ಮೇ 24ರ ನಂತರವೂ ಕರ್ನಾಟಕದಲ್ಲಿ ಲಾಕ್‍ಡೌನ್ ಮುಂದುವರಿಕೆ?

ಮೇ 24ರ ನಂತರವೂ ಕರ್ನಾಟಕದಲ್ಲಿ ಲಾಕ್‍ಡೌನ್ ಮುಂದುವರಿಕೆ?

– ಕೊರೊನಾ ನಿಯಂತ್ರಣಕ್ಕಾಗಿ ಲಾಕ್‍ಡೌನ್ ಮುಂದುವರಿಸಿ
– ಸರ್ಕಾರಕ್ಕೆ ತಜ್ಞರ ಸಲಹೆ
ಬೆಂಗಳೂರು:
ರಾಜ್ಯದಲ್ಲಿ ಘೋಷಣೆ ಆಗಿರುವ ಲಾಕ್‍ಡೌನ್ ಮೇ 24ರ ನಂತರವೂ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ. ರಾಜ್ಯದಲ್ಲಿ ಇವತ್ತು 41 ಸಾವಿರ ಕೇಸ್, 373 ಮಂದಿ ಮೃತಪಟ್ಟಿದ್ದಾರೆ. ಜೊತೆಗೆ, 5.98 ಲಕ್ಷ ಸಕ್ರಿಯ ಕೇಸ್‍ಗಳೊಂದಿಗೆ ದೇಶದಲ್ಲೇ ಕರ್ನಾಟಕ ನಂಬರ್ 1 ಆಗಿದೆ.

ಶೇಕಡವಾರು ಪ್ರಮಾಣದಲ್ಲಿ ಭಾರತದ್ದು 20.80ರಷ್ಟಿದೆ. ಇದರ ಲೆಕ್ಕಾಚಾರದಂತೆ ದೇಶದ ಪ್ರತಿ ಐವರಲ್ಲಿ ಒಬ್ಬರಿಗೆ ಸೋಂಕು ದೃಢವಾಗಿದೆ. ರಾಜ್ಯದಲ್ಲಿ ಸದ್ಯಕ್ಕೆ 32.86% ಪಾಸಿಟೀವ್ ರೇಟ್ ಇದೆ. 10 ಜನರ ಪೈಕಿ ಮೂವರಿಗೆ ಸೋಂಕು ತಗಲ್ತಿದೆ. 31 ಜಿಲ್ಲೆಗಳ ಪೈಕಿ 29 ಜಿಲ್ಲೆಗಳಲ್ಲಿ 10%ಕ್ಕಿಂತಲೂ ಹೆಚ್ಚಿನ ಪಾಸಿಟಿವಿಟಿ ರೇಟ್ ಇರೋ ಕಾರಣ, ಮತ್ತಷ್ಟು ಸಾವು-ನೋವು ಸಂಭವಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತೆಯೇ ಇಲ್ಲ. ಹಾಗಾಗಿ, ಸೋಂಕಿನ ಪ್ರಮಾಣ ಕಡಿಮೆ ಆಗಲೇಬೇಕಾದರೆ ಲಾಕ್‍ಡೌನ್ ಮುಂದುವರಿಸುವ ಅನಿವಾರ್ಯತೆ ಇದೆ.

ಬೆಂಗಳೂರಿನಲ್ಲಿ ಕೇಸ್‍ಗಳು ಕಡಿಮೆ ಆಗ್ತಿದ್ದರೂ ಹಳ್ಳಿಗೆ ಬೆಂಗಳೂರಿಂದ ಸೋಂಕು ಹಬ್ಬಿದೆ. ಕರ್ನಾಟಕ ಸೇಫ್ ಆಗಬೇಕು. 3ನೇ ಅಲೆ ಮಾರಕ ಆಗೋದನ್ನು ತಪ್ಪಿಸಬೇಕು ಅನ್ನೋದಾದ್ರೆ. ಸದ್ಯ ಇರುವ 32.86% ಪಾಸಿಟೀವ್ ರೇಟ್ ಅನ್ನು 5%ಕ್ಕೆ ಇಳಿಸಲೇಬೇಕು. ಇದಕ್ಕಾಗಿ, ಕನಿಷ್ಠ ಮೇ ಅಂತ್ಯದವರೆಗೂ ಲಾಕ್‍ಡೌನ್ ಮುಂದುವರಿಸಬೇಕು ಅಂತ ತಜ್ಞರು ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದ್ದಾರೆ. ಹೀಗಾಗಿ ಮುಂದಿನ ವಾರದಲ್ಲಿ ನಡೆಯಲಿರುವ ಸಂಪುಟ ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ.

ಕಂದಾಯ ಸಚಿವ ಅಶೋಕ್ ಮಾತಾಡಿ, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಲಾಕ್‍ಡೌನ್ ವಿಸ್ತರಣೆ ಅವಶ್ಯಕತೆ ಇದೆ. ಲಾಕ್‍ಡೌನ್ ವಿಸ್ತರಣೆ ಬೇಕು ಅಂತ ಸಿಎಂಗೆ ಮನವರಿಕೆ ಮಾಡ್ತೀವಿ ಅಂತ ಹೇಳಿದ್ದಾರೆ. ಇದಕ್ಕೆ, ಸಹಕಾರ ಸಚಿವ ಸೋಮಶೇಖರ್ ಕೂಡ ದನಿಗೂಡಿಸಿದ್ದಾರೆ. ಹೀಗಾಗಿ, ಲಾಕ್‍ಡೌನ್ ವಿಸ್ತರಣೆ ಪಕ್ಕಾ ಅಂತ ಹೇಳಲಾಗ್ತಿದೆ.

ರಾಜ್ಯದಲ್ಲಿ ಸದ್ಯದ ಪರಿಸ್ಥಿತಿ, ಸೋಂಕಿನ ದತ್ತಾಂಶಗಳನ್ನ ಗಮನಿಸಿದ್ರೆ ಲಾಕ್‍ಡೌನ್ ವಿಸ್ತರಣೆ ಅಗತ್ಯ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗ್ತಿದೆ. ಇದರ ಜೊತೆಗೆ, ಹಾಟ್‍ಸ್ಪಾಟ್ ಬೆಂಗಳೂರಲ್ಲಿ ಮುಂಬೈ ಮಾದರಿ ಕೊರೋನಾ ಕಂಟ್ರೋಲ್‍ಗೆ ಬರಬೇಕಾದರೆ ಲಾಕ್‍ಡೌನ್ ಮುಂದುವರಿಸಲೇಬೇಕಿದೆ. ಬೆಂಗಳೂರು ಹಿತದೃಷ್ಟಿಯಿಂದ ಬಿಬಿಎಂಪಿ ಕೂಡ ಸರ್ಕಾರಕ್ಕೆ ಮತ್ತಷ್ಟು ಬಿಗಿ ಕ್ರಮಕ್ಕೆ ಶಿಫಾರಸು ಮಾಡಲಿದೆ ಅಂತ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಕೂಡ ಹೇಳಿದ್ದಾರೆ.

ಲಾಕ್‍ಡೌನ್ ವಿಸ್ತರಣೆ ಯಾಕೆ?
– ತಿಂಗಳ ಅಂತ್ಯದವರೆಗೂ ಲಾಕ್‍ಡೌನ್ ವಿಸ್ತರಿಸಿದ್ರೆ ಸೋಂಕಿನ ಪ್ರಮಾಣ ಇಳಿಕೆ ಆಗಬಹುದು
– ಮೇ 3ನೇ ಅಥವಾ 4ನೇ ವಾರದಿಂದ ಸೋಂಕಿನ ಅಲೆ ಕಡಿಮೆ ಆಗಬಹುದು
– ಈ ಹೊತ್ತಲ್ಲಿ, ಲಾಕ್‍ಡೌನ್ ವಿಸ್ತರಿಸಿದರೆ ಸೋಂಕಿನ ತೀವ್ರತೆ ಇನ್ನಷ್ಟು ಕಡಿಮೆ ಆಗಲಿದೆ
– ಮೇ 24ರ ನಂತರ ಏಕಾಏಕಿ ಲಾಕ್‍ಡೌನ್ ತೆಗೆದರೆ ಮತ್ತಷ್ಟು ಸೋಂಕು ಹೆಚ್ಚುವ ಸಾಧ್ಯತೆ
– ಸದ್ಯದ `ಡಿಸ್ಕೌಂಟ್ ಲಾಕ್‍ಡೌನ್’ ಪೂರ್ಣ ಪ್ರಮಾಣದಲ್ಲಿ ಯಶಸ್ವಿ ಆಗಿಲ್ಲ

ತಾಜಾ ಸುದ್ದಿಗಳು