ಬೆಂಗಳೂರಿನಲ್ಲಿ ಧಾರಾಕಾರ ಮಳೆ – ಕರ್ನಾಟಕದಲ್ಲಿ ಮೂರು ದಿನ ಯೆಲ್ಲೋ ಅಲರ್ಟ್

ಬೆಂಗಳೂರಿನಲ್ಲಿ ಧಾರಾಕಾರ ಮಳೆ – ಕರ್ನಾಟಕದಲ್ಲಿ ಮೂರು ದಿನ ಯೆಲ್ಲೋ ಅಲರ್ಟ್

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವರುಣರಾಯ ತಂಪರೆದಿದ್ದಾನೆ. ಮುಂದಿನ ಮೂರು ದಿನ ವ್ಯಾಪಕ ಮಳೆಯಾಗುವ ಹಿನ್ನೆಲೆ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಬೆಂಗಳೂರಿನಲ್ಲಿ ಇಂದು ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಮಧ್ಯಾಹ್ನದ ವೇಳೆಗೆ ಬೆಂಗಳೂರಿನ ಮಲ್ಲೇಶ್ವರಂ, ವಸಂತನಗರ, ಶೇಷಾದ್ರಿಪುರಂ, ವೈಯಾಲಿಕಾವಲ್, ಕೋದಂಡ ರಾಂಪುರದಲ್ಲಿ ಭಾರೀ ಮಳೆಯಾಗಿದೆ. ನೆಹರು ಸರ್ಕಲ್ ಸೇರಿದಂತೆ ಮೆಜೆಸ್ಟಿಕ್ ಸುತ್ತಮುತ್ತಿನ ರಸ್ತೆಗಳು ಕೆರೆಗಳಾಗಿ ಬದಲಾದವು. ಬೆಂಗಳೂರಿನಲ್ಲಿ ಎರಡು ದಿನ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿವೆ.

ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ. ಜೂನ್ 3ರಿಂದ 5ರವರೆಗೆ ಈ ಭಾಗಗಳಲ್ಲಿ ವ್ಯಾಪಕ ಮಳೆಯಾಗುವ ಹಿನ್ನೆಲೆ ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ. ಉತ್ತರ ಒಳನಾಡಿನ ಬಹುತೇಕ ಎಲ್ಲಾ ಪ್ರದೇಶಗಳಲ್ಲಿ 3 ದಿನ ಭಾರಿ ಮಳೆಯಾಗುವ ಸಾಧ್ಯತೆ. ಶಿವಮೊಗ್ಗ, ಚಿತ್ರದುರ್ಗ, ಹಾಸನ, ಕೊಡಗು, ಚಾಮರಾಜನಗರ, ಬೆಳಗಾವಿ, ಧಾರವಾಡ, ಬಾಗಲಕೋಟೆ, ವಿಜಯಪುರದಲ್ಲಿಯೂ ಮಳೆ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ್ ಮಾಹಿತಿ ನೀಡಿದ್ದಾರೆ.

ಹಾಸನ ನಗರ ಹಲವೆಡೆ ಸಾಧಾರಣ ಮಳೆಯಾಗಿದ್ದು, ನಿನ್ನೆ ರಾತ್ರಿ ಚನ್ನರಾಯಪಟ್ಟಣ ತಾಲ್ಲೂಕಿನ ಹಲವೆಡೆ ಉತ್ತಮ ಮಳೆಯಾಗಿತ್ತು. ರಾಯಚೂರು, ಕೊಪ್ಪಳ, ವಿಜಯಪುರ, ಬಾಗಲಕೋಟೆಯಲ್ಲಿ ನಿನ್ನೆ ರಾತ್ರಿಯಿಂದಲೇ ಮಳೆಯಾಗುತ್ತಿದೆ.
ಎರಡು ದಿನಗಳು ತಡವಾದರೂ ಅಂತಿಮವಾಗಿ ನೈಋತ್ಯ ಮಾನ್ಸೂನ್ ಮಾರುತಗಳು ಕೇರಳ ಪ್ರವೇಶಿಸಿವೆ. ಕೇರಳದ ದಕ್ಷಿಣ ಭಾಗಗಳಿಗೆ ನೈಋತ್ಯ ಮಾನ್ಸೂನ್ ಪ್ರವೇಶಿಸಿವೆ. ಈ ಕುರಿತು ಭಾರತೀಯ ಹವಾಮಾನ ಇಲಾಖೆಯ ಪ್ರಧಾನ ನಿರ್ದೇಶಕ ಮೃತ್ಯುಂಜಯ ಮೋಹಪಾತ್ರ ಮಾಹಿತಿ ನೀಡಿದ್ದು, ಸಾಮಾನ್ಯವಾಗಿ ಜೂನ್ 1ರಂದೇ ನೈಋತ್ಯ ಮಾನ್ಸೂನ್ ಮಾರುತಗಳು ಕೇರಳ ಪ್ರವೇಶಿಸುತ್ತಿದ್ದವು. ಆದರೆ ಈ ವರ್ಷ 2 ದಿನಗಳ ಕಾಲ ತಡವಾಗಿದೆ. ಕೇರಳ ಪ್ರವೇಶಿಸಿರುವ ಮಾನ್ಸೂನ್ ಮಾರುತಗಳು ಭಾರತದಲ್ಲಿ ಬಾಲ್ಕು ತಿಂಗಳ ಕಾಲ ಸುಧೀರ್ಘ ಮಳೆಗಾಲದ ಆರಂಭವನ್ನು ಸೂಚಿಸುತ್ತವೆ ಎಂದು ಹೇಳಿದ್ದಾರೆ.

ಅರಬ್ಬಿ ಸಮುದ್ರ ದಕ್ಷಿಣ ಭಾಗ, ಲಕ್ಷದ್ವೀಪ ಪ್ರದೇಶ, ದಕ್ಷಿಣ ಕೇರಳ, ದಕ್ಷಿಣ ತಮಿಳುನಾಡು, ಕೊಮೊರಿನ್- ಮಾಲ್ಡೀವ್ಸ್ ನ ಕೆಲ ಭಾಗಗಳು ಹಾಗೂ ಬಂಗಾಳಕೊಲ್ಲಿಯ ನೈಋತ್ಯ ಭಾಗಗಳಲ್ಲಿ ಇಂದು ಮಳೆಯಾಗಲಿದೆ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಳು