬಿಸಿ ಬಾಲಕಿಯ ಮೇಲೆ ಅತ್ಯಾಚಾರ- ಆರೋಪಿ ಬಂಧನ

ಮದುವೆಯಾಗುವುದಾಗಿ ನಂಬಿಸಿ ಬಾಲಕಿಯ ಮೇಲೆ ಅತ್ಯಾಚಾರ- ಆರೋಪಿ ಬಂಧನ

ಮಂಡ್ಯ: ಎದುರು ಮನೆಯ ಯುವಕ 15 ವರ್ಷದ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿ ಬಳಿಕ ಗರ್ಭವತಿ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಗ್ರಾಮವೊಂದರಲ್ಲಿ ಜರುಗಿದೆ.

ಕೆಆರ್‍ಪೇಟೆಯ ಗ್ರಾಮವೊಂದರ ನಿವಾಸಿ ಲಕ್ಷ್ಮಣ ಎಂಬಾತನೇ ಬಾಲಕಿಯನ್ನು ಅತ್ಯಾಚಾರ ಮಾಡಿರುವ ಯುವಕ. ಲಕ್ಷ್ಮಣ ಆಟೋ ಓಡಿಸಿಕೊಂಡು ಜೀವನ ಮಾಡುತ್ತಿದ್ದು, ಈ ವೇಳೆ ಎದುರು ಮನೆಯ ಬಾಲಕಿಯನ್ನು ಪ್ರೇಮಿಸುವಂತೆ ನಿವೇದನೆ ಇಟ್ಟಿದ್ದಾನೆ. ಹಲವು ದಿನಗಳ ಬಳಿಕ ಬಾಲಕಿ ಪ್ರೀತಿಸುವುದಾಗಿ ಒಪ್ಪಿಗೆ ಸೂಚಿಸುತ್ತಾಳೆ.

ಇದಾದ ಬಳಿಕ ಬಾಲಕಿಗೆ ಮದುವೆಯಾಗುವುದಾಗಿ ನಂಬಿಸಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ನಂತರ ಮನೆಯವರಿಗೆ ವಿಷಯ ತಿಳಿಸಿದರೆ ಕೊಲೆ ಮಾಡಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದಾದ ಬಳಿಕ ಬಾಲಕಿಗೆ ವಾಂತಿ ಹಾಗೂ ಹೊಟ್ಟೆ ನೋವು ಕಾಣಿಸಿಕೊಂಡಿದೆ.

ಬಾಲಕಿಯ ಪೋಷಕರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ವೈದ್ಯರು ಬಾಲಕಿಗೆ ಸ್ಕ್ಯಾನಿಂಗ್ ಮಾಡಿದ್ದಾರೆ. ಆಗ ಬಾಲಕಿ ನಾಲ್ಕು ತಿಂಗಳ ಗರ್ಭಿಣಿ ಎಂದು ವೈದ್ಯರು ತಿಳಿಸಿದ್ದಾರೆ.

ಇತ್ತ ಬಾಲಕಿಯನ್ನು ಪೋಷಕರು ಕೇಳಿದಾಗ ಲಕ್ಷ್ಮಣ ಅತ್ಯಾಚಾರ ಮಾಡಿರುವುದಾಗಿ ಸತ್ಯ ಬಾಯ್ಬಿಟ್ಟಿದ್ದಾಳೆ. ಹೀಗಾಗಿ ಕೂಡಲೇ ಪೋಷಕರು ಕೆಆರ್‍ಪೇಟೆ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡು ಲಕ್ಷ್ಮಣನನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಳು