ಏಕಾಏಕಿ ಬೇಡಿಕೆ ಬಂದ ಹಿನ್ನೆಲೆ ಲಸಿಕೆ ಸಮಸ್ಯೆಯಾಗಿದೆ – ಬೊಮ್ಮಾಯಿ

ಏಕಾಏಕಿ ಬೇಡಿಕೆ ಬಂದ ಹಿನ್ನೆಲೆ ಲಸಿಕೆ ಸಮಸ್ಯೆಯಾಗಿದೆ – ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ಲಸಿಕೆ ಕೊರತೆಯಾಗಿರುವುದು ನಿಜ. ಏಕಾಏಕಿ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಸಮಸ್ಯೆಯಾಗಿದೆ. ನಾವು ಲಸಿಕೆ ತರಿಸಿಕೊಳ್ಳಲು ಕ್ರಮವಹಿಸಿದ್ದೇವೆ. ಲಸಿಕೆ ಸಿಗುವುದಿಲ್ಲ ಎಂದು ಜನ ಆತಂಕದಿಂದ ಕೇಂದ್ರಗಳಿಗೆ ಬಂದಿದ್ದಾರೆ. ಲಸಿಕೆ ಸಿಗಲಿದೆ ಯಾರೂ ಆತಂಕಪಡಬೇಕಾಗಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬೊಮ್ಮಯಿ, ರಾಜ್ಯದಲ್ಲಿ ಲಸಿಕೆ ಸಮಸ್ಯೆ ಪೂರೈಕೆಯಲ್ಲಿ ಕೆಲ ವ್ಯತ್ಯಯದಿಂದ ಆಗಿದೆ. ಲಸಿಕೆ ಸಿಗುವುದಿಲ್ಲ ಎಂದು ಜನ ಆತಂಕ ಪಡುವ ಅಗತ್ಯವಿಲ್ಲ ಎಂದರು. ಬೆಂಗಳೂರಿನಲ್ಲಿ ನೊಡೆಲ್ ಅಧಿಕಾರಿಗಳ ಜತೆ ಸಭೆ ನಡೆಸಲಾಗಿದೆ. ಸತ್ತವರ ಬಗ್ಗೆ ಮಾಹಿತಿ ನೀಡದ ಮೂರು ಆಸ್ಪತ್ರೆಗಳಿಗೆ ನೋಟಿಸ್ ನೀಡಲಾಗಿದೆ. ಬೆಡ್ ಖಾಲಿಯಾದ ತಕ್ಷಣ ಮಾಹಿತಿ ನೀಡುವಂತಹ ವ್ಯವಸ್ಥೆ ಜಾರಿಗೆ ತರಲಾಗಿದೆ. ಹೀಗಾಗಿ ಮುಂದೆ ಬೆಡ್ ಅಭಾವ ಇರದಂತೆ ಕ್ರಮವಹಿಸಲಾಗುತ್ತಿದೆ. ರಾಜ್ಯದಲ್ಲಿ ಸ್ಟೆಪ್ ಡೌನ್ ಆಸ್ಪತ್ರೆಗಳನ್ನು ಹೆಚ್ಚಿಸಲಾಗುವುದು. ಈ ಬಗ್ಗೆ ಹೊಟೇಲ್ ಸಂಘ ಹಾಗೂ ಖಾಸಗಿ ಆಸ್ಪತ್ರೆಗಳ ಜತೆ ಚರ್ಚೆಮಾಡಲಾಗಿದೆ. ಈಗಾಗಲೇ 1200 ಆ ರೀತಿ ಬೆಡ್‍ಗಳನ್ನು ಖಾಸಗಿ ಆಸ್ಪತ್ರೆಗಳು ಮಾಡಿಕೊಂಡಿವೆ. ಮತ್ತೆ 2 ಸಾವಿರ ಬೆಡ್ ಗಳ ಸ್ಟೆಪ್ ಡೌನ್ ಆಸ್ಪತ್ರೆ ಮೂರು ದಿನಗಳಲ್ಲಿ ನಿರ್ಮಾಣವಾಗಲಿದೆ. ಅಲ್ಲಿ ಸರ್ಕಾರ ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ನೀಡಿ ರೋಗಿಗಳ ಪ್ರಾಣ ರಕ್ಷಣೆ ನೆರವು ನೀಡಲು ಮುಂದಾಗುತ್ತದೆ ಎಂದು ಮಾಹಿತಿ ನೀಡಿದರು.

ಬಳಿಕ ಲಾಕ್‍ಡೌನ್ ನಲ್ಲಿ ಲಾಠಿ ಬೀಸಲು ಅವಕಾಶ ಕೊಡದ ಬಗ್ಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ ಅವರು, ಲಾಠಿ ಬೀಸೋದು, ವೆಹಿಕಲ್ ಸೀಜ್, ಕೇಸ್ ಹಾಕೋದೇ ಮುಖ್ಯ ಅಲ್ಲ. ಕೋವಿಡ್ ನಿಂದ ಸಾವು ನೋವುಗಳಾಗುತ್ತಿದೆ. ಜನ ಅರ್ಥಮಾಡಿಕೊಂಡು ಸಹಕಾರ ನೀಡಬೇಕು ಜನರ ಸುರಕ್ಷತೆಗಾಗಿ ಮಾಡಿರುವ ಲಾಕ್ ಡೌನ್ ಇದು. ಹೊರಗೆ ಬರಬೇಡಿ ಸರ್ಕಾರಕ್ಕೆ ಸಹಕಾರ ಕೊಡಿ ಎಂದು ಮನವಿ ಮಾಡಿಕೊಂಡರು.

ತಾಜಾ ಸುದ್ದಿಗಳು