ಅರಬ್ಬಿ ಸಮುದ್ರದಲ್ಲಿ ಚಂಡಮಾರುತ- ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ ಭಾರೀ ಮಳೆ

ಅರಬ್ಬಿ ಸಮುದ್ರದಲ್ಲಿ ಚಂಡಮಾರುತ- ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ ಭಾರೀ ಮಳೆ

– ಸಮುದ್ರಕ್ಕಿಳಿದಿರುವ ಮೀನುಗಾರರು ಇಂದೇ ಮರಳುವಂತೆ ಸೂಚನೆ
ನವದೆಹಲಿ:
ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಅಬ್ಬರಿಸಲಿದ್ದು, ಕರ್ನಾಟಕ, ತಮಿಳುನಾಡು, ಕೇರಳ, ಲಕ್ಷದ್ವೀಪಗಳಲ್ಲಿ ಮೇ 14 ಹಾಗೂ 15ರಂದು ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.

ಮೇ 16ರಂದು ಚಂಡಮಾರುತ ಪ್ರಭಾವ ಬೀರಲಿದೆ. ಆರಂಭದಲ್ಲಿ ಪಶ್ಚಿಮ ಕರಾವಳಿ ಪ್ರದೇಶಕ್ಕೆ ಚಂಡಮಾರುತ ಅಪ್ಪಳಿಸಲಿದೆ. ಇದಕ್ಕೆ ‘ತೌಕ್ಟೇ’ ಎಂದು ಹೆಸರಿಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಮೇ 14ರ ಬೆಳಗ್ಗೆ ಅರಬ್ಬಿ ಸಮುದ್ರದ ಆಗ್ನೇಯ ಭಾಗದಲ್ಲಿ ಹಾಗೂ ಪಕ್ಕದ ಲಕ್ಷದ್ವೀಪ ಪ್ರದೇಶದಾದ್ಯಂತ ಉತ್ತರ ಹಾಗೂ ವಾಯವ್ಯ ದಿಕ್ಕಿಗೆ ಚಂಡಮಾರುತ ಚಲಿಸುವ ಸಾಧ್ಯತೆ ಇದೆ. ಮೇ 15ರ ಸುಮಾರಿಗೆ ಒತ್ತಡ ತೀವ್ರಗೊಳ್ಳುವ ಸಾಧ್ಯತೆ ಇದೆ. ಮೇ 16ರ ಸುಮಾರಿಗೆ ಅರಬ್ಬಿ ಸಮುದ್ರದ ಪೂರ್ವ ಮಧ್ಯ ಭಾಗದಲ್ಲಿ ಚಂಡಮಾರುತದ ಬಿರುಗಾಳಿ ತೀವ್ರವಾಗಬಹುದು. ಬಳಿಕ ಉತ್ತರ-ವಾಯವ್ಯ ದಿಕ್ಕಿನಲ್ಲಿ ಸಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಕಡಿಮೆ ಒತ್ತಡದಿಂದಾಗಿ ಮೇ 14 ಹಾಗೂ 15ರಂದು ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಲಕ್ಷದ್ವೀಪಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ಗುರುವಾರದಿಂದಲೇ ಸಮುದ್ರದ ಸ್ಥಿತಿ ಒರಟಾಗಲಿದ್ದು, ಸಮುದ್ರಕ್ಕಿಳಿಯದಂತೆ ಹವಾಮಾನ ಇಲಾಖೆ ಮೀನುಗಾರರಿಗೆ ಎಚ್ಚರಿಸಿದೆ. ಅರಬ್ಬಿ ಸಮುದ್ರದ ಆಗ್ನೇಯ ಭಾಗ, ಮಾಲ್ಡೀವ್ಸ್, ಕೊಮೊರಿನ್ ಹಾಗೂ ಲಕ್ಷದ್ವೀಪ ಪ್ರದೇಶಗಳು ಹಾಗೂ ಕೇರಳ ಕರಾವಳಿ ಉದ್ದಕ್ಕೂ ಮೇ 13ರಿಂದ ಸಮುದ್ರಕ್ಕಿಳಿಯದಂತೆ ಹವಾಮಾನ ಇಲಾಖೆ ತಿಳಿಸಿದೆ.

ಅರಬ್ಬಿ ಸಮುದ್ರದ ಪೂರ್ವ ಮಧ್ಯ ಭಾಗ ಹಾಗೂ ಕರ್ನಾಟಕದ ಕರಾವಳಿ ಉದ್ದಕ್ಕೂ ಮೇ 14ರಿಂದ ಸಮುದ್ರಕ್ಕೆ ಇಳಿಯಬಾರದು. ಅಲ್ಲದೆ ಮಹಾರಾಷ್ಟ್ರ ಹಾಗೂ ಗೋವಾ ತೀರಗಳಲ್ಲಿನ ಮೀನುಗಾರರು ಮೇ 15ರೊಳಗೆ ಸಮುದ್ರದಿಂದ ಹಿಂದಿರುಗಲು ಮೀನುಗಾರರಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಸಮುದ್ರದಲ್ಲಿರುವ ಮೀನುಗಾರರು ಇಂದೇ ಮರಳುವಂತೆ ಸಹ ಹವಾಮಾನ ಇಲಾಖೆ ಎಚ್ಚರಿಸಿದೆ.

ತಾಜಾ ಸುದ್ದಿಗಳು