ಸಲಗದ ತಿವಿತಕ್ಕೆ ಹಸು ಬಲಿ

ಸಲಗದ ತಿವಿತಕ್ಕೆ ಹಸು ಬಲಿ

ಮಡಿಕೇರಿ: ಒಂಟಿಸಲಗವೊಂದು ಹಸುವಿಗೆ ಕೊರೆಯಿಂದ ತಿವಿದು ಗಂಭೀರ ಸ್ವರೂಪದ ಗಾಯಗೊಳಿಸಿದ್ದು ಚಿಕಿತ್ಸೆ ಸ್ಪಂದಿಸದೆ ಹಸು ಸಾವನಪ್ಪ್ಪಿದ ಘಟನೆ ನಡೆದಿದೆ.
ತ್ಯಾಗತ್ತೂರು ಗ್ರಾಮದ ಕೃಷಿಕ ಬಿ.ಎಂ.ಕೃಷ್ಣಪ್ಪ ಎಂಬವರು ಮಂಗಳವಾರ ಬೆಳಿಗ್ಗೆ ತಮಗೆ ಸೇರಿದ ಹಾಲು ಕೊಡುವ ಹಸುವನ್ನು ಗದ್ದೆಯಲ್ಲಿ ಮೇಯಲು ಕಟ್ಟಿ ಹಾಕಿ ಮನೆಗೆ ಬರುವಷ್ಟರಲ್ಲಿ ಧೀಡಿರನೆ ಕಾಡಾನೆಯೊಂದು ಅವರನ್ನು ಅಟ್ಟಿಸಿಕೊಂಡು ಬಂದಿದ್ದು, ಆಗ ಅವರು ಬೆದರಿ ಓಡಿ ಮನೆಯನ್ನು ಸೇರಿಕೊಂಡರು. ಆಕ್ರೋಶಗೊಂಡ ಒಂಟಿ ಸಲಗ ಗದ್ದೆಯಲ್ಲಿ ಮೇಯಲು ಕಟ್ಟಿಹಾಕಿದ್ದ ಹಸುವಿನ ಮೇಲೆ ಎರಗಿ ಕೊರೆಯಿಂದ ಹಸುವಿನ ಹೊಟ್ಟೆಗೆ ತಿವಿದಿದೆ ಪರಿಣಾಮ ಹಸಿವಿನ ಹೊಟ್ಟೆಯ ಕರಳು ಹೊರಬಂದು ಮೂಳೆಗಳು ಜಖಂಗೊಂಡಿದ್ದು ಗ್ರಾಮಸ್ಥರಾದ ಮುಂಡರಮನೆ ಸುಧೀಶ್ ಹಾಗೂ ಸಂಗಡಿಗರು ಹಸುವನ್ನು ಹೊತ್ತು ತಂದು ಕೊಟ್ಟಿಗೆಗೆ ಹಾಕಿ ಪಶುವೈದ್ಯಕೀಯ ಇಲಾಖೆ ವೈದ್ಯಾಧಿಕಾರಿಗಳನ್ನು ವಿಷಯ ತಿಳಿಸಿ ಕರೆಸಲಾಯಿತು. ವೈದ್ಯರು ಬಂದು ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೆ ಹಸು ಸಾವನಪ್ಪಿದೆ.
ತ್ಯಾಗತ್ತೂರು ಗ್ರಾಮದಲ್ಲಿ ನಿರಂತರ ಕಾಡಾನೆ ಹಾವಳಿ ಹೆಚ್ಚಾಗಿದ್ದು ಓರ್ವ ಕಾರ್ಮಿಕನನ್ನು ಬಲಿಪಡೆದುಕೊಂಡಿದೆ. ಮತ್ತೊಬ್ಬ ಕಾರ್ಮಿಕನಿಗೆ ತುಳಿದು ಗಾಯಗೊಳಿಸಿದೆ. ಗ್ರಾಮಸ್ಥರ ಕೃಷಿಫಸಲುಗಳನ್ನು ಕಾಡಾನೆ ತಿಂದು ತುಳಿದು ನಾಶಪಡಿಸುತ್ತಿವೆ. ಅದರಲ್ಲೂ ಈ ಒಂಟಿ ಸಲಗದ ಹಾವಳಿ ವಿಪರೀತವಾಗಿದೆ ಅರಣ್ಯ ಇಲಾಖೆಯವರು ಕಾಡಾನೆಯನ್ನು ಹಿಡಿಯಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಭಾಗದಲ್ಲಿ ಕಳಪೆ ರೀತಿಯಲ್ಲಿ ಸೋಲಾರ್ ಬೇಲಿ ಅಳವಡಿಸಿದ್ದರಿಂದ ಕಾಡಾನೆಗಳು ನಾಡಿಗೆ ನುಗ್ಗುತ್ತಿವೆ. ಸೋಲಾರ್ ಬೇಲಿಯ ಕಾಮಗಾರಿಯು ಅರ್ಧದಲ್ಲೇ ನಿಂತಿದೆ ಕಾಡಾನೆ ನಾಡಿಗೆ ಬಾರದಂತೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರಾದ ಸುಧೀಶ್ ಒತ್ತಾಯಿಸಿದ್ದಾರೆ.
ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಸದಸ್ಯ ದೂರವಾಣಿ ಮೂಲಕ ಕರೆಮಾಡಿದ ಮೇರೆಗೆ ಅರಣ್ಯ ಇಲಾಖೆ ವನಪಾಲಕ ಸುಬ್ರಾಯ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಕಾಡಾನೆ ದಾಳಿಯಿಂದ ಹಸು ಸಾವನ್ನಾಪ್ಪಿದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ನೀಡುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳು