ಆಸ್ತಿಗಾಗಿ ಅಣ್ಣನನ್ನೇ ಕೊಂದ ತಮ್ಮ

ಆಸ್ತಿಗಾಗಿ ಅಣ್ಣನನ್ನೇ ಕೊಂದ ತಮ್ಮ

ಮಂಡ್ಯ: ಆಸ್ತಿ ವಿಚಾರಕ್ಕೆ ತಮ್ಮನೇ ಅಣ್ಣನನ್ನು ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದಲ್ಲಿ ಜರುಗಿದೆ.

ಅರಳಕುಪ್ಪೆ ಗ್ರಾಮದ ಬಾಲಕೃಷ್ಣ (54) ಮೃತ ದುರ್ದೈವಿ ಅಣ್ಣನಾಗಿದ್ದು, ಸುರೇಶ್ ಕೊಲೆ ಮಾಡಿದ ತಮ್ಮನಾಗಿದ್ದಾನೆ. ಕೊಲೆಯಾದ ಬಾಲಕೃಷ್ಣ ಮೈಸೂರಿನಲ್ಲಿ ವಾಸ ಮಾಡುತ್ತಿದ್ದು, ಲಾಕ್‍ಡೌನ್ ಆಗಿರುವ ಕಾರಣ ಅರಳಕುಪ್ಪೆ ಗ್ರಾಮಕ್ಕೆ ಬಂದಿದ್ದರು. ಜಮೀನು ವಿಚಾರದಲ್ಲಿ ಬಾಲಕೃಷ್ಣ ಹಾಗೂ ಸುರೇಶ್ ನಡುವೆ ಈ ಹಿಂದೆ ಜಗಳವಾಗಿತ್ತು. ಹೀಗಾಗಿ ಒಂದೇ ಮನೆಯ ಮಧ್ಯೆ ಗೋಡೆ ಹಾಕಿಕೊಂಡು ಬೇರೆ ಬೇರೆ ವಾಸ ಮಾಡುತ್ತಿದ್ದರು.

ಇದಾದ ಬಳಿಕವೂ ಇಬ್ಬರ ನಡುವೆ ಜಮೀನಿನ ವಿಚಾರಕ್ಕೆ ಗಲಾಟೆಯಾಗುತ್ತಿತ್ತು. ನಿನ್ನೆ ರಾತ್ರಿ ಇಬ್ಬರ ನಡುವೆ ಜಗಳ ವಿಕೋಪಕ್ಕೆ ತಿರುಗಿತ್ತು. ಈ ವೇಳೆ ಸುರೇಶ್ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಈ ಜಗಳ ಬಿಡಿಸಲು ಬಂದ ಅತ್ತಿಗೆ ಸರಳ ಕೂಡ ಗಾಯಗೊಂಡಿದ್ದಾರೆ.

ಗಂಭೀರವಾಗಿ ಗಾಯಗೊಂಡ ಬಾಲಕೃಷ್ಣ ಸ್ಥಳದಲ್ಲೆ ಸಾವನ್ನಪ್ಪಿದ್ದು, ಸರಳ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ಆರೋಪಿ ಸುರೇಶ್‍ನನ್ನು ಬಂಧಿಸಿದ್ದು, ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಳು