ರಾಜ್ಯದಲ್ಲಿ ಲಾಕ್ ಡೌನ್ ಅನಿವಾರ್ಯವಾಗಬಹುದು, ಇನ್ನೆರಡು ದಿನಗಳಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ: ಸಿಎಂ ಯಡಿಯೂರಪ್ಪ

ರಾಜ್ಯದಲ್ಲಿ ಲಾಕ್ ಡೌನ್ ಅನಿವಾರ್ಯವಾಗಬಹುದು, ಇನ್ನೆರಡು ದಿನಗಳಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ: ಸಿಎಂ ಯಡಿಯೂರಪ್ಪ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕನ್ನು ಮುಂದಿನ ದಿನಗಳಲ್ಲಿ ನಿಯಂತ್ರಿಸಲು ಲಾಕ್ ಡೌನ್ ಅನಿವಾರ್ಯವಾಗಬಹುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಈ ಮೂಲಕ ಇನ್ನು ಒಂದೆರಡು ದಿನಗಳಲ್ಲಿ ಕರ್ನಾಟಕದಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಣೆಯ ಸುಳಿವನ್ನು ಮುಖ್ಯಮಂತ್ರಿ ನೀಡಿದ್ದಾರೆ.

ಸರ್ಕಾರ ಕಳೆದ ತಿಂಗಳಾಂತ್ಯದಿಂದ ರಾಜ್ಯದಲ್ಲಿ 14 ದಿನ ಹೇರಿಕೆ ಮಾಡಿದ್ದ ಜನತಾ ಕರ್ಫ್ಯೂನಿಂದ ಏನೂ ಪ್ರಯೋಜನವಾಗುತ್ತಿಲ್ಲ, ಕೊರೋನಾ ನಿಯಂತ್ರಣಕ್ಕೆ ಬರುತ್ತಿಲ್ಲ, ದಿನೇ ದಿನೇ ಹೆಚ್ಚುತ್ತಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಸರ್ಕಾರ ಮೀನಮೇಷ ಎಣಿಸದೆ ತಕ್ಷಣವೇ ಲಾಕ್ ಡೌನ್ ಘೋಷಣೆ ಮಾಡಿ ಜನರ ಸಾವು-ನೋವಿನ ಸಂಖ್ಯೆಯನ್ನು ಕಡಿಮೆ ಮಾಡಲಿ ಎಂಬ ಒತ್ತಡ ಕೇಳಿಬರುತ್ತಿದೆ.

ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ, ಜನರು ಜನತಾ ಕರ್ಫ್ಯೂಗೆ ಸಾಕಷ್ಟು ಸಹಕಾರ ನೀಡುತ್ತಿಲ್ಲ, ಹೀಗಾಗಿ ಇನ್ನಷ್ಟು ಕಠಿಣ ನಿರ್ಬಂಧ ಕ್ರಮಗಳು ಅನಿವಾರ್ಯವಾಗಿದೆ ಎಂದರು.

ಲಾಕ್ ಡೌನ್ ಹೇರಿಕೆ ಮಾಡುವ ಕುರಿತು ಅಧಿಕಾರಿಗಳು, ತಜ್ಞರ ಜೊತೆ ಇಂದು-ನಾಳೆ ಕುಳಿತು ಚರ್ಚಿಸಿ ಸಮಾಲೋಚನೆ ಮಾಡಿ ಇನ್ನೆರಡು ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಬೆಂಗಳೂರಿನ ಅಣ್ಣಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡುತ್ತಾ ಹೇಳಿದರು. ಈ ಕೊರೋನಾ ಮಹಾಮಾರಿಯಿಂದ ಆದಷ್ಟು ಬೇಗನೆ ಮುಕ್ತವಾಗಿ ದೇಶದ ಜನರು ನೆಮ್ಮದಿಯಿಂದ ಬದುಕುವ ಕಾಲ ಮತ್ತೆ ಬರಲಿ ಎಂದು ದೇವಿಯಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದು ಹೇಳಿದರು.

ಜನ ಸಹಕಾರ ನೀಡಬೇಕು: ಕೊರೋನಾ ನಮ್ಮ ರಾಜ್ಯ, ದೇಶದಿಂದ ತೊಲಗಲು ಜನರು ಮಾಸ್ಕ್ ಹಾಕಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಂಡು, ಸ್ವಚ್ಛತೆ ಕಾಪಾಡಿಕೊಂಡು ಸಹಕಾರ ನೀಡಬೇಕು, ಜನರ ಸಹಕಾರ ಇಲ್ಲದಿದ್ದರೆ ಸರ್ಕಾರದಿಂದ ಮಾತ್ರ ಏನೂ ಮಾಡಲು ಸಾಧ್ಯವಿಲ್ಲ ಎಂದರು.

ಸಿಎಂ ನಿವಾಸ,ವಿಧಾನ ಸೌಧ ಬಳಿ ಬರಬೇಡಿ: ಆಸ್ಪತ್ರೆ ಸಮಸ್ಯೆ ಎಂದು ಹೇಳಿಕೊಂಡು ಜನರು ಯಾರೂ ಸಿಎಂ ನಿವಾಸ, ವಿಧಾನ ಸೌಧ ಮುಂದೆ ಬರಬೇಡಿ,ಅವರು ಬರುವುದು ತಪ್ಪು ಎಂದು ಹೇಳುತ್ತಿಲ್ಲ, ನಾವು ಜನರ ಪರವಾಗಿ ಕೆಲಸ ಮಾಡಲು ಇರುವವರು, ಜನರಿಗೆ ಸಮಸ್ಯೆಯಿದೆ ಎಂದು ಗೊತ್ತಾದ ತಕ್ಷಣ ಅಧಿಕಾರಿಗಳು ಸ್ಪಂದಿಸಿ ಕೆಲಸ ಮಾಡುತ್ತಾರೆ. ಸಿಎಂ ಮನೆ ಬಳಿ ಬರುವ ಅಗತ್ಯವಿಲ್ಲ, ಅಧಿಕಾರಿಗಳು ಗೊತ್ತಾದ ತಕ್ಷಣ ಕ್ರಮ ಕೈಗೊಳ್ಳುತ್ತಾರೆ. ಅಧಿಕಾರಿಗಳ ಗಮನಕ್ಕೆ ತಕ್ಷಣ ತನ್ನಿ ಎಂದು ಹೇಳಿದರು.

ತಾಜಾ ಸುದ್ದಿಗಳು